ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ರಾಯರು ಬರ್ತಾರೆ ರಾಗಿ ಬೀಸು'

ಎಲ್.ಸಿ.ನಾಗರಾಜ್
‘ರಾಯರು ಬರ್ತಾರೆ ರಾಗಿ ಬೀಸು
ಬೀಗರು ಬರ್ತಾರೆ ಚಾಪೆ ಹಾಸು ‘
ಜೀರುಜಿಂಬೆಯ ಜಿಂಯ್ ಶೃತಿಗೆ ತಕ್ಕಂತೆ ಹುಡುಗಿಯರು ಪದ ಕಟ್ಟಿ ಹಾಡುತ್ತಿದ್ದರು .
ಈ ಕಕ್ಕೆ ದುಂಬಿ ( Stemocera Aequisisignatia )ಯ ಶೃತಿ ತನ್ನ ಬಂಧನದ ದುರಂತ ಕತೆ ಕುರಿತದ್ದು..
ಇದು ಮೊದಲು ಕಾಣಿಸಿಕೊಳ್ಳುವುದು ‘ ಕಕ್ಕೆ ಗಿಡ ( Golden Shower / Cassia fistula ) ದಲ್ಲಿ , ಕಕ್ಕೆ ಮರ ಈ ಆಕರ್ಷಕ ದುಂಬಿಗೆ ಆಸರೆ ಸಸ್ಯ ( Host plant ) ; ಸಂತಾನಾಭಿವೃದ್ದಿ ಕೂಡ ಈ ಪೊದೆಯಂತ ಗಿಡದಲ್ಲೇ.
ಕಕ್ಕೆ ಸಸ್ಯವನ್ನ ಸ್ಥಾನಿಕ ಔಷಧೀಯ ಪದ್ದತಿಯಲ್ಲಿ ಮನುಷ್ಯರ ಶರೀರದ Uric acid ಅಸಮತೋಲದಿಂದ ಪಾದದಲ್ಲಿ ಉಂಟಾಗುವ ಬಾವು ( Gout ) ವಾಸಿ ಮಾಡಲು‌ ಮತ್ತು ಚರ್ಮರೋಗಗಳನ್ನ ಗುಣಪಡಿಸಲು ಬಳಸಲಾಗುತ್ತದೆ .

ಚಿತ್ರಕೃಪೆ: ‘ಕಕ್ಕೆಮರ ಕನ್ನಡ ನೆಲ’ ವೆಬ್ ಪೋರ್ಟಲ್


‘ಜೀರುಜಿಂಬೆ’ ಎಂದರೆ ಕೊರಳಿಗೆ ನೂಲು ಜೀರಿಕೊಂಡು ಬಂಧನದಲ್ಲಿದ್ದು ಶೃತಿ ಮೀಟಿಸುವ ಮಾನವಕೇಂದ್ರಿತ ಪ್ರಜ್ಞೆಯಿಂದ ಕಟ್ಟಲಾಗಿರುವ ಹೆಸರು ಅಷ್ಟೇ ; ಮೂಲತ ಇದರ ಹೆಸರು ಕಕ್ಕೆ ದುಂಬಿ .
ಆದರೆ ಹುಡುಗಿಯರ ಕೊರಳಿಂದ ಹುಟ್ಟುವ ‘ರಾಯರು ಬರ್ತಾರೆ ರಾಗಿ ಬೀಸು’ ಹಾಡಿಗೂ ರಾಗಿ ಬೆಳೆಸುವ ಅಕ್ಕಡಿ ಸಾಲು ಬೇಸಾಯಕ್ಕೂ ಈ ಕಕ್ಕೆ ದುಂಬಿಗೂ ಆಪ್ತ ಸಂಬಂಧವಿದೆ .
ಈ ಹಿಂದೆ ‘ಅಕ್ಕಡಿ ಸಾಲು ಬೇಸಾಯ ಎಂದರೆ ಸಾರಜನಕ ಬೇಡುವ ರಾಗಿ ಜೋಳದ ಜೊತೆಗೆ ಸಂಗಾತಿ ಬೆಳೆಗಳಾಗಿ ಸಾರಜನಕ ಸ್ಥಿರೀಕರಿಸುವ ತೊಗರಿ , ಅವರೆ, ಅಲಸಂಡೆಯಂತಹ ದ್ವಿದಳ ಬೆಳೆಗಳು ಮತ್ತು ಮಣ್ಣಿನ ವಿವಿಧ ಆಳ ಮತ್ತು ಅವಕಾಶದ ವಿವಿಧ ಎತ್ರರಗಳಿಗೆ ಚಾಚಿಕೊಳ್ಳುವ ಹುಚ್ಚೆಳ್ಳು ಹರಳು ಮತ್ತು ಸಾಸಿವೆ ( saflower , castor and mustard ) ಎಣ್ಣೆಕಾಳು ಬೆಳೆಗಳ ಸಂಯೋಜಿತ ‌ಪದ್ಧತಿ ಇತ್ತು; ಈ ಪದ್ಧತಿ ಮಣ್ಣಿನ ಫಲವಂತಿಕೆಯ ನೈಸರ್ಗಿಕ ವರ್ತುಲವನ್ನ ಕಾಯುತ್ತಿದ್ದುದರ ಜೊತೆಗೆ ವಿವಿಧ ಉಪಕಾರಿ ಕೀಟಗಳು ಮತ್ತು ಪಕ್ಷಿಗಳಿಗೆ ಗೂಡುಕಟ್ಟಿ ಸಂತಾನ ಮಾಡಿಕೊಳ್ಳುವ ಆಸರೆ ತಾಣಗಳೂ ಆಗಿದ್ದವು.
ಅವರೆ ಬಳ್ಳಿಯ ಎಲೆಗಳನ್ನ ತಿನ್ನುತ್ತಿದ್ದ ಕಕ್ಕೆದುಂಬಿಯನ್ನ ಹಾವಳಿ ಕೀಟ ಅಂತಾ ಭಾವಿಸುವ ಬಗೆಯೇ ಈ ಅಕ್ಕಡಿ ಸಾಲು ಸಂಗಾತ ಪದ್ಧತಿಗೆ ಹೊರತಾದುದಾಗಿತ್ತು ; ಕಕ್ಕೆ ದುಂಬಿ ಅಕ್ಕಡಿ ಸಾಲು ಪದ್ಧತಿ ಬೇಸಾಯ ಭೂಮಿಯಲ್ಲಿ ಕಾಣಿಸಿತೆಂದರೆ ಅಲ್ಲಿ ಹಾವಳಿ ಕೀಟಗಳು ಮತ್ತು ಉಪಕಾರಿ ಕೀಟಗಳ ಸಮತೋಲ ( Pest and predator equilibrium ) ಇದೆ ಅಂತಾ‌ ಬೇಸಾಯಗಾರರು ಭಾವಿಸಿದ್ದರು‌.
ಹೀಗಾಗಿ ಈ ಕಕ್ಕೆ ದುಂಬಿ ಮಾನವರಿಗೆ ಆಪ್ತವಾಗುವುದರ ಜೊತೆಗೆ ಬಂಧನಕ್ಕೂ ಒಳಗಾಗಿ,‌ ಕೊರಳಿಗೆ ನೂಲು ಜೀರಿಸಿಕೊಂಡು ತನ್ನ ಹೆಸರನ್ನೇ ಕಳೆದುಕೊಂಡು ಜೀರುಜಿಂಬೆಯಾದದ್ದು ನಿಸರ್ಗ ಕುರಿತ ಮಾನವ ಕೇಂದ್ರಿತ ಪರಿಕಲ್ಪನೆಗಳ ವಿಷಾದದ ಕಥೆ..
ಏಳು ಮಲೆ, ಎಪ್ಪತ್ತೇಳು ಮಲೆಯಲ್ಲಿ ನಾಂಟೇವಾಡತಿರ ಮಾಯಕಾರ ಮಾದಪ್ಪ ಎಲ್ಲರಿಗೂ ಒಳ್ಳೆಯದನ್ನೇ ಮಾಡಲಿ .

‍ಲೇಖಕರು avadhi

8 September, 2019

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading