ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವಿಜಯಶ್ರೀ ಹಾಲಾಡಿ ಹೊಸ ಕವಿತೆ- ನಿರಾಳ!…

ವಿಜಯಶ್ರೀ ಹಾಲಾಡಿ

ನನ್ನ ಕೈತೋಟದ ಹೂಗಳಿಗೆ
ಚಿಗುರು, ಒಣ ಗಿಡಗಳಿಗೆ
ಚುಂಬಿಸುತ್ತೇನೆ
ಬಾಚಿ ಬರಸೆಳೆದು
ತಬ್ಬುತ್ತೇನೆ
ಹಾಗೇ ನನ್ನ ಟೆಡ್ಡಿಯನ್ನು
ಬಳಸಿ ಮುತ್ತಿಟ್ಟು
ಮುದ್ದಿಸುತ್ತೇನೆ
ಇದೆಲ್ಲ ಏಕೆ ಹೇಳ-
ಬೇಕಾಯಿತೆಂದರೆ….
ಮೊನ್ನೆ ಯಾರೋ ಕೇಳಿದರಂತೆ
ಆ ಹೆಂಗಸಿನ ಗಂಡ ದೂರ
ದೇಶದಲ್ಲಿ, ಮಗಳೋ ಎದೆಯೆತ್ತರ ಬೆಳೆದವಳು
ಅವಳು ಯಾರನ್ನು ಮುಟ್ಟುತ್ತಾಳೆ
ಪ್ರೀತಿ ತೋರಿಸುತ್ತಾಳೆ ಎಂದು!

ಸದ್ಯ ಆ ದಿನ ನಾನು
ನನ್ನ ಕನಸು
ಕಲ್ಪನೆಯಲ್ಲಿ ಕಾಡುವ
ಅಮೂರ್ತ ಪ್ರೇಮಿಯ
ಕುರಿತು ಹೇಳಲಿಲ್ಲ
ನಾನು ಬರೆಯುವ
ಕವಿತೆಗಳಲ್ಲಿ ಧುಮ್ಮಿಕ್ಕುವ
ಅವನ ಬಗೆಗೆ
ಚಕಾರವೆತ್ತಲಿಲ್ಲ
ಹಾಗೇನಾದರೂ ಆಗಿದ್ದರೆ
ಆ ಸಣ್ಣ ಊರೊಳಗೆ
ಎಂತೆಂತಾ ಗಡಿಬಿಡಿ
ಸಂಭವಿಸೀತೆಂದು ಊಹಿಸಿಯೇ
ಕೈ ಬಿಟ್ಟೆ!

ಇಲ್ಲ, ಇನ್ನೊಮ್ಮೆ
ಎಲ್ಲವನ್ನೂ ಅರುಹಿ ಹಗುರಾಗಿ
ಹೊಟ್ಟೆ ಬಿರಿಯೆ ನಕ್ಕು
ಕದವಿಕ್ಕಿ ಒಂದು ಹಗಲು
ಒಂದು ರಾತ್ರಿ
ನಿದ್ರಿಸಿ ಬಿಡಬೇಕು
ಬೆಳಗ್ಗೆ
ಅರಳುವ ಹೂಗಳ ಕಾಣುತ್ತ
ನಿರಾಳ ಚಹಾ ಹೀರಬೇಕು!

‍ಲೇಖಕರು Admin

16 August, 2022

1 Comment

  1. ನೂತನ ದೋಶೆಟ್ಟಿ

    ಹಗುರವಾಗಿ ಸುವ ಕವಿತೆ ವಿಜಯಶ್ರೀ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading