ನಾಟಕದ ಮಾತು ಸುಲಭವಲ್ಲ
ಪಿ ಬಿ ಪ್ರಸನ್ನ
ಅವರಿವರ ನಡುವೆ
ಉಭಯ ಕುಶಲೋಪರಿಯ ಮಾತು
ಬಲು ಸಲೀಸು
ಹಚ್ಚಿ ಒಂದಿಷ್ಟು ನಗೆ ಲೇಪ
ತೋರಿಸಿ ಹುಸಿ ಪ್ರೀತಿ ಕೋಪ
ತುಂಡರಿಸಿ ಮುಗಿಸಬಹುದು
ಅಥವಾ ಹಿಗ್ಗಿಸಬಹುದು
ಶಬ್ದ ಶಕ್ತಿಗೆ ಕುಂದು ಬರದಂತೆ

ಸುಲಭವಲ್ಲ ನಾಟಕದ ಮಾತು
ನಿಂತು ರಂಗದ ನಡುವೆ
ಆಡಬೇಕು ಉಸಿರಾಟ ಅಸಹಜ ಇದ್ದರೂ
ಸಹಜ ಗತಿಗೆ ಹೊಂದಿಸಿ
ಕೆಲವೊಮ್ಮೆ ಸ್ವಗತ
ಮಗದೊಮ್ಮೆಉದ್ದುದ್ದ
ಊರು ಉದ್ಧಾರದ
ಮಾತುಗಳ ತುಂಡರಿಸದಂತೆ ಒಪ್ಪಿಸಿ
ಉಘೇ ಎನಿಸಿಕೊಳ್ಳಬೇಕು
ಹೋತ ಗಡ್ಡದ
ಶೂನ್ಯ ನೋಟದ ನಿರ್ದೇಶಕ
ಧ್ವನಿಗೆ ಕಸರತ್ತು ನೀಡುವ
ನೀವಾಗಬೇಕು ನಾಯಿ ಕತ್ತೆ ಬೆಕ್ಕು
ಮತ್ತೆ ಆಗಿಯೇ ಇರುತ್ತೀರಿ ಮಂಗ
ಎಲ್ಲವನೂ ಉಸುರಬೇಕು ಒಡಲಾಳದಿಂದ
ನಿಂತಿರುವೆ ನಾನು
ತೆರೆಯೆದ್ದ ಬಳಿಕ
ಸಣ್ಣ ತಲೆಗೆ ದೊಡ್ಡ ಕಿರೀಟದ
ದಸಡಾ ಬಸಡಾ ರಾಜ ಪೋಷಾಕಿನಲಿ
ಉರುಹಚ್ಚಿದ ಮಾತುಗಳ ಒಪ್ಪಿಸಲು
ಹೊಕ್ಕುಳಿನ ಮಾತು ಎದೆಯಲ್ಲಿ
ಎದೆಯದ್ದು ಗಂಟಲು
ನಾಲಗೆಯಲ್ಲೇ ಉಳಿದು
ಬೇರೆಯದೇ ಮಾತುಗಳು ಹೊಮ್ಮಿದ್ದು
ಆಕಸ್ಮಿಕ ಅಚಾನಕವಲ್ಲ
ರಂಗದ ಕಾರಣಿಕ!
ಆಡಿಸುವಾತ ಬೆನ್ನ ಹಿಂದೆಯೇ
ಹಲ್ಲು ಕಡಿಯುತ್ತ ಕತ್ತಿ ಮಸೆಯುತ್ತ
ಸುತ್ತ ನಿಂತಿದ್ದಾರೆ
ಮಂತ್ರಿ ಮಾಗಧರು
ಮಾರು ದೂರದಲಿ ಮಂದಿ

ಎಲ್ಲ ಹೋ ಎನ್ನುತ್ತಿದ್ದಾರೆ
ಸಾಯಲಿ ಪರದೆಯೂ ಬೀಳುತ್ತಿಲ್ಲ
ನಿರ್ಗಮಿಸಲೇ?
ಸಂಭಾಷಣೆಯೇ ಮುಗಿದಿಲ್ಲ!
ಇರುವ ಶಕ್ತಿಯ ಕೂಡಿಸಿ
ಹೂಂಕರಿಸಿದರೆ
ಇಲ್ಲ ಯಾರಿಗೂ ಕೇಳುತ್ತಿಲ್ಲ
ನಾಟಕದ ಮಾತು ಸುಲಭವಲ್ಲ






‘ ಅಸಹಜ ಇದ್ದರೂ ಸಹಜ ಗತಿಗೆ ಹೊಂದಿಸಿ’ ‘ ಹೊಕ್ಕಳಿನ ಮಾತು ಎದೆಯಲ್ಲಿ’ ಇವು ಈ ಕವಿತೆಗೆ ಕಳೆ ಕೊಟ್ಟಿವೆ