ಪೆರುಮಾಳ್ ಮುರುಗನ್ ಬರೆದ ’ಒನ್ ಪಾರ್ಟ್ ವುಮನ್’

ಪೆರುಮಳ್ ಮುರುಗನ್ ಅವರ ತಮಿಳು ಕಾದಂಬರಿ`ಮುಧೋರುಬಾಗನ್’ಅಥವಾ ’ಅರ್ಧನಾರೀಶ್ವರ’ – `ಒನ್ ಪಾರ್ಟ ವುಮನ್’

ಉದಯಕುಮಾರ ಹಬ್ಬು


ಮೊನ್ನೆ ಜನವರಿ 16ರಿಂದ 18ರತನಕ ಚೆನ್ನೈನಲ್ಲಿ ಹಿಂದು ಪತ್ರಿಕೆಯವರು ಲಿಟ್ ಫೊರ್ ಲೈಫ್ ಸಾಹಿತ್ಯ ಸಮ್ಮೇಳನವನ್ನು ಏರ್ಪಡಿಸಿದ್ದರು. ಅದರಲ್ಲಿ ಒಂದು ಸೆಶನ್ `ನೆರೇಟಿವ್ ಆಫ್ ವಯೊಲೆನ್ಸ್’ ಆಗಿತ್ತು.ಅಲ್ಲಿ ತಮೀಳು ಕಾದಂಬರಿಕಾರ ಪೆರುಮಾಳ ಮುರುಗನ್ ಅವರ ಕಾದಂಬರಿ ಚರ್ಚೆಗೆ ಬಂತು. ಅದಕ್ಕೆ ಕಾರಣವಿತ್ತು ಮೂಲಭೂತವಾದಿಗಳಿಂದ ಪೆರುಮಾಳ್ ರ ಕಾದಂಬರಿ ದಾಳಿಗೊಳಗಾಗಿತ್ತು. ಮೂಲಭೂತವಾದಿಗಳು ಕಾದಂಬರಿಕಾರರಿಂದ ಬೇಷರತ್ತು ತಪ್ಪೊಪ್ಪಿಗೆಯನ್ನು ಬರೆಸಿಕೊಂಡಿದ್ದರು. ಕಾದಂಬರಿಕಾರರು ಅದರ ಪ್ರತಿಗಳನ್ನು ಮಾರುಕಟ್ಟೆಯಿಂದ ಹಿಂತೆಗೆದುಕೊಳ್ಳಬೇಕಾಯಿತು. “ನಾನು ಲೇಖಕನಾಗಿ ಸತ್ತೆ. ಇನ್ನು ಮುಂದೆ ಬರೆಯುವುದಿಲ್ಲ’ ಎಂದು ಹೇಳಿಕೆ ನೀಡಿದರು. ಮತ್ತು ತಲೆಮರೆಸಿಕೊಂಡರು. ಈ ಬೇಷರತ್ತು ಪತ್ರ ಬರೆಯುವಂತೆ ಕಾದಂಬರಿಕಾರರಿಗೆ ಅವರ ಹೆಂಡತಿಯ ಮೂಲಕ ಒತ್ತಡ ತರಲಾಯಿತು. ಮುಂದಿನ ಅಧಿವೇಶನ ಪುಸ್ತಕವನ್ನು ಓದುವವ ಕಾರ್ಯಕ್ರಮವಿತ್ತು. ಪ್ರಶ್ನೋತ್ತರ ವೇಳೆಯಲ್ಲಿ ಇನ್ನೊಬ್ಬ ಜನಪ್ರಿಯ ತಮಿಳು ಕಾದಂಬರಿಕಾರರು ಪೆರುಮಾಳರ ಮೇಲೆ ಉರಿಕಾರಿದರು. “ಒಂದು ಪ್ರತ್ಯೇಕ ಸಮುದಾಯದ ಹೆಣ್ಣಿನ ವಿರುದ್ಧ ಕಾದಂಬರಿ ಬರೆಯುವುದು ಅಭಿವ್ಯಕ್ತಿ ಸ್ವಾತಂತ್ರ್ಯವಲ್ಲ. ಸತ್ಯಸಂಗತಿಯ ಆಧಾರವಿಲ್ಲದೆ ಕಾದಂಬರಿ ಬರೆಯಬಾರದಿತ್ತು. ಕಾದಂಬರಿ ಬರೆಯುವ ಮೊದಲು ಆದನ್ನು ಬೆಂಬಲಿಸುವ ಸಾಕ್ಷ್ಯಾಧಾರಗಳು ಇರುತ್ತಿದ್ದರೆ ಅವರ ಕಾದಂಬರಿಯನ್ನು ಸ್ವೀಕರಿಸಬಹುದಿತ್ತು. ಪೆರುಮಾಳರ ಸಾಹಿತ್ಯ ಕೃತಿಗಳು ಕಸ ಎಂದರು. ಬಾಲು ಎಂಬ ಲೇಖಕರು ಗಾಯತ್ರಿ ಎಂಬ ತಮಿಳು ಕಾದಂಬರಿಕಾರರನ್ನು ತರಾಟೆಗೆ ತೆಗೆದುಕೊಂಡರು. `ನಿಮ್ಮ ಕೃತಿಗಳ ಗುಣಮಟ್ಟದ ಬಗ್ಗೆ ನೀವು ಅವುಗಳು ಗಟ್ಟಿ ಎಂದು ಹೇಳಬಲ್ಲಿರಾ?’ ಈ ಪ್ರಶ್ನೆಗೆ ಗಾಯತ್ರಿ ಉತ್ತರಿಸಲಿಲ್ಲ. ಪೆರುಮಾಳರು ಪ್ರಚಾರಕ್ಕಾಗಿ ಈ ಗಿಮಿಕ್ ಮಾಡಿದರೆಂದು ಆರೋಪಿಸಲಾಯಿತು. ನಿಷೇಧಿಸಲ್ಪಟ್ಟ ಕೃತಿ ಪೆರುಮಾಳರ ನನಗೆ ಲಭ್ಯವಾಯಿತು.

ನಿಜಕ್ಕೂ ಪೆರುಮಾಳರ ಕೃತಿ ಒಂದು ಉತ್ಕೃಷ್ಟ ಕಾದಂಬರಿ ಎಂದು ಮೊದಲ ಓದಿಗೆ ನಮ್ಮ ಅನುಭವಕ್ಕೆ ಬರುತ್ತದೆ. ತಮಿಳುನಾಡಿನ ಕಡು ಹಳ್ಳಿಯಾದ ತಿರುಚೆಂಗೊಡೆಯ ರೈತಾಭಿ ಸಮುದಾಯವಾದ ಗೌಂಡರ ಎಂಬ ಸಮಾಜದ ನಂಬಿಕೆಗಳು, ಮೂಢನಂಬಿಕೆಗಳು, ಸಮಸ್ಯೆಗಳು, ಅದಕ್ಕೆ ಹಳ್ಳಿಯವರೆ ಕಂಡುಕೊಂಡ ಕಂಡುಕೊಳ್ಳುವ ಪರಿಹಾರಗಳು, ಇವು ಈ ಕಾದಂಬರಿಯ ಕಥಾಹಂದರದ ತಳಪಾಯವಾಗಿದೆ. ಅಲ್ಲಿ ಗೌಂಡರ ಸಮುದಾಯವು ಇತರ ಸಮುದಾಯದೊಂದಿಗಿರುವ ಸಂಬಂಧಗಳು, ಸಂಘರ್ಷಗಳು, ಸಮಸ್ಯೆ ಎದುರಾದಾಗ ಈ ಸಮುದಾಯ ಕೈಕೊಳ್ಳುವ ಪರಿಕ್ರಮಗಳು ಯಾವ ಹಳ್ಳಿಯಲ್ಲಿಯೂ ಕಾಣಬಹುದಾದ ವಿದ್ಯಮಾನಗಳೇ ಆಗಿವೆ. ಈ ಕಾದಂಬರಿಯು ಒಂದು ಕುಟುಂಬ ಎದುರಿಸುತ್ತಿರುವ ಸಾರ್ವತ್ರಿವಾದ ಸಮಸ್ಯೆಯನ್ನು ಎತ್ತಿಕೊಂಡು ಆ ಸಮಸ್ಯೆಗೆ ಹಳ್ಳಿಯ ಜನರು ಪ್ರತಿಕ್ರಿಯಿಸುವ ಬಗೆ, ಜನರ ಕಟುಪ್ರತಿಕ್ರಿಯೆಯಿಂದ ನಲುಗಿದ ಕುಟುಂಬ, ಎಲ್ಲ ಇದ್ದೂ ಯವ ಸುಖವೂ ಇಲ್ಲದ ಸಂತಾನ ಭಾಗ್ಯದಿಂದ ವಂಚಿತರಾದ ಪ್ರೀತಿಪೂರ್ಣ ದಂಪತಿಗಳು, ಅವರ ಹೆತ್ತವರು ಎದುರಿಸುವ ಸಮಸ್ಯೆಗಳು ಇವೆಲ್ಲವನ್ನು ಕಾದಂಬರಿಕಾರರು ತುಂಬ ಕಲಾತ್ಮಕವಾಗಿ ಮತ್ತು ಭಾವಗೀತೆಯ ಶೈಲಿಯಲ್ಲಿ ಅನಾವರಣಗೊಳಿದ್ದಾರೆ. ಹಳ್ಳಿಯ ಜನರಿಗೆ ಮದುವೆಯಾದ ದಂಪತಿಗಳು ಹತ್ತು ತಿಂಗಳೊಳಗಾಗಿ ಮಗುವನ್ನು ಹೆತ್ತು ತೋರಿಸಬೇಕು. ಇಲ್ಲದಿದ್ದರೆ ಆ ಹೆಣ್ಣು ಬಂಜೆ ಎಂಬ ಅಪವಾದವನ್ನು ಹೊರುತ್ತಾಳೆ. ಗಂಡಸು ನಪುಂಸಕ ಎಂಬ ಬಿರುದಿಗೆ ಅವಮಾನಕ್ಕೆ ಪಾತ್ರನಾಗುತ್ತಾನೆ.

ಕಾಲಿ ಮತ್ತು ಪೊನ್ನ ಹೊಸತಾಗಿ ಮದುವೆಯಾಗಿ ದಂಪತಿಗಳು. ಅವರಿಬ್ಬರ ಪ್ರೀತಿಮತ್ತು ಶೃಂಗಾರದ ಕ್ಷಣಗಳನ್ನು ಸಾಕಷ್ಟು ಸುದೀರ್ಘವಾಗಿ ಕಾವ್ಯಾತ್ಮಕವಾಗಿ ಚಿತ್ರಿಸಲಾಗಿದೆ. ಮದುವೆಯಾಗಿ ಹತ್ತು ವರ್ಷ ಕಳೆದರೂ ಅವರಿಗೆ ಮಕ್ಕಳಾಗುವುದಿಲ್ಲ. ಇವರ ಬಂಜೆತನವೆ ಹಳ್ಳಿಯ ಸಮಸ್ತರ ವಸ್ತುವಿಷಯವಾಗುತ್ತದೆ. ಪೊನ್ನು ಎಷ್ಟೊ ಧಾಮರ್ಿಕ ಕಾರ್ಯಗಳಿಗೆ ಬಂಜೆ ಎಂಬ ಕಾರಣಕ್ಕೆ ನಿಷೇಧಿಸಲ್ಪಡುತ್ತಾಳೆ. ಜನರ ಚುಚ್ಚು ಮಾತುಗಳು ಗಂಡ ಹೆಂಡತಿ ಇಬ್ಬರಿಗೂ ಹಿಂಸೆಗೊಳಪಡಿಸುತ್ತವೆ. ಗಂಡನ ತಾಯಿಗೂ ಮತ್ತು ಹೆಣ್ಣಿನ ತಂದೆ ತಾಯಿಗೂ ಇವರಿಗೆ ಮಕ್ಕಳಿಲ್ಲದಿರುವುದೆ ಒಂದು ದೊಡ್ಡ ತಲೆನೋವಾಗುತ್ತದೆ. ಮುಂದೆ ವಂಶಬೆಳೆಯುವುದು ಹೇಗೆ? ಆಸ್ತಿಗೆ ವಾರಸುದಾರರು ಯಾರಾಗಬೇಕು? ಈ ಮುಂತಾದ ಮದುವೆಯ ಉದ್ದೇಶಗಳು ನಿರರ್ಥಕವಾದ್ದನ್ನು, ಇದನ್ನು ನಿವಾರಿಸುವ ಬಗೆಯೊಂದು ಹರಿಯದೆ ಕಂಗಾಲಾಗುತ್ತಾರೆ. ಪೊನ್ನು ಸಮಾಜದ ಭತ್ಸ್ರ್ಯನೆಯನ್ನು, ಕಟುಮಾತುಗಳನ್ನು ದಿಟ್ಟಳಾಗಿಯೆ ಪ್ರತಿಕ್ರಿಯಿಸಿದರೂ ಒಳಗೊಳಗೆ ಬೆಂದು, ನೊಂದು ಕರಕಲಾಗುತ್ತಾಳೆ. ಮನೆಯವರು ಕಾಲಿಗೆ ಬೇರೆ ಮದುವೆ ಮಾಡಿಸುವ ಆತುರ ತೋರಿಸುತ್ತಾರೆ. ಅಲ್ಲಿ ಕಾದಂಬರಿಕಾರರು ಆ ಹೆಣ್ಣಿನ ಮಾನಸಿಕ ತಲ್ಲಣಗಳನ್ನು, ವೇದನೆಯನ್ನು, ತುಂಬ ಸಮರ್ಥವಾಗಿ ಹಿಡಿದಿಟ್ಟಿದ್ದಾರೆ. ಕಾಲಿಗೆ ಪೊನ್ನುಳ ಮೇಲೆ ಅಪಾರ ಪ್ರೀತಿ. ಮಕ್ಕಳಿಲ್ಲದಿದ್ದರೂ ಚಿಂತೆಯಿಲ್ಲ. ಮಕ್ಕಳಿದ್ದವರು ಎಷ್ಟು ಸುಖವಾಗಿದ್ದಾರೆ? ಕೊನೆಕಾಲಕ್ಕೆ ಅಪ್ಪ ಅಮ್ಮನ ಶವಸಂಸ್ಕಾರಕ್ಕೆ ಬಾರದ ಮಕ್ಕಳೂ ಇರುತ್ತಾರೆ ಎಂಬ ಸಮಾಧಾನ ಮಾಡಿಕೊಳ್ಳುತ್ತಾರೆ.
ಆದರೆ ಮಕ್ಕಳನ್ನು ಪಡೆಯದೆ ತಮಗೆ ಬೇರೆ ಗತಿಯಿಲ್ಲ ಎನ್ನುವ ಸ್ಥಿತಿಗೆ ಸಮಾಜ ಅವರನ್ನು ತಳ್ಳುತ್ತದೆ. ಸಮಾಜದವರಿಂದ ಬೇರೆ, ಬೇರೆ ಸಂದರ್ಭದಲ್ಲಿ ದಂಪತಿಗಳು, ಅದರಲ್ಲಿಯೂ ಆ ಹೆಣ್ಣಿನ ಮೇಲೆ ನಡೆಯವ ಮಾನಸಿಕ ಕ್ರೌರ್ಯ ಮತ್ತು ಹಿಂಸೆ ಮನಸ್ಸಿಗೆ ಮಾತ್ರ ಅದರಿಂದ ಆಗುವ ಆಘಾತ ಇವೆಲ್ಲವೂ ತುಂಬ ಪರಿಣಾಮಕಾರಿಯಾಗಿಯೆ ಚಿತ್ರಿಸಲಾಗಿದೆ. ಮನುಷ್ಯ ತನ್ನದಲ್ಲದ ವಿಷಯಗಳಿಗೆ ತಲೆ ಹಾಕಿ ಇತರರ ಬದುಕನ್ನು ಹೀನಾಯವಾಗಿ ಮಾಡುವ ಒಬ್ಬ ಕ್ರೂರ ಜಂತು. ಇದು ಈ ಕಾದಂಬರಿಯಲ್ಲಿ ಸಾಬೀತಾಗುತ್ತದೆ. ಗಂಡನ ಮದುವೆಯನ್ನು ಬೇರೊಂದು ಹೆಣ್ಣಿನೊಟ್ಟಿಗೆ ಮಾಡುವ ವಿಷಯವು ಪೊನ್ನುವಿನ ಗಮನಕ್ಕೆ ಬಂದಾಗ ಅವಳು ಪಡುವ ಸಂಕಟ ಮತ್ತು ವೇದನೆ ಹೃದಯಂಗಮಯವಾಗಿ ಚಿತ್ರಿಸಲಾಗಿದೆ. ಹಲವಾರು ದೇವರುಗಳಿಗೆ ಹರಕೆ ಹೊರುತ್ತಾರೆ. ಯಾವ ಹರಕೆಯೂ ಈ ದಂಪತಿಗಳ ಆಸೆಯನ್ನು ಈಡೇರಿಸುವುದಿಲ್ಲ. ಕಾದಂಬರಿಕಾರರ ವೈಚಾರಿಕ ನಿಲುವು ಕಾದಂಬರಿಯುದ್ದಕ್ಕೂ ಕೆಲಸ ಮಾಡಿದೆ. ನಮ್ಮ ಸಮಾಜವು ವಿಧವೆಗೆ ಮತ್ತು ಬಂಜೆಗೆ ನೀಡುವ ಸ್ಥಾನಮಾನ ಎಷ್ಟೊಂದು ನಿಕೃಷ್ಟವಾದದ್ದು ಎಂಬುದರ ಸಾಕ್ಷಿಸಮೇತ ಚಿತ್ರಕೊಡುತ್ತಾರೆ. ಉದಾಹರಣೆಗಾಗಿ ಕಾಲಿಯ ತಂದೆ ಸತ್ತಾಗ ಕಾಲಿ ತುಂಬ ಚಿಕ್ಕ ಮಗುವಾಗಿದ್ದ. ಆಗ ಕಾಲಿಯ ತಾಯಿ ಕೃಷಿಕೆಲಸ ಮಾಡುತ್ತಾಳೆ. ಆಗ ಜನರು ವಿಧವೆ ಕೃಷಿ ಮಾಡಿದರೆ ಆ ಗದ್ದೆ ಸುಟ್ಟು ಕರಕಲಾಗುತ್ತದೆ ಎಂದು ಛೀಮಾರಿ ಹಾಕುತ್ತಾರೆ. ಆದರೆ ಈ ಜನರ ಮಾತುಗಳಿಗೆ ಕ್ಯಾರೆ ಎನ್ನದೆ ವಿಧವೆ ಗದ್ದೆಯಲ್ಲಿ ಕೃಷಿಕೆಲಸ ಮಾಡುತ್ತಾಳೆ. ಆಗ ಗದ್ದೆಯಲ್ಲಿ ಎಂದಿಗಿಂತ ಹೆಚ್ಚು ಹುಲುಸಾಗಿ ಭೂತಾಯಿ ಧಾನ್ಯವನ್ನು ಒದಗಿಸುತ್ತಾಳೆ.
ಈ ಕಾದಂಬರಿಯಲ್ಲಿ ಸ್ವಾತಂತ್ರ್ಯಪೂರ್ವ ಭಾರತದ ಹಳ್ಳಿಚಿತ್ರಣದ ಹಿನ್ನೆಲೆಯನ್ನು ತರಲಾಗಿದೆ. ತಮ್ಮ ವಂಶಕ್ಕೆ ಸಂತಾನವಾಗದಿರಲು ಬ್ರಿಟಿಷ್ ಅಧಿಕಾರಿಗೆ ತಮ್ಮ ಹಿರಿಯನೊಬ್ಬ ಮಾಡಿದ ಮೋಸವೆ ಕಾರಣ ಎಂದು ನಂಬುತ್ತಾರೆ. ಬ್ರಿಟಿಷ್ ಅಧಿಕಾರಿಯ ಚೇಷ್ಟೆ ಮತ್ತು ಕ್ರೌರ್ಯ ತುಂಬ ಕಟುವಾಗಿ ಚಿತ್ರಿಸಲಾಗಿದೆ. ವಸಾಹತುಶಾಹಿ ಆಡಳಿತ ಮಾಡುವ ಎಲ್ಲ ದೌರ್ಜನ್ಯಗಳಿಗೆ ಮುಗ್ಧ ಹಳ್ಳಿಗರು ಮೂಕಬಲಿಪಶುವಾಗುತ್ತಾರೆ. ಯಾರದೋ ಶಾಪವೆ ಇದಕ್ಕೆ ಕಾರಣ ಎಂದೆಲ್ಲ ತಿಳಿಯುತ್ತಾರೆ. ಶಾಪಪರಿಹಾರಕ್ಕೆ ಆತುರ ತೋರಿಸುತ್ತಾರೆ. ಈ ಮಕ್ಕಳಿಲ್ಲದ ಮತ್ತು ಮಕ್ಕಳಾಗದ ಸಮಸ್ಯೆಗೆ ಹಳ್ಳಿಯವರು ಕಂಡುಕೊಂಡ ಪರಿಹಾರವೆ ಈ ಕಾದಂಬರಿಯ ಕೇಂದ್ರಬಿಂಧುವಾಗಿದೆ. ಧರ್ಮದ ಮುಖವಾಡ ತೊಟ್ಟ ವೈಜ್ಞಾನಿಕ ಪರಿಹಾರ ಒಂದು ತುಂಬ ವಿಶೇಷವಾದ ಅರ್ಥ ಮತ್ತು ಆಯಾಮವನ್ನು ಹೊಂದಿರುವ ಪರಿಹಾರ. ದಂಪತಿಗಳ ಬದುಕೆ ಹಳಿತಪ್ಪಿದ ರೈಲ್ವೆಯಂತೆ ಮಾಡಿಬಿಡುವ ಪರಿಹಾರ. ಈ ಭಾಗದಲ್ಲಿ ಆ ಧಾಮರ್ಿಕ ಪ್ರಕ್ರಿಯೆಯು ದಂಪತಿಗಳ ನಡುವೆ ತರಬಹುದಾದ ಬಿರುಕು ಮತ್ತು ಬಿರುಸಿನ ಸಂಘರ್ಷವನ್ನು ಕಾದಂಬರಿಕಾರ ಮನೋಜ್ಞವಾಗಿ ಚಿತ್ರಿಸಿದ್ದಾರೆ.
ಆ ಹಳ್ಳಿಯಲ್ಲಿ ಪ್ರತಿ ವರ್ಷ ರಥೋತ್ಸವವು 14ದಿನಗಳವರೆಗೆ ವಿಜ್ರಂಬಣೆಯಿಂದ ನಡೆಯುತ್ತದೆ. ಇದರ ಪೂರ್ವತಯಾರಿಯು ಮೂರು ತಿಂಗಳಿನಿಂದಲೂ ನಡೆದುಕೊಂಡು ಬರುತ್ತದೆ. 14ನೆ ದಿನ ಮತ್ತು ಹದಿನೈದನೆ ದಿನ ಜನರು ದೇವತೆಗಳ ದರ್ಶನವನ್ನು ಪಡೆಯಲು ನೆರೆದಿರುತ್ತಾರೆ. ಉತ್ಸವದ ಕೊನೆಯಲ್ಲಿ ಎಲ್ಲ ನೈತಿಕ ನಿಯಮಗಳು ಸಡಿಲುಗೊಳ್ಳುತ್ತವೆ. ಸಮ್ಮತಿಯಿದ್ದ ಗಂಡು ಹೆಣ್ಣುಗಳು ಕಾಮಸುಖವನ್ನು ಪಡೆಯಬಹುದಾಗಿದೆ. ಸಣ್ಣ ಓಣಿಗಳಲ್ಲಿ, ಹಳ್ಳಿಯ ಸುತ್ತಲಿನ ಗದ್ದೆಗಳಲ್ಲಿ, ಬಂಡೆಗಲ್ಲುಗಳ ಸಮತಟ್ಟು ಸ್ಥಳಗಳಲ್ಲಿ, ಬಯಲು ಪ್ರದೇಶಗಳಲ್ಲಿ ಬತ್ತಲೆ ಗಂಡುಹೆಣ್ಣುಗಳು ಮುಕ್ತಕಾಮದಲ್ಲಿ ನಿರತರಾಗಿರುವುದನ್ನು ಕಾಣಬಹುದಾಗಿತ್ತು. ಎಲ್ಲರ ಮುಖಗಳಲ್ಲಿ ಕತ್ತಲೆಯು ಒಂದು ಮುಖವಾಡವನ್ನು ಹೊದಿಸುತ್ತದೆ. ಈ ಹಬ್ಬಕ್ಕೆ ಯಾರೂ ಮದುವೆಯಾಗದ ಹುಡುಗಿಯರನ್ನು ಕಳುಹಿಸುತ್ತಿರಲಿಲ್ಲ. ಆ ದಿನ ಎಲ್ಲರೂ ದೇವತೆಗಳ ಸ್ವರೂಪಿಗಳು ಎಂದು ತಿಳಿಯಲಾಗುತ್ತದೆ. ಮಕ್ಕಳಾಗದವರು, ಮಕ್ಕಳಿಲ್ಲದ ಹೆಣ್ಣು ಮಕ್ಕಳು ಈ ಸಾಕ್ಷಾತ್ ಅಂದಿನ ದೇವತಾಸ್ವರೂಪಿಗಳಾದ ದೇವರಿಂದ ಯುವಕರಿಂದ ಗರ್ಭದಾನ ಪಡೆಯುತ್ತಾರೆ. ಇಲ್ಲಿ ಯುವಕರು ಕಾಮದ ಪ್ರಥಮ ಪಾಠವನ್ನು ಕಲಿಯುತ್ತಾರೆ. ಕಾಮದ ರುಚಿ ನೋಡುತ್ತಾರೆ.
ಪೊನ್ನುವಿನ ತಂದೆ ತಾಯಿ ಮತ್ತು ಕಾಲಿಯ ತಾಯಿ ಈ ಉತ್ಸವಕ್ಕೆ ಅವಳನ್ನು ಕಳುಹಿಸಿ ಮಕ್ಕಳನ್ನು ಪಡೆಯುವಂತೆ ಪ್ರೇರೇಪಿಸುತ್ತಾರೆ. ಇದುವೆ ಈ ಕಾದಂಬರಿಯ ಕ್ಲೈಮ್ಯಾಕ್ಸ್ ಆಗಿದೆ. ಆಗ ಕಾಲಿಯ ಮನಸ್ಸಿನಲ್ಲಿ ಆಗುವ ಸಂಘರ್ಷಗಳು, ತೊಳಲಾಟಗಳು, ಮಾನಸಿಕ ವೇದನೆಯನ್ನು ಕಾದಂಬರಿಕಾರ ತುಂಬ ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ. ಮಕ್ಕಳಿಲ್ಲದಿದ್ದರೂ ಚಿಂತೆಯಿಲ್ಲ. ತನ್ನ ಹೆಂಡತಿಯು ಬೇರೆ ಇನ್ಯಾವನೋ ಯುವಕನ ತೋಳಿನಲ್ಲಿ ಬಂಧಿಯಾಗುವದು ಕಾಲಿಗೆ ಅಸಹನೀಯ ವೇದನೆಯಾಗಿದೆ. ಆದರೆ ಪೊನ್ನುಗೆ ಮಕ್ಕಳನ್ನು ಹೇಗಾದರೂ ಮಾಡಿ ಪಡೆಯಬೇಕೆಂಬ ಅದಮ್ಯ ಇಚ್ಛೆಯು ಅವಳನ್ನು ದೇವರಿಂದ ಮಕ್ಕಳನ್ನು ಪಡೆಯುವ ಸಾಹಸಕ್ಕೆ ಮುನ್ನುಗ್ಗುವಂತೆ ಮಾಡುತ್ತದೆ. ಮತ್ತು ಆ ಹಳ್ಳಿಯ ಜನರ ಪ್ರಕಾರ ಅದು ಪಾಪವೂ ಅಲ್ಲ; ಬದಲಿಗೆ ಒಂದು ಪುಣ್ಯದ ಕೆಲಸ. ಅವಳನ್ನು ಆ ದೇವರ ಆಟದ ರಂಗಸ್ಥಳಕ್ಕೆ ಬಿಟ್ಟು ಎಲ್ಲರೂ ತೆರಳುತ್ತಾರೆ. ಅಲ್ಲಿ ಪೊನ್ನಳ ಬೆರಗಿನ ರೋಮಾಂಚಕಾರಿ ಅನುಭವಗಳನ್ನು ಕೆಲವೆ ಶಬ್ದಗಳಲ್ಲಿ ವಿವರಿಸಲಾಗಿದೆ. ಅಂತಿಮವಾಗಿ ಕಾಲಿಯು ಆ ದಿನ ಕಂಠಪೂತರ್ಿ ಶರಾಬನ್ನು ಕುಡಿಯುತ್ತಾನೆ ಮತ್ತು ಅವಳನ್ನು ನೆನಪಿಸಿಕೊಂಡು `ಸೂಳೆ’ ಎಂದು ಹಲವಾರು ಸಾರಿ ಉಗುಳುತ್ತಾನೆ.
ಲೇಖಕರು ಯಾವುದೆ ಸಮಾಜವನ್ನು ಹೆಸರಿಸದೆ ಕಾದಂಬರಿಯನ್ನು ವಿವಾದಮುಕ್ತಗೊಳಿಸಬಹುದಿತ್ತು ಆಗಲೂ ಕಾದಂಬರಿ ಪರಿಣಾಮಕಾರಿಯಾಗಿರುತ್ತಿತ್ತು, ಎಂದು ನನ್ನ ಭಾವನೆಯಾಗಿದೆ.
ನನಗೆ ಶ್ರೀ ಈಶ್ವರ ಸಿಂಹ ಬೈಸ್ ಬರೆದ ಶ್ರೀ ಶಿಮುಂಜೆ ಪರಾರಿ ಎಸ್ ಎಂ ಶೆಟ್ಟರು ಅನುವಾದಿಸಿದ `ನಿಯೋಗ’ ಎಂಬ ಪುಸ್ತಕ ಸಿಕ್ಕಿತು. ಅದರಲ್ಲಿ ಋಗ್ವೇದದಲ್ಲಿ ನಿಯೋಗದ ಕುರಿತಾಗಿ ಬರೆದ ಕೆಲವು ಶ್ಲೋಕಗಳನ್ನು ವಿವರಿಸಿ ಬರೆಯಲಾಗಿದೆ. ಅದು ಹೀಗಿದೆ:`ಋಗ್ವೇದಕ್ಕನುಸಾರವಾಗಿ ದತ್ತಪುತ್ರನೆಂದೂ ಪರಿವಾರದ ಅಧಿಕಾರಿಯಾಗಲು ಸಾಧ್ಯವಿಲ್ಲ. ಆದರೆ ನಿಯೋಗದಿಂದ ಜನ್ಮ ತಳೆದ ಪುತ್ರನಲ್ಲಿ ಹೆಚ್ಚು ಕಡಿಮೆ ತಾಯಿಯ ರಕ್ತ ಹರಿಯುತ್ತಿರುತ್ತದೆ. ಅತಃ ಸ್ತ್ರೀಯು ನಿಯೋಗದಿಂದ ಪುತ್ರಪ್ರಾಪ್ತಿಗೊಳಿಸುವುದು ಅವಶ್ಯಕವಿತ್ತು. `ನಶೇಷೋ ಅಗ್ನೆ ಜಾತ ಮಸ್ತಿ”(ಋಗ್ವೇದ-7.5.7) ಸ್ತ್ರೀಯು ತನ್ನ ಪತಿಯನ್ನುಳಿದು ಹತ್ತು ಮಂದಿಯೊಡನೆ ನಿಯೋಗಗೈದು ಪುತ್ರಪ್ರಾಪ್ತಿಗೊಳಿಸಬಹುದು. ಇದೇ ರೀತಿಯಲ್ಲಿ ಯಾವೊಬ್ಬ ಗಂಡಸೂ ಕೂಡ ಹತ್ತು ಸ್ತ್ರೀಯರಿಗೆ ಗರ್ಭದಾನ ಮಾಡಬಹುದಾಗಿತ್ತು. ಇದು ಪಾಪವಲ್ಲ!
`ಇಮಾಂ ತ್ವಮಿಂದ್ರ ಮೀಢವಃ ಸುಪುತ್ರಂ ಸುಭಗಾಂ ಕೃಣಿ, ದಶಾಸ್ಯಾಂ ಪುತ್ರನಾಧೇಹಿ ಪತಿಮೇಕಾದಶಂಕೃಧಿ.” ಋಗ್ವೇದವು ಹನ್ನೊಂದು ಪುರುಷರೊಡನೆ ನಿಯೋಗ ಮಾಡಲು ಆದೇಶವೀಯುತ್ತದೆ. ನಿಯೋಗ ಮಾಡುವ ಪುರುಷನಿಗೆ ಸರ್ವದಾ ಪ್ರಥಕ ನಾಮಧೇಯವನ್ನೀಯುತ್ತದೆ.
ಈ ಪ್ರಕಾರ ಋಗ್ವೇದಲ್ಲಿ ನಿಯೋಗ ರೂಪಿ ವ್ಯಭಿಚಾರದಿಂದ ಸ್ತ್ರೀಯರಿಗೆ ಸ್ವರ್ಗದ ಪ್ರಲೋಭನೆಯನ್ನಿತ್ತುದನ್ನು ನಾವು ಕಾಣಬಹುದು. ಉಪಯುಕ್ತ ಉದಾಹರಣೆಗಳಿಂದ ಸ್ತ್ರೀಯು ಜೀವಿಸಿದ್ದಾಗಲೇ ನಿಯೋಗ ಮಾಡುವ ಪುರುಷರೂಪಿ ದೇವತೆಗಳಿಂದಾಗಿ ಅಗ್ನಿ, ಸೋಮ, ಮುಂತಾದ ದೇವತೆಗಳ ಸಂಸರ್ಗದಲ್ಲಾಕೆ ಬರುತ್ತಿದ್ದಳು. ಮನುವು ನಿಯೋಗವು ಪಾಪವಲ್ಲ ಎಂದೆನ್ನುತ್ತಾನೆ. ನಿಯುಕ್ತ ಪುರುಷನೊಡನೆ ನಿಯೋಗ ಮಾಡುತ್ತಿರಬೇಕು ಎಂದವನು ಶಾಸನಗೈದನು. ನಿಯೋಗವು ದೇಶವಿದೇಶಗಳಲ್ಲಿ ಪ್ರಚಲಿತವಿದ್ದ ಸಮಾಜ ವಿಧಿವತ್ತಾಗಿ ಸ್ವೀಕರಿಸಿದ್ದ ಪದ್ಧತಿಯಾಗಿತ್ತು ಎಂದು ಈ ಪುಟ್ಟ ಪುಸ್ತಕ ಸಾರಿ ಹೇಳುತ್ತದೆ. ಬಹುಶಃ ಈ ವಿವರಣೆಯು ಕಾದಂಬರಿಯ ಅರ್ಥವಿಶೇಷಕ್ಕೆ ಪೂರಕವಾಗಿದೆ ಎಂದು ನಾನು ನಂಬಿದ್ದೇನೆ.
 

‍ಲೇಖಕರು G

February 11, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. samyuktha

    Ee pustaka odabekendidde! Adara parichaya vivaravaagi maadikottaddakke Udayakumar avarigu Avadhi gu dhanyavaada!

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: