ಸದಾಶಿವ ಸೊರಟೂರು
—–
ನಿಲ್ದಾಣದ ಹಳೆ ಗೋಡೆಯ ಮೇಲೆ
ಯಾರೊ ಗೀಚಿ ಹೋಗಿದ್ದಾರೆ ‘ಮಧುಮತಿ’
ಎಂಬ ಪುಟ್ಟ ಹೆಸರೊಂದನು..
ಮಾಸಲು ಗೋಡೆ ಮೇಲೆ ಹೆಸರು ಗೀಚಿ
ಬಂಧ ಬರೆದು
ಅವ ಎಲ್ಲಿ ಹೋದನೊ
ಭೋರ್ಗೆರೆಯುತ್ತಾ ಸರಿಯುವ ಸಂದಣಿಯೊಳಗೆ
ಪಾಪ, ಗೀಚಿ ಗೋಡೆಗೆ ದಾಟಿಸಿ
ಸುಮ್ಮನಾದನೊ
ಇನ್ನಷ್ಟು ಪಡೆದು ನೋವು ಉಂಡನೊ
ಇರಬಹುದೇ ಅವನು ಇಲ್ಲೆ ಎಲ್ಲಾದರೂ
ಹುಡುಕುತ್ತಾ ಅವಳ ಉಸಿರನು
ಅಥವಾ
ದಾವಾಖಾನೆಯಲಿ ಗೀತಳ ಪಕ್ಕ
ತನ್ನ ಮಗುವನ್ನು ಎತ್ತಿಕೊಂಡು
ಕಣ್ಣಗಲಿಸಿ ನಗಿಸಲು ಯತ್ನಿಸುತ್ತಿರಬಹುದೇ..

ರಸ್ತೆಯ ಮೇಲೆ ನಡೆದು
ಹೋಗುತ್ತಿರುವ ಮೂಕ ಸಂದಣಿಯಲ್ಲಿ
ಗೋಡೆ ಮೇಲಿನ ಮಧುಮತಿ
ಹುಡುಕುತ್ತಿರಬಹುದೇ
ಬಂದಾನೊ
ಬಾರನೊ..!
ಎಂದು ಉಸಿರು ಬಿಗಿ ಹಿಡಿದು
ಗೀಚಿ ಹೋದವನಿಗೆ?
ನೋಡುತ್ತಿದ್ದಾಳೆ ಅವಳು
ಯಾರು ಯಾರದೊ ಕೈಹಿಡಿದು ಕೋರುವುದು
ಕೈ ಹಿಡಿದು ನಡೆಯುವುದು
ಕೈ ಬಿಟ್ಟು ಹೊರಡುವುದು
ಪಾಪ ಅವಳಿಗೆ ಏನೊ ಹೇಳುವುದಿದೆ..
ಕೇಳಿಸಿಕೊಳ್ಳದೆ ಜನ
ಯಾವ ಹೆಸರಿನ ಬೆನ್ನು ಬಿದ್ದಿದ್ದಾರೊ
ಮಾಲತಿ ಶೃತಿ ಆರತಿ ಸುಮತಿ
ಭವ್ಯ ದಿವ್ಯ ನವ್ಯ ರಮ್ಯ..
ಯಾವ ಗೋಡೆಯ ಮೇಲೆ ಯಾರ ಹೆಸರೊ
ಇದೆ ಇಲ್ಲಿ ಎಲ್ಲರೊಳಗೊದು
ಗೀಚಿಯೂ ಗೀಚದ
ಗೀಚದೆಯೂ ಗೀಚಿದಂತೆ ಉಳಿದ ಹೆಸರು!
ಸಿಕ್ಕರೂ
ಸಿಗದೆ ಹೋದರೂ..
ಬದುಕೆಂದರೆ ಇಷ್ಟೇ ಯಾರದೊ ಹೆಸರನು
ಕನವರಿಸುವುದು; ಕನಲುವುದು!
ಕೂಡುವುದು;ಕದಲುವುದು!
ಗುಡಿಯ ಕರಿಹಲಗೆಯ ಮೇಲೆ
ಇಂದು ಇವರದು ಊಟದ ಬಾಬ್ತು
ಎಂದೊ
ಎರಡು ಸಾವಿರ ದೇಣಿಗೆಯೆಂದೊ
ಪ್ಲೆಕ್ಸಿನಲ್ಲಿ ಕೈ ಮುಗಿದು ನಿಂತೊ
ಮನೆಯ ಮುಂದಿನ ಕಲ್ಲುಪಾಟಿಯಲ್ಲೊ
ಹಾರಕ್ಕೊ ತುರಾಯಿಗೊ
ಬರೆದುಕೊಂಡ ನಮ್ಮದೆ ಹೆಸರಿಗೆ
ಯಾಕೆ ಉಸಿರೇ ಇದ್ದಂತಿಲ್ಲವಲ್ಲ!
ಅದಿರಲಿ
ಭರತ ಎಂಬುವವನಿದ್ದನ್ನಲ್ಲ
ವೃಷಭಾಚಲದ ಮೇಲೆ ತನ್ನ ಹೆಸರು ತಾನೇ
ಗೀಚಿಕೊಳ್ಳಲು ಹೋದವನು..
ಪಾಪ,
ಅವನ್ನೊಂದು ಪ್ರೀತಿ ಮಾಡಬೇಕಿತ್ತು
ಅವ ತನ್ನವಳ ಹೆಸರು ಗೀಚುವಾಗ
ಅವನ ಮುಖ ನೋಡಬೇಕಿತ್ತು..!






0 Comments