ಸಖನಾಗುವ ಹೊತ್ತು
ಅನಂತ ರಮೇಶ್
ಗಂಡು ಕ್ರಾಪಿಗೆ
ತುಂಡು ಉಡುಗೆಗೆ
ಮಾಲ್ಗಳಲ್ಲಿಯ ಮೊಬೈಲ್ ನಡಿಗೆಗೆ
ಕ್ಲಿಕ್ಕಿಸುವ ಪ್ರವಾಹಿಗರಲ್ಲಿ
ಪಳೆಯುಳಿಕೆಯ ಕಡೆಗೆ ಕ್ಯಾಮರ
ಕಣ್ಣನಿಟ್ಟ ಪಂಟಗೆ!
ಕ್ಷಮೆ ಕೇಳಿ…
ತರಳೆ
ನೀಳ ಜಡೆ ಬಿಲ್ಲೆ
ತ್ರಿಭಂಗಿ ಬಿಂಕವಿಲ್ಲದೆ ಬೆನ್ನು
ತೋರಿ ನಿರ್ಲಜ್ಜ ಕಣ್ಣುಗಳಿಗೆ
ಭರ್ಜರಿ ಆಹಾ..ರ ವಾದವಳಿಗೆ…
ಯಾವ ಸಮೀಕರಣದಲ್ಲಿ
ಉಳಿ ಹಿಡಿದವನ ಬೆರಳ
ಲೆಕ್ಕಕ್ಕೆ ಸಿಕ್ಕಿ ಅರಳಿದ
ಅಳೆಯಲಾಗದ
ಕಲೆಗೆ ಉಳಿದೆ
ಲೇಖನಿಯ ಮೋಹಿಗರ
ಘನ ಸೆರೆಯಲ್ಲಿ ದ್ರವಿಸಿ
ಕಾವ್ಯ ಹರಿತ್ತಿಗೆ ಹರಿದೆ
ನೋಡುಗರ ಕನಸ ಪುಚ್ಚಗಳಿಗೆ
ಬಣ್ಣಗಳ ಹಚ್ಚಿ
ಕಲೆಯ ಆಲಯದೊಳಗೆ
ನಿಂತ ನೀ ಶಿಲಾಗೀತೆ
ತಿರುಗದಿರು ಇತ್ತ!
ನಿನ್ನ ಮುಖದ ಮಂದಹಾಸದ
ಕಲ್ಪನೆಯಲ್ಲಿ ಚಿತ್ತಾಗಲಿ ಚಿತ್ತ
ಇದು ಉಳಿಗೆ ಲೇಖನಿ ಸೋತು
ಜಡವಲ್ಲದ ಜಡೆಗೆ ಕವಿತೆ ಸೋತು
ಕವಿ ನಿನಗೆ ಸಖನಾಗುವ ಹೊತ್ತು!
ಕಲ್ಲಾಗಬೇಡ ನೀಳವೇಣಿ

ನಾಗರಾಜ ಹರಪನಹಳ್ಳಿ. (ಕಾರವಾರ)
ಕಲ್ಲಾಗಬೇಡ ನೀಳವೇಣಿ
ಪದ್ಮಪೃಷ್ಠ ಪೃಥಿವಿ
ನಾಗವೇಣಿ ನೀಲಾಲಕಿ
ನೀಲಾಂಬರಿ
ನಿನ್ನಲ್ಲಿ ; ನಿನ್ನ ಬಳಿ ಒಂದು
ನಿವೇದನೆಯುಂಟು
ಕಲ್ಲಾಗಬೇಡ ನಿತಂಬಿನಿ
ನೀನು ಬೆನ್ನು ತೋರಿಸಿದ್ದು ಸಾಕು
ಕೈಮುಗಿದು ಕರದಿ ಪುಷ್ಪಗಂಧಿಯಾಗಿ
ನಿಲಕಂಬದ ನಿಲುವು ಸಾಕು
ಪಾದಗಳ ಬಳಿ ಕುಳಿತು
ಭಾವಗಳ ಭಿನ್ನಹವಿಸಬೇಕಿದೆ
ಒಮ್ಮೆ ತಿರುಗಿದೆಯಾದರೆ
ಸಾರ್ಥಕವಾದೀತು ಭಾವಜೀವ
ಕಲ್ಲಾಗಬೇಡ ದಂಡೆಯಂಥವಳೇ
ಒಮ್ಮೆ ಸಸಿಯಾಗಿ ಬೆಳೆದು
ಮೊಗ್ಗಾಗಿ ಬಿರಿದು
ಹೂವಾಗಿ ಅರಳಿ
ನಾಗರಜಡೆಯಲ್ಲಿ ಜಗವ ಬಿಗಿದು
ಕೊನೆಗೆ
ಶಿಲಾಬಾಲಕಿಯಾಗಿ ಗುಡಿ ಸೇರಿದವಳೇ
ಮತ್ತೆ ಕಲ್ಲಾಗಬೇಡ ನೀಲೋತ್ಪಲೆ
ಹಂಚಿಕೊಳ್ಳಲು ಮೈಯಲ್ಲಾ ಕಣ್ಣಾಗಿ
ಪದ್ಮಪತ್ರದ ಜಲಬಿಂದುವಾಗಿ
ಕಿರುಬೆರಳ ಸ್ಪರ್ಶಕೆ ಕಾದಿರುವೆ
ಕಲ್ಲಾಗಬೇಡ ನೀಳವೇಣಿ
ಇರುಳು ಹಗಲಹೊದ್ದು
ಮಲಗಿರುವ ಪೃಥ್ವಿಯೇ
ನಿನ್ನಲ್ಲಿ ಬೀಜವಾಗಿ ಬಿದ್ದಿರುವೆ
ಜೀವಸೆಲೆಯ ಚೆಲ್ಲಿಬಿಡು
ಬೀಜ ಅರಳಿ ಒಮ್ಮೆ
ಮಡಿಲ ಒಡಲಲ್ಲಿ
ಕಲ್ಲಾಗಬೇಡ ನೀಲಾಂಬರಿ
ಒಮ್ಮೆ ನದಿಯಾಗಿ ನಡೆದು ಬಿಡು
ಕುಟಿಲಪಥಗಳಲಿ; ಹಾಡಾಗಿ ಹರಿದು ಬಿಡು
ತಾಯಾಗಿ ಕ್ಷಮಿಸಿ ಬಿಡು
ಕಲ್ಲಾಗಬೇಡ ನೀಳವೇಣಿ


0 Comments
Trackbacks/Pingbacks