ಸತ್ಯಮಂಗಲ ಮಹಾದೇವ
ಮುಖವಾಡ ಮಾರುವ ಮೊಗವಯ್ಯ ಬಂದವನೆ
ಚೀಲದ ತುಂಬಾ ಮುಖವಾಡ ತುಂಬಿಕೊಂಡು
ಮುಖವಾಡ ಬೇಕೆ ಮುಖವಾಡ ಎಂದು ಕೂಗುತಾವ್ನೆ
ಕೂಗುವ ಸದ್ದು ಕೇಳಿ
ಜೋಳಿಗೆಯ ಮುಖವಾಡಗಳು ಎದ್ದು
ಮುಸಿ ಮುಸಿ ನಗುತಾವೆ ಕಂಡೆನೇ ಸೋಜಿಗವಾ
ಅಕ್ಕ ಕಂಡೆನೇ ಈ ಮಾಯವ
ಈ ಮಾಯಾದ ಮರ್ಮವ
ಒಂದೇ ಕಾಸು ಹೆಚ್ಚಿಗಿಲ್ಲ
ನಗುವುದಕೊಂದು, ಅಳುವುದಕೊಂದು
ಮರೆಮಾಚುವುದಕೊಂದು, ಮೋಸಕ್ಕಿನ್ನೊಂದು
ಊಟಕ್ಕೆ ಒಂದು, ಕುರ್ಚಿಗಿನ್ನೊಂದು
ಸೋಗಿಗೆ ಒಂದು , ಸೊಗಸಿಗೂ ಒಂದು
ಎಂದು ಊರೆಲ್ಲಾ ಕೂಗುತಾವ್ನೆ ಮೊಗವಯ್ಯ
ಕಾಸು ಒಂದೇ ಆಣಿ ಕೊಳ್ಳುವ ಬಾರೆ
ಕೊಳ್ಳುವ ಬಾರೆ ಅಕ್ಕಯ್ಯ ಮುಖವಾಡ
ಕನ್ನಡಿಯ ಕಂಡು ಸಾಕಾಯ್ತು

ಕನ್ನಡಿಯ ಗಂಟು ನಗಲೊಲ್ಲದು
ಅಳಲೊಲ್ಲದು ನನ್ನ ಕೂಡೆ
ನಗಿಸಲೊಲ್ಲದ ಗಂಟಕೂಡಿ ಬಾಳಿ ಸಾಕಾಯ್ತು
ಎಂತಕಿಲ್ಲದ ಗಂಟು ಒಗೆದು
ಮಾತು ಮಾತಿಗು ಮೋಹಿಸುವ
ಮುಖವಾಡ ಕೊಳ್ಳುವ ಬಾರೆ ಅಕ್ಕಯ್ಯ
ಮನೆಯಲ್ಲ ಬಯಲಲ್ಲ
ಕಿಟಕಿಯಿಲ್ಲ ಬಾಗಿಲಿಲ್ಲ
ದೀಪವ ಹಚ್ಚುವ ತಂಟೆಯಿಲ್ಲ
ಅಡುಗೆಮಾಡಿ, ಬಟ್ಟೆ ಒಗೆಯುವ ರೇಜಿಗೆಯಿಲ್ಲ
ಕೂಸುಗಳ ಮಾಸು ತೊಳೆಯುವ ಆಟವಿಲ್ಲಿಲ್ಲ
ಮೊಗವಯ್ಯನ ಮಾತೆ ಸೊಗಸು
ಆತನ ಮಾಟದ ಸೊಗಸು ಕ್ಷಣಕ್ಷಣಕು
ಬದಲಿಸುವಬಟ್ಟೆ ಸೊಗಸು ಬಾರೆ ಅಕ್ಕಯ್ಯ
ಅವನ ನಡೆಗೆ ಮೂಜಗವೇ ಕುಣಿಯುತೈತೆ
ಮುಖವಾಡಗಳ ಮಾರುತಾನೆ ಮುಖಗಳ ಹೆಣೆದು
ಮಾರುವಂತ ಮೋಜು ನೋಡು ನೋಡೆ ಅಕ್ಕಯ್ಯ
ಹೆಜ್ಜೆ ಹೆಜ್ಜೆಗೂ ಸೋಜಿಗವೇ ಬಾರೆ ಅಕ್ಕಯ್ಯ
ಬೇಲಿಗಳ ಕಿತ್ತವನೆ, ಬಯಲ ಒಂದು ಮಾಡವನೆ
ಜಗಮಗಿಸುವ ದೀಪಗಳ ಬೆಳಕಲಿ
ಕಪ್ಪು ಮುಖ ಬೆಳ್ಳಗಾಗಿ ತುಟಿಗೆ ರಂಗು ತುಂಬುವಂತೆ
ಕಟ್ಟಕಡೆಯವನ ಮುಖ ಹೊಳಿತಾವೆ ಒಂದು ಜಾವ
ಕನಸುಗಳ ಕೊಳ್ಳೊಣ ಬಾರೆ ಅಕ್ಕಯ್ಯ
ಮೋಡಿಮಾಡುವ ಮುಖವಾಡಗಳು
ಕೈಯಲಿಡಿದರೆ ಮೊಗವಯ್ಯನೇ ನಗುತಾನೆ
ಮುಖವಾಡದ ತುಂಬಾ ಅವನೇ ಕುಣಿತಾನೆ
ಕಣ್ಣು ತೆರೆಯೇ ತಂಗ್ಯವ್ವ ಕಣ್ಣು ತೆರೆಯೇ
ಮುಖವಾಡ ಕಳಚಿ ಮೊಗವ ತೋರೆಂದು ಹಿಡಿಯೆ
ಮಾಯಾದ ಮಾತ ಕಡಿದು
ಸೋಜಿಗವ ಸೋಸಿ ಹಿಡಿಯೇ

ಕನ್ನಡಿಯ ಕದವತೆರೆದು ಮುಖವಾಡ ಕಿತ್ತು ಎಸೆದು
ಮುಖವಾಡ ಕಿತ್ತೆಸೆ ಬಾರೆ ತಂಗವ್ವ
ಕನ್ನಡಿಯ ಹಿಡಿಯ ಬಾರೆ ತಂಗವ್ವ
ಮುಖವಾಡ ಕಳಚಿ ಮುಖವಾಡ ಕಳಚಿ
ನೋಡೆ ಒಳಗಣ್ಣ ತೆರೆದು ನೋಡೆ ತಂಗ್ಯವ್ವ
ನಗುವ ಮಾಯ ಇದು ನಮ್ಮನೆಯ ಬೆಕ್ಕೆ ಕಾಣವ್ವ
ಇದು ಚೆಂದುಳ್ಳ ಚೆಲುವ ಬೆಕ್ಕು ಕಾಣವ್ವ
ಹೊಸ ಮುಖವಾಡ ಹಾಕಿ
ಮುಖವಾಡ ಮಾರಲು ಬಂತು ಕಾಣವ್ವ
ಮನದ ನಂಬಿಕೆ ಮೊಗದ ಕನ್ನಡಿ
ನಗುವ ಬಾರೆ ಬಿಂಕ ತೊರೆದು
ಮುಖವಾಡಗಳ ಹಂಗ ಬಿಡಿಸಿ
ಕಳಚುವ ಕಣ್ಣಿಗೇಕೆ ಕನಸು
ಕನ್ನಡಿಯೇ ಎಂತಾ ಸೊಗಸು ಬಾರೆ ತಂಗ್ಯವ್ವ
ಕನವರಿಸಿದರು ಬಾರದಿರುವ ಕನಸು ಹೋಯ್ತಲ್ಲೇ
ಮೊಗವಯ್ಯ ಮತ್ತೆ ಬರುವನು
ಮುಖವಾಡಗಳು ಬೇರೆ, ಕಾಲ ಬೇರೆ !
ತಣ್ಣಗಿರುವ ಕಸುವ ಕಲಿಯುವ ಬಾರೆ ತಂಗ್ಯವ್ವ
ಕಳಚದಿರುವ ಹೊಸ ಕನಸ ಕಟ್ಟುವ ಬಾರೆ ತಂಗ್ಯವ್ವ






0 Comments