ಲೀಲಾ ಅಪ್ಪಾಜಿ ‘ಹಕ್ಕಿಯಾನ’ ಅಂಕಣ – ಅಂಡಮಾನಿನಲ್ಲಿ ಅಲೆದಾಟ – ಭಾಗ 1…

ಲೀಲಾ ಅಪ್ಪಾಜಿ ಎಂದಾಕ್ಷಣ ಹಕ್ಕಿ ಫೋಟೋ ಪ್ರಿಯರ ಕಣ್ಮುಂದೆ ಹಕ್ಕಿಗಳ ಸಾಲುಮೆರವಣಿಗೆ. ಪ್ರಾಧ್ಯಾಪಕಿಯಾಗಿ ವೃತ್ತಿ ಜೀವನದಲ್ಲಿ ಸಾಗಿ ಪ್ರಾಂಶುಪಾಲೆಯಾಗಿ ನಿವೃತ್ತಿ ಹೊಂದಿದ ಲೀಲಾ ಅಪ್ಪಾಜಿಯವರ ಬದುಕಿನ ಬಗೆಯೇ ಒಂದು ಸ್ಪೂರ್ತಿಗಾಥೆ. ಅವರು ಕನ್ನಡ ಎಂಎ ಮಾಡಿದ್ದಿರಬಹುದು, ನಂತರ ಹಂತಹಂತವಾಗಿ ವೃತ್ತಿ ಜೀವನ ರೂಪಿಸಿಕೊಂಡಿದ್ದಿರಬಹುದು, ನಿವೃತ್ತಿಯ ನಂತರ ಪ್ರವೃತ್ತಿಯ ಬೆನ್ನುಹತ್ತಿ ಮನಸಿನ ನಂದನವನ್ನು ಹಕ್ಕಿಗಳ ತಾಣ ಮಾಡಿಕೊಂಡಿದ್ದಿರಬಹುದು ಇಡೀ ಪಯಣವೇ ಅಚ್ಚರಿಯೊಂದಿಗೆ ಅಬ್ಬಾ ಎನ್ನಿಸುವಂತಿದೆ.

ಏನಿರಲಿ, ಇಲ್ಲದಿರಲಿ ಮನದ ನಿಶ್ಚಯವೊಂದು ಅಚಲವಿರಲಿ ಎಂದು ಅಂದುಕೊಂಡ ಹಾದಿಯಲಿ ಛಲಬಿಡದೆ ನಡೆದವರು.

ನಿವೃತ್ತಿಯ ನಂತರ ಏನು ಮಾಡಬೇಕೆಂದು ಹುಡುಕಾಡುತ್ತಿದ್ದ ಮನಸ್ಸು ಒಂದು ದಿನ ಫೋಟೋಗ್ರಫಿ ಎಂದು ನಿರ್ಧರಿಸಿದ್ದೇ ಕ್ಷಣವೂ ತಡಮಾಡದೆ ಆ ಫೀಲ್ಡಿಗೆ ಇಳಿದು ಟ್ರಯಲ್‌ ಅಂಡ್‌ ಎರರ್‌ ಮಾಡುತ್ತಲೇ ಕಲಿತೇಬಿಟ್ಟರು. ಗಾಂಧಿ ಮತ್ತು ಕುವೆಂಪುವನ್ನು ತಮ್ಮ ಆದರ್ಶವೆಂದು ಹೇಳುವ ಲೀಲಾ ಮೇಡಂ ಬರವಣಿಗೆಯೂ ಅವರ ಮಾತಿನಷ್ಟೇ ಮುದನೀಡುವಂತಹದ್ದು.

ತಮ್ಮ ಹಕ್ಕಿಗಳೊಡನಾಟದ ನೆನಪುಗಳನ್ನು ಈ ಅಂಕಣದ ಮೂಲಕ ‘ಅವಧಿ’ಯ ಓದುಗರೊಂದಿಗೆ ಹಂಚಿಕೊಳ್ಳಲಿದ್ದಾರೆ.

15.1

ಅಂಡಮಾನಿನಲ್ಲಿ ಲೀಲಾ

ಅಂಡಮಾನ್ ಅಂಡಮಾನ್ ನಿನಗೆ ವಂದನೆ, ಸಾಗರದೂರೆ ಸಾವಿರ ತೀರೆ ಇಂಗದ ನೀರೆ ದೇವರ ತೇರೆ..’ ಎಂದು ಅಂಡಮಾನ್ ಚಿತ್ರದಲ್ಲಿ ಶಿವರಾಜಕುಮಾರ್ ಮಗಳು ನಿರುಪಮಾ ಜೊತೆ ಹಾಡಿದ ಅಂಡಮಾನಿನ ಚೆಲುವನ್ನು ಸೆರೆಹಿಡಿವ ಹಾಡನ್ನು ಕೇಳಿದಾಗಲೆಲ್ಲಾ ನಾನು ಯಾವಾಗ ಅಂಡಮಾನಿಗೆ ಹೋಗೋದು ಎಂದು ಕಾಯುತ್ತಿದ್ದೆ. ಲೀಲಾ ನಿನಗೆ ಆ ದಿನಗಳೂ ಬರಬಹುದು ಇರು, ಇರು ಎಂದು ಸಾಂತ್ವನಿಸುತ್ತಿದ್ದೆ. ಬಂತು ಬಂತು ಕೊನೆಗೆ ಆ ದಿನವೂ ಬಂದೇ ಬಂದಿತು.

2018ರ ಜನವರಿ ತಿಂಗಳ ಕೊನೆಯಲ್ಲಿ ಉತ್ಕಲದ ಮಂಗಲಜೋಡಿ-ಬಿತರಕನಿಕಾದ ಹಕ್ಕಿ ಪ್ರವಾಸ ಮುಗಿಸಿ ಮನೆಗೆ ಮರಳಿದಾಗ ಆತಂಕದ ಪರಿಸ್ಥಿತಿ. ನನ್ನ ಗಂಡನ ಆರೋಗ್ಯ ಹದತಪ್ಪಿದ ಕಾರಣ ಮೈಸೂರಿನ ಆಸ್ಪತ್ರೆಗೆ ಸೇರಿಸಿ 8-10 ದಿನ ಆಸ್ಪತ್ರೆ ವಾಸಿಯಾಗಿ ಆತನ ಪರಿಸ್ಥಿತಿ ಸುಧಾರಿಸಿದ ಬಳಿಕ ಮನೆ ಸೇರಿದೆ. ಈ ನಡುವೆ ತಟ್ಟೆಕಾಡಿನ ಹಕ್ಕಿ ಪಯಣಕ್ಕೆ ನಿಗದಿ ಪಡಿಸಿ ವಿಮಾನ ಯಾನದ ಟಿಕೇಟ್ ಬುಕ್ ಮಾಡಿಸಿದ್ದೆ. ಪರಿಸ್ಥಿತಿ ಬದಲಾಗಿ ಟೂರ್, ಫ್ಲೈಟ್ ಕ್ಯಾನ್ಸಲ್ ಮಾಡಿದ್ದೆ. ಇದಕ್ಕೂ ಹಿಂದೆಯೆ ಖುಷ್ಬೂ ತಂಡದ ಜೊತೆ ಅಂಡಮಾನ್ - ನಿಕೋಬಾರ್ ಪ್ರವಾಸ ಬುಕ್ ಆಗಿತ್ತು. ಗಂಡನ ಆರೋಗ್ಯದ ಪರಿಸ್ಥಿತಿ ಸುಧಾರಿಸಿದರೆ ಹೋಗುವುದು, ಇಲ್ಲವಾದರೆ ಟೂರ್ ಕ್ಯಾನ್ಸಲ್ ಮಾಡುವುದು ಎಂದುಕೊಂಡಿದ್ದೆ. ಅವನ ಆರೋಗ್ಯ ಸುಧಾರಿಸಿ ಎದ್ದು ಓಡಾಡುವಂತಾಗಿಹೋಗಿ ಬಾ ನಾನು ಆರಾಮವಾಗಿದ್ದೇನೆ’ ಎಂದು ಹೋಗಲು ಒತ್ತಾಯಿಸಿದ. ಅಂತೂ ಅಂಡಮಾನ್ – ನಿಕೋಬಾರ್ ಪ್ರವಾಸಕ್ಕೆ ಹೊರಡುವುದು ಖಚಿತವಾಯ್ತು.


ಬೆಂಗಳೂರಿನಿಂದ ನೇರ ಪೋರ್ಟ್ಬ್ಲೇರಿನ ವಿಮಾನವೇರಿ ಮಂಡ್ಯದಿಂದ ಬೆಂಗಳೂರನ್ನು ತಲುಪುವುದಕ್ಕೆ ಅಗತ್ಯವಾದ ಸಮಯಕ್ಕಿಂತ ಕಡಿಮೆ ಅವಧಿಯಲ್ಲಿ ಮಧ್ಯಾಹ್ನಕ್ಕೆ ಪೋರ್ಟ್ ಬ್ಲೇರ್ ಸೇರಿ ನಮ್ಮ ಟೂರಿನ ಗುಂಪಿನೊಡಗೂಡಿದೆ. ಅಂಡಮಾನ್ ಪ್ರವಾಸಕ್ಕೆ ರಾಹುಲ್, ಖುಷ್ಬೂ, ಬೇಲಾಶರ್ಮ(ಖುಷ್ಬೂ ತಾಯಿ), ಹೈದರಾಬಾದಿನ ನಿಶಾಂತ್ ಷಾ, ಭೂಪಾಲಿನ ವಕೀಲೆ ಅಮಿಪ್ರಭಾಲ್ ಜೊತೆಯಾದರು. ಟೂರಿನ ಮಧ್ಯೆ ನಿಕೋಬಾರಿಗೆ ಹೊರಡುವ ಮೊದಲೇ ವೈಯಕ್ತಿಕ ಕಾರಣಗಳಿಂದ ಅಮಿ ಪ್ರಭಾಲ್ ಹಿಂದಿರುಗಿದರು. ಹದಿನೈದು ದಿನದ ಟೂರಿನ ಸ್ಥಳೀಯ ಮಾರ್ಗದರ್ಶಿ ವಿಕ್ರಮ್ ಶಿಲ್.
ಅನ್ಯ ಪ್ರವಾಸಿಗಳ ಅಂಡಮಾನ್ ಪ್ರವಾಸದ ರೀತಿಯಲ್ಲಿರದ ನಮ್ಮ ಹಕ್ಕಿ ಪಯಣದಲ್ಲಿ ಕೇವಲ ಹಕ್ಕಿ, ಹಕ್ಕಿ ಮಾತ್ರ.

ಅಂಡಮಾನ್ ಸೇರಿದ ಮೊದಲ ದಿನ ಮಧ್ಯಾಹ್ನ ವಿಕ್ರಮ್ ಶಿಲ್ ನೇತೃತ್ವದಲ್ಲಿ ಹಕ್ಕಿ ಹುಡುಕಾಟ ಆರಂಭವಾಯಿತು. ನಾವು ಆರು ಜನ ಹಾಗೂ ಗೈಡ್ ಸೇರಿ ಏಳು ಮಂದಿಗೆ ಎರಡು ವಾಹನಗಳ ಅಗತ್ಯವಿದ್ದರೂ ನಮ್ಮಷ್ಟೂ ಜನರನ್ನೂ ಒಂದೇ ಗಾಡಿಯಲ್ಲಿ ಇರುಕಿಸಿಕೊಂಡು ಹೋಗುತ್ತಿದ್ದರು. ಗೈಡ್ ವಿಕ್ರಮ್ ವಾಹನದ ಸಾರಥಿಯೂ ಆಗಿದ್ದರು. ನಿಶಾಂತ್ ಮುಂದಿನ ಸೀಟಿನಲ್ಲಿ, ನಾನು, ಬೇಲಾ ಶರ್ಮ, ಅಮಿ ಮಧ್ಯದ ಸೀಟುಗಳಲ್ಲಿ ಹಾಗೂ ಖುಷ್ಬೂ ರಾಹುಲ್ ಹಿಂದಿನ ಸೀಟುಗಳಲ್ಲಿದ್ದರು. ನಿಶಾಂತ್ ಮಾತ್ರ ಸಲೀಸಾಗಿ ವಿಂಡೋ ಫೋಟೋಗ್ರಫಿ ಮಾಡಬಹುದಿತ್ತು.

ಹಿಂದಿನ ಸೀಟಿನವರಿಗೆ ಕಾರಿನಿಂದ ಕ್ಯಾಮೆರಾ ಕೆಲಸ ಕೊಡುವ ಛಾನ್ಸೆ ಇರಲಿಲ್ಲ. ಮಧ್ಯದ ಸೀಟಿನ ಇಕ್ಕಟ್ಟಿನಲ್ಲಿ ವಿಂಡೋ ಫೋಟೋಗ್ರಫಿ ಕಷ್ಟವಿತ್ತು. ಎರಡು ದಿನ ಮಾತ್ರ ಇದ್ದ ನಿಕೋಬಾರಿನಲ್ಲಿ ಎರಡು ಕಾರು ಕೊಟ್ಟಿದ್ದರು. ನಾವೈವರೂ ಹಕ್ಕಿ ಹುಡುಕುತ್ತಾ ಫೋಟೋಗ್ರಫಿ ಮಾಡುತ್ತಿದ್ದರೆ ಬಣ್ಣದ ಬಟ್ಟೆ ಧರಿಸುತ್ತಿದ್ದ ಬೇಲಾ ವ್ಯಾಯಾಮ, ವಾಕಿಂಗ್ ಮಾಡುತ್ತಿದ್ದರು. ಒಮ್ಮೆ ರಾಹುಲ್ ಅತ್ತೆಗೆ ಮಾ ಇಷ್ಟು ಓಡಾಡಿದರೆ ಹಕ್ಕಿಗಳು ಹಾರಿಹೋಗುತ್ತವೆ’ ಎಂದದ್ದರಿಂದ ಬೇಲಾ ಸ್ವಲ್ಪ ದೂರಹೋಗಿ ಮಾಡುತ್ತಿದ್ದರು. ಕೆಲವೊಮ್ಮೆ ಸೆಲ್ಫಿಯಲ್ಲಿ ನಿರತರಾಗಿರುತ್ತಿದ್ದರು. ಪ್ರವಾಸದ ಮೊದಲ ಸೆಷನ್ನಿನಲ್ಲಿ ಪೋರ್ಟ್ಬ್ಲೇರಿನ ಸನಿಹದ ಕಾಡಿನಲ್ಲಿ ಹಕ್ಕಿ ಹುಡುಕಾಟ. ಹೋಗುವಾಗಲೇ ತಡವಾಗಿದ್ದರಿಂದ ಹಕ್ಕಿಗಳು ನಾವೇನು ಸಿಗುವುದಿಲ್ಲವೆಂದು ತಾರಮ್ಮಯ್ಯ ಆಡಿಸಿದವು. ದೂರದ ಮರದಲ್ಲಿದ್ದ ಬಿಳಿಹೊಟ್ಟೆಯ ಮೀನು ಗಿಡುಗ ಕ್ಯಾಮೆರಾ ಎತ್ತುವಷ್ಟರಲ್ಲಿ ಹಾರಿಯೇ ಹೋಯಿತು. ಹೆಚ್ಚೆಂದರೆ ಒಂದೆರಡು ಡ್ರೊಂಗೊ, ಬುಲ್ಬುಲ್ ನೋಡುವ ಹೊತ್ತಿಗೆ ಸಂಜೆ ಸಮೀಪಿಸಿ ಕತ್ತಲ ಮುಸುಕು ಎಳೆದುಕೊಳ್ಳತೊಡಗಿತು.

ಅಂಡಮಾನಿನಲ್ಲಿ ಸೂರ್ಯ ಬೇಗ ಪಶ್ಚಿಮದಂಗನೆಯರಮನೆಗೆ ಓಡುತ್ತಾನೆ. ಇನ್ನೇನು ಕತ್ತಲು ಕವಿಯುತ್ತದೆಂದ ಮೇಲೆ ಹೊಟೇಲಿಗೆ ಹೋಗಿ ಮತ್ತೆ ಬರುವ ಬದಲು ಅಲ್ಲೆ ಕಾಲ ಕಳೆದು ಗೂಬೆ ಹುಡುಕಾಟಕ್ಕೆ ತೆರಳಿದೆವು. ಗೂಬೆರಾಣಿ ಖುಷ್ಬೂ ಜೊತೆಗಿದ್ದ ಮೇಲೆ ಗೂಬೆ ಅರಸದೆ ಇರಬಹುದೆ! ನಮ್ಮ ಪ್ರತಿ ಹಕ್ಕಿ ಪ್ರವಾಸದಲ್ಲೂ ನಿತ್ಯ ಬೆಳಗ್ಗೆ ಹಕ್ಕಿಯ ಜಾಡು ಅರಸಿ ಹೊರಟರೆ ಬಿಸಿಲೇರುವ ತನಕ ಸುತ್ತಾಟ. ಮಧ್ಯಾಹ್ನ ಮೂರು ಗಂಟೆಯಿಂದ ಮಬ್ಬು ಮುಸುಕುವವರೆಗೆ ಹುಡುಕಾಟ. ಆದರೆ ಅಂಡಮಾನ್-ನಿಕೋಬಾರಿನಲ್ಲಿ ಇರುಳೂ ನಿಶಾಚರ ಪಕ್ಷಿಗಳಿಗಾಗಿ ಹುಡುಕಾಟ ಪ್ರವಾಸದ ಕೊನೆಯ ದಿನದ ತನಕ ನಿರಂತರವಾಗಿ ನಡೆದಿತ್ತು. ಅಂಡಮಾನಿನಲ್ಲಿಳಿದ ಮೊದಲ ರಾತ್ರಿಯೇ ಆರಂಭಿಸಿದ ಹುಡುಕಾಟದಲ್ಲಿ ಮೊದಲಿಗೆ ಸಿಕ್ಕಿದ್ದು andaman nightjar(ಅಂಡಮಾನಿನ ನತ್ತಿಂಗ) ಇತರ ನತ್ತಿಂಗಗಳಿಗಿಂತ ಅಂಡಮಾನಿನ ನತ್ತಿಂಗ ಸ್ವಲ್ಪ ಭಿನ್ನ ಎಂದರು. ನಿಜ ಏನೆಂದರೆ ನಾನು ಅದುತನಕ ಯಾವ ನತ್ತಿಂಗವನ್ನು ನೋಡಿಯೇ ಇರಲಿಲ್ಲ. ನೋಡುವ ಅವಕಾಶವೂ ಕೂಡಿಬಂದಿರಲಿಲ್ಲ. ನಾನೊಬ್ಬಳೆ ರಾತ್ರಿ ಹಕ್ಕಿಯಲೆತ ಮಾಡುವುದು ಕಷ್ಟ. ಅಂಡಮಾನ್ ನತ್ತಿಂಗ ಸಿಕ್ಕಿದಾಗ ನನಗೆ ಡಬಲ್ ಧಮಾಕ ಆಯಿತು. ಸಣ್ಣ ವಿಡಿಯೋ ಕೂಡಾ ಮಾಡಿಕೊಂಡೆ. ಇನ್ನೂ ಚೆನ್ನಾಗಿ ಸಿಗಬೇಕೆಂದು ಅತ್ತಿತ್ತ ಅಲೆದಾಡಿಬಾ ಬಾ ಮೊಗವ ತೋರು ಬಾ ನತ್ತಿಂಗವೆ’ ಎಂದರೂ ಅದು ಬಂದೆನಲ್ಲ, ಎನ್ನ ಮೊಗವ ತೋರಿದೆನಲ್ಲ, ಮತ್ತೇನು ಬೇಕಾಗಿದೆ ನಿಮಗೆ, ಸಿಕ್ಕಿದರಲ್ಲೆ ಬಿ ಹ್ಯಾಪಿ’ ಎಂದು ಮೊರೆಯಿತು. ಮರೆಯಲ್ಲಿದ್ದು ಮೊರೆದರೆ ನಮಗೆ ಚಿತ್ರವಾಗದೆಂದು ಅಲ್ಲಿಂದ ಮುನ್ಸರಿದೆವು. ಸನಿಹದಲ್ಲಿ ಅಂಡಮಾನ್ ಸ್ಕಾಪ್ಸ್ ಗೂಬೆನತ್ತಿಂಗವಿಲ್ಲದಿರೆ ನಥಿಂಗ್ ಪ್ರಾಬ್ಲಂ ನಾನಿಲ್ಲವೆ ಬನ್ನಿ’ ಎಂದು ಎದುರಾಯಿತು. ನಮಗೋ ಬಂಪರ್. ರಣೋತ್ಸಾಹಿಗಳಾಗಿ ಪಟಾಪಟ್ ಹೊಡೆದದ್ದೇ ಹೊಡೆದದ್ದು. ಟಾರ್ಚಿನ ಬೆಳಕಿಗೆ ತನ್ನ ಹಳದಿ ಕಣ್ಣನ್ನು ಪಿಳಪಿಳಿಸುತ್ತಾ ಕುಳಿತು ನಮ್ಮ ಕಣ್ಣು-ಕ್ಯಾಮೆರಾಗಳನ್ನು ತಣಿಸಿ ಹಾರಿತು. ಹುಡುಕಾಟ ಮುಂದುವರೆಸಿದಾಗ ಶಾಲೆಯೊಂದರ ಬಳಿಯ ಮರದಲ್ಲಿ ವರವಾಗಿ ಅಂಡಮಾನ್ ಹಾಕ್ ಗೂಬೆಯೂ ಸಿಕ್ಕಿ ಎಲ್ಲರೂ ಫುಲ್ಖುಷ್. ಇಂದಿನ ದಿನವೇ ಸುದಿನ ಎನ್ನುತ್ತಾ ಮರಳಿದೆವು. ಆ ದಿನ ರಾತ್ರಿಯ ಕನಸಿನಲ್ಲಿ ಗೂಬೆಗಳೆ ಕಾಣಿಸಿ ಗೂಕ್ ಗೂಕ್ ಧ್ವನಿಯೇ ಕಿವಿಯಲ್ಲಿ ಪ್ರತಿಧ್ವನಿಸುತ್ತಿತ್ತು.


ಮರುದಿನ ಮುಂಜಾನೆ ಅಲ್ಲಲ್ಲ ಇನ್ನೂ ಸೂರ್ಯ ಕಣ್ಣುಬಿಡುವ ಮುನ್ನವೇ ನಾವು ಸಿದ್ಧವಾಗಿ ಪೋರ್ಟ್ ಬ್ಲೇರಿನಿಂದ ಮೂವತ್ತು ಕಿ.ಮೀ ದೂರದ ಛಿಡಿಯಾ ಟಾಪು (chidiya tapu)ಗೆ ಹೊರಟೆವು. ದಾರಿಯಲ್ಲಿ ಶಮಾ ಸಿಕ್ಕಿತು. ಗಣೇಶಗುಡಿಯಲ್ಲಿ ಸಿಕ್ಕಿದ್ದ white rumped shamaದಂತೆ ಕಂಡರೂ endemic (ಸ್ಥಳೀಯ) ಆದ ಈ ಅಂಡಮಾನ್ ಶಮಾ ವಿದ್ಯುತ್ ತಂತಿಯ ಮೇಲಿದ್ದರೂ ಲೈಫರ್ ಆದ್ದರಿಂದ ಬಿಡುವಂತಿಲ್ಲ, ಏಕೆಂದರೆ ಮತ್ತೆ ಮತ್ತೆ ಅಂಡಮಾನಿಗೆ ಹೋಗಲಾರೆನಲ್ಲ. ಅಲ್ಲೆ asian Glossy starling, andaman white headed starling ಲೈಫರ್ ಪಟ್ಟಿಗೆ ಸೇರಿದವು.


ಛಿಡಿಯಾ ಟಾಪು ಹೆಸರೇ ಹೇಳುವಂತೆ ಹಕ್ಕಿಗಳ ದ್ವೀಪ, ಅಂಡಮಾನಿನ Biological ಪಾರ್ಕ್. ಅಂಡಮಾನಿನ ಕೆಲವು ವಿಶಿಷ್ಟ ಹಕ್ಕಿಗಳಿಗೆ ನೆಲೆ. ಪಕ್ಕದಲ್ಲೇ ಛಿಡಿಯಾ ಟಾಪು ಬೀಚ್, ಸ್ವಲ್ಪ ದೂರದಲ್ಲಿ ಇರುವ ಮುಂಡಾ ಪಹಾಡ್ ಬೀಚ್ ಪ್ರವಾಸಿಗರಿಗೆ ಆಕರ್ಷಣೆಯ ನೆಲೆಗಳು. ಮುಂಡಾ ಪಹಾಡದಲ್ಲಿ ದೊಡ್ಡ ದೊಡ್ಡ ಮರದ ಬುಡಗಳನ್ನೇ ಚಂದವಾಗಿ ಡಿಜೈನಿಸಿ ಪೀಠಗಳನ್ನಾಗಿ ಮಾಡಿ ಇರಿಸಿರುವುದು ಆಕರ್ಷಕವಾಗಿತ್ತು. ನನಗಂತೂ ಅಲ್ಲಿ ಮತ್ತೂ ಆಕರ್ಷಕ ಎನಿಸಿದ್ದು ತಿಂದ ಚುರುಮುರಿ. ನಮ್ಮೂರಿನಲ್ಲೆ ಇದ್ದು ತಿನ್ನುತ್ತಿದ್ದೇನೆಂಬ ಫೀಲ್ ತರಿಸಿತು.


ಛಿಡಿಯಾಟಾಪು ಹಾಗೂ ಅಕ್ಕಪಕ್ಕ ಇಡೀ ದಿನ ಓಡಾಡಿದೆವು. ಗಾಡಿ ನಿಲ್ಲಿಸುತ್ತಿದ್ದಂತೆಯೇ ಕೆಂಪೆದೆಯ ಗಂಡು-ಹೆಣ್ಣು ಎದುರಾಗಿ ಸ್ವಾಗತಿಸಿ ಬಯಾಲಾಕಿಕಲ್ ಪಾರ್ಕಿನೊಳಗೆ ಹೊರಡಲು ಹಸಿರು ನಿಶಾನೆ ತೋರಿಸಿದವು. ವಿಕ್ರಮ್ ಶಿಲ್ ನಿಮಗೆ ಕ್ಯಾಮೆರಾ ಹೊತ್ತು ಇಲ್ಲಿನ ಏರಿಳಿತಗಳಲ್ಲಿ ಓಡಾಡಲು ಕಷ್ಟ, ಸಫಾರಿ ಗಾಡಿಯಲ್ಲಿ ಬಂದರೆ ಸೂಕ್ತ’ ಎಂದರು. ಓ.ಕೆ. ಎಂದು ಸಫಾರಿ ಗಾಡಿಯ ಹಿಂದಿನ ಸೀಟಿನಲ್ಲಿ ಕ್ಯಾಮೆರಾ ಸಮೇತ ಆಸೀನಳಾದೆ. ಡ್ರೈವರ್ ಅಲ್ಲಲ್ಲಿ ನಿಲ್ಲಿಸಿ ಕೆಳಗಿಳಿಸಿ ವಿವರಿಸುತ್ತಿದ್ದ. ಮೊದಲು ಕೆಂಬೂತ ಕಾಣಿಸಿತು. ನವಿಲನ್ನು ನೋಡಿ ಕೆಂಬೂತ ಪುಕ್ಕ ತರಿದುಕೊಂಡಿತೆನ್ನುವ ಅಪಹಾಸ್ಯವಿದೆ. ಆದರೆ ಅದೃಷ್ಟದ ಪಕ್ಷಿ ಅಂತ ಕರೆಯುವ ಇದಕ್ಕೆ ರತ್ನಪಕ್ಷಿ ಎಂಬ ಹೆಸರಿದೆ. ನನಗಂತೂ ಅದೃಷ್ಟಪಕ್ಷಿ, ದುರದೃಷ್ಟ ಪಕ್ಷಿ ಎನ್ನುವುದರ ಬಗ್ಗೆ ನಂಬಿಕೆ ಇಲ್ಲ.

ಹಕ್ಕಿ ಚಿತ್ರ ತೆಗೆಯಲು ಹೋದಾಗ ಕೆಂಬೂತವನ್ನು ಕಂಡೂ ಹಕ್ಕಿಗಳು ಸಿಕ್ಕ ದಿನಗಳೂ ಇವೆ, ಅಂತೆಯೇ ಸಿಗದ ದಿನಗಳೂ ಇವೆ. ಅದಕ್ಕೆ ಕೆಂಬೂತವನ್ನು ಗುರಿ ಮಾಡುವುದು ಯಾವ ನ್ಯಾಯ? ಅಂಡಮಾನಿನ ಎಂಡೆಮಿಕ್ ಆದ ಕೆಂಬೂತವನ್ನು ಕ್ಲಿಕ್ಕಿಸಿದೆ. ಅಂಡಮಾನ್ ಶಮಾ ನೆಲದಲ್ಲಿದ್ದರೂ ಇಳಿಜಾರಿನಲ್ಲಿತ್ತು. ಮಕಾಕ್ ಮಂಗ ಮರಿಗಳನ್ನೇರಿಸಿಕೊಂಡು ಸವಾರಿ ಹೊರಟಿತ್ತು. ರಾಕೆಟ್ ಬಾಲದ ಡ್ರೊಂಗೊ ಹಾರಿ ತೆಗೆಯುವೆಯಾ ಎಂದು ಆಹ್ವಾನಿಸಿತು. ಸಂಧಿಯಲ್ಲಿ ಮಾನಿಟರ್ ಲಿಜಾರ್ಡ್ ಇಣುಕಿತು.

ಬೃಹತ್ ಮರಗಳತ್ತ ಕಣ್ಣು ಹಾಯಿಸುತ್ತಿದ್ದಂತೆ ಅಮಿ ಪ್ರಭಾಲರಿಗೆ ಮರವನ್ನು ಬಳಸಿ ಫೋಟೋ ತೆಗೆಸಿಕೊಳ್ಳುವ ಆಸೆಯಾಯಿತು. ಛಿಡಿಯಾ ಟಾಪು ಕಾಂಪೌಂಡ್ ದಾಟಿ ಕಡಲ ಕಿನಾರೆಗೆ ಬಂದೆವು. ಅಲ್ಲಿ ರಾಹುಲ್ ಕಣ್ಣಿಗೆ ಎರಡು ಪೆಸಿಫಿಕ್ ಗೋಲ್ಡನ್ ಪ್ಲೋವರ್ ಕಾಣಿಸಿ ಅದರ ಹಿಂದೆ ಹೋದರು. ಅಷ್ಟರಲ್ಲಿ ಹಾರಿಬಂದ andaman serpent eagle ಬೇಟೆಗೆ ಹೊಂಚಿತ್ತು. ನಾವೇನು ಕಡಿಮೆ! ನಾವದನ್ನು ಹೊಂಚುಹಾಕುತ್ತಾ ಕ್ಲಿಕ್ಕಿಸಿದೆವು.

ಕೊನೆಗೆ ಅದಕ್ಕೆ ಅದರ ಬೇಟೆ ಕಂಡು ಹಾರಿಹೋಯಿತು. ನಮಗೂ ನಮ್ಮ ಕೆಲಸ ಮುಗಿದಿತ್ತು. ಇದೇ ಕಿನಾರೆಯ ಮರದ ಪೊಟರೆಯಲ್ಲಿ ಸಂಗಾತಿಯರಸಿ ಬಂದಿತು ಚಿಟ್ಟುಗಿಳಿ (Vernal Hanging Parrot). ಉಲ್ಟಾ ನೇತಾಡುವ ಚಿಟ್ಟುಗಿಳಿ ಇಂಡಿಯಾದ ಏಕಮಾತ್ರ Parrot, ಉಳಿದವೆಲ್ಲ ಪ್ಯಾರಾಕೀಟ್‌ಗಳು. ಆ ದಿನವೇ ಅಂಡಮಾನ್ ಬುಲ್ಬುಲ್ ಲೈಫರ್ ಆದರೂ ಸರಿಯಾದ ಪಟಕ್ಕಾಗಿ ಮತ್ತಷ್ಟು ಸಮಯ ಕಾಯುವಂತಾಯಿತು.

ಮೂರನೆಯ ದಿನ ಮೂಡಲು ಕೆಂಪೇರುವ ಮುನ್ನವೆ Bamboo flatಗೆ ಗಾಡಿಸಮೇತ ಬಾರ್ಜಿನಲ್ಲಿ ಪ್ರಯಾಣಿಸಿದೆವು. ಇಲ್ಲಿ ಬಹುತೇಕರು ದ್ವೀಪಗಳ ನಡುವಣ ಓಡಾಟಕ್ಕೆ ಬಾರ್ಜ್ ಅವಲಂಬಿಸಿದ್ದಾರೆ. ಅರ್ಧ ಗಂಟೆಗೊಮ್ಮೆ ಓಡಾಡುತ್ತಿದ್ದ ಬಾರ್ಜುಗಳೊಳಗೆ ವಾಹನಗಳ ಸಮೇತ ಪ್ರಯಾಣ. ಒಳಗೂ ಹೊರಗೂ ಕಾಯುವಿಕೆ. ಒಳಗಿರುವವರಿಗೆ ಹೊರಬರುವ ತವಕ, ಬಸ್ ಮಿಸ್ಸಾದರೆಂಬ ಆತಂಕ. ಹೊರಗಿರುವವರಿಗೆ ಒಳಗೆ ನುಗ್ಗುವ ಅವಸರ. ಬಾರ್ಜಿನೊಳಗೊಂದು ಲೋಕ ಅನಾವರಣಗೊಳ್ಳುತ್ತಿತ್ತು. ನಾನು ಕಾರಲ್ಲೇ ಬಾರ್ಜ್ ಸೇರಿ ಉದಯಿಸುತ್ತಿದ್ದ ಸೂರ್ಯನೆಡೆಗೂ ಉಳಿದವರ ಕಡೆಗೂ ಕಣ್ಣಾಡಿಸುತ್ತಿದ್ದೆ. ಅಮ್ಮ ಜ್ಯೂಸ್ ಕೊಟ್ಟಿಲ್ಲವೆಂದು ಅಳುವ ಮಗು, ಅಕ್ಕನ ಕೈಹಿಡಿದು ಬೆರಗಿನಿಂದ ನೋಡುತ್ತಿದ್ದ ಪುಟ್ಟತಮ್ಮ. ಇತ್ತ ಮೀನು ಮಾರುವವರು ಕೂತಲ್ಲೇ ಹಂಚಿಕೊಳ್ಳುತ್ತಿದ್ದ ಕಷ್ಟಸುಖ, ಸಂಧಿಯಲ್ಲೆ ತಿಂಡಿ ತಿನಿಸು ಮಾರುತ್ತಿದ್ದವರು, ಹತ್ತು ಹಲವು ಕೆಲಸಗಳಿಗೆ ತೆರಳುವವರು. ಬಗೆಬಗೆಯ ನೋಟಗಳಿಗೆ ಬಾರ್ಜ್ ನಿಲ್ಲುತ್ತಲೇ ನಿಲುಗಡೆ.

ಮತ್ತೆ ಇಳಿಯುವ, ಒಳನುಗ್ಗುವ ತರಾತುರಿ. ಜಗದ ಜಂಜಡ ಕಳೆದುಕೊಂಡು ಬುಟ್ಟಿಯೊಳಗಿನ ಮೀನು ಇಣುಕಿ ಸತ್ತಗಣ್ಣುಗಳಿಂದ ನಿರ್ಲಿಪ್ತವಾಗಿ ನೋಡುತ್ತಿತ್ತು. ಹಕ್ಕಿ... ಹಕ್ಕಿ... ಹಕ್ಕಿ ಎಂಬುದನ್ನು ಬಿಟ್ಟು ಆಚೀಚೆ ಅಲುಗದ ನಮ್ಮ ನೋಟದ ಮಿತಿ ಅಂಡಮಾನಿನಲ್ಲಿ ಮುರಿದಿತ್ತು, ಇಷ್ಟು ಹಕ್ಕಿಯಾನಗಳಲ್ಲಿ ನೋಡಿದ ಒಂದೇ ಒಂದು ಸ್ಥಳ ಪೋರ್ಟ್ಬ್ಲೇರಿನ ಸೆಲ್ಯೂಲಾರ್ ಸೆರೆಮನೆ. ಒಂದು ದಿನ ಬೆಳಗಿನ ಹಕ್ಕಿಯಲೆತ ಮುಗಿಸಿ ಜೈಲಿಗೆ ಕಾಲಿಟ್ಟು ಕೈಯ್ಯ ಕ್ಯಾಮೆರಾಕ್ಕೆ ಕೆಲಸ ಕೊಟ್ಟೆವು. ಜೈಲಿನ ಪ್ರವೇಶದ್ವಾರದಲ್ಲಿ ಹಾರುತ್ತಿದ್ದ ಪಾರಿವಾಳ ಸ್ವಾತಂತ್ರ್ಯಪೂರ್ವದಲ್ಲಿ ಕರಿನೀರಿನ (ಕಾಲಾಪಾನಿ) ಶಿಕ್ಷೆ ಅನುಭವಿಸಿದ ಈ ನೆಲೆಯಲ್ಲಿ ಸ್ವಾತಂತ್ರ್ಯ ಬಂದ ಸಂಕೇತವಾಗಿತ್ತು. ನಂದದ ಸ್ವಾತಂತ್ರ‍್ಯದ ಜ್ಯೋತಿ, ಖೈದಿಗಳಿಗೆ ಕೊಡುತ್ತಿದ್ದ ಶಿಕ್ಷೆಗಳ ವೈಖರಿ, ಸೆರೆಮನೆಯಲ್ಲಿ ಕಟ್ಟಿ ಹಾಕುತ್ತಿದ್ದ ರೀತಿ... ಎಲ್ಲವೂ ಮನಕ್ಕೆ ಮುಟ್ಟಿ ನಿಡಿದಾದ ಉಸಿರು ಸುಯ್ದೆ. ನಾವಿಂದು ಅನುಭವಿಸುತ್ತಿರುವ ಸ್ವಾತಂತ್ರ್ಯದ ಹಿಂದಿರುವ ಹಿರಿಯರ ಅಪ್ರತಿಮ ತ್ಯಾಗ ಬಲಿದಾನ ನೆನೆದು ಮನಸಾ ನಮಿಸಿದೆ.

ರಾಷ್ಟ್ರೀಯ ಸ್ಮಾರಕವಾಗಿರುವ ಈ ಜೈಲಿನ ವಿನ್ಯಾಸ, ಕಟ್ಟಡ ಚಿರಪರಿಚಿತ. ಆದರೂ ಕುತೂಹಲದಿಂದ ಸೆರೆಮನೆ ನೋಡಬರುತ್ತಿದ್ದವರನ್ನು ಮೌನವಾಗಿ ಗಮನಿಸುತ್ತಿದ್ದೆ. ಅಂಡಮಾನ್ ಪ್ರವಾಸದ ಭಾಗವಾಗಿ ಜೈಲುಭೇಟಿ ಇರುವುದರಿಂದ ಪ್ರವಾಸಿಗಳು ಜೈಲಿಗೂ ಭೇಟಿ ಕೊಡುತ್ತಾರೆ. ಕೆಲವರು ಅರ್ಧ ಗಂಟೆಯಲ್ಲಿ ವಿಸಿಟ್ ಮುಗಿಸಿದರೆ, ಮತ್ತೆ ಕೆಲವರು ವಿವರವಾಗಿ ನೋಡಿ, ಕೇಳಿ ತಿಳಿಯುತ್ತಿದ್ದರು. ತನ್ನ ಪುಟ್ಟಕೂಸಿನೊಂದಿಗೆ ನಿಂತ ಅಪ್ಪನೊಬ್ಬ ಮಗುವಿಗೆ ಅದರ ಎಬಿಸಿಡಿ ಅರ್ಥವಾಗದಿದ್ದರೂ ಮುಂದೆಂದೋ ನಿನ್ನನ್ನು ಇಂತಹ ಕಡೆಗೆ ಕರೆದುಕೊಂಡು ಹೋಗಿದ್ದೆ ಎಂದು ನೆನಪು ಮಾಡಬಹುದೆನಿಸಿತು. ನೋಡಲು ಬಂದ ಜೀವಗಳಲ್ಲಿ ಎಳೆಯ ಬಾಲಕ, ಕೋಲೂರಿ ನಡೆಯುತ್ತಿದ್ದ ವೃದ್ಧೆ ಇಬ್ಬರೂ ನನ್ನಲ್ಲಿ ವಿಶೇಷ ಅನುಭೂತಿ ಉಂಟು ಮಾಡಿದರು. ಎಲ್ಲರೂ ಸೆರೆಮನೆ ಕೋಣೆಯಲ್ಲಿ ನಿಂತು ನೆನಪಿಗಾಗಿ ಚಿತ್ರ ತೆಗೆದುಕೊಳ್ಳುತ್ತಿದ್ದರು. ನಮಗ್ಯಾರೂ ಶಿಕ್ಷೆ ವಿಧಿಸಲಿಲ್ಲವಾದರೂ ಸೆರೆಕೋಣೆಯಲ್ಲಿ ಸ್ವಯಂ ಬಂಧಿಸಿಕೊಂಡೆವು.

ಹಕ್ಕಿಯೇ ಜೀವವೆನ್ನುವ ರಾಹುಲ್ ಖುಷ್ಬೂರನ್ನು ಬಂಧಿಸಿದರೆ ನಗುನಗುತ್ತಾ ಶಿಕ್ಷೆ ಸ್ವೀಕರಿಸಿ ಚಿತ್ರವಾದರು. ಐಟಿಯ ನಿಶ್ಚಿತ ಆದಾಯ ಕೈಬಿಟ್ಟು ಹಕ್ಕಿಗೆ ಒಟ್ಟಾದವರನ್ನು ಹಕ್ಕಿಗಳಿಲ್ಲದೆಡೆ ಬಂಧಿಸಿದ್ದರೆ ಅವರ ಜೀವಹಕ್ಕಿ ವಿಲವಿಲಿಸುತ್ತಿತ್ತು. ಜೈಲಿನ ಸಾಲುಸಾಲು ಕಂಬಗಳು, ಅವುಗಳ ನೆರಳುಗಳೂ ಶಿಕ್ಷೆ ಅನುಭವಿಸಿದ ಖೈದಿಗಳ ಕಥೆಯನ್ನು ಸಾರಿ ಹೇಳುತ್ತಿವೆ ಎನಿಸಿತು. ಮಹಡಿಯ ಮೇಲೆ ಹತ್ತಿ ಅಲ್ಲಿಂದ ಸಮುದ್ರದ ಚಿತ್ರ ಸೆರೆಹಿಡಿದೆ. ಜೈಲಿನೊಳಗೆ, ಅಂಗಳದಲ್ಲಿ ಅಡ್ಡಾಡುವಾಗಲೂ ಹಕ್ಕಿ ಕಂಡಾವೆ ಎಂದು ಕಣ್ಣರಸುತ್ತಿತ್ತು. ಗುಬ್ಬಿ, ಕಳಿಂಗ, ಕಾಗೆ ಸಿಕ್ಕಿದವು. ಅಂದ ಹಾಗೆ ಅಲ್ಲಲ್ಲಿ ಬುಲ್ ಬುಲ್ ಕೂಡಾ ಹಾರಾಡುತ್ತಿತ್ತು, ನಾ ಹತ್ತಿ ಕೂರಲಿಲ್ಲ. ಅಂಡಮಾನ್ ಕ್ರೇಕಿಗೆಂದು ಮುಂಜಾನೆ ಬಾರ್ಜ್ ಹತ್ತಿ bamboo flatಗೆ ಬಂದು ಮನ್ನಾರಘಾಟ್ ದಾಟಿಶೋಲ್ ಬೇ’ಗೆ ಹೊರಟೆವು. ಹಾದಿಯಲ್ಲಿ ಆಕಾಶಗಾಮಿಯಾಗಿದ್ದ ಬಿಳಿಹೊಟ್ಟೆಯ ಮೀನು ಗಿಡುಗ ಮೀನಿಗೆ ಹೊಂಚು ಹಾಕಿತ್ತು.

ಗಿಡುಗದ ಹಾರುವ ಪಟದಾಸೆಗೆ ಕೆಳಗಿಳಿದು ಕ್ಲಿಕ್ಕಿಸಿದೆ. ನಡುವೆ wimbrel ಹಾರಿಬಂದು ನಾಲ್ಕೈದು ಪಟಕ್ಕೆ ಪೋಸ್ ಕೊಟ್ಟಿತು. ಶೋಲ್ ಬೇಯಲ್ಲಿ ಕಾಲಿಟ್ಟೊಡನೆ ದೂರದಲ್ಲಿ ಫಾರೆಸ್ಟ್ ವ್ಯಾಗ್ಟೇಲ್ ಕಾಣಿಸಿತು. ಎಲ್ಲರೂ ಅತ್ಯಾತುರದಿಂದ ಸನ್ನದ್ಧರಾದರೂ ಅದು ‘ನಾನು ನಿಮ್ಮನ್ನು ನೋಡಿದ್ದೇನೆ, ಅಷ್ಟು ಸುಲಭವಾಗಿ ಕೈಗೆ ಸಿಕ್ಕುವೆನೆ’ ಎನ್ನುವಂತೆ ಸಂಧಿಯಲ್ಲಿ ನುಸುಳಿ ಹೋಯಿತು. ಒಂದೆಡೆ ಅಂಡಮಾನ್ ಟ್ರೀಪೈ ಕಣ್ಣೆದುರು ಸುಳಿದು ಕ್ಲಿಕ್ಕಿಸುತ್ತಿದ್ದಂತೆ ಇನ್ನೊಂದೆಡೆ ಅಂಡಮಾನ್ ಕುಕೂಶ್ರೈಕ್ ಕೀಟಕ್ಕೆ ಕಾಟ ಕೊಡುತ್ತಿತ್ತು. ಕೀಟ ಬಚಾವಾಗಲು ಯತ್ನಿಸಿದಷ್ಟು ಬಿಡದೆ ಗುಳುಮ್ಮಿಸಿ ಕುಕೂ ಸಂತೃಪ್ತವಾಯಿತು. ನಿಮಿಷಾರ್ಧದಲ್ಲಿ ಅಂಡಮಾನ್ ಡ್ರೊಂಗೊ ಸಿಕ್ಕಿತು. ಮರದ ಮೇಲೆ ಹಾರಿದ್ದೇನೆಂದು ಕಣ್ಣಿಟ್ಟರೆ ಆಶಿ ಮಿನಿವೆಟ್. ಇತ್ತ ಏನೋ ಬಂದಿತೆಂದು ನೋಡಿದರೆ ಮೋಹಕ ಕಾಂಬಿನೇಷನ್ನಿನ ಅಂಡಮಾನ್ ಮರಕುಟುಕ. ಕಡುಗಪ್ಪು ಬಣ್ಣದ ಮೈಗೆ ಕೆಂಪುಬಣ್ಣದ ಸ್ಪೆಷಲ್ ಟೊಪ್ಪಿಗೆ. ‘ಶಿರ್ ಪೆ ಲಾಲ್ ಟೋಪಿ. ಫಿರ್ ಮೈ ಹೂ ಅಂಡಮಾನ್ ಕಾ ಡಾನ್’ ಎಂದು ಉಳಿದ ವುಡ್ ಪೆಕರಗಳಿಗೆ ಧಮ್ಕಿ ಹಾಕುವಂತಿತ್ತು.


ಪ್ರವಾಸದಲ್ಲಿ ಐದಾರು ಸಲ ಶೋಲ್ ಬೇಯಲ್ಲಿ ಅಂಡಮಾನ್ ಕ್ರೇಕಿಗಾಗಿ ಕ್ರೇಜಿ಼ಗಳಾಗಿ ತಡಕಿದೆವು. ತೇಜಸ್ವಿಯವರ ಕರ್ವಾಲೋ ಕಾದಂಬರಿಯ ‘ಪ್ಯಾರ ಅದಿರೋದು ಗೊತ್ತಾಗ್ತಿದೆ, ಆದರೆ ಕಣ್ಣಿಗೆ ಕಾಣಲ್ಲ ಎನ್ನಲು ಕಾಣ್ತಿತೆ ಸಾಮಿ ಕಾಣಾಕಿಲ್ಲ’ ಎಂದು ಕನ್ನಡವನ್ನು ಕೊಲೆ ಮಾಡುತ್ತಿದ್ದ. ಪ್ಯಾರನಿಗಾದಂತೆ crake ಇದ್ದದ್ದು ಗೊತ್ತಾಗ್ತಿತ್ತು, ಕಾಣಸಲಿಲ್ಲ. ಕೊನೆಯ ದಿನ ಸೌಂಡ್ ಕೇಳಿಸಿತು, ಕಾಣಿಸಲಿಲ್ಲ. ನಿಶಾಂತ್ ಮೊದಲು ತೆಗೆಯಬೇಕೆಂದು ಆತುರದಿಂದ ನುಗ್ಗಿದಾಗ ಕ್ಯಾಮೆರಾ ಬಿದ್ದಿತು. ಕ್ರೇಕ್ ಸಿಗದಿದ್ದಾಗ ರಸ್ತೆ ಪಕ್ಕದಲ್ಲಿದ್ದ ಮ್ಯಾಂಗ್ರೋವಿನಲ್ಲಿ ರಡ್ಡಿ ಮಿಂಚುಳ್ಳಿ ಹುಡುಕಲು ಹೋದೆವು. ರಡ್ಡಿ ಮ್ಯಾಂಗ್ರೋವ್ ಕಾಡುಗಳಲ್ಲಿ ಮಾತ್ರ ಸಿಗುತ್ತವೆ. ತನ್ನ ಎದ್ದುಕಾಣುವ ಬಣ್ಣದಿಂದ ಅದೆಲ್ಲಿದೆ ಎನ್ನುವುದು ಗೊತ್ತಾಗುತ್ತಿತ್ತು. ಒಂದು ರಡ್ಡಿಗೆ ಒಂದೇ ಜಾಗದಲ್ಲಿ ಐದು ಕ್ಯಾಮೆರಾ ಇರಿಸಿಕೊಂಡು ಬಕದಂತೆ ಕಾಯುತ್ತಿದ್ದೆವು. ಬಕವಾದರೂ ವಾಸಿ ನಮ್ಮದು ಅದಕ್ಕಿಂತ ಹೆಚ್ಚು.

ಕ್ರೇಕಿಗೆಂದು ಹೋಗುವುದು, ಸಿಗದೆ ರಡ್ಡಿ ಹುಡುಕೋದು ದಿನದ ಕಥೆಯಾಗಿತ್ತು. ಹೆಚ್ಚು ಬೆಳಕು ಬೀಳದ ಮ್ಯಾಂಗ್ರೋವಿನ ನಸುಮಸುಕಿನಲ್ಲಿ ನಿಮ್ಮ ಲಕ್ ಇಷ್ಟಾದರೂ ಇದೆ, ತಗೊಳಿ ಎಂದು ರಡ್ಡಿ ಮಿಂಚುಳ್ಳಿ ಅವಕಾಶ ಕೊಡುತ್ತಿತ್ತು. ಬೆಳಿಗ್ಗೆ ಹತ್ತು ಗಂಟೆವರೆಗೆ ಶೋಲ್ ಬೇ, ಛಿಡಿಯಾ ಟಾಪು, ವಾಂಡೂರ್ ಮುಂಡಾಪಹಾಡ್ ಹೀಗೆ ಒಂದು ಕಡೆ ಹಕ್ಕಿ ಹುಡುಕಾಟ. ಬಳಿಕ ಹಾದಿಬದಿಯ ಹೋಟೆಲಿನಲ್ಲಿ ತಿಂಡಿ ತಿನ್ನುತ್ತಿದ್ದೆವು, ಇಲ್ಲವೆ ವಿಕ್ರಂ ಪ್ಯಾಕ್ ಮಾಡಿಸಿ ತಂದಿದ್ದ ಫಲ ಬ್ರೆಡ್ಡನ್ನೆ ಫಲಾಹಾರವಾಗಿ ಸ್ವಾಹಾಯಿಸುತ್ತಿದ್ದೆವು.

ಮಧ್ಯಾಹ್ನ ಸೆಷನ್ ಮುಗಿಸಿ ಮರಳುವಾಗ ಕಡಲ ಕಿನಾರೆಯಲ್ಲಿದ್ದ ಬಜ್ಜಿ ಬೋಂಡಾ ರುಚಿ ಹತ್ತಿ ಉದರದ ಕಡಲಿನಲ್ಲಿ ಅವನ್ನು ಮುಳುಗಿಸಿ ನಂತರ ಎಳನೀರಿನಲ್ಲಿ ತೇಲಿಸುತ್ತಿದ್ದೆವು. ಬೇಲಾ ರಾಜಾಸ್ಥಾನದಿಂದ ತಂದಿದ್ದ ಬುಜಿಯಾದಲ್ಲಿ ನಮಗೂ ಪಾಲಿತ್ತು. ಖುಷ್ಬೂ ಪರೋಟಾವನ್ನು ಪೂರ್ಣವಾಗಿ ಪುಡಿಪುಡಿಗೈದು ಬುಜಿಯಾ ಉಪ್ಪಿನಕಾಯಿ ಮೊಸರು ಸೇರಿಸಿ ತಿನ್ನುತ್ತಿದ್ದುದನ್ನು ಕಂಡು ಎನಿಸುತ್ತಿತ್ತು ಪರೋಟಾ ತಿನ್ನುವ ಬದಲು ಗೋಧಿ ಹಿಟ್ಟನ್ನೇ ತಿಂದರೆ ಹೇಗಿರುತ್ತದೆಂದು, ಆದರೆ ತಿಂದು ನೋಡುವ ಪ್ರಯೋಗ ಮಾಡಲಿಲ್ಲ ಅಷ್ಟೆ. ಮುಂಡಾಪಹಾಡ್ ಬಳಿ ಕಾಣಸಿಕ್ಕ mangrove whistlerನ ಧ್ವನಿ ವಿಶಿಷ್ಠವಾದುದು. mangrove ಇರುಕಿನ ಮಸುಕಿನಲ್ಲಿ ಹಾರಾಡುತ್ತಾ ಕೂಗುವ ಇದರ ಸಿಳ್ಳೆ ಧ್ವನಿ ಸಂಗ್ರಹಿಸಲಿಲ್ಲ ಚಿತ್ರ ತೆಗೆಯುವ ಭರಾಟೆಯಲ್ಲಿ. ವಾಂಡೂರ್ ಕೆರೆಯಲ್ಲಿ ಅಂಡಮಾನ್ ಟೀಲ್ ಕಂಡವು.

ರಾಹುಲ್ ಪಕ್ಕಕ್ಕೆ ಹೋಗಿ ಧರಾಶಾಯಿಯಾಗಿ ಟೀಲ್ ಸೆರೆ ಹಿಡಿಯಲು ಸನ್ನದ್ಧನಾದ. ಗದ್ದೆಮಿಂಚುಳ್ಳಿ, ಕಿರುಮಿಂಚುಳ್ಳಿ ಬರುತ್ತಿದ್ದುದರಿಂದ ಕ್ಲಿಕ್ಕಿಸಲು ಮಿಂಚುಳ್ಳಿ ಮೋಹಿಯಾದ ನಾನೂ ಅತ್ತ ಹೋದೆ. ಕುಳಿತು ಸಾಕಾಗಿ ಮರೆತು ಮೇಲೆದ್ದೆ. ಅಲ್ಲಿದ್ದ ಟೀಲ್ ಹಾರಿ ಅಂತರಿಕ್ಷದಲ್ಲಿ ಅಂತರ್ಧಾನವಾದವು. ರಾಹುಲ್ ‘ಅಮ್ಮಾ ನೀವು ಮೇಲೆದ್ದು ಅವನ್ನೆಲ್ಲಾ ಹಾರಿಸಿಬಿಟ್ಟಿರಿ’ ಎಂದು ಗೊಣಗಿ ಗದರಿದ. ತಪ್ಪು ಮಾಡಿದ ಮೇಲೆ ಉಪ್ಪು ತಿನ್ನಲೇಬೇಕಿತ್ತಲ್ಲ, ತಿಂದೆ. ಬಿಳಿಕಾಲರಿನ ಮಿಂಚುಳ್ಳಿ ಬಿತರ್‌ಕನಿಕಾದಲ್ಲಿ ಸಿಕ್ಕಿದ್ದರೂ ಅಂಡಮಾನಿನಲ್ಲಿ ಸಿಕ್ಕಿದಾಗಲೂ ಕ್ಲಿಕ್ಕಿಸಿದೆ. ಹೆಮ್ಮಿಂಚುಳ್ಳಿ ತನಗಿಂತ ಗಾತ್ರದ ಮೀನು ಹಿಡಿದು ನುಂಗಲು ಸಾಹಸ ಮಾಡಿದ್ದನ್ನು ಸರ್ವೆಮರದ ಸಂಧಿಯಲ್ಲೇ ತೆಗೆದೆ. ಒಮ್ಮೆ ಹೆಮ್ಮಿಂಚುಳ್ಳಿ ಕೂರುವಷ್ಟರಲ್ಲಿ ನನ್ನನ್ನು ನೋಡಿ ಪರಾರಿಯಾಯಿತು.

andaman teal, forest wagtail, andaman shama, andaman white starling, ruddy kingfisher, andaman drongo, long tailed parakeet, andaman serpant eagle, red breasted parakeet, black naped tern, red collared dove, red breasted pipit, phillipino shrike, cotton pygmy goose, andaman flower pecker, ashy minivet ಮುಂತಾದವು ಲೈಫರ್‌ ಆಗಿಸಿಕ್ಕವು. ಹಕ್ಕಿ ಲೈಫರ್ ಆಗಿ ಸಿಕ್ಕಿದರಷ್ಟೆ ಸಾಲದು, ಹಕ್ಕಿ ಲೈಫಿನ ಜಿಜ್ಞಾಸೆಯೂ ಆಗಾಗ ನಡೆಯಬೇಕಲ್ಲವೆ… ನಡೆಯುತ್ತದೆ. ಒಂದು ದಿನ ಕಡಲ ತಡಿಯಲ್ಲಿದ್ದೆ. ಸಾಕೆನಿಸಿದರೆ ಕಡಲತಡಿಗೆ ಬಂದರೆ ಸಾಕು, ತಣ್ಣಗಾಗಬಹುದು ಒಡಲು, ಬೇಗುದಿ. ನೋಡುತ್ತಲೇ ಇದ್ದೆ. ನೋಡನೋಡುತ್ತಾ pacific reef egret ಬಂಡೆಗಲ್ಲನ್ನು ಹತ್ತಿ ಕಾಲು ಮೇಲೆತ್ತಿಕೊಂಡು ನಿಂತಿತು.

ಪಾಪ ಅದಕ್ಕೆ ಜೀವನ ಸಾಕೆನಿಸಿತೆ? ಏನ್ ಮಾಡಿಕೊಳ್ಳುತ್ತೋ!! ಮತ್ತೆ... ಮತ್ತೇನಿಲ್ಲ, ಎತ್ತಿದ ಕಾಲನ್ನಿಳಿಸಿ ನಿಧಾನವಾಗಿ ಕಲ್ಲಿನಿಂದಿಳಿದು ಮುಂದೆ ಹೋಯಿತು. ಸಾಕೆನಿಸಿದಾಗ ತಣ್ಣಗೆ ಯೋಚನೆ ಮಾಡಿದರೆ ಕಷ್ಟಗಳ ಕಲ್ಲೂ ಕರಗಿ ನೀರಾಗಬಹುದು. ಅಂಡಮಾನಿನಲ್ಲಿ ಎತ್ತ ಹೊರಳಿದರೂ ಕಡಲು. ಐದು ಗಂಟೆಗೆ ರವಿ ಹಾಜರಾಗುತ್ತಿದ್ದ. ಸಮುದ್ರದಿಂದ ಮೇಲೇರುವ ಸೂರ್ಯೋದಯದ ಚಿತ್ರ ತೆಗೆಯಬೇಕೆಂದು ಹೊರಟರೂ ಅವಈಗ ಎದ್ದಿರಾ, ಬಂದಿರಾ’ ಎಂದು ಅಣಕಿಸಿ ಮೇಲೇರಿ ನಗುತ್ತಿದ್ದ, ನಾವೂ ಛಲ ಬಿಡದೆ ಪ್ರಯತ್ನಿಸಿ ಉದಯದ ಚಿತ್ರ ವಿಫಲರಾದರೂ ಅಸ್ತದ ಚಿತ್ರ ತೆಗೆದೆವು. ಹೇಗೂ ಗೂಬೆ ಹುಡುಕಲು ಹೊರಗೆ ಇರುತ್ತಿದ್ದವಲ್ಲ. ಕತ್ತಲು ಕವಿಯಲು ದಿನಕರ ಅತ್ತಲ ಮಗ್ಗುಲಿಗೆ ಹೊರಳಿಕೊಳ್ಳಲು ಕಡಲಿನಾಳದಾಳಕ್ಕೆ ಇಳಿದಿಳಿದು ಹೋಗುವುದೇ ಕಾರಣ ತಾನೇ.


ಛಿಡಿಯಾಟಾಪಿನ ಕಡಲ ಕಿನಾರೆ ಅಸ್ತಮಾನಕ್ಕೆ ಸುಂದರ ತಾಣ. ಪವಡಿಸಿದ್ದ ಕಡಲ ಮೇಲೆ ಹಾದುಹೋದ ಭಾಸ್ಕರ ಬಾನನ್ನು ಕೆಂಪಾಗಿಸಿ ಪಡುವಣದಂಗನೆಯ ಒಡಲಲ್ಲಿ ಮೈಮರೆಸಿಕೊಳ್ಳುವಾಗಿನ ಚಿತ್ರ ಕ್ಲಿಕ್ಕಿಸಿದೆ. ಅವನು ಅವನಿ ತೊರೆದ ಬಳಿಕ `ತರಣಿ ನೀನೆಲ್ಲಿ ಮರೆಯಾದೆ, ಏಕೆ ಮರೆಯಾದೆ’ ಎನ್ನುತ್ತಾ ಸಂಜೆ ಅಲ್ಲೇ ಕುಳಿತಿದ್ದೆ. ಮೀಂಗುಲಿಗ ಸಮುದ್ರಕ್ಕೆ ಬಲೆ ಹರಹುವ ಚಂದದ ನೋಟ ಸಿಕ್ಕಿತು. ಮೀನಿನ ಸೆರೆಗಾಗಿ ಬಲೆ ಎಸೆದರೂ ಕರಗತ ಮಾಡಿಕೊಂಡ ಕಲೆಯಂತ್ತಿತ್ತು. ಕಾಣಬಲ್ಲ ಕಣ್ಣಿಗೆ ಸಕಲದರಲ್ಲೂ ಕಲೆ ಕಾಣಬಹುದು. ನಾವು ಹೋಗಿದ್ದಾಗ ಬೀಚ್, ಪಾರ್ಕ್ ಎಲ್ಲಿ ಹೋದರೂ ಜನಸಾಗರವಿತ್ತು. ಸೆಲ್ಫಿಶೂರರ ಸಂಖ್ಯೆಯೂ ಹೇಳತೀರದಷ್ಟಿತ್ತು. ಎಲ್ಲೆಲ್ಲಿ ನೋಡಲಿ ಸೆಲ್ಫಿಗರ ಕಾಣುವೆ, ಸೆಲ್ಫಿಗರು ಇಲ್ಲದ ತಾಣವೆಲ್ಲಿ, ಈ ಜಗದಲ್ಲಿ? ಏನು ಮಾಯೆಯೋ, ಏನು ಮೋಹವೋ ಸೆಲ್ಫಿ…
Nature photography ಮಾಡುವ ಅವಕಾಶವನ್ನೇ ಬಳಸಿಕೊಳ್ಳದ ನಮಗೆ ಈ ಪ್ರವಾಸದಲ್ಲಿ ಕಾಲವೇ ಅವಕಾಶ ಒದಗಿಸಿತ್ತು. ಗೂಬೆ ಹುಡುಕಲು ಕತ್ತಲಾಗಬೇಕಲ್ಲ.

ಮೋಡ, ಮರಗಳ ಪಟ ತೆಗೆಯುತ್ತಿದ್ದೆ. ಅಲ್ಲಿದ್ದ ಒಂದು ಮರವನ್ನು 24-105 ಲೆನ್ಸ್ ಹಾಕಿ 24 ಎಂ.ಎಂನಲ್ಲಿ ತೆಗೆದರೂ ಮರ ಪೂರ್ತಾ ಬರಲೇ ಇಲ್ಲ. ಹಿಂದೆ ಹೋಗಿ ತೆಗೆಯಲು ಎಡೆಯಿರಲಿಲ್ಲ. ಮೊಬೈಲಿನಲ್ಲೇ ತೆಗೆದೆ. ಅದೇ ಮರ, ಆದರೆ ಹಿನ್ನೆಲೆ ಬದಲಾಗುತ್ತಿತ್ತು. ಅಮಿ ಪ್ರಭಾಲ್ ಮರದ ಬುಡದಲ್ಲಿ ನಿಂತರೆ ಮರದೆತ್ತರ ಮತ್ತು ಅಮಿ ಎತ್ತರದ ಅಂತರ ಹೇಗಿತ್ತೆಂದರೆ ಐದಡಿ ನಾಲ್ಕಂಗುಲದ ಅಮಿ ಲಿಲಿಫುಟ್ಟಿನಂತೆ ಕಂಡರು. ಚಿಡಿಯಾ ಟಾಪಿನ ಮರಗಳು ಹತ್ತಾಳು ತಬ್ಬಿಹಿಡಿದರೂ ಮುಟ್ಟಲಸಾಧ್ಯವಿತ್ತು. ನಿಕೋಬಾರಿನಲ್ಲಿಯೂ ದೈತ್ಯಗಾತ್ರದ ಮರಗಳಿದ್ದು ಅರಣ್ಯ ಸಂಪತ್ತು ಉಳಿದಿರುವ ಸಮಾಧಾನ ಆಯಿತು.


ಈ ನಡುವೆ ಅಮಿಪ್ರಭಾಲರ ಕ್ಯಾಮೆರಾ ಕೈಕೊಟ್ಟು ಹಕ್ಕಿ ಛಾಯಾಗ್ರಹಣ ಮಾಡಲು ಕಷ್ಟವಾಯಿತು. ಅಮಿ ಫಿಶ್ ಐ ಲೆನ್ಸಿನಿಂದ ಚಿತ್ರ ತೆಗೆಯಲು ಒತ್ತಾಗಿದ್ದ ತೆಂಗಿನಮರಗಳು ಕಂಡಾಗ ನಿಲ್ಲಿಸಿ ಚಿತ್ರ ತೆಗೆಯುತ್ತಿದ್ದರು. ಒಂದು ದಿನ ಬೆಳಿಗ್ಗೆ ಸೆಷನ್ ಮುಗಿಸಿ ಖುಷ್ಬೂ ಸ್ಕೂಬಾ ಡೈವಿಂಗಿಗೆ ತಾಯಿಯ ಜೊತೆ ಹೊರಟರು. ಅದೆಲ್ಲಾ ನಿಮಗೆ ಇರಲೆಂದು ಕಾರಿನಲ್ಲೆ ಕುಳಿತು ಹಕ್ಕಿ ಕಂಡಾವೆ ಎಂದು ಕಣ್ಣು ಹಾಯಿಸಿದರೆ ಚಿಟ್ಟು ಮಡಿವಾಳ ಬಿಟ್ಟು ಬೇರೆ ಕಾಣಲಿಲ್ಲ. ಕಿನಾರೆಯಲ್ಲಿ ಆಡುತ್ತಿದ್ದ ಆಟಗಳಲ್ಲಿ ಬೀಚ್ ವಾಲಿಬಾಲ್ ಆಡುವವರು ಕಾಣದಿದ್ದರೂ ಬಾಲ್ ಮೇಲೆ ಬರುವುದು ಕಾಣಿಸಿ ಗಾಳಿಯಲ್ಲಿ ತೇಲುವ ಚೆಂಡನ್ನು ಕ್ಲಿಕ್ಕಿಸುತ್ತಿದ್ದೆ. ರಾಹುಲ್, ನಿಶಾಂತ್ ಹಕ್ಕಿಗೆಂದು ಹೋಗಿ ಬರಿಗೈಯಲ್ಲಿ ಬಂದರು.


ನಮ್ಮ ಸಾರಥಿ ವಿಕ್ರಮ ಒಮ್ಮೆ ಸಾರಥಿಸುವಾಗ ಗಮನ ಬೇರೆಡೆ ಹರಿಸಿ ಗಾಡಿಯನ್ನು ರಸ್ತೆ ಪಕ್ಕಕ್ಕೊಯ್ದು ಗುದ್ದಿದರು. ನಮ್ಮ ಬಾಡಿಗಳಿಗೆ ಏನಾಗದಿದ್ದರೂ ಗಾಡಿಯ ಮುಂದಿನ ಮೂತಿ ನೆಗ್ಗಿತು. ವಿಕ್ರಮ್‌, ತಪ್ಪು ತಮ್ಮದಲ್ಲವೆಂದು ಸಮಜಾಯಿಷಿ ನೀಡಿದರೂ ಗಾಡಿ ರಿಪೇರಿಸಬೇಕಿತ್ತು. ಗಾಡಿಯಿಂದಿಳಿದು ಅಲ್ಲೆ ಕೂತೆವು. ಶಿಲ್ ಯಾರನ್ನೋ ಸಂಪರ್ಕಿಸಿ ರಿಪೇರಿಸಿಸಿ ನೆಲೆ ಸೇರಿಸಿದ್ದರು. ದೂರದೂರಲ್ಲಿ ನಮ್ಮ ಬಾಡಿಯನ್ನೂ ರಿಪೇರಿ ಮಾಡಿಸಿಕೊಳ್ಳಬೇಕಾದ ಬವಣೆಯನ್ನು ಕೂದಲೆಳೆಯಿಂದ ತಪ್ಪಿಸಿಕೊಂಡಿದ್ದೆವು. ನಾವಿನ್ನೂ ಹಕ್ಕಿಗಳ ಚಿತ್ರ ತೆಗೆಯಲು ಬೇಕಾದ ಬರಹವನ್ನು ಬ್ರಹ್ಮನಿಂದ ಬರೆಸಿಕೊಂಡು ಬಂದಿದ್ದವೆಂದು ಕಾಣುತ್ತದೆ.

| ಇನ್ನು ಮುಂದಿನ ವಾರಕ್ಕೆ|

‍ಲೇಖಕರು avadhi

March 26, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: