‘ಗಾಜಾ ಬಿಟ್ಟು ನಾವೆಲ್ಲಿಗೆ ಹೋಗುವುದು’

ಡಿಸೆಂಬರ್ 7 ರಂದು ಇಸ್ರೇಲಿನ ಧಾಳಿಯಲ್ಲಿ ಪ್ಯಾಲೆಸ್ತೀನ್ ಕವಿ ರೆಫಾತ್ ಅಲರೀರ್ ತನ್ನ ಸೋದರ, ತಂಗಿ ಮತ್ತು ಅವಳ ನಾಲ್ಕು ಮಕ್ಕಳ ಜೊತೆ ಹತ್ಯೆಯಾದ. ‘ಗಾಜಾ ಬಿಟ್ಟು ನಾವೆಲ್ಲಿಗೆ ಹೋಗುವುದು’ ಎಂದು ಕೆಲವೇ ದಿನಗಳ ಹಿಂದೆ ಅವನು ಒಂದು ಟಿವಿ ಚಾನಲ್ ಗೆ ಸಂದರ್ಶನದಲ್ಲಿ ಹೇಳಿದ್ದ. 

ಜೊತೆಗೆ ಬಂಗಾಳಿ ಕವಿ ಮೌಮಿತಾ ಅಲಂ ರೆಫಾತ್ ಸಾವಿಗೆ ಸ್ಪಂದಿಸುತ್ತಾ ರಚಿಸಿದ ಒಂದು ಕವನ.

ಕನ್ನಡಕ್ಕೆ: ಪ್ರತಿಭಾ ನಂದಕುಮಾರ್

ನಾನು ಸಾಯಲೇಬೇಕಿದ್ದರೆ 

ರೆಫಾತ್ ಅಲರೀರ್

**

ನಾನು ಸಾಯಲೇಬೇಕಿದ್ದರೆ 

ನೀನು ಬದುಕಿರಬೇಕು

ನನ್ನ ಕಥೆ ಹೇಳಲು

ನನ್ನ ವಸ್ತುಗಳನ್ನು ಮಾರಲು

ಒಂದು ಬಟ್ಟೆ ತುಂಡು ಸ್ವಲ್ಪ ದಾರ ಕೊಂಡು

(ಬಟ್ಟೆ ಬಿಳಿಯದಾಗಿರಲಿ, ಉದ್ದ ಬಾಲವಿರಲಿ)

ಗಾಝದಲ್ಲೆಲ್ಲೋ ಯಾವುದೋ ಮಗು

ಸ್ವರ್ಗದ ಕಡೆ ಕಣ್ಣಿಟ್ಟು ನೋಡುತ್ತಾ

ಅವಸರದಲ್ಲಿ ಉರಿಯಲ್ಲಿ 

ಯಾರಿಗೂ ವಿದಾಯ ಹೇಳದೇ

ತನ್ನದೇ ದೇಹಕ್ಕೂ ಇಲ್ಲದೇ

ತನಗೂ ಹೇಳಿಕೊಳ್ಳದೇ

ಹೊರಟುಹೋದ ತಂದೆಗಾಗಿ ಕಾಯುತ್ತಾ

ನೋಡಲಿ ಗಾಳಿಪಟವನ್ನು, ನೀನು ಮಾಡಿದ ಗಾಳಿಪಟ

ಅಲ್ಲಿ ಮೇಲೆ ಹಾರುತ್ತಿರುವುದನ್ನು ನೋಡಲಿ

ಒಂದು ಗಳಿಗೆಗಾದರೂ ಅಲ್ಲಿ ಮೇಲೆ

ದೇವನೊಬ್ಬನಿದ್ದಾನೆ

ಪ್ರೀತಿಯನ್ನು ಮರಳಿ ತರುತ್ತಾನೆ

ಎಂದು ನಂಬಲಿ.

ನಾನು ಸಾಯಲೇಬೇಕಿದ್ದರೆ  

ಅದೊಂದು ಆಸೆಯನ್ನು ಹುಟ್ಟಿಸಲಿ

ಅದೊಂದು ಕಥೆಯಾಗಲಿ.

**

ರೆಫಾತ್ ಅಲರೀರ್ ಗೆ

ಮೌಮಿತಾ ಅಲಂ

ಕನ್ನಡಕ್ಕೆ: ಪ್ರತಿಭಾ ನಂದಕುಮಾರ್

**

ಒಪ್ಪುತ್ತೇನೆ

ನಾವೆಲ್ಲರೂ ಸಾಯಲೇಬೇಕು

ಆದರೆ ಯಾರೂ ಒಂದು ಕಟ್ಟಡದಿಂದ

ಮತ್ತೊಂದಕ್ಕೆ ಅವಸರಿಸುತ್ತಾ ಸಾಗಿ

ಕಟ್ಟಡದ ಅವಶೇಷವೋ

ಇಲ್ಲಾ ದೇಹದ ಧೂಳೋ ಆಗಕೂಡದು.

ಯಾವ ತಾಯಿಯೂ ತನ್ನ ಮಕ್ಕಳಿಗೆ

ಆಕಾಶದಲ್ಲಿ ವಿದಾಯ ಗೀಚಬಾರದು

ಸಾವು ಒಂದು ಕ್ಷಣ ನಿಲ್ಲಬೇಕು ಹಣೆಯ ಮೇಲೆ

ಎಳೆಗಳ ಮೇಲೆ ನಿಲ್ಲುವಂತೆ ಹಿಮಪದರ

ಕರಗಿ ತೊಟ್ಟುತೊಟ್ಟಾಗಿ ನೆಲಕ್ಕಿಳಿಯುವಂತೆ

ನಾವು ವಿಲಾಪಿಸಲು ಬಿಡಬೇಕು.

ಸಾವಿಗೆ ಇಂತಹ ಕ್ರೂರ ಆಟ ಆಡಲು ಬಿಡಬಾರದು

ಹಠಾತ್ತನೆ. ಥಟ್ಟನೆ. ಅಮಾನಷ.

ನಿನಗಾಗಿ ನಾನೊಂದು ಗಾಳಿಪಟ ಮಾಡುತ್ತೇನೆ.

ನಾವು ನಮ್ಮನ್ನು ಮುಕ್ತಿಗೊಳಿಸಿದ ದಿನ

ನಮಗೆ ಸ್ವಾತಂತ್ರ್ಯ ಸಿಕ್ಕ ದಿನ

ಆದರೆ ಅದನ್ನು ನಮ್ಮ ಕಫನಿನಿಂದ ಮಾಡುವುದಿಲ್ಲ

ಮುಕ್ತ ಪ್ಯಾಲೇಸ್ತೀನಿನ ಗೋಧಿಯ ಹೊಲದ ಮೇಲೆ

ಹರಡುವ ಸೂರ್ಯನ ಬೆಳಕಿನ ತುಂಡಿನಿಂದ.

ಕವಿಗೆ ಸಾವಿಲ್ಲ ರೆಫಾತ್

ಪ್ರತಿಮೊಗ್ಗು ಅರಳುವಾಗ

ಪ್ರತಿ ಬೀಜ ಮೊಳೆಯುವಾಗ

ಪ್ರತೀ ಆಸೆ ಚಿಗುರುವಾಗ

ಭರವಸೆಗಾಗಿ ಹಾಡುವ ಕವಿಯಲ್ಲಿ

ನೀನಿರುತ್ತೀಯ ರೆಫಾತ್

ನಾನು ವಚನ ನೀಡುತ್ತೇನೆ ರೆಫಾತ್

ನಿನ್ನ ಕಥೆಯನ್ನು ನಾನು ಹೇಳುತ್ತೇನೆ 

ಪ್ರತಿ ಅಕ್ಷರದಲ್ಲಿ ಬರೆದು

ಕಡಲಿನಲ್ಲಿ ಹರಡಿಬಿಡುತ್ತೇನೆ.

ಕಡಲು ಹಾಯುವ ಪ್ರತಿಹಕ್ಕಿಯೂ

ತನ್ನ ರೆಕ್ಕೆಗಳನ್ನು ಅದ್ದುತ್ತವೆ ನಿನ್ನ ಕಥೆಯಲ್ಲಿ

ಕೊಂಡೊಯ್ಯುತ್ತವೆ ದೂರದೂರದ ಊರುಗಳಿಗೆ

ನಿನ್ನ ಕಥೆಯನ್ನು ಆಗ

ಎಲ್ಲ ಪರ್ವತಗಳಿಂದ ಹೊರಡುತ್ತವೆ ಧ್ವನಿಗಳು

ನಿನಗಾಗಿ, ನಿನ್ನ ಮುಕ್ತ ಪ್ಯಾಲೇಸ್ತೀನಿನ ಕನಸಿಗಾಗಿ.

ಸ್ನೈಪರ್ ಗಳು  ಕೊಲ್ಲಲಾರರು ಪರ್ವತಗಳನ್ನು. 

ಅಲ್ಲಿಂದ ಹೊರಡುವ ನದಿಗಳು ಹಾಡುತ್ತಿರುತ್ತವೆ ನಿನಗಾಗಿ

ಈ ಕ್ರೂರ ಹಠಾತ್ ಆಘಾತದಿಂದ ಸಾವು ಮುಕ್ತಿಪಡೆಯುವವರೆಗೆ

ನೀನು ಮುಕ್ತವಾಗುವವರೆಗೆ

ಸ್ವತಂತ್ರ ಪ್ಯಾಲೆಸ್ತೀನ್ ನಲ್ಲಿ

ಸ್ವಚ್ಛಂಧ ಸೂರ್ಯೋದಯವಾಗುವವರೆಗೆ.

‍ಲೇಖಕರು avadhi

December 20, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Murthy

    It is unfortunate that innocent people and innocent children have died on either side of the war. It always happens. I find a lot of poems written on these issues. But none of them refer to the historic causes and provocations behind these unwarranted and often surprise attacks. Those who sit at a safe distance and pull the triggers with a remote control are not brought to justice.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: