ಆಳಕ್ಕಿಳಿಯಲು ಕಲ್ಲುಕಟ್ಟಿ ಮುಳುಗಿಸಬೇಕೇ?

ಈಗೀಗ ಹೋರಾಟಗಳು ಯಾಕೆ ವಿಷಯಗಳ ಆಳಕ್ಕಿಳಿಯದೆ ತೇಲುತ್ತವೆ ಮತ್ತು ತಮ್ಮ ಲಾಜಿಕಲ್ ಅಂತ್ಯ ತಲುಪುವುದಿಲ್ಲ ಎಂಬ ಪ್ರಶ್ನೆ ಆಗಾಗ ಕಾಡುವುದಿದೆ. ಹೆಚ್ಚಿನವರು ಇದು ಸಿನಿಕತನ ಎಂದು ಅದನ್ನು ಅಡಿಹಾಕಿ ಮುಂದುವರಿಯುತ್ತಾರೆ. ಈ ಪ್ರಶ್ನೆಗೆ ಉತ್ತರದ ಹಾದಿಯಲ್ಲಿ ಶಾರ್ಟ್ ಕಟ್ ಎಂಬುದಿಲ್ಲ.

ಶಿಕ್ಷಣಕ್ಕೆ ಸಂಬಂಧಿಸಿದಂತೆ ಮೂಲಮನೆ ಅನ್ನಿಸಿಕೊಂಡಿರುವ ಕರಾವಳಿಯಲ್ಲಿ ಆಧುನಿಕ ಶಿಕ್ಷಣಕ್ಕೆ ಬುನಾದಿ ಹಾಕಿದ್ದು ಕ್ಯಾಥೋಲಿಕ್ ಶಿಕ್ಷಣ ಸಂಸ್ಥೆಗಳಾದರೆ, ಸರ್ಕಾರಿ ಶಾಲೆಗಳು ಇರುವಾಗಲೇ ಶಿಕ್ಷಣದ ವ್ಯಾಪಾರಕ್ಕೆ ಬುನಾದಿ ಬಿದ್ದದ್ದು ಮಣಿಪಾಲದಲ್ಲಿ. ಆ ಹಂತದಲ್ಲಿ ಉದ್ದೇಶ ತೀರಾ ಹಾಳಿರಲಿಲ್ಲವಾದರೂ ದಿನ ಕಳೆದಂತೆ ಈ ವ್ಯಾಪಾರದ ಮಾಡೆಲ್ಲು ಧರ್ಮಸ್ಥಳ, ನಿಟ್ಟೆ, ಮಂಗಳೂರು, ಸುಳ್ಯ, ಪುತ್ತೂರು, ಮೂಡಬಿದಿರೆ, ಕುಂದಾಪುರ, ಬೈಂದೂರು ಎಂದೆಲ್ಲ ಧರ್ಮವಾರು, ಜಾತಿವಾರು, ತಾಕತ್ತುವಾರು ಹರಡಿ ಪರಸ್ಪರ ಸ್ಪರ್ಧಿಸುತ್ತಾ, ಫೋಟೋಕಾಪಿಗಳ ಫೋಟೋಕಾಪಿಗಳು ಕೊಳೆಯುವಂತೆ ಕೊಳೆಯುತ್ತಾ, ಕೊಳೆಯುತ್ತಾ ಈವತ್ತಿನ ಸ್ಥಿತಿಗೆ ಬಂದು ತಲುಪಿವೆ.

ಹೀಗೆ ಬರುವ ಹಾದಿಯಲ್ಲಿ ವ್ಯಾಪಾರದ ಭರಾಟೆ, ಚಾಲಾಕಿತನಗಳೆಲ್ಲ ಮೇಳೈಸಿಕೊಂಡು, ಬ್ರಾಂಡುವಾರು (War) ಕೂಡ ಈಗೀಗ ಕರಾವಳಿಯಲ್ಲಿ ಮಾತ್ರವಲ್ಲದೇ ದೇಶದಾದ್ಯಂತ ಆರಂಭಗೊಂಡಿದೆ. ಇದೀಗ ನ್ಯಾಷನಲ್ ಫೆನೋಮೆನಾ. ಗಮನಿಸಬೇಕಾದ ಕುತೂಹಲಕರ ಸಂಗತಿ ಎಂದರೆ, ಬೇರೆ ರಂಗಗಳಲ್ಲಿ ಗೂಡಂಗಡಿ-ತಟ್ಟಿ ಅಂಗಡಿಗಳಿಂದ ವ್ಯಾಪಾರವು ಮಾಲ್ ಗಳ ರೂಪದತ್ತ ಚಲಿಸುತ್ತಿದ್ದರೆ, ಶಿಕ್ಷಣರಂಗದಲ್ಲಿ ವ್ಯಾಪಾರವು ಮಾಲ್ ಮಟ್ಟದಿಂದ ಗೂಡಂಗಡಿ-ಬೀಡಾಂಗಡಿಗಳ ರೂಪದತ್ತ ಚಲಿಸುತ್ತಿದೆ…

ಗಾತ್ರ-ಸಂಖ್ಯೆ-ವ್ಯಾಪಾರದ ಮತ್ತು ಬ್ರಾಂಡ್ ಒತ್ತಡಗಳು… ಹೀಗೆ ಹಲವು ಸಾಂಸ್ಥಿಕ ಒತ್ತಡಗಳ ಜೊತೆ ಜೊತೆಗೇ ಕೌಟುಂಬಿಕ ಒತ್ತಡ, ಆರ್ಥಿಕ ಒತ್ತಡ, ಶೈಕ್ಷಣಿಕ ಒತ್ತಡ, ಭವಿಷ್ಯದ ಒತ್ತಡ, ಮಾನಸಿಕ ಒತ್ತಡಗಳೆಲ್ಲ ಮೇಳೈಸಿ ವಿದ್ಯಾರ್ಥಿಗಳಲ್ಲೂ ತಲ್ಲಣ- ಆತಂಕಗಳು ಕಂಡುಬರಲಾರಂಭಿಸಿವೆ ಮತ್ತು ಅದರಿಂದಾಗಿ ನರಹತ್ಯೆ/ಆತ್ಮಹತ್ಯೆಯಂತಹ ಮಿತಿದಾಟಿದ ಹಂತ ತಲುಪಿದ ಘಟನೆಗಳೂ ಪದೇ ಪದೇ ಕೇಳಿಬರಲಾರಂಭಿಸಿವೆ.

ಈ ಎಲ್ಲ ವಿಚಾರಗಳ ಬಗ್ಗೆ ಕರಾವಳಿಯಲ್ಲಿ ಬಹುತೇಕ ಎಲ್ಲ ಕುಟುಂಬಗಳಲ್ಲೂ ಒಂದು ಅಸಮಾಧಾನ ಹೊಗೆಯಾಡತೊಡಗಿದೆ. ಒಂದು ತಲೆಮಾರು ದಾಟುವುದರೊಳಗೇ ಕಳೆದ 35-40 ವರ್ಷಗಳಲ್ಲಿ ಶಿಕ್ಷಣ ಸಂಸ್ಥೆಗಳ ವಾರ್ಷಿಕ ಫೀಸು 300-500 ರೂಪಾಯಿಗಳಿಂದ 30,000-5,00,000 ರೂಪಾಯಿಗಳಿಗೆ ಅಥವಾ ವ್ರತ್ತಿ ಶಿಕ್ಷಣ ಕಾಲೇಜುಗಳಲ್ಲಿ ಕೋಟಿಗಳ ಎತ್ತರಕ್ಕೆ  ಬೆಳೆದುನಿಂತಿದೆ. ವ್ಯಾಪಾರ ಚೆನ್ನಾಗಿಯೇ ನಡೆಯುತ್ತಿರುವುದರಿಂದ ಅಂಗಡಿಗಳೆಲ್ಲ ಉದ್ಧಾರವೂ ಆಗುತ್ತಿವೆ, ಹೊಸ ಹೊಸ ಕಾಂಪಿಟಿಟರ್ ಗಳನ್ನೂ ಎದುರಿಸುತ್ತಿವೆ.

ಇಂತಹ ಅಸಮಾನ, ಅಸಹಜ, ಅನೈತಿಕ ಬೆಳವಣಿಗೆಗಳಾದಾಗ ಅದರ ವಿರುದ್ಧ ಸಾಮಾಜಿಕ ಅಸಮಾಧಾನಗಳು ಹೊರಬರುವುದು, ಸಾಮಾನ್ಯವಾಗಿ ಇಂತಹ ಶಿಕ್ಷಣ ಸಂಸ್ಥೆಗಳಲ್ಲಿ ಅಸಹಜ ಘಟನೆಗಳು ಸಂಭವಿಸಿದಾಗ. ಈ ರೀತಿಯ ವ್ಯಕ್ತ ಅಸಮಾಧಾನಗಳನ್ನು ಸಾಂಸ್ಥಿಕವಾಗಿಯೇ ಎದುರಿಸುವ ಕಲೆಯನ್ನೂ ‘ವ್ಯಾಪಾರದ ಕಲೆ’ ಕರತಲಾಮಲಕವಾಗಿರುವ ವ್ಯಾಪಾರಿಗಳು ಚೆನ್ನಾಗಿಯೇ ತಿಳಿದಿದ್ದಾರೆ. ಹೀಗಾದಾಗ ಮೂಲದಲ್ಲಿರುವ ಸಾರ್ವತ್ರಿಕ ಅಸಮಾಧಾನ ಅಡಿಗೆ ಬಿದ್ದು ಇನ್ಯಾವುದೋ ಚಿಲ್ಲರೆ ಸಂಗತಿಗಳೆಲ್ಲ ಮೇಲೆದ್ದು, ರಾಡಿಯಾಗಿ ನಾರತೊಡಗುತ್ತವೆ. ಇಂತಹ ಸಾಮಾಜಿಕ ಗದ್ದಲದ ಪ್ಯಾಟರ್ನ್ ಗಳನ್ನು ಕರಾವಳಿಯಲ್ಲಿ ಕಳೆದ ಕೆಲವು ವರ್ಷಗಳಿಂದ ನೋಡುತ್ತಾ ಬಂದವರಿಗೆಲ್ಲ ಇದು ಅಂತಿಮವಾಗಿ ಇಂತಲ್ಲಿಗೇ ಹೋಗಿ ತಲುಪಲಿದೆ ಎಂದು ಊಹಿಸಿ ಹೇಳುವುದು ಸುಲಭ. ಇದರ ಅಂತಿಮ ಲಾಭ ಪಡೆಯಲಿರುವುದೂ ವ್ಯಾಪಾರಿಗಳೇ.

ಮೂಡಬಿದಿರೆಯ ವಿದ್ಯಾರ್ಥಿನಿಯೊಬ್ಬಳ ಅಸಹಜ ಸಾವಿನ ಪ್ರಕರಣದಲ್ಲಿ ‘ಶಿಕ್ಷಣ ವ್ಯಾಪಾರ ಆಗಬಾರದು’ ಎಂಬ ಮೂಲ ತತ್ವವನ್ನು ಎದುರಿಟ್ಟುಕೊಂಡು, ದೀರ್ಘಕಾಲಿಕವಾದ ಹೋರಾಟವೊಂದು ಆರಂಭ ಆದರೆ, ಫಲಿತಾಂಶ ಮರುದಿನ ಬೆಳಗ್ಗೆ ಬರಲಾರದಾದರೂ, ಈ ಮೂಲತತ್ವವನ್ನು ಒಪ್ಪದೇ ಶಿಕ್ಷಣ ವ್ಯಾಪಾರವಾಗಲಿ ಎನ್ನುವವರ ಸಂಖ್ಯೆ ಬೆಳೆಯದು. ಹೆಚ್ಚೆಂದರೆ ಬೆರಳೆಣಿಕೆಯ ವ್ಯಾಪಾರಿಗಳು ಮಾತ್ರ ಅಲ್ಲಿ ಉಳಿದಾರು. ಕಾವ್ಯ ಮತ್ತು ಆಕೆಯಂತೆಯೇ ಕಳೆದ 20-30 ವರ್ಷಗಳಲ್ಲಿ ಶೈಕ್ಷಣಿಕ ಒತ್ತಡಗಳಿಗೆ ಬಲಿಯಾದ ನೂರಾರು ಮಕ್ಕಳ ಬಲಿದಾನ ಮುಂದಿನ ಪೀಳಿಗೆಯ ಮಕ್ಕಳಿಗಾದರೂ ಒಳ್ಳೆಯ ದಿನಗಳನ್ನು ಒದಗಿಸೀತು. ಹೀಗೆ ವಿಷಯದ ಆಳಕ್ಕಿಳಿಯದ ಹೋರಾಟ ಬಲಿಷ್ಟ ಶಕ್ತಿಗಳ ಕೈಯಲ್ಲಿ ದಿಕ್ಕುತಪ್ಪಿ, ಬರಿಯ ರಾಜಕೀಯ ಕೆಸರೆರಚಾಟವಾಗಿ ಕೊನೆಗೊಂಡೀತು.

ಕರಾವಳಿಯಲ್ಲೇ ಇಂತಹ ಹೋರಾಟ ಸಾಗಬೇಕಾದ ದಾರಿಗಳಿಗೆ ಎರಡು -ಮೂರು ಯಶಸ್ವೀ ಮಾದರಿಗಳೂ ಇವೆ. ಮೊದಲ ಮಾದರಿ, ಕೆಲವು ವರ್ಷಗಳ ಹಿಂದೆ ಭಾರೀ ಭರಾಟೆಯಲ್ಲಿದ್ದ ಮುಂಬಯಿ-ಮಂಗಳೂರು ನಡುವಿನ ಖಾಸಗಿ ಬಸ್ ಗಳ ಲಾಬಿ ಈಗ ಕೊಂಕಣ ರೈಲ್ವೇ ಪರಿಪೂರ್ಣಗೊಳ್ಳುತ್ತಾ ಸಾಗುತ್ತಿರುವಂತೆಲ್ಲ ನೆಲಕಚ್ಚಿ, ಕ್ಷೀಣಗೊಳ್ಳುತ್ತಾ ಬಂದಿರುವ ರೀತಿ, ಮತ್ತು ಅದರ ಹಿಂದಿನ ಹೋರಾಟ. ಇನ್ನೊಂದು, ಕರಾವಳಿಯಾದ್ಯಂತ ಇರುವ ಖಾಸಗಿ ಬಸ್ ಲಾಬಿಗಳನ್ನು ಮಣಿಸಲು ಆರಂಭಗೊಂಡಿರುವ ಸರ್ಕಾರಿ ಬಸ್ ಸೇವೆ. ಬದಲಾವಣೆಗಳಿಗೆ ಜನ ಒಗ್ಗಿಕೊಳ್ಳುತ್ತಾ ಸಾಗಿದಂತೆಲ್ಲ, ಈ ಎರಡೂ ಕ್ಷೇತ್ರಗಳಲ್ಲಿ ಖಾಸಗಿ ಭರಾಟೆ ತಗ್ಗುತ್ತಾ ಬಂದಿರುವುದನ್ನು ನಾವು ಕಂಡಿದ್ದೇವೆ. ಮತ್ತೊಂದು, ಸಾರಾಯಿ ಮಾರಾಟ ಗುತ್ತಿಗೆ ಖಾಸಗಿಯಿಂದ ಸರ್ಕಾರದ ಮಡಿಲಿಗೆ ಸರಿದುಹೋದದ್ದು. ಕೆಲವೇ ವರ್ಷಗಳ ಹಿಂದೆ ರಾಜಕೀಯವಾಗಿ, ಸಾಮಾಜಿಕವಾಗಿ ನಿರ್ಧಾರಕ ಶಕ್ತಿಯಾಗಿದ್ದ ಸಾರಾಯಿ ಲಾಬಿ ಈವತ್ತು ಎಲ್ಲಿದೆ?

ಕಾವ್ಯ ಸಾವಿಗೆ ಕಾರಣ ಪತ್ತೆಯಾಗಿ ನ್ಯಾಯ ಸಿಗಬೇಕೆಂಬುದರಲ್ಲಿ ಎರಡು ಮಾತಿಲ್ಲ. ಅದಕ್ಕೆ ಕಾನೂನಿನ ಹಾದಿಯಿದೆ.  ಆದರೆ, ಈ ಪ್ರಕರಣದಲ್ಲಿ ಎದ್ದಿರುವ ಅಸಹನೆಯ ಮೂಲ ಕಾರಣವಾಗಿರುವ ‘ಶಿಕ್ಷಣದ ವ್ಯಾಪಾರೀಕರಣ’ದ ವಿರುದ್ಧ ಹೋರಾಟ ಕೂಡ ಬಸ್ಸುಲಾಬಿ, ಸಾರಾಯಿ ಲಾಬಿಗಳ ವಿರುದ್ಧದ ಹೋರಾಟದಂತೆ ಆಳಕ್ಕಿಳಿದು,ಯಶಸ್ಸಿನ ದೀರ್ಘಕಾಲಿಕ ಹಾದಿ ಹಿಡಿಯಬಾರದೇಕೆ?

‍ಲೇಖಕರು avadhi

August 14, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: