ಸಿ ಹೆಚ್ ಭಾಗ್ಯ ಓದಿದ ‘ಮಣಿಬಾಲೆ’

ಸಿ ಹೆಚ್ ಭಾಗ್ಯ

ಪ್ರಿಯ ಸುಜಾತಾ,

ಜೇಮ್ಸ್ ಜಾಯ್ಸ್ ನ “ಯೂಲಿಸಿಸ್” ಪ್ರಜ್ಞಾ ಪ್ರವಾಹ ತಂತ್ರ (stream of consciousness) ಕ್ಕೆ ಉದಾಹರಿಸಬಹುದಾದ ಕೃತಿ ಸುಜಾತಾ ಅವರ ಮಣಿಬಾಲೆ‌, ಇದೇ ತಂತ್ರವನ್ನು ಅಳವಡಿಸಿಕೊಂಡಿದೆ ಅನಿಸುತ್ತದೆ. ಕಾದಂಬರಿಯ ಸಿದ್ಧ ಮಾದರಿಯನ್ನು ಮುರಿಯುವ ಮೂಲಕ ವಿಮರ್ಶೆಯ ಮಾನದಂಡಗಳನ್ನು ಬದಲಾಯಿಸಿಕೊಳ್ಳಬೇಕಾದ ಅನಿವಾರ್ಯತೆಯನ್ನು ಸುಜಾತ ಸೃಷ್ಟಿಸಿದ್ದಾರೆ.

“ಮಣಿಬಾಲೆ”ಯು ಲೋಕ ತಲುಪುವ ಮುನ್ನ ನನ್ನನ್ನು ತಲುಪಿದ್ದು ನನ್ನ ಸಂತೋಷ ಹೆಚ್ಚಿಸಿದೆ.
ಬಾಣನ “ಕಾದಂಬರಿ”, ಟಾಲ್ ಸ್ಟಾಯ್ ನ ಬೃಹತ್ ಕೃತಿಗಳ ನಂತರ ಓದುತ್ತಾ ಓದುತ್ತಾ ದಾರಿ ತಪ್ಪಿಸಿಕೊಂಡ, ಮತ್ತೆ ದಾರಿ ಕಂಡುಕೊಂಡ, ದಿಗ್ಭ್ರಮೆ, ಅಚ್ಚರಿಯನ್ನು ಉಂಟುಮಾಡಿದ ಕೃತಿ “ಮಣಿಬಾಲೆ”. ದಯವಿಟ್ಟು ಇದನ್ನು ವಿಮರ್ಶೆ ಎಂದು ಭಾವಿಸದೆ ನನ್ನ ಅನಿಸಿಕೆ ಎಂದು ಭಾವಿಸಬೇಕೆಂದು ಮೊದಲೇ anticipatory bail ತೆಗೆದುಕೊಂಡಿದ್ದೇನೆ.

ಮಣಿಬಾಲೆ ಹಲವು ಆಯಾಮಗಳುಳ್ಳ ಗ್ರಾಮೀಣ ಬದುಕನ್ನು ಕಟ್ಟಿಕೊಡುವ ಕೃತಿ. ಇಲ್ಲಿ ಲೇಖಕಿ ಒಂದು ಮಾನಸಿಕ ದೂರವನ್ನು ಕಾಪಾಡಿಕೊಂಡು ಪಾತ್ರಗಳನ್ನು ಕಂಡಿರುವ ಕಾರಣ ಮಣಿಬಾಲೆಯಂತೆ ಲೇಖಕಿಯೂ ಎಲ್ಲದಕ್ಕೆ ಸಾಕ್ಷಿ. ಯಾವುದೇ ಪೂರ್ವನಿರ್ಧಾರಗಳಾಗಲೀ, ಹಳ್ಳಿಯ ಬದುಕನ್ನು romanticise ಮಾಡುವುದಾಗಲೀ ಇಲ್ಲಿ ಕಾಣದು. ಒಂದುರೀತಿಯಲ್ಲಿ ‘ಪ್ರಜ್ಞಾಪ್ರವಾಹ’ ದ ನೆಲೆಯಲ್ಲಿ ಕೃತಿ ರೂಪುತಳೆದಿರಬಹುದು ಎನಿಸುತ್ತದೆ.

ಗ್ರಾಮೀಣ ವಿಘಟನೆಯ ಕುರಿತಂತೆ ನಮ್ಮ ಹಲವು ಕಾದಂಬರಿಗಳಲ್ಲಿ ಕಂಡುಬರುವಂತೆ ಹಳಹಳಿ,ತಲ್ಲಣ ಇಲ್ಲಿಲ್ಲ.ಅದೊಂದು ಸಹಜ ಪ್ರಕ್ರಿಯೆ ಎಂಬಂತೆ ದಾಖಲಾಗಿದೆ. ಶೂದ್ರ, ದಲಿತ, ಮುಸ್ಲಿಂ ಸಮುದಾಯಗಳು ಮೂರು ವೃತ್ತಗಳಾಗಿ ಒಂದರೊಡನೊಂದು ಹಾಯುತ್ತವೆ.ಹಾದೂ ಭಿನ್ನತೆಯನ್ನು ಉಳಿಸಿಕೊಳ್ಳುತ್ತವೆ. ಇದು ಸಾಂಸ್ಕೃತಿಕ ದಾಖಲೆಯಾಗಿ ಬಹುಮುಖ್ಯವೆನಿಸುತ್ತದೆ.

ಇಲ್ಲಿನ ಹೆಣ್ಣುಮಕ್ಕಳು ಪುರುಷಪ್ರಧಾನ ಸಮಾಜದ ಅಂಗವಾಗಿಯೂ ತಮ್ಮ ಅಸ್ಮಿತೆಯನ್ನು ನೀಗಿಕೊಳ್ಳದ,ಬದುಕನ್ನು ನಿಲ್ಲಿಸುತ್ತಲೇ ತಾವೂ ಎದ್ದುನಿಲ್ಲುವ ಗಟ್ಟಿಗಿತ್ತಿಯರು. ಒಂದುರೀತಿಯಲ್ಲಿಸುಜಾತಾ ಅವರ ಎಲ್ಲ ಕೃತಿಗಳ ಹಿಂದಿರುವ ಹುಡುಕಾಟ ಇದೇ ಆಗಿದೆ ಎನ್ನಬಹುದು. ಬಾಗಿದಂತೆ ಕಾಣುವ ಆದರೆ ಸೆಟೆಯುವ ಹೆಣ್ಣುಗಳು!

ರಚನೆಯ ದೃಷ್ಟಿಯಿಂದ ಗದ್ಯದೊಡನೆ ಪದ್ಯ,ಜನಪದ ಕಾವ್ಯ,ಕತೆಗಳನ್ನು ಹದವಾಗಿ ಬೆಸೆದಿರುವುದು ಕೃತಿಯ ಮೈಗೆ ಹೊಸ ಹೊಳಪನ್ನು ನೀಡಿದೆ. ಸುಜಾತಾ ಅವರ ನೀಲಿ ಮೂಗಿನ ನತ್ತು ಪ್ರಬಂಧ ಸಂಕಲನದ ಕೆಲ ಸನ್ನಿವೇಶಗಳು,ಭಾಷೆ ಇಲ್ಲಿ ಪುನರಾವರ್ತನೆ ಆಗಿದೆ ಎನಿಸಿದರೂ ಕೃತಿಯ ಬೆಳವಣಿಗೆ ಹಾಗೂ ಬಂಧದ ದೃಷ್ಟಿಯಿಂದ ಅದು ಅನಿವಾರ್ಯವೂ ಆಗಿದೆ.ಇಲ್ಲಿ ಬಳಕೆಯಾಗಿರುವ ಜನಪದ ಕವನ,ಕತೆಗಳು ಕಾದಂಬರಿಯ ಆಶಯವನ್ನು ಪೊರೆಯುವ ರೂಪಕಗಳೂ ಆಗಿವೆ.

ಇತ್ತೀಚೆಗೆ ಬಂದ ಮಹಿಳೆಯರು ಬೃಹತ್ ಕಾದಂಬರಿಗಳ ಕಡೆ,ಅದರಲ್ಲೂ ಗ್ರಾಮೀಣ ಬದುಕನ್ನು ಕಟ್ಟಿಕೊಡುವ ಹೆಣ್ಣೋಟದ ಕಾದಂಬರಿಗಳ ಕಡೆ ಹೊರಳುತ್ತಿರುವ ಸೂಚನೆಯಾಗಿರಬಹುದೆ.?

ಕೆ.ವಿ.ಎನ್.ಮೇಷ್ಟ್ರು , ತಮ್ಮ ತೊಂಡುಮೇವು ಕೃತಿಯಲ್ಲಿ ಬೇಂದ್ರೆಯ ಕವನದ ಸಾಲುಗಳನ್ನು ಉದ್ಧರಿಸುತ್ತಾ,
“ನಕ್ಷೆಯನು ಹಿಡಿದು ತಡಕಾಡಬೇಡ
ನಕ್ಷತ್ರ ಮಾರ್ಗವನ್ನು
ತೊಂಡುಮೇವರಿಗೆ ಹಾದಿಕೇಳದಿರು
ಹತ್ತು. ದುರ್ಗವನ್ನು”
ಎಂದಿರುವುದನ್ನು ” ಮಣಿಬಾಲೆ” ಕೃತಿಯನ್ನು ಪ್ರವೇಶಿಸುವ ಮನಸ್ಸುಗಳಿಗೂ ಹೇಳಬಹುದೇನೋ.

‍ಲೇಖಕರು Admin

August 16, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: