ಸಿ ಎಸ್ ಭೀಮರಾಯ ಓದಿದ ‘ಅವಳೆದೆಯ ಜಂಗಮ’

ಸಿ ಎಸ್ ಭೀಮರಾಯ

ಪ್ರೊ .ಎಸ್.ಜಿ.ಸಿದ್ಧರಾಮಯ್ಯ ನಾಡಿನ ಹೆಸರಾಂತ ಕವಿ, ಸಂಶೋಧಕ, ಪ್ರವಾಸ ಕಥನಕಾರ, ನಾಟಕಕಾರ, ಸಂಸ್ಕೃತಿ ಚಿಂತಕ ಮತ್ತು ವಿಮರ್ಶಕ. ಅವರು ಕಳೆದ ಐದು ದಶಕಗಳಿಂದ ನಾಡಿನ ಭಾಷೆ, ಸಾಹಿತ್ಯ, ಶಿಕ್ಷಣ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಹಲವಾರು ಉಪಯುಕ್ತ ಕಾರ್ಯಗಳನ್ನು ಮಾಡುತ್ತಾ ಬಂದಿದ್ದಾರೆ. ಅವರ ನಾಡು-ನುಡಿಯ ಸೇವೆ ಮೆಚ್ಚುವಂಥದ್ದು.

ಪ್ರಸ್ತುತ ’ಅವಳೆದೆಯ ಜಂಗಮ’ಪ್ರೊ.ಎಸ್.ಜಿ.ಸಿದ್ಧರಾಮಯ್ಯನವರ ಮೂರನೆಯ ಕವನಸಂಕಲನ. ಈ ಸಂಕಲನ ಮೂವತ್ತ್ಮೂರು ಕವಿತೆಗಳನ್ನು ಒಳಗೊಂಡಿದೆ. ಕವಿಯ ಪ್ರಬುದ್ಧ ಚಿಂತನೆಗಳು ಹಾಗೂ ಬದುಕನ್ನು ಕುರಿತ ಮಾಗಿದ ದೃಷ್ಟಿಕೋನವೊಂದನ್ನು ಈ ಕವನಸಂಕಲನದಲ್ಲಿ ಗಮನಿಸಬಹುದು. ಕಾವ್ಯ ಧರ್ಮದ ಭಾಗವಾಗಿ ಸೃಜನಶೀಲತೆಯನ್ನು ಗಂಭೀರವಾಗಿ ಪರಿಭಾವಿಸುವ ಅನೇಕ ಕವಿತೆಗಳು ಇಲ್ಲಿರುವುದನ್ನು ಓದುಗರು ಗಮನಿಸಬಹುದು. ಎಸ್.ಜಿ. ಎಸ್. ಅವರ ಕಾವ್ಯದ ಭಾಷೆ ಗಂಭೀರವಾದದ್ದು. ವರ್ತಮಾನದ ಬದಲಾವಣೆಗಳಿಗೆ, ಪ್ರಕೃತಿಗೆ, ಬದುಕಿಗೆ, ವ್ಯಕ್ತಿಗಳಿಗೆ ಸದಾ ಸ್ಪಂದಿಸುವ ಮುಕ್ತ ಮನಸ್ಸು ಅವರದು. ಅವರನ್ನು ಕಾಡಿದ ಅನೇಕ ಸಂಗತಿಗಳು ಇಲ್ಲಿ ಹಾಡಾಗಿ ಮೂಡಿವೆ.

ಸಿದ್ಧರಾಮಯ್ಯನವರ ಕಾವ್ಯದಲ್ಲಿ ನಾವು ಕಾಣುವುದು ತೀವ್ರ ಸಾಮಾಜಿಕ ಕಾಳಜಿ; ದೌರ್ಜನ್ಯ-ದಬ್ಬಾಳಿಕೆಗಳಿಗೆ ಒಳಗಾದವರ ಬಗ್ಗೆ ಸಹಾನುಭೂತಿ; ಅವರಲ್ಲಿ ಆ ಕುರಿತು ಅರಿವು ಮೂಡಿಸಬೇಕೆಂಬ ತಹತಹ ನದಿಯಂತೆ ಹರಿಯುತ್ತದೆ. ಸಮಾಜದ ಸ್ಥಿತಿ ಪರಂಪರಾಗತ ಮೌಲ್ಯಗಳ ಚಿತ್ರಣ ನೀಡುವಂತೆಯೇ ತನ್ನಲ್ಲಿ ಸ್ಫುಟಗೊಂಡ ಭಾವನೆಗಳನ್ನು ಸಮಷ್ಟಿಯ ಸ್ವತ್ತನ್ನಾಗಿ, ಅನುಭವವನ್ನಾಗಿ ಮಾಡುವಲ್ಲಿಯೂ ಅವರ ಕವಿತೆಗಳು ಗೆಲ್ಲುತ್ತವೆ. ಕವಿ ಹೃದಯ, ಭಾಷಾಪ್ರಭುತ್ವ, ಪದಗಳ ಜೋಡಣೆಯಲ್ಲಿ ಕಂಡುಬರುವ ಜಾಣತನ, ಅನುಭವಕ್ಕೆ ತಕ್ಕಂತೆ ಮೂಡಿಬರುವ ಬಗೆ, ಪ್ರತಿಮೆ-ಅಲಂಕಾರಗಳ ಬಳಕೆ, ಬದುಕಿನ ವಿವರಗಳನ್ನು ಧ್ವನಿಪೂರ್ಣವಾಗಿ ವ್ಯಕ್ತಗೊಳಿಸುವ ರೀತಿ- ಈ ಎಲ್ಲವುಗಳಿಂದ ಕವಿತೆಗಳು ಓದುಗನಲ್ಲಿ ಲವಲವಿಕೆಯನ್ನು ಉಂಟುಮಾಡಬಲ್ಲ ಶಕ್ತಿ ಹೊಂದಿವೆ. ಅಂತರಂಗವನ್ನು ತುಂಬಾ ಆಪ್ತವಾಗಿ ವ್ಯಕ್ತಗೊಳಿಸುವುದು, ಕಾವ್ಯ ಮಾಧ್ಯಮದ ಜೊತೆಯಲ್ಲೇ ಬೌದ್ಧಿಕತೆಯನ್ನು ಬೆಳೆಸುವುದು, ಜೀವನದ ಸ್ಥಿತ್ಯಂತರಗಳನ್ನು ಸೂಕ್ಷ್ಮ ಒಳನೋಟದಿಂದ ಕಂಡುಕೊಳ್ಳುವುದು, ಜೀವಪರ ನೆಲೆಗಳನ್ನು ಸಮರ್ಥವಾಗಿ ಸ್ವೀಕರಿಸುವುದು- ಮುಂತಾದ ಸಂಗತಿಗಳತ್ತ ಪ್ರಮುಖವಾಗಿ ಎಸ್.ಜಿ.ಎಸ್. ಅವರ ಕಾವ್ಯ ಗಮನ ಸೆಳೆಯುತ್ತದೆ. ಅನುಕಂಪ, ಅಂತಃಕರಣ ಮತ್ತು ವಿಷಾದವೂ ಅವರ ಕಾವ್ಯದ ಪ್ರಮುಖ ಆಶಯವೇ ಆಗಿದೆ. ನವ್ಯದಿಂದ ಬಿಡಿಸಿಕೊಂಡ, ಬಂಡಾಯದಿಂದಲೂ ದೂರ ನಿಲ್ಲಬಲ್ಲ ಕಾವ್ಯ ಅವರದು. ದೇಸೀ ಸಂಸ್ಕೃತಿಗೆ ಸಂಬಂಧಿಸಿದಂತೆ ಅವರ ಕಾವ್ಯಯಾನ ಬೆಳೆದು ಬಂದಿದೆ. ಎಸ್.ಜಿ.ಎಸ್. ಅವರು ವ್ಯವಸಾಯ ಸಂಸ್ಕೃತಿಯನ್ನು ಕಂಡುಂಡು ಬಂದವರು. ಸಹಜವಾಗಿಯೇ ವ್ಯವಸಾಯ ಕ್ಷೇತ್ರದ ಪರಿಭಾಷೆಗಳು, ನುಡಿಗಟ್ಟುಗಳು ಅವರ ಸಂವೇದನೆಯ ದ್ರವ್ಯ ರೂಪಗಳಾಗಿ ಮಾತನಾಡುತ್ತವೆ. ಅವರ ಕಾವ್ಯಕ್ಕೆ ಪದಕೋಶ ಅಗತ್ಯವಿದೆ.

ಗಂಟು ಕಳ್ಳರು ಬಂದು ಮೈಬಾಡು ದೊಗೆದೊಗೆದು
ಮುಟ್ಟು ಮೀಸಲುಗೆಟ್ಟು ಮನೆತುಂಬ ರಣ ರಣ
ಅಣುರೇಣುಗಳ ತಬ್ಬಿ ಬೆಳೆದ ಕಥೆ ಬಾಯೊಣಗಿ
ಊರ ಬೀದಿಗಳಲ್ಲಿ ಹೆಣದ ವಾಸನೆ ಜಲುಮೆ ||
(ಅವಳೆದೆಯ ಜಂಗಮ )

ಎಂದು ಕವಿಯ ಆಶಯವನ್ನು ಮತ್ತು ದುಗುಡವನ್ನು ಏಕಕಾಲದಲ್ಲಿ ಸೂಚಿಸುತ್ತದೆ. ನಮ್ಮ ಜೀವನದ ಬಹುತೇಕ ಎಲ್ಲ ಕ್ಷೇತ್ರಗಳು ಭ್ರಷ್ಟಗೊಂಡಿರುವ ಸ್ಥಿತಿಯ ಮೇಲೆ ಮಾರ್ಮಿಕ ವ್ಯಾಖ್ಯಾನ ಈ ಕವಿತೆ. ಜೀವನದ ಇಂಥ ನಿಗೂಢಗಳ ಶೋಧನೆ ಕವಿಯ ಮೂಲಭೂತ ಕಾವ್ಯೋದ್ದೇಶಗಳಲ್ಲಿ ಒಂದಾಗಿ ಬಿಡುತ್ತದೆ; ಅವನ ಕಾವ್ಯಕರ್ಮದ ಪ್ರಧಾನ ತುಡಿತವಾಗುತ್ತದೆ.ಈ ಕವಿತೆಯ ಛಂದೋರೂಪದಲ್ಲಿ ಎಸ್.ಜಿ.ಎಸ್. ಅವರ ವಿಶಿಷ್ಟ ಪ್ರಯೋಗಶೀಲತೆ ಕಂಡುಬರುತ್ತದೆ. ಈ ರೀತಿಯ ಪ್ರಯೋಗಶೀಲತೆ ಅಸಾಧಾರಣ ಕವಿಗಳಿಗೆ ಮಾತ್ರ ಸಾಧ್ಯ.

ಅಜ್ಜಿ ಹೇಳಿದ ಮಾತೆ ಗೆಜ್ಜೆ ಕಟ್ಟಿತು ಮನಕೆ
ಬೆನ್ನನೇರಿತು ಬುತ್ತಿ ಹಾದಿ ಬದಿ ಕರಿಲೆಕ್ಕೆ
ಹೊತ್ತು ಗೊತ್ತಿನ ಪರಿವೆ ಉರಿವವನ ಹಣೆಪಾಡು
ಬಿಟ್ಟ ಬಾಣದ ಗರಿಗೆ ಗಮನವೊಂದೇ ಹಾಡು ||
(ತಬ್ಬಿಕೊಂಡಿತು ಕರುಳು)

ಎಂಬ ಸಾಲುಗಳು ಸೃಷ್ಟಿಕ್ರಿಯೆ ಹಾಗೂ ಮಾಗುವಿಕೆಗಳೆರಡನ್ನು ಸಮರ್ಥವಾಗಿ ಪ್ರತಿನಿಧಿಸುತ್ತವೆ. ದಶಕಗಳ ಹಿಂದಿನ ಸಾವಧಾನದ ಬದುಕಿನ ಚಿತ್ರಣ ಇಲ್ಲಿದೆ. ಕವಿತೆಯ ಉದ್ದಕ್ಕೂ ಒಂದು ಗ್ರಾಮೀಣ ಪರಿಸರದ ಚಿತ್ರಣವಿದೆ. ಜೀವಪರಂಪರೆಯ ಸಾತತ್ಯದಲ್ಲಿನ ಪ್ರೀತಿ, ಪ್ರೇಮ ಹಾಗೂ ನಂಬಿಕೆಯ ಅನನ್ಯತೆಯ ಜೊತೆಗೆ ಅದರ ಕಾಲಬದ್ಧ ನೋವು-ನಲಿವುಗಳ ಅರಿವನ್ನೂ ಕವಿತೆ ಜೊತೆಜೊತೆಯಾಗಿ ಇಡುವುದರ ಮುಖಾಂತರವೇ ವೃದ್ಧಜಪವಾಗುವ ಅಪಾಯದಿಂದ ಪಾರಾಗಿದೆ.

ಹನ್ನೆರಡು ವರ್ಷಗಳ ಮೇಲೆ ಮುಖ ತೋರಿಸಿದ್ದೀಯೆ
ಹೆಸರು ಕರೆಯಬಾರದು ಸಂಬಂಧ ಕೊರಗಬಾರದು
ಇರಲಿ ಬಾ ಹಗೆ ಕೊಟ್ಟ ಹಾಳೆ ವಸಂತವೋ ಗ್ರೀಷ್ಮವೋ ?
ಅವ್ವ ಅಪ್ಪರು ಯೋಗವೇ ? ಮಡದಿ ಇದ್ದರೆ ಕ್ಷೇಮವೇ ?
ಮಕ್ಕಳು ಮರಿ ಎಂತಷ್ಟು ಕೇಳಬಹುದಲ್ಲ ? ಹೇಳು || ( ಹೆಣದ ಹಿಂದೆ )

ಇದು ವಾಸ್ತವ ಲೋಕದ ಪರಿಸ್ಥಿತಿಯಾದರೆ, ವಾಸ್ತವವನ್ನು ಉನ್ನತೀಕರಿಸಿದಾಗಲೂ ಈ ಪ್ರಶ್ನೆ ಮಾತ್ರ ಹಾಗೆಯೇ ಉಳಿದುಕೊಳ್ಳುತ್ತದೆ. ಆಧುನಿಕ ಬದುಕಿನ ಪ್ರತಿಮೆಗಳನ್ನು ಈ ಕವಿತೆ ತುಂಬಿಕೊಂಡಿದೆ. ಅಲ್ಲದೆ ಈ ಕವಿತೆಯಲ್ಲಿರುವ ಪ್ರತಿಮೆಗಳು ನೆಲದ ಸಂಪರ್ಕವಿರುವ ವೈಯಕ್ತಿಕ ಅನುಭವಗಳಿಂದ ರೂಪು ಪಡೆದು ಕವಿತೆಯ ಅರ್ಥಲೋಕವನ್ನು ಹಿಗ್ಗಿಸಿವೆ. ಕವಿತೆಯಲ್ಲಿನ ದಟ್ಟ ವಿಷಾದ ಓದುಗರಿಗೆ ಬೆರಗು ಹುಟ್ಟಿಸುವಂಥದ್ದು.

ಸಮಾರಂಭ ಶಾಲು ಚಪ್ಪಾಳೆ ಭರಭರಾಟೆ
ಅಮಲು ತೇಲಿಸಿದ ಕನಸ ನಡುವೆ ಬಿದ್ದೆ
ಅವ್ವ ಸುದ್ದಿ ಗೊತ್ತಾಗಿಯೂ ನೀನು ಹಡೆದ ಹಟ
ಮಾರಿ ಮನಸು ಎಳೆದರೂ ಒಣಸಿಟ್ಟು ||

( ಹಸು ಹೆಣ್ಣು ಕೋವಿ )

ಎಂಬ ಸಾಲುಗಳು ಬಹಳ ಮಾರ್ಮಿಕವಾಗಿ ತಮ್ಮ ವ್ಯಂಗ್ಯದ ಮೊನೆಯನ್ನು ನಮಗೆ ತಾಕಿಸುತ್ತವೆ. ಈ ಕವಿತೆ ಕಾಲಘಟ್ಟದ ಸ್ಥಿತ್ಯಂತರವನ್ನು ಬಹು ಸೂಕ್ಷ್ಮವಾಗಿಯೂ, ಆಧುನಿಕ ರೂಪಕಗಳ ಮೂಲಕವೂ ಸಮರ್ಥವಾಗಿ ಚಿತ್ರಿಸುತ್ತದೆ. ತನ್ನ ಸುತ್ತಲ ಬದುಕು ಎಂತಹ ವಿಷಮತೆಯನ್ನು ತುಂಬಿಕೊಂಡಿದ್ದರೂ ತನ್ನ ಕವಿತೆಗಳ ಬಗ್ಗೆ ಕವಿ ಇಟ್ಟುಕೊಂಡಿರುವ ಗಾಢ ಆತ್ಮವಿಶ್ವಾಸ ಪ್ರೊ. ಎಸ್. ಜಿ. ಸಿದ್ಧರಾಮಯ್ಯನವರನ್ನು ನಮ್ಮ ಕಾಲದ ಪ್ರಮುಖ ಕವಿಗಳಲ್ಲಿ ಒಬ್ಬರನ್ನಾಗಿ ಮಾಡಿದೆ.

ಚಕ್ರರತ್ನ ಹುಟ್ಟಿಸಿದ ಬಸಿರ ಬಯಕೆ
ರಣಕೇಳಿ ಕೋಲಾಹಲ ವಿಭ್ರಮ
ಪರಂಪರೆಯ ಪ್ರವಾಹಕ್ಕೆ ಸೆಡ್ಡು
ಹೊಡೆದು ಒಡ್ಡುಕಟ್ಟಿದ ನೆಲ ಇದು ಈ ||

(ಯುದ್ಧ ಮತ್ತು ಶಾಂತಿ)

ಸದ್ಯದ ಕಾವ್ಯ ತನ್ನ ತೆಕ್ಕೆಯಲ್ಲಿ ತೆಗೆದುಕೊಳ್ಳಬಹುದಾದ ಹಿಂಸೆ, ಸೇಡು, ಸ್ವಮಗ್ನತೆಯ ಸಂಗತಿಗಳನ್ನು ಈ ಕವಿತೆಯಲ್ಲೂ ದಟ್ಟವಾಗಿ ಕಾಣಬಹುದು. ಮನುಷ್ಯ ಸಂಬಂಧಗಳ ಪಾವಿತ್ರ್ಯತೆಯನ್ನು, ವಿಶ್ವಾಸವನ್ನು, ಪ್ರೀತಿಯನ್ನು, ಸ್ನೇಹವನ್ನು ಉಳಿಸಿಗೊಡದ ಹೃದಯಹೀನ ಜಗತ್ತು ಇದು. ಇದು ಈ ಕಾಲದ ಬಹು ದೊಡ್ಡ ದುರಂತ. ಈಗ ಯುದ್ಧ ನಡೆದಿರುವುದು ಮನುಷ್ಯರ ಮನಸ್ಸಿನಲ್ಲಿ ಎಂಬುದು ಇಲ್ಲಿ ವಿದಿತವಾಗಿದೆ. ಚಾಕು -ಚೂರಿ ಸಂಸ್ಕೃತಿಗಳ ಬಿತ್ತಿ ಬೆಳೆದ ಶಿಕ್ಷಣದ ಫಲಶೃತಿ ಇದೆ ಅಲ್ಲವೇ………..? ಈ ಕವಿತೆ ಪ್ರತಿಮಾತ್ಮಕ ವ್ಯಂಗ್ಯದರ್ಶನವನ್ನು ತೀಕ್ಷ್ಣ ವಿಡಂಬನೆಯ ಮೂಲಕ ಸೃಜಿಸುತ್ತದೆ. ಇಲ್ಲಿನ ಗ್ರಹಿಕೆ ಎಷ್ಟೊಂದು ವಾಸ್ತವ ಸತ್ಯದಿಂದ ಕೂಡಿದೆ; ಇದನ್ನು ಚಿಂತನಶೀಲ ಕವಿ ಮಾತ್ರ ಅರ್ಥಮಾಡಿಕೊಳ್ಳಲು ಮತ್ತು ಅಭಿವ್ಯಕ್ತಿಸಲು ಸಾಧ್ಯವಿದೆ.

ಇದು ಯಾವ ಬಂಧ ಇದು ಯಾವ ಚಂದ
ಪಳಕೆ ಮುಖದ ಆ ಒಲುಮೆ ಪ್ರಶ್ನೆ
ಇರುವಿಕೆಯ ಅರಿಯೆ ಬರುವಿಕೆಯ ಕರೆಯ
ನೆನಪೆಂಬುದಕ್ಕೆ ಎಲ್ಲುಂಟು ಏಕಸೂತ್ರ ||
( ನುಡಿಮೊಲ್ಲೆ )

ಹೀಗೆ ಭಾವವನ್ನು ಪ್ರಾಮಾಣಿಕವಾಗಿ, ಉಕ್ಕಂದವಾಗಿ ಹರಿದುಬಿಟ್ಟಿರುವ ಈ ಸಂಕಲನದ ರಚನೆಗಳಲ್ಲಿ ಆಶ್ಚರ್ಯ ತರುವ ಪ್ರಯೋಗಗಳಿವೆ. ಈ ಕವಿತೆಯಲ್ಲಿ ನಿಯತ ಛಂದಸ್ಸಿದೆ; ನವಿರಾದ ಭಾವಾಭಿವ್ಯಕ್ತಿ ಇದೆ. ನೂತನ ಚಿಂತನೆ ಇದೆ, ಪರಿಸ್ಥಿತಿಗೆ ಕವಿಯ ಪ್ರಾಮಾಣಿಕ ಪ್ರತಿಕ್ರಿಯೆ ಇದೆ; ಅಲ್ಲದೆ ಪ್ರಾಸಾಕ್ಷರ ಪಾಲನೆ ಇದೆ, ರಾಗಬದ್ಧವಾಗಿ ಹಾಡಲು ಯೋಗ್ಯವಾಗಿಯೂ ಇದೆ. ಈ ಕವಿತೆ ಎಸ್.ಜಿ.ಎಸ್. ಅವರ ಪ್ರತಿಭಾ ಸಾಮರ್ಥ್ಯವನ್ನು ದೃಢಪಡಿಸುತ್ತದೆ. ಹಂತಹಂತವಾಗಿ ಕವಿತೆಯಲ್ಲಿನ ಭಾವದ ಬೆಳವಣಿಗೆ, ಸಾಂಕೇತಿಕತೆ, ಭಾಷೆಯನ್ನು ಅಭಿವ್ಯಕ್ತಿಗೆ ವ್ಯಂಜಿಸುವ ರೀತಿ ಅನನ್ಯವಾಗಿಸುತ್ತದೆ.

ಹಸ್ತ ಆರತಿಯೆತ್ತಿ ಚಿತ್ತೆ ಬೆದೆಯನು ಬಿತ್ತಿ
ಹಿಂಗಾರು ಹೊಡೆಕರಿಸಿ ಬಂಗಾರ ಬಣ್ಣ ಭೂಮ್ತಾಯಿ
ಅಕ್ಕ ಬಾ ಅಕ್ಕವ್ವ ಬಾ ನಕ್ಕು ನಲಿಯುವ ಮಾನ
ಹಿರಿದಂಗಿ ಕಿರಿದಂಗಿ ಹೊಳೆದಂಡಯಾ ಕರಕಿ ರಸಬಳ್ಳಿ ||

( ನೆರಕಿಯೊಳಗಿನ ಜೀವ )

ಹೀಗೆ ಭಾಷೆಯನ್ನು ಒಂದು ಬೆರಗಲ್ಲಿ ಅವರು ಕಟ್ಟಿಕೊಡುವ ಶೈಲಿ ತುಂಬಾ ಅದ್ಭುತ. ಎಸ್.ಜಿ.ಎಸ್. ಅವರ ಕಾವ್ಯಪ್ರೇರಣೆಗಳು ಜಾನಪದ ಲೋಕದಿಂದ ಬಂದಿವೆಯೆಂಬುದಕ್ಕೆ ಇದೊಂದು ಉತ್ತಮ ನಿದರ್ಶನ. ಅವರಿಗೆ ಈ ಭೂಮಿಯೇ ದೇವರು. ಆ ತಾಯಿಯ ಬಗ್ಗೆ ಅಪೂರ್ವ ಪ್ರೀತಿ. ಸೃಷ್ಟಿಶೀಲ ಶಕ್ತಿ, ಮನುಷ್ಯ ಜೀವಶಕ್ತಿ ಒಂದು ಆರಾಧನೆ ಎಂಬಂತೆ ಇಲ್ಲಿ ಅಭಿವ್ಯಕ್ತವಾಗಿರುವುದು ಗಮನಾರ್ಹ.

ಬಸಿರ ಭಾಗ್ಯವದೊಳಗೆ ಬೇಸರಿಲ್ಲದ ಬಾಳು
ಕರೆಕರೆಯ ದಿನದಲ್ಲು ಒಲವಿನೆದೆ ಸವಿಸೊಲ್ಲು
ಹಿಡಿದ ಹಟದೆಡೆಯಲ್ಲಿ ಮೀಸೆ ಮುರಿಯದ ಮಾರ
ಸತ್ಯಕ್ಕೆ ಮುಖಗಳೆಷ್ಟು ತಂದೆ ? ||
( ಅಪ್ಪ )

ಈ ಸಾಲುಗಳು ಎಸ್.ಜಿ.ಎಸ್. ಅವರ ಕಾವ್ಯದ ಬಗ್ಗೆ ಓದುಗರು ಅಧಿಕ ಕುತೂಹಲ ತಾಳುವಂತೆ ಮಾಡುತ್ತವೆ. ಇಂತಹ ಕವಿತೆಗಳನ್ನು ಸ್ವಾನುಭವದ ಮುಖಾಂತರ ಗ್ರಹಿಕೆಗೆ ಒಳಪಡಿಸಬೇಕೆ ಹೊರತು ಅನ್ಯವ್ಯಾಖ್ಯಾನದ ಅಗತ್ಯವಿಲ್ಲ.

ಮಾತು ಮಾತಿಗು ಚಿಟುಗು ಮುಳ್ಳಾಡಿದರೆ
ದನಿ ಸತ್ತ ಎದೆಯಲ್ಲಿ ಸ್ವಗತ ದೆವ್ವದ ಕುಣಿತ
ನೆಲದೆದೆಯ ಹಾಲುಂಡ ಬೆಳೆವ ಹಾಡುಗಳೆಲ್ಲ
ಕಡಲ ಮುತ್ತಿನ ಸವಿಯ ತಲೆಎತ್ತಿ ತೂಗಿದರೆ
ಒಡಲ ಭಾಗ್ಯದ ಸಿರಿಯು ಜೀವಜೀವದ ದನಿಯು || (ಕಾವೇರಿ ದಡಗಳಲಿ ಹಕ್ಕಿ ಹಾಡು)

ವ್ಯಕ್ತಿ, ಚೈತನ್ಯ ಮತ್ತು ನಿಸರ್ಗ ವ್ಯಾಪಾರಗಳ ನಡುವಣ ಸಂಬಂಧದ ಹಲವು ಮುಖಗಳು ಈ ಕವಿತೆಯಲ್ಲಿ ಅದ್ಭುತವಾಗಿ ಕಂಡುಬರುತ್ತವೆ. ಎಸ್.ಜಿ.ಎಸ್. ನೆಲದ ಕವಿ; ನಲ್ಮೆ ಕವಿ; ಸಹಜ ಕವಿ; ಪ್ರಯೋಗಶೀಲ ಕವಿ; ಹಾಡು ಹಕ್ಕಿಯಂತೆ ಮುಕ್ತ… ಈ ಸುದೀರ್ಘ ಕವಿತೆ ಹಲವು ಚಿತ್ರದ ಶಕ್ತಿಯ ಪ್ರತಿಮೆಗಳಿಂದ ಕಾವ್ಯಾಸಕ್ತರನ್ನು ಸೂಜಿಗಲ್ಲಿನಂತೆ ಸೆಳೆದು ಚಿಂತನೆಗೆ ಪ್ರೇರೆಪಿಸುತ್ತದೆ.

ಪ್ರೊ .ಎಸ್.ಜಿ.ಸಿದ್ದರಾಮಯ್ಯನವರ ಈ ಸಂಕಲನದ ’ಅವಳೆದೆಯ ಜಂಗಮ, ’ತಬ್ಬಿಕೊಂಡಿತು ಕರುಳು, ’ಹೆಣದ ಹಿಂದೆ, ’ಒಂದು ಮರದ ಕತೆ, ’ನೆಲದ ಮುಟ್ಟು, ’ಯುದ್ಧ ಮತ್ತು ಶಾಂತಿ, ’ಬಸಿರ ಕೊಳಲುʼ ಮತ್ತು ’ನೆರಿಕೆಯೊಳಗಿನ ಜೀವ’ -ಮುಂತಾದ ಕವಿತೆಗಳು ತಮ್ಮೊಳಗಿನ ಉತ್ಕಟತೆಯಿಂದ ಓದುಗರನ್ನು ಸೆಳೆಯುತ್ತವೆ. ಎಸ್.ಜಿ.ಎಸ್. ಅವರ ಕವಿತೆಗಳ ಶಕ್ತಿ ಇರುವುದು ಅವುಗಳಿಗೆ ಸಹಜವಾಗಿ ದಕ್ಕಿರುವ ಲಯದಲ್ಲಿ. ಅವರು ವ್ಯವಸಾಯ ಸಂಸ್ಕೃತಿಯನ್ನು ಕಂಡುಂಡು ಬಂದವರು. ಆದ್ದರಿಂದ ವ್ಯವಸಾಯ ಕ್ಷೇತ್ರದ ಪರಿಭಾಷೆಗಳು, ನುಡಿಗಟ್ಟುಗಳು ಅವರ ಸಂವೇದನೆಯ ದ್ರವ್ಯ ರೂಪಗಳಾಗಿ ಮಾತನಾಡುತ್ತವೆ. ಬೆಳದಿಂಗಳು, ನೀರು, ಬಿದುರಿನ ಪ್ರತಿಮೆಗಳಲ್ಲಿರುವ ಇಲ್ಲಿನ ಕವಿತೆಗಳ ಅಂತರಾಳದಲ್ಲಿ ಕರುಣೆಯ ಹೊನಲು ಜೀವನದಿಯಂತೆ ಹರಿದಿದೆ. ಆದ್ದರಿಂದಲೇ ಈ ಸಂಕಲನದಲ್ಲಿನ ಕವಿತೆಗಳು ವಾಗ್ಝರಿಯ ಆರ್ಭಟದ ಮಾತುಗಳಿಂದ ಓದುಗರನ್ನು ಸುಡುವುದಿಲ್ಲ! ಬದಲಿಗೆ ಹರಿಯುವ ನೀರಿನಂತೆ ಓದುಗರನ್ನು ತಣಿಸುತ್ತವೆ. ಇಲ್ಲಿರುವ ಒಂದೊಂದು ಕವಿತೆಯೂ ಆಶಯದ ದೃಷ್ಟಿಯಿಂದ ವಿಶಿಷ್ಟ ಕವಿತೆಗಳು. ಆಧುನಿಕ ಬದುಕಿನ ಪ್ರತಿಮೆಗಳನ್ನು ತುಂಬಿಕೊಂಡ ಹಲವು ಕವಿತೆಗಳು ಈ ಸಂಕಲನದಲ್ಲಿವೆ. ಕಾವ್ಯಶಿಲ್ಪದ ದೃಷ್ಟಿಯಿಂದಂತೂ ಕವಿ ಇಲ್ಲಿ ಆಶ್ಚರ್ಯರಕರ ಪ್ರಬುದ್ಧತೆ ಸಾಧಿಸಿದ್ದಾರೆ. ಅವರು ಈ ಸಂಕಲನದ ಉದ್ದಕ್ಕೂ ಆಳವಾದ ಚಿಂತನೆಯನ್ನು ಹಲವು ರೂಪಗಳಲ್ಲಿ ಮತ್ತು ರೂಪಕಗಳಲ್ಲೂ ನಡೆಸಿದ್ದು ಪ್ರಮುಖವಾಗಿದೆ.

‍ಲೇಖಕರು Admin

November 12, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: