ಸರೋಜಿನಿ ಪಡಸಲಗಿ ಅಂಕಣ- ಶಂಭರ್ ಟಕ್ಕೇ ಹರಸ್ಯಾಳ ನಮ್ಮ ಅವ್ವಾ…

ಅವಧಿ’ ಓದುಗರಿಗೆ ಸರೋಜಿನಿ ಪಡಸಲಗಿ ಅವರು ಈಗಾಗಲೇ ಸುಪರಿಚಿತ. ಅವರ ಸರಣಿ ಬರಹ ‘ಒಬ್ಬ ವೈದ್ಯನ ಪತ್ನಿ ಅನುಭವಗಳ ಗಂಟು ಬಿಚ್ಚಿದಾಗ..’ ಜನಪ್ರಿಯವಾಗಿತ್ತು.

ಈಗ ಈ ಸರಣಿ ‘ಡಾಕ್ಟರ್ ಹೆಂಡತಿ’ ಹೆಸರಿನಲ್ಲಿ ಬಹುರೂಪಿಯಿಂದ ಪ್ರಕಟವಾಗಿದೆ.

ಈ ಕೃತಿಯನ್ನು ಕೊಳ್ಳಲು –https://bit.ly/3sGTcvg ಈ ಲಿಂಕ್ ಕ್ಲಿಕ್ ಮಾಡಿ

ಅಥವಾ 70191 82729ಗೆ ಸಂಪರ್ಕಿಸಿ

ಸರೋಜಿನಿ ಪಡಸಲಗಿ, ಮೂಲತಃ ಬೆಳಗಾವಿ ಜಿಲ್ಲೆಯ ಹುಕ್ಕೇರಿಯವರು. ಮದುವೆಯಾದ ಮೇಲೆ ಧಾರವಾಡದವರಾದರೂ ಈಗ ಬೆಂಗಳೂರು ವಾಸಿ. ಪದವೀಧರೆ, ಗೃಹಿಣಿ. ಮೊದಲಿನಿಂದಲೂ ಸಂಗೀತದ ಹುಚ್ಚು ವಿಪರೀತ. ಯಾವುದೇ ಪದ ಸಿಕ್ಕರೂ ಅದನ್ನು ಸಂಯೋಜಿಸಿ ಹಾಡುವ ಅತೀವ ಆಸಕ್ತಿ. ಕ್ರಮೇಣ ಅದು ಭಾವಗೀತೆಗಳನ್ನು ಸ್ವಂತವಾಗಿ ಬರೆದು ಸಂಯೋಜಿಸಿ ಹಾಡುವತ್ತ ಕರೆದೊಯ್ದಿತು.

ಎರಡು ಕವನ ಸಂಕಲನಗಳು ಪ್ರಕಟವಾಗಿವೆ- ‘ಮೌನ ಮಾತಾದಾಗ’ ಮತ್ತು ‘ದೂರ ತೀರದ ಕರೆ’. ಇನ್ನೊಂದು ಸಂಕಲನ ‘ಹಳವಂಡ’ ಹಾಗೂ ಅವರೇ ರಚಿಸಿದ ಸಂಪ್ರದಾಯದ ಹಾಡುಗಳ ಸಂಕಲನ ‘ತಾಯಿ – ಮಗು’ ಅಚ್ಚಿನಲ್ಲಿವೆ. ಈ ಸಂಪ್ರದಾಯದ ಹಾಡುಗಳು 18 ಕಂತುಗಳಲ್ಲಿ ‘ರೇಡಿಯೋ ಗಿರ್ಮಿಟ್’ನಲ್ಲಿ ಪ್ರಸಾರ ಆಗಿವೆ. ಆಕಾಶವಾಣಿ ಬೆಂಗಳೂರು ಹಾಗೂ ಧಾರವಾಡದಿಂದಲೂ ಸಂದರ್ಶನದೊಂದಿಗೆ ಪ್ರಸಾರ ಆಗಿವೆ.

ಅವರ ಇನ್ನೊಂದು ಮನ ಕಲಕುವ ಅಂಕಣ – ತಣ್ಣೆಳಲ ಹಾದಿಯಲ್ಲಿ…

24

ನಮ್ಮ ಅವ್ವಾಂದು  ಮುಕ್ತ ನಗು ; ಥೇಟ್ ತಮ್ಮ ಅವ್ವನಗತೆನ , ಅಂದ್ರ ನಮ್ಮ  ಅಂಬಕ್ಕಜ್ಜಿ  ಹಂಗs. ನಮ್ಮ ಅಂಬಕ್ಕಜ್ಜಿನೂ  ಹಂಗೇ. ಸುದ್ದಿ ಹೇಳಕೋತ  ನಗಲಿಕ್ಕೆ ಸುರು ಮಾಡಿದ್ಲಂದ್ರ  ನಾವು  ಆಕಿ  ನಗೂದ ನೋಡಿ  ನಗಬೇಕು. ಆಕಿ  ಹೇಳೂ  ಸುದ್ದಿ  ಪೂರಾ ಹೊರಗ ಬರ್ತಿದ್ದೇ ಇಲ್ಲಾ. ಆಕಿ ನಗಿ ಒಳಗs  ಮುಚ್ಚಿ ಹೋಗಿ ಬಿಡ್ತಿತ್ತು; ಒಂಚೂರ ಚೂರ ಆ ನಗಿಯೊಳಗಿಂದ  ಹಣಿಕಿ  ಹಾಕ್ತಿತ್ತು. ಅಷ್ಟರ  ಮ್ಯಾಲ  ನಾವು ಕಾಯಾಸ  ಕಟ್ಟ ಬೇಕು  ಇದ್ದೀತು  ಹಿಂಗ ಹಿಂಗ ಅಂತ. ನಮ್ಮ ಅವ್ವಾಂದನೂ  ಧರತಿ  ಹಂಗೇ. ಅರ್ಧಾ ಮಾತು , ಪೂರಾ  ನಗಿ. ಐನಾಪೂರದಾಗ ,  ನಮ್ಮ ಅವ್ವಾನ  ತೌರಮನಿ, ಅಂದ್ರ ನಮ್ಮ  ಅಂಬಕ್ಕಜ್ಜಿ ಮನ್ಯಾಗ ಎಲ್ಲಾರೂ  ಸೂಟಿಯೊಳಗ  ಜಮಾಸ್ದೀವಂದ್ರ  ನಗಿ ಹಬ್ಬಾನ; ಆ  ಬಯಲ ಸೀಮಿಯ  ಬಯಲಿನ್ಹಂಗ  ತುದೀನ  ಇಲ್ಲದ  ನಗು, ಹರಟಿ, ಚ್ಯಾಷ್ಟಿ. ಈ ಮಾಮಲಾ  ಒಳಗ  ನಮ್ಮ ಸುಧಾ ಮಾವಶಿ  ಮತ್ತ ರಾಘೂ ಮಾಮಾ  ಅವರದೇ ಕಾಯಂ  ಒಂದನೇ ನಂಬರ್, ಅವರದs  ಜಾಗೀರ ಅದು.  ಆಮ್ಯಾಲ  ನಮ್ಮ ಅವ್ವಾ, ವಿಷ್ಣು ಮಾಮಾ,  ಪ್ರಭಾ  ಮಾವಶಿ ಮತ್ತ ಶೋಭಾ  ಮಾವಶಿ. ನಮ್ಮ ಸುಧಾ ಮಾವಶಿದು  ಒಂದ  ಧಾಟಿ  ಬ್ಯಾರೇನs. ಸಾವಕಾಶ  ಮಾತಾಡಿ, ಒಂಚೂರೂ ನಗದs, ನಕ್ರೂ  ಅಗದೀ ಮೆತ್ತಗ ನಕ್ಕೋತ  ಹೇಳಿ ಗಪ್ಪ ಕೂತ  ಬಿಡಾಕಿ. ಆಕಿ ಮಾತಿಗೆ  ಉಳದಾವ್ರು ಉಸರಗಟ್ಟಿ ನಕ್ರೂ ಊಂ ಹೂಂ! ಗಪ್ಪಚುಪ್ಆಕಿ  ಏನೂ ಮಾತಾಡೇ ಇಲ್ಲ ಅನಾವ್ರ ಹಂಗ!  ಆಕಿ ಚ್ಯಾಷ್ಟಿ ಕೆಲಸನೂ ಅಂಥಾವೇ. 

ಒಮ್ಮೆ  ನಮ್ಮ ಮಾಮಿ  ತಮ್ಮು ತೋಡೆ ತಗದು ಮಾವಶಿ ಕಡೆ  ಕೊಟ್ಟು ” ಸುಧಾ ವನ್ಸ, ಈ ತೋಡೆ ನಿಮ್ಮ ಕಡೆ  ಇರಲ್ರೆವಾ . ನಾಳೆ ತಗೋತೀನಿ ಅಂದ್ರ ಈ ನಮ್ಮ ಮಾವಶಿ ಬಾಯಿ ಹೂಂ  ಅಂದು ತಾ ಹಾಕೋಳಿಕ್ಕೆ ಹೋದ್ರ ಅವು ನಡಬರಕ ಅಡಕಾಶಿ ಕೂತು. ಅಂಥಾದ್ರಾಗೂ ನಗು! ” ಏ ರಾಘೂ, ಪತ್ತಾರ ದಾಮೂನ್ನ  ಕರಕೊಂಬಾರೋ ” ಅಂತ  ನಗೂದು. ಆಗ ರಾತ್ರಿ ಎರಡ ಹೊಡದಿತ್ತು! ನಾವೆಲ್ಲಾ ಅಂತೂ , ಬ್ಯಾಡ ಅದು .  ಸೊಂಟಾ ಹಿಡ್ಕೊಂಡು, ಹೊಟ್ಟಿ ಹಿಡ್ಕೊಂಡ ನಗೂ ನಮ್ಮ ಆ ನಗಿ ಅದೇ ಅಗದೀ ಆ ಸೀಮಿ ಬಯಲಿನ ಹಾಂಗನ ತುದಿ ಅಂಚು ಇಲ್ಲದs  ಹರೀತಿತ್ತು. 

ನಾವು ಈ ಹುಚ್ಚ ನಗಿ  ಗದ್ದಲದಾಗ  ಮುಣಗಿ ತೇಲಾಡಿದ್ದು ನಂಗ ಈಗ ಇನ್ನೂ ನಿನ್ನೆ – ಮೊನ್ನೆ ಅನೂ ಹಾಂಗದ. ಅದನ ಧೇನಿಸಿಕೋತ  ಕೂತಾಗ ಸಟ್ಟನ  ಏಕಾನ  ನೆನಪು ನುಗ್ಗಿ ಬರ್ತದ. ಮಗಾ, ಸೊಸಿ, ಮೊಮ್ಮಕ್ಕಳ  ಒಂದೊಂದ  ಸಣ್ಣ ಖುಷಿಗೆ ಇಷ್ಟ ಖುಷಿ  ಪಡ್ತಿದ್ಲು ನಮ್ಮ ಏಕಾ; ಮುಗಲ ಮೂರs ಬಟ್ಟ  ಅಕಿಗೆ  ಅವರ ಒಂದೊಂದ ಸಣ್ಣ ಪುಟ್ಟ  ಕೆಲಸಕ್ಕೂ. ಆದರ ಆ ಖುಷಿಯೊಳಗ  ಸುದ್ಧಾ  ಸಣ್ಣ ನಗಿ  ಮೂಡೂದು, ಕಣ್ಣ ಅರಳೂದು ನೋಡಿದ್ದ ನಾ; ಹೊರ್ತು  ಆ ಮುಕ್ತ ನಗಿ  ಏಕಾಂದು  ನಾ  ಒಮ್ಮೆನೂ  ನೋಡ್ಲೇ ಇಲ್ಲಾ. ಖರೇನ  ಅದಕ ಯಾವ  ಕಾರಣಾ ಕೊಡಬೇಕು ಅಂತ  ನಾ ಇಂದಿಗೂ  ನನ್ನಲ್ಲೇ ಪ್ರಶ್ನಿ ಹಾಕೊಂಡು ಉತ್ತರಾ ಹುಡಕ್ತೀನಿ; ಆ ಉತ್ರಾ ಸಿಗದೇ ಯಾಕ ಏನೋ ಕಣ್ಣ ಮಾತ್ರ ತುಂಬ್ತದ. ಬಹುಶಃ  ನನ್ನ ಮನಸು ಕಾಣದ್ದನ್ನು, ಒಪ್ಪದ್ದನ್ನ ಕಣ್ಣು ಕಾಣ್ತದೋ ಏನೋ!!

ಮರುಕ್ಷಣ  ಮಂಗ  ಮನಸು ಮತ್ತ ಐನಾಪೂರದ ಆ  ಗದ್ದಲದಾಗ  ಮುಣಗ್ತದ. ನಮ್ಮ ಅಂಬಕ್ಕಜ್ಜಿ  ಮಕ್ಕಳಂತೂ ಆತು; ಅಳಿಯಂದ್ರೂ  ಹಾಸ್ಯ ಪ್ರಿಯರೇ. ನಮ್ಮ ಸುಧಾ ಮಾವಶಿ ಗಂಡ  ದೇಸಾಯಿ ಕಾಕಾ ಅಂತೂ ಭಾರೀ ಚ್ಯಾಷ್ಟಿಯವರು. ನಮ್ಮ ಅಣ್ಣಾನೂ ಹಂಗೇ ಆದರ ಅದರ ಜೋಡಿ  ರಗಡೇ ಸಿಟ್ಟೂ ಇತ್ತು. ಇನ್ನ ಇಬ್ರು ಕಾಕಾ ಚೂರ ಸಮಾಧಾನ. ನಮ್ಮ ಅವ್ವಾ ತನ್ನ ವಾರಗಿ  ಗೆಳತ್ಯಾರದು, ಅಣ್ಣಾನ ಸಿಟ್ಟಿಂದು, ರಾತೋ ರಾತ್ರಿ  ಬಾಣಂತಿ ಹೆಂಡತಿ ಸಲುವಾಗಿ  ಅಕ್ಕಿ ಹೊತಗೊಂಡ  ನಡಕೋತ  ಬಂದಿದ್ದು; ಎಲ್ಲಾ ಭಾರೀ  ಛಂದ ರಸವತ್ತಾಗಿ ಹೇಳಾಕಿ.

ನಮ್ಮ ಏಕಾನ  ಅಕ್ಕ ಭಾಗವ್ವನೂ  ಅಲ್ಲೇ  ಐನಾಪೂರದಾಗೇ  ಇರತಿದ್ಲು. ಭಾರೀ ಜೋರ ಹೆಣ್ಮಗಳ  ಆಕಿ ; ಏಕಾನ ತದ್ವಿರುದ್ಧ – ರೂಪಾ, ಸ್ವಭಾವ  ಎರಡರಾಗೂ. ನಮ್ಮ ಏಕಾ ಅಷ್ಟ ಸಣ್ಣ ವಯದಾಗ  ಮಡಿ ಆಗೂದ ಬ್ಯಾಡ ಅಂತ ಹಟಾ ಹಿಡದಾಕಿ  ಆಕೀನೆ. ಅಲ್ಲೆ ಅಂಬಕ್ಕಜ್ಜಿ  ಮನಿ ಹತೀಕನ  ಆಕಿದೂ  ಮನಿ. ನಾವು ಐನಾಪೂರದಾಗ  ಎಲ್ಲಾ  ಮಂಡಳಿ  ಕೂಡಿದಾಗ ಆಕಿ  ಸುದ್ದಿ  ಬರೂದೆ. ನಮ್ಮ ಅವ್ವಾ ಥಂಡಾ ಥಂಡ  ಸುದ್ದಿ ಹೇಳಾಕಿ. 

ನಮ್ಮ  ಅವ್ವಾನ   ಗೆಳತ್ಯಾರು ಒಂದ  ಮೂರ್ನಾಲ್ಕು ಮಂದಿದು ಹೆಚ್ಚು ಕಡಿಮಿ  ಒಂದೇ  ವರ್ಷ ಮದವಿ  ಆಗಿತ್ತು.

ನಮ್ಮ ಅವ್ವಾಂದು, ಮಾಲಾಮಾಂಶಿದು, (ನಮ್ಮ ಅವ್ವಾನ ಕಾಕಾನ ಮಗಳದು), ದಮಯಂತಿ ಮಾವಶಿದು, ಡಾಕ್ಟರ್ ಮಗಳು ತಾಯಿ   ಮಾವಶಿದು. ಇವರು ನಾಲ್ಕೂ ಮಂದಿ ಬಲೆ  ಜತ್ತ ಇರಾವ್ರು. ಮದವಿ ಆದ ಹೊಸದರಾಗ,  ಹೊಸಾ ಹುರಪಿನ್ಯಾಗ  ಗೆಳತ್ಯಾರದು  ನಾನಾ ನಮೂನೀ ಸುದ್ದಿ ಹರಟಿ  ಇರೂದ  ಸಹಜೀಕ  ಅದ.  ಹಂಗ ಒಮ್ಮೆ  ಎಲ್ಲಾರೂ  ಕೂಡಿದಾಗ  ಅಲ್ಲೆ ನಮ್ಮ ಐನಾಪೂರ ಮನಿ  ದೊಡ್ಡ ಪಡಸಾಲ್ಯಾಗ ಒಂದ ಬಾಜೂ ಕೂತ ನಡಸ್ಯಾರ  ತಮ್ಮ  ಮಾತು ಕತಿ. ಜಬರ್ದಸ್ತ್  ಹರಟಿ  ನಡದದ. ತಮ್ಮ ತಬ್ಬೇತದ್ದು,  ನಾಜೂಕಪಣದು, ತಮ್ಮ  ಗಂಡಂದ್ರು ಕಾಳಜಿ ತಗೋಳೋದು; ಹೀಂಗೇ. ಆ ಪಡಸಾಲಿ ಎಲ್. ಶೇಪನ್ಯಾಗ  ಇತ್ತು. ಅವಾಢವಿ ಇದ್ದ ಆ ಪಡಸಾಲ್ಯಾಗ ಇನ್ನೊಂದ ಕಡೆ ಅಂಬಕ್ಕಜ್ಜಿ, ಭಾಗವ್ವ  ಏನೋ  ಹತ್ತಿ- ಬತ್ತಿ  ನಡಸಿದ್ರು. ಭಾಗವ್ವನ  ಕಿವಿ  ಹಾವಿನ ಕಿವಿ; ಈ ಗೆಳತ್ಯಾರ  ಹರಟಿ ಕಡೇನ ಇದ್ದು. ಅವರ ತಬ್ಬೇತದ ಸುದ್ದಿ  ಕೇಳಿ  ಭಾಗವ್ವ, ನಮ್ಮ  ಅಜ್ಜಿಗೆ –  “ನೋಡ್ರೆವಾ  ಇಂದ್ರಾಬಾಯರs  ಈಗಿನ  ಪೋರಿಗೋಳ  ಏನ   ಶಾಣ್ಯಾರ್ರೆವಾ!. ಚೂರ  ಏನರೆ ಹೆಚ್ಚು ಕಡಿಮಿ  ಆತಂದ್ರ ಪಟ್ಟನ  ತಿಳೀತದ  ಹೀಂಗದ  ಹಕೀಕತ್ತು ಅಂತ.  ನಮಗೇನ್ರೀ,  ಮಹಾ  ಧಡ್ಡ  ಖೋಡಿಗೋಳ   ನಾವು. ಅಲ್ಲಿ ಹೊರಗ  ಕಟ್ಲಿಕ್ಹತ್ತಿದ್ರೂ  ನೋಡಿ ,  ಅಯ್ಯ ಯಾರದೋ ಏನೋ ಬಿಡ ‌‌ ಅನಾವ್ರು ” ಅಂತ  ಅಂದ್ಲಂತ. ಪಾಪ, ಇವರೆಲ್ಲಾ  ನಾಚ್ಕೊಂಡ  ಎದ್ದ ಒಳಗ ಓಡಿದ್ರಂತ. ನಮ್ಮ ಅಣ್ಣಾನ  ಅಬಚಿ ಅಂದ್ರ  ಮಾವಶಿ  ಬ್ಯಾರೆ ಆಕಿ. ನಾವೂ ಎಲ್ಲಾ  ಅಬಚಿನs  ಅಂತಿದ್ವಿ  ಭಾಗವ್ವಗ.” ಒಳ್ಳೇ ಭರ್ಜರಿ  ರಂಗೇರಿತ್ತವಾ ನಮ್ಮ ಹರಟಿ. ಆ ಗಂಟ ಮಾರಿ  ಭಾಗವ್ವ ಎಲ್ಲಾ ಹದಗೆಡಿಸಿ ಬಿಟ್ಲು” ಅಂತ ಅವ್ವಾ ಅಂದ್ರ, ನಮ್ಮ ಸುಧಾ ಮಾವಶಿ ಗಪ್ಪ ಕೂಡ ಬೇಕಿಲ್ಲೋ; ” ಬರೇ ಗಂಟ ಮಾರಿ  ಯಾಕಂತಿ  ಕುಸುಮಾ? ಕರೀಮಾರಿನೂ ಅನ್ನು” ಅಂತ ಅಂದ್ಲು ಅಂದ್ರ ಆತು; ನಾವು ಚಿಳ್ಳೆಮಿಳ್ಯಾಗೋಳೆಲ್ಲಾ  ಹೋ ಅಂತ ” ಕರಿ ಮಾರಿ ಭಾಗಿ, ಗಂಟ ಮಾರಿ ಭಾಗವ್ವ” ಅಂತ ಕುಣ್ಯಾವ್ರು. ನಮ್ಮ ಅಂಬಕ್ಕಜ್ಜಿ , ” ಏ ಬಾಳಾಗೋಳ್ರ್ಯಾ ಹಂಗೆಲ್ಲಾ ಅನಬಾರದು; ಅದೂ ಇದ್ದೂರಿನಾವ್ರದು ಹಂಗೆಲ್ಲಾ ಮಾತಾಡ ಬಾರದು. ಯಾವಾಗ ಹೆಂಗ  ಟಪಕಾಸ್ತಾರ  ತಿಳ್ಯೂದಿಲ್ಲ”   ಅಂತ ಹೇಳಿ ತಾನೂ ನಗ್ತಿದ್ಲು.

ಅವ್ವಾ  ಹೇಳೂ ಸುದ್ದಿ  ಮುಗೀನತಿದ್ದಿಲ್ಲಾ. ಅಣ್ಣಾಂದ ಒಂದು  ಮಜಾಶೀರ  ಸುದ್ದಿ  ಹೇಳ್ತಿದ್ಲು. ನಮ್ಮ ಅವ್ವಾ  ಒಮ್ಮೆ ಐನಾಪೂರಕ  ಬಂದಿದ್ಲು. ನಾನು, ಪ್ರಕಾಶ  ಇಬ್ರೇ  ಇದ್ವಿ  ಆಗ. ಬಂದು ಒಂದ ಮೂರ  ವಾರ ಆಗಿತ್ತಂತ. ಅಣ್ಣಾ ಹುಕ್ಕೇರಿಗೆ  ಕರಕೊಂಡ  ಹೋಗ್ಲಿಕ್ಕ  ಬಂದ್ರಂತ. ನಮ್ಮ ಅಂಬಕ್ಕಜ್ಜಿಗೆ  ಮನಿಗೆ ಬಂದ  ಮಕ್ಕಳು, ಮೊಮ್ಮಕ್ಕಳು  ಹೋಗಬಾರದು. ಹೊಂಟ್ರಂದ್ರ, “ಬಾಳಾ, ಇನ್ನೊಂದೆಂಟ  ದಿನಾ  ನಿಂದರ್ರೆ; ನಾಳೆ, ನಾಡದ ಹೋಗೀರಂತ ” ಅಂತ ಅನಾಕಿ. ಆ ಸರ್ತೆನೂ  ಹಂಗೇ ಆತು! ಅವ್ವಾನ್ನ  ಬೆನ್ನ ಹತ್ತಿದ್ಲಂತ . ” ಕುಶಮಿ,  ಹೇಳs  ಅಣ್ಣಾಸಾಬಗ. ಇನೊಂದೆಂಟ  ದಿನಾ ಇದ್ದ ಬರ್ತಿನಂತ  ಹೇಳs ” ಅಂತ. ನಮ್ಮ ಅಣ್ಣಾನ  ಸಿಟ್ಟಿಗೆ ಅಂಜತಿದ್ಲು  ಅಂಬಕ್ಕಜ್ಜಿ.  ಅದಕs  ಅವ್ವಾನ  ಬೆನ್ನ ಹತ್ತತಿದ್ಲು. ನಮ್ಮ  ರಾಘೂಮಾಮಾಗ  ಕಾಲೇಜೇನರೆ  ಸೂಟಿ ಇರಬೇಕ  ಆಗ; ಅಲ್ಲೇ ಇದ್ದ. ಅಂವಾ ಹೇಳಿದಂತ ಅಂಬಕ್ಕಜ್ಜಿಗೆ -” ಅಂಬಕ್ಕಾ  ನಾ ಹೇಳ್ತೀನ ಕೇಳ  ಇಲ್ಲೆ.( ನಮ್ಮ ಅಂಬಕ್ಕಜ್ಜಿಗೆ  ಎಲ್ಲಾ ಮಕ್ಕಳೂ ಅಂಬಕ್ಕನs  ಅಂತಿದ್ರು)ನೀ  ಮೊನ್ನೆ  ಮೆಂತೆ ಮೆಣಸಿನಕಾಯಿ ಮಾಡೀಯಲಾ ( ಬಾಳಕ),  ಅವನ್ನ  ಈ ಹೊತ್ತ  ಮಧ್ಯಾಹ್ನದ  ಊಟಕ್ಕ ಛಂದ ಹಂಗ  ಕರದ ಇಡು. ಅಣ್ಣಾಸಾಹೇಬಗ ಬಿಸಿ ಬಿಸಿ ಅನ್ನ, ಮತ್ತೊಂದಿಷ್ಟ ತುಪ್ಪಾ, ಮೆಂಥ್ಯಹಿಟ್ಟು ಹಾಕಿ ಬಾಡಿಸಿಕೊಳ್ಳಿಕ್ಕೆ  ಕರದಿಟ್ಟ  ಮೆಂತ್ಯ ಮೆಣಸಿನ  ಕಾಯಿ   ಹಾಕು. ಬಿಸಿ ಅನ್ನದ ತುತ್ತ ಬಾಯಾಗ ಹಾಕೊಂಡ ಮೆಣಸಿನಕಾಯಿ  ಕಡದಿರತಾನ  ನೋಡು, ಆಗ ನೀ , ” ಅಣ್ಣಾಸಾಹೇಬಾ ಕುಶಮಿನ್ನ  ಇನ್ನೊಂದ ಎಂಟ ದಿನಾ ಬಿಟ್ಟ ಹೋಗೋ”    ಅಂತ ಕೇಳು. ಆಗ ಅಂವ ಏನ  ಅಂತಾನ ನೋಡು ಹಂಗ ಮಾಡಾಕೆಂತ  ಅಂಬಕ್ಕಾ.”ಅಂತ  ಅಂದಾ. ನಮ್ಮ ಅಣ್ಣಾಗ  ಅಜೀಬಾತ  ಖಾರ  ಆಗ್ತಿದ್ದಿಲ್ಲ. ಹಸಿಮೆಣಸಿನ ಕಾಯಿ ನೋಡಿದ್ರನs  ಖಾರ ಹತ್ತಿತ್ತು ಅವರಿಗೆ. ಸಿಟ್ಟೂ ಬರ್ತಿತ್ತು. ಅಂಬಕ್ಕಜ್ಜಿ  ಮಾಡಿದ  ಈ ಮೆಂತೆ ಮೆಣಸಿನ ಕಾಯಿ ಅಂತೂ ಬ್ರಹ್ಮಾಂಡ  ಖಾರ ಇದ್ದು. ಅದಕ ಮಾಮಾ  ಹಂಗ ಹೇಳ್ಯಾನ. ( ಅಣ್ಣಾನ ವೈವಾಟ  ಮೊದಲಿಂದನs  ಇತ್ತಲಾ; ಅದಕ ಎಲ್ಲಾರೂ ಅಗದಿ  ಸಲಿಗೆಲೆ  ಮಾತಾಡ್ತಿದ್ರು). ಇಷ್ಟ ಹೇಳಿ ತಾ ನಕ್ಕೋತ  ಹೊರಗ  ಹೋದಾ ನಮ್ಮ ಮಾಮಾ. ಇಲ್ಲೆ  ಅವ್ವಾ – ಮಗಳು ಮಾರಿ ಮಾರಿ ನೋಡಿ ನಕ್ಕ ಸುಮ್ಮನಾದ್ರಂತ. ಮತ್ತೇನದ; ಗೊತ್ತಿದ್ದದ್ದೇ. ಅಣ್ಣಾ  ಅವ್ವಾನ್ನ ಹುಕ್ಕೇರಿಗೆ ಕರಕೊಂಡ ಬಂದ್ರು.

ನಮ್ಮ ಅಣ್ಣಾಗ ಅವ್ವಾ ಅಂದ್ರ  ತಮ್ಮ ಜೀವ, ಅದರಕಿಂತಾ ಒಂದ ತೂಕ  ಹೆಚ್ಚs  ಆಗಿದ್ಲು. ಆ ಬಾಬ್ತಿಯೊಳಗ  ನಮ್ಮ ಅವ್ವಾ ಭಾಳ ನಸೀಬವಾನ ಇದ್ಲು.  ನಾ ಹುಟ್ಟಿದ್ದೂ  ಐನಾಪೂರದಾಗೇ. ಅಂಬಕ್ಕಜ್ಜಿ  ಬಾಣಂತನ  ಜೋರದಾರ  ನಡದಿತ್ತು. ನಮ್ಮ ಅವ್ವಾಗ  ಅಂಬೆ ಮೊಹರಿ  ಅಕ್ಕಿ ಭಾಳ ಪಸಂತ  ಬೀಳ್ತಿದ್ದು. ಐನಾಪೂರದಾಗ  ಅವು ಸಿಗ್ತಿದ್ದಿಲ್ಲಾ.  ಅದಕ ಅಣ್ಣಾ  ಸಂಕೇಶ್ವರದ ಹತ್ರದ ಆಜರಾಕ್ಕ  ಹೋಗಿ ಅಲ್ಲಿಂದ  ಅಕ್ಕಿ ತಗೊಂಡ ಬಂದು ಐನಾಪೂರಕ   ಹೋಗಿ ಕೊಟ್ಟ ಬರ್ತಿದ್ರು, ಅವ್ವಾ  ಬಾಣಂತಿ ಇದ್ದಾಗ. ಹಿಂಗೇ ಒಮ್ಮೆ ಅಕ್ಕಿ ತಗೊಂಡ  ಹೊಂಟಾರ. ಆಗ ಕುಡಚಿ ಸ್ಟೇಷನ್ ಗೆ ಇಳದು  ಬಸ್  ಹಿಡ್ಕೊಂಡ  ಐನಾಪೂರಕ  ಹೋಗಬೇಕಾಗುತ್ತಿತ್ತು. ಆಗ ಈ ಬಸ್ಸು ಗಿಸ್ಸು    ಹೀಂಗ  ಇಷ್ಟ ಛಲೋ ಇರಲಿಲ್ಲ. ಯಾವಾಗರೇ  ಒಂದು ಟ್ರೇನ  ಬರ್ತಿತ್ತು; ಅದಕ ಬಸ್ಸ  ಇದ್ರ  ಇತ್ತು ; ನಕ್ಕಿ ಇರ್ತದ  ಅಂತ ಇದ್ದಿದ್ದಿಲ್ಲ. ಅದಕs  ಬರೂದ  ಮೊದಲs  ಗೊತ್ತಿದ್ರ  ಎತ್ತಿನ ಗಾಡಿ  ಸ್ಟೇಷನ್ ಗೆ  ಕಳಸ್ತಿದ್ರು  ನಮ್ಮ ಮುತ್ತ್ಯಾ. ಆ ದಿನ  ರೇಲ್ವೆನೂ  ತಡಾ  ಆಗಿ  ಬಂತು. ಬಸ್ಸಂತೂ ಇದ್ದೇ ಇಲ್ಲ. ಮನ್ಯಾಗೂ  ಗೊತ್ತಿದ್ದಿದ್ದಿಲ್ಲ  ಬರೂದು. ಬರೋಬ್ಬರಿ  ನಡರಾತ್ರಿ; ಕೆಟ್ಟ ಥಂಡಿ  ಬ್ಯಾರೆ. ಮಾಡೂದೇನ  ಇನ್ನ! ನಮ್ಮ ಅಣ್ಣಾ ಹೇಳ್ತಿದ್ರು-  ”  ಒಂದೆರಡ  ನಿಮಿಷ ನಿಂತ  ನೋಡಿ ನನಗ ನಾ ಹೇಳ್ಕೊಂಡೆ ನಡೀ  ಅಣ್ಣಪ್ಪಾ . ಏನ ನಿಂತಿ ಹಂಗ ಅಂತ  ಹೇಳಿ ಅಕ್ಕಿ ಚೀಲಾ ಹೆಗಲ ಮ್ಯಾಲ ಹೊತಗೊಂಡ ಕತ್ತಲದಾಗ  ನಡದ ಬಿಟ್ಟೆ” ಅಂತ. ನಮ್ಮ ಅಣ್ಣಾ ಅಂತೂ ಆತು; ಖರೇ ನಮ್ಮ ಅವ್ವಾನ  ಬಾಯಾಗನs  ಈ ಸುದ್ದಿ ಕೇಳಬೇಕು. ಅದರ ಮಜಾನs  ಬ್ಯಾರೆ. ಹಂಗs  ಆ ಜಮಾನಾನs  ಬ್ಯಾರೆ.

ಹಿಂಗ  ನಮ್ಮ ಅಣ್ಣಾಗ ಎಲ್ಲಾ   ಆಗಿದ್ದ   ಅವ್ವಾಗ   ಧುತ್ತಂತ  ಅದೂ  ಏಕಾ  ಹೋದ ಎರಡs  ಎರಡ  ವರ್ಷಕ್ಕ  ಕ್ಯಾನ್ಸರ್  ಆದದ್ದು  ಅಣ್ಣಾಗ  ತಗೊಳೋದು  ಭಾಳ  ತ್ರಾಸ ಆತು. ಮಕ್ಕಳೆಲ್ಲಾ ದೊಡ್ಡಾವರಾಗಿದ್ರು ಅಂಬೂದು  ಕೈಗುಟಿಗೆ  ಬಂದಿದ್ರು  ಅಂಬೂದು  ದೊಡ್ಡ  ಆಸರ ಆಗಿತ್ತು ಅಣ್ಣಾಗ. ಅವ್ವಾಗ  ಆಗ 58 – 59 ರ ನಡುವಿನ  ವಯಸ್ಸು. ಸುರು ಆತು ಆ ಹಾಸ್ಪಿಟಲ್ ನಿಂದ  ಈ ಹಾಸ್ಪಿಟಲ್; ಅಲ್ಲೊಂದ ಆಪರೇಷನ್, ಇಲ್ಲೊಂದು; ಖಿಮೋ ಥೆರಪಿ, ರೇಡಿಯೇಷನ್ ಅಂತ. ಅವ್ವಾನ  ನೋವು, ನಳ್ಳಾಟಾ ನೋಡ್ಲಿಕ್ಕ ಆಗ್ತಿದ್ದಿಲ್ಲ; ಅಣ್ಣಾ  ಸಂಕಟಬಡೂದು  ನೋಡ್ಲಿಕ್ಕ ಆಗ್ತಿದ್ದಿಲ್ಲ.

ನಮ್ಮ  ಅಣ್ಣಾನ  ಹಣೇಬಾರದಾಗ  ಭರೇ  ಕಷ್ಟಾನs  ಬರದಾನೇನಪಾ  ಅಂವಾ ಅಂತ   ಅನಸೂದು  ಒಮ್ಮೊಮ್ಮೆ. ಸಣ್ಣಾವ್ರಿದ್ದಾಗ  ಒಂಥರಾ  ಆತು. ಮುಂದ  ಮದವಿ, ಮಕ್ಕಳು ಸಂಸಾರ  ಅಂತ. ಅದನ  ಕಷ್ಟಾ ಅಂತ ಅನೂದಿಲ್ಲ. ಆದ್ರ  ಜವಾಬ್ದಾರಿ ಭಾಳ ದೊಡ್ಡದು. ಜಂಜಾಟಾ,  ಹರತಾಟಕಾ ಕೂಡೇ  ನಡದಿತ್ತು. ಈಗ  ಎಲ್ಲಾ ಜವಾಬ್ದಾರಿ  ಮುಗದು  ನಿರಾಳ ಆತು;  ಉಸರ ಎಳಕೊಂಡು  ಹಗುರಾಗಿ ಇರಬೇಕ ಅನೂದ್ರಾಗ   ದೊಡ್ಡದs  ತಂದಿಟ್ಟ ಬಿಟ್ಟಾ ಆ ದೇವರು. ಈ ತ್ರಾಸಗಳ  ಜೋಡಿ  ಗುದ್ದಾಡ್ಕೋತ ಹೊಂಡೂದ  ಗೊತ್ತs  ಇತ್ತು ಅಣ್ಣಾಗ. ಸುರು  ಆತು  ಹಿಂಗ  ಇನ್ನೊಂದ  ಮಜಲು ಜೀವನದ್ದು. ಅಣ್ಣಾ ಅವ್ವಾನ  ಆರೈಕಿ  ಇಷ್ಟ ಪರಿ ಮಾಡ್ತಿದ್ರಲಾ ನಾ ಅಂತೂ  ಸೇವಾನs  ಅಂತೀನಿ,  ಕಣ್ಣ ತುಂಬಿ ಬರತಿದ್ದು; ಅಭಿಮಾನ ಅನಸ್ತಿತ್ತು. ಅವ್ವಾ ನಸೀಬವಾನ  ಇದ್ದಾಳ ಅಂತ ಒಮ್ಮೊಮ್ಮೆ ಅನಿಸಿ ಮರುಗಳಿಗ್ಗೆ  ತಳಮಳಸೂದು  ಜೀವಾ; ಹೀಂಗ ಇರದs  ಒಂದ  ನಾಕ ದಿನಾ ಆ ಮ್ಯಾಲಿನವ  ಆರಾಮ ಇಟ್ಟಿದ್ರ  ಬ್ಯಾರೇನ ಇರ್ತಿತ್ತು  ಅಂತ ಅನಸ್ತಿತ್ತು. ಖರೇ ಯಾರ ಕೈಯಾಗ ಏನ ಅದ!

ಅವ್ವಾಂದ  ಹಿಂಗ  ನಡದಾಗ  ಇನ್ನೊಂದು ಭಾರೀ  ದೊಡ್ಡ  ಅವಘಡ ಆತು. ನಮ್ಮ ಸುಧಾ ಮಾವಶಿ  ಅಚಾನಕ್ ಆಗಿ  ಹಾರ್ಟ್ ಅಟ್ಯಾಕ್ ಆಗಿ  ಹೋಗಿ  ಬಿಟ್ಲು. 1991  ಡಿಸೆಂಬರ್ ದಾಗ  ನಮ್ಮ  ಮುತ್ತ್ಯಾ ತೀರಕೊಂಡದ್ದು. ಆಗs  ನಮ್ಮ ಅವ್ಯಾನ  ಬ್ಯಾನಿದೂ  ಗೊತ್ತಾತು.ಮುಂದ  1993 ಮಾರ್ಚ್ ದಾಗ  ಸುಧಾ ಮಾವಶಿ ಹೋದದ್ದು. ಆಕಿ  ಆಗ  ಬರೋಬ್ಬರಿ 53 ವರ್ಷದಾಕಿ  ಇದ್ಲು. ನಾವು  ಆಗ ಧಾರವಾಡಕ್ಕ  ಬಂದಿದ್ವಿ. ನನಗ  ಯಾಕೋ  ಅನಿಸ್ತ ಆ ಹೊತ್ತ – ಅಂಬಕ್ಕಜ್ಜಿ  ಹೆಣ್ಣು ಮಕ್ಕಳ  ಆಯುಷ್ಯನ  ಕಡಿಮಿ  ಏನ ಮತ್ತ ಅಂತ. ಅವ್ವಾನ  ಪರಿಸ್ಥಿತಿ  ಇಷ್ಟ ನಾಜೂಕ  ಆಗಿತ್ತಲಾ  ಆಗ; ಮಾವಶಿ  ತೀರಿಕೊಂಡ ಸುದ್ದಿ  ಹೆಂಗ  ತಗೋತಾಳೋ  ಆಕಿ  ಅಂತ  ಅಂಜಿಕೋತನs  ಹೇಳಿದ್ರು  ಅಣ್ಣಾ ಆಕಿಗೆ. ಒಂಚೂರ  ಖರೇನೋ ಸುಳ್ಳೋ ಅನೂ ಹಾಂಗ ನೋಡಿ  ಆಮ್ಯಾಲ ಒಂದು  ದೊಡ್ಡ  ಉಸಲ  ಎಳಕೊಂಡು ನಮ್ಮ ಅವ್ವಾ, ” ನಮ್ಮ  ಸುಧಿ ಹೆಂತಾ ಪುಣ್ಯವಂತಳು! ನಕ್ಕೋತ  ನಗಿಸಿಗೋತ  ಯಾರಿಗ ತಿಳಿತು ಇಲ್ಲ ಅನೂದ್ರಾಗ, ಕೂತಾಕಿ ಎದ್ದ ಹೋದಾಂಗ  ಹೋಗಿ ಬಿಟ್ಲು” ಅಂತ  ಅಂದ್ಲಂತ. ಅಳೂ  ಅಷ್ಟ ತಾಕತ್ತ  ಇಲ್ಲಾ; ಅಳು  ತಡಕೋಳು  ತಾಕತ್ತೂ ಇದ್ದಿದ್ದಿಲ್ಲಾ. ಇದೊಂದ  ಆದ್ರ, ಇನ್ನೊಂದ  ಅಂದ್ರ ಆಗ  ನಮ್ಮ ಅಂಬಕ್ಕಜ್ಜಿ  ಇದ್ಲು ಇನ್ನೂ; ಮಕ್ಕಳ ಕಡೆ  ಮುಂಬೈ ಯೊಳಗ  ಇದ್ಲು. ಆಕಿಗೆ  ಬೆಂಗಳೂರಿಗ  ಬಂದು  ಮಗಳನ  ನೋಡಿ  ಮಾತಾಡಿ  ಹೋಗೂ ಸ್ವಾಧೀನ  ಇರಲಿಲ್ಲ; ಅವ್ವಾನ  ಪರಿಸ್ಥಿತಿ ಅಂತೂ ಹಿಂಗ. ಮಾತಾಡು  ಹಂಗೇ  ಇದ್ದಿದ್ದಿಲ್ಲ. ಹಿಂಗಾಗಿ  ಅವ್ವಾ ಮತ್ತ  ಅಂಬಕ್ಕಜ್ಜಿ  ಇಬ್ರೂ, ಮಾವಶಿ ಹೋದಾಗ ಫೋನ್  ಮ್ಯಾಲ ಮಾತಾಡಿ  ಗೋಳಾಡ್ಯಾರ. ಇಷ್ಟೇ ಬರೀಲಿಕ್ಕ  ಆಗ್ತದ  ನಂಗ. ಭಾಳ ಅಂದ್ರ ಭಾಳ  ವಿಚಿತ್ರ  ಪರಿಸ್ಥಿತಿ  ಅದು.

ನಮ್ಮ ಅವ್ವಾನ  ನಾಲ್ಕೂ ಮಂದಿ ಗಂಡಸ ಮಕ್ಕಳು ,  ಅಂದ್ರ ನನ್ನ ನಾಲ್ಕೂ ಮಂದಿ ಅಣ್ಣ ತಮ್ಮಂದಿರು  ಆಗಲೂ, ಈಗಲೂ ಬೆಂಗಳೂರಾಗೇ ಇದ್ದಾರ. ಎಲ್ಲಾ ಮಕ್ಕಳು, ಸೊಸೆಂದ್ರು  ಆಕಿನ್ನ  ಕಣ್ಣಾಗ  ಹಾಕಿ  ಮುಚ್ಕೊಂಡ  ಹಾಂಗ  ಅಷ್ಟ ಕಾಳಜಿಲೆ  ಕಾಯ್ತಿದ್ರು. ಅಣ್ಣಾ ಅಂತೂ  ಅಸರಂತ ಆಕಿ  ಬಾಜೂಕs  ಇದ್ಧಹಾಂಗ ಲೆಕ್ಕ. ನಾನು, ವಿದ್ಯಾನೂ ಬಂದು ಹೋಗಿ  ಮಾಡ್ತಿದ್ವಿ. ಒಂಚೂರ ಆರಾಮ ಅನಿಸಿದ್ರ  ಅದ ಮಾಡೂದು, ಇದ ಮಾಡೂದು ಅಂತ ಸುರೂನೆ  ನಮ್ಮ ಅವ್ವಾಂದು.ಮಕ್ಳಿಗೆ, ಸೊಸೆಂದ್ರಿಗೆ, ಮೊಮ್ಮಕ್ಕಳಿಗೆ ಎಷ್ಟ ಮಾಡಿದ್ರೂ ಕಡಿಮಿನs  ಅಕಿಗೆ. ಆಕಿ ಹಂಗ ಓಡಾಡಿಕೋತ  ಒಮ್ಮೆ ‌‌‌‌‌‌‌ವಾಕರ ,   ಒಮ್ಮೆ ಆಸರಕ್ಕ ಕೋಲು ಬೇಕಾಗ್ತಿತ್ತು . ಅದನ್ನ ತಗೊಂಡು ಓಡಾಡಕೋತ  ,  ಆಕಿ  ಮಾಡೂದ ನೋಡಿದ್ರ, ಎದಿ ತುಂಬಿ  ಬರೂದು, ಹುಕ್ಕೇರಿ ಮನಿ, ಆ ದಿನಾ ನೆನಪಿಗೆ  ಬರೂವು.

ನಮ್ಮ ಅವ್ವಾ  ಸೊಸಿ  ಆಗಿ ಹೆಂಗ ಸಮರ್ಥ ಆಗಿ ನಿಭಾಯಿಸಿದ್ಲೋ ಹಂಗ  ಅತ್ತಿ ಆಗೀನೂ ಅಗದೀ ವ್ಯವಸ್ಥಿತ ನಿಭಾಯಿಸಿದ್ಲು ಅಂತ  ನಾ  ಹೇಳಿದ್ದು, ನನಗs  ಅಗದೀ  ಛಂದ ಪಟಾಸೆದ    ಪಕ್ಕಾ  ಖರೇ  ಅಂತ. ಅವ್ವಾಗ  ತನ್ನ ಹೆಣ್ಮಕ್ಳು , ಸೊಸೆಯಂದಿರ  ನಡುವೆ  ಭೇದನs  ಇದ್ದಿದ್ದಿಲ್ಲಾ. ನನ್ನ  ಮದವಿ  ಆದ ಮ್ಯಾಲ  ನಮ್ಮಣ್ಣ  ಪ್ರಕಾಶನ ಮದವಿ  ಆತು. ನಮ್ಮ ಅವ್ವಾಗ  ಮೊದಲ ಸೊಸಿ ಬಂದದ್ದು  1980 ರಾಗ.  1988ರಷ್ಟೊತ್ತಿಗಂದ್ರ  ಎಲ್ಲಾ  ಮಕ್ಕಳದೂ  ಮದವಿ  ಆಗಿ ಮನಿ  ತುಂಬ ಮೊಮ್ಮಕ್ಕಳು, ಇಬ್ಬರು ಅಳೆಂದ್ರು, ನಾಕ  ಮಂದಿ ಸೊಸೆಂದ್ರು  ಬಂದಿದ್ರು. ಯಾವಾಗಲೂ ಮನಿ  ತುಂಬಿ  ನಗಿ  ತುಳಕ್ತಿತ್ತು. ನಮ್ಮ ಅವ್ವಾ  ಸೊಸೆಂದ್ರನ್ನ   ಭಾಳ  ಮಾನಸ್ತಿದ್ಲು.  ನನ್ನ  ತಮ್ಮ ಆನಂದನ  ಮದವಿ  ಮುಂದಿನ  ಸುದ್ದಿ  ಇದು. ಹೆಣ್ಣಿನ  ಬೀಗರು ನಮ್ಮ ಅವ್ವಾಗ  ಮತ್ತ  ನಾವು ಇಬ್ರೂ  ಅಕ್ಕ- ತಂಗೀರಿಗೆ  ಸೀರಿ  ಕೊಡ್ತೀವಿ ಅಂತ ಹೇಳಿದ್ರು; ಮಾನಪಾನ ಅಂತ. ವೈನೀದ  ಮಾತs ಬರಲಿಲ್ಲ  ಅದರಾಗ.   ನಮ್ಮ ಅವ್ವಾಗ  ಇತ್ತಂಡ ಆತ ಈಗ. ಒಬ್ಬರಿಗೆ ಇಂಥಾದ  ಮಾಡ್ರಿ  ಅಂತ  ಹೇಳೋವಾಕಿ  ಅಲ್ಲ ನಮ್ಮವ್ವ. ಈಗ ನಾವs  ಅವ್ವಾ – ಮಕ್ಕಳಷ್ಟೇ  ಬೀಗರು ಕೊಡೋ ಸೀರಿ  ತಗೊಂಡ  ಕೂತ್ರ  ಹೆಂಗ; ಅದೇನ  ಬರೋಬ್ಬರಿ ಅಲ್ಲ ಅಂಬೂದ  ಆಕಿ ಲೆಕ್ಕಾಚಾರ. ತಾ ಕೊಟ್ರ  ಬೀಗರು  ಕೊಟ್ಟಹಾಂಗ ಆಗ್ತದ ಏನು? ಕಡೀಕ ಅಳದೂ  ಸುರದೂ   ನನಗ  ಹೇಳಿದ್ಲು –  ”  ಅಕ್ಕವ್ವಾ  ಇದ ಬಲೆ  ಧರ್ಮ ಸೂಕ್ಷ್ಮ ನೋಡ. ವಿದ್ಯಾ  ಕಳಸಗಿತ್ತಿ ಇದ್ದಾಳ. ಆಕೀಗೆ  ಮತ್ತ ನಿನಗ ಕೊಡೂ  ಸೀರಿ  ಸೀಮಾಗ  ಕೊಡವಲ್ರ್ಯಾಕ. ನಾ ಹಂಗs  ಬೀಗರಿಗೆ  ಹೇಳಿ ಬಿಡ್ಲಿ  ಅಕ್ಕವ್ವಾ?” ಅಂದ್ಲು. ಹೂಂ ಅಂದೆ  ನಾ. ಅದೇ ವಾಜ್ಮಿ  ಅನಿಸ್ತ ನಂಗೂ. ನಮ್ಮ ಅವ್ವಾನ  ಈ  ಸೂಕ್ಷ್ಮ ವಿಚಾರ  ಮಾಡೋ  ರೀತಿ, ಪಟಾಸೂ ಹಂಗ  ಹೇಳೂದು  ಎಲ್ಲಾ  ನನಗ ಈಗ  ನನ್ನ  ಜೀವನದ ಈ  ಘಟ್ಟದಾಗ  ಭಾಳ ಸಹಾಯಕ  ಆಗ್ಯಾವ. ಒಂದ ಕಡೆ  ಅವ್ವಾ, ಒಂದ ಕಡೆ  ಏಕಾ ನಿಂತು ನಡಸೂ ಹಾಂಗ  ಅನಸ್ತದ  ನಂಗ. ಒಳ್ಳೇ  ಸಂಸ್ಕಾರಕ್ಕೂ, ಡಿಗ್ರಿಗೂ  ಯಾವುದೇ ಸಂಬಂಧ  ಇಲ್ಲಾ  ಅನಸ್ತದ. ಎಷ್ಟ ಸರಳ ಲೆಕ್ಕ  ನಮ್ಮ ಅವ್ವಾಂದು  ಸೊಸೆಂದ್ರ ವಿಚಾರದಾಗ  ಅಂತ  ಹೆಮ್ಮೆ. ಇಂದಿಗೂ ಆಕಿ ಸೊಸೆಂದ್ರು ” ಅವ್ವಾ ನಮಗ ಅತ್ತಿ  ಅಂತ ಕಲ್ಪನಾ ಸುದ್ಧಾ ಬರೂದಿಲ್ಲ” ಅನೂದ ಕೇಳಿ  ನನ್ನ ಕಣ್ಣು ತುಂಬಿ  ಬರತಾವ. 

ನನಗ ಯಾವಾಗಲೂ ಕಾಡೂ  ಪ್ರಶ್ನೆ  ಒಂದ  ಅಂದ್ರ,  ಈ  ಬದುಕಿನ  ಅರ್ಥರೇ  ಏನು ಕಡೀಕ  ಅಂತ. ಹಿಂಗ  ನಡದ್ರ  ಹೆಂಗ; ಹಂಗ ಮಾಡಿದ್ರ  ತಪ್ಪಾದೀತು  ಅನಕೋತ   ಹೆಜ್ಜಿ  ಎಣಿಸಿ ಎಣಿಸಿ  ಇಟಕೋತ  ನಡೀಯೂದs  ಏನು ಅಂತ. ಹೂಂ ಆತು; ಹಂಗ  ನಡದ್ರೂ ನಮ್ಮ ಅವ್ವಾ  ಅನಭೋಗಿಸಿದ್ದು ಏನ  ಥೋಡೆ  ಏನು? ಎಲ್ಯದ  ನ್ಯಾಯ ಅವನ  ಲೆಕ್ಕದಾಗ? ಯಾಕಪಾ ದೇವ್ರs  ಹೀಂಗ  ಅಂತ  ಕೇಳಿದ್ರ  ಅಂವಾ ಉತ್ತರಾ  ಕೊಡಲೇ ಇಲ್ಲ ; ಸುಮ್ಮ ಕೂತ ಬಿಟ್ಟಾ!

ನಮ್ಮ ಕಡೆ  ಒಂದ  ಹೇಳಿಕಿ  ಅದ; ” ನಮ್ಮ ಪುಣ್ಯಾ  ಯಾತಕ್ಕ  ಹತ್ತೀತು ; ಹಿರಿಯರ ಪುಣ್ಯಾ, ದೇವರ  ಪುಣ್ಯಾ  ಬೇಕು ಎಲ್ಲಾ ಬರೋಬ್ಬರಿ ನಡೀ ಬೇಕಂದ್ರ” ಅಂತ. ನನ್ನ ಪ್ರಶ್ನಿಗೆ  ಈಗ  ಉತ್ತರ ಸಿಕ್ತು. ಹೌದು; ನಮ್ಮ ಅವ್ವ ತನಗಂತ  ಏನೂ ಇಟ್ಕೋಳ್ಳೇ  ಇಲ್ಲಾ , ಯಾವಾಗಲೂ  ಮಾಡೂ ಹಂಗೇ , ಥೇಟ್ ಹಂಗೇ. ತಂದು, ತನ್ನ ಸಲುವಾಗಿ ತನ್ನ  ಹಿರೀಕರು ಮಾಡಿದ್ದು ಪುಣ್ಯಾ  ಎಲ್ಲಾ ತನ್ನ  ಮಕ್ಕಳಿಗೇ  ಹಂಚಿ ಧಾರೆ  ಎರದ ಬಿಟ್ಟು ತಾ ಬಾಜೂಕ ನಿಂತ ಬಿಟ್ಟಳು. ತಾ ನರಳಿದ್ರ ನರಳವಳ್ಯಾಕ; ತನ್ನ ಮಕ್ಕಳು ಅಸರಂತ ಆರಾಮ ಇರಲಿ, ಥಣ್ಣಗ ಇಟ್ಟಿರಲಿ  ಆ ದೇವರು ಅಂತ ಹರಸ್ಯಾಳ ನಮ್ಮ ಅವ್ವಾ; ಶಂಭರ್ ಟಕ್ಕೆ ಹಂಗs ಹರಸ್ಯಾಳ!

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

November 1, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

 1. ಶೀಲಾ ಪಾಟೀಲ

  ಅವ್ವಾನ ತವರುಮನೆಯಲ್ಲಿ ನಡೆದ ಅನೇಕ ಹಾಸ್ಯ ಪ್ರಸಂಗಗಳ ವರ್ಣನೆ ಓದುತ್ತ ಅದರಲ್ಲಿ ನಾವೂ ಭಾಗಿಯಾದ ಅನುಭವ.
  ಹಿರಿಯರ ಪುಣ್ಯ, ದೇವರ ಪುಣ್ಯ…………….
  ಹಿರೀಕರಮಾಡಿದ ಪುಣ್ಯ ಮಕ್ಕಳಿಗೆಲ್ಲ ಧಾರೆಯೆರೆದ ಬಾಜೂಕ ನಿಂತಾರ ಏಕಾ,ಅವ್ವ, ಅಣ್ಣಾ

  ಪ್ರತಿಕ್ರಿಯೆ
  • Sarojini Padasalgi

   ನಿಮಗ ಹೆಂಗ ಹೇಳಲಿ ಶೀಲಾ ನಮ್ಮ ಗದ್ಲಾ ಐನಾಪೂರದಾಗಿಂದು! ಮಲಗೋದು ರಾತ್ರಿ ಮೂರು, ಏಳೋದು ಬೆಳಿಗ್ಗೆ ಒಂಬತ್ತು! ಅದೇ ಲೆಕ್ಕದಾಗ ಎಲ್ಲಾನೂ!
   ನಿಜ ಶೀಲಾ ನಮ್ಮ ಅವ್ವಾ ಅಣ್ಣಾ ಮತ್ತ ಏಕಾ ಮಾಡಿ ಕಟ್ಟಿಟ್ಟ ಬುತ್ತಿ ನಾವ ಇಂದೂ ಉಣ್ತೀವಿ ಆರಾಮಾಗಿ. ನಮ್ಮ ಪುಣ್ಯ ಯಾವ ಲೆಕ್ಕಕ್ಕೆ ಶೀಲಾ?
   ನಿಮ್ಮತಪ್ಪದ ರೆಸ್ಪಾನ್ಸ್ ಗೆ ಅನಂತ ಧನ್ಯವಾದಗಳು .

   ಪ್ರತಿಕ್ರಿಯೆ
 2. Shrivatsa Desai

  ಏಕಾನಿಂದ ಹಿಡಿದು ಅಕ್ಕವ್ವನ ವರೆಗಿನ ಮೂರು ತಲೆಮಾರಿನ ಮಾಧ್ಯಮ ವರ್ಗದ. ಸುಸಂಸ್ಕೃತ. ಕುಟುಂಬದ ಎಲ್ಲ ಸದಸ್ಯರ ವೈಯಕ್ತಿಕ ಜೀವನದಲ್ಲಿ ಹ ಣಿಕಿ ಹಾಕಿ ನೋಡುವಂತೆ ವರ್ಣಿಸುತ್ತಾರೆ ಈ ಲೇಖಕಿ. ತಮ್ಮ ನೇರ ಶೈಲಿಯಲ್ಲಿ, ಪ್ರಾಮಾಣಿಕ ಕಥನದಲ್ಲಿ, ಉತ್ತರಕರ್ನಾಟಕದ ಬಯಲು ಸೀಮೆ ಹುಕ್ಕೇರಿ ಕಡೆಗಿನ ಮರಾಠಿ ಪ್ರಭಾವಿತ ಕನ್ನಡ ಭಾಷೆಯಲ್ಲಿ ವರ್ಣಿಸುತ್ತಾರೆ. ಈ ವಾರ ನಗು ಅಳು ಎರಡೂ ಇವೆ. “ಬಯಲ ಸೀಮಿಯ ಬಯಲಿನ್ಹಂಗ ತುದೀನ ಇಲ್ಲದ ನಗು “. ಈ ತರದ ಚಿಕ್ಕ ಚಿಕ್ಕ ನಿರಾಡಂಬರ ವಾಕ್ಯಗಳು ಈ ಸರಣಿಯ ತುಂಬ ! ಮುಂದಿನ ಅಂಕಣದಲ್ಲಿ ಇನ್ನೇನು ಬರುತ್ತದೆಯೋ!

  ಪ್ರತಿಕ್ರಿಯೆ
  • Sarojini Padasalgi

   ನಿಮ್ಮ ಪ್ರಾಮಾಣಿಕ, ಸೂಕ್ಷ್ಮ ಅವಲೋಕನದ ರೆಸ್ಪಾನ್ಸ್ ತುಂಬ ಸುಂದರ ಮತ್ತು ವಿಶಿಷ್ಟ ರೀತಿಯಲ್ಲಿ ಸ್ಫೂರ್ತಿ ತುಂಬುವಂಥದು ಸರ್. ಒಂದೇ ಒಂದು ವಾರವೂ ತಪ್ಪದೇ ಬರುವ ನಿಮ್ಮ ರೆಸ್ಪಾನ್ಸ್ ನನಗೆ ಮುಂದಿನ ಹೆಜ್ಜೆ ಇಡಲು ಒಂದು ಬೆಳಕಿನ ಸೆಳಕು. ಹೌದು ಸರ್: ಆ ತಣ್ಣೆಳಲ ಹಾದಿಯಲ್ಲಿ ಸಾಗಿ ಬರುವಾಗಿನ ಪ್ರತಿ ಹೆಜ್ಜೆಗೂ ಒಂದು ಸೊಗಡು ಉಂಟು. ಅದನ್ನು ನಿಮ್ಮೆಲ್ಲರ ಮುಂದೆ ಬಿಚ್ಚಿಡಲು ಅವಕಾಶ ಕೊಟ್ಟ ಅವಧಿಗೆ , ಓದಿ ಪ್ರೋತ್ಸಾಹಿಸುವ ನಿಮಗೆ ಅನೇಕ ಧನ್ಯವಾದಗಳು ಸರ್.

   ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: