ಕನಸಿನ ಬೀಜವೊಂದು ಎದೆಯಲ್ಲಿ ಬಿತ್ತಿಹೋಯಿತು..

ಒಂದು ಪಯಣದ ಶುರುವಾತು ಯಾವಾಗ ಆಗುತ್ತದೆ?

ನಾವು ಪಯಣ ಹೊರಟಾಗಲೇ?

ಉಹು,

ನನಗನ್ನಿಸುವ ಮಟ್ಟಿಗೆ ಯಾವುದೋ ಒಂದು ಜಾಗವನ್ನು ನೋಡಬೇಕೆನ್ನುವ ಕನಸಿನ ಬೀಜವೊಂದನ್ನು ಎದೆಯಲ್ಲಿ ಬಿತ್ತುತ್ತೇವಲ್ಲ, ಅವತ್ತು ಪಯಣವೊಂದು ಶುರುವಾಗಿ ಹೋಗಿರುತ್ತದೆ.

ಅಲ್ಲಿಂದ ಮೊದಲುಗೊಂಡು, ಹೊರಡುವ ದಿನದವರೆಗಿನ ಸಮಯ ನಮ್ಮ ಸಿದ್ಧತೆಯ ಸಮಯವಷ್ಟೇ. ಆ ಸ್ಥಳದ ಬಗೆಗಿನ ವಿವರಗಳು, ಅಲ್ಲಿನ ಯಾವುದೋ ಡಾಕ್ಯುಮೆಂಟರಿ, ಎಲ್ಲೋ ಕಣ್ಣಿಗೆ ಬೀಳುವ ಫೋಟೋ ಎಲ್ಲವೂ ನಮ್ಮ ಸಿದ್ಧತೆಯ ಭಾಗವೇ ಆಗಿರುತ್ತದೆ.

ಕೆಲವು ಸ್ಥಳಗಳು, ದೇಶಗಳ ಬಗ್ಗೆ ಎಲ್ಲೋ ಓದಿದಾಗ, ನೋಡಿದಾಗ ಅದರ ಬಗ್ಗೆ ತೀವ್ರ ಆಕರ್ಷಣೆ ಮೂಡಿ, ಸಾಯುವುದರೊಳಗೆ ಇದನ್ನು ನೋಡಲೇಬೇಕು ಅಂತ ಮನಸ್ಸು ನಿರ್ಧಾರ ಮಾಡಿಬಿಟ್ಟಿರುತ್ತದೆ. ಯಾವಾಗ ಅನ್ನುವುದೊಂದು ಬಿಟ್ಟರೆ ಬಹುತೇಕ ನಮ್ಮ ಪಯಣದ ಆರಂಭ ಅಂದೇ ಆಗಿಹೋಗಿರುತ್ತದೆ.

ನನ್ನ ಸುಮಾರು ಪಯಣಗಳೆಲ್ಲ ಹೀಗೆ ಶುರುವಾದವೇ! ಕಥೆಗಾರ ಅಬ್ದುಲ್ ರಶೀದರ ಬರಹಗಳಿಂದ ಲಡಾಕ್‌ನ ಹುಚ್ಚು ಹತ್ತಿದರೆ, ಇಟಲಿಯ ಪಾಂಪೆ ಮತ್ತು ಕಾಂಬೋಡಿಯಾ ನೋಡದಿದ್ದರೆ ಸತ್ತೇ ಹೋದೇನು ಅನ್ನಿಸಿದ್ದು ಪೂರ್ಣಚಂದ್ರ ತೇಜಸ್ವಿಯವರ ಮಿಲೆನಿಯಮ್ ಸೀರೀಸ್ ಪುಸ್ತಕದ ಬರಹಗಳನ್ನು ಓದಿ. ಪೆರುವಿನ ಮೋಹ ನೇಮಿಚಂದ್ರರ ‘ಪೆರುವಿನ ಪವಿತ್ರ ಕಣಿವೆಯಲ್ಲಿ’ ಪುಸ್ತಕ ಓದಿ ಶುರುವಾದದ್ದು.

ಹೀಗೆ ಕನಸುಗಳ ಬಿತ್ತನೆಗೆ ಯಾವಾಗಲೋ ಕಾಲ ಕೂಡಿ ಬಂದಿರುತ್ತದೆ ಮತ್ತು ಯಾವಾಗಲೋ ಕೊನರಿ ಬಿಟ್ಟಿರುತ್ತದೆ ಕೂಡಾ!

ಹಾಗೆಯೇ ಇಸ್ರೇಲ್‌ನ ಕನಸು ಹುಟ್ಟಿದ್ದು ನಾವು ಗುಲ್ಬರ್ಗಾದ ಬಂದೆನವಾಜ಼್ ದರ್ಗಾಕ್ಕೆ ಹೋಗಿ ಅಲ್ಲಿನ ‘ಅಳುವ ಗೋಡೆ’ ನೋಡಬೇಕೆಂಬುದು ಪ್ಲ್ಯಾನ್ ಮಾಡಿದಾಗಿನಿಂದ!

ಎಲ್ಲಿಯ ಗುಲ್ಬರ್ಗಾ, ಎಲ್ಲಿಯ ಇಸ್ರೇಲ್ ಅನ್ನುವ ಗಲಿಬಿಲಿ ಶುರುವಾಗುವುದರಲ್ಲಿ ಹೇಳಿಬಿಡುತ್ತೇನೆ ಇರಿ.

ಗುಲ್ಬರ್ಗಾದ ಬಂದೆನವಾಜ಼್ ದರ್ಗಾ ನೋಡಬೇಕೆಂಬುದು ನನ್ನ ಮತ್ತು ನನ್ನ ಗೆಳತಿಯ ಬಹಳ ದಿನಗಳ ಕನಸು. ಅಲ್ಲಿ ಕೂತು ತಲೆ ಗಟ್ಟಿಸಿ ಅಳಲೆಂದೇ ಜನ ಎಲ್ಲೆಲ್ಲಿಂದಲೋ ಬರುತ್ತಾರೆ ಎಂದಾಗ ಆ ಸ್ಥಳದ ಬಗ್ಗೆ ತುಂಬ ಕುತೂಹಲವೆನ್ನಿಸಿತ್ತು. ಬದುಕಿನ ಕೆಲವು ಸಮಸ್ಯೆಗಳಿಗೆ ಪರಿಹಾರ ಎನ್ನುವುದೇ ಇರುವುದಿಲ್ಲ. ಅದು ನಮಗೇ ಗೊತ್ತಿರುತ್ತದೆ. ಆದರೂ ಅದನ್ನು ಯಾರಲ್ಲಾದರೂ ಹೇಳಿಕೊಂಡರೆ ಸ್ವಲ್ಪವಾದರೂ ಸಮಾಧಾನ ಸಿಕ್ಕೀತು. ನನ್ನಂಥ ಕೆಲವರು ಅದೃಷ್ಟವಂತರಿಗೆ ಹೇಳಿಕೊಳ್ಳಲು ಯಾರಾದರೂ ಇರುತ್ತಾರೆ. ಮತ್ತೆ ಕೆಲವರು ನತದೃಷ್ಟರಿಗೆ ಹೇಳಿಕೊಳ್ಳಲೂ ಯಾರೂ ಇರುವುದಿಲ್ಲ. ಅಂಥ ಸಮಯದಲ್ಲಿ ಒಂದು ಗೋಡೆಯೆದುರು ಅದನ್ನೆಲ್ಲ ಹೇಳಿ ನಿರಾಳವಾಗುವುದು…? ಅದೂ ಒಂದು ರೀತಿಯ ಸಾಂತ್ವನವೇ ಅಲ್ಲವೇ ಅನ್ನಿಸಿ ಅದರ ಬಗ್ಗೆ ತೀವ್ರ ಕುತೂಹಲ ಮೂಡಿತ್ತು.

ಕಲಬುರ್ಗಿಯ ಬಂದೆ ನವಾಜ್ ದರ್ಗಾದಲ್ಲಿ..

ಎರಡು ವರ್ಷಗಳ ಕೆಳಗೆ ಆ ದಿನವೂ ಬಂದೇಬಿಟ್ಟಿತು!

ಸೇಡಂಗೆ ಕಾರ್ಯಕ್ರಮವೊಂದಕ್ಕೆ ಹೋದ ನಾವು, ಅತೀ ಉತ್ಸಾಹದಲ್ಲಿ ಗುಲಬರ್ಗಾಕ್ಕೆ ಹೋದೆವು. ಆದರೆ ತುಂಬ ಆಸೆಯಿಂದ ಹೋದ ಆ ಜಾಗದಲ್ಲಿ ಹೆಂಗಸರಿಗೆ ಪ್ರವೇಶವಿರಲಿಲ್ಲ. ಅಷ್ಟು ದೂರ ಹೋಗಿಯೂ ನೋಡಲಾಗದ್ದಕ್ಕೆ ತೀವ್ರ ನಿರಾಸೆಯಾಗಿತ್ತು. ವಿಧಿಯಿಲ್ಲದೇ ದರ್ಗಾದ ಆವರಣದಲ್ಲಿ ಸ್ವಲ್ಪ ಹೊತ್ತು ಕೂತು ಮರಳಿದ್ದೆವು. ಆ ನಿರಾಸೆ ಹೇಗೆ ಮನಸ್ಸಿನಾಳದಲ್ಲೆಲ್ಲೋ ಅಡಗಿ ಕುಳಿತಿತ್ತು ಅನ್ನುವುದು ನಮಗೇ ಅರಿವಾಗಿರಲಿಲ್ಲ. ಮುಂದೆ ಯಾವತ್ತೋ ಒಮ್ಮೆ ನನ್ನ ಗೆಳತಿಯ ಗೆಳೆಯ ಇಸ್ರೇಲ್‌ನಲ್ಲೊಂದು ವೇಲಿಂಗ್ ವಾಲ್ ಇದೆಯೆಂದು ಹೇಳಿದಾಗ ಮತ್ತೆ ಧುತ್ತೆಂದು ನಮ್ಮ ಅಪೂರ್ಣ ಕನಸು ನೆನಪಾಗಿ, ‘ಅಲ್ಲಿಗೆ ಎಂದಾದರೂ ಹೋಗಬೇಕು’ ಎಂದುಕೊಂಡಿದ್ದೆವು ಉತ್ಸಾಹದಲ್ಲಿ. ಹಾಗೆ ಶುರುವಾಗಿತ್ತು ಇಸ್ರೇಲ್ ಕನಸು!

ಇದರ ಜೊತೆಗೆ ಜೋರ್ಡಾನಿನ ಕನಸೊಂದು ಶುರುವಾಗಿದ್ದು ‘ಇಂಡಿಯಾನ ಜೋನ್ಸ್ ಅಂಡ್ ದ ಲಾಸ್ಟ್ ಕ್ರುಸೇಡ್’ ಸಿನೆಮಾದಿಂದ. ಒಂದು ದಿನ ಆ ಸಿನೆಮಾ ನೋಡುತ್ತಾ ಕೂತಿದ್ದ ನನ್ನ ಗಂಡ ‘ಅಲ್ನೋಡು ಅದೇ ನಾನು ಹೇಳ್ತಿರ್ತೀನಲ್ಲಾ, ಪೆಟ್ರಾ!’ ಎಂದು ಕೂಗಿದ್ದ.

ಅಲ್ಲಿಯವರೆಗೆ ಅದರ ಹೆಸರನ್ನೇ ಕೇಳದ ನಾನು ಯಾವ ಪೆಟ್ರಾ, ಏನು ಕಥೆ ಎಂದು ಕಕ್ಕಾಬಿಕ್ಕಿಯಾಗುತ್ತಾ, ಬಟ್ಟೆ ಮಡಚುತ್ತ ನಿಂತಿದ್ದವಳು ಹತ್ತು ಹೆಜ್ಜೆ ನಡೆದು ಬರುವುದರಲ್ಲಿ ಕುದುರೆಯ ಮೇಲೆ ಕುಳಿತಿದ್ದ ನಾಲ್ವರು ಎತ್ತರದ ಬಂಡೆಯೊಂದು ಬಿರುಕು ಬಿಟ್ಟಂತಿರುವ ಕಡಿದಾದ ದಾರಿಯಲ್ಲಿ ಸಾಗಿಹೋಗುವ ಕೊನೆಯ ದೃಶ್ಯ ಕಂಡಿತ್ತು. ಉಸಿರು ಬಿಗಿಹಿಡಿದು ನೋಡಿದ್ದೆ ಆ ರಮಣೀಯ ಸ್ಥಳವನ್ನು! ನೋಡನೋಡುತ್ತಿದ್ದಂತೆ ಆ ನಾಲ್ವರೂ ಸ್ವಲ್ಪ ತಲೆಬಾಗಿಸಿ ಬೃಹದಾಕಾರದ ಬಂಡೆಗಳ ನಡುವಿನ ಕಡಿದಾದ ಓಣಿಯಲ್ಲಿ ಮೂವತ್ತು ಸೆಕೆಂಡುಗಳ ಕಾಲ ಚಲಿಸಿ ನಂತರ ಮುಳುಗುತ್ತಿರುವ ಸೂರ್ಯನ ಕಡೆಗೆ ಸಾಗಿದರು. ನೋಡುತ್ತಿದ್ದವಳಿಗೆ ನಾಗರೀಕತೆಯೊಂದು ಚಲಿಸಿದಂತೆ, ನಿಗೂಢ ಲೋಕವೊಂದಕ್ಕೆಲ್ಲೋ ನಡೆದು ಹೋದಂತೆ, ಕಾಲ ಹಿಂದೆ ಹಿಂದೆ ಹೆಜ್ಜೆ ಹಾಕಿದಂತೆ ಅನ್ನಿಸಿಬಿಟ್ಟಿತ್ತು! ಮರುಳು ಹಿಡಿದಂತೆ ನೋಡಿದವಳು ‘ಇದನ್ನ ನೋಡ್ಬೇಕು’ ಅಂದಾಗ ಜೋರ್ಡಾನ್ ಕನಸು ಶುರುವಾಗಿತ್ತು! ಎರಡೂ ಈ ಭೂಗೋಳದ ಯಾವ ಭಾಗದಲ್ಲಿದೆ ಅನ್ನುವ ಲೆಕ್ಕವೂ ಇರಲಿಲ್ಲ. ಎರಡೂ ಬಿಡಿ ಬಿಡಿ ಕನಸುಗಳು ಒಂದಕ್ಕೊಂದು ಥಳುಕು ಹಾಕಿಕೊಂಡಿದ್ದು ಮಾತ್ರ ಅನಿರೀಕ್ಷಿತ!

ಇಸ್ರೇಲಿನ ಪ್ರಯಾಣಕ್ಕೆ customized ಟೂರ್ ಮಾಡಲು ವಿಚಾರಿಸಿದಾಗ ನಾವು ಅಂದುಕೊಂಡ ಬಜೆಟ್‌ನ ಒಂದೂವರೆಯಷ್ಟು ವೆಚ್ಚವಾಗುತ್ತದೆ ಅನ್ನುವುದು ತಿಳಿದಾಗ ಅಷ್ಟು ಖರ್ಚು ಮಾಡಲು ಸಾಧ್ಯವಿಲ್ಲದೇ ಅದರ ಆಸೆ ಬಿಟ್ಟಿದ್ದೆವು. ಆದರೆ ಗೋವಾದ ಟೂರ್ ಆಪರೇಟರ್ ಒಬ್ಬರು ‘ಹೋಲಿಲ್ಯಾಂಡ್ ಟೂರ್‌’‌ ಮಾಡುತ್ತಾರೆ, ಅದರಲ್ಲಿ ಹೋದರೆ ನಮ್ಮ ಬಜೆಟ್‌ನ ಒಳಗೇ ಇಡೀ ಪ್ರವಾಸ ಮುಗಿಸಬಹುದು ಎನ್ನುವುದು ತಿಳಿದಾಗ ಖುಷಿಯಾಗಿ ಹೋಗಿತ್ತು. ಆ ನಂತರದ ಅವರ ಪ್ರಯಾಣದ ಡೀಟೇಲ್ಸ್ ತೆಗೆದುಕೊಂಡಾಗ ಅವರ ಟೂರ್ ಶುರುವಾಗುವುದು ಜೋರ್ಡಾನ್‌ನಿಂದ ಎಂದು ತಿಳಿದಾಗ ಅನಿರೀಕ್ಷಿತ ಅವಕಾಶಕ್ಕೆ ಖುಷಿಯಿಂದ ಕುಣಿದಾಡಿದ್ದೆ.

ಆದರೆ ಅವರ itineraryಯಲ್ಲಿ ಪೆಟ್ರಾ ಇರಲಿಲ್ಲ. ಬೈಬಲ್‌ನಲ್ಲಿ ಮೋಸೆಸ್‌ನ ಉಲ್ಲೇಖವಿದ್ದ ಮೌಂಟ್ ನೆಬೋ ಕ್ರಿಶ್ಚಿಯನ್ನರ ಪವಿತ್ರ ಸ್ಥಳದಲ್ಲಿ ಒಂದಾಗಿದ್ದರಿಂದ ಅಮ್ಮಾನ್‌ನಲ್ಲಿ ಅದನ್ನು ಮಾತ್ರ ನೋಡಿ ಮಾರನೆಯ ದಿನ ಇಸ್ರೇಲಿನೆಡೆಗೆ ಪ್ರಯಾಣ ಬೆಳಸುವುದು ಅವರ ಕಾರ್ಯಕ್ರಮವಾಗಿತ್ತು.

ಅಲ್ಲಿ ಹೋಗಿಯೂ ಪೆಟ್ರಾ ನೋಡಲಾಗುವುದಿಲ್ಲ ಅಂದರೆ ಹೋಗಿ ಪ್ರಯೋಜನವೇನು ಅಂದುಕೊಳ್ಳುವುದರಲ್ಲೇ ನನ್ನ ಗಂಡನಿಗೆ ಅವರು ಅಮ್ಮಾನ್‌ ನೋಡುವ ದಿನ, ಆ ಪ್ರೋಗ್ರಾಮ್ ಸ್ಕಿಪ್ ಮಾಡಿ ಪೆಟ್ರಾ ಪ್ರವಾಸ ಕೈಗೊಳ್ಳಬಹುದೇ ಅನ್ನುವ ಐಡಿಯ ಹೊಳೆದದ್ದು. ಮೊದಮೊದಲು ಟೂರ್ ಆಪರೇಟರ್ ಹಿಂಜರಿದರೂ ನಂತರ ಒಪ್ಪಿದರು. ಒಂದೇ ದಿನದ ಕಾಲಾವಕಾಶದಲ್ಲಿ ನಾವು ಪೆಟ್ರಾ ನೋಡಿ ವಾಪಸ್ಸಾಗಿ, ಮುಂದಿನ ಪಯಣಕ್ಕೆ ಅವರ ಜೊತೆಗೂಡುವುದು ಎಂದು ತೀರ್ಮಾನವಾಯಿತು.

ಹೀಗೆ ಶುರುವಾಯಿತು ನಮ್ಮ ಜೋರ್ಡಾನ್-ಇಸ್ರೇಲ್-ಈಜಿಪ್ಟ್ ದೇಶಗಳ 10 ದಿನದ ಪ್ರವಾಸ …

। ಇನ್ನು ನಾಳೆಗೆ.. ।

ಜೋರ್ಡಾನ್ ನ ನಿರಾಶ್ರಿತರ ನೆಲೆ

‍ಲೇಖಕರು avadhi

August 14, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

… ಆಮೆನ್! 

… ಆಮೆನ್! 

22 ಪ್ರತಿಕ್ರಿಯೆಗಳು

  1. Mamatha Arsikere

    ನಿಮ್ ಬಗ್ಗೆ ಹೊಟ್ಟೆಕಿಚ್ಚು

    ನೋಡ್ಬೇಕು ಅಂದಾಕ್ಷಣ ಹೊರಟುಬಿಡ್ತೀರಲ್ಲ
    ನನ್ನಂಥ ಪ್ರವಾಸೀ ಪ್ರಿಯಳಿಗೆ ಹೆಂಗಾಗ್ಬೇಡ

    ಪ್ರತಿಕ್ರಿಯೆ
    • ಭಾರತಿ ಬಿ ವಿ

      ನನಗೂ ದಿನಗಳು ಬಂದಿದ್ದು ಇತ್ತೀಚೆಗೆ
      ನಿನಗೂ ಬರತ್ತೆ ಮಮತಾ 🙂

      ಪ್ರತಿಕ್ರಿಯೆ
  2. ಅಮರದೀಪ್. ಪಿ.ಎಸ್.

    ಪ್ರವಾಸ ಕಥನ ಚೆನ್ನಾಗಿದೆ ಮೇಡಂ

    ಪ್ರತಿಕ್ರಿಯೆ
  3. Hemavathi

    ಬಹಳ ಸೊಗಸಾಗಿ ಪ್ರಾರಂಬಿಸಿದ್ದೀರಾ, ನಿಮ್ಮ ಪ್ರಯಾಣದ ಕಥನವನ್ನು.

    ಪ್ರತಿಕ್ರಿಯೆ
  4. ಅಕ್ಕಿಮಂಗಲ ಮಂಜುನಾಥ

    ಮುಂದುವರೆಸಿ, ನಿಜವಾಗಿಯೂ ಜೋರ್ಡಾನ್,ಇಸ್ರೇಲ್,ಈಜಿಪ್ಟುಗಳಂತಹ ದೇಶಗಳನ್ನು ನೋಡಲಾಗದ ನನ್ನಂತವರು ಲೇಖನವನ್ನಾದರೂ ಓದಿ ಅರಿತುಕೊಳ್ಳುತ್ತೇವೆ.

    ಪ್ರತಿಕ್ರಿಯೆ
  5. ಸಂತೋಷ್ ಕುಮಾರ್.ಎಸ್

    ಬೆಂಗಳೂರನ್ನೇ ಸರಿಯಾಗಿ ನೋಡದವರಿಗೆ ವಿಶ್ವದ ಇನ್ನೊಂದು ಮೂಲೆಯ ದರ್ಶನ ಮಾಡಿಸ್ತಿದೀರಿ. ತ್ಯಾಂಕ್ಯೂ

    ಪ್ರತಿಕ್ರಿಯೆ
    • ಭಾರತಿ ಬಿ ವಿ

      ಥ್ಯಾಂಕ್ಸ್ ಸಂತೋಷ್ ಪ್ರೀತಿಯಿಟ್ಟು ಓದಿದ್ದಕ್ಕೆ

      ಪ್ರತಿಕ್ರಿಯೆ
  6. ಎನ್. ವಿಶ್ವನಾಥ

    ಜತೆಗೆ ನನ್ನ ನೆನಪೂ ಮರು ಕಳಿಸುತ್ತಿದೆ.ಮೊದಲ ಭಾಗ ಚೆನ್ನಾಗಿ ಮೂಡಿ ಬಂದಿದೆ

    ಪ್ರತಿಕ್ರಿಯೆ
  7. Renuka

    ಬಹುಶಃ ಅಷ್ಟು ದೂರ ದೇಶದ ಪಯಣದ ಕನಸಂತೂ ದೂರದ ಮಾತು, ಆದರೆ ಗುಲ್ಬರ್ಗಾ ಕಂತೂ ಹೋಗಬಹುದು ನಾನು 🙂 ..‌, ನೀ ಕಟ್ಟಿಕೊಟ್ಟಿರುವ
    ನಿರೂಪಣೆ ಕಣ್ಣೆದುರಿಗೇ ಕಂಡಷ್ಟು ಸಂತಸವಾಯ್ತು. ಮುಂದಿನ ಭಾಗಕ್ಕೆ ಕಾಯುತ್ತಾ

    ಪ್ರತಿಕ್ರಿಯೆ
    • ಭಾರತಿ ಬಿ ವಿ

      ಸರ್ ಒಟ್ಟಿಗೇ ತಿಂದರೆ ಅಜೀರ್ಣವಾಗತ್ತೆ 🙂 …

      ಪ್ರತಿಕ್ರಿಯೆ
    • ಭಾರತಿ ಬಿ ವಿ

      ಥ್ಯಾಂಕ್ಸ್ ಇತ್ನಾಳ್ ಸರ್

      ಪ್ರತಿಕ್ರಿಯೆ
  8. Rekha M S

    Wow!!! ಅದ್ಭುತವಾಗಿದೆ ಕುಳಿತಲ್ಲೆ ಪ್ರಪಂಚದರ್ಶನ ….ಕುತೂಹಲದಿಂದ ಕಾಯುವಂತೆ ಮಾಡಿದ್ದೀರಿ ಭಾರತಿ ಮೇಡಂ. ….ಧನ್ಯವಾದಗಳು. .

    ಪ್ರತಿಕ್ರಿಯೆ
  9. Renuka

    ನಾನೂ ಹೋಗಬೇಕು, ನನ್ ಬಜೆಟ್ಟಲ್ಲಿ ಆಗುತ್ತ ಅನೋದೇ ಡೌಟು.

    ಪ್ರತಿಕ್ರಿಯೆ
    • ಭಾರತಿ ಬಿ ವಿ

      ಯಾವ ರೇಣುಕಾ ಅಂತ ಗೊತ್ತಾಗ್ತಿಲ್ಲ. ಕಾಲ್ ಮಾಡಿದ್ರೆ ಡೀಟೇಲ್ಸ್ ಹೇಳ್ತೀನಿ

      ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: