ಮಾತು ಮುಗಿಯುವ ಹೊತ್ತಿಗೆ ಕಾಫಿಯೂ ಮುಗಿದಿತ್ತು…

ಜೋಗಿ

‘ನನಗೆ ಯಾವ ದೇವರಲ್ಲೂ ನಂಬಿಕೆ ಇಲ್ಲ. ಪವಾಡಗಳಲ್ಲೂ ನಂಬಿಕೆ ಇಲ್ಲ. ದೇವರಿದ್ದಾನೋ ಇಲ್ಲವೋ ನನಗೆ ಬೇಕಾಗಿಲ್ಲ. ನನಗೆ ಆತನ ಆಗತ್ಯವೂ ಇಲ್ಲ.’

ಹಾಗಂತ ಹೇಳಿ ಸುಮ್ಮನೆ ಕೂತೆ. ಅವರೂ ಅರೆಕ್ಷಣ ಸುಮ್ಮನೆ ಕೂತರು. ನಂತರ ನಿಧಾನವಾಗಿ ತಿಳಿಹೇಳುವ ದನಿಯಲ್ಲಿ ‘ಪವಾಡಗಳನ್ನು ನಂಬಬೇಕು ನೀನು. ನಂಬೋಲ್ಲ ಅನ್ನೋ ಧೋರಣೆ ಒಳ್ಳೇದಲ್ಲ. ನಂಬಿದರೆ ಇಲ್ಲದೇ ಇರೋದೂ ಕಾಣಿಸುತ್ತೆ. ನಂಬದೇ ಹೋದರೆ ಇದ್ದದ್ದೂ ಕಾಣೋದಿಲ್ಲ’ ಎಂದವರೇ ‘ನಿನಗೆ ಅಂಬರೀಷ ವರ್ಮ ಗೊತ್ತಾ?’ ಕೇಳಿದರು.

ನನಗೆ ಗೊತ್ತಿರಲಿಲ್ಲ. ಅವರೇ ಮಾತು ಮುಂದುವರಿಸಿದರು.‘ಅಂಬರೀಷ ವರ್ಮ ಅಂತ ಒಬ್ಬರು ಸಿದ್ಧರು. ಬೆಂಗಳೂರಲ್ಲೇ ಇದ್ದಾರೆ. ನಮ್ಮ ಹಾಗೇ ಇರ್ತಾರೆ ನೋಡೋದಕ್ಕೆ. ಸಿವಿ ರಾಮನ್ ನಗರದಲ್ಲಿ ಅವರ ಮನೆ. ಅವರ ಮನೆ ಕೆಳಗೆ ಚಕ್ರ ಹೂತಿಟ್ಟಿದ್ದಾರೆ. ಆಗಾಗ ನಕ್ಷತ್ರ ಲೋಕಕ್ಕೆ ಪ್ರಯಾಣ ಮಾಡ್ತಾ ಇರ್ತಾರೆ. ಒಂದು ಸಲ ಮನೆಯವರನ್ನೆಲ್ಲ ಹೊರಗೆ ಕಳಿಸಿ, ಒಬ್ಬರೇ ಮನೆಯೊಳಗೆ ಉಳಕೊಂಡಿದ್ದರು. ನಲವತ್ತೈದು ದಿನ ಬಾಗಿಲು ತೆಗೀಬೇಡಿ ಅಂದಿದ್ದರು. ನಲವತ್ತಾರನೇ ದಿನ ಅವರ ಮನೆ ಬಾಗಿಲು ತೆರೆದರೆ ಒಳಗೆ ಪಾರಿಜಾತದ ಪರಿಮಳ. ನಡುಕೋಣೆಯಲ್ಲಿ ಚಕ್ಕಳ ಮಕ್ಕಳ ಹಾಕಿಕೊಂಡು ನಸುನಗುತ್ತಾ ಅಂಬರೀಷ ವರ್ಮ ಕೂತಿದ್ದರು. ಅವರ ಮುಖದಲ್ಲಿ ಅಲೌಕಿಕವಾದ ಕಳೆ ಇತ್ತು. ಇಷ್ಟು ದಿನ ಇಲ್ಲೇನು ಮಾಡ್ತಿದ್ರಿ, ಏನ್ ತಿಂತಿದ್ರಿ ಅಂತ ಕೇಳಿದ್ದಕ್ಕೆ, ‘ನಾನು ಇಲ್ಲೆಲ್ಲಿದ್ದೆ, ಸಪ್ತರ್ಷಿ ಮಂಡಲಕ್ಕೆ ಹೋಗಿದ್ದೆ. ಅಲ್ಲೊಂದು ಸಭೆಗೆ ನನ್ನನ್ನು ಕರೆದಿದ್ದರು. ಆ ಸಭೆ ನಲವತ್ತೈದು ದಿನ ನಡೀತು. ಅವರು ನನಗೀಗ ಒಂದು ಜವಾಬ್ದಾರಿ ಹೊರಿಸಿದ್ದಾರೆ. ಭಾರತದ ಪಶ್ಚಿಮ ಕರಾವಳಿಯಲ್ಲಿ ಗೋಕರ್ಣನಾಥೇಶ್ವರ ದೇವಸ್ಥಾನ ಇದೆ. ಆ ದೇವಸ್ಥಾನದ ಆತ್ಮಶಕ್ತಿಯನ್ನು ನಾನು ತೆಗೆದುಕೊಂಡು ಹೋಗಿ, ಪೂರ್ವ ಕರಾವಳಿಯಲ್ಲಿರುವ ಪುರಿ ಜಗನ್ನಾಥ ಕ್ಷೇತ್ರದಲ್ಲಿ ಪ್ರತಿಷ್ಠಾಪನೆ ಮಾಡಬೇಕಾಗಿದೆ’ ಅಂದರು.

‘ನಾವ್ಯಾರೂ ಅದನ್ನ ನಂಬಲೇ ಇಲ್ಲ. ಆದರೆ ಆ ಸೂರ್ಯಗ್ರಹಣದ ದಿನ ಸೂರ್ಯನ ಪಥವನ್ನೇ ಗಮನಿಸಿದಾಗ ನಮಗೆ ಗೊತ್ತಾಯಿತು. ಅದು ಅರಬ್ಬೀ ಸಮುದ್ರದ ತೀರದಿಂದ ಹಾದು ಹೋಗಿ ಪುರಿ ಜಗನ್ನಾಥ ಕ್ಷೇತ್ರದ ಮೇಲಿನಿಂದ ಬಂಗಾಳ ಕೊಲ್ಲಿ ದಾಟಿ, ಚೀನಾದ ಮಾರ್ಗ ಹಿಡಿದಿತ್ತು. ಅದಾಗಿ ಸ್ವಲ್ಪ ವರ್ಷಕ್ಕೆಲ್ಲ ಗೋಕರ್ಣ ದೇವಸ್ಥಾನದ ಮಹಿಮೆ ಕಡಿಮೆ ಆಗುತ್ತಾ ಬಂತು. ಪುರಿ ಜಗನ್ನಾಥ ಕ್ಷೇತ್ರದ ಮಹಿಮೆ ಹೆಚ್ಚುತ್ತಾ ಹೋಯ್ತು. ಅಂಬರೀಷ ವರ್ಮ ಹೇಳಿದ್ದು ನಿಜ ಆಗ್ಹೋಯ್ತು.’

ಅಷ್ಟು ಹೇಳಿ ಅವರು ನನ್ನ ಮುಖ ನೋಡಿದರು. ‘ನೀನಿದನ್ನ ನಂಬ್ತೀಯಾ?’ ಕೇಳಿದರು. ‘ನಂಬೋಲ್ಲ’ ಅಂದೆ. ‘ನಂಬದೇ ಇದ್ರೆ ನಿಂಗೇ ನಷ್ಟ. ಕತೆಗಾರ ಆದೋನು ಎಲ್ಲವನ್ನೂ ನಂಬಬೇಕು. ಈ ಜಗತ್ತಿನಲ್ಲಿ ಇರೋ ತರ್ಕಬದ್ಧವಾದ ಸಂಗತಿಗಳನ್ನಿಟ್ಟು ಕೊಂಡು ಕತೆ ಬರೆಯೋಕ್ಕಾಗಲ್ಲ. ಎಷ್ಟೂಂತ ಬರೀತೀಯ ಹೇಳು. ಅವೇ ಸಂಬಂಧ, ಘರ್ಷಣೆ, ಶೋಷಣೆ, ಅಸಹಾಯಕತೆ, ಅನ್ಯಾಯ, ಅತ್ಯಾಚಾರ, ಲಂಚಕೋರತನ, ಭ್ರಷ್ಟಾಚಾರ, ಭಾವನೆಗಳ ತಾಕಲಾಟ- ಇಂಥದ್ದೇ ಅಲ್ಲವೇ ನಿನ್ನ ಕತೆಗೆ ವಸ್ತು ಆಗೋದು. ಇದನ್ನೇ ನೀವು ಬೇರೆ ಬೇರೆ ಥರ ಹೇಳ್ತಾ ಇರ್ತೀರಿ. ಕೆಲವರು ಬೆಚ್ಚಿಬೀಳಿಸೋ ಥರ, ಕೆಲವರು ತಣ್ಣಗೆ ಹೇಳಬಹುದು. ಆದ್ರೆ ಹೇಳೋದು ಇವನ್ನೇ ಅಲ್ಲವೇ?’
ನನಗೆ ಅವರೇನು ಹೇಳುತ್ತಿದ್ದಾರೆ ಅನ್ನುವುದೇ ಅರ್ಥವಾಗಲಿಲ್ಲ. ಅವರ ಮುಖವನ್ನೇ ನೋಡುತ್ತಿದ್ದೆ.

‘ಅಲೌಕಿಕವಾದದ್ದನ್ನು ನಂಬಬೇಕು. ಪೂರ್ತಿಯಾಗಿ ನಂಬಬೇಕು. ಯಾರೋ ಒಬ್ಬ ಬಂದು, ನಾನು ಗಾಳೀಲಿ ನಡ್ಕೊಂಡು ಹೋದೆ ಅಂತ ಹೇಳಿದ್ರೆ, ಅದನ್ನೂ ನಂಬಬೇಕು. ಗಾಳೀಲಿ ನಡ್ಕೊಂಡು ಹೋಗೋವಾಗ ಅವನ ಕಣ್ಣಿಗೆ ಏನೇನು ಕಾಣಿಸಿತು ಅಂತ ಅವನು ಹೇಳ್ತಾನೆ. ಅವನಿಗೆ ಏನೇನು ಅನುಭವ ಆಯ್ತು ಅಂತ ಅವನು ಹೇಳ್ತಾನೆ. ಅವೆಲ್ಲವನ್ನೂ ನಾವು ಹೇಳೋಕ್ಕಾಗಲ್ಲ. ಅವನಿಗಷ್ಟೇ ಆಗಿರೋ ಅನುಭವಗಳು ಅವು. ಆ ಅನುಭವ ನಮಗೆ ಮುಖ್ಯ. ಅವನು ಗಾಳೀಲಿ ಹಾರಿದ್ನೋ ಇಲ್ವೋ ಅನ್ನೋದಲ್ಲ.’

ನನಗೆ ಒಂಚೂರು ಅರ್ಥವಾದಂತಾಯಿತು. ಅವರು ಮಾತು ಮುಂದು ವರಿಸಿದರು;‘ನನಗೆ ಅಂಬರೀಷ ವರ್ಮ ಗ್ರೇಟ್. ಈ ಜಗತ್ತಿನಲ್ಲಿ ಮತ್ಯಾರೂ ಗ್ರೇಟ್ ಅಲ್ಲ. ಯಾಕೆಂದರೆ ಅಂಬರೀಷ ವರ್ಮ ಸಪ್ತರ್ಷಿ ಮಂಡಲಕ್ಕೆ ಹೋಗಿ ಬಂದಿದ್ದಾನೆ. ಅದು ಸತ್ಯ ಅನ್ನೋದು ನನಗೆ ಮತ್ತು ಅವನಿಗೆ ಮಾತ್ರ ಗೊತ್ತು. ನಿಂಗೊತ್ತಿಲ್ಲ. ನಿನಗೆ ಆ ಬೆರಗು, ವಂಡರ್ ತಟ್ಟಲೇ ಇಲ್ಲ. ಅಷ್ಟರ ಮಟ್ಟಿಗೆ ನೀನು ಬಡವ. ಈ ಲೋಕದ ಕತೆಗಳನ್ನು ನಾನು ದಿನಾ ಓದ್ತೀನಿ. ಅಲೌಕಿಕವಾದ ಕತೆಗಳನ್ನು ಹೇಳೋರು ಬೇಕು. ಯು. ಜಿ. ಕೃಷ್ಣಮೂರ್ತಿಗೆ ಸತ್ತು ಹೋಗ್ತೀನಿ ಅನ್ನಿಸುತ್ತೆ. ತನ್ನ ಒಳಗೆ ಏನೋ ಆಗ್ತಿದೆ ಅನ್ನಿಸುತ್ತೆ. ಹಿಂಸೆ ಆಗುತ್ತೆ. ನನ್ನ ಕೊಂದುಬಿಡಿ ಅಂತಾರೆ. ನೋವಿನಿಂದ ಒದ್ದಾಡ್ತಾರೆ. ಮೈಯೆಲ್ಲ ಕೆಂಡದ ಹಾಗೆ ಸುಡ್ತಾ ಇರುತ್ತೆ. ಹೀಗೆ ಏಳು ದಿನ ಒದ್ದಾಡಿದ ನಂತರ ಇದ್ದಕ್ಕಿದ್ದಂತೆ ಶಾಂತಿ. ಅವರೊಳಗೆ ಒಂದು ಮಹಾಸ್ಫೋಟ ಸಂಭವಿಸಿರುತ್ತೆ. ಆ ಸ್ಫೋಟದ ನಂತರ ಬರೀ ಬೆಳಕು. ಶಾಂತಿ. ಈಗ ಅವರು ಏನು ಹೇಳಿದರೂ ಏನು ಮಾತಾಡಿದರೂ ಅದಕ್ಕೆ ಅರ್ಥವಿಲ್ಲ. ಅದಕ್ಕೆ ಉದ್ದೇಶ ಇಲ್ಲ. ಅದರ ಹಿಂದೆ ಸ್ವಾರ್ಥ ಇಲ್ಲ. ಅವರು ನಮ್ಮ ಮುಂದೆ ಇದಾರೆ ಅಷ್ಟೇ. ನಮ್ಮ ಥರ ಅಲ್ಲ. ಬೀಯಿಂಗ್ ಅನ್ನೋದೇ ಇಲ್ಲ. ಹಿ ಈಸ್ ದೇರ್… ಅಷ್ಟೇ.. ಕುರ್ಚಿ ಥರ. ನೀವು ಮಾತಾಡಿಸದೇ ಇದ್ರೆ ಮಾತಾಡಲ್ಲ. ಮಾತಾಡಿಸಿದ್ರೆ ಮಾತಾಡ್ತಾರೆ. ಅವರೊಳಗೆ ಆದ ಬದಲಾವಣೇನ, ಸ್ಫೋಟಾನ ನೀನು ಒಪ್ಪಿಕೊಳ್ಳದೇ ಹೋದ್ರೆ ನಿಂಗೇನು ಸಿಗೋದಕ್ಕೆ ಸಾಧ್ಯ? ಒಂದು ಹೊಸ ಅನುಭವವನ್ನ ನೀನು ನಿರಾಕರಿಸೋದೇ ಆದರೆ ನೀನು ಯಾಕೆ ಕತೆಗಾರ ಆಗಬೇಕು?’

ನಾನು ಸುಮ್ಮನೆ ಕೂತಿದ್ದೆ. ಅವರು ನನ್ನನ್ನೇ ದಿಟ್ಟಿಸಿ ನೋಡಿ, ಸಣ್ಣಗೆ ನಗುತ್ತಾ ಹೇಳಿದರು:
‘ದಿನಾ ಒಂದೇ ದಾರೀಲಿ ನಡೀಬಾರದು. ಆ ದಾರಿಗೂ ನಮ್ಮ ಮೇಲೆ ಆಸಕ್ತಿ ಇರೋದಿಲ್ಲ. ನಮಗೂ ಆ ದಾರಿಯ ಬಗ್ಗೆ ಕುತೂಹಲ ಇರೋದಿಲ್ಲ. ಯಾವುದು ಯಾಂತ್ರಿಕ ಆಗುತ್ತೋ ಅದು ನಮ್ಮ ಪ್ರಜ್ಞೆಯಲ್ಲಿ ಇರೋದಿಲ್ಲ. ಯಾವುದು ಅಪ್ರಜ್ಞಾಪೂರ್ವಕ ಆಗುತ್ತೋ ಅದು ನಮಗೆ ಗೊತ್ತೇ ಆಗೋದಿಲ್ಲ. ಉಸಿರಾಟ ನಮಗೆ ತಿಳಿಯದೇ ಆಗ್ತಿರುತ್ತೆ. ಅದು ತೀಳೀಬೇಕು ಅಂದ್ರೆ ಪ್ರಾಣಾಯಾಮ ಮಾಡಬೇಕು. ನಮಗೆ ಗೊತ್ತಿಲ್ಲದ ಹಾಗೇ ನಡೀತೀರ್ತೀವಿ. ಅದು ಗೊತ್ತಾಗಬೇಕು ಅಂದ್ರೆ ವಾಕಿಂಗ್ ಮಾಡಬೇಕು. ತಿಂದದ್ದು ಗೊತ್ತಾಗಬೇಕು ಅಂದ್ರೆ ಬೇರೆ ರುಚಿ ನಾಲಗೆಗೆ ತಟ್ಟಬೇಕು. ಅದಕ್ಕೆ ಪ್ರಾಪ್ತಿ ಬೇಕು. ಒಂದೇ ಒಂದು ದಿನ ಯಾವತ್ತೂ ಹೋಗೋ ದಾರಿ ತಪ್ಪಿಸಿ ಬೇರೆ ದಾರೀಲಿ ಹೋಗಿಬಿಡು. ಅಲ್ಲಿ ನಿನಗೆ ಯಾವತ್ತೂ ಸಿಗದೇ ಇರೋರು ಯಾರೋ ಸಿಗ್ತಾರೆ. ದಿನಾ ನೋಡದೇ ಇರೋ ಮತ್ತೇನನ್ನೋ ನೋಡ್ತೀಯ. ದಿನ ಆಗದೇ ಇರೋದು ಏನೋ ಆಗುತ್ತೆ. ಹಾಗೆ ಹೊಸ ಹೊಸದು ಆಗ್ತಾ ಇದ್ದಾಗಲೇ, ನಮಗೆ ಗೊತ್ತೇ ಇಲ್ಲದ್ದು ನಡೀತಾ ಇದ್ರೇನೇ ಅದು ಜೀವನ. ಇವತ್ತು ಮಾಡಿದ್ದನ್ನೇ ನಾಳೆಯೂ ಮಾಡೋದಾದರೆ, ಇವತ್ತೇ ಸತ್ತು ಬಿಡೋದು ಒಳ್ಳೇದು. ನಾಳೆ ಯಾಕೆ ಬೇಕು ನಮಗೆ, ಮಾಡಿದ್ದನ್ನೇ ಮಾಡೋದಕ್ಕೆ.’

ಒಂದು ಮುಸ್ಸಂಜೆ ನಾನು ಇಷ್ಟೂ ಮಾತುಗಳನ್ನು ಕೇಳಿಸಿಕೊಂಡದ್ದು ಬಸವನಗುಡಿಯ ಗುಟ್ಟಹಳ್ಳಿಯಲ್ಲಿರುವ ಒಂದು ಪುಟ್ಟ ಮನೆಯಲ್ಲಿ. ಮನೆಯ ಮುಂದೆ ಟೆಕೊಮಾ ಅರ್ಜೆಂಟಾ ಹಳದಿ ಹೂವುಗಳನ್ನು ಮೈ ತುಂಬ ಹೊತ್ತುಕೊಂಡು ನಿಂತಿತ್ತು. ಬೆಳಗಿನ ಹೊತ್ತು ಬಿಸಿಲು ಕಿಟಕಿಯಿಂದ ಒಳಗೆ ಬಿದ್ದು ಇಡೀ ಮನೆಯನ್ನು ಬೆಳಗುತ್ತಿತ್ತು.
ನನ್ನ ಮುಂದೆ ಕೂತು ಮಾತಾಡುತ್ತಿದ್ದವರು ವೈಎನ್ಕೆ. ವೈ ಎನ್ ಕೃಷ್ಣಮೂರ್ತಿ. ನಮ್ಮಿಬ್ಬರ ಮುಂದೆ ಶ್ರೀಪತಿ ಮಾಡಿಕೊಟ್ಟ ಬಿಸಿಬಿಸಿ ಕಾಫಿಯಿತ್ತು. ಮಾತು ಮುಗಿಯುವ ಹೊತ್ತಿಗೆ ಕಾಫಿಯೂ ಮುಗಿದಿತ್ತು.

ನೀನು ನೆರುಡಾನ ಓದಿದ್ದೀಯ ಅಂತ ವೈಎನ್ಕೆ ಕೇಳಿದರು. ಇಲ್ಲ ಅಂದೆ. ನೆರುಡಾ ಕಾವ್ಯ ಜಗತ್ತಿನ ಗರುಡ ಅಂದರು. ಅವರ ಅಸಂಖ್ಯ ಪುಸ್ತಕಗಳ ಸಂಗ್ರಹದಿಂದ ಪೊಯೆಟ್ರಿ ಆಫ್ ಪಾಬ್ಲೋ ನೆರುಡಾ ಪುಸ್ತಕವನ್ನು ಹುಡುಕಿ ತೆಗೆದು ಕೈಗಿಟ್ಟು, ನೀನು ಹುಟ್ಟಿದ್ದೇ ಇದನ್ನು ಓದುವುದಕ್ಕೋಸ್ಕರ ಅಂದುಕೊಂಡು ಓದು ಎಂದರು. ನಾನು ಪುಟ ತಿರುಗಿಸಿದೆ. ಮೊದಲ ಪುಟದಲ್ಲೇ ಈ ಸಾಲಿತ್ತು;

I want To do with you what spring does with the cherry trees.
ಆವತ್ತಿಗೆ ನಾನು ಬೆಂಗಳೂರಿಗೆ ಕಾಲಿಟ್ಟು ಮುನ್ನೂರು ದಿನಗಳಾಗಿದ್ದವು. ವಸಂತ ಚೆರಿ ಮರಗಳನ್ನು ಅರಳಿಸಿದಂತೆ ವೈಎನ್ಕೆ ನನ್ನ ಬೆರಗನ್ನು ಅರಳಿಸಿದ್ದರು. ಅವರ ಮನೆಯ ಮುಂದೆ ಈಗಲೂ ಟೆಕೋಮಾ ಅರ್ಜೆಂಟಾ ಮೇ ತಿಂಗಳಲ್ಲಿ ಒಂದು ವಾರ ತುಂಬ ಹಳದಿ ಹೂ ಮುಡಿದುಕೊಂಡು ನಿಂತಿರುತ್ತದೆ. ಹೂ ಬಿಡುವ ಮೊದಲು ಎಲೆಗಳನ್ನೆಲ್ಲ ಉದುರಿಸಿಕೊಳ್ಳುತ್ತದೆ. ಮೇ ತಿಂಗಳಲ್ಲಿ ನಾನು ಈಗಲೂ ಬೇಕಂತಲೇ ಅವರ ಮನೆಯ ಮುಂದೆ ಹೋಗುತ್ತಾ ಅರಳುವ ಹೂವಿಗಾಗಿ ಕಾಯುತ್ತಿರುತ್ತೇನೆ.

‍ಲೇಖಕರು Admin

September 15, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: