ಕಲಾ ಭಾಗ್ವತ್ ಓದಿದ  ‘ವಾತ್ಸಲ್ಯ ಪಥದ ರೂವಾರಿ ವ್ಯಾಸರಾಯ ಬಲ್ಲಾಳ’


ಬಲ್ಲಾಳರ ವಾತ್ಸಲ್ಯ ಪಥದ ನಿಜ ದರ್ಶನ

ಕಲಾ ಭಾಗ್ವತ್

—–

 ‘ವಾತ್ಸಲ್ಯ ಪಥದ ರೂವಾರಿ ವ್ಯಾಸರಾಯ ಬಲ್ಲಾಳ’ ಈ ಕೃತಿಯು ಮುಂಬೈ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಪ್ರಕಟಣೆ. 

ಡಾ. ಜಿ. ಎನ್. ಉಪಾಧ್ಯ ಅವರು ರಚಿಸಿರುವ ಈ ಕೃತಿಯಲ್ಲಿ ೧೫೧ ಪುಟಗಳಿವೆ, ೮ ಅಧ್ಯಾಯಗಳಿವೆ, ಅನುಬಂಧದಲ್ಲಿ ಬಲ್ಲಾಳರ ನೆನಪಿನ ಅಮೂಲ್ಯ ಪಟಗಳಿವೆ.

ಜನ ಸಮುದಾಯದೊಳಗೊಂದಾಗಿ ಸಮಕಾಲೀನ ವಿದ್ಯಮಾನಗಳಿಗೆ ಸ್ಪಂದಿಸುತ್ತ ಸಾಹಿತ್ಯ ರಚನೆಯನ್ನು ಮಾಡಿ ಸಾಹಿತ್ಯ ನಿರ್ಮಾಪಕರೆನಿಸಿಕೊಂಡಿರುವ ವ್ಯಾಸರಾಯ ಬಲ್ಲಾಳರ ಜೀವನ ಸಾಧನೆಯನ್ನು ಎತ್ತಿ ಹೇಳುವ ಮಹತ್ವದ ಕೆಲಸವು ಈ ಕೃತಿಯಲ್ಲಾಗಿದೆ. ವ್ಯಾಸರಾಯ ಬಲ್ಲಾಳರ ಬದುಕು ಬರಹಗಳನ್ನು ಬಿಂಬಿಸುವ, ಅವರ ಜೀವನ ಸಾಧನೆಯನ್ನು ಎತ್ತಿ ಹೇಳುವ, ಬಲ್ಲಾಳರನ್ನು ಹೆಚ್ಚು ಹೆಚ್ಚು ಓದುವಂತೆ ಪ್ರೇರೇಪಿಸುವ ಸರ್ವಾಂಗ ಸುಂದರವಾದ ಈ ಕೃತಿಯಲ್ಲಿ  ಬಲ್ಲಾಳರ ವಿಚಾರಗಳನ್ನು, ಚಿಂತನೆಗಳನ್ನು  ಅತ್ಯಂತ ಪರಿಣಾಮಕಾರಿಯಾಗಿ ಕಟ್ಟಿ ಕೊಡಲಾಗಿದೆ. ಉಪಾಧ್ಯರ ಬರವಣಿಗೆಯ ಮುಖ್ಯ ಗುಣವಾದ ಲವಲವಿಕೆಯ ಶೈಲಿ ಈ ಕೃತಿಯಲ್ಲಿಯೂ ಮೈದಳೆದಿದೆ. ಬಲ್ಲಾಳರ ಬರವಣಿಗೆಗೆ ತಕ್ಕುದಾದ ಬಡಿದೆಬ್ಬಿಸುವ ಗುಣ ಉಪಾಧ್ಯ ಅವರ ಶೈಲಿಗೂ ಇರುವುದರಿಂದ ಅವೆರಡೂ ಹೊಂದಾಣಿಕೆಯಾಗಿ ಕೃತಿಯ ಓದು ಹಿತವೆನಿಸುತ್ತದೆ. ಬೇರೊಂದು ದೃಷ್ಟಿಕೋನದಿಂದ ಬಲ್ಲಾಳರನ್ನು ಕಂಡು, ಅವರನ್ನು ದಾಖಲಿಸಿದ ರೀತಿ ಅನನ್ಯವಾಗಿದೆ. 

ಮುಂಬೈಯನ್ನು ತನ್ನ ಕಾರ್ಯಕ್ಷೇತ್ರವನ್ನಾಗಿ ಮಾಡಿಕೊಂಡು ಐದು ದಶಕಗಳಿಗಿಂತ ಹೆಚ್ಚು ಕಾಲ ಸಾಹಿತ್ಯ ಕೃಷಿ ಮಾಡಿ ಇಪ್ಪತ್ತೈದಕ್ಕೂ ಹೆಚ್ಚು ವೈವಿಧ್ಯಮಯ ಕೃತಿಗಳನ್ನು ರಚಿಸಿ ಈ ಮಹಾನಗರದಲ್ಲಿ ಕನ್ನಡ ಸಾಹಿತ್ಯ ತೊರೆಯನ್ನು ಹರಿಸಿದ ಬಲ್ಲಾಳರ ಸಾಹಿತ್ಯದ  ವಿಶೇಷ ವಿಷಯಗಳನ್ನು ಅಷ್ಟೇ ವಿಶಿಷ್ಟವಾಗಿ ಕಂಡ ಕೃತಿಯಿದು.

ಬಲ್ಲಾಳರ ಕಾದಂಬರಿ ಲೋಕದಲ್ಲಿ ಅವರು ಬರೆದಿರುವ ಮೌಲಿಕ ಕಾದಂಬರಿಗಳನ್ನು ಪ್ರತ್ಯೇಕವಾಗಿ ಸಂಕ್ಷಿಪ್ತವಾಗಿ, ಸೂಕ್ಷ್ಮವಾಗಿ ವಿಶ್ಲೇಷಿಸಲಾಗಿದೆ. ‘ಬಂಡಾಯ’ ಕಾದಂಬರಿಯನ್ನು ‘ಕೈಗಾರಿಕಾ ಮನಃಶಾಸ್ತ್ರವನ್ನು ಆಧರಿಸಿ ಬರೆದ ಕಾದಂಬರಿ’ ಎಂಬುದಾಗಿ ಗುರುತಿಸಿರುವುದು ಗಮನಾರ್ಹವಾಗಿದೆ. ವಿಮರ್ಶಾ ಲೋಕದಲ್ಲಿ ಇದರ ಕುರಿತು ಹೆಚ್ಚಿನ ಚರ್ಚೆಯಾಗುವ ಅವಶ್ಯಕತೆ ಇಲ್ಲಿ ಎದ್ದು ಕಾಣುತ್ತದೆ. 

‘ಮುಂಬೈ ಮಹಾನಗರದ ಸಂಕೀರ್ಣವೂ ಸಮ್ಮಿಶ್ರಮವೂ ಆದ ಜೀವನ ವಿಧಾನವನ್ನು ಸಮಾಜಶಾಸ್ತ್ರೀಯ ನೆಲೆಯಲ್ಲಿ ಬಲ್ಲಾಳರು ಕಾದಂಬರಿಗಳಲ್ಲಿ ದಾಖಲಿಸಿದ್ದಾರೆ. ಮಾನವೀಯ ನೆಲೆಯಲ್ಲಿ ಸ್ವಾತಂತ್ರ್ಯ, ಸಮಾನತೆ, ಅದಮ್ಯ ಜೀವನೋತ್ಸಾಹ ಮೊದಲಾದ ಅಂಶಗಳಿಂದ ಅವರ ಕಾದಂಬರಿಗಳು ಅವಲೋಕನೀಯವಾಗಿವೆ’ ಎನ್ನುತ್ತಾ ಈ  ಅಂಶಗಳನ್ನು ಪ್ರತಿಯೊಂದು ಕಾದಂಬರಿಯ ವಿಶ್ಲೇಷಣೆಯಲ್ಲಿ ಹುಡುಕಿರುವುದರಿಂದ ಓದುಗರು ಬಲ್ಲಾಳರ ಕಾದಂಬರಿಗಳ ಸ್ಪಷ್ಟವಾದ ಚಿತ್ರಣವನ್ನು ಪಡೆದುಕೊಳ್ಳಲು ಅನುಕೂಲವಾಗಿದೆ.

ಕತೆಗಾರರಗಿ ಬಲ್ಲಾಳರನ್ನು ಕಾಣುವಾಗ ಅವರ ಕತೆಗಳಲ್ಲಿ ಮುಖ್ಯವಾಗಿರುವ ನಗರ ಕೇಂದ್ರಿತ ಕುಟುಂಬಗಳಲ್ಲಿನ ವಿದ್ಯಮಾನಗಳು, ಇದುವರೆಗೆ ಯಾರೂ ಅಷ್ಟಾಗಿ ವಿಶ್ಲೇಷಿಸಿರದ ವೃದ್ಧಾಪ್ಯರ ಸಮಸ್ಯೆಗಳು ಇವೆಲ್ಲ ಗಮನೀಯ ಅಂಶ ಎಂಬುದನ್ನು ಗುರುತಿಸಲಾಗಿದೆ. ಕೆಲವು ಮುಖ್ಯ ಕತೆಗಳನ್ನು ವಿಶ್ಲೇಷಿಸುವಾಗ ಸರಳ, ನೇರ ಅಷ್ಟೇ ಸುಂದರವಾಗಿದ್ದು ಓದುಗರ ಆಸಕ್ತಿಯನ್ನು ಕಾಯ್ದುಕೊಂಡು ಹೋಗುವ ಗುಣ ಬಲ್ಲಾಳರ ಕತೆಗಳ ಹೆಚ್ಚುಗಾರಿಕೆ ಎಂಬುದನ್ನು ತಿಳಿಸಿಕೊಡುವಲ್ಲಿ ಈ ಕೃತಿಯು ಯಶಸ್ವಿಯಾಗಿದೆ.

ಬಲ್ಲಾಳರ ಗದ್ಯಸಾಹಿತ್ಯವೂ ವಿಶೇಷವಾಗಿದೆ. ಅವರ ಭಿನ್ನ ಬಗೆಯ ಗದ್ಯಕೃತಿಗಳನ್ನು ಪರಿಚಯಿಸುವಾಗ ಲೇಖಕರು ಅನೇಕ ಚಿಂತನೀಯ ವಿಷಯಗಳ ಮೇಲೆ ಬೆಳಕು ಹಾಯಿಸಿದ್ದಾರೆ. ಬಲ್ಲಾಳರ ‘ನಾನೊಬ್ಬ ಭಾರತೀಯ ಪ್ರವಾಸಿ’ ಪ್ರವಾಸ ಸಾಹಿತ್ಯ ಕೃತಿಯನ್ನು ಸರಳೀಕರಿಸಿ ಕೊಟ್ಟಿರುವುದೂ ವಿಶೇಷವಾಗಿದೆ. ಬಲ್ಲಾಳರ ಬಲು ಮುಖ್ಯ ಎನಿಸುವ ವಿಡಂಬನ ಕೃತಿಯಾದ ‘ಸಂಗ್ರಹ ಭಾರತಾಯಣ’/ ‘ಹವ್ಯಾಸಮುನಿ ಪ್ರಣಿತ ಸಂಗ್ರಹ ಭಾರತ’/ ‘ಆಧುನಿಕ ಮಿಳ್ಳಿ ಪುರಾಣ’ ಇವುಗಳಲ್ಲಿ ವೈಚಾರಿಕವಾದ ಗಂಭೀರವಾದ ರಾಜಕೀಯ ವಿಡಂಬನೆ ಇದೆ. ತಮ್ಮ ಸಮಕಾಲೀನ ಸಾಮೂಹಿಕ ವಿದ್ಯಮಾನಗಳನ್ನು ರಾಜಕೀಯ ಸ್ಥಿತ್ಯಂತರಗಳನ್ನು ತೀವ್ರವಾಗಿ ಬಲ್ಲಾಳರು ತರಾಟೆಗೆ  ತೆಗೆದುಕೊಂಡಿದ್ದಾರೆ ಎಂಬುದನ್ನು ಲೇಖಕರು ವಿಷದೀರಿಸಿದ್ದಾರೆ. 

ಬಲ್ಲಾಳರ ರೂಪಾಂತರ ನಾಟಕಗಳಾದ ‘ಗಿಳಿಯು ಪಂಜರದೊಳಿಲ್ಲ’, ‘ಮುಳ್ಳೆಲ್ಲಿದೆ ಮಂದಾರ’ ಈ ಕೃತಿಗಳು ವಿರಳ ಲಭ್ಯವಿರುವುದರಿಂದ ಅವುಗಳ ಸಮೀಕ್ಷೆಯ  ಭಾಗವು ಮುಖ್ಯವಾಗಿದೆ.

ಒಟ್ಟಿನಲ್ಲಿ ಬಲ್ಲಾಳರು “ಮಾನವತಾವಾದಿ, ಅನ್ಯಾಯ ಶೋಷಣೆ ಅತ್ಯಾಚಾರಗಳ ವಿರುದ್ಧ ತಮ್ಮ ಬರವಣಿಗೆ ಮೂಲಕ ಸತತವಾಗಿ ಹೋರಾಟ ನಡೆಸುತ್ತಾ ಬಂದವರು. ಜನಸಾಮಾನ್ಯರ ಬದುಕಿನ ವಿಭಿನ್ನ ನೆಲೆಗಳನ್ನು ಸಾಹಿತ್ಯದೊಳಗೆ ತಂದು ಚರ್ಚಿಸಿದ್ದಾರೆ. ಬಲ್ಲಾಳರು ಪ್ರಗತಿಶೀಲ ಚಿಂತಕ, ಸಾಹಿತಿಯಾಗಿ ನಮಗೆ ಮುಖ್ಯರಾಗುತ್ತಾರೆ. ಕೌಟುಂಬಿಕ ಸಾಮಾಜಿಕ ಸಮಸ್ಯೆಗಳಿಗೆ ಕಾರಣಗಳನ್ನು ಶೋಧಿಸುವ ಕೆಲಸ ಅವರ ಕೃತಿಗಳಲ್ಲಿ ನಿಚ್ಚಳವಾಗಿ ನಡೆದಿದೆ. ಮುಂಬೈ ಮಹಾನಗರದ ಯಾಂತ್ರಿಕವೆನಿಸುವ ಜೀವನ ಕ್ರಮದಲ್ಲೂ ಅವರು ಕಂಡದ್ದು ಜೀವಂತಿಕೆಯ ಬೆಳಕನ್ನು. ಬರವಣಿಗೆಯ ಮೂಲಕ ಸಾಮರಸ್ಯ ಭಾವೈಕ್ಯತೆ ರಾಷ್ಟ್ರಾಭಿಮಾನವನ್ನು ಎತ್ತಿ ಹಿಡಿದ ಬಲ್ಲಾಳರು ಬರೆದಂತೆ ಬದುಕಿದರು. ಮಾತು ಕೃತಿಗಳ ನಡುವೆ ಎರಡಿಲ್ಲದ ಬಾಳ್ವೆ ಅವರದು” ಎಂಬುದಾಗಿ ಬಲ್ಲಾಳರ ಸಮಗ್ರತೆಯನ್ನು ಸಮೀಕರಿಸಿರುವ ಮೂಲಕ ಒಬ್ಬ ಆದರ್ಶ ವ್ಯಕ್ತಿಯನ್ನು, ಸಾಹಿತಿಯನ್ನು  ಜನಮಾಧ್ಯಮದಲ್ಲಿ ಇನ್ನಷ್ಟು ಗುರುತು ಮೂಡಿಸುವಲ್ಲಿ ಉಪಾಧ್ಯ ಅವರು ಯಶಸ್ವಿಯಾಗಿದ್ದಾರೆ.

ಪ್ರಗತಿಶೀಲ ಕಾದಂಬರಿಕಾರ, ಕತೆಗಾರರಾದ ಬಲ್ಲಾಳರ ಎಲ್ಲ ಕೃತಿಗಳ ಪರಿಚಯ ಮತ್ತು ಮೌಲ್ಯಮಾಪನವು ಈ ಕೃತಿಯಲ್ಲಿ ಸಿಗುತ್ತದೆ. ಎಂಬುದಾಗಿ ಸಾಹಿತಿ ಡಾ. ಜನಾರ್ಧನ್ ಭಟ್ ಅವರು ಅಭಿಪ್ರಾಯಪಟ್ಟಿರುವುದು ನಿಜಕ್ಕೂ ಸ್ವಾಗತಾರ್ಹವಾಗಿದೆ.

‘ವಾತ್ಸಲ್ಯ ಪಥದ ರೂವಾರಿ ವ್ಯಾಸರಾಯ ಬಲ್ಲಾಳ’ರ ಅಚ್ಚುಕಟ್ಟಾದ ಜೀವನ, ಸಾಹಿತ್ಯ ಹಾಗೂ ಸೃಜನಶೀಲ ಚಿಂತನೆಗಳ ದರ್ಶನವನ್ನು ಈ ಕೃತಿಯಲ್ಲಿ ಡಾ. ಉಪಾಧ್ಯ ಅವರು ಮಾಡಿರುವುದು ಮುಂಬೈ ಸಾಹಿತಿಗೆ ಸಲ್ಲಿಸಿರುವ ಯೋಗ್ಯ ಗೌರವವಾಗಿದೆ. ಡಾ. ಉಪಾಧ್ಯ ಅವರಿಗೆ ಅಭಿವಂದನೆಗಳು. 

‍ಲೇಖಕರು avadhi

December 4, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: