ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಯಶಸ್ವಿಯಾದ ಸಾ.ದಯಾ ಅವರ ‘ಚೌಕಟ್ಟಿನಾಚೆಯ ಚಿತ್ರ’

ಕರ್ನಾಟಕ ನಾಟಕ ಅಕಾಡೆಮಿಯ ತಿಂಗಳ ನಾಟಕ ಪ್ರದರ್ಶನ, ಯೋಜನೆಯಲ್ಲಿ ಕನ್ನಡ ಕಲಾ ಕೇಂದ್ರ ಮುಂಬೈ, ತಂಡದ ‘ಚೌಕಟ್ಟಿನಾಚೆಯ ಚಿತ್ರ’ ನಾಟಕ ಪ್ರದರ್ಶನವನ್ನು ಕಲಾಗ್ರಾಮದಲ್ಲಿ ಏರ್ಪಡಿಸಲಾಗಿತ್ತು.

ತೃತೀಯ ಲಿಂಗಿಗಳ ಕುರಿತಾದ ವಿಷಯ ವಸ್ತು, ನಿರ್ದೇಶಕರು ಶ್ರೀ ಸಾ.ದಯಾ, ರಚನೆಯೂ ಅವರದ್ದೆ.

ಮುಖ್ಯವಾಹಿನಿಯಿಂದ ದೂರವೇ ಉಳಿದಂತಿರುವ ತೃತೀಯ ಲಿಂಗಿಗಳಗಳ ಸಾಂಸ್ಕೃತಿಕ ಆಚರಣೆಗಳು, ಸಾಮಾಜಿಕ ಸಂಕಟಗಳು, ಪರಂಪರೆ, ಐತಿಹಾಸಿಕ ಹಿನ್ನೆಲೆ, ಪುರಾಣಗಳಲ್ಲಿನ ಉಲ್ಲೇಖ, ಎಲ್ಲವನ್ನು ಸ್ಕ್ರಿಪ್ಟ್ ನಲ್ಲಿ ತಂದು, ರಂಗ ವೇದಿಕೆಯಲ್ಲಿ ಪ್ರದರ್ಶಿಸಬೇಕೆಂಬ ಕಳಕಳಿ ಕಾಳಜಿ ನಾಟಕದಲ್ಲಿತ್ತು.

ಸಮಾಜವೆಂಬ ಚೌಕಟ್ಟಿನ ಆಚೆಗೆ ಉಳಿದಂತಿರುವ ಜನಾಂಗದ ಬಗೆಗಿನ ಅಂಶಗಳು ಬಿಡಿಬಿಡಿ ಚಿತ್ರಗಳಂತೆ ಪ್ರತಿಯೊಂದು ದೃಶ್ಯವೂ ರಂಗ ಚೌಕಟ್ಟಿನೊಳಗಿನ ಚಿತ್ರದಂತೆಯೇ ಭಾಸವಾಗಿತ್ತು.

ಸಾಮಾಜಿಕ ಅಸಡ್ಡೆ, ತಿರಸ್ಕಾರ, ಅವಹೇಳನ, ಅವಮಾನಗಳು, ತೃತೀಯ ಲಿಂಗಿಗಳ ತಮ್ಮದೆ ಖಾಸಗಿ, ವೈಯಕ್ತಿಕ ಜಗತ್ತು, ಮಾನವೀಯ ಸಂಗತಿಗಳು, ಕ್ರೂರತೆಯ ಅವಶೇಷಗಳು, ಎಲ್ಲವೂ ಬಿಡಿ ಬಿಡಿ ಚಿತ್ರಗಳಾಗಿ ರಂಗವೇರಿದ್ದವು.

ಈ ಎಲ್ಲ ಬದುಕಿನ ಸಾಮಗ್ರಿಗಳ ಜೊತೆಗೆ ಬಡಿದಾಡುತ್ತಾ, ನಿಭಾಯಿಸುತ್ತ ತಮ್ಮನ್ನೂ ಮನುಷ್ಯ ಜೀವಿಗಳಂತೆ ಕಾಣದ ಸಾಮಾಜಿಕ ನಿಲುವಿಗೆ ಶೋಕವನ್ನೂ ಆಕ್ರೋಶವನ್ನೂ ವ್ಯಕ್ತಪಡಿಸುವ ತೃತೀಯ ಲಿಂಗಿಗಳದು ವಿಭಿನ್ನ ಲೋಕ. ಸಾಂಸ್ಕೃತಿಕ ಅಸ್ತಿತ್ವವನ್ನು ಉಳಿಸಿಕೊಳ್ಳುವ, ತಮ್ಮ ವಲಯದಲ್ಲಿನ ಜೀವನದ್ರವ್ಯವನ್ನು ತಮ್ಮದೇ ರೀತಿಯಲ್ಲಿ ರೂಪಿಸಿಕೊಳ್ಳಲು ಸಾಹಸಪಡುತ್ತ ಚಡಪಡಿಸುವ ಜೀವಗಳು ಪಡುವ ಪಾಡನ್ನು ನಾಟಕವನ್ನಾಗಿಸುವ ನಿಟ್ಟಿನಲ್ಲಿ ನಿರ್ದೇಶಕರ ಪ್ರಯತ್ನ ನಿಜಕ್ಕೂ ಶ್ಲಾಘನೀಯ.

ಹೆಚ್ಚಿನ ಕಲಾವಿದರು ಗಂಡಸರು ಹಾಗೂ ಅವರೇ ಹೆಣ್ಣಿನ ವೇಷ ಹಾಕಿ ತೃತೀಯ ಲಿಂಗಿಗಳಾಗಿದ್ದರು. ನೈಜ ಹಿಜ್ರಾಗಳನ್ನು ಕಲಾವಿದರನ್ನಾಗಿ ಅಭಿನಯಿಸುವಂತೆ ಪ್ರೇರೇಪಿಸಬೇಕಿತ್ತೆಂಬುದು, ನಾಟಕದ ನಂತರ ಸಂವಾದಿಸಿದ ಅಕ್ಕಯ್ ಪದ್ಮಶಾಲಿ ಅವರ ಅಭಿಪ್ರಾಯವಾಗಿತ್ತು.

ಸಂಗೀತ, ರಂಗಸಜ್ಜಿಕೆ, ನಟನೆಯ ಪ್ರಾಮಾಣಿಕ ಪ್ರಯತ್ನ, ಕಾಸ್ಟ್ಯೂಮ್, ಬೆಳಕಿನ ನಿರ್ವಹಣೆ ಸಮೇತ ಸಜ್ಜಾಗಿದ್ದ ರಂಗತಂಡ ನಾಟಕ ಪ್ರದರ್ಶನವನ್ನು ಸಾಕಷ್ಟು ಶ್ರಮವಹಿಸಿ ಪ್ರದರ್ಶಿಸಿತ್ತು.

ರಂಗಕರ್ಮಿ ಶ್ರೀಮತಿ ಜಯಲಕ್ಷ್ಮಿ ಪಾಟೀಲ್ ಅವರು ನಡೆಸಿಕೊಟ್ಟ ಸಂವಾದದಲ್ಲಿ ಅಕೈ ಪದ್ಮಶಾಲಿ ಪರಿಣಾಮಕಾರಿಯಾಗಿ ಮಾತನಾಡಿ ತಮ್ಮ ಸಮುದಾಯಕ್ಕೆ ನಿಜವಾಗಿಯೂ ಬೇಕಾದ್ದೇನು ಎಂಬುದನ್ನು ತಿಳಿಸಿಕೊಟ್ಟರು.

ತಮ್ಮ ಸಮುದಾಯದವರೊಬ್ಬರನ್ನು ದಸರಾ ಉದ್ಘಾಟನೆಗೆ ಇಲ್ಲಿಯವರೆಗೆ ಆಹ್ವಾನಿಸಿಲ್ಲ ಎಂಬುದೂ ಅವರು ಹೇಳಿದ ಒಂದು ಪ್ರಮುಖ ವಿಷಯವಾಗಿತ್ತು.

ನಾಟಕ ಅಕಾಡೆಮಿ ಅಧ್ಯಕ್ಷರು, ಸದಸ್ಯರು, ಕಲಾಪೋಷಕರು, ಹಿರಿಯ ರಂಗಕರ್ಮಿಗಳು, ಕಲಾಗ್ರಾಮದ ಹಾಲ್ ಭರ್ತಿಯಾಗುವಷ್ಟು ತುಂಬಿದ್ದ ಪ್ರೇಕ್ಷಕರ ಉಪಸ್ಥಿತಿಯಿತ್ತು.

ವರ್ತಮಾನದ ನೈಜ ಸುಡುವ ಸಮಸ್ಯೆಯೊಂದನ್ನು ರಂಗದ ಮೇಲೆ ತರುವ ತಂಡದ ಪ್ರಾಮಾಣಿಕ ಪ್ರಯತ್ನಕ್ಕೆ ಅಭಿನಂದನೆಗಳು.

‍ಲೇಖಕರು Admin

22 September, 2025

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading