ಮ ಶ್ರೀ ಮುರಳಿಕೃಷ್ಣ ನೋಡಿದ ‘ಕಾತಲ್‌’

ಲಿಂಗತ್ವ, ಪ್ರೀತಿಯೇ ಕಾತಲ್‌ ‘ (ದಿ ಕೋರ್‌ ) ಸಿನಿಮಾದ ಜೀವಾಳ

ಮ ಶ್ರೀ ಮುರಳಿ  ಕೃಷ್ಣ

—-

ಈ ಸಿನಿಬರಹದಲ್ಲಿ ಕೆಲವು Spoilers ಗಳು ಅನಿವಾರ್ಯವಾಗಿ ಇರುತ್ತವೆ. 114 ನಿಮಿಷಗಳ ʼ ಕಾತಲ್‌ (ದಿ ಕೋರ್) ಮಲಯಾಳಂ ಸಿನಿಮಾದ ನಿರ್ದೇಶಕರು ಜಿಯೊ ಬೇಬಿ.  ಇದರ ಚಿತ್ರಕಥೆಯನ್ನು ಆದರ್ಶ್‌ ಸುಕುಮಾರನ್‌ ಮತ್ತು ಪಾಲ್‌ಸನ್ ಸ್ಕಾರಿಯ ಬರೆದಿದ್ದಾರೆ.  ಸಿನಿಮೋಟೋಗ್ರಫಿ, ಸಂಕಲನ ಮತ್ತು ಸಂಗೀತದ ಕೆಲಸವನ್ನು  ಕ್ರಮವಾಗಿ ಸಾಲು ಕೆ ಥಾಮಸ್‌, ಫ್ರಾನ್ಸಿಸ್‌ ಲೂಯಿಸ್‌ ಮತ್ತು ಮ್ಯಾಥ್ಯೂಸ್‌ ಪುಲಿಕನ್‌ ಮಾಡಿದ್ದಾರೆ.  ಮುಖ್ಯ ಭೂಮಿಕೆಯಲ್ಲಿ ಮಲಯಾಳಂ ಸಿನಿಮಾರಂಗದ ಸೂಪರ್‌ಸ್ಟಾರ್ ಮಮ್ಮುಟಿ, ಜ್ಯೋತಿಕಾ ಇದ್ದಾರೆ.

ಕೇರಳದ ಒಂದು ಸಣ್ಣ ಅರೆನಗರ ಸ್ಥಳದಲ್ಲಿ ಸಿನಿಮಾದ ಕಥನ ಜರಗುತ್ತದೆ.  ನಿವೃತ್ತ ಬ್ಯಾಂಕರ್‌ ಮ್ಯಾಥ್ಯು ದೇವಸ್ಸಿ(ನಟ ಮಮ್ಮುಟಿ) ಮತ್ತು ಆತನ ಮಡದಿ ಓಮನ(ನಟಿ ಜ್ಯೋತಿಕಾ)ರದ್ದು ಸುಮಾರು ಇಪ್ಪತ್ತು ವರ್ಷದ ದಾಂಪತ್ಯ. ಎಡಪಂಥೀಯ ನಿಲುವುಳ್ಳ ರಾಜಕೀಯ ಪಕ್ಷ ಮ್ಯಾಥ್ಯುವನ್ನು ಸ್ಥಳೀಯ ಚುನಾವಣೆಯಲ್ಲಿ ಉಮೇದುವಾರನನ್ನಾಗಿ ನಿಲ್ಲಿಸುತ್ತದೆ.  ಆ ಸಮಯದಲ್ಲೇ ಓಮನ ತನ್ನ ಗಂಡನಿಂದ ವಿಚ್ಛೇದನವನ್ನು ಪಡೆಯಲು ಮುಂದಾಗುತ್ತಾಳೆ! ಕಾರಣ ಮ್ಯಾಥ್ಯುವಿನ ಸಲಿಂಗ ಸಂಬಂಧ! ಕೋರ್ಟಿನಲ್ಲಿ ತೀರ್ಮಾನ ಹೇಗೆ ಬರುತ್ತದೆ ಮತ್ತು ಮ್ಯಾಥ್ಯು ಚುನಾವಣೆಯಲ್ಲಿ ವಿಜಯಶಾಲಿಯಾಗುತ್ತಾನೆಯೇ ಎಂಬುದನ್ನು ಸಿನಿಮಾದ ಅಂತಿಮ ಘಟ್ಟ ತಿಳಿಸುತ್ತದೆ.

ಸಿನಿಮಾದ ಟೈಟಲ್‌ ಕಾರ್ಡನಲ್ಲಿ ಮೊದಲು ಕೃತಜ್ಞತೆಯನ್ನು ತಯಾರಿಕಾ ಘಟ್ಟದಲ್ಲಿ ದುಡಿದ ಡ್ರೈವರ್‌ಗಳಿಗೆ ಸಲ್ಲಿಸಿರುವುದು ವಿಶೇಷ ಸಂಗತಿಯೇ ಸರಿ! ಈ ಘಟ್ಟದಲ್ಲೇ ವಯೋಲಿನ್‌ನ ದುಃಖ ಭಾವದ ಟ್ಯೂನ್‌ ಕೇಳಿಬರುತ್ತದೆ. ಇದು ಅನವಾರಣಗೊಳ್ಳುವ ಸಿನಿಮಾದ ಹೂರಣದ ಒಂದು ಸುಳಿವನ್ನು ಕೊಡುತ್ತದೆ ಎನ್ನಬಹುದು. ಇದರಲ್ಲಿ ಮೂರು ಅಂಕಗಳ ಚಿತ್ರಕಥೆಯಿದೆ.  ಪಾತ್ರಗಳನ್ನು ಪರಿಚಯಿಸಿಕೊಳ್ಳುವ ಅಂಕ ಒಂದಿಷ್ಟು ಲಂಬವಾಗಿದೆ ಎನ್ನಬಹುದು.   ಮ್ಯಾಥ್ಯು ಮತ್ತು ಓಮನರಿಗೆ ತಮ್ಮ ಮಗಳು ಫೆಮಿ ಬಗೆಗೆ ಇರುವ ಪ್ರೀತಿ, ಓಮನಾಗೆ ತನ್ನ ಮಾವನ ಕುರಿತು ಇರುವ ಗೌರವ, ಅಕ್ಕರೆ ಮತ್ತು ಪ್ರೀತಿ, ಮ್ಯಾಥ್ಯುವಿಗೆ ತಂಕನ್(ಈತ ಮ್ಯಾಥುವಿನ ಸಲಿಂಗ ಸ್ನೇಹಿತ – ನಟ ಸುಧಿ ಕೋಳಿಕೋಡ್) ಮೇಲಿರುವ ಪ್ರೀತಿ, ತಂದೆಗೆ ಚಿಕ್ಕಂದಿನಿಂದಲೂ ಮ್ಯಾಥ್ಯುವಿನ ಭಿನ್ನ ಲೈಂಗಿಕ ಧೋರಣೆಯ ಬಗೆಗಿನ ರಕ್ಷಣಾತ್ಮಕ  ಪ್ರೀತಿ, ತಂಕನ್‌ಗೆ ತನ್ನ ಹತ್ತಿರದ ಸಂಬಂಧಿ ಹುಡುಗ (ಆತನಂತೆಯೇ ಲೈಂಗಿಕ ಪ್ರವೃತ್ತಿಯುಳ್ಳ)ನ  ಬಗೆಗೆ ಇರುವ ಕಾಳಜಿ ಮತ್ತು ಪ್ರೀತಿ, ಇದೇ ಹುಡುಗನಿಗೆ ತಂಕನ್‌ ನ ತಂಗಿಯ ಸಣ್ಣ ವಯಸ್ಸಿನ ಹುಡುಗಿಯ ಮೇಲಿರುವ ಮಮಕಾರ. ಮ್ಯಾಥ್ಯು ತುಂಬ ಕಾಲ ತಂದೆಯೊಡನೆ ಮಾತನಾಡಿರುವುದಿಲ್ಲ. ಕೊನೆಗೆ ತಂದೆ ಆತನನ್ನು ಆಲಂಗಿಸುವ ಕ್ಷಣಗಳಲ್ಲಿ ಸ್ಫುರಿಸುವ ಪ್ರೀತಿ, ನಾಲ್ಕು ಓಟುಗಳನ್ನು ಕಳೆದುಕೊಳ್ಳುವ ಸಾಧ್ಯತೆಯಿದ್ದರೂ, ಮ್ಯಾಥ್ಯು ಇಬ್ಬರು ಯುವ ಪ್ರೇಮಿಗಳು ಮದುವೆಯಾಗಲಿ ಎಂದು ಹುಡುಗಿಯ ತಂದೆಗೆ(ಮದುವೆಗೆ ತಕರಾರಿದ್ದ) ಸಲಹೆಯನ್ನು ನೀಡುವುದರ ಹಿಂದಿರುವ ಪ್ರೀತಿಯ ಬಗೆಗಿನ ಭಾವ, ಹೀಗೆ ಈ ಸಿನಿಮಾದಲ್ಲಿ ಅನೇಕ ತೆರನಾದ ಪ್ರೀತಿಗಳು ರಾರಾಜಿಸಿವೆ. ಇನ್ನು ನೋವಿನ ವಿಷಯಕ್ಕೆ ಬರುವುದಾದರೇ, ಮ್ಯಾಥ್ಯು, ಆತನ ತಂದೆ, ಓಮನ ಮತ್ತು ತಂಕನ್‌ರನ್ನು ಬಾಧಿಸುವ ದುಃಖದ ನೋವನ್ನು ತುಂಬ ಸೂಕ್ಷ್ಮವಾಗಿ, ಅಬ್ಬರವಿಲ್ಲದೆ  ದಾಟಿಸಲಾಗಿದೆ.

ಸಿನಿಮೋಟೋಗ್ರಫಿ ಸಿನಿಮಾದ ಗಹನತೆಯನ್ನು ಹಿಡಿದಿಡುವಲ್ಲಿ ಸೂಕ್ತ ಪಾತ್ರವನ್ನು ವಹಿಸಿದೆ. ಒಂದು ಉದಾಹರಣೆ: ಒಂದು ಶಾಟ್‌ನಲ್ಲಿ ಓಮನ ತನ್ನ ಅಣ್ಣ ಟಾಮಿಯನ್ನು ಒಮ್ಮೆಯಾದರೂ ತನ್ನ ಬಿಕ್ಕಟ್ಟಿನ ಸಂದರ್ಭದಲ್ಲಿ ತನ್ನ ಜೊತೆ ನಿಲ್ಲುವಂತೆ ಕೇಳುತ್ತಾಳೆ. ನಂತರ ಆಕೆ ರೂಮ್‌ ಒಳಗೆ ಹೋಗುವಾಗ ಆಕೆಯ ಪಾದಗಳನ್ನು ಮಸುಕಾಗಿಸಿ, ಟಾಮಿಯನ್ನು ಕುಬ್ಜನನ್ನಾಗಿ ತೋರಿಸಲಾಗಿದೆ! ಇನ್ನೂ ಕೆಲವು ಶಾಟ್‌ಗಳು ಗಮನೀಯವಾಗಿವೆ. ಸಂಗೀತವೂ ಹಿತಮಿತವಾಗಿದೆ. ಕೋರ್ಟ್ರೂಮಿನ ಕಲಾಪಗಳು ಸಹಜವಾಗಿ ಮೂಡಿಬಂದಿದೆ.

ಸಲಿಂಗ ಪ್ರವೃತ್ತಿಯ ಬಗೆಗೆ ಹೇಳುವುದಾದರೇ, ಸಿನಿಮಾದಲ್ಲಿ ಮ್ಯಾಥ್ಯುಗೆ ಸಿಕ್ಕಷ್ಟು ಸ್ಪೇಸ್‌ ತಂಕನ್‌ ಗೆ ಸಿಕ್ಕಿಲ್ಲ. ಮಧ್ಯಂತರಕ್ಕೆ ಮುನ್ನ ಒಂದು ಮಳೆಯ ಸನ್ನಿವೇಶದಲ್ಲಿ ತಂಕನ್‌ ಮ್ಯಾಥ್ಯುವಿನಿಂದ ಆತನ ಭಾವಚಿತ್ರವಿರುವ ಚುನಾವಣೆಯ ಕರಪತ್ರವನ್ನು ಪಡೆಯುತ್ತಾನೆ. ನಂತರ ಮಳೆಯಲ್ಲಿ ನೆನೆದುಕೊಂಡೇ ಕಾರಿನ ಒಳಗೆ ಹೋಗಿ, ಮ್ಯಾಥ್ಯುವಿನತ್ತ ಒಂದು ನೋಟವನ್ನು ಹರಿಸುತ್ತಾನೆ! ಅದರ ಭಾವ ವೀಕ್ಷಕರನ್ನು ತಟ್ಟುತ್ತದೆ.  ತಂಕನ್‌ ಪಾತ್ರಕ್ಕೆ ಕಡಿಮೆ ಮಾತುಗಳಿವೆ. ಇಡೀ ಸಿನಿಮಾದಲ್ಲಿ ಸಂಬಾಷಣೆ ಕಡಿಮೆಯಿದ್ದು, ದೃಶ್ಯಕಟ್ಟುಗಳ ಮೂಲಕ ನಿರ್ದೇಶಕರು ಸಮರ್ಥವಾಗಿ ಸಿನಿಮಾ ಭಾಷೆಯನ್ನು ರವಾನಿಸಿದ್ದಾರೆ.  ಸಿನಿಮಾದಲ್ಲಿ ಕಂಗಳ ಚಲನವಲನಗಳೂ ಸೇರಿದಂತೆ ಆಂಗಿಕ ಅಭಿನಯ ಗಮನಾರ್ಹವಾಗಿದೆ.

ಪಾತ್ರಗಳನ್ನು ಕಪ್ಪು-ಬಿಳುಪು ವರ್ಣದಲ್ಲಿ ಕಟ್ಟಲಾಗಿಲ್ಲ.  ಓಮನ ತನ್ನ ಸಂಕಟದ ಬಿಡುಗಡೆಯ ಜೊತೆಗೆ ಮ್ಯಾಥ್ಯುವಿಗೂ ವಿಮೋಚನೆ ಸಿಗಲಿ ಎಂದು ಬಯಸುವುದು ಗಮನಾರ್ಹ ವಿಚಾರ.  ಕೊನೆಯ ಬಾರಿ ಆತನೊಡನೆ ಹಾಸಿಗೆಯಲ್ಲಿ ರಾತ್ರಿ ಕಳೆಯಬೇಕೆಂದು ಅಕೆ ಹೇಳುವ ಸಂದರ್ಭವಂತೂ ಮುಖ್ಯವಾಹಿನಿಯ ಸಿನಿಮಾಗಳಲ್ಲಿ ಕಂಡು ಬರಲು ಅವಕಾಶವಿರುತ್ತದೆಯೇ ಎಂ ಪ್ರಶ್ನೆ ಏಳುತ್ತದೆ!

ನಾವು ಬಾಳುತ್ತಿರುವ ಇಪ್ಪತ್ತೊಂದನೇ ಶತಮಾನದಲ್ಲಿ, ಅದೂ ನಮ್ಮ ದೇಶದಲ್ಲಿ, ಗಂಡು-ಹೆಣ್ಣಿನ ಸಂಬಂಧ ಮಾತ್ರ ಪ್ರಾಕೃತಿಕವಾಗಿ ಸಹಜವಾದದ್ದು ಎಂಬ ಭಾವನೆ ನಮ್ಮಲ್ಲಿ ಅನೇಕರಿಗೆ ಆಳವಾಗಿ ಬೇರೂರಿದೆ ಎಂದರೆ ಅತಿಶಯೋಕ್ತಿಯಾಗುವುದಿಲ್ಲ.  ಅಂದರೆ ಲಿಂಗತ್ವವನ್ನು ತೀರ ಸಂಕುಚಿತ ದೃಷ್ಟಿಕೋನದಿಂದ ಕಾಣುವುದು, ತೆಳುವಾಗಿ ಅರ್ಥೈಸುವ ಜಾಯಮಾನ ವ್ಯಾಪಕವಾಗಿದೆ.  ಇತ್ತೀಚೆಗೆ ಸಲಿಂಗ ವಿವಾಹದ ಬಗೆಗೆ ಸುಪ್ರೀಂ ಕೋರ್ಟ್‌ ಯಾವ ತೆರನಾದ ತೀರ್ಪನ್ನು ನೀಡಿತು ಎಂದು ಸ್ಮರಿಸಬಹುದು.  ಕೇಂದ್ರ ಸರ್ಕಾರ ಸಲಿಂಗ ಪ್ರೀತಿ ಎನ್ನವುದು ನಗರ-ಮಹಾನಗರಗಳ ವಿದ್ಯಮಾನ ಎಂಬ ವಾದ ಹೂಡಿದ್ದನ್ನು ನಾವು ಗಮನಿಸಿದ್ದೇವೆ ! ಈ ಹಿನ್ನೆಲೆಯಲ್ಲಿ ʼ ಕಾತಲ್(ದಿ ಕೋರ್‌) ʼ ಸಿನಿಮಾ ಬಿಡುಗಡೆಯಾಗಿ ಸಿನಿರಸಿಕರ, ವಿದ್ವಾಂಸರ ವಲಯದಲ್ಲಿ ಚರ್ಚೆಗಳಿಗೆ ಗ್ರಾಸವಾಗಿದೆ.

ಸೂಪರ್‌ಸ್ಟಾರ್‌ ಮಮ್ಮುಟಿ ತಮ್ಮ ಕಂಫರ್ಟ್‌ ಝೋನ್‌ನಲ್ಲಿ ವಿರಾಜಮಾನವಾಗಬಹುದಿತ್ತು. ಆದರೆ ಅವರೊಳಗಿರುವ ಕಲಾವಿದ ಸೃಜನಶೀಲ, ಸಂವೇದನಾಶೀಲ, ಭಿನ್ನ ಪಾತ್ರಗಳತ್ತ ಗಮನಹರಿಸುತ್ತಿರುತ್ತಾನೆ ಎಂಬುದು ಈ ಸಿನಿಮಾ ವೀಕ್ಷಿಸಿದ ಯಾರಿಗಾದರೂ ಅನಿಸಿವುದು ಸಹಜ.  ಸುಮಾರು ಐವತ್ತು ವರ್ಷಗಳಿಂದ ಸಿನಿಮಾರಂಗದಲ್ಲಿ ತಮ್ಮ ನಟನೆಗಾಗಿ ಖ್ಯಾತಿಯನ್ನು  ಗಳಿಸಿರುವ ಮಮ್ಮುಟಿ ದಿಟ್ಟತನದಿಂದ ಮ್ಯಾಥ್ಯು ಪಾತ್ರವನ್ನು ವಹಿಸಿರುವುದು ನಿಜಕ್ಕೂ ಸ್ವಾಗತಾರ್ಹ ಬೆಳವಣಿಗೆ.  ʼ ದಿ ಗ್ರೇಟ್‌ ಇಂಡಿಯನ್‌ ಕಿಚನ್‌ ʼ ನಂತಹ ವಿವೇಚನಾಯುಕ್ತ ಸಿನಿಮಾವನ್ನು ನಿರ್ದೇಶಿಸಿದ ಜಿಯೊ ಬೇಬಿ ಈ ಸಿನಿಮಾದ ಮೂಲಕ ತಾನೊಬ್ಬ ಭಿನ್ನ ಬಗೆಯ ನಿರ್ದೇಶಕ ಎಂದು ಸಾರಿದ್ದಾರೆ!  ಬಹಳ ಸಂಯಮದಿಂದ ಸೂಕ್ಷ್ಮ ವಿಚಾರದ ಸಿನಿಮಾವನ್ನು ನೀಡಿದ್ದಾರೆ. ವೀಕ್ಷಕರ ರಸಾಸ್ವಾದನೆಗೆ ಒಂದು ಉತ್ತಮ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ.

ನಮ್ಮ ದೇಶದಲ್ಲಿ ಅಧಿಕಾರದ ಚುಕ್ಕಾಣಿಯನ್ನು ಹಿಡಿದವರು, ಮತೀಯ ನಾಯಕರು ಮತ್ತು ಇನ್ನೂ ಅನೇಕರಲ್ಲಿ ಮನೆಮಾಡಿರುವ ಸಲಿಂಗ ಸಂಬಂಧದ ಬಗೆಗಿನ ಸಾಂಪ್ರದಾಯಿಕ, ಜಡ್ಡುಗಟ್ಟಿದ ಮನೋಭಾವನೆಯನ್ನು ಭಂಜಿಸುವ ನಿಟ್ಟಿನಲ್ಲಿ ಈ ಸಿನಿಮಾ ರೂಪುಗೊಂಡಿರುವುದಲ್ಲಿ ಮಮ್ಮುಟಿ, ಜಿಯೋ ಬೇಬಿಯಾದಿಯಾಗಿ ಇಡೀ ಚಿತ್ರತಂಡ ಪ್ರಶಂಸೆಗೆ ಅರ್ಹರು.

‍ಲೇಖಕರು avadhi

December 4, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: