ಲೇಖಕಿ ಎಡೆಯೂರು ಪಲ್ಲವಿ ಅವರ ಕಥಾ ಸಂಕಲನ ‘ಕುಂಡದ ಬೇರು’
ಈ ಕಥಾ ಸಂಕಲನವನ್ನು ‘ಮಿಲಿಟರಿ ಪ್ರಕಾಶನ’ ಪ್ರಕಟಿಸಿದೆ.
ಭವ್ಯ ಟಿ ಎಸ್ ಅವರ ಅನಿಸಿಕೆ ಇಲ್ಲಿದೆ.
ಕವಿತೆಗಳೊಂದಿಗೆ ಕತೆಗಳ ಓದಿನ ಒಲವು ನನ್ನೊಳಗೆ ಚಿಗುರೊಡೆದು ಬೆಳೆಯುತ್ತಿರುವ ಈ ಹೊತ್ತಿನಲ್ಲಿ ಹೆಣ್ಮನಗಳ ಹಲವು ಮುಖದ ನೋವುಗಳಿಗೆ ದನಿಯಾಗಿರುವ ಒಂಬತ್ತು ಕತೆಗಳನ್ನು ಹೊತ್ತು ನಿಂತಿರುವ ಕುಂಡದ ಬೇರು ಎಂಬ ಕಥಾ ಸಂಕಲನ ಓದಿಗೆ ದಕ್ಕಿತು. ಎಡೆಯೂರು ಪಲ್ಲವಿಯವರು ಬರೆದ ಮನೋಜ್ಞಕತೆಗಳು ಇಲ್ಲಿವೆ. ಪ್ರತಿ ಕತೆಯಲ್ಲೂ ಹೆಣ್ಣೇ ಕಥಾಬಿಂದು.
ಬದಲಾದಂತೆ ಕಾಣುತ್ತಿರುವ ಈ ಸಮಾಜದಲ್ಲಿ ಹೆಣ್ಣಿನ ಸ್ಥಾನಮಾನ ಬದಲಾದರೂ ಅವಳು ಅನುಭವಿಸುತ್ತಿರುವಶೋಷಣೆ, ದಬ್ಬಾಳಿಕೆ, ಅಸಹಾಯಕತೆ, ಕೀಳರಿಮೆ ಬೇರೆಬೇರೆ ರೂಪದಲ್ಲಿ ಇಲ್ಲಿ ಚಿತ್ರಣಗೊಂಡಿದೆ.
ಇಲ್ಲಿ ಬರುವ ಚಿನ್ನಮ್ಮನ ಪಾತ್ರ ತನ್ನೊಳಗಿನ ಆಸಕ್ತಿ, ಹವ್ಯಾಸಗಳ ಮೂಲಕ ಜೀವನೋತ್ಸಾಹವನ್ನು ಅಭಿವ್ಯಕ್ತಿಸ ಬಯಸುವ ಅದೆಷ್ಟೋ ಹೆಣ್ಣು ಜೀವಗಳ ಆಸೆಗಳು ಮೊಳಕೆಯೊಡೆಯುವ ಮೊದಲೇ ಚಿವುಟುವ ಪುರುಷ ದಾರ್ಷ್ಟ್ಯದ ಕೈಗಳು ಇನ್ನೂ ಸಮಾಜದಲ್ಲಿ ಇರುವ ಕಟುವಾಸ್ತವವನ್ನು ತೋರಿಸುತ್ತದೆ.

ಹೆಣ್ಣಿನ ದನಿಯನ್ನು ಮೌನವಾಗಿಸುವ ಮೂಲಕ ಅವಳನ್ನು ಅವಗಣಿಸುವುದು ಆ ಮೂಲಕ ತನ್ನ ಅಹಂನ್ನು ತೃಪ್ತವಾಗಿರಿಸಿಕೊಳ್ಳುವ ಪುರುಷ ಮನಸ್ಥಿತಿಯ ವಿಡಂಬನೆಯನ್ನು ಇಲ್ಲಿನ ಕತೆಗಳು ಸಮರ್ಥವಾಗಿ ಚಿತ್ರಿಸುತ್ತವೆ. ತನ್ನ ವೈಯಕ್ತಿಕ ಬಯಕೆಗಳನ್ನು ಅದುಮಿಟ್ಟು ಸಂಸಾರದ ತೇರನ್ನೆಳೆಯಲು ನಾನಾ ರೂಪ ಧರಿಸಿ ಬದುಕಿನ ಸವಾಲುಗಳನ್ನು ಎದುರಿಸುವ ಮಹಿಳೆಯರು ಇಲ್ಲಿನ ಕಥಾನಾಯಕಿಯರಾಗಿದ್ದಾರೆ. ಗ್ರಾಮೀಣ ಮತ್ತು ನಗರ ಬದುಕು, ಅಕ್ಷರಸ್ಥ ಮತ್ತು ಅನಕ್ಷರಸ್ಥ ಮಹಿಳೆಯರು ಅವರವರ ನೆಲೆಗಟ್ಟಿನಲ್ಲಿ ಎದುರಿಸುತ್ತಿರುವ ಶೋಷಣೆಗಳಕುರಿತು ಕತೆಗಾರ್ತಿ ಇಲ್ಲಿ ಗಮನ ಸೆಳೆಯುತ್ತಾರೆ.
ಇಂದಿಗೂ ಹೆಣ್ಣೊಬ್ಬಳು ತನಗೆ ಬಂದ ಕಾಯಿಲೆ ಕುರಿತು ಕುಟುಂಬ ಮತ್ತು ಸಮಾಜದಲ್ಲಿ ಮುಕ್ತವಾಗಿ ಚರ್ಚಿಸಿ, ಪರಿಹಾರ ಕಂಡುಕೊಳ್ಳಲು ಇರುವ ತೊಡಕಿನ ಕುರಿತು ವಿಡಂಬನೆ ಇದೆ. ಅಕ್ಷರಸ್ಥ ಹೆಣ್ಣನ್ನು ಬಾದಿಸುತ್ತಿರುವಅಂತರ್ಜಾಲ ಲೋಕ.ಸಾಮಾಜಿಕ ಮಾಧ್ಯಮಗಳಲ್ಲಿ ಹೆಣ್ಣಿನ ಬಗ್ಗೆ ವ್ಯಕ್ತವಾಗುವ ಮನೋವಿಕೃತಿಗಳ ಚಿತ್ರಣವಿಲ್ಲಿದೆ. ಒಂಟಿ ಪೋಷಕಿಯಾಗಿ ಮಕ್ಕಳನ್ನು ಪಾಲಿಸುವ ಹೆಣ್ಣಿನ ನೋವುಗಳು, ಅನಿವಾರ್ಯತೆಗಳ ಬಗ್ಗೆ ತಿಳಿಸಲಾಗಿದೆ. ಹಣ ಮಾತ್ರವಲ್ಲದೆ ಪ್ರಾಣವೂ ವ್ಯವಹಾರದ ವಸ್ತುವಾದ ಕೊರೊನಾ ಕಾಲಘಟ್ಟದ ವೈಚಿತ್ರ್ಯ ಇಲ್ಲಿ ವ್ಯಕ್ತವಾಗಿದೆ. ಹೆಣ್ಣಿನ ದೇಹ, ಆಕಾರದ ಕುರಿತು ತೀರಾ ವೈಯಕ್ತಿಕ ನೆಲೆಯಲ್ಲಿ ಮತ್ತು ಸಮೂಹ ಮಾಧ್ಯಮಗಳಲ್ಲಿ ನಡೆಯುತ್ತಿರುವ ಟ್ರೋಲ್,ಇದು ಅವಳಮಾನಸಿಕ ಆರೋಗ್ಯವನ್ನು ಹದಗೆಡಿಸುತ್ತಿರುವ ಬಗ್ಗೆ ಕೂಡ ಇಲ್ಲಿ ಎಚ್ಚರಿಕೆ ಇದೆ.
ಆಧುನಿಕ ಬದುಕು ಮಹಿಳೆಯರ ಮೇಲೆ ಹೇರುತ್ತಿರುವ ಭಾವನಾತ್ಮಕ ಒತ್ತಡಗಳು, ಅಂಗವೈಕಲ್ಯ, ಮುಪ್ಪು ಇನ್ನೂಅನೇಕ ಅಸಹಾಯಕತೆ ನಡುವಿರುವ ಹೆಣ್ಣಿನ ಮೇಲೂ ನಡೆಯುವ ಲೈಂಗಿಕ ದೌರ್ಜನ್ಯಗಳ ಬಗ್ಗೆ ಇಲ್ಲಿ ಧ್ವನಿ ಇದೆ. ಅಕ್ಷರಸ್ಥರು, ಉದ್ಯೋಗಸ್ಥರೆನಿಸಿದವರೂ ಸಹ ಇಂದಿಗೂ ಜಾತಿಯ ವಿಷವರ್ತುಲದಿಂದ ಹೊರಬರಲು ಸಾಧ್ಯವಾಗುತ್ತಿಲ್ಲ ಎಂಬುದನ್ನು ಮಾರ್ಮಿಕವಾಗಿ ತಿಳಿಸುತ್ತಾರೆ. ಆದರೆ ಇಲ್ಲಿ ಬರುವ ಅಂಗವೈಕಲ್ಯವಿರುವ ಸಂಪಿಯನ್ನು ಕೈ ಹಿಡಿಯಲು ಬಯಸುವ ರೂಪೇಶ, ತನ್ನ ಸಾವಿನ ನಂತರವೂ ಪತ್ನಿ ಮತ್ತು ಮಗನ ಭವಿಷ್ಯವನ್ನು ಭದ್ರಗೊಳಿಸುವ ದೂರಾಲೋಚನೆ ಇರುವ ಸತ್ಯ, ಕುಟುಂಬದವರಿಗಿಂತಲೂ ಅಸಹಾಯಕ ಹೆಣ್ಮಕ್ಕಳ ಬಗ್ಗೆ ಕನಿಕರ ತೋರುವ ಶಿವು ಪಾತ್ರಗಳು ಒಂದಿಷ್ಟು ಆಶಾಭಾವನೆ ಮೂಡಿಸುವಲ್ಲಿ ಯಶಸ್ವಿಯಾಗಿವೆ. ಒಟ್ಟಾರೆಯಾಗಿ ಇಲ್ಲಿನ ಎಲ್ಲಾ ಕತೆಗಳಲ್ಲಿ ಬದುಕಿನ ವಾಸ್ತವ ಸತ್ಯಗಳು, ನೋವುಗಳು ಹಸಿಹಸಿಯಾಗಿ ತೆರೆದುಕೊಂಡಿವೆ.
ಕತೆಗಾರ್ತಿ ಬಳಸುವ ಗ್ರಾಮ್ಯ ಭಾಷೆ ಈ ಕತೆಗಳ ನೈಜತೆಯನ್ನು ಮತ್ತಷ್ಟು ಪೋಷಿಸಿದೆ. ಈ ಎಲ್ಲಾ ಕತೆಗಳು ನಮ್ಮ ಸುತ್ತಮುತ್ತ ನಡೆದಿವೆ ಮತ್ತು ನಡೆಯುತ್ತಲಿವೆ. ಹೆಣ್ಣಿನ ಒಂಟಿತನ, ಮುಗಿಯದ ಬವಣೆಗಳು ಈ ಎಲ್ಲದರ ನಡುವೆಯೂ ಬದುಕಿನ ಉತ್ಸಾಹವನ್ನು ಕಾಪಿಟ್ಟುಕೊಳ್ಳಲು ಹಾತೊರೆಯುವ ಆಕೆಯ ಜೀವನೋತ್ಸಾಹ ಇಲ್ಲಿ ಬಹು ಸುಂದರವಾಗಿವ್ಯಕ್ತವಾಗಿದೆ. ಪಲ್ಲವಿಯವರು ಕನ್ನಡದ ಗಟ್ಟಿ ಕತೆಗಾರ್ತಿಯಾಗುವುದು ನಿಸ್ಸಂಶಯ. ಅವರಿಂದ ಮತ್ತಷ್ಟು ಜೀವನಮುಖಿ ಕೃತಿಗಳು ಹೊರಹೊಮ್ಮಲಿ ಎಂದು ಶುಭಹಾರೈಸುತ್ತೇನೆ.






0 Comments