ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸೂರ್ಯಕೀರ್ತಿ ಹೊಸ ಕವಿತೆ- ಗಾಂಧಾರಿ ಕಟ್ಟಿದ ಬಟ್ಟೆ!

ಸೂರ್ಯಕೀರ್ತಿ

ಅಂದು ರಾತ್ರಿ ಧೃತರಾಷ್ಟ್ರ ದಿಢೀರನೆ
ಬಂದು ಹಾಸಿಗೆಯ ಮೇಲೆ ಕುಳಿತಾಗ
ಅವನ ಅಂಧದ ಕಣ್ಣುಗಳೊಮ್ಮೆ
ಕುಡಿನೋಟಗಳ‌ ಬೀರಿ ಅವನಿಗೆ‌
ನಾನೇ ನಾನೇ ಕಣ್ಣಾಗಬೇಕೆಂದು ಅಂದುಕೊಂಡಿದೆ!

ಅವನ ಕುರುಡಿಗೆ ಬೆಳಕಿನ ಹೂವಾಗಿ
ಅರಳಬೇಕೆಂದು ಅವನ ಬೆರಳುಗಳ
ಮುಟ್ಟಿದೆ, ಅಲ್ಲಲ್ಲಿ ಆಕಾಶದ ಕಡೆ
ತಿರುಗಿ ಒದ್ದಾಡುವಾಗ ಅವನಿಗೆ
ನನ್ನ‌ ದೃಷ್ಟಿಯನ್ನೆ ಕೊಡಬೇಕೆಂದು ಹಪಹಪಿಸಿದೆ!

ಆ ಶಯನಗೃಹದಲ್ಲಿ ಅವನ
ಜೊತೆ ಅವನು ಕಾಣಲಾಗದನ್ನು
ಕಂಡಲಾಗದನ್ನು ನನ್ನ ಕಣ್ಣುಗಳಿಂದ
ನೋಡಿಸಬೇಕೆಂದಿದ್ದೆ!
ಅಂದು ಅವನಿಗೆ ಇದರ ಬಗ್ಗೆ
ಎಚ್ಚರವೇ ಇರಲಿಲ್ಲ!
ರಾಮರಸವ ಕುಡಿದು ಉನ್ಮಾದದ ಸ್ಥಿತಿಯಲ್ಲಿದ್ದ!

ತಡವಿದ, ಸುತ್ತಲೂ ತಿರುಗಿದ
ಕೈಗಳ ಮುಂದೆ ನೀಡಿ ‘ಲೇ, ಲೆಯ್ ಇವ್ಳೇ ,
ಥೂ, ಯಾರ್ಲೇ’ ಎಂದೆಲ್ಲ ಅರಚಿದ.
ಅವನ‌ ನೋಡಿ ದಾರಿದೀಪವಾಗಬೇಕೆಂದುಕೊಂಡಿದ್ದ
ನನಗೆ ಕ್ಷಣಾರ್ಧದಲ್ಲಿ ಕಸಿವಿಸಿಗೊಂಡೆ‌.

ಮಹಾರಾಜ ಎನ್ನುವಷ್ಡರಲ್ಲಿಯೇ
ಕಪ್ಪು ಬಟ್ಟೆಯ ನನ್ನ ಕಣ್ಣುಗಳ ‌ಮುಂದೆ ತಂದ
‘ಕಟ್ಟಿಕೋ‌ ಇಧೋ! ಲೋಕದ ಪತಿಗೆ ಸಮ’
ಎಂದು ಗುಡುಗಿದ.
ಒಂದೆರಡುಹೆಜ್ಜೆಗಳ‌ ಇಟ್ಟು ‘ಗಂಡ ನೋಡದ ಈ ಪ್ರಪಂಚ ಸತಿಗೂ ಬೇಡ’ ಎನ್ನುತ್ತಲೇ ಆಕಾಶಕ್ಕೆ
ಪರದೆಯ ಕಟ್ಟಿದ.
ಅಂದಿನಿಂದ ಇಂದಿನವರೆಗೂ ಆ ಪರದೆ
ಮಹಾಪತಿವ್ರತಿಯ ಸ್ಥಾನದಿಂದ ಇಳಿಯಲೇ ಇಲ್ಲ!
ಗಾಂಧಾರಿ‌ ಅವನ ಕಣ್ಣುಗಳಿಗೆ
ಕುರುಡಾದಳು, ಕತ್ತಲೇ ಪ್ರಪಂಚದ
ರಾಣಿಯಾದಳು!
ಕುರುಡು ರಾಜನ ರಾಣಿಯಾಗಿ
ಸಾಮ್ರಾಜ್ಯವಾಳಿದಳು, ಯಾರೂ ನೋಡಲಾಗದ
ರಾಜ್ಯಕ್ಕೆ!

‍ಲೇಖಕರು Admin

10 November, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading