ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸತ್ಯಬೋಧ ಜೋಶಿ ಹೊಸ ಕವಿತೆ- ಕಹಿ (ಹೂವಿನ) ಸ್ವಗತ

ಸತ್ಯಬೋಧ ಜೋಶಿ

ಬೃಂಗದೂರಿಗೆ  ನನ್ನ ಮಸುಕು ರಂಗನೇ ತೋರಿ
ಕರೆದು ತಾರೆಯಾ ಗೆಳತಿ ಹೊತ್ತು ಮೀರುತಿದೆ
ಬಾಡಿ ಮರಳುವ ಮುನ್ನ ತಿರುಳುಗಟ್ಟುವ ಆಸೆ
ಕಹಿಯೇ ಇತ್ತರು ಅದುವೂ ಶಿವನಭಾಷೆ

ಕಂದನಾಡುವ ನುಡಿಯ ಮುತ್ತನಾಗಿಸೊ ತೊದಲು
ಸೊಲ್ಲನಿಂಚರವೆನಿಸೋ ಇಹವು ನಾನು
ನನ್ನ ಇರುವಿಕೆ ಅಳಿದು ಮೀರಿ ಬೆಳೆದಂತೆಲ್ಲ
ಇಂಪ ನೀಡುವ ಅಪಸ್ವರವು ನಾನು

ಏಳುತೇಳುತ ಕೆಡವಿ ನಡಿಗೆ ರೂಪಿಸೊ ಕಸುವು
ಮೊಳಕೆ ಪಸೆಯನು ಅಳೆವ ಅವನಿ ನಾನು
ಪಾಶಪೂಸಿಯೂ ಮೊರೆವ ರೋದನವ ಅಡಗಿಟ್ಟು
ಪನ್ನತಿಕೆಯನು ಬೆಳೆಸೋ ಸೃಷ್ಟಿ ನಾನು

ಆನಂದ, ಮಕರಂದದ ಮೇರುಗಿರಿಗಳ ಅಡಿಯ
ನಡಿಗೆ ತಪ್ಪಿಸಿ ಕಾಡೋ ಭವವು ನಾನು
ಹಸಿಕಂಪಿನನುಭವವ ಮತ್ತಷ್ಟು ನಿಜಗೊಳಿಸಿ
ಮಾಯಮುಕುತಿಯ ಬೆಸೆಯೊ ಅನುಭಾವ ನಾನು

ಕರೆದು ತರುವೆಯಾ ಗೆಳತಿ!!!

‍ಲೇಖಕರು Admin

14 July, 2021

1 Comment

  1. ಬದರಿನಾಥ ಪಳವಳ್ಳಿ

    ಶಿವನ ಭಾಷೆ ಎಂದಿಗೂ ನಮಗೆ ಸಕಾರಾತ್ಮತೆಯೇ ಅಲ್ಲವೇ! ಹಾಗಾಗಿ ಲೋಪ ದೋಷಗಳನೆಲ್ಲ ಅವನ ಚರಣದಿ ಸಲ್ಲಿಸುತ್ತೇವೆ ನಾವು.

    ಆ ಮೂಲಕ ತಿದ್ದಿ ಕೊಳ್ಳಲು ನಮ್ಮನ್ನೇ ನಾವು ಒಡ್ಡಿಕೊಳ್ಳುತ್ತೇವೆ. ಹಾಗಾಗಿಯೇ, ಸಣ್ಣಪುಟ್ಟ ಅಪಸ್ವರಗಳು ಸಹ ತಾಲೀಮಿನ ನಂತರ ಸುಸ್ವರಗಳೇ ಆಗುವುದು ನಿಶ್ಚಿತ.

    ಕವನದ ಹೂರಣ, ಭಾಷೆಯ ಬಳಕೆ ಮತ್ತು ಕವನದ ಉಪ ಸಂಹಾರಳೆಲ್ಲವೂ ಚೆನ್ನ ಚೆನ್ನ. ಈ ಕವನವು ಸರ್ವಕಾಲಿಕ.

    ನಿಮ್ಮ ಕವನದ ಅಮಲಿನಲ್ಲಿಯೇ ನಮಗೂ ತಿರುಳುಗಟ್ಟುವ ಆಸೆ ಚಿಗುರುತಿದೆ ಸಾರ್.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading