ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರೇಶ್ಮಾ ಭಟ್ ಕವಿತೆ- ಮಸಿ ಮತ್ತೆ ಲೆಗಸಿ

ರೇಶ್ಮಾ ಭಟ್

‘ಹಿಂದೆಲ್ಲ ನಿಮ್ಮಲ್ಲಿ ಶ್ರೌತಯಾಗವ ಮಾಡಿದವರಿದ್ದರು

ಹಿಮಾಲಯದ ತಪ್ಪಲಿಂದ ಸೋಮಲತೆಯ ತಂದು

ರಸವ ಹಿಂಡಿ ಕುಡಿದು ನೂರರ ಮೇಲೆ ಬಾಳಿದವರಿದ್ದರು.

ಈಗಲೂ ಈ ಇದನ್ನು ಮಾಡಬಹುದು

ಅಷ್ಟೇನು ಖರ್ಚುಬಾರದು. ಕುಟುಂಬದ 

ಘನತೆಯನ್ನು ಇಲ್ಲಿ ಇನ್ನಷ್ಟು ಹೆಚ್ಚಿಸಬಹುದು’

ಪುರೋಹಿತ ಭಟ್ಟನ ಸಲಹೆಗಳು

ಘನತೆಯನ್ನು ಎತ್ತಿ ಹಿಡಿಯಲೆಂದೇ ಇರುವುದಾದರೂ,

ಗೇಟಿನ ಕಂಬದಲ್ಲಿ, ಗ್ರಾನೈಟಿನ ಗೋಡೆಯಲ್ಲಿ

ಅಧಿಕಾರದಿಂದೊತ್ತುವ ಮೊಹರುಗಳಲ್ಲಿ,

ಶಹರಗಳ ನೂರೆಂಟು ಪ್ರವರಗಳಲ್ಲಿ 

ಘನತೆಯ ಕುರುಹು ಈಗಾಗಲೇ ಉಳಿದುಕೊಂಡಿತ್ತು.

ಆ ಮನೆಯ ಪಾತ್ರೆಗಳ ತಳಕ್ಕೆ 

ಒಲೆಯ ಬೂದಿಯನ್ನು ಕಲಸಿ  ಮೆತ್ತಿ 

ಮಸಿ ಹಿಡಿಯದಂತೆ ಅಟ್ಟುಂಡಿರುವುದೂ ಗೊತ್ತಿತ್ತು.

ಬೂದಿ ಕಲಸಿ ಲಾಗಾಯ್ತಿನಿಂದ  

ಮೆತ್ತುತ್ತಿದ್ದ ಅವಳಾದರು ಒಮ್ಮೆ ಕೇಳಿದ್ದೇನು?

‘ಯಾವ ತೋಟದಲ್ಲೋ ವಿಷ ಸಿಂಪರಿಸಿಕೊಂಡು

ಬೆಳೆದ ದ್ರಾಕ್ಷೆಯಾದರೂ ಸರಿ… 

ಅದರ ರಸ ಸಿಕ್ಕರೆ ಇಂತಿಷ್ಟು ತಂದು ಕೊಡಿ,

ಕಣ್ಣೆವೆ ಕೂಡಿ ಸುಖನಿದ್ರೆ ಬಂದರೂ ಬರಬಹುದು

ಹಳೆಯ ಹುಳಿತಕ್ಕೆ ಹಳತನ್ನು ಮರೆಯಿಸುವ

ಶಕ್ತಿ ಇದ್ದರೂ ಇರಬಹುದು’

ಉತ್ತರದ ತಪ್ಪಲಿಂದ ಸೋಮಲತೆ ತಂದವರಿಗೆ

ಇದೊಂದು ಮಾತೆ?

ಈ ಮೊದಲು ಅಲ್ಲಿ ಕೆಲವರು

ಒಲೆಯ ಬೂದಿಯನ್ನು ಕಲಸಿ ಮೆತ್ತದೆ

ಪಾತ್ರೆಯ ತಳಕ್ಕೆ ಮಸಿ ಹಿಡಿಸಿದ್ದರು. 

ಆ ನಂತರ ಬಂದವರು ಮರು ಮಾತಿಲ್ಲದೆ 

ಆ ಮಸಿಯನ್ನು ತಿಕ್ಕಿ ತೊಳೆದಿದ್ದರು.

ಇದೆಲ್ಲ ಎಲ್ಲೆಲ್ಲು ಇದ್ದದ್ದೇ…

ಆದರೆ ಈ ಬೇಡಿಕೆ ಮಾತ್ರ ಹೊಸತು.

ಅವಳಿಗದು ದಕ್ಕಿತೋ ಇಲ್ಲವೋ ತಿಳಿಯದು

ಅವಳ ಸಮಾಧಿಯ ಮೇಲೆ

ಅವಳ ಜನನ ಮರಣದ ದಿನಾಂಕಗಳ ನಡುವೆ

‘ಇವಳು ಕುಟುಂಬದ ಘನತೆಯನ್ನು ಎತ್ತಿ

ಹಿಡಿದು ಸತ್ತಳು’ ಎಂದು ಖಂಡಿತವಾಗಿಯೂ

ಬರೆಯಬಹುದೆಂದು ಅವಳು ಮಗನಲ್ಲಿ

ಹೇಳಿದ್ದಂತೂ ಸತ್ಯವಾಗಿತ್ತು.

‍ಲೇಖಕರು Admin

8 July, 2021

1 Comment

  1. ಲಲಿತಾ ಸಿದ್ಧಬಸವಯ್ಯ

    ವಾಹ್!!!! ಬಹು ಆಯಾಮದ ಕವಿತೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading