ರೈಟರ್ಸ್ ಬ್ಲಾಕ್..

ನಾಗೇಶ ಮೈಸೂರು

ಆಗೊಮ್ಮೆ ಈಗೊಮ್ಮೆ ತಟ್ಟನೆ
ಮಾಯವಾಗುವ ಸ್ಪೂರ್ತಿ
ಹೋಯಿತೆಲ್ಲಿಗೆ ರಾಶಿ ಬರೆವ ತುಡಿತ?
ಉತ್ತರನ ಹಾಗೆರಡು ಸಾಲಿನಾಚೆಗೆ ನಿಂತು
ಕೆಕ್ಕರಿಸಿ ಧಿಕ್ಕರಿಸಿ ನಡೆವ ಬಿಂಕ..

ಜೀವಸೆಲೆಗೇನಾಯ್ತು?
ಮುಗಿದು ಹೋಯಿತೆ ಸರಕು?
ಭ್ರಮ ನಿರಸನ ತಂದ, ಮನ ನಿರಶನ?
ನೀರಸ ಭಾವ, ನಿಸ್ತೇಜ
ನಿರುತ್ಸಾಹ ಉಮ್ಮಳಿಸಿ ಗೋಜು
ಸಿಗದೇನೊ ಏರಬಯಸಿದ ಎತ್ತರ?
ಆಗದೇನೊ ನಡೆಯಬಯಸಿದ ದೂರ?
ಇತಿಮಿತಿಗಳ ಸರಕು ಸಂಶಯ
ಅನುಮಾನಗಳೆ ಮಾಡಿಸಿತೇನು ಸ್ತಬ್ದ?

ಪೊಟ್ಟಣ ಬಿಚ್ಚಿ ಹರವಿಕೊಂಡೆ
ಅತ್ತಿತ್ತ ನೋಡುತ್ತ ಗೊಂದಲದಲೆ
ಅವರೆಲೆ – ಇವರೆಲೆ ಊಟ ಚಂದ, ಭವ್ಯ..
ಮುಗಿದು ಹೋದೆನೆ ನಾನು?
ಅನಿಸೊ ಭೀತಿಯ ಥಾನು
ಮರೆಸಲದರಿದರತ್ತ ಗಮನ ಗಾನ
ಬಿಚ್ಚಿಕೊಂಡೆ ಅಳಲನು
ಜತೆಗತ್ತರದೆಷ್ಟೊ ಸಹಚರರು
ಒಬ್ಬಂಟಿಯಲ್ಲ ಅನಿಸಿ ತುಸು ಮುಕ್ತ, ಮುಕ್ತ..

ಎಲ್ಲಕು ಚಂದ ಹೆಸರಿಡುವ ಜಗ
ಅದೆಂತದೊ ರೈಟರ್ಸ್ ಬ್ಲಾಕಂತೆ..
ಕರೆವ ಹೆಸರೇನಾದರೇನು ?
ವಿಹ್ವಲ ಜೀವದ ಗಡಿಯಾರದ ನಡುಕ..
ಭಾವದೇರಿಳಿತ ಸಹಜ ಮನದ ವಿನ್ಯಾಸ
ತೊಡುವುದಾಗಿಗೊಮ್ಮೆ ಏನೊ ಸನ್ಯಾಸ..
ಮೌನದಾವರಣ ಬೆಸೆದ ಮಾತಿನ ಕದನ
ಬಿಟ್ಟದರಪಾಡಿಗೆ ನಡೆವ ವಿಫಲ ಯಾನ..
ಗಡಿಯಾರದ ಸುತ್ತು ಮತ್ತಲ್ಲಿಗೆ ಪರಿಭ್ರಮಣ..

‘ಇರಬೇಕು ಇರುವಂತೆ ತೊರೆದು ಸಾವಿರ ಚಿಂತೆ’
ಎಂದ ಕವಿನುಡಿ ತೇಲಿ ಬರಲು ಗಾನ
ತೊಡಗಿಸಿಕೊಂಡೆ ಏನಕೊ
ಮರೆಸೆ ಮನದ ಅಳಲನ್ನ..
ಬರುವುದಾದರೆ ಮತ್ತೆ ಬರಲಿ ತಾನೆ
ಬಾರದಿದ್ದರು ಮಿತ್ರ ‘ಧನ್ಯವಾದ’
ಬಂದು ಹೋಗುವ ನೂರಲೊಂದು ವಿನೋದ
ಅಂದುಕೊಂಡೆದ್ದೆ ಮೇಲೆ ತಟ್ಟನೊಳಗುದ್ದ
– ಬಿಡದೆ ಕಾಡುವ ಮತ್ತದರದೆ ಪ್ರಭೇಧ..!

‍ಲೇಖಕರು Admin

July 8, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: