-ಜಯಶ್ರೀ ದೇಶಪಾಂಡೆ
ಆಹತ
ಕೆತ್ತಿಟ್ಟ ಪ್ರತಿಮೆಯ ಕಣ್ಣಲ್ಲಿ ತುಂಬಿಕೊಳ್ಳುತ್ತ
ಮೈ ಮರೆತರೆ,
ಅಲ್ಲೆಲ್ಲೋ ಚಾಚಿ ಹೊರಳಿ ದೂರ
ಸರಿದುಬಿಟ್ಟಿತ್ತು ಕಾಲ…
ಛೇ ಹೇಳಬಾರದೇ ನೀನು ನನ್ನ ಇಲ್ಲೇ ಬಿಟ್ಟೆಯೆಂದು?
ಬೆನ್ನಟ್ಟಿ ನಿನ್ನ ಹಿಡಿವ
ಹುಕಿ ತುಂಬಿ ಓಟಕ್ಕಿಳಿದರೆ ಎಡದ ಬಯಲೂ
ಬಲದ ಆಲಯವೂ, ಮರೆತೆಯಲ್ಲ ನಿನ್ನ ಪ್ರತಿಮೆಯ
ಶಿರಭಾಗವನ್ನು ಅಂದು ನಕ್ಕವು.
‘ಅಯ್ಯೋ ಪ್ರತಿಮೆ’ ಅನ್ನುತ್ತ ಎದೆಯೊಡೆದು
ಹಿಂದೋಡಿದರೆ ಕಾಲನಿರವೇ ಕಣ್ಮರೆಯಾಗಿ,
ಧೂಳು ಮಣ್ಣು ಹರಡಿ ಉಚೃಂಖಲ
ವ್ಯೋಮಧೂಮದ ಮಳೆ ಬಿದ್ದುಬಿಟ್ಟಿತ್ತು
ಕಾಣದ ಪ್ರತಿಮೆ, ಧೂಳುಮಳೆಯ
ನಡುವೆಲ್ಲೋ ಕಣ್ಣು ಹನಿದುಂಬುವಾಗ…
ಉಕ್ಕಿ ಕ್ಷೀಣಸ್ವರದ ಆರ್ತತೆ
ಆಂತರ್ಯತಳ ಸ್ಪರ್ಶಿಸಿ ಅದೆಂಥ ನಡುಕ ಕಾಣಿ!
ಅಯ್ಯೋ ಪ್ರತಿಮೆ ಅನ್ನುತ್ತ ತಬ್ಬಿ
ಕಣ್ಣಮೂಗಲ್ಲೂ ಹೊಕ್ಕ ಧೂಳೊರೆಸಿ
ಎದೆಗವಚಿ ಮತ್ತೋಡಿದರೆ
ಅಲಾ…ಕಾಲನ ಪತ್ತೆಯೇ ಇಲ್ಲ!
ಅವನೆಲ್ಲಿ ಅವನೆಲ್ಲಿಯ ತಡಕಾಟ
ತಬ್ಬಿಬ್ಬಾಗಿಸಿ ಬೆಪ್ಪೊಡೆದು
ನಿಂತ ನಾನೀಗ
ಬಯಲಿಗೂ ಅಲಯಕ್ಕೂ ಬೈಯುವುದೇ??
ದಾರಿ ತಪ್ಪಿಸಿ ವ್ಯೋಮ ಧೂಳ ಮಜ್ಜನಕೆ
ಕಂದಿಕರಗಿ,
ಕಣ್ಣೊರೆಸಿಕೊಳ್ಳಲಾಗದೆ
ಹಲುಬಿದ ನನ್ನ ಪ್ರತಿಮೆಯ
ಗತಿಗೆ ಕಾರಣವೇ ನೀವನ್ನಲೇ?
ಅಥವಾ ಹೆಜ್ಜೆಯೆತ್ತ ನೆಲಮುಗಿಲುಗಳ
ನಡುವೆ ನಿಂತು ಬೆಪ್ಪೊಡೆದ
ನನ್ನನೇ ಹಳಿಯಲೇ?
ಅದೇ ಈಗ ಪ್ರಶ್ನೆ!






0 Comments