ಹೀಗೊಂದು ಸೊಗಸಾದ ಜಡ ಸಂಜೆ..

ಚೈತ್ರ ಶಿವಯೋಗಿಮಠ
ಪ್ರಣಾಮ ಚಂದ್ರಶೇಖರ ಎಂಬ ಯುವ ಕವಿಯ
ಆಂಗ್ಲ ಕವಿತೆ – “Of time and trees”ನ ಅನುವಾದ.
ಹೀಗೊಂದು ಸೊಗಸಾದ ಜಡ ಸಂಜೆ
ಆ ದುಮ್ಮಾನದ ಹಾಳುಸುರಿಯುವ ನನ್ನ ಊರು ಬಿಟ್ಟು
ತಿರುಗಾಡಲೆಂದು ಕಾಡಿನ ದಾರಿ ಹಿಡಿದು ಹೊರಟೆ
ಆ ಸುಂದರ ನೀರವತೆ ನನ್ನ ಸುತ್ತ ಮುತ್ತಿತು!
ರಸಮಯ ಕಾವ್ಯಕ್ಕಿಂತಲೂ ರಂಜನೀಯವೆನಿಸಿತು
ಮಸುಳಿಸುತ್ತಿರುವ ಸೂರ್ಯನ ಹೊಂಬಣ್ಣದ ಕಿರಣಗಳು,
ಕಡು ಕೇಸರಿಯ ಅವನು, ಅವರ್ಣೀಯ ವರ್ಣರಂಜಿತ ತೈಲಚಿತ್ರ!
ಹಸಿರೆಲೆಗಳು, ಛಾಯಾಗ್ರಾಹಕನಂತೆ ಸೂರ್ಯರಶ್ಮಿಯ ಸೆರೆಹಿಡಿದವು.
ಹೊನ್ನು-ಹಸಿರು, ಹಸಿರು-ಹೊನ್ನು; ಮಿಶ್ರಿತ ಹಲವಾರು
ಬಣ್ಣಗಳ ಹಬ್ಬದಂತಹ ವರ್ಣಪಟಲ!!
ಅಗಾಧ ಹೊಂಬಣ್ಣದ ನೀಲಾಗಸದ ಅಡಿ,
ಹಸಿರೆಲೆಗಳ ಮೇಲಾವರಣ ನವ ವಧುವಿನಂತೆ ಸಿಂಗರಿಸಿ, ಕಂಗೊಳಿಸಿತು
ಅರ್ಕನ ಆ ಕೊನೆಯ ದೀರ್ಘ ಓಜಸ್ಸಿನ ರೇಖೆಗಳು,
ಸತ್ಯಾನ್ವೇಷಕರು, ಪ್ರಕೃತಿಯ ಮರ್ಮದಲಿ ತಮ್ಮ ಮಾರ್ಗವನ್ನು ಅರಸುವದನ್ನು ಹೋಲುವಂತಿತ್ತು!
ಶರತ್ಕಾಲದ ಆ ಬಂಗಾರದ ಪರ್ಣಗಳು, ಸೂರ್ಯ ರಶ್ಮಿಯ ಚುಂಬನಕ್ಕೆ ಹಾಗೇ ನಾಚಿ ಕೆಂಪಗೆ ಹೊಳೆದವು!
ಮರದ ಕಾಂಡಗಳು, ನನ್ನ ಸ್ಮೃತಿಗಿಂತ ಹೆಚ್ಚು
ಬಲಾಢ್ಯವಾಗಿ ಬೆಳೆದು, ಸ್ವರ್ಗವನ್ನೇ ತಾಕುವಷ್ಟೆತ್ತರ!
ಆ ಪ್ರಕೃತಿ ಸೌಂದರ್ಯ,  ಆ ಸುಂದರ ನೀರವ ಮೌನ ಆಹ್.. ಆಹ್ಲಾದಕರವಾಗಿತ್ತು
ಆದರೆ… ಈ ನಂದನದೊಳಗೂ ಮನ ಬಂಧನಗಳ
ಸಂಕೋಲೆಗೆ ಸಿಕ್ಕು ನಲುಗುತ್ತಿತ್ತು!
 ಮುಳುಗುತ್ತಿರುವ ನೇಸರನಂತೆ, ಒಂದು ಅವ್ಯಕ್ತ ಭಯದ ಭಾವ, ಈ ಮನವನ್ನ ಮುಳುಗಿಸುವಂತೆ ಭಾಸವಾಯಿತು!
ಈ ನಂದನ ಹೀಗೇ ಉಳಿಯುವುದೆ??
ಉಳಿಯುವುದಾದರೆ ಅದೆಷ್ಟು ಕಾಲ?? ಕರ್ಕಶದೆದೆಯ ಮಾನವನ ಗರಗಸಕ್ಕೆ ಆಹಾರವಾಗುವವರೆಗೆ ಮಾತ್ರ!!
ಆಗಲೇ ಕೇಳಿತು, ತರಗೆಲೆಗಳ ಮರ್ಮರ ಸದ್ದು, ತಂಗಾಳಿಯ ಪಿಸುಮಾತು, ಗಿಡ-ಮರಗಳ ಮೆಲುನುಡಿ, ಹಕ್ಕಿ-ಪಿಕ್ಕಿಗಳಿಂಚರ!!
ಅರೆ!! ಇವೆಲ್ಲವೂ ಅನಾದಿಕಾಲದಿಂದಲೂ, ಮಾನವನಿಗೂ
ಮುಂದಿನಿಂದಲೂ ಇವೆಯಲ್ಲವೇ??
ಸಂದೇಹವೇ ಇಲ್ಲ! ಇವು ಅಜರಾಮರ, ಮನುಕುಲದ ನಂತರವೂ ಅಳಿಯದ ಸೌಂದರ್ಯವಿದು!!
ಮನ ನಿರಾಳವಾಯಿತು, ಒಮ್ಮೆಲೆ ಎಲ್ಲ
ದುಗುಡವೂ ಕರಗಿ ಹೋಯಿತು.
ಈ ನಂದನ, ತಿಳಿಸಿದ ಅಮೂಲ್ಯ ಪಾಠವದು.
ಕಾಲಗರ್ಭದಲಿ ಮನುಜನಳಿದರೂ, ನಿಸರ್ಗದ
ಸಗ್ಗ ಸಿರಿ ಅಳಿಯದೆ ಉಳಿಯುವುದು!!

‍ಲೇಖಕರು avadhi

September 8, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: