ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ವಸುಮೇಡಂಗೆ ಒಂದು ಪತ್ರ

ಬೇಲೂರು ರಘುನಂದನ್

ನಮಸ್ತೆ ವಸು ಮೇಡಂ ಈ ಪದ್ಯ ನೆನಪಿದೆಯಾ ?

ರಾತ್ರಿ ಒಂದು ಗಂಟೆಗೆ
ಕವಿತಾ ಗೊಂಚಲ ಕುಂಚಕೆ
ಮುನ್ನುಡಿಗಾಗಿ
ಕನ್ನಡ ಮೇಷ್ಟ್ರು ಚರಿತ್ರೆಯ ಚಿಂತಕರಲ್ಲಿ
ಬಿಸಿ ಹಸಿ ಚರ್ಚೆ
ಚರ್ಚೆಯ ಬಿಸಿಗೆ
ಹೀರುವ ಮೊದಲೇ ಚಹಾ ತಣ್ಣಗಾಗಿತ್ತು
ಭಾಷೆ ಭಾವ ಬದುಕು ಬವಣೆ
ನಗರ ಜಾಗತಿಕ ಸಮಕಾಲೀನ
ರಾಜಕೀಯ ಅರಾಜಕತೆಗಳ
ವಾಮಾಚಾರ ವಿರಹಿಗಳ
ವಿಶ್ವಕೋಶದ ಪುಟಗಳ ತಿರುಚು
ವಿಮರ್ಶೆಯೋ ಚರ್ಚೆಯೋ
ವಿವರಣೆಯೋ ಅಧ್ಯಯನವೋ
ಬದುಕ ಬೇಲಿಯ ಬೀಗ ತೆಗೆದು
ಲೋಕಾಭಿರಾಮವಾಗಿ ಹರಟು

****

ಮೂರು ತಾಸುಗಳು ಕಳೆದು
ಮನೆಯ ಬಾಗಿಲ ಕಡೆ ನೋಟ
ಸಂಚಾರ ವ್ಯವಸ್ಥೆಯ ಭಯಕ್ಕೆ
ಮನಸಿಲ್ಲದ ಮನಸ್ಸಿಂದ
ಸೋಫಾದ ಒಲವನ್ನು ಬಿಡಿಸಿ
ಮಾತಿನ ಮಂಪರನ್ನು ಮುರಿದು
ಬಂದ ದಾರಿಗೆ ಸುಂಕವಾಗಿ
ಸೀದ ಸಂತೆಯ ಸಾರಗೊಳಿಸುವ
ಸರಕುಗಳನ್ನಿಟ್ಟುಕೊಂಡು
ಅಂದಿನ ಸ್ಪಂದನೆಗೆ ವಿದಾಯ
****
ಅಪಾರ್ಟ್ಮೆಂಟ್ ಗಳನ್ನು ದಾಟಿ
ಸ್ವಚ್ಚವಾಗಿದ್ದ ರಸ್ತೆಗಳ ಎದೆಯ ಮೇಲೆ
ಬಿರಬಿರನೆ ವೇಗವಾಗಿ ನಡೆದು
ಮೆಜೆಸ್ಟಿಕ್ ಬಸ್ಸಿಗೆ ಕಾಯುತಾ
ಅರ್ಧ ತಾಸು ಕಳೆದಿದ್ದಾಯಿತು.
ಕಾಯುತ್ತಾ ಕಣ್ಣು ಸುಮ್ಮನಿರದೇ
ಚಿಂತಕರು ಕೈಗಿತ್ತ ಪುಸ್ತಕವ ತೆರೆದು
ಓದು ಆರಂಭಿಸಿ ಓದುತ್ತಾ ನಿಂತೆ
ಪರಿವಿಡಿ ಪರಿಣಮಿಸುವ ಮೊದಲೇ
ಕನ್ನಡದೊಳ್ ಭಾವಿಸಿದ ಜನಪದಂ
ಯೋಚನೆಯ ಕೆತ್ತಿ ಕುಕ್ಕಿ
ಓದಿನ ಪ್ರೀತಿಗಾಗಿ
ಕವಿಗಳಾದ ನಿಮಗೆ
ಒಕ್ಕಣೆ ಹೃದಯವನು ಒಕ್ಕಿ
ಸುನಾಮಿಯಂತೆ ಸುಕ್ಕನ್ನು ಸಡಿಲ ಮಾಡಿತು.

****

ಸ್ಟ್ಯಾಂಡಿನಲ್ಲಿ ಓದುತ್ತಿದ್ದ ನನ್ನನ್ನು
ಒಂದು ನಮೂನೆಯಂತೆ
ನೋಡುವ ನೋಡುಗರ ಕಣ್ಣು
ಅಷ್ಟರಲ್ಲಿ ಒಂದು ತಾಸು ಕಳೆದೇಹೋಯಿತು
ಆಗ ಅಲ್ಲಿಗೆ ಬಂದವ
ಬಸ್ ಸ್ಟ್ಯಾಂಡ್ ಇಲ್ಲಿಂದ ಶಿಫ್ಟ್ ಆಗಿದೆ ಎಂದ
ಎಲ್ಲಿ ? ಯಾಕೆ ? ಅಂದಿದ್ದಕ್ಕೆ
ನೆನ್ನೆವರೆಗೂ ಇಲ್ಲೇ ಇತ್ತು ಸರ್
ಮೆಟ್ರೋ ಕಾಮಗಾರಿ ಈಗ
ಇಲ್ಲಿಂದ ಅರ್ಧ ಫರ್ಲಾಂಗು ಬಸ್ ನಿಲ್ದಾಣ ಅಂದ

****

ಪರಿವಿಡಿಯ ಓದು ಗಂಟೆ ಕಳೆಸಿ
ಬೇಸರ ನುಂಗಿ ಮುಂದಿನ ದಾರಿ ನೋಡಿ
ಸೂಚನೆ ಹಿಡಿದು ಹೊರಟ್ಟಿದ್ದಾಯಿತು
ಆಗಾಲೇ ರಾತ್ರಿ ಗಂಟೆ ಹತ್ತಾಗಿತ್ತು
ನಮ್ಮ ಮನೆಗೆ ಅಲ್ಲಿಂದ
ಬರೋಬ್ಬರಿ ನಲವತ್ತು ಕಿಲೋಮೀಟರ್
ಬೆಂಗಳೂರಲ್ಲಿ !
ನಿಟ್ಟುಸಿರು ಬಿಟ್ಟು ಮುಂದೆ ಸಾಗಿ
ನಿಲ್ದಾಣದ ಹುಡುಕಾಟದಲ್ಲಿ ಯಶಸ್ವಿ
ಬಸ್ನಲ್ಲಿ ನಿದ್ದೆ ಮಾಡಲು
ರಾತ್ರಿ ಪಾಳಯದ ಬಸ್ಸು ಬೇರೆ
ನಿಲ್ಲಲು ಸಿಕ್ಕ ಜಾಗ
ವಿಧಾನ ಸೌಧದೊಳಗೆ ಇದ್ದಂತೆ
ನಿದ್ದೆ ಚಳಿಯ ರಾತ್ರಿ ಪ್ರಯಾಣ
ಮೆದುಳ ಮಲಗಿಸದೆ
ಚರ್ಚೆಯ ತಾಜಾತನ ಬಿಡದೆ
ಮನೆಗೆ ಬಂದು ಸೇರಿದ್ದು
ರಾತ್ರಿ ಒಂದು ಗಂಟೆಗೆ..
 
ವಸು ಮೇಡಂ, ನಿಮಗೆ ನೆನಪಿದೆಯಾ ನಿಮಗಾಗಿ 2010 ರಲ್ಲಿ ಈ ಪದ್ಯ ಬರ್ಕೊಂಡು ಬಂದು ತೋರಿಸಿದ್ದೆ. ನೀವು ಪದ್ಯ ಓದಿ ಪ್ರತಿಕ್ರಿಯಿಸಿ, ಆಗ ತಾನೇ ಕೆಲ ತಿಂಗಳುಗಳ ಹಿಂದೆ ಮಯೂರದಲ್ಲಿ ಪ್ರಕಟವಾಗಿದ್ದ ನಿಮ್ಮ ಗುಬ್ಬಿ ಪದ್ಯವನ್ನು ಪ್ರೀತಿಯಿಂದ ಓದಿ ಹೇಳಿದ್ರಿ. ಆಮೇಲೆ ಕನ್ನಡಿ ಮುಂದೆ ನಿಂತಾಗ ಅನ್ನುವ ನನ್ನ ಕವನ ಸಂಕಲನಕ್ಕೆ ಮುನ್ನುಡಿ ಬರೆದುಕೊಡಿ ಅಂತ ಕೇಳಿದ್ದಕ್ಕೆ ನೀವು ಬರೆದು ಕೊಟ್ಟಿದ್ರಿ. ಅದಕ್ಕಿಂತ ಮುಂಚೆ ನಿಮ್ಮ ತಂದೆ ಮಳಲಿ ವಸಂತ್ ಕುಮಾರ್ ಅವರು ನನ್ನ ಮೇಷ್ಟು ನಿಮ್ಮ ಬಗ್ಗೆ ಅಭಿಮಾನದ ಮಾತುಗಳನ್ನು ಆಡುತ್ತಲೇ ನಿಮ್ಮ ವ್ಯಕ್ತಿತ್ವವನ್ನು ನನ್ನಲ್ಲಿ ತುಂಬ್ತಿದ್ರು. ಅಮ್ಮ ಕೂಡ ವಸು ವಸು ಅಂತ ಅನೇಕ ಸಲ ಭೂಮಿ ತಾಯಿ ತೋಟಕ್ಕೆ ಹೋದಾಗೆಲ್ಲಾ ಹೇಳೋರು. ಇದೆಲ್ಲಾ ಆದಮೇಲೆ ನಾನು ನಿಮ್ಮ ಸಂಶೋಧನೆಗೆ ಸಂಬಂಧಿಸಿದ ಉಪನ್ಯಾಸ ಕೇಳಿ ಪಡೆದುಕೊಂಡಿದ್ದು ಗಳಿಸಿಕೊಂಡಿದ್ದು ಅನೇಕ ಬಿಡಿ.
ಮೇಡಂ ನಾನು ನೀವ್ ಹೇಳಿದ್ದಕ್ಕೆ, ನನ್ನ ಪಿಎಚ್.ಡಿ ವಿಷಯವನ್ನು ಬದಲಿಸಿಕೊಂಡಿದ್ದು. ಮೊದಲು ‘ಕುವೆಂಪು ಕಾವ್ಯದಲ್ಲಿ ಸಂಸ್ಕೃತಿಯ ನೆಲೆಗಳು’ ಅನ್ನುವ ವಿಷಯದ ತಯಾರಿಯಲ್ಲಿದ್ದಾಗ ನೀವು ಕುವೆಂಪು ಅವರು ಈಗಾಗಲೇ ಓವರ್ ಫೋಕಸ್ ಆಗಿದ್ದಾರೆ. ಸಂಶೋಧನೆಯಲ್ಲಿ ಅದು ಬೇಡ ಉಮಾಶ್ರೀ ಅವರ ಬಗ್ಗೆನೇ ನೀನು ಸಂಶೋಧನೆ ಮಾಡು ಅಂತ ಹೇಳಿ ನನ್ನ ಹೈಪಾಥೀಸಿಸ್ ನೇ ಬದಲಿಸಿದ್ರಿ. ಈ ಸಬ್ಜೆಕ್ಟ್ ನೀನು ಅಲ್ಲದೇ ಇನ್ನಾರು ಮಾಡುತ್ತಾರೆ ಹೇಳು ಅಂತೆಲ್ಲಾ ಹೇಳಿ ಹುರಿ ತುಂಬಿಸಿದ್ರಿ. ನನಗೂ ಕೂಡ ಸರಿ ಅನ್ನಿಸ್ತು. ಆಮೇಲೆ ನಾನು ಸಿನೆಮಾ ಮತ್ತು ರಂಗಭೂಮಿಯ ಮೇಲೆ ಹೆಚ್ಚು ಆಸಕ್ತಿ ಇದ್ದ ಕಾರಣ ಅದೇ ವಿಷಯದ ಕಡೆ ಗಮನಕೊಡೋಕೆ ಶುರು ಮಾಡಿದೆ.
ಕನ್ನಡ ಸಿನೆಮಾ, ರಂಗಭೂಮಿ ಹಾಗೂ ಸಂಸ್ಕೃತಿಯನ್ನು ಉಮಾಶ್ರೀ ಅವರನ್ನು ಕೇಂದ್ರವಾಗಿಟ್ಟುಕೊಂಡು, ವ್ಯಕ್ತಿ ವೈಭವೀಕರಣವನ್ನು ತಪ್ಪಿಸಿ ಆದಷ್ಟೂ ಥಿಯರೈಸ್ ಮಾಡಿ ಒಂದೊಳ್ಳೆ ಸಂಶೋಧನಾ ಪ್ರಭಂದ ಬರಿ ಅಂದಿದ್ರಿ. ನಾನೂ ಕೂಡ ಆ ವಿಷಯಕ್ಕೆ ಮೋಹಗೊಂಡು ಅದೇ ವಿಷಯದಲ್ಲಿ ಅಧ್ಯಯನದಲ್ಲಿ ತೊಡಗಿದೆ. ಆ ಸಂದರ್ಭದಲ್ಲಿ ನನಗೆ ಎದುರು ಬಂದ ಸಮಸ್ಯೆಗಳಿಗೆ ನೀವು ಜೊತೆಯಾದದ್ದು, ಧೈರ್ಯ ತುಂಬಿದ್ದನ್ನು ಮರೆಯಲಾರೆ. ಹೀಗೆ ಉಮಾಶ್ರೀ ಅವರನ್ನು ಕೇಂದ್ರವಾಗುಳ್ಳ ವಿಷಯವನ್ನು ಅಧ್ಯಯನಕ್ಕೆ ತೆಗೆದುಕೊಂಡಾಗ ಅಂದವರೆಷ್ಟೋ, ಆಡಿದವರೆಷ್ಟೋ. ‘ಯಾವಳ್ ರೀ ಅವ್ರು ಉಮಾಶ್ರೀ, ಏನ್ ಅಧ್ಯಯಯನ ಮಾಡ್ತೀರ ಅವರ ಬಗ್ಗೆ, ಯಾರ್ರೀ ಅವರು ಉಮಾಶ್ರೀನೋ ಮಾಲಾಶ್ರೀನೋ, ಗೆಜ್ಜೆ ಕಟ್ಟಿಕೊಂಡು ಕುಣಿಯೋರ ಬಗ್ಗೆ ಅಧ್ಯಯಯನ ಏನ್ ಮಾಡ್ತೀರಿ ?, ಸಂಶೋಧನೆ ಮಾಡೋಕೆ ಏನಿದೆ ಅವರಲ್ಲಿ ? ನಾನ್ ಎಲ್ಲಾದ್ರೂ ಹೋದಾಗ ಉಮಾಶ್ರೀ ಬರ್ತಾ ಇದ್ದಾರೆ ನೋಡ್ರಿ’ ಅಂತ ಅನೇಕರು ನನಗೆ ಛೇಡಿಸಿದವರೂ ಕೂಡ ಇದ್ದಾರೆ. ಈ ಸಂದರ್ಭದಲ್ಲಿ ನಾನು ಕುಸಿದು ಹೋಗದಂತೆ ಕಾಪಾಡಿ ಮತ್ತೆ ಮತ್ತೆ ನನ್ನ ಸಂಶೋಧನಾ ವಿಷಯದ ತಾತ್ವಿಕತೆಯನ್ನು, ಅಧ್ಯಯನ ಮಾಡಬೇಕಾದ ಗಟ್ಟಿ ದಾರಿಗಳನ್ನು ತೋರಿಸಿಕೊಟ್ಟವರು ನೀವು. ಈ ತೆರನಾದ ವಿಕಟ ಅಟ್ಟಹಾಸದ ನಡುವೆ ಅಧ್ಯಯನಕ್ಕೆ ಇರಬೇಕಾದ ತಾಕತ್ತನ್ನು ತುಂಬಿದಿರಿ ನೀವು. ಅಂದಿನಿಂದ ನನ್ನ ಗ್ರಹಿಕೆಗಳು ಮತ್ತು ಅಲೋಚನ ಕ್ರಮಗಳು ಸರಿ ಅನ್ನಿಸಿ ನನ್ನ ಅಧ್ಯಯನದ ಒಟ್ಟು ಕ್ಯಾನ್ವಾಸ್ ಏನೆಂದು ಅರ್ಥ ಮಾಡಿಕೊಂಡಿದ್ದೇನೆ ಮೇಡಂ. ಅವತ್ತಿನಿಂದ ಎಷ್ಟೇ ಅಡ್ಡಿ ಆತಂಕ ಬಂದ್ರೂ, ಯಾರು ಕಾಲೆಳೆದರೂ ಗಟ್ಟಿಯಾಗಿ ಸಂಶೋಧನಾ ಕಾರ್ಯದಲ್ಲಿ ತೊಡಗಿಕೊಂಡಿದ್ದೇನೆ ಮೇಡಂ. ಅಂದ ಹಾಗೆ ಮೇಡಂ ನೀವು ಹೇಳಿದ್ರಲ್ಲಾ ನನ್ನ ಸಂಶೋಧನೆಯ ವಿಷಯವಾಗಿ ಬಿ.ಯು. ಸುಮಾ ಅವರ ಬಳಿ ಹೆಚ್ಚು ಸಂವಾದಗಳನ್ನು ಮಾಡು ಅಂತ, ನಾ ಅವರೊಟ್ಟಿಗೂ ಕೂಡಾ ಸಂವಾದಗಳನ್ನು ಕೂಡ ಮಾಡುತ್ತಿದ್ದೇನೆ ಮೇಡಂ.
ಆಮೇಲೆ ಇನ್ನೊಂದು ವಿಷ್ಯ ವಸು ಮೇಡಂ, ಅಮ್ಮ ಪಿಎಚ್. ಡಿ ಮಾಡುವಾಗ ಆದ ಕಿರಿ ಕಿರಿಗಳು ಮತ್ತು ಅನಂತ ಮೂರ್ತಿ ಸರ್ ಗೆ ಬಸವ ಪ್ರಶಸ್ತಿ ಬಂದಾಗ ಬಂದ ಅತೃಪ್ತಿಗಳ ಸಮಯದಲ್ಲಿ, ಆಮೇಲೆ ಮಹಿಳೆಯರ ಮೇಲೆ ಸರಣಿ ಅತ್ಯಾಚಾರಗಳು ಆದಾಗ ಅಮ್ಮನ ಮೇಲೆ ಹರಿಹಾಯ್ದಾಗ ನೀವು ‘ಮೇಡಂ ಗಟ್ಟಿಯಾಗಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಯಾವುದಕ್ಕೂ ತಲೆ ಕೆಡಿಸಿಕೊಳ್ಳಬೇಡಿ, ನಾವೆಲ್ಲಾ ಪ್ರಗತಿ ಪರರು ಅವರ ಬೆನ್ನಿಗಿದ್ದೇವೆ ಅಂತ ಉಮಾಶ್ರೀ ಅವರಿಗೆ ಹೇಳಿ’. ಅಂದಿದ್ರಿ. ಅಷ್ಟೇ ಅಲ್ಲ ಮೇಡಂ ನೀವು ಎಂ.ಆರ್ ಕಮಲಾ ಮೇಡಂ ಅವರನ್ನು ಒಳಗೊಂಡಂತೆ ಕೆಲವರಿಗೆ ಕುವೆಂಪು ಭಾಷಾಭಾರತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅಮ್ಮನ ಮಾತುಗಳನ್ನು ಕೇಳಿ ನೀವು ಸಂತಸಗೊಂಡು ಅವರೊಟ್ಟಿಗೆ ಒಂದಷ್ಟು ಜನ ಮಹಿಳಾ ಸಾಹಿತಿಗಳೆಲ್ಲಾ ಸೇರಿಕೊಂಡು ಸಂವಾದ ಏರ್ಪಡಿಸಬೇಕು ಅಂತ ಕೇಳಿದ್ರಿ. ಆ ಸಂದರ್ಭದಲ್ಲಿ ನೀಲಾ ಮೇಡಂ ಕೂಡಾ ಇದ್ರು. ಅಷ್ಟೇ ಅಲ್ಲ ಈ ವಿಷಯವಾಗಿ ನೀವು ಅಮ್ಮನ ಹತ್ತಿರ ಪ್ರಸ್ತಾಪ ಕೂಡ ಮಾಡಿದ್ರಿ. ಅವರು ನೋಡೋಣ ವಸು ಅವರೇ. ನಾನು ಏನು ಮಾಡಿದ್ದೀನಿ ಅಂತ ಸಂವಾದ ಮಾಡೋದು ಹೇಳಿ ಅಂದು, ರಾಜಕೀಯದಲ್ಲಿ ಇನ್ನೊಂದಷ್ಟು ದಿನ ಕಳೀಲಿ ಆಮೇಲೆ ಮಾಡೋಣ ಅಂದಿದ್ರು. ಅದನ್ನ ಆಗ್ಲೇ ಮಾಡಿಬಿಡಬೇಕಿತ್ತು ಅಲ್ವಾ ಮೇಡಂ ? ಹಾ ಮರೆತಿದ್ದೆ ನೋಡಿ ಸಾಂಸ್ಕೃತಿಕ ನೀತಿಯ ವಿಷಯದ ಚರ್ಚೆ ಬಂದಿದ್ದಾಗ ‘ನಾನೂ ಮತ್ತು ದೇವನೂರು ಸರ್ ಆ ಬಗೆಗೆ ಉಮಾಶ್ರೀ ಅವರ ಹತ್ತಿರ ಸಮಾಲೋಚನೆ ಮಾಡಬೇಕು’ ಅಂತ ಕೂಡ ಹೇಳಿದ್ರಿ. ಮತ್ತೆ ಅದಕ್ಕೆ ಸಮಯ ಕೂಡಲೇ ಇಲ್ಲ ನೋಡಿ.
ಅವತ್ತೊಂದಿನ ನೀವು ಮತ್ತು ಲಕ್ಷ್ಮಿಪತಿ ಸರ್ ಇಬ್ರೂ ಉಮಾಶ್ರೀ ಅವರ ಮನೆಗೆ ಬಂದಿದ್ರಿ. ನನಗೂ ಫೋನ್ ಮಾಡಿ ಬರಲು ಹೇಳಿದ್ರಿ. ನಾನೂ ಕೂಡ ಬಂದೆ. ಅವತ್ತು ನೀವು ಮುಂದೆ ಯೋಜನೆ ಹಾಕಿಕೊಂಡಿದ್ದ ಮಕ್ಕಳ ಸಿನಿಮಾವೊಂದಕ್ಕೆ ಅಮ್ಮನನ್ನು ಒಂದು ಮುಖ್ಯ ಪಾತ್ರ ಮಾಡಲು ಕೇಳಲು ಬಂದಿದ್ರಿ. ಅವತ್ತು ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಮುದಾಯಗಳ ಬಗೆಗೆ ಸಾಂಸ್ಕೃತಿಕ ಮತ್ತು ರಾಜಕೀಯ ಹಿನ್ನೆಲೆಯಲ್ಲಿ ನಡೆಸಿದ ಚರ್ಚೆ ಇನ್ನೂ ನನ್ನ ಕಿವಿಯಲ್ಲಿ ಗುಯ್ ಗುಡುತ್ತಿದೆ. ಅಮ್ಮ ಕೂಡ ಅವತ್ತು ನೇಕಾರ ಸಮುದಾಯ ಅದರ ಸಾಧ್ಯತೆಗಳ ಬಗೆಗೆ ಅಂಕಿ ಅಂಶ ಸಮೇತ ನಿಮ್ಮೆದುರು ಸಂವಾದ ನಡೆಸಿದ್ದರು. ಅವತ್ತು ಸುಮಾರು ಮೂರೂವರೆ ಗಂಟೆ ಕಳೆದಿದ್ದೇ ಗೊತ್ತಾಗಲಿಲ್ಲ. ಸಿನೆಮಾದಲ್ಲಿ ಪಾತ್ರ ಮಾಡಿ ಅಂತ ಕೇಳಲು ಬಂದು ಅನೇಕ ವಾಗ್ವಾದಗಳಿಗೆ ತೆರೆದುಕೊಂಡಿದ್ದು ಮರೆಯಲಾದೀತೇ ಮೇಡಂ.
ಮೇಡಂ ಒಂದು ಐದಾರು ತಿಂಗಳ ಹಿಂದೆ ವೆಂಕಟೇಶ್ ಅವರ ಅಪರಂಜಿ ಮನೆಯಲ್ಲಿ ಕಾಜಾಣದಿಂದ ಏರ್ಪಡಿಸಿದ್ದ ಮಹಿಳಾ ಕವಿಗೋಷ್ಠಿಯಲ್ಲಿ ನೀವು ಭಾಗವಹಿಸಿದ್ರಿ. ಅವತ್ತು ನೀವು ಸೀರೆ ಉಟ್ಕೊಂಡು ಸಕ್ಕತ್ತಾಗಿ ಕಾಣುತಿದ್ರಿ. ಅವತ್ತು ನೀವು ಕಾಣುತ್ತಿದ್ದ ಸೌಂದರ್ಯ ಮತ್ತು ಬೌದ್ಧಿಕ ಸೌಂದರ್ಯ ಎರಡೂ ಸೇರಿಕೊಂಡು ಮನಸು ಮತ್ತು ಬುದ್ಧಿಗೆ ನೀವು ಹೇಳಿಕೊಟ್ಟಿದ್ದು ಅನೇಕ ಬಿಡಿ. ಅಂದು ನಡೆದ ಕವಿಗೋಷ್ಠಿ ನಿಜಕ್ಕೂ ಅರ್ಥಪೂರ್ಣ ಕವಿಗೋಷ್ಠಿ. ಕವಯತ್ರಿ ಹೇಮಾ ಪಟ್ಟಣಶೆಟ್ಟಿ ಸಾಹಿತ್ಯ ಅಕಾಡೆಮಿಯ ರೆಜಿಸ್ಟ್ರಾರ್ ಸಿ, ಎಚ್ ಭಾಗ್ಯ ಅವರು, ಕವಯತ್ರಿಯರಾದ ಪಿ. ಚಂದ್ರಿಕಾ, ಸಂಧ್ಯಾರಾಣಿ, ಬಿ. ವಿ. ಭಾರತಿ, ರೂಪಶ್ರೀ ಕಲ್ಲಿಗನೂರು, ಕುಸುಮಬಾಲೆ. ಶಮ್ಮಿಸಂಜೀವ್, ಚೈತ್ರ ರಾವ್, ಆಶಾದೀಪ, ವಿದ್ಯಾ ಸತೀಶ್, ಮಂಜುಳ, ನಿಶಾ ಗೋಪೀನಾಥ್, ವಸಂತಲಕ್ಷ್ಮಿ ಹೀಗೆ ಅನೇಕ ಹಿರಿ ಕಿರಿ, ಅನುಭವೀ ಮತ್ತು ಆಗತಾನೆ ಕವಿತೆಗೆ ತೆರೆದು ಕೊಳ್ಳುತ್ತಿದ್ದ ಕವಯತ್ರಿಯರು ಸೇರಿದ್ದರು. ಜೊತೆಗೆ ಅಂದು ಪ್ರತಿಕ್ರಿಯೆಗಾಗಿ ಯೋಗೇಶ್ ಮಾಸ್ಟರ್, ಅಮರೇಂದ್ರ ಹೊಲ್ಲಂಬಳ್ಳಿ, ಅಪ್ಪಗೆರೆ ಡಿ,ಟಿ. ಲಂಕೇಶ್ ಮತ್ತು ವಿದ್ಯಾಶಂಕರ್ ಹರಪನ ಹಳ್ಳಿ ಪುರುಷರ ಸಾಲಿನಲ್ಲಿ ಪ್ರತಿಕ್ರಿಯೆಗಾಗಿ ಬಂದಿದ್ದರು. ವಿ ಆರ್ ಕಾರ್ಪೆಂಟರ್ ಕೂಡ ಇದ್ರು ಅವತ್ತು. ಮಧುಶ್ರೀ ವೇಲೂರು ಚಟ ಪಟ ಅಂತ ಕಾರ್ಯಕ್ರಮ ನಿರೂಪಿಸಿದ್ರು. ಕೆ.ನೀಲಾ ಮೇಡಂ ಬರಬೇಕಿತ್ತು ಆದ್ರೆ ಅವರು ಅನಿವಾರ್ಯ ಕಾರಣಗಳಿಂದ ಬರಲು ಆಗಲಿಲ್ಲ. ಜೊತೆಗೆ ವೈದ್ಯರಾದ ಸತ್ಯ ಮೇಡಂ, ನಿಮ್ಮ ತಂಗಿ ರೂಪಮ್ಮ, ನನ್ನ ತಂಗಿ ಶೇತಮ್ಮ ಮತ್ತು ನನ್ನ ಮಡದಿ ಲಕ್ಷ್ಮಿ ಎಲ್ಲರೂ ಅವತ್ತು ಸೇರಿಕೊಂಡ ತುಂಬಾ ಸರಳ ಮತ್ತು ಆಪ್ತವಾದ ಕಾರ್ಯಾಕ್ರಮ ಅದಾಗಿತ್ತು. ಅವತ್ತು ತುಂಬಾ ಒಳ್ಳೊಳ್ಳೇ ಕವಿತೆಗಳು ಓದಲ್ಪಟ್ಟವು ಮತ್ತು ಸಂವಾದ ಕೂಡ ಈ ಹೊತ್ತಿನ ಮಹಿಳಾ ಕಾವ್ಯದ ಬಗೆಗೆ ತುಂಬಾ ಅರ್ಥಪೂರ್ಣವಾಗಿ ಆಯಿತು. ಇದರ ಒಟ್ಟು ಆಶಯಗಳನ್ನು ಕುರಿತು ಅಂದು ನೀವು ಚಂದ ಮಾತಾಡಿದ್ರಿ. ಅಂದು ಅಲ್ಲಿ ಭಾಗವಹಿಸಿದವ್ರಿಗೆಲ್ಲಾ ಸಿಕ್ಕ ಒಳಸುಳಿಗಳು ಅದೆಷ್ಟೋ. ನಿಜಕ್ಕೂ ತನ್ನನ್ನು ತಾನು ಹುಡುಕಿಕೊಂಡರು ಅಲ್ಲಿದ್ದವರೆಲ್ಲಾ. ಆಮೇಲೆ ಇದರ ಒಟ್ಟು ಸಾರವನ್ನು ನೀವು ಪ್ರಜಾವಾಣಿಯ ಕಳ್ಳುಬಳ್ಳಿ ಅಂಕಣದಲ್ಲಿ ಬರೆದ್ರಿ. ನಿಮ್ಮ ಒಟ್ಟು ಆಶಯವನ್ನು, ನೀವು ಕೊಟ್ಟ ದೃಷ್ಟಿಕೋನಗಳನ್ನು ನಿಮ್ಮ ಓದಿನ ಮತ್ತು ಗ್ರಹಿಕೆಗಳ ಶಕ್ತಿ ಗೊತ್ತಿಲ್ಲದ ಕೆಲವರು ಹೀಗಳೆದು ತರಾವರಿ ಬಡಬಡಾಯಿಸಿದ್ರು. ನಿಮಗೆ ಈ ವಿಷಯ ಗೊತ್ತಾದಾಗ ನೀವು ಹೇಳಿದ್ರಿ “ಪ್ರತಿಷ್ಟಾಪನೆಗೊಂಡವುಗಳನ್ನು ಕೀಳಬೇಕಾದರೆ ಅವು ಅಲ್ಲಾಡುತ್ತವೆ. ತಲೆ ಕೆಡಿಸಿಕೊಳ್ಳೋದು ಬೇಡ ಅದನ್ನು ಉದಾಸೀನ ಮಾಡಿಬಿಡೋಣ. ಇನ್ನೊಂದಷ್ಟು ಮಹಿಳಾ ಕವಿಗೋಷ್ಠಿಗಳನ್ನು ಆಯೋಜಿಸಿ, ಆಗಬೇಕಾದ ಕೆಲಸ ಅದು” ಅಂದಿದ್ರಿ. ನಿಜಕ್ಕೂ ಆ ಮಹಿಳಾ ಕವಿಗೋಷ್ಠಿ ನಮ್ಮನ್ನೆಲ್ಲಾ ಒಂದಷ್ಟು ಹೊಸ ಚಿಂತನೆಗೆ ತೆರೆದುಕೊಳ್ಳುವಂತೆ ಖಂಡಿತಾ ಮಾಡಿದೆ ಮೇಡಂ. ಇಷ್ಟೆಲ್ಲದರ ನಡುವೆ ನೀವು ಅವತ್ತಿನ ಕಾರ್ಯಕ್ರಮದಲ್ಲಿ ಮಾತಾಡುತ್ತಿದ್ದಾಗ ನಿಮ್ಮ ಆತ್ಮವಿಶ್ವಾಸವನ್ನು ಕಂಡು ಕಣ್ಣು ಅರಳಿಸಿ ಕಣ್ಣಿನ ಪೂರ್ತಿ ನೀರು ತುಂಬಿಕೊಂಡು ಕೇಳುತ್ತಾ ಕುಂತಿದ್ದ ನಿಮ್ಮ ತಂಗಿ ರೂಪ ಅವರ ಮುಖದಲ್ಲಿ ಪೂರಾ ನಿಮ್ಮ ವ್ಯಕ್ತಿತ್ವ ಮತ್ತು ನೀವು ತೋರುವ ಪ್ರೀತಿ ಮತ್ತು ಕಾಳಜಿಯ ಅನಂತವೇ ಕಾಣುತಿತ್ತು ಮೇಡಂ. ಇದನ್ನು ನೋಡಿದ ಶೇತಮ್ಮ ಮತ್ತು ಲಕ್ಷ್ಮಿ ಕಾರ್ಯಕ್ರಮ ಮುಗಿಸಿ ವಾಪಸ್ ಬರುವಾಗ ನೆನೆ ನೆನೆದು ಕಣ್ಣು ತೇವ ಮಾಡಿಕೊಂಡಿದ್ದರು.
ಕೆಲ ದಿನಗಳ ಹಿಂದೆ ನೀವು ಮಾಡುತ್ತಿದ್ದ ಅಸ್ತ್ರ ಸಿನೆಮಾದ ವಿಷಯವಾಗಿ ಮಾತನಾಡಲು ನೀವು ಮನೆಗೆ ಬರ ಹೇಳಿದ್ದಿರಿ. ಆಗ ಲಕ್ಷ್ಮೀಪತಿ ಸರ್ ಕೂಡ ಇದ್ದರು. ಆಗ ನನ್ನ ರಂಗಿ ಕಿರುಚಿತ್ರವನ್ನು ನೋಡಿ ಖುಷಿ ಪಟ್ಟಿದ್ರಿ. ಕನ್ನಡ ಸಿನೆಮಾ ರಂಗದ ಬಗ್ಗೆ ಮಾತಾಡುತ್ತಾ ಸಿನೆಮಾದ ಬಗೆಗೆ ನೀವು ನನ್ನಲ್ಲಿ ಅಂದು ಹುಟ್ಟು ಹಾಕಿದ ಭರವಸೆಗಳು ಬಹಳ ದೊಡ್ಡವು. ಅದಾದ ಮೇಲೆ ಶಸ್ತ್ರ ಸಿನೆಮಾದ ಶೂಟಿಂಗ್ ನಲ್ಲಿ ನಿಮ್ಮ ಕಾರ್ಯ ವೈಖರಿಯ ಕಂಡು ನಾ ಕಲಿತ ಪ್ರಮಾಣವೂ ದೊಡ್ಡದೇ ಮೇಡಂ.
ಹಾ ಮರೆತಿದ್ದೆ ಮೇಡಂ, ನಾಲ್ಕೈದು ವರ್ಷಗಳ ಹಿಂದಿನ ಮಾತು ಅನ್ಸುತ್ತೆ, ಮೈಸೂರಿನ ಭೂಮಿತಾಯಿ ತೋಟದಲ್ಲಿ ನಿಮ್ಮ ತಂದೆ ನನ್ನ ಮೇಷ್ಟ್ರು ಮಳಲಿ ಸರ್ ಸಾಕಿದ್ದ ನಾಯಿಗೆ ವೇದ ಅಂತ ಹೆಸರಿಟ್ಟಿದ್ರು. ಅದಕ್ಕೆ ನಾನು ‘ಮೇಷ್ಟು ಮನೆಯ ನಾಯಿ ಹೆಸರು ವೇದ’ ಅಂತ ಪದ್ಯ ಬರೆದಿದ್ದೆ. ಅದನ್ನು ಕುರಿತು ನೀವು ನನ್ನ ಬಳಿ ಚರ್ಚಿಸಿದ ಚರ್ಚೆಯ ಆಳ ಅಗಲಗಳನ್ನು ವಿವರಿಸೋಕೆ ಸಾಧ್ಯವಿಲ್ಲ.
ಹೀಗೆ ಆರ್. ಜಿ. ಹಳ್ಳಿ ಸರ್ ಮತ್ತು ನರೇಶ್ ಮಯ್ಯಾ ಅವರೆಲ್ಲಾ ಸೇರಿಕೊಂಡು ನಡೆಸಿದ ದೀಪಕಾವ್ಯದ ಸಂದರ್ಭದಲ್ಲಿ, ಮೇಷ್ಟ್ರು ಮಳಲಿ ಸರ್ ನ ಚಂದನಕ್ಕೆ ಸಂದರ್ಶನ ಮಾಡುವಾಗ ನಾನೂ ಎಚ್.ಎನ್.ಆರತಿ ಮೇಡಂ, ಮೇಷ್ಟ್ರು ಮತ್ತು ಅಮ್ಮ ನಿಮ್ಮ ಬಗ್ಗೆ ಮಾತಾಡಿದ್ದು ಕೂಡ ಅದೆಷ್ಟೋ. ಹೀಗೆ ಇನ್ನೂ ಅನೇಕ ಸಂದರ್ಭಗಲ್ಲಿ ನೀವು ನಿಮ್ಮ ವ್ಯಕ್ತಿತ್ವ ನನ್ನಂತೆ ಅನೇಕರಲ್ಲಿ ಬೀಜ ಬಿತ್ತಿ ಬೆಳೆ ಕಂಡಿದೆ. ನಿಮ್ಮ ಜೊತೆಗಿನ ಐದಾರು ವರ್ಷಗಳ ಒಡನಾಟದಲ್ಲಿ ಕಲಿತದ್ದು ಅದೆಷ್ಟೋ. ಚರಿತ್ರೆ, ಸಿನೆಮಾ, ಸಾಹಿತ್ಯ, ಕಾವ್ಯ, ರಂಗಭೂಮಿ, ಪತ್ರಿಕೆ ಹೀಗೆ ಒಂದಲ್ಲಾ ಎರಡಲ್ಲಾ ನೀವು ಕೊಟ್ಟ ಒಳನೋಟಗಳ ಪಟ್ಟಿ.
ಮೊನ್ನೆ ಮೇಡಂ ಶ್ರವಣಬೆಳಗೊಳದಲ್ಲಿ ಸಾಹಿತ್ಯ ಸಮ್ಮೇಳನ ನಡೀತಿತ್ತಲ್ಲಾ ಆಗ, ಎರಡನೇ ತಾರೀಖು ಲಕ್ಷ್ಮೀಪತಿ ಸರ್ ಫೋನ್ ಮಾಡಿದ್ರು. ಇನ್ನೂ ನೀವು ಇರಲ್ವಂತೆ. ಬನ್ನಿ ನೋಡ್ಕೊಂಡು ಹೋಗಿ ಅಂತ. ಅದಾದ ಸ್ವಲ್ಪ ಹೊತ್ತಿಗೆ ಮೇಷ್ಟ್ರು ಕೂಡ ಫೋನ್ ಮಾಡಿದ್ರು. ಅಮ್ಮ ಅಲ್ಲೇ ಇದ್ದಾಳೆ ರಘುನಂದನ್ ನೀನು ಜಯದೇವ ಆಸ್ಪತ್ರೆಗೆ ಬಾ ಅಂದ್ರು. ಆಮೇಲೆ ನಾನು ವೆಂಕಟೇಶ್ ಅವರಿಗೆ ಫೋನ್ ಮಾಡಿದೆ. ಹೌದು ರಘುನಂದನ್ ವಸು ಮೇಡಂ ತುಂಬಾ ಕ್ರಿಟಿಕಲ್ ಅಂದ್ರು. ವಸು ಮೇಡಂ ಅವರ ಬಗ್ಗೆ ಪ್ರೀತಿ ಗೌರವಗಳನ್ನು ಇಟ್ಟುಕೊಂಡಿರುವ ಮತ್ತು ನನಗೆ ಗೊತ್ತಿರುವ ಆಪ್ತರಿಗೆಲ್ಲಾ ಫೋನ್ ಮಾಡಿ ಹೇಳಿದೆ. ನಾನೂ ಕೂಡಾ ಜಯದೇವ ತನಕ ಹೋದೆ. ಅಷ್ಟೊತ್ತಿಗಾಗಲೇ ವಸು ಮೇಡಂ ಅವರನ್ನು ನೋಡಿಕೊಂಡು ಬಂದ ನನ್ನ ಸ್ನೇಹಿತರು ಮೇಡಂ ಕೈ ಕಟ್ಟಿದ್ದಾರೆ. ಕಣ್ಣು ಮುಚ್ಚಿದ್ದಾರೆ. ಬಾಯಿಯನ್ನು ಕೂಡ ಅದೇನೇನೋ ಹಾಕಿ ಮುಚ್ಚಿಬಿಟ್ಟಿದ್ದಾರೆ ಅಂದ್ರು. ಎದೆ ದಸಕ್ ಅಂದೊಯ್ತು. ಒಳಗೆ ಹೋಗಲು ಕಾಲು ನಡುಗೋಕೆ ಶುರು ಆಯಿತು. ಮೈ ಬೆವೆತು ನಮ್ಮಜ್ಜಿ ಸಾವಿನಿಂದ ಅತ್ತೂ ಅತ್ತೂ ಕಣ್ಣಲ್ಲಿದ್ದ ನೀರೆಲ್ಲಾ ಖಾಲಿ ಆಗಿದ್ರೂ, ಅದೆಲ್ಲಿತ್ತೋ ಏನೋ ನೋವು ಕಿತ್ಕೊಂಡು ಬಂತು. ಸುತ್ತ ಜನ ಇದ್ರು ಒಳಗೆ ಹೋಗಲು ಮನಸಾಗಲೇ ಇಲ್ಲ. ಬಂಧನದಲ್ಲಿರುವ ನಿಮ್ಮನ್ನು ಬಿಡಿಸಿಕೊಳ್ಳಲು ಆಗದಿದ್ರೆ ಬಂದ್ರೆ ಏನು ಬಿಟ್ರೆ ಏನು ಅಂತ ಮೈ ಮೇಲೆ ಅದೇನೋ ನುಗ್ಗಿದವನಂತೆ ಕಲಾಗ್ರಾಮದಲ್ಲಿ ನಡೀತಿದ್ದ ನನ್ನ ಭೂಮಿ ನಾಟಕವನ್ನು ನೋಡಿ ಮತ್ತೊಂದಷ್ಟು ಅತ್ತು ಸುಮ್ಮನಾದೆ. ರಾತ್ರಿ ಪೂರಾ ಅದೇನೋ ಕೆಟ್ಟಾ ಕೆಟ್ಟ ಕನಸು. ಮಾರನೇ ದಿನ ಹನ್ನೊಂದುವರೆ ಗಂಟೆ ಹೊತ್ತಿಗೆ ವಿಷಯ ಗೊತ್ತಾಯ್ತು. ನೀವು ಇಲ್ಲವಂತೆ ಅಂತ ಎನ್ ಮಾಡಲಿ ಕೊನೆ ಸಲ ನಿಮ್ಮನ್ನು ನೋಡಬೇಕು ಅನ್ನಿಸ್ತಿತ್ತು. ಆದ್ರೆ ಹಾಗೆ ನೋಡಿದ್ರೆ ಕೊನೆ ನೆನಪು ಕಳೆದ ಐದಾರು ವರ್ಷಗಳಿಂದ ನನ್ನೊಳಗೆ ಇಳಿಸಿಕೊಂಡು ಕಲಿಕೆ, ಗ್ರಹಿಕೆ, ಭಾವ, ನೀವು ತೋರಿದ ಕಾಳಜಿ ಇವುಗಳೆಲ್ಲಾ ಅಳಿಸಿ ಹೋಗಿ ಬಿಡುತ್ತೆ ಅನ್ನೋ ಭಯ ಮೇಡಂ. ನಿಮ್ಮ ಲಾಸ್ಟ್ ಜರ್ನಿಗೆ ವಿದಾಯ ಹೇಳಲು ಬರೋದು ಬೇಡ ಅಂತ ಗಟ್ಟಿ ಮನಸು ಮಾಡಿ ಬರಲಿಲ್ಲ ಮೇಡಂ. ವಸು ಮೇಡಂ ಸಾರಿ. ಮಳಲಿ ಸರ್, ಲಕ್ಷ್ಮೀಪತಿ ಸರ್, ರೂಪಮ್ಮ, ವೆಂಕಟೇಶ್ ಸರ್ ದಯವಿಟ್ಟು ಕ್ಷಮಿಸಿ. ಮಳಲಿ ಸರ್ ಅಮ್ಮನಿಗೂ ನನ್ನನ್ನು ಮನ್ನಿಸಲು ಹೇಳಿ ಪ್ಲೀಸ್. …………
 

‍ಲೇಖಕರು G

11 February, 2015

ನಿಮಗೆ ಇವೂ ಇಷ್ಟವಾಗಬಹುದು…

6 Comments

  1. ಮಾಲತಿ ಭಟ್

    ಓದಿ ಕಣ್ಣು ತೇವವಾಯ್ತ. ವಸು ಮೇಡಂ ಅಗಲಿಕೆಯನ್ನು ನೀವು ಸಹಿಸುವಂತಾಗಲಿ. ಅವರ ಚಿಂತನೆ ನಮ್ಮಲ್ಲೆರಿಗೂ ದಾರಿ ದೀಪವಾಗಲಿ

  2. Vidya Rao

    ವಸುಮಳಲಿಯವರನ್ನು ನಾನು ನೋಡಿದ್ದು ಇದೇ ಸಂದರ್ಭದಲ್ಲೇ. ಯಾವ ಉದ್ವೇಗವೂ ಇಲ್ಲದ, ಮುಗುಳ್ನಗೆ ತುಂಬಿದ ಶಾಂತ ಮುಖ ಅವರದ್ದು. ಆದರೆ ಅವರು ಆಡಿದ ಮಾತುಗಳು ಮಾತ್ರ ನೇರ ಹೃದಯದ ಆಳಕ್ಕೆ ಇಳಿದು ಗಟ್ಟಿಗೊಂಡುಬಿಟ್ಟಿದೆ. ಅವರ ಮಾತುಗಳಲ್ಲಿ ಜೀವನ ಪ್ರೀತಿಯಿತ್ತು. ಬದುಕನ್ನು ಸಾರ್ಥಕ್ಯಗೊಳಿಸುವತ್ತ ಬೇಕಾದ ಸಕಾರಾತ್ಮಕತೆಯಿತ್ತು. ತೀರ ಆಪ್ತವೆನಿಸುವ ಗೆಳತಿ ಮಾತನಾಡಿದಂತಿತ್ತು. ಒಂದು ಸುಂದರ ವಿವೇಕಯುತ ಚಿಂತನೆಯಿತ್ತು. ಇಂಥ ಸೂಕ್ಷ್ಮ ಹೃದಯವೊಂದು ನಮ್ಮೆಲ್ಲರ ನಡುವೆ ಇಂದಿಲ್ಲ ಎಂದರೆ ನೋವಾಗುತ್ತಿದೆ. ಈ ಲೇಖನ ಅವರಿಗೊಂದು ಗೌರವ. ಧನ್ಯವಾದಗಳು ಬೇಲೂರು ರಘುನಂದನ್ ಸರ್.

  3. ಮೋಹನ್ ಗೌಡ

    ನಿಜವಾಗಿಯೂ ತುಂಬಾ ಖೇಧದಿಂದ ಹೇಳುತ್ತಿದ್ದೇನೆ ಸರ್.. ಈ ಮೊದಲು ವಸು ಮಳಲಿ ಎಂಬ ಹೆಸರು ಕೇಳಿದ್ದೆ ಅಷ್ಟೇ. ಅದರೊಳಗೆ ಇಷ್ಟು ಅಂತರಾತ್ಮ ಇದೆಯಂತ ಈಗಲೇ ಗೊತ್ತಾಗುತ್ತಿದ್ದೆ. ಬಹುಶಃ ಇಂತಹ ಭಾವಜೀವಿಯನ್ನ ನಾನು ಪರಿಚಯಿಸಿಕೊಳ್ಳಲೆ ಇಲ್ಲ ಎಂಬ ನೋವು, ಹತಾಶೆ ಈಗ ಜಾಗೃತವಾಗುತ್ತಿದ್ದೆ.

  4. D.Ravivarma

    ಮೊನ್ನೆ ಮೇಡಂ ಶ್ರವಣಬೆಳಗೊಳದಲ್ಲಿ ಸಾಹಿತ್ಯ ಸಮ್ಮೇಳನ ನಡೀತಿತ್ತಲ್ಲಾ ಆಗ, ಎರಡನೇ ತಾರೀಖು ಲಕ್ಷ್ಮೀಪತಿ ಸರ್ ಫೋನ್ ಮಾಡಿದ್ರು. ಇನ್ನೂ ನೀವು ಇರಲ್ವಂತೆ. ಬನ್ನಿ ನೋಡ್ಕೊಂಡು ಹೋಗಿ ಅಂತ. ಅದಾದ ಸ್ವಲ್ಪ ಹೊತ್ತಿಗೆ ಮೇಷ್ಟ್ರು ಕೂಡ ಫೋನ್ ಮಾಡಿದ್ರು. ಅಮ್ಮ ಅಲ್ಲೇ ಇದ್ದಾಳೆ ರಘುನಂದನ್ ನೀನು ಜಯದೇವ ಆಸ್ಪತ್ರೆಗೆ ಬಾ ಅಂದ್ರು. ಆಮೇಲೆ ನಾನು ವೆಂಕಟೇಶ್ ಅವರಿಗೆ ಫೋನ್ ಮಾಡಿದೆ. ಹೌದು ರಘುನಂದನ್ ವಸು ಮೇಡಂ ತುಂಬಾ ಕ್ರಿಟಿಕಲ್ ಅಂದ್ರು. ವಸು ಮೇಡಂ ಅವರ ಬಗ್ಗೆ ಪ್ರೀತಿ ಗೌರವಗಳನ್ನು ಇಟ್ಟುಕೊಂಡಿರುವ ಮತ್ತು ನನಗೆ ಗೊತ್ತಿರುವ ಆಪ್ತರಿಗೆಲ್ಲಾ ಫೋನ್ ಮಾಡಿ ಹೇಳಿದೆ. ನಾನೂ ಕೂಡಾ ಜಯದೇವ ತನಕ ಹೋದೆ. ಅಷ್ಟೊತ್ತಿಗಾಗಲೇ ವಸು ಮೇಡಂ ಅವರನ್ನು ನೋಡಿಕೊಂಡು ಬಂದ ನನ್ನ ಸ್ನೇಹಿತರು ಮೇಡಂ ಕೈ ಕಟ್ಟಿದ್ದಾರೆ. ಕಣ್ಣು ಮುಚ್ಚಿದ್ದಾರೆ. ಬಾಯಿಯನ್ನು ಕೂಡ ಅದೇನೇನೋ ಹಾಕಿ ಮುಚ್ಚಿಬಿಟ್ಟಿದ್ದಾರೆ ಅಂದ್ರು. ಎದೆ ದಸಕ್ ಅಂದೊಯ್ತು. ಒಳಗೆ ಹೋಗಲು ಕಾಲು ನಡುಗೋಕೆ ಶುರು ಆಯಿತು. ಮೈ ಬೆವೆತು ನಮ್ಮಜ್ಜಿ ಸಾವಿನಿಂದ ಅತ್ತೂ ಅತ್ತೂ ಕಣ್ಣಲ್ಲಿದ್ದ ನೀರೆಲ್ಲಾ ಖಾಲಿ ಆಗಿದ್ರೂ, ಅದೆಲ್ಲಿತ್ತೋ ಏನೋ ನೋವು ಕಿತ್ಕೊಂಡು ಬಂತು. ಸುತ್ತ ಜನ ಇದ್ರು ಒಳಗೆ ಹೋಗಲು ಮನಸಾಗಲೇ ಇಲ್ಲ. ಬಂಧನದಲ್ಲಿರುವ ನಿಮ್ಮನ್ನು ಬಿಡಿಸಿಕೊಳ್ಳಲು ಆಗದಿದ್ರೆ ಬಂದ್ರೆ ಏನು ಬಿಟ್ರೆ ಏನು ಅಂತ ಮೈ ಮೇಲೆ ಅದೇನೋ ನುಗ್ಗಿದವನಂತೆ ಕಲಾಗ್ರಾಮದಲ್ಲಿ ನಡೀತಿದ್ದ ನನ್ನ ಭೂಮಿ ನಾಟಕವನ್ನು ನೋಡಿ ಮತ್ತೊಂದಷ್ಟು ಅತ್ತು ಸುಮ್ಮನಾದೆ. ರಾತ್ರಿ ಪೂರಾ ಅದೇನೋ ಕೆಟ್ಟಾ ಕೆಟ್ಟ ಕನಸು. ಮಾರನೇ ದಿನ ಹನ್ನೊಂದುವರೆ ಗಂಟೆ ಹೊತ್ತಿಗೆ ವಿಷಯ ಗೊತ್ತಾಯ್ತು. ನೀವು ಇಲ್ಲವಂತೆ ಅಂತ ಎನ್ ಮಾಡಲಿ ಕೊನೆ ಸಲ ನಿಮ್ಮನ್ನು ನೋಡಬೇಕು ಅನ್ನಿಸ್ತಿತ್ತು. ಆದ್ರೆ ಹಾಗೆ ನೋಡಿದ್ರೆ ಕೊನೆ ನೆನಪು ಕಳೆದ ಐದಾರು ವರ್ಷಗಳಿಂದ ನನ್ನೊಳಗೆ ಇಳಿಸಿಕೊಂಡು ಕಲಿಕೆ, ಗ್ರಹಿಕೆ, ಭಾವ, ನೀವು ತೋರಿದ ಕಾಳಜಿ ಇವುಗಳೆಲ್ಲಾ ಅಳಿಸಿ ಹೋಗಿ ಬಿಡುತ್ತೆ ಅನ್ನೋ ಭಯ ಮೇಡಂ. ನಿಮ್ಮ ಲಾಸ್ಟ್ ಜರ್ನಿಗೆ ವಿದಾಯ ಹೇಳಲು ಬರೋದು ಬೇಡ ಅಂತ ಗಟ್ಟಿ ಮನಸು ಮಾಡಿ ಬರಲಿಲ್ಲ ಮೇಡಂ. ವಸು ಮೇಡಂ ಸಾರಿ. ಮಳಲಿ ಸರ್, ಲಕ್ಷ್ಮೀಪತಿ ಸರ್, ರೂಪಮ್ಮ, ವೆಂಕಟೇಶ್ ಸರ್ ದಯವಿಟ್ಟು ಕ್ಷಮಿಸಿ. ಮಳಲಿ ಸರ್ ಅಮ್ಮನಿಗೂ ನನ್ನನ್ನು ಮನ್ನಿಸಲು ಹೇಳಿ ಪ್ಲೀಸ್. …………HEART TOUCHING…kannu oddeyaaytu..kutalle attu bitte…vasu madam bagge odidde ..nodiralilla…nimma hrudayadaalada baraha nannannukhsanakalla mounavaagisibittitu vasu mmadam gondu namana…

  5. savitri.V.Hatti

    ನನಗೆ ವಸು ಮೇಡಮ್ ಬಗ್ಗೆ ಹೆಚ್ಚೇನೂ ಗೊತ್ತಿರಲಿಲ್ಲ. ಆದರೆ ಅವರ ಕಳ್ಳುಬಳ್ಳಿ ಓದಿ ಓದಿ ನನಗೆ ಅವರು ನನ್ನದೇ ಒಂದು ಕಳ್ಳು ಆಗಿ ಬಿಟ್ಟಂತಾಗಿತ್ತು… ಪ್ರತೀ ಸಲ ಆ ಅಂಕಣವನ್ನು ಓದುವಾಗಲೂ “ನನ್ನ ಮುದ್ದಿನ ಅಕ್ಕ” ಅಂತ ಮನಸ್ಸಿನಲ್ಲೇ ಅವರಿಗೆ ವಂದನೆ ಮತ್ತು ಪ್ರೀತಿಯ ಸೆಲೆಯನ್ನು ಹರಿಸುತ್ತಿದ್ದೆ. ಅವರು ಈಗಲೂ ಬದುಕಿದ್ದಾರೆ. ನನ್ನ ಮನದಲ್ಲಿ ಅಷ್ಟೇ ಅಲ್ಲ. ಅವರನ್ನು ಗೌರವಿಸಿದ ಎಲ್ಲಾ ಓದುಗರ, ಸ್ನೇಹಿತರ, ಬಂಧುಗಳ ಮನದಲ್ಲಿ…..

  6. Anonymous

    ರಘುನಂದನ,
    ನಿಮ್ಮ ಹೃದಯದ ಮಾತುಗಳು ಕೇಳಿ,ಕಣ್ಣ ಕೊನೆ ಮತ್ತೂ ಮತ್ತೂ ಹನಿಯಾಗುವುದು..
    Neela

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading