ಬಿದಲೋಟಿ ರಂಗನಾಥ್ ಹೊಸ ಕವಿತೆ-ಒಂದು ರಾತ್ರಿ ಅರ್ಧ ಹಗಲು

ಬಿದಲೋಟಿ ರಂಗನಾಥ್

—–

ಬೆಟ್ಟದ ಎದೆಯ ಮೇಲೆ ಪಾದ ಊರಿದೆ
ಒಳಗಿನ ಶಕ್ತಿಗೆ ರೆಕ್ಕೆ ಮೂಡಿದವು
ಮುಖದ ತುಂಬಾ ಬೆವರ ಮುತ್ತುಗಳು
ದೇವರ ಹೊಳೆ ಸಾಲನು ತೋಯ್ದು
ರಾತ್ರಿ ಹೊದ್ದ ಕುರಂಗನ ಬೆಟ್ಟ

ಎಷ್ಟೊಂದು ಗಾಳಿ
ಮೈ ಮುತ್ತಿ ಹೋಗುತ್ತಿದೆ
ಖಾಲಿಯಾದ ಶಕ್ತಿಗೆ ಹೊಸ ಉರುಪು
ಶಿವನ ಗುಡಿಮುಂದೆ ಬೆಂಕಿ ಮುಕ್ಕಳಿಸಿದಾಗ
ನನ್ನೊಳಗಿನ ಎಚ್ಚರ ಮೋಡದ ಚಂದಿರನ ಮುಖ ಸವರಿತು…

ಹಸಿದ ಬಾಯಿಗೆ ಅನ್ನದ ಹಾಕಲು
ಕೊಪ್ಪಲ ಒಲೆಯಲಿ ಕಡ್ಡಿ ಉರಿಯುತಿರಲು
ಮೋಡದ ಕೋಪದ ಮೈಯ ಬೆವರು
ವದ್ದೆ ಮಾಡಿತು
ಅಮಲಿನ ಕಲರವ ಬಂಡೆ ಕಚ್ಚಿ ಕೂತಿರುವಾಗ…
ಒಳಗಿನ ಕಾಲಭೈರವ ಮುಸ ಮುಸನ ನಗುತ್ತಿದ್ದ

ಬಾಡು ಬೇಯುವ ಒಲೆಯ ಬಾಯಿಗೆ
ಕೈ ಮೈ ಎಷ್ಟೊಂದು ಶಿವನೇ
ನಿಂತ ಹೆಜ್ಜೆಯಲಿ ಕತ್ತಲ ಮಾರಿಗಳು
ಕೊತ ಕೊತ ಕುದ್ದವು
ಹೆಗಲ ನೋವಿನಲಿ ಚರಿತ್ರೆ ಇತ್ತು

ನಕಾಮಕಾ ಬಂಡೆಯ ಹಾಸು
ಸಿದ್ದಪ್ಪ ದೇವರ ಓರೆಗಣ್ಣ ನೋಟ ಇತ್ತಲೇ ಇತ್ತು
ವಿಭೂತಿಯ ಹಣೆಗಳು
ಕತ್ತಲ ಕಣ್ಣಿಗೆ ಬೆಳಕ ಬೀರಿದವು
ಕೊಳದ ತಾವರೆ ಕರುಳ ಹಾಸಿತ್ತು

ಆ ಒಂದು ಕತ್ತಲ ರಾತ್ರಿ
ಸಮಯ ಹನ್ನೆರಡು ಮುಕ್ಕಾಲು
ನೀಹ ಬರೆದ ನಾಟ ಕೈ ತುಂಬಿರಲು
ಉಲಿದವು ಹಕ್ಕಿಗಳು
ಆವರಿಸಿದವು ಮನಸುಗಳು
ಕುರಂಕೋಟೆಯ ಸಂಸ್ಥಾನದ ನೆಲವ

ಮೌನದಲೂ ನಡೆದ
ಕೊಪ್ಪಲದೊಳಗಿನ ಗೊರಕೆಗಳು
ನಿಶಬ್ದವ ಸೀಳಿ
ಹೊರಗೆ ಯಾವುದೋ
ಹೆಜ್ಜೆ ಸದ್ದಿಗೆ ಬೆರಗಾದೆ ಶಿವನೆ…!
ನಿದ್ದೆ ಹತ್ತದ ಕಣ್ಣುಗಳು
ಇಣುಕಿದವು ಕತ್ತಲ ದಬ್ಬಿ
ಹೊರಗೆ ಆಜಾನು ಬಾಹುದೇಹ !
ನೋಟ ರಾಜಗಾಂಭೀರ್ಯ
ಕರ ಜೋಡಿಸಿ ನಿಂತೆ ಬೆಳಕಾದವನ ಎದುರು

ಬೆನ್ನಾಕಿ ನಡೆದವನ ಹಿಂದೆ
ನನ್ನ ಹೆಜ್ಜೆಗಳು…
ಹೋಗು ಹೋಗುತ್ತಲೇ ಎಚ್ಚವಾಗುತ್ತಲೇ ಹೋಯಿತು
ಬಯಲು…ಬೆಳದಿಂಗಳು.


2

ನಸುಕರಿದು ಬಂತು
ಹೊಸ ಗಾಳಿಯ ಮೈಯಲ್ಲಿ ಹೊಸ ಸಂದೇಶ
ಬಯಲ ಅಪ್ಪಿ ಕೂತವು ಹಾಸು ಬಂಡೆಯ ಮೇಲೆ
ಪ್ರಕಾಶ ಮಂಟೇದನ ಮೇದುಳು
ಎಲ್ಲರನು ಹಿಡಿದಿಟ್ಟು ಕೂತರೆ
ನೀಹನ ಮನಸು ಹೊಸದನ್ನು ಹುಡುಕುತಿತ್ತು
ರಂಗ ಮಹೇಶ ವಿಜಯನ ಮನಸು
ಕ್ಯಾಮರದ ಕಣ್ಣಿಗೆ ಬಣ್ಣ ಹಚ್ಚುತ್ತಿದ್ದವು
ಬಿದ್ದ ಗೋಡೆಯ ತುಂಬಾ ಬಿಕ್ಕಳಿಕೆಗಳ ಸದ್ದು
ಮುಟ್ಟಿದವನ ಮೈಯೊಳಗೆ
ಅನಾದಿ ಕಾಲದ ಮೋಹದ ಝರಿ !

ಗಲ್ಲೆ ಬಾನಿಯ ಸುತ್ತ
ಕರುಳು ಕಲೆತ ಭಾವಗಳು
ಯಾವ ಜನ್ಮದ ಮೈತ್ರಿಯೋ
ಒಂದು ರಾತ್ರಿ ಅರ್ಧ ಹಗಲು
ಒಂದು ಕೊಪ್ಪಲ ಅಪ್ಪುಗೆಯಲಿ

ಅಷ್ಟು ದೂರದ ಕೊಪ್ಪಲ ಮುಂದೆ
ಹಸಿವಿನ ಸಂಕಟ ಅರಿತ ಕಾಂತ ಲಕ್ಷೀಶನ ಮನಸು
ಬೆಂಕಿ ಮುಂದೆ ಬೆಯ್ಯುತಿತ್ತು
ಹಸಿವುಂಡವರ ಎದೆಯೊಳಗೆ
ಚರಿತ್ರೆಯ ಪುಟಗಳು ಕಾಣುತ್ತಿದ್ದವು

ಅರ್ಗಂಜಿಯ ಕೊರಳಲಿ
ಕುಳಮೆತ್ತಿದ ಮಣ್ಣು
ನದಿಯ ಹುಡುಕುತ್ತಿದ್ದರೆ,
ಕುದಿಯ ನೀರಿನಲಿ ತುಕ್ಕಡಗಳು ಕುಣಿಯುತ್ತಿದ್ದವು

ಬಿಸಿಲ ಝಳದೊಳಗು
ಈಜಿದವು ಕವಿ ಮನಸುಗಳು
ಕುರಂಗರಾಯ ಅಷ್ಟು ದೂರದಲಿ ಮೌನದಿ
ಕೂತು ನೋಡುತ್ತಿದ್ದ…
ಚರಿತ್ರೆ ಬರೆದವರ ಕೈ ಕುಲುಕುತ್ತಿದ್ದ.

‍ಲೇಖಕರು avadhi

December 4, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: