ಶ್ರೀವಿದ್ಯಾ ಸಿಂಗಾಪುರ ಡೈರಿ- ಸಿಂಗಾಪುರ ವಿಹಾರ ನೌಕೆ…

ಶ್ರೀವಿದ್ಯಾ

ಜಾಗತಿಕ ಮಟ್ಟದ ಆರ್ಥಿಕತೆಯ ಬಹುಪಾಲು ಕಡಲ ವ್ಯಾಪಾರಕ್ಕೆ ಅವಲಂಬಿತವಾಗಿದೆ. ನಾವು ದಿನನಿತ್ಯ ಬಳಸುವಂತಹ ಆಹಾರ, ಎಲೆಕ್ಟ್ರಾನಿಕ್ಸ್, ಅಥವಾ ಇನ್ನಿತರೇ ಉತ್ಪನ್ನಗಳು ದೊಡ್ಡ ಮೊತ್ತದಲ್ಲಿ ಒಂದು ದೇಶದಿಂದ ಇನ್ನೊಂದು ದೇಶಕ್ಕೆ ತಲುಪಲು ಹಡಗುಗಳೇ ಸೂಕ್ತ. ಹಾಗೆಂದು ಕೇವಲ ಗಟ್ಟಿಮುಟ್ಟಾದ ಹಡಗುಗಳು ಮಾತ್ರ ಇದ್ದಲ್ಲಿ ಕೆಲಸ ಪೂರ್ಣಗೊಳ್ಳುವುದಿಲ್ಲ. ಕಿನಾರೆಯಿಂದಲೂ ಸಮರ್ಪಕ ಬೆಂಬಲದ ಅಗತ್ಯ ಇದೆ.

ಹಡಗುಗಳಿಗೆ ಬೇಕಾದ ತೈಲ, ಬಿಡಿಭಾಗಗಳು ಹಾಗೂ ಜನರ ನೆರವು ಸರಿಯಾದ ಸಮಯದಲ್ಲಿ ದೊರಕುವಂತೆ ಆಗಬೇಕು. ಈ ವಿಚಾರದಲ್ಲಿ ಸಿಂಗಾಪುರದ ಬಂದರು ವಿಶ್ವದೆಲ್ಲೆಡೆ ಸೈ ಎನಿಸಿಕೊಂಡಿದೆ. ಕಳೆದ ಕೆಲ ದಶಕಗಳಿಂದ ಇದು ಪ್ರಮುಖ ಕೇಂದ್ರವಾಗಿ ಮಾರ್ಪಟ್ಟಿದೆ. ಮಲಾಖ ಜಲಸಂಧಿಯ ಪೂರ್ವ ತುದಿಯಲ್ಲಿ ಈ ಬಂದರು ನೆಲೆಸಿದೆ. ಏಷ್ಯಾದಿಂದ ಹೊರಡುವ ಹಾಗೂ ಏಷ್ಯಾಕ್ಕೆ ಬರುವ ಬಹುತೇಕ ಹಡಗುಗಳು ಈ ಮಾರ್ಗವಾಗಿ ಸಂಚರಿಸುತ್ತವೆ.

ಪ್ರಪಂಚದ ಮೂರನೇ ಒಂದು ಭಾಗದಷ್ಟು ಹಡಗುಗಳು ಸರಕುಗಳನ್ನು ಹೊತ್ತು ಸಿಂಗಾಪುರದ ಗಡಿಯನ್ನು ದಾಟುತ್ತವೆ. ಇಂಡೋನೇಷ್ಯಾ ಹಾಗೂ ಸಿಂಗಾಪುರದ ದಂಡೆಗಳ ನಡುವೆ ಕಿರಿದಾದ ಕಣಿವೆ ರೀತಿಯಲ್ಲಿ ಈ ಪ್ರದೇಶ ರಚನೆಗೊಂಡಿವೆ. ಈ ಎರಡು ದೇಶಗಳ ತೀರಗಳ ಅಂತರ ಕೇವಲ ಐದೂವರೆ ಕಿಲೋಮೀಟರ್. ಈ ಬಂದರು ಬಾಗಿದ ಆಕಾರವನ್ನು ಹೊಂದಿದ್ದು, ಕೆಲವಡೆ ಅಗಲ ಮತ್ತೆ ಕೆಲವಡೆ ಕಿರಿದಾದ ಸ್ಥಳಗಳಿಂದ ಆವೃತಗೊಂಡಿವೆ.

ಒಂದು ವೇಳೆ ನೌಕೆಯ ಚಾಲಕ ರು ಹೊಸಬರಾಗಿದ್ದರೆ, ಅಂಥವರು ತಮ್ಮ ತಮ್ಮ ಹಡಗುಗಳ ಗಾತ್ರ ಹಾಗೂ ಆಕಾರಗಳ ಬಗ್ಗೆ ಗಮನಹರಿಸುವ ಜೊತೆಗೆ ಬಂದರಿನ ಬಗ್ಗೆಯೂ ಸಂಪೂರ್ಣ ಮಾಹಿತಿಯನ್ನು ಪಡೆದಿರುವುದು ಅಗತ್ಯವಾಗಿದೆ.ಪ್ರತಿ 2-3 ನಿಮಿಷಕ್ಕೊಂದು ಎಂಬಂತೆ ಪ್ರತಿ ದಿನಕ್ಕೆ ಸುಮಾರು ೧,೦೦೦ ಹಡಗುಗಳು ಇಲ್ಲಿ ಸಂಚಾರ ಮಾಡುತ್ತವೆ. ವರ್ಷಕ್ಕೆ ಸುಮಾರು ೧. ೩೦, ೦೦೦ ಹಡಗುಗಳ ಜೊತೆ ವ್ಯಾಪಾರ ವಹಿವಾಟು ನಡೆಯುತ್ತಿರುತ್ತವೆ.

ಏಕ ಕಾಲದಲ್ಲಿ ಒಂದು ಸಾವಿರ ಹಡಗುಗಳು ನಿಲ್ಲುವಷ್ಟು ಸ್ಥಳದ ಅವಕಾಶ ಇಲ್ಲಿದೆ. ಸಿಂಗಾಪುರದ ಬಂದರು ಕಾರ್ಯಾಚರಣೆಗಳ ನಿಯಂತ್ರಣ ಕೇಂದ್ರ, ಗಡಿ ಭಾಗಗಳಲ್ಲಿ ಸಂಚರಿಸುವ ಹಡಗುಗಳ ಸಂಪೂರ್ಣ ಮಾಹಿತಿಯನ್ನು ಸಂಗ್ರಹಿಸುತ್ತವೆ. ಈ ಕೇಂದ್ರವು ಒಂದೇ ಬಾರಿಗೆ ಸುಮಾರು ೧೦,೦೦೦ ಮಾರ್ಗಗಳ ಜೊತೆ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ. ಇಲ್ಲಿ ತೈಲ ಉತ್ಪಾದನೆ ನಡೆಯೋದಿಲ್ಲ ಆದರೂ ಹಡಗುಗಳಿಗೆ ಇಂಧನ ತುಂಬಿಸಿಕೊಳ್ಳಲು ವ್ಯವಸ್ಥೆ ಇರುವ ಪ್ರಪಂಚದ ಪ್ರಮುಖ ಬಂದರುಗಳಲ್ಲಿ ಇದು ಕೂಡ ಒಂದು.

ಕಡಲ ವ್ಯಾಪಾರ ಹಾಗೂ ಸಾಗಾಟ ನಡೆಯುವ ಈ ಬಂದರಿನಲ್ಲಿ ಸುಮಾರು 1,70, 000 ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಿಂಗಾಪುರವು ಅಂತರಾಷ್ಟ್ರೀಯ ಕಡಲ ಸಂಸ್ಥೆಯ ಸದಸ್ಯ ರಾಷ್ಟ್ರ ಕೂಡ ಹೌದು. ಅತ್ಯಂತ ಕಡಿಮೆ ಅವಧಿಯಲ್ಲಿ ಪ್ರತಿ ಹಡಗಿಗೆ ೨,೦೦೦ ಕಂಟೇನರ್ ಗಳನ್ನು ಹಸ್ತಾಂತರಿಸುವಷ್ಟು ಸೌಕರ್ಯಗಳನ್ನು ಇಲ್ಲಿ ಕಾಣಬಹುದು.

ವಿಹಾರ ನೌಕೆಗಳಿಗೂ ಈ ಬಂದರಿನಲ್ಲಿ ನಿಲ್ದಾಣ ದ ವ್ಯವಸ್ಥೆ ಇದೆ. ವರ್ಷವೊಂದಕ್ಕೆ 30 ಅಂತಾರಾಷ್ಟ್ರೀಯ ಹಡಗುಗಳು ಈ ಬಂದರಿಗೆ ಭೇಟಿ ನೀಡುತ್ತವೆ. ಸಿಂಗಾಪುರ ಹಡಗುಗಳ ನೋಂದಣಿಯು, ವಿಶ್ವದ ೫ ಅತಿ ದೊಡ್ಡ ಹಡಗು ದಾಖಲಾತಿಗಳಲ್ಲಿ ಒಂದಾಗಿದೆ. ಪ್ರಸಕ್ತ ೪,೪೦೦ ಹಡಗುಗಳು ಸಿಂಗಾಪುರದಲ್ಲಿ ನೋಂದಾಯಿಸಲಾಗಿದೆ. ಸಿಂಗಾಪುರದ ರಾಷ್ಟ್ರೀಯತೆಯನ್ನು ಪಡೆದ ಹಡಗುಗಳು ಇವಾಗಿವೆ. ಸುಮಾರು ೧೨೦ ದೇಶಗಳ 600 ಬಂದರುಗಳ ಜೊತೆ ಸಿಂಗಾಪುರ ಬಂದರು ನಿರಂತರ ಸಂಪರ್ಕದಲ್ಲಿ ಕೆಲಸ ಮಾಡುತ್ತಿದೆ.

ಹಡಗು ಕಂಪೆನಿಗಳಿಗೆ ತಡೆರಹಿತ ಜಾಗತಿಕ ವ್ಯಾಪಾರ ಸಂಪರ್ಕವನ್ನು ಕಲ್ಪಿಸಲು ಇಲ್ಲಿ ಅವಕಾಶ ನೀಡಲಾಗುತ್ತಿದೆ. ಸಿಂಗಾಪುರವು 2021 ಕ್ಸಿನ್ಹುವಾ-ಬಾಲ್ಟಿಕ್ ಇಂಟರ್ನ್ಯಾಷನಲ್ ಶಿಪ್ಪಿಂಗ್ ಸೆಂಟರ್ ಡೆವಲಪ್ಮೆಂಟ್ ಸೂಚ್ಯಂಕದಲ್ಲಿ ವಿಶ್ವದ ಅಗ್ರ ಹಡಗು ಕೇಂದ್ರವಾಗಿ ಸತತ ಎಂಟನೇ ವರ್ಷವೂ ತನ್ನ ಸ್ಥಾನವನ್ನು ಉಳಿಸಿಕೊಂಡಿದೆ. ಇದರ ನಂತರ ಲಂಡನ್, ಶಾಂಘೈ, ಹಾಂಗ್ ಕಾಂಗ್ ಮತ್ತು ದುಬೈ ಎಂದು ಗುರುತಿಸಲಾಗಿದೆ. ಸಿಂಗಾಪುರದಲ್ಲಿ ದೇಶದೊಳಗಿನ ಕಾನೂನುಗಳಂತೆ ಜಲ ಮಾರ್ಗಕ್ಕೂ ಹಾಗೂ ಈ ಜಲಸಂಧಿ ದಾಟುವ ಹಡಗುಗಳಿಗೂ ಕೆಲವೊಂದು ನಿಯಮಗಳಿವೆ.

ಸಿಂಗಾಪುರದ ಹವಾಮಾನದ ಬಗ್ಗೆ ಸಂಪೂರ್ಣ ಮಾಹಿತಿ ಪೈಲೆಟ್ ಹಾಗೂ ಸಿಬ್ಬಂದಿಗೆ ಇರಬೇಕು. ಅನಿರೀಕ್ಷಿತವಾಗಿ ಸಿಡಿಲು ಮಿಂಚಿನ ಮಳೆ, ಕೆಲವೊಮ್ಮೆ ಹೇಜ಼್ ನಿಂದಾಗಿ ಬೆಳಕಿನ ಪ್ರಮಾಣ ಕಡಿಮೆ ಸಾಧ್ಯ. ಇಂತಹ ಸಮಯಗಳಲ್ಲಿ ನಾವೆಗಳಲ್ಲಿರುವ ದೀಪಗಳನ್ನು ಹಾಗೂ ಹಡಗು ಆಗಮಿಸುತ್ತಿರುವ ಸೂಚನೆಗೆ ಶಬ್ದವನ್ನು ಬಳಸಬೇಕಾದುದು ನಿಯಮ. ರಾತ್ರಿ ವೇಳೆ ಈ ಪ್ರದೇಶವನ್ನು ದಾಟುವಾಗ ಹಡಗಿನ ಹಸಿರು ಬಣ್ಣದ ದೀಪವನ್ನು ಉರಿಸಿರಬೇಕು.

ಜಲಸಂಚಾರದ ಪಥವನ್ನು ಉಲ್ಲಂಘಿಸದೆ, ಪ್ರತಿ ಹಡಗುಗಳ ನಡುವೆ ಅಂತರ ಕಾಯ್ದುಕೊಳ್ಳಬೇಕು. ಸಿಂಗಾಪುರದ ಭಾಗವನ್ನು ದಾಟುವವರೆಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಹಂತ ಹಂತಗಳಲ್ಲಿ ಮಾಹಿತಿಯನ್ನು ರವಾನಿಸಬೇಕು. ವಿವರವಾದ ಸಮುದ್ರಯಾನ ಯೋಜನೆ, ಉತ್ತಮ ನೌಕಾ ಪ್ರಾವೀಣ್ಯತೆ ಹಾಗೂ ಸಾಂದರ್ಭಿಕ ಅರಿವು ಇದ್ದಲ್ಲಿ ಜಲಸಂಚಾರ ಸುಗಮವಾಗಲಿದೆ.

‍ಲೇಖಕರು Admin

July 14, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: