ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರಂಜನಿ ಪ್ರಭು ಬರೆದ ಹನಿಗವನಗಳು

ಕವಿತೆ

ರಂಜನಿ ಪ್ರಭು

**

1

ಎರಡು ರೆಕ್ಕೆ ತಾನೇ ಬೇಕು ಹಾರಾಡಲು ಹಕ್ಕಿಗೆ
ಎರಡು ಸಾಲು ಸಾಲದೇನು ಮನತಾಗುವ ಕವಿತೆಗೆ?

2

ಕವಿತೆ ಎಂದರೆ
ಗಾಣಕ್ಕೆ ಕಟ್ಟಿದ ಎತ್ತಲ್ಲ
ಹಸಿರು ಹುಲ್ಲನು ಕಂಡು ಜಿಗಿಜಿಗಿದು ಬರುವ ಕರು.

3

ಪ್ರತಿಬಾರಿ ಅಲೆಗಳು
ಎದ್ದಾಗಲೂ
ದಡದ ಬಂಡೆ ಕಾಯುತ್ತದೆ ಕಾತರದಿಂದ
ಒಂದು ಅಲೆ ತನ್ನನ್ನು ಅಪ್ಪಿಕೊಂಡೇ ಬಿಡುತ್ತದೆಂದು.

4

ಕೆಚ್ಚಲನು ಗುಮ್ಮುವ ಎಳೆಗರುವಿನ ಕಣ್ಣಲ್ಲಿ
ಹಸಿವಿನ ವೇದನೆ
ಹಸುವಿಗೋ ಕೆಚ್ಚಲಲಿ
ಹಾಲಿಲ್ಲದ ವೇದನೆ.

5

ಬೆಳ್ಳಂಬೆಳಕಿನ ಆಗಸದ ಕೆಂಪು
ನಗುವ ತಾರೆಗಳನ್ನೆಲ್ಲ
ನಿರ್ಮೂಲ ಮಾಡಿದ
ರಣಭೂಮಿಯಂತಿದೆ.

Seamless abstract hand-drawn pattern, waves background. Vector illustration

6

ಕೋಡುಗಲ್ಲಿನ ತುತ್ತತುದಿಯ
ಶಿಖರ ಏರಲಾಗದು
ಎಂದು ನಿಲ್ಲುವುದು ಬೇಡ
ಏರಲಾಗುವಷ್ಟು ಮೆಟ್ಟಲುಗಳನ್ನಾದರೂ ಏರೋಣ ಬಾ

7

ಬದುಕನ್ನು ಅವಲೋಕಿಸಿದರೆ
ಅದರ ಪ್ರತಿ ಮಗ್ಗುಲಲ್ಲೂ
ಬದಲಾವಣೆಯ ಆತಂಕ
ಹೊಂದಾಣಿಕೆಯ ತಲ್ಲಣ…
ನೆಮ್ಮದಿಯ ದಿನಗಳೆಲ್ಲಿ??

8

ಜೀವನದ ನಿರ್ದೇಶಕ
ಒಪ್ಪಿಸಿದ ಪಾತ್ರಗಳನ್ನೆಲ್ಲ
ಮುತುವರ್ಜಿಯಿಂದ
ಒಪ್ಪಿಕೊಂಡೆ,
ಪ್ರಾಮಾಣಿಕವಾಗಿಯೇ
ನಿರ್ವಹಿಸಿದೆ..
ಆದರೆ…
ಯಾವ ಪಾತ್ರಕ್ಕೂ ಅತ್ಯುತ್ತಮ
ಪ್ರಶಸ್ತಿ ಬರಲೇ ಇಲ್ಲ!

‍ಲೇಖಕರು avadhi

21 December, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading