ಸಿ ಎಸ್ ಭೀಮರಾಯ ಕಂಡಂತೆ ‘ಓದಿರಿ’

ಸಿ ಎಸ್ ಭೀಮರಾಯ

ಬೊಳುವಾರು ಮಹಮದ್ ಕುಂಞೆ ಕನ್ನಡ ಸಾಹಿತ್ಯದ ಮಹತ್ವದ ಲೇಖಕ. ಅವರು ಕಳೆದ ನಾಲ್ಕು ದಶಕಗಳಿಂದ ಮುತ್ತುಪ್ಪಾಡಿ ಮುಸ್ಲಿಮರ ಬದುಕನ್ನು ಸಾಹಿತ್ಯದ ಪ್ರಕಾರಗಳಾದ ಕಥೆ, ಕಾವ್ಯ, ನಾಟಕ ಮತ್ತು ಕಾದಂಬರಿಗಳ ಮೂಲಕ ಕನ್ನಡ ಸಾಹಿತ್ಯದ ಓದುಗರಿಗೆ ಪರಿಚಯ ಮಾಡಿಕೊಡುತ್ತ ಬಂದಿರುವ ಸೂಕ್ಷ್ಮ ಸಂವೇದನಾಶೀಲ ಲೇಖಕ.

ಪ್ರಸ್ತುತ ‘ಓದಿರಿ’ ಕಾದಂಬರಿಯು ಬೊಳುವಾರು ಅವರ ವಿಶಿಷ್ಟ ಕಾದಂಬರಿ. ಪ್ರವಾದಿ ಮುಹಮ್ಮದರ ಜೀವನ ದರ್ಶನವನ್ನು ಪರಿಚಯಿಸುವ ಈ ಐತಿಹಾಸಿಕ ಕಾದಂಬರಿ ವಿಪುಲ ಮಾಹಿತಿಗಳ ಕಣಜವಾಗಿದೆ. ಬೊಳುವಾರರು ಈ ಕಾದಂಬರಿಯನ್ನು ಒಟ್ಟು ಮೂರು ಭಾಗಗಳಲ್ಲಿ ಪ್ರವಾದಿ ಮುಹಮ್ಮದರ ಜನನ, ಬಾಲ್ಯ, ಮದುವೆ, ಸತ್ಯದ ಹುಡುಕಾಟ, ಏಕಾಂಗಿಯಾಗಿ ನಡೆಸಿದ ತಿರುಗಾಟ, ಬದುಕಿನ ಗುರಿಯನ್ನು ನಿರ್ಧರಿಸಿ ನಿರ್ಮಿಸಿದ ಮಸೀದಿ, ಆರ್ಥಿಕ ಸ್ವಾತಂತ್ರ್ಯಕ್ಕಾಗಿ ಆರಂಭಿಸಿದ ಸಂಸ್ಥೆಗಳು, ಸಮಾಜ ಸುಧಾರಣೆಗೆ ರೂಪಿಸಿದ ಕಾರ್ಯಕ್ರಮಗಳು, ಹಜ್ ಯಾತ್ರೆ, ಯದ್ಧಗಳ ನೋವು, ಸಂಘಟನೆಯ ಮಹತ್ವವನ್ನು ಮುಸ್ಲಿಮ್ ವರ್ಗದಲ್ಲಿ ಮೂಡಿಸಿದ ವಿಧಾಯಕ ಕ್ರಮಗಳು, ಮಸೀದಿ ನಿರ್ಮಾಣ ಮುಂತಾದ ಮಾಹಿತಿಗಳನ್ನು ಹೆಚ್ಚಿನ ಶ್ರಮದಿಂದ ಕಲೆಹಾಕಿದ್ದಾರೆ. ಬೊಳುವಾರರ ‘ಓದಿರಿ’ ಕಾದಂಬರಿ ಪ್ರವಾದಿ ಮುಹಮ್ಮದರ ಬದುಕಿನ ವಿಸ್ಮಯಗಳ ಕಗ್ಗಂಟನ್ನು ಎಳೆ ಎಳೆಯಾಗಿ ಬಿಡಿಸುತ್ತಾ ಹೋಗುತ್ತದೆ. ಅತ್ಯಂತ ಕ್ಲಿಷ್ಟಕರ ಧಾರ್ಮಿಕ ಹಾಗೂ ವೈಚಾರಿಕ ವಿಷಯಗಳನ್ನು ಬದುಕಿಗೆ ಹತ್ತಿರವಾಗುವಂತೆ ಹಾಗೂ ಓದು ಅರಿತ ಪ್ರತಿಯೊಬ್ಬರೂ ಅರ್ಥಮಾಡಿಕೊಳ್ಳುವಂತೆ ಸರಳಗೊಳಿಸಿ ಬರೆಯುವುದು ಲೇಖಕರ ವಿಶೇಷವಾಗಿದೆ. ಬೊಳುವಾರರು ಇಸ್ಲಾಂ ಧರ್ಮವನ್ನು ಅನುಭವಿಸಿ ಪ್ರವಾದಿ ಮುಹಮ್ಮದರ ಜೀವನಾಧಾರಿತ ಕುರಿತು ಬರೆದ ಪ್ರಪ್ರಥಮ ಐತಿಹಾಸಿಕ ಕಾದಂಬರಿ ‘ಓದಿರಿ’. ಈ ಕಾದಂಬರಿ ಇಸ್ಲಾಂ ಧಾರ್ಮಿಕ ವ್ಯವಸ್ಥೆಯ ತೀಕ್ಷಣ ವಿಶ್ಲೇಷಣೆ ಮಾಡುತ್ತದೆ.

ಈ ಕಾದಂಬರಿಯ ಭೌಗೋಳಿಕ ಜಗತ್ತು ಸಿರಿಯಾ, ಮಕ್ಕಾ, ಮದೀನಾ, ಯಸ್ರಿಬ್, ಬುಸ್ರಾ ಮುಂತಾದ ಪ್ರದೇಶಗಳತ್ತ ಹರವು ಪಡೆದಿದೆ. ಅಲ್ಲಿನ ಕ್ರೌರ್ಯ, ಹಿಂಸೆ, ಸುಲಿಗೆ, ದರೋಡೆ, ಕೊಲೆ, ಅನ್ಯಾಯ, ಅತ್ಯಾಚಾರ, ಕುಡಿತ, ಮೋಜು- ಇತ್ಯಾದಿ ಘಟನೆಗಳು ಕಾದಂಬರಿಗೆ ರೋಚಕತೆಯನ್ನು ಒದಗಿಸಿವೆ.

ನಾವು ಈ ಪ್ರಪಂಚದಲ್ಲಿ ಕಾಣುವ ಪ್ರತಿಯೊಂದು ವಸ್ತು, ವಿಷಯ ಮತ್ತು ವಿಚಾರಗಳು ಆರಂಭವಾಗುವುದು ಮತ್ತು ಮುಕ್ತಾಯವಾಗುವುದು ಶೂನ್ಯದ ವಿಶ್ರಾಂತಿಯಲ್ಲಿಯೆಂಬುವುದನ್ನು ಸರಿಯಾಗಿ ಅರ್ಥೈಸಿಕೊಳ್ಳಬೇಕಾದದ್ದು ಅವಶ್ಯಕ. ಆ ಶೂನ್ಯವನ್ನು ಅರಿಯುವ ಕುತೂಹಲ ಬದುಕಿನಲ್ಲಿ ಅದ್ಭುತವನ್ನುಂಟು ಮಾಡುತ್ತದೆ. ನಾವು ಜೀವನದಲ್ಲಿ ಸುಖ, ಸಂತೋಷ, ನೆಮ್ಮದಿ, ಪ್ರೀತಿ, ಪ್ರೇಮ, ಸ್ನೇಹ, ನಂಬಿಕೆ, ವಿಶ್ವಾಸ, ಸಂಪತ್ತು, ಆರೋಗ್ಯ-ಇತ್ಯಾದಿಗಳೆಲ್ಲವನ್ನು ಪಡೆಯಬೇಕಾದರೆ ಅಗತ್ಯವಾಗಿ ನಾವು ಇನ್ನೇನಾದರೂ ಕಳೆದುಕೊಳ್ಳಬೇಕಾತ್ತದೆ. ಇದು ಪ್ರಕೃತಿಯ ನಿಯಮ. ಆದರೆ, ಸಂತೃಪ್ತಿ (Pleasure) ಎಂಬ ಒಂದು ಸ್ಥಿತಿ ಮಾತ್ರ ಏನನ್ನೂ ಕಳೆದುಕೊಳ್ಳದೆಯೂ ನಮ್ಮನ್ನು ಆವರಿಸುತ್ತದೆ. ಬದುಕಿನ ಸಂತಸಕ್ಕೆ ಸಂಪತ್ತು ಇರಬೇಕೆಂದೂ ಅಲ್ಲ, ಇರಬಾರದೆಂದೂ ಅಲ್ಲ. ಆದರೆ, ಬದುಕಿನಲ್ಲಿ ಸಂತೃಪ್ತಿ ಮಾತ್ರ ಅವಶ್ಯಕವಾಗಿ ಇರಲೇಬೇಕು. ಅದರಿಂದಲೇ ಬದುಕು ಆನಂದಮಯ. ಅದಕ್ಕಾಗಿ ನಾವು ಮಾಡಬೇಕಾದುದಿಷ್ಟೇ – ಈ ಜಗತ್ತನ್ನು ಸಮಗ್ರವಾಗಿ ಕಲ್ಪಿಸಿಕೊಳ್ಳಬೇಕು, ಅರಿಯಬೇಕು. ಮಗುವಿನಂತಹ ಮುಗ್ಧ ಮನಸ್ಸನ್ನು ಹೊಂದಬೇಕು. ಹಾಗೇನಾದರೂ ಯೋಚಿಸುವವರಿಗೆ ಈ ಕಾದಂಬರಿ ಖುಷಿಕೊಡಬಹುದು.

ಈ ಜಗತ್ತಿನಲ್ಲಿ ಒಂದೊಂದು ಹೂವು ಒಂದೊಂದು ರೀತಿಯ ಬಣ್ಣದಲ್ಲಿರುವುದು ವಾಸ್ತವದಲ್ಲಿ ಸತ್ಯವೆಂದೇ ತೋರಿದರೂ, ಆ ಎಲ್ಲಾ ಹೂವುಗಳಿಗೂ ಬಣ್ಣ ಮಾಡಿರುವುದು ಬಣ್ಣ ರಹಿತವಾಗಿ ಕಂಡುಬರುವ ಬೆಳಕಿನ ಕಿರಣಗಳಿಂದವೆಂಬುದು ಗಮನಿಸಬೇಕಾದ ಸತ್ಯ. ಬೆಳಕಿನ ಕಿರಣಗಳನ್ನು ಹೀರಿಕೊಳ್ಳುವ, ಪ್ರತಿಫಲಿಸುವ ಗುಣದಲ್ಲಿ ಹೂವಿನಿಂದ ಹೂವಿಗೆ ಪ್ರತ್ಯೇಕತೆ ಇರುವುದು ಸಹಜ. ಆ ಒಂದು ಗುಣದಿಂದಾಗಿಯೇ ಒಂದೊಂದು ಹೂವು ಒಂದೊಂದು ಬಣ್ಣದಿಂದ ನಮಗೆ ಗೋಚರಿಸುತ್ತದೆ. ಪರಿಪೂರ್ಣ ಬೆಳಕಿನಲ್ಲಿ ಎಲ್ಲಾ ಬಣ್ಣಗಳ ಕಿರಣಗಳು ಅಡಗಿದ್ದರೂ, ಅದು ನಮಗೆ ಬಣ್ಣ ರಹಿತವಾಗಿ ಕಂಡುಬರುತ್ತದೆ. ಅದೇ ರೀತಿ ಪರಿಪೂರ್ಣ ‘ವಿಶ್ವ ಪ್ರಜ್ಞೆಯು’ ರಾಗ ದ್ವೇಷರಹಿತವಾಗಿದ್ದರೂ ಮನಸ್ಸಿನ ವಿಭಿನ್ನ ಅಭಿವ್ಯಕ್ತಿ ಸಾಮರ್ಥ್ಯದಿಂದಾಗಿ ಅದೇ ವಿಶ್ವ ಪ್ರಜ್ಞೆ ,ವೈಚಾರಿಕತೆ, ಅಸ್ತಿತ್ವವಾದ, ಆಸ್ತಿಕವಾದ, ನಾಸ್ತಿಕವಾದ …- ಹೀಗೆ ಹಲವು ರೂಪದಲ್ಲಿ ಅಭಿವ್ಯಕ್ತಗೊಂಡು ನಾನೇ ಬೇರೆ ನನ್ನ ವಿಚಾರವೇ ಬೇರೆ ಎಂಬ ನಿಲುವಿಗೆ ಕಾರಣವಾಗುತ್ತದೆ. ವಿವಿಧತೆ ಎಂಬುವುದು ಪ್ರಕೃತಿ ಈ ಜಗತ್ತನ್ನು ಮುನ್ನಡೆಸುವ ಸೂತ್ರ. ಅದನ್ನೇ ‘ಮಾಯೆ’ ಎಂದು ಕರೆಯುವುದು. ಆ ಮಾಯೆಯ ಅರಿವಾದರೆ ಆಸ್ತಿಕನಿಗೆ ನಾಸ್ತಿಕ ಪ್ರತ್ಯೇಕವೆಂದು ಅನಿಸುವುದಿಲ್ಲ.

ಬೆಳಕಿನಲ್ಲಿರುವವನಿಗೆ ಕತ್ತಲೆಯನ್ನು ಒಪ್ಪಿಕೊಳ್ಳುವುದು ಸಾಧ್ಯವಾದರೆ ಬದುಕು ಸಂಭ್ರಮವಾಗುತ್ತದೆ. ಅದೇ ಬ್ರಹ್ಮಜ್ಞಾನ ಮತ್ತು ದಿವ್ಯ ದರ್ಶನ. ವಿಜ್ಞಾನ- ಅಧ್ಯಾತ್ಮ , ಆಸ್ತಿಕವಾದ- ನಾಸ್ತಿಕವಾದ ಇವು ಎರಡು ವಿಭಿನ್ನ ಧ್ರುವಗಳು ಎಂದೇ ಜನಸಾಮಾನ್ಯರ ಅಭಿಪ್ರಾಯವಾಗಿದ್ದರೂ, ಅವೆರಡು ಸ್ಥಿತಿಗಳನ್ನು ಸಮರ್ಪಕವಾಗಿ ಅರ್ಥಮಾಡಿಕೊಂಡಾಗ ಅವೆರಡನ್ನೂ ಸಮೀಕರಿಸುವ ಇನ್ನೊಂದು ಸ್ಥಿತಿಯ ಪರಿಚಯವಾಗುತ್ತದೆ; ಅದೇ ಪ್ರಕೃತಿ ತತ್ವ. ಜಗತ್ತು ಮತ್ತು ಬದುಕಿನ ಎಲ್ಲಾ ಆಗುಹೋಗುಗಳ ಹಿಂದಿನ ಪ್ರೇರಕ ಶಕ್ತಿ ಅದು ಸತ್ಯವೂ, ಸುಂದರವೂ ಆಗಿದ್ದು, ಅಲ್ಲಾಹು (ದೇವರು) ಅದೇ ಆಗಿದೆ. ಅದನ್ನು ಚೆನ್ನಾಗಿ ಅರಿತುಕೊಳ್ಳುವುದರಿಂದ ಬದುಕು ಗೊಂದಲರಹಿತ ಹಾಗೂ ಅರ್ಥಪೂರ್ಣವಾಗುತ್ತದೆ. ಅಂತಹ ಆಶಯವನ್ನು ಹೊಂದಿದವರಿಗೆ ಈ ಕಾದಂಬರಿ ಉತ್ತಮ ಮಾರ್ಗದರ್ಶನವನ್ನು ನೀಡುತ್ತದೆ. ಖುರಾನ್‌ನಲ್ಲಿರುವ ದೈವಾಜ್ಞೆಯಂತೆ ಅತ್ಯಂತ ಕಟ್ಟುನಿಟ್ಟಾಗಿ ಬದುಕಬೇಕು, ದೇವರಿಗೂ-ಭಕ್ತನಿಗೂ ನಡುವೆ ಯಾರ ಪ್ರವೇಶವೂ ಸಲ್ಲದು. ಸರಳವಾದ, ಅತ್ಯಂತ ಸಂಯಮದ ಬದುಕನ್ನು ನಡೆಸಬೇಕೆಂಬುದು ಈ ಕಾದಂಬರಿಯ ಆಶಯ.

ಸಾಹಿತ್ಯವನ್ನು ಧರ್ಮ, ಜಾತಿ , ಮತ, ಪ್ರಾದೇಶಿಕತೆ ಮುಂತಾದ ಸಂಕುಚಿತ ದೃಷ್ಟಿಕೋನಗಳಿಂದ ನೋಡುವುದು ಸರಿಯಲ್ಲ. ಧರ್ಮದ ಐಕ್ಯತೆಯ ವಿಚಾರದಲ್ಲಿ ಪ್ರವಾದಿ ಮುಹಮ್ಮದರು ನೀಡಿದ ಸಂದೇಶವೇನು ಎಂಬುದರ ಬಗ್ಗೆ ನಮ್ಮಲ್ಲಿ ಅನೇಕ ತಪ್ಪು ಭಾವನೆಗಳಿವೆ, ಇನ್ನೂ ಉಳಿದುಕೊಂಡಿವೆ. ಜಾತಿ ,ಮತ, ಪಂಥ, ಧರ್ಮ ಮತ್ತು ಪ್ರಾದೇಶಿಕತೆಯ ವಿಚಾರವಾಗಿ ಅನೇಕ ಘರ್ಷಣೆಗಳು ತಲೆ ಎತ್ತುತ್ತಿರುವ ನಮ್ಮ ದೇಶದ ಇತಿಹಾಸದ ಈ ಸಂದಿಗ್ಧಕಾಲದಲ್ಲಿ ಅವರ ಸಂದೇಶವು ವಿಶೇಷವಾಗಿ ಪ್ರಸ್ತುತವಾಗಿದೆ.ಜಗತ್ತಿನ ಕೆಲವು ಧರ್ಮಗಳು ಪಾಪ-ಪುಣ್ಯ, ಸ್ವರ್ಗ- ನರಕಗಳ ಕುರಿತು ಜನಸಾಮಾನ್ಯರಿಗೆ ಹೇಳುತ್ತಾ ಆಕಾಶ ತತ್ವವನ್ನು ತೋರಿಸುವುದರೊಂದಿಗೆ ಧಾರ್ಮಿಕ ಬಿಕ್ಕಟ್ಟಿನಲ್ಲಿವೆ. ಇಂದು ಕೆಲವು ಧರ್ಮಗಳು ತಮ್ಮ ಅಸ್ತಿತ್ವಕ್ಕಾಗಿ ಮೌಢ್ಯ ಬಿತ್ತುತ್ತಿವೆ. ಧಾರ್ಮಿಕತೆ ಮತ್ತು ವೈಚಾರಿಕತೆಗಳೆಂದೂ ಒಟ್ಟಿಗೆ ಹೋಗಲು ಸಾಧ್ಯವಿಲ್ಲ. ಧಾರ್ಮಿಕತೆ ಬಲಿಷ್ಟವಾದಷ್ಟು ವೈಚಾರಿಕತೆ ಸೊರಗುತ್ತದೆ; ಸಮಾಜದಲ್ಲಿ ಬಿಕ್ಕಟ್ಟುಗಳು ಹುಟ್ಟಿಕೊಳ್ಳುತ್ತವೆ, ಸಾಮರಸ್ಯದ ಬದುಕಿಗೆ ದಕ್ಕೆ ಬರುತ್ತದೆ. ಇಂದಿನ ವರ್ತಮಾನವೂ ಸಹ ಇದಕ್ಕೆ ಹೊರತಾಗಿಲ್ಲ.

ಏಳನೆಯ ಶತಮಾನದ ಅರೇಬಿಯದ ಐತಿಹಾಸಿಕ ವ್ಯಕ್ತಿಯಾದ ಪ್ರವಾದಿ ಮುಹಮ್ಮದರ ಬದುಕು, ಅಲ್ಲಿಯ ನೆಲ, ಜಲ, ಪರಿಸರ, ಯುದ್ಧ, ಮನೆ, ಆಹಾರ ಕ್ರಮ, ವಿವಾಹ, ಕುಟುಂಬ ಪದ್ಧತಿ, ಹಬ್ಬ, ಉತ್ಸವ, ಪೂಜಾವಿಧಾನ, ಸಂಪ್ರದಾಯ, ಸಂಸ್ಕೃತಿ, ಆಡಳಿತ, ವ್ಯಾಪಾರ, ಗಂಡು- ಹೆಣ್ಣುಗಳ ನಡುವಿನ ಸಂಬಂಧ…- ಮುಂತಾದವುಗಳೆಲ್ಲ ‘ಓದಿರಿ’ ಕಾದಂಬರಿಯಲ್ಲಿ ನೈಜವಾಗಿ ಮೂಡಿಬಂದಿವೆ. ಒಂದು ಕಾಲಘಟ್ಟದ ವಿಶಿಷ್ಟ ಸನ್ನಿವೇಶ ಮತ್ತು ಪರಿಸ್ಥಿತಿಯಲ್ಲಿ ಮಹಾನ್ ವ್ಯಕ್ತಿಯ ಅಥವಾ ವ್ಯಕ್ತಿಗಳ ಮನಸ್ಸಿನ ಚಲನವಲನಗಳನ್ನು ಕಲಾತ್ಮಕವಾಗಿ ಹಿಡಿಯುವುದಷ್ಟೇ ಅಲ್ಲದೆ, ಅಲ್ಲಿ ಶೋಧಿತವಾಗುವ ಅನುಭವಗಳಿಗೆ ಸಾಂಸ್ಕೃತಿಕ ಪ್ರಾತಿನಿಧ್ಯವೂ ಉಂಟಾಗುವಂತೆ ಮಾಡಲಾಗಿದೆ. ಒಂದು ಧರ್ಮದ ಸಂಕೋಚಗಳು ಹಬ್ಬುವ ಮತ್ತು ಕಳಚುವ ಬಗೆಯನ್ನು ಒಂದು ವಿಶಿಷ್ಟ ವ್ಯಕ್ತಿ ಮತ್ತು ಧರ್ಮದ ಆವರಣದ ಸಂದರ್ಭದಲ್ಲಿ ಆತುರವಿಲ್ಲದೆ ಈ ಕಾದಂಬರಿಯಲ್ಲಿ ಶೋಧಿಸಲಾಗಿದೆ.

ಮುಹಮ್ಮದರು ವೈಯಕ್ತಿಕವಾಗಿ ಮಾಡಿದ ಸಾಧನೆ ಅವರನ್ನು ಪ್ರವಾದಿ ಶ್ರೇಷ್ಠರ ಸಾಲಿಗೆ ಸೇರಿಸಿದರೆ, ಸಾಮಾಜಿಕವಾಗಿ ಮಾಡಿದ ಸಾಧನೆ ಅವರನ್ನು ಸಮಾಜ ಸುಧಾರಕರನ್ನಾಗಿ ಮಾಡಿದೆ. ಈ ಮಹಾನ್ ಚೇತನದ ಬದುಕು ಹಾಗೂ ಸಾಧನೆಗೆ ಸಂಬಂಧಿಸಿದಂತೆ ಲೇಖಕರು ಹಲವಾರು ವರ್ಷಗಳ ಕ್ಷೇತ್ರ ಕಾರ್ಯದ ಪರಿಶ್ರಮದಿಂದ ಅಧಿಕ ಮಾಹಿತಿಗಳನ್ನು ಪಡೆದುಕೊಂಡು ಈ ಕಾದಂಬರಿಯನ್ನು ರಚಿಸಿದ್ದಾರೆ. ಲೇಖಕರು ತಾವು ಸಂಗ್ರಹಿಸಿದ ಈ ಮಾಹಿತಿಗಳನ್ನೆಲ್ಲ ಕಾದಂಬರಿಯಲ್ಲಿ ತರಲೇಬೇಕೆಂಬ ಉತ್ಸಾಹದಲ್ಲಿ ಇಲ್ಲಿನ ಎಷ್ಟೋ ವಿವರಗಳು ಮುಹಮ್ಮದರ ಜೀವನ ದರ್ಶನ ವ್ಯಾಪ್ತಿಯಿಂದ ಹೊರಗುಳಿಯುತ್ತವೆ. ಮಕ್ಕಾದ ಅಬ್ದುಲ್ಲಾ ಮತ್ತು ಆಮಿನಾ ದಂಪತಿಗೆ ಮಗನಾಗಿ ಜನಿಸಿದ ಮುಹಮ್ಮದರು, ತಮ್ಮ ಪ್ರಾಪಂಚಿಕ, ವರ್ತಕ, ಸೈನಿಕ, ಧಾರ್ಮಿಕ ಸಾಧನೆಗಳ ಹಾಗೂ ಮಾನವೀಯ ಕಾಳಜಿಯ ವಿಧಾಯಕ ಕಾರ್ಯಕ್ರಮಗಳಿಂದ ಪ್ರವಾದಿ ಮುಹಮ್ಮದ ಗುರುದೇವ ಎಂಬ ಅಭಿದಾನಕ್ಕೆ ಪಾತ್ರರಾಗುವವರೆಗಿನ ಸಾಧನೆಯ ಮಜಲುಗಳನ್ನು ಬೊಳುವಾರರು ಭಕ್ತಿ-ಗೌರವಗಳಿಂದ ಗುರುತಿಸಿದ್ದಾರೆ. ಇಲ್ಲೆಲ್ಲ ಲೇಖಕರ ಧಾರ್ಮಿಕ ಶ್ರದ್ಧೆ ಹಾಗೂ ಉತ್ಸಾಹ ಸ್ಪಷ್ಟವಾಗಿ ಕಾಣುತ್ತದೆ.

‘ಓದಿರಿ’ ಕಾದಂಬರಿಯಲ್ಲಿ ಪ್ರವಾದಿ ಮುಹಮ್ಮದರದೇ ಮುಖ್ಯ ಪಾತ್ರವೆಂದು ಹೇಳುವ ಅಗತ್ಯವಿಲ್ಲ. ಆ ಪಾತ್ರವೇ ಈ ಕಾದಂಬರಿಯ ಕೇಂದ್ರ ಬಿಂದು. ಅವರನ್ನು ಮುಖ್ಯವಾಗಿ ಸಹಜ ಮಾನವರಂತೆ ಚಿತ್ರಿಸಹೊರಟಿರುವ ಲೇಖಕರು ಸಾಕಷ್ಟು ಯಶಸ್ವಿಯಾಗಿದ್ದಾರೆ. ಆದರೆ ಅದೊಂದನ್ನೇ ಪ್ರತಿಪಾದಿಸುತ್ತ ಹೆಚ್ಚು ಒತ್ತು ಕೊಟ್ಟಿರುವಲ್ಲಿ ಒಂದಿಷ್ಟು ಕೃತಕತೆ ಕಂಡುಬರುತ್ತದೆ. ಈ ಕಾರಣಂದಲೇ ಅವರ ಸಮಗ್ರ ವ್ಯಕ್ತಿತ್ವ ವಿವರ ಕಂಡುಬರುವುದಿಲ್ಲ. ಅನಗತ್ಯವಾಗಿ ಅನಪೇಕ್ಷಿತ ವ್ಯಕ್ತಿಗಳ ಪರಿಚಯಗಳು ಹೊರೆ ಎನಿಸುತ್ತವೆ. ಪ್ರವಾದಿ ಮಹಮ್ಮದರಿಗೆ ಸಂಬಂಧಿಸಿದಂತೆಯೇ ಅಡಕವಾಗಿ ನಿರೂಪಣೆಯನ್ನು ಸೀಮಿತಗೊಳಿಸಿದ್ದರೆ ಬೊಳುವಾರರ ‘ಓದಿರಿ’ ಕಾದಂಬರಿ ಇನ್ನಷ್ಟು ಮಹತ್ವದ್ದಾಗುತಿತ್ತು.

ಏಳನೆ ಶತಮಾನದ ಮುಸ್ಲಿಮ್ ಸಮಾಜದ ಹಲವಾರು ಪ್ರಮುಖ ಆಚರಣೆಗಳನ್ನು ಈ ಕಾದಂಬರಿ ನಿಕಟವಾಗಿ, ವಿಶ್ವಸನೀಯ ವಿವರಗಳೊಡನೆ ವ್ಯಾಖ್ಯಾನಿಸುತ್ತದೆ. ಬೊಳುವಾರರು ಈ ಕಾದಂಬರಿಯಲ್ಲಿ ಸಮಕಾಲೀನ ವರ್ಗಭೇದಗಳನ್ನು, ಆಷಾಢಭೂತಿತನವನ್ನು, ತೋರಿಕೆಯ ನೀತಿ – ಗೌರವಗಳನ್ನು ಹರಿತವಾಗಿ ವಿಡಂಬನೆ ಮಾಡಬಹುದಾಗಿತ್ತು. ಆದರೆ ಹಲವು ಬಾರಿ ಸಾಂಪ್ರದಾಯಿಕ ದೃಷ್ಟಿಯನ್ನೇ ತಳೆದಿದ್ದಾರೆ.ಕೃತಿ ಕಟ್ಟಿಕೊಡುವ ಚಿತ್ರದಲ್ಲಿ ವಿಡಂಬನೆಯಿಲ್ಲ, ವಿಷಾದವಿದೆ; ಮುಹಮ್ಮದರ ಆದರ್ಶಗಳನ್ನು ಮರೆತಿರುವ ಸಮಾಜದ ಬಗ್ಗೆ ಕೋಪವಿಲ್ಲ, ದುಃಖವಿದೆ. ಚರಿತ್ರೆಯ ಆಳವಾದ ಅಧ್ಯಯನ, ಗಂಭೀರ ಧಾರ್ಮಿಕತೆ, ಅದ್ಭುತ ಕಲ್ಪನಾಶಕ್ತಿ ಹಾಗೂ ಸಂಯಮಪೂರ್ಣ ಭಾವುಕತೆಗಳೆಲ್ಲವನ್ನು ಮೇಳೈಸಿಕೊಂಡಿರುವ ಈ ಪ್ರಮುಖ ಕಾದಂಬರಿಯು ಕೆಲವು ಮಿತಿಗಳನ್ನು ಹೊಂದಿದೆ. ಈ ಕಾದಂಬರಿಯಲ್ಲಿ ಸಾಮಾಜಿಕ ಎಚ್ಚರವಿಲ್ಲ ; ವಿಶ್ವಾತ್ಮಕ ಹಾಗೂ ಸದಾ ಸಮಕಾಲೀನವಾಗುವ ಜೀವಂತಿಕೆಯಿಲ್ಲ. ಕಾದಂಬರಿ ಮುಸ್ಲಿಮ್ ಸಮಾಜದ ಒಂದು ದ್ವೀಪದಂತೆ ಕಂಡು, ಆ ಸಮಾಜದ ಹೊರಗೆ ಹೋಗುವುದೇ ಇಲ್ಲ. ಅಂದರೆ, ಜಗತ್ತಿನ ಸಂಖ್ಯೆಯಲ್ಲಿ ತಮ್ಮಿಂದ ಹೆಚ್ಚಿರುವ ಹಿಂದು –ಕ್ರಿಶ್ಚಿಯನ್ ಸಮಾಜಗಳೊಡನೆ ಈ ಮುಸ್ಲಿಮ್ ಸಮಾಜಕ್ಕಿರುವ ಸಾಮಾಜಿಕ, ಧಾರ್ಮಿಕ, ರಾಜಕೀಯ ಸಂಬಂಧಗಳೇನು…? ಧಾರ್ಮಿಕ ಹೆಸರಿನಲ್ಲಿ ಆಗಾಗ್ಗೆ ನಡೆಯುವ ಘರ್ಷಣೆಗಳ ನಿಜವಾದ ಕಾರಣಗಳಾವವು…? ಇತರ ಧರ್ಮಗಳ ಮತಾಂಧತೆ ಮುಸ್ಲಿಮ್ ಮತಾಂಧರು ಕೈಗೊಳ್ಳುವ ‘ಮತಾಂತರಗಳ’ ಪರಿಣಾಮವೇನು…? ಮತಾಂತರಗೊಂಡ ಅನ್ಯ ಧರ್ಮೀಯರ ಸ್ಥಿತಿ- ಗತಿಗಳೇನು…? ಈ ಬಗೆಯ ಪ್ರಶ್ನೆಗಳನ್ನು ತನ್ನ ಕಕ್ಷೆಯೊಳಗೆ ಕಾದಂಬರಿ ಅಳವಡಿಸಿಕೊಂಡಿದ್ದರೆ ಅದು ಇನ್ನಷ್ಟು ಹೆಚ್ಚು ಅರ್ಥಪೂರ್ಣವಾಗುತ್ತಿತ್ತು, ಮಹತ್ವದ ಕೃತಿಯೊಂದಾಗಬಹುದಿತ್ತು. ಆದ್ದರಿಂದ ‘ಓದಿರಿ’ ಕಾದಂಬರಿಗೆ ಗಹನತೆಯಿಲ್ಲ. ಯಶಸ್ವಿ ಪತ್ತೇದಾರಿ ಕಾದಂಬರಿಯಂತೆ ‘ಮುಂದೇನು ? ಮುಂದೇನು?’ ಎಂಬ ಕುತೂಹಲವನ್ನು ಈ ಕಾದಂಬರಿ ಉಳಿಸಿಕೊಂಡು ಹೋಗುವುದಿಲ್ಲ. ರಹಸ್ಯದ ವಿವರಣೆ ಬಂದಾಗ, ‘ಹೌದು, ಒಪ್ಪಿಕೊಳ್ಳಬಹುದು’ ಎಂಬ ತೃಪ್ತಿ ಕೊಡುತ್ತದೆ.

ಬೊಳುವಾರು ಅವರು ಈ ಕಾದಂಬರಿಯನ್ನು ಇಪ್ಪತ್ತು ಪ್ರಮುಖ ಪಾತ್ರಗಳ ಮೂಲಕ ಓದುಗರಿಗೆ ಸುಲಭಗ್ರಾಹ್ಯವಾಗುವಂತೆ ಕಥೆ ಹೆಣೆಯಲು ಪ್ರಯತ್ನಿಸಿದ್ದಾರೆ. ಮುಹಮ್ಮದರ ತಾಯಿ ಆಮಿನಾಳ ಮನಸ್ಸಿನ ಹೊಯ್ದಾಟವನ್ನು ಒಳ-ಹೊರ ವಿವರಗಳಲ್ಲಿ ಮೂರ್ತಗೊಳಿಸುವಲ್ಲಿ ಲೇಖಕರು ತೋರಿಸಿರುವ ಸಂಯಮ ಮತ್ತು ತಿಳುವಳಿಕೆ ಅತ್ಯುತ್ತಮ ಮಟ್ಟದ್ದಾಗಿದೆ. ಬಹೀರಾ ಆಶ್ರಮದ ಹಿರಿಯ ಕ್ರೈಸ್ತ್ ಸನ್ಯಾಸಿಯ ಭವಿಷ್ಯವಾಣ ಯಂತೆ ಮುಹಮ್ಮದರ ಬೆಳವಣ ಗೆಯಾಗುತ್ತದೆ.

ಮಕ್ಕಾದಲ್ಲಿ ವಿಶೇಷವಾಗಿ ಆಡಂಬರ, ದರ್ಪ, ಅಟ್ಟಹಾಸ ಹಾಗೂ ವೈಭವೋಪೇತ ಜೀವನಕ್ಕೆ ಹೆಸರಾಗಿದ್ದ ಮಕ್ಝೂಮ್ ಗೋತ್ರದ ಸುಪ್ರಸಿದ್ಧ ವರ್ತಕ ಮನೆತನಗಳು ಕಾರಣಾಂತರಗಳಿಂದ ಕ್ರಮೇಣ ಅವನತಿಯತ್ತ ಸಾಗುವುದು ಕಾಲದ ಬದಲಾವಣೆಯ ಸಂಕೇತ. ಇಂಥ ಅಗರ್ಭ ಶ್ರೀಮಂತ ಮನೆತನದ ಖುವೈಲಿದ್ ಬಿನ್ ಅಸದರನ ಪ್ರೀತಿಯ ಮಗಳು ಖದೀಜಾ ಎರಡು ಬಾರಿ ಮದುವೆಯಾಗಿದ್ದರೂ ಗಂಡoದಿರನ್ನು ಕಳೆದುಕೊಂಡ ದುರ್ದೈವಿ ವಿಧವೆ. ಮುಹಮ್ಮದರು ತಮಗಿಂತ ಹದಿನೈದು ವರ್ಷಗಳ ದೊಡ್ಡವಳಾಗಿದ್ದ ಶ್ರೀಮಂತ ಮನೆತನದ ವಿಧವೆ ಖದೀಜಾಳನ್ನು ಮದುವೆಯಾಗುತ್ತಾರೆ. ಖದೀಜಾಳಿಗೆ ಮೂರನೆ ಗಂಡನಾಗಿ ಬರುವ ಮುಹಮ್ಮದರ ಆದರ್ಶ ಜೀವನ ಕಾದಂಬರಿಯ ಈ ಭಾಗ ಗಮನಾರ್ಹವಾಗಿದೆ.

ಈ ಕಾದಂಬರಿಯಲ್ಲಿರುವ ಪಾತ್ರಗಳ ಬಗೆಗೂ ವಿಶೇಷವಾಗಿ ಗಮನಿಸುವಂಥದ್ದು ಏನೂ ಕಾಣುವುದಿಲ್ಲ. ಒಂದೊoದು ಅಧ್ಯಾಯದಲ್ಲಿ ಮೂಡಿ ಮರೆಯಾಗಿ, ಮತ್ತೆ ಮುಂದೆಲ್ಲಿಯೋ ಆಕಸ್ಮಿಕವಾಗಿ ಪ್ರತ್ಯಕ್ಷವಾಗುವ ಹಲವಾರು ಪ್ರಮುಖ ಪಾತ್ರಗಳು ಇಲ್ಲಿವೆ. ಐತಿಹಾಸಿಕವಾದ ಎಲ್ಲ ಪಾತ್ರಗಳನ್ನು ಬೊಳುವಾರರು ಯಾವ ವೈಭವೀಕರಣವಿಲ್ಲದೇ ಅತ್ಯಂತ ಸಹಜವಾದ ನೆಲೆಯಲ್ಲಿ ಚಿತ್ರಿಸಿರುವುದರಿಂದ ಈ ಪಾತ್ರಗಳೆಲ್ಲ ಜೀವಂತ ವ್ಯಕ್ತಿಗಳಂತೆ ಕಾಣುತ್ತವೆ. ಹೀಗಾಗಿಯೇ ಅವು ಓದುಗರೊಂದಿಗೆ ನೇರ ಸಂಪರ್ಕ ಪಡೆಯುತ್ತವೆ. ಈ ಕಾದಂಬರಿಯ ಪಾತ್ರಚಿತ್ರಣದಲ್ಲಿ ಕಾದಂಬರಿಕಾರರ ನಿರ್ಲೀಪ್ತ ಮನೋಭಾವ ಕೆಲಸ ಮಾಡಿರುವುದು ನೈಜವಾಗಿ ಕಾಣುತ್ತದೆ.

ಅರೇಬಿಯಾದ ಆವರಣದಲ್ಲಿನ ನಿತ್ಯ ಬದುಕಿನ ಎಲ್ಲ ಚಹರೆಗಳನ್ನು, ಅವುಗಳ ಸಣ್ಣಪುಟ್ಟ ವಿವರಗಳನ್ನು ನಿರಂತರವಾಗಿ ಆಸ್ಥೆಯಿಂದ ಈ ಕಾದಂಬರಿ ವಿವರಿಸುತ್ತದೆ. ಕೋಮುವಾದ ಮತ್ತು ಭಯೋತ್ಪಾದನೆಯ ನೆರಳು ಸರ್ವವ್ಯಾಪಿಯಾಗಿ ಮಾನವೀಯತೆಯಲ್ಲಿ ನಂಬಿಕೆಯೇ ಸಡಿಲವಾಗುತ್ತಿರುವ ಈ ಸಂದರ್ಭದಲ್ಲಿ ಪ್ರವಾದಿ ಮುಹಮ್ಮದರ ಕುರಿತು ಓದು ಆಪ್ತವೆನಿಸುತ್ತದೆ.

ಪ್ರವಾದಿ ಮುಹಮ್ಮದರ ಆತ್ಮಕಥೆಯ ರೂಪದಲ್ಲಿ ನಿರೂಪಿತವಾಗಿರುವುದು ‘ಓದಿರಿ’ ಕಾದಂಬರಿಯ ಒಂದು ವೈಶಿಷ್ಟ್ಯವಾಗುತ್ತದೆ. ವಸ್ತುವಿನ ತಾರ್ಕಿಕ ಪ್ರತಿಪಾದನೆ ಹೇಗೆ ಇರಲಿ, ಏನೆ ಇರಲಿ, ಅದನ್ನು ಹೇಳುವ ಕ್ರಮ, ರೀತಿ ಈ ಕಾದಂಬರಿಯಲ್ಲಿ ಒಂದಿಷ್ಟು ಸ್ವಾರಸ್ಯಕರವಾಗಿವೆ. ಅಲ್ಲಲ್ಲಿ ಬರುವ ಪ್ರವಾದಿ ಮುಹಮ್ಮದರ ಪ್ರವಚನ ಮತ್ತು ಮಾತುಗಳಲ್ಲಿ ಬೊಳುವಾರರ ವ್ಯಂಗ್ಯ, ವಿಡಂಬನೆ ಮತ್ತು ವಿಷಾದಗಳು ಒಡೆದು ಕಾಣುತ್ತವೆ. ನ್ಯಾಯಪರನಾದ, ಕರುಣಾಮಯನಾದ ದೇವರಲ್ಲಿ ನಂಬಿಕೆಯನ್ನಿಡುವುದು ಲೇಖಕರಿಗೆ ಇಷ್ಟವಾಗಿದೆ. ಕಾದಂಬರಿಯಲ್ಲಿ ಸ್ವಭಾವ ವೈವಿಧ್ಯದ ನಿರೂಪಣೆ ಸೊಗಸಾಗಿದೆ. ಸಾಮಾನ್ಯ ಜನರು ಪ್ರವಾದಿ ಮುಹಮ್ಮದರ ಜೀವನ ಕುರಿತು ಅರಿತಿದ್ದ, ಅರಿಯದಿದ್ದ ಹಲವಾರು ಸಂಗತಿಗಳು ಪರಿಣಾಮಕಾರಿಯಾಗಿ ಚಿತ್ರಿತವಾಗಿವೆ. ಇಲ್ಲಿ ಅವರ ವಾಸ್ತವತೆ ಶಕ್ತವಾಗಿದೆ. ಆದರೆ ಬೊಳುವಾರರು ತಾವು ಆರಿಸಿಕೊಂಡ ವಸ್ತುವಿನ ವಿಶ್ಲೇಷಣೆಯು ಅವರ ಸಾಮರ್ಥ್ಯಕ್ಕೆ ಸಮನಾದದ್ದು. ಕನ್ನಡ ಸಾಹಿತ್ಯ ಲೋಕಕ್ಕೆ ‘ಓದಿರಿ’ ಅತ್ಯಂತ ವಿಶಿಷ್ಟ ಕಾದಂಬರಿ ಸೇರ್ಪಡೆಯಾಗಿದೆ.

‍ಲೇಖಕರು Admin

November 26, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. D M Nadaf

    ಸಿ ಎಸ್ ಭೀಮರಾಯ ಅವರು ವಿಮರ್ಶಿಸಿದ “ಓದಿರಿ” ಕಾದಂಬರಿಯ ವಿಶ್ಲೇಷಣೆ ಸಮಗ್ರ ಮತ್ತು ವಸ್ತುನಿಷ್ಠ ವಾಗಿದೆ.
    ಐತಿಹಾಸಿಕ ಎನಿಸಬಹುದಾದ ಕೃತಿಯನ್ನು ಬೋಳುವಾರು ಅವರು ತುಂಬ ಕೌಶಲ್ಯಪೂರ್ಣವಾಗಿ ಸಮಕಾಲೀನಗೊಳಿಸಿ ಬರೆದಿರುವದರ ಹಿಂದಿನ ಲೇಖಕರ ಶ್ರಮವನ್ನು ವಿಮರ್ಶಕರು ಸ್ಪಷ್ಟವಾಗಿ ಗುರುತಿಸಿದ್ದಾರೆ. ಐತಿಹಾಸಿಕ ಪ್ರತಿಯೊಂದು ಪೌರಾಣಿಕ ಆಗಿಬಿಡುವ ಅಪಾಯವನ್ನು ಲೇಖಕರು ಹೇಗೆ ತಪ್ಪಿಸಿದ್ದಾರೆ ಎಂಬುದನ್ನು ಈ ವಿಮರ್ಶ ಲೇಖನ ಕಟ್ಟಿಕೊಟ್ಟಿದೆ.
    ಡಿ.ಎಂ.ನದಾಫ್; ಅಫಜಲಪುರ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: