ದೊಡ್ಡಣ್ಣ – ಸಣ್ಣಣ್ಣ – ಟಿಂಗರ ಬುಡ್ಡಣ್ಣ

rajaram tallur low res profile

ರಾಜಾರಾಂ ತಲ್ಲೂರು

120 ಬಡದೇಶಗಳ ನಾಯಕತ್ವ ದೊಡ್ಡದೋ ಒಂದು ಸಿರಿವಂತ ದೇಶದ “Ally”ಗಿರಿ ದೊಡ್ಡದೋ?

ಹೆಚ್ಚಿನಂಶ ಸೆಪ್ಟಂಬರ್ 13ರಂದು ಈ ಪ್ರಶ್ನೆಗೆ ನಮ್ಮ ದೇಶದ ಪ್ರಧಾನಮಂತ್ರಿಗಳು ಉತ್ತರ ನೀಡುತ್ತಾರೆ. ಆ ದಿನ 17ನೇ NAM (Non-aligned Movement) ಅಂದರೆ ಅಲಿಪ್ತ ರಾಷ್ಟ್ರಗಳ ಸಮ್ಮೇಳನವು ವೆನಿಜುವೆಲಾ ದೇಶದ ಪೊರ್ಲಮಾರ್ ನಗರದಲ್ಲಿ ಆರಂಭಗೊಳ್ಳಲಿದೆ.

avadhi-column-tallur-verti- low res- cropತಮಾಷೆ ಗೊತ್ತಾ,   ಕಳೆದ ವರ್ಷವೇ (ಇದು ಮೂರು ವರ್ಷಗಳಿಗೊಮ್ಮೆ ನಡೆಯಬೇಕಾದ ಸಮ್ಮೇಳನ) ವೆನಿಜುವೆಲಾದಲ್ಲಿ ಸಮ್ಮೇಳನ ಆಯೋಜನೆಯಾಗಿತ್ತು. ನಮ್ಮ ಪ್ರಧಾನಮಂತ್ರಿಗಳಿಗೆ ಆಹ್ವಾನ ಕೊಟ್ಟಾಗ, ಅವರು ನನಗೆ ಬರೋಕಾಗೋಲ್ಲ, ನಾನು ಅದೇ ಸಮಯಕ್ಕೆ ಕಜಾಖ್ ಸ್ಥಾನ್, ಉಜ್ಬೆಕಿಸ್ಥಾನ್, ತಾಜಿಕಿಸ್ಥಾನ್, ತುರ್ಕಮೇನಿಸ್ಥಾನ್ ಮತ್ತು ಕಿರ್ಗಿಝ್ ಸ್ಥಾನ್ ದೇಶಗಳ ಮಹತ್ವದ ಪ್ರವಾಸ ಹೋಗುವುದಿದೆ ಎಂದಿದ್ದರಂತೆ. ಪಾಪ ಆಯೋಜಕರು, ಅಯ್ಯೋ ನಮ್ಮ ನಾಯಕರಿಗೇ ತೊಂದರೆ ಆಗುವುದಿದ್ದರೆ ಈ ವರ್ಷ ಬೇಡ ಬರುವ ವರ್ಷ ಮಾಡೋಣ ಎಂದು ಇಡಿಯ ಸಮ್ಮೇಳನವನ್ನೇ ಮುಂದೂಡಿದ್ದರು. ಇದು NAM ನಲ್ಲಿ ಭಾರತಕ್ಕಿರುವ ಗೌರವ!

ನಿಜ ಹೇಳಬೇಕೆಂದರೆ, ಈಗಾಗಲೇ ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಅಮೆರಿಕದ ರಕ್ಷಣಾ ಕಾರ್ಯದರ್ಶಿಗಳು ಮೊನ್ನೆ  ಭಾರತದ ಅಲಿಪ್ತನೀತಿಗೆ ಎಳ್ಳುನೀರು ಬಿಟ್ಟ ಒಪ್ಪಂದದ ಬಳಿಕ ಜಂಟಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, As the United States is reaching West in President Obama’srebalance, India is reaching East in Prime Minister Modi’s Act East Policy, which will extend India’s reach further into the broader Indo-Asia-Pacific region. ಎಂದಿದ್ದಾರೆ. ಆ ಪತ್ರಿಕಾಗೋಷ್ಟಿಯ ಪೂರ್ಣ ಪಾಠ ಇಲ್ಲಿದೆ. (http://www.defense.gov/News/ Transcripts/Transcript-View/ Article/929778/joint-press- conference-by-secretary- carter-and-minister-parrikar- in-the-pentago )
ನೆಹರೂ ಕನಸಿನ ಕೂಸಾದ ಅಲಿಪ್ತ ಚಳವಳಿ 1961ರಲ್ಲಿ ಆರಂಭಗೊಂಡಾಗ, ಅದಕ್ಕೆ ನೆಹರೂ ಜೊತೆ ಹೆಗಲುಕೊಟ್ಟವರು ಇಂದೋನೇಷ್ಯಾದ ಸುಕರ್ನೊ, ಈಜಿಪ್ಟಿನ ಅಬ್ದೆಲ್ ನಾಸೆರ್, ಘಾನಾದ ಕ್ವಾಮೆ ಎನ್ಕ್ರುಮಾ, ಯುಗೋಸ್ಲಾವಿಯಾದ ಜೊಸಿಪ್ ಟಿಟೊ. “ಪಂಚಶೀಲ”ತತ್ವಗಳನ್ನಾಧರಿಸಿದ ಈ ಚಳವಳಿಯ ಮೂಲ ಉದ್ದೇಶ ದೊಡ್ಡಣ್ಣಂದಿರ (ಅಂದಿನ ಅಮೆರಿಕ-ರಶ್ಯಾ)  ನಡುವೆ ಮೂರನೇ ಸಂಯುಕ್ತ ಶಕ್ತಿಯಾಗಿ ನಿಲ್ಲುವುದು. ಜಗತ್ತಿನ 55% ಜನಸಂಖ್ಯೆಯನ್ನು ಹೊಂದಿರುವ 120 ದೇಶಗಳ (ಅಂದರೆ ವಿಶ್ವಸಂಸ್ಥೆ ಸದಸ್ಯರಲ್ಲಿ ಸುಮಾರು ಮೂರನೇ ಎರಡಂಶ) ಒಟ್ಟು ಶಕ್ತಿ ಮನಸ್ಸು ಮಾಡಿದರೆ ಈ ಜಗತ್ತಿನ ಅತಿದೊಡ್ಡ ಶಕ್ತಿ ಆಗಬಹುದಿತ್ತು.

ಪಂಚಶೀಲ ಎಂದರೆ:

nam2* ಇತರ ದೇಶಗಳ ಗಡಿಗಳ ಸಮಗ್ರತೆ ಮತ್ತು ಸಾರ್ವಭೌಮತ್ವಕ್ಕೆ ಗೌರವ

* ಪರಸ್ಪರ ಆಕ್ರಮಣಕಾರಿ ನಿಲುವು ಇಲ್ಲದಿರುವುದು

* ಪರಸ್ಪರರ ಆಂತರಿಕ ವ್ಯವಹಾರಗಳಲ್ಲಿ ಕೈ ಹಾಕದಿರುವುದು

* ಸಮಾನತೆ ಮತ್ತು ಪರಸ್ಪರ ಲಾಭ

* ಶಾಂತಿಯುತ ಸಹಬಾಳ್ವೆ

ಮೂಲಭೂತವಾಗಿ ಚೀನೀ-ಭಾರತ ಸಂಬಂಧಗಳ ಕುರಿತಾದ ನೆಹರೂ ನಿಲುವು ಇದು. ಆದರೆ, ಮುಂದೆ ಇದೇ ಅಲಿಪ್ತ ನೀತಿಯ ತಳಹದಿಯೂ ಆಯಿತು. ನೆರೆಹೊರೆಯ ಚೀನಾ-ಪಾಕಿಸ್ತಾನಗಳ ಜೊತೆ ಯುದ್ಧದ ಹೊರತಾಗಿಯೂ ಭಾರತಕ್ಕೆ ಏಷ್ಯಾದಲ್ಲಿ ಸ್ಟ್ರಾಟೆಜಿಕ್ ನಾಯಕತ್ವವನ್ನೂ, ಈ ಭೌಗೋಳಿಕ ಪರಿಸರದಲ್ಲಿ ಸ್ಥೂಲವಾಗಿ ಶಾಂತಿಯನ್ನೂ ತಂದುಕೊಟ್ಟ ಚಳವಳಿ ಇದು.

ಮಂಗಳವಾರ ಪೆಂಟಗನ್ ನಲ್ಲಿ logistics exchange memorandum of agreement (LEMOA) ಗೆ ಭಾರತದ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಮತ್ತು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಆಷ್ ಕಾರ್ಟರ್ ಸಹಿ ಮಾಡುವುದರೊಂದಿಗೆ, ಭಾರತ ತನ್ನ ಕಡೆಯಿಂದ ಅಲಿಪ್ತ ಚಳವಳಿಗೆ ಎಳ್ಳುನೀರು ಬಿಟ್ಟಂತಾಗಿದೆ.

ಎರಡು ದೇಶಗಳ ಜಂಟಿ ಹೇಳಿಕೆಯಲ್ಲಿ ಈ ಒಪ್ಪಂದ ಕೇವಲ ಶಾಂತಿಕಾಲದ ಮತ್ತು ತಂತ್ರಜ್ನಾನ ಕೊಡುಕೊಳ್ಳುವಿಕೆಯ ಉದ್ದೇಶದ್ದು ಎಂದು ಹೇಳಿವೆ ಮತ್ತು ಇದನ್ನು ಬಿಟ್ಟು ಉಳಿದ ಬಳಕೆಗಳನ್ನು ಕೇಸ್-ಬೈ-ಕೇಸ್ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದಿವೆ. ಇಲ್ಲಿ ಅಮೆರಿಕದ ಸೇನಾನೆಲೆ ಇರದು ಎಂದೂ ಸ್ಪಷ್ಟಪಡಿಸಿವೆ. ಆದರೆ, ಮಿಲಿಟರಿ ಯುದ್ಧವಿಮಾನಗಳೇನೂ “ಮದುವೆ ಊಟಕ್ಕೆ” ಬರುವುದಲ್ಲ ಎಂಬುದು ಸಾಮಾನ್ಯ ಜ್ನಾನ.

ಅಮೆರಿಕಕ್ಕೆ ಈ ಒಪ್ಪಂದ ನಿಜಕ್ಕೂ ಲಾಭದಾಯಕ. ಅತ್ತ ಶಸ್ತ್ರಾಸ್ತ್ರಗಳ ವ್ಯಾಪಾರ; ಇತ್ತ ಸ್ಟ್ರಾಟಜಿಕ್ ಮಿಲಿಟರಿ ನೆಲ ಸಿಕ್ಕಿದಂತಾಗಿದೆ. ಆದರೆ, ಭಾರತ ಈ ಒಪ್ಪಂದದಿಂದ ಗಳಿಸಿದ್ದೇನು ಎಂಬುದನ್ನು ಕಾಲವೇ ಹೇಳಬೇಕಿದೆ.

ಹಂಗಿನರಮನೆಗಿಂತ ವಿಂಗಡದ ಗುಡಿಲೇಸು|

ಭಂಗಪಟ್ಟುಂಬ ಬಿಸಿಯನ್ನಕಿಂತಲು|

ತಂಗುಳವೆ ಲೇಸು ಸರ್ವಜ್ಞ||

‍ಲೇಖಕರು Admin

September 1, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: