ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸುಧಾ ಆಡುಕಳ ಕವಿತೆ- ನೀನೇ ಬರಬೇಕಾಯಿತು…

ಸುಧಾ ಆಡುಕಳ

1.
ಕತ್ತಲ ರಾತ್ರಿಗಳು ಎಷ್ಟೊಂದು ಸರಿದುಹೋದವು
ಬೆಳಕಿನ ರಾತ್ರಿಯಾಗಲು ನೀನೇ ಬರಬೇಕಾಯಿತು
2.
ಹತ್ತಿರಾಗುವುದು, ಬೆತ್ತಲಾಗುವುದು ಅಷ್ಟು ಸುಲಭವೆ ಹೇಳು?
ಆತ್ಮಗಳ ಬೆಸುಗೆಯಾಗದೇ ದೇಹ ಬೆರೆಯುವುದುಂಟೆ?
3.
ಆ ರಾತ್ರಿ ಆಕಾಶಕ್ಕೆ ತೂತು ಬಿದ್ದಂತೆ ಮಳೆ
ಯಾವ ಕಾಲದ್ದೋ ಏನೊ ಭುವಿಯ ಬಾಯಾರಿಕೆ
4.
ಲೆಕ್ಕವಿಡಬೇಡ ಮುತ್ತು
ಮಳೆ ಸುರಿಯುತ್ತಿದೆ ಒಳಹೊರಗೆ
5.
ಹುಚ್ಚು ಉನ್ಮಾದ ಜತೆಯಾಗದಿದ್ದರೆ ಆ ಹೊತ್ತು
ಗಾಯ ಸವರುವ ಸುಖವಾದರೂ ಎಲ್ಲಿರುತ್ತಿತ್ತು?

6.
ಆ ರಾತ್ರಿ ಅವಳು ಹಾಡಾದಳು
ಅವನು ಪದವಾಗಿ ಕರಗಿಹೋದ
7.
ಇರುಳು ಒಂದು ಹಣತೆ ಹಚ್ಚಿದರು
ಕತ್ತಲೆ ನಾಚಿ ದೀಪದಡಿ ಅಡಗಿತು
8.
ಬಾನು ಭುವಿಯ ತಬ್ಬಿದ ಆ ಹೊತ್ತು
ಭುವಿಯ ಮೈ ತುಂಬ ಹೂವರಳಿತ್ತು
9.
ಕತ್ತಲಿದೆ, ದೀಪ ಹಚ್ಚು
ಬೆಳಕಿದೆ, ಕಣ್ಣು ಮುಚ್ಚು


  1. ಬೆಳಕು ಬೇಕೆಂದು ಹಂಬಲಿಸಿದರು
    ಕತ್ತಲಿನಾಳಕ್ಕಿಳಿಯುವುದು ಅನಿವಾರ್ಯವಾಯಿತು
    11.
    ಈಗೀಗ ನೋವು, ವಿಷಾದ, ದುಃಖಗಳೇ ಇಲ್ಲ
    ನಿರ್ವಾತವನ್ನೆಲ್ಲ ನಿನ್ನ ಪ್ರೀತಿ ತುಂಬಿದ ಬಳಿಕ
    12.
    ಮತ್ತೆ, ಮತ್ತೆ ಕೇಳುತ್ತಾಳೆ ಪ್ರೀತಿಯೆಂದರೇನು?
    ಹೊಸದಾಗಿ ಹೇಳುತ್ತೇನೆ ಶಕ್ತಿಯಲ್ಲವೇನು?
    13.
    ಕತ್ತಲೆಯ ದಾರಿ ಎಷ್ಟಾದರೂ ಇರಲಿ
    ಹಣತೆ ಹಚ್ಚಿಡುವುದ ಮರೆಯಬೇಡ
    14.
    ಒಲವೇ, ಎದೆಗೆ ಬಾರೆಂದ
    ಅವಳು ಕವಿತೆಯಾದಳು!

‍ಲೇಖಕರು Admin

15 September, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading