ಮನಸಿನ ತುಂಬೆಲ್ಲ ಮಾಧವಿ ಮಾಧವಿ…

ಡಾ ಲಕ್ಷ್ಮಿ ಶಂಕರ ಜೋಶಿ

ಅದರ ಹಾಡು ಬಿಡುಗಡೆಯ ಪಾಡು…
ಹಾಡುತ್ತದೆ ಪಂಜರದ ಹಕ್ಕಿ ಭಯಕಂಪಿತ ದನಿಯಲ್ಲಿ.
ತಿಳಿಯದ ಲೋಕದ ಬಗೆಗೆ, ಹಂಬಲಿಸುವ ಲೋಕದ ಬಗೆಗೆ.
ಕೇಳುತ್ತಿದೆ ಅದರ ದನಿ ದೂರದ ಬೆಟ್ಟಕ್ಕೆ. ಯಾಕೆಂದರೆ
ಅದರ ಹಾಡು ಬಿಡುಗಡೆಯ ಪಾಡು.
ಮಾಧವಿ ನಾಟಕದ ಕೊನೆಯ ಮಾತಿದು…
ಹೌದು ಕಲಬುರಗಿ ರಂಗಾಯಣದ ಮೂರು ದಿನದ ನಾಟಕೋತ್ಸವದಲ್ಲಿ ನನ್ನನ್ನು ಬಹುವಾಗಿ ಕಾಡಿದ ನಾಟಕ “ಮಾಧವಿ”. ಡಾ..ಶ್ರೀಪಾದ ಭಟ್ಟರ ನಿರ್ದೇಶನದಲ್ಲಿ ಮೂಡಿ ಬಂದ ಎರಡೇ ಎರಡು ಪಾತ್ರಗಳ ಈ ನಾಟಕ ನಿಜವಾಗಿ ಚಿಂತನೆಗೆ ಹಚ್ಚಿತು.

ಮರುದಿನ ಮಗಳು ಸ್ವಾತಿ ಬೆಳಗಿನ ಕಷಾಯದ ಜೊತೆ ಅವರ ಅಪ್ಪನಿಗೆ ನಾಟಕದ ಕತೆ ಹೇಳ್ತಾ ಇತ್ತು.ನಾಟಕ ಪ್ರಿಯರಾದ ಅವರಪ್ಪ ನಾಟಕಕ್ಕೆ ಬಂದಿರಲಿಲ್ಲ “ಯಯಾತಿ ದು ತಪ್ಪ ಅಲ್ಲೇನು ಅಪ್ಪಾ?” ಪ್ರಶ್ನಿಸುತ್ತಿತ್ತು. ನನ್ನೊಳಗಿನ ಮಾಧವಿ ಅಡಿಗೆ ಮಾಡಿಸುತ್ತಿದ್ದಳು. ಸ್ವಾತಿಯ ಮಾತು ನನಗೆ ಕೇಳಿಸುತ್ತಾ ಇತ್ತು.ನಾನು ಅಡಿಗೆ ಮನೆಯಲ್ಲಿ ಹೆಚ್ಚುತ್ತ ,ಕೊಚ್ಚುತ್ತ,ಗಟ್ಟಿಸುತ್ತ, ಅವಡುಗಚ್ಚುತ್ತ ಆಹಾರ ಬೇಯಿಸುತ್ತಿದ್ದೆ.

ನನ್ನೆದುರಿಗೆ ಎಷ್ಟೊಂದು ಮಾಧವಿಗಳು ಹಾಸಿಹೋಗಿದ್ದಾರೆ. ತೇಲಾಡುತ್ತಿದ್ದಾರೆ. ಅವರ ಕತೆಗಳು ಮಾಧವಿಗೆಹೊರತಾಗಿಲ್ಲ. ಮನಸ್ಸಿಲ್ಲದಮದುವೆ. ಅನಿವಾರ್ಯತೆಗೆ ಕಟ್ಟು ಬಿದ್ದ ಮದುವೆಗಳು ಅದೆಷ್ಟೋ. ಮಾಧವಿ ಎಂದೋ ನಡೆದ ಪುರಾಣದ ಕತೆಯಿದ್ದರೂ ಇವತ್ತಿಗೂ ಪ್ರಸ್ತುತವೇ.. ವಿಶ್ವ ವಿದ್ಯಾಲಯದ ಕ್ಲಾಸ್ ರೂಮುಗಳಲ್ಲಿ ಉಬ್ಬಿದ ಹೊಟ್ಟೆಯ ಹೆಣ್ಣುಗಳು ಕಂಡರೆ ನನಗದೆಂಥದೋ ಅಕ್ಕರೆ, ಅನುಕಂಪ. ಅನಿವಾರ್ಯತೆಗೆ ಕಟ್ಟು ಬಿದ್ದ ಮದುವೆಯ ದಾಳಗಳು ಇವು ಎನಿಸುತ್ತದೆ. ಕೂರಿಸಿಕೊಂಡು ಕೇಳಿದಾಗ ಅವರ ಹಿಂದೆ ಒಂದೊಂದು ಕತೆ. ಕೂಸುಗಳನ್ನು ಮಡಿಲಲ್ಲಿ ಇಟ್ಟುಕೊಂಡ ಸಂಶೋಧನಾ ವಿದ್ಯಾರ್ಥಿಗಳು, ಜೊತೆಯಲ್ಲಿ ಬಂದ ಅಮ್ಮನೋ, ತಮ್ಮನೋ ಅವರ ಅಸಹನೆ ಸಹಿಸಿಯೂ ನಡೆಯುವ ಮೂಕ ಪ್ರಾಣಿಗಳು ಎಂದೆನಿಸುತ್ತದೆ.

ಮನಸ್ಸು ಇಲ್ಲದಿದ್ದರೂ ದೇಹವನ್ನು ಮಾತ್ರ ಒಪ್ಪಿಸುವ ಅದೆಷ್ಟೋ ಮಾಧವಿಗಳು ಮೌನವಾಗಿ ಕ್ಯಾಂಪಸ್ಸಿನ ತುಂಬ ಅಂಡಲೆಯುವದನ್ನು ನೋಡಿದಾಗ ಕರುಳು ಚುರ್ ಎನ್ನದೇ ಇರಲಾರದು. ಅವರನ್ನು ಗಾಡಿ ಮೇಲೆ ಕೂರಿಸಿಕೊಂಡು ಅವರಿಗೆಲ್ಲಿ ಬೇಕೋ ಅಲ್ಲಿ ಬಿಟ್ಟು ಬಂದದ್ದಿದೆ. ಆದರೆ ಇಡಿಯಾದ ಅವರ ಸಮಸ್ಯೆಯನ್ನು ಬಗೆ ಹರಿಸಲಾದೀತೇ?

ಯಯಾತಿ ಮಹಾರಾಜನ ಮಗಳು ಮಾಧವಿ. ವಿಶ್ವಾಮಿತ್ರರ ಶಿಷ್ಯ ಗಾಲವನಿಗೆ ದಾನ ರೂಪದಲ್ಲಿ ಹೋದ ಇವಳು ಒಬ್ಬರಿಂದೊಬ್ಬರಿಗೆ ವರ್ಗಾಯಿಸುತ್ತ ಹೋಗಿ, ಕೊನೆಗೆ ವಿಶ್ವಾಮಿತ್ರರೂ ಕೂಡ ಅವಳನ್ನು ಅನುಭವಿಸುತ್ತಾರೆ. ಕೊನೆಗೆ ಮತ್ತೆ ತಂದೆಯನ್ನು ಸೇರಿದ ಮಾಧವಿಗೆ ಮತ್ತೊಂದು ಸ್ವಯಂವರವನ್ನು ಏರ್ಪಡಿಸಿದ ತಂದೆಯ ಮಾತನ್ನು ಧಿಕ್ಕರಿಸಿ ಹೊರ ನಡೆಯುವ ಹೆಣ್ಣು ಸ್ವತಂತ್ರ ಜೀವಿಯಾಗಿ ,ಜ್ಞಾನದಾಹಿಯಾಗಿ, ಆತ್ಮೋದ್ಧಾರದ ನಿಜ ಸಾಧಕಳಾಗಿ ಕಾಣುತ್ತಾಳೆ.

ಮಾಧವಿ ಹೇಳುವ ಹಾಗೆ “ಅಪ್ಪಾ ನಿಮ್ಮೆಲ್ಲರ ದೃಷ್ಟಿಯಲ್ಲಿ ನಾನೊಂದು ಸೊತ್ತು.ಅದು ಮೊದಲು ನಿನ್ನದಾಗಿತ್ತು. ಈಗ ಗಾಲವನಿಗೆ ಸೇರಿತು.ಅಲ್ಲಿಂದ ಮೂವರು ರಾಜರಿಗೆ,ಮತ್ತೊಬ್ಬ ಋಷಿಗೆ. ಈಗ ಶಾಶ್ವತವಾಗಿ ಒಬ್ಬರಿಗೆ ಒಪ್ಪಿಸಿ ಕೈ ತೊಳೆಯುವ ಹುನ್ನಾರ ನಿನ್ನದು. ಆದರೆ ನಾನೂ ಒಬ್ಬ ಮಾನವ ಜೀವಿ. ನಾನು ಬರಿಯ ದೇಹವಲ್ಲ. ಮನಸು ಕೂಡ.ಜೀವನ ನನಗೆ ತುಂಬಾ ಪಾಠಗಳನ್ನು ಕಲಿಸಿದೆ. ನಾನು ಮದುವೆಯ ಬಂಧನದ ಬಗೆಗಿನ ನಂಬಿಕೆಯನ್ನು ಕಳೆದುಕೊಂಡಿದ್ದೇನೆ. ಹಾಗಾಗಿ ಈ ಸ್ವಯಂವರವೆಂಬ ನಾಟಕವನ್ನು ಬಹಿಷ್ಕರಿಸಿ ನಡೆಯುವೆ.ಮದುವೆಯೆಂಬ ಸಾಮಾಜಿಕ ಬಂಧನವನ್ನು ಧಿಕ್ಕರಿಸಿ ನಡೆದ ಮೊದಲ ಹೆಣ್ಣು ಎಂದು ಚರಿತ್ರೆಯಲ್ಲಿ ದಾಖಲಾಗಲಿ.ಅದು ನನ್ನ ಹೆಮ್ಮೆ ಕೂಡ. ನನ್ನ ಈ ಕಿರುದಾರಿ ಮುಂದಿನ ಪೀಳಿಗೆಗೆ ಹೆದ್ದಾರಿಯೂ ಆಗಲಿ ಎನ್ನುವ ಆಶಯ ನನ್ನದು.ಸಕಲ ವಿದ್ಯಾ ಪಾರಂಗತರಾಗಿಯೂ ಹೆಣ್ಣೊಬ್ಬಳನ್ನು ಸಹ ಜೀವಿಯಾಗಿ ನೋಡಲಾಗದ ನಿಮ್ಮ ಅಜ್ಞಾನಕ್ಕೆ ನನ್ನ ಅನುಕಂಪವಿದೆ.

ನಾನು ಜ್ಞಾನದ ಮಾರ್ಗವನ್ನರಸಿ ಹೊರಟಿರುವೆ.
ಆತ್ಮೋದ್ಧಾರದ ನಿಜ ಸಾಧಕಳಾಗಲು ಹೊರಟಿರುವೆ.
ಎನ್ನುತ್ತ ಮಾಧವಿ ನಿರ್ಗಮಿಸಿದ ಮೇಲೆ ನಮ್ಮ ನಿಜವಾದ
ಚಿಂತನೆ ಶುರುವಾಗುತ್ತದೆ.
ಸುಧಾ ಆಡುಕಳ ಅವರ ರಚನೆಯ ಈ ನಾಟಕ ಡಾ ಶ್ರೀಪಾದ ಭಟ್ಟರ ನಿರ್ದೇಶನದಲ್ಲಿ ಅದ್ಭುತವಾಗಿ ಮೂಡಿ ಬಂದಿದೆ. ಒಂದೊಂದು ಮಾತುಗಳು,ಅದನ್ನು ಪ್ರಸ್ತುತಪಡಿಸುವ ರೀತಿ, ಮನದ ತುಮುಲಗಳನ್ನು ಬಿಂಬಿಸುವ ರೀತಿಯಲ್ಲಿ ನುಡಿಸುವ ಚಂಡೆ, ಇಡೀ ನಾಟಕವನ್ನು ಹಿಡಿದಿಡುತ್ತದೆ.ಮಾಧವಿಯಾಗಿ ನಟಿಸಿರುವ ದಿವ್ಯಶ್ರೀ ನಾಯಕ ಸುಳ್ಯ ಅವರು ಬಹು ದೊಡ್ಡ ಕಲಾವಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.ಅವರ ಹಾಡು, ಚಂಡೆಯ ನುಡಿಸಾಣಿಕೆ, ಡೈಲಾಗ್ ಡೆಲಿವರಿ, ಅವರ ಇರುವಣಿಕೆ ಒಂದಕ್ಕಿಂತ ಒಂದು ಅದ್ಭುತ. ಇನ್ನು ಶರತ ಬೋಪಣ್ಣ ನಾಲ್ಕೂ ಪಾತ್ರಗಳನ್ನು ಒಬ್ಬರೇ ಮಾಡಿ ಸೈ ಎನಿಸಿಕೊಂಡದ್ದು ಸಾಮಾನ್ಯವೇನಲ್ಲ. ಇಡೀ ರಂಗವನ್ನು ಸಮರ್ಥವಾಗಿ ಬಳಸಿಕೊಂಡು, ರಂಗದ ತುಂಬಾ ಓಡಾಡುತ್ತಾ ಸಮರ್ಥ ನಟನಾಗಿ ಕಂಡದ್ದು ಆಶ್ಚರ್ಯವೇನಲ್ಲ. ಅವರು ಅದ್ಭುತವಾಗಿ ಬೆಳೆಯಲಿ ಎಂಬುದು ನನ್ನ ಹಾರೈಕೆ. ಹಿನ್ನೆಲೆಯಲ್ಲಿ ಬಲೆ, ಕುದುರೆಯ ಚಿತ್ತಾರವಿರುವ ಚಿತ್ರಣ ನಾಟಕ ಮುಗಿದ ಮೇಲೂ ತಲೆಯಲ್ಲುಳಿಯುತ್ತದೆ.

ರಂಗಾಯಣ ಅವತ್ತು ತುಂಬಿ ತುಳುಕಿತ್ತು. ನಾಟಕಾಸಕ್ತರು, ರಂಗಕರ್ಮಿಗಳು, ಸಾಹಿತಿಗಳು,ಸಂಗೀತಗಾರರು ಅನೇಕರು ತಮ್ಮ ಅನಿಸಿಕೆ ಹೇಳಿದರು. ಶ್ರೀಪಾದ ಭಟ್ಟರೆ ನಿಮ್ಮ “ನೃತ್ಯಗಾಥಾ,” “ರೆಕ್ಕೆ ಕಟ್ಟುವಿರಾ”, ನಾಟಕಗಳನ್ನು ನೋಡಿದ ನಾವುಗಳು ಮಾಧವಿಗೂ ಅಣಿಯಾಗೇ ಹೋಗಿದ್ದೆವು. ಬಹಳ ಕಣ್ಣು ತುಂಬಿದ, ಮನಸ್ಸು ಮೂಕವಾದ, ಗಟ್ಟಿಯಾದ ಕಥಾ ಹಂದರವಿರುವ ಇಂಥ ನಾಟಕಗಳು ನಿಮ್ಮಿಂದ ಹೆಚ್ಚೆಚ್ಚು ಬರಲಿ. ನಾವು ನೋಡಿಯೇ ನೋಡುತ್ತೇವೆ. ನಾಟಕ ನೋಡಿದವರಿಗೆ ಇಷ್ಟು ಖುಷಿಯಾದ ಮೇಲೆ ಕಲಿಸಿದ ನಿಮಗೆ ಎಂಥಾ ಖುಷಿ ಎಂಬುದನ್ನು ನಾನು ಬಲ್ಲೆ. ಇಂಥ ಖುಷಿ,ಯಶಸ್ಸು, ತೃಪ್ತಭಾವಗಳು ನಿಮಗೆ ಎಂದೆಂದೂ ಜೊತೆಯಾಗಿರಲಿ. ನಾಟಕವನ್ನು ನೋಡಲು ಅನುವು ಮಾಡಿಕೊಟ್ಟ ರಂಗಾಯಣದ ನಿರ್ದೇಶಕರಾದ ಶ್ರೀ.ಪ್ರಭಾಕರ ಜೋಶಿಯವರಿಗೆ ಹಾಗೂ ಅವರ ತಂಡಕ್ಕೆ ತುಂಬು ತುಂಬು ಹೃದಯದ ಕೃತಜ್ಞತೆಗಳು. ಮನಸಿನ ತುಂಬೆಲ್ಲ ಮಾಧವಿ ಮಾಧವಿ…

‍ಲೇಖಕರು Admin

September 15, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: