‘ಮಾಸಂಗಿ’ ಎಂಬ ಮಕ್ಕಳ ಆಸ್ತಿ..

 ಶರಣಬಸವ.ಕೆ.ಗುಡದಿನ್ನಿ

‘ಮಾಸಂಗಿ’ ಎಂಬ ಹೆಸರೇ ನನ್ನನ್ನ ಆ ಪುಸ್ತಕ ಎತ್ತಿಕೊಳ್ಳುವಂತೆ ಮಾಡಿತು. ಹಂಗಂದ್ರೆ ಏನಿರಬೌದು? ಅಂತ ಪುಸ್ತಕದ ಹೆಸರು ಕೇಳಿದಾಗಿನಿಂದ ಪುಸ್ತಕ ಕೈಸೇರೋವರೆಗೆ ತಲೆ ಕೆರೆದುಕೊಂಡು ಯೋಚಿಸಿದ್ದೆ! ‘ಮಹಾಶೃಂಗ’ ಎಂಬುದಾಗಿದ್ದ ಮಸ್ಕಿಯ ಮೂಲ ಹೆಸರು ಕಾಲಂತರದಲ್ಲಿ ಮಾಸಂಗಿಪುರ, ಮಾಸಂಗಿ, ಮೊಸಗಿ, ಮಸಗಿ ಆಗಿದ್ದರ ಕುರುಹಾಗಿ ಮತ್ತು ಸರಕಾರಿ ಶಾಲೆಯ ಮಕ್ಕಳ ‘ಮಾಸಿದ ಅಂಗಿ’ಯ ದ್ಯೋತ್ಯಕವಾಗಿ ಆ ಶೀರ್ಷಿಕೆ ಆಯ್ಕೆ ಮಾಡಲಾಯಿತೆಂದು ಕೃತಿಯ ಸಂಪಾದಕರಾದ ಗುಂಡುರಾವ ದೇಸಾಯಿಯವರು ಪುಸ್ತಕದ ಆರಂಭದಲ್ಲಿ ಬರೆದ ‘ಮಾಸಂಗಿ ಓದುವ ಮುನ್ನ’ ಬರಹ ಓದಿ ಸ್ಪಷ್ಟವಾಯಿತು.

ಮಾಸಂಗಿ ಹೆಸರಿಗೆ ಒಪ್ಪುವಂತಹ ಅಂದದ ಮುಖಪುಟವನ್ನ ಕೃಷ್ಣಮೂರ್ತಿ ಟಿ.ಎನ್ ರಚಿಸಿ ಪುಸ್ತಕದ ಮೆರಗನ್ನ ಹೆಚ್ಚಿಸಿದ್ದಾರೆ ನಮ್ಮ ಭಾಗದ ಜನಪ್ರಿಯ ಮಕ್ಕಳ ಸಾಹಿತಿಗಳಾದ ಶ್ರೀ ಅಯ್ಯಪ್ಪಯ್ಯ ಹುಡಾ ಬೆನ್ನುಡಿ ಬರೆದು ‘ಓದುಗನ್ನಡಿ’ ಒದಗಿಸಿದ್ದಾರೆ. ಇನ್ನೂ ಮಕ್ಕಳ ಕೃತಿಗಳನ್ನ ಹುಡುಕುತ್ತಿದ್ದ ನನಗೆ ಸ್ವತಃ ಮಕ್ಕಳೇ ಬರೆದ ಪುಸ್ತಕ ಸಿಕ್ಕಿದ್ದು ಅದೃಷ್ಟವೇ ಸರಿ! ಯಾಕೆಂದರೆ ನಾವೆಷ್ಟೇ ಪರಕಾಯ ಪ್ರವೇಶ ಮಾಡಿ ಬರೆದರೂ ‘ಮಕ್ಕಳಾಗುವದಿಲ್ಲ!’ ಮಕ್ಕಳೆದೆಯೊಳಗಿನ ಮುಗ್ದತೆಯ ಆಳಕ್ಕೆ ಯಾರೂ ‘ಇಳಿಯಲಾಗುವದಿಲ್ಲ!’ ವಿಮರ್ಶೆಯ ಗುಂಗಿನಲಿ ಒಮ್ಮೆಲೇ ಈ ಪುಸ್ತಕದ ಕತೆಗಳೊಳಗೆ ಮುಖ ತೂರಿಸಿದ್ದರೆ ನನಗೆ ಸ್ವಲ್ಪ ಮಟ್ಟಿನ ನಿರಾಶೆ ಆಗುತ್ತಿತ್ತೇನೋ! ಆದರೆ ಡಯಟ್ ಪ್ರಾಚಾರ್ಯರ ಮುನ್ನುಡಿ, ಕೃಷ್ಣಮೂರ್ತಿ ಟಿ.ಎನ್ ರವರ ಪ್ರವೇಶಿಸುವಿಕೆಯ ಬರಹಗಳನ್ನ ಓದಿದ ಮೇಲೆ ಕೃತಿಯ ತೂಕ ಮತ್ತು ಅದಕ್ಕಾಗಿ ಪಟ್ಟ ಶ್ರಮ ಕಣ್ಣ ಮುಂದೆ ಬಂದು ಮಕ್ಕಳ ಕತೆ ಓದಲು ಮನಸು ಸಿದ್ಧವಾಯಿತು. ಪುಸ್ತಕದ ಅರ್ಪಣೆಯೂ ಸೊಗಸಾಗಿದೆ 125 ವರ್ಷ ಪೂರೈಸಿ ಸಾವಿರಾರು ಬದುಕುಗಳಿಗೆ ಬೆಳಕಾದ ‘ಮಸ್ಕಿಯ ಕೇಂದ್ರ ಶಾಲೆಗೆ’ ಪುಸ್ತಕವನ್ನ ಪ್ರೀತಿಯಿಂದ ಅರ್ಪಿಸಿದ್ದಾರೆ.

ಒಟ್ಟು 29 ಕತೆಗಳಿವೆ ಸಂಕಲನದಲ್ಲಿ. ಪ್ರತೀ ಕತೆಯೂ ಮುಗ್ದತೆಯಲ್ಲಿ ಅದ್ದಿ ತೆಗೆದಂತಿದೆ! ಕೆಲವು ಕತೆ ಓದಿದರೆ ನಗು ಬರುತ್ತದೆ, ಇನ್ನೂ ಕೆಲವು ಅಚ್ಚರಿ ಹುಟ್ಟಿಸುತ್ತವೆ, ಕೆಲವಂತೂ ಭಪ್ಪರೇ! ಎನಿಸಿ ಮೂಗಿನ ಮೇಲೆ ಬೆರಳಿಡಿಸುತ್ತವೆ. ಅರೇ ಈ ಮಕ್ಕಳ ವಯಸ್ಸಲ್ಲಿ ನಮಗೆಷ್ಟು ಕಲ್ಪನೆಗಳಿದ್ದವು ಅಂಗಳದಲ್ಲಿ ಹಾರಾಡುವ ‘ಜೂಮಿ’ ಹುಳುಗಳನ್ನ ಹೂತಿಟ್ಟು ಅದೆಷ್ಟು ರಾತ್ರಿ ನಿದ್ದೆಗೆಟ್ಟು ಅವು ಹಣವಾಗುತ್ತವೆ ಎಂದು ಕಾದೆವು! ನೋಟುಬುಕ್ಕಿನ ಒಡಲಲಿ ನವಿಲುಗರಿಯ ತೆಳು ಎಳೆಗಳನ್ನಿಟ್ಟು ಬರೆಯುವ ಕಲ್ಲಿನ ಪೆನ್ಸಿಲ್ಲನು ಪುಡಿಮಾಡಿ ಹಾಕಿ ಅವು ಮರಿ ಹಾಕುತ್ತವೆಂದು ಕಾಯ್ದೆವು ಬರೆದಿದ್ದರೆ ಇವತ್ತಿನ ಮಕ್ಕಳು ಬಾಯಿ ತೆರೆದುಕೊಂಡು ಓದುತ್ತಿದ್ದವು! ಆದರೆ ನಾವ್ಯಾರು ಬರೆಯಲಿಲ್ಲ ಯಾಕೆಂದರೆ ಕೈಹಿಡಿದು ಬರೆಸಲು ಗುಂಡುರಾವರಂತಹ ಥೇಟ್ ತಂದೆ ಮನಸ್ಸಿನ ಗುರು ದೊರೆಯಲಿಲ್ಲ.

ಇರುವ ಪದಗಳ ಮಿತಿ, ಸಮಯದ ಪರಿಮಿತಿಯಲ್ಲಿ ಇಪ್ಪತ್ತೊಂತ್ತು ಕತೆಗಳನ್ನ ಜಾಲಿಸಿ ವಿಮರ್ಶೆ ಮಾಡುವದು ಕಷ್ಟ ಸಾದ್ಯ! ಆದರೆ ಒಂದೇ ಬಳ್ಳಿಯ ಹೂಗಳಂತಿರುವ ‘ನನಗೆ ತಾಕಿದ’ ಕೆಲವು ಕತೆಗಳ ಕುರಿತಷ್ಟೇ ನಾನಿಲ್ಲಿ ದಾಖಲಿಸುತ್ತೇನೆ. ಆದರೆ ಪ್ರತೀ ಕತೆಯನ್ನೂ ಆಸಕ್ತಿಯಿಂದ ಓದಿದ್ದೇನೆ. ಸರಸ್ವತಿ ನಾಯಕ ಎಂಬ ಏಳನೇ ತರಗತಿಯ ಮಗು ಬರೆದ ‘ತುಂಟಿ ತುಂಗ’ ನನಗೆ ಬಹು ಹಿಡಿಸಿದ ಕತೆ. ನನ್ನ ಪ್ರಕಾರ ಬರೆಯುವ ಪ್ರತಿ ಜೀವಿಯ ಮೂಲ ‘ಕ್ವಾಲಿಟಿ’ ಎಂದರೆ “ಸ್ಪಂದನೆ ಮತ್ತು ಪ್ರತಿರೋಧ” ಪರಿಸ್ಥಿತಿ ನೊಂದವರ ಪರವಾಗಿದ್ದರೆ ಸ್ಪಂದಿಸುವ, ಆಳುವವರ ಪರವಾಗಿದ್ದರೆ ಪ್ರತಿರೋಧಿಸುವುದೆ ಬರೆಯುವಾತನ ಮುಖ್ಯ ಗುಣ. ಹುಲಿ ಜಿಂಕೆಯನ್ನು ಬೇಟೆಯಾಡುವಾಗ ಜಿಂಕೆಯ ಪರವಾಗಿ, ಮನುಷ್ಯ ಹುಲಿಯನ್ನ ಬೇಟೆಯಾಡುತ್ತಿದ್ದರೆ ಹುಲಿಯ ಪರವಾಗಿ ನಿಲ್ಲಬೇಕಾದದ್ದು ಬರೆಯುವಾತನ ಜವಾಬ್ದಾರಿಯೂ ಹೌದು.
ಏಕೆಂದರೆ ಬರಹವೆಂಬುದು ಔಷದಿಯಂತಹದು.
ಅವ್ವನ ಚಪ್ಪಲಿ ಹಾಕಿಕೊಂಡು ಅಂಗಡಿಗೆ ಹೊರಟ ಬೆರಿಕಿ ಹುಡ್ಗಿ ‘ತುಂಗ’ ರಸ್ತೆಯಲಿ ಎದುರಾಗಿ ಬೈಕಲಿ ಬಂದು ಧಿಮಾಕಿನ ಮಾತಾಡುವ ಶ್ರೀಮಂತನಿಗೆ ಮಾತಿನ ಮೂಲಕ ಚಾಟಿ ಬೀಸುತ್ತಾಳೆ. “ನಾವು ಶ್ರೀಮಂತರು ನೀವು ಬಡವರು ಅದಕ್ಕೇ ನೀ ನಡೆದುಕೊಂಡು ಹೋಗ್ತಿದೀಯಾ? ಅಂದಾತನಿಗೆ” ನಿನ್ನ ಕಾಲಲ್ಲಿ ನಿನ್ನ ಸೈಜಿನ ಚಪ್ಪಲಿ ಇದೆ. ಆದರೆ ನನ್ನ ಕಾಲಲಿ ನನ್ನ ಕಾಲಿಗಿಂತಲೂ ದೊಡ್ಡ ಚಪ್ಪಲಿ ಇದೆ ಹಾಗಾದರೆ ಯಾರು ಶ್ರೀಮಂತರು? ಅಂತ ಕೇಳಿ ಬಂಡೆಬ್ಬಿಸುತ್ತಾಳೆ! ತುಂಗಾಳ ತಕ್ಷಣದ ಪ್ರತಿಕ್ರಿಯೆ, ಹೆದರದೆ ತೋರಿದ ಪ್ರತಿಭಟನೆ,
ಸ್ವತಃ ಬಡತನವನ್ನ ಸಮರ್ಥಿಸಿಕೊಂಡ ರೀತಿ ನನಗೆ ಅಚ್ಚರಿಯ ಜೊತೆಗೆ ಆ ಮಗುವಿನ ಕುರಿತು ಅಭಿಮಾನವನ್ನ ಮೂಡಿಸಿತು.

ಇನ್ನೂ ನ್ಯಾಯಕ್ಕೆ ಜಯ ಕತೆಯಲ್ಲಿ ಗಾಳಿಪಟದ ಪರವಾಗಿ ನಿಂತ ಮೌನೇಶ, ಕಾಗೆ ಮತ್ತು ಪಾರಿವಾಳ ಕತೆಯಲ್ಲಿ ಕಾಗೆಯ ಮೇಲೆ ಮೃದು ಧೋರಣೆ ತಾಳುವ ಸಾನಿಯಾ ಪಾಷಾ ಭವಿಷ್ಯದಲ್ಲಿ ನೊಂದವರ ಪರವಾಗಿ ದ್ವನಿ ಎತ್ತುವ ಭರವಸೆ ಮೂಡಿಸುತ್ತಾರೆ. ಜೋಳದ ಹೊಲದಲ್ಲಿ ಕಾಳು ತಿನ್ನುವ ಗುಬ್ಬಿಗೆ ಕಲ್ಲು ಹೊಡೆದು ಮನೆಗೆ ಬಂದು ಮನೆಯ ಮುಂದಿನ ಮರದಲ್ಲಿ ಕಟ್ಟಿದ ಗೂಡಿನೊಳಗಿನ ಮರಿಗಳು ಚಿಂವ್ ಚಿಂವ್ ಎಂದು ಒದರುವ ಸಂಕಟ ನೋಡಿ ನಾನು ಕಲ್ಲೊಗೆದ ಗುಬ್ಬಿ ಇವುಗಳ ತಾಯಿಯೇ ಆಗಿರಬೇಕು ಎಂದು ಮರಗುವ ‘ಗುಬ್ಬಿ’ ಕತೆಯ ಅಕ್ಬರ್ ಇವತ್ತಿನ ದಿನಗಳಲಿ ಜರೂರಾಗಿ ಬೇಕಿರುವ ಮಾನವೀಯತೆಯ ಮಹತ್ವನ್ನ ಪುಟ್ಟ ಕತೆಯ ಮೂಲಕ ನಮಗೆ ಕಲಿಸುತ್ತಾನೆ.

‘ವಿದ್ಯೆಯ ಮಹತ್ವ’ ಹೇಳುವ ‘ಆ ಹುಡುಗಿ’ ಕತೆಯ ಜಾನಕಿ, ಸೈನಿಕನಾಗುವ ಕನಸನ್ನ ಮೂಲಕ ಕಟ್ಟಿಕೊಡುವ ಎಚ್.ಸಿ.ಸಾಗರ, ಕುಡಿತದ ದುಷ್ಪರಿಣಾಮ ಹೇಳುವ ‘ಪಶ್ಚತ್ತಾಪ’ ಕತೆಯ ರಾಧಿಕಾ ಇವರುಗಳ ಕತೆ ಓದುತ್ತಿದ್ದಂತೆ ಈ ಮಕ್ಕಳಿಗೆ ಕತೆ ಕಟ್ಟುವ ಕಲೆ ಆಗಲೇ ಕೈ ಹಿಡಿದಿದೆ ಎನಿಸದಿರದು. ನನ್ನನ್ನ ಬಹುವಾಗಿ ಕಾಡಿದ ಇನ್ನೊಂದು ಕತೆಯೆಂದರೆ ಏಳನೆಯ ತರಗತಿಯ ಅಂಬಿಕಾ ಬರೆದ ‘ಸಾಲ’ ಕತೆ. ಮಧ್ಯಮ ವರ್ಗದ, ಬಡವರ ಬದುಕಿನುದ್ದಕ್ಕೂ ಬೇತಾಳದಂತೆ ಕಾಡುವ ಸಾಲದ ಚಿತ್ರ ನಮ್ಮ ಮಕ್ಕಳ ಎದೆಯಲ್ಲಿ ಅಚ್ಚೊತ್ತಿರಲಿಕ್ಕೂ ಸಾಕು.
ಅಚ್ಚರಿಯೆಂದರೆ ಆ ಮಗು ತನ್ನ ಕತೆಯಲ್ಲಿ ಬರೀ ಸಾಲದ ಕುರಿತಾಗಿ, ಅದರಿಂದೊದಗುವ ಬವಣೆಯ ಕುರಿತಾಗಿಯಷ್ಟೇ ಹೇಳುವುದಿಲ್ಲ ಇದ್ದ ಅಂಗೈ ಅಗಲದ ಹೊಲ ಮಾರದೆ ಸಾಲ ಮುಟ್ಟಿಸುವ ಹೊಸ ದಾರಿಯನ್ನ ತೋರಿಸುತ್ತಾಳೆ! ಒಂದು ಕತೆಯ ಸಾದ್ಯತೆ ಅಂದರೆ ಅದು. ಬದುಕಿನ ಕುರಿತಾದ ಹೊಸದೊಂದು ಹೊಳಹನ್ನ ಗುರುತಿಸುವುದು ಅದನ್ನ ಅಂಬಿಕಾ ಸಾಧಿಸುತ್ತಾಳೆ ಆ ಮೂಲಕ ಕಾಲಾನುಕಾಲದಿಂದ ಕಗ್ಗಂಟಾಗಿದ್ದುದನ್ನ ತನ್ನ ಎಳೆಯ ಬೆರಳುಗಳಿಂದ ಬಿಚ್ಚಿ ನಮ್ಮನ್ನೆಲ್ಲ ಬೆರಗುಗೊಳಿಸುತ್ತಾಳೆ.

ಸಂಕಲನದಲ್ಲಿರುವ ಕೆಲವೊಂದಿಷ್ಟು ಕತೆಗಳು ತೀರಾ ‘ಬಾಲಿಶ’ವೆನಿಸಿದರೂ ಕಲಿಕೆಯಲ್ಲಿ ಹಿಂದುಳಿದ ಮಕ್ಕಳೂ ಕಾಗುಣಿತ ತಪ್ಪಾದರೂ ಬರೆಯಲು ತೊಡಗಿದರು ಎಂಬಂತಹ ಅಂಶಗಳನ್ನ ನಾವಿಲ್ಲಿ ಗಮನಿಸಿ ಮನಸು ದೊಡ್ಡದು ಮಾಡಿಕೊಳ್ಳಬೇಕು. ಪುಟ್ಟ ಪುಟ್ಟ ಹೆಜ್ಜೆ ಇಟ್ಟಾಗಲೇ ಹಿಮಾಲಯದಂತಹ ಬೆಟ್ಟ ನಮ್ಮ ಕಾಲಡಿಗೆ ಬಂದು ಬೀಳುವದು. ಆದರೆ ಇಡುವ ಪ್ರತೀ ಹೆಜ್ಜೆಯಲೂ ಉಕ್ಕುವ ವಿಶ್ವಾಸವಿರಬೇಕು ಜೊತೆಗೆ ಸರಿಯಾದ ಮಾರ್ಗದರ್ಶಕರೆಂಬ ಊರುಗೋಲು ಇದ್ದರಂತೂ ಬೆಟ್ಟ ಹತ್ತುವದು ಅದೆಷ್ಟರ ಮಾತು! ಸೋ ‘ರೈತನ ಮಗ’ ಕತೆ ಬರೆದ ಅವಿನಾಶ, ‘ಮಳೆ-ಕ್ರಿಕೆಟ್’ನಲಿ ಥ್ರಿಲ್ ಹುಟ್ಟುಹಾಕಿದ ಮಲ್ಲಯ್ಯ, ‘ಫೂಲ್ ಆದ ಮಕ್ಕಳು’ ಕತೆ ಬರೆದ ಚೈತ್ರ, ‘ಹುಡುಗ ಮತ್ತು ನಾಯಿ’ ಕತೆಯ ದಾವಲ ಮುಂದಿನ ದಿನಗಳಲ್ಲಿ ಹುಬ್ಬೇರಿಸುವಂತಹ ಕತೆ ಬರೆಯಲೂಬಹುದು. ನಾವು ಬರೆಯಲು ಸನ್ನಿವೇಶ ಸೃಷ್ಟಿಸಬೇಕಷ್ಟೆ.

‘ಗೌಡೂರಿನ ಗೌಡರ ಕೋಳಿ’ ಕತೆ ಬರೆದ ಮೌನೇಶನ ಪ್ರತಿಭೆ ನನಗೆ ವಿಭಿನ್ನವಾಗಿ ಕಾಣುತ್ತದೆ. ಯಾಕೆಂದರೆ ವಯಸ್ಸಿಗೂ ಮೀರಿದ ಕಲ್ಪನೆ, ಹಳಿತಪ್ಪದಂತೆ ಅದನ್ನ ಕತೆಯಾಗಿ ಬೆಳೆಸುವ ಪರಿ ಮತ್ತು ‘ಈ ಜಗದಲ್ಲಿ ಪ್ರತಿ ಜೀವಿಗೂ ಬದುಕುವ’ ಹಕ್ಕಿದೆ ಅಂತ ಪ್ರತಿಪಾದಿಸುವ ‘ಮೆಚ್ಯುರಿಟಿ’ ಸೋಜಿಗವನ್ನುಂಟು ಮಾಡುತ್ತದೆ. ‘ಹೊರಸಂಚಾರ’ ದಂತಹ ದೊಡ್ಡ ಕ್ಯಾನ್ವಾಸಿನ ಚಂದ್ರಸಿಂಗ್, ‘ಆಶ್ರಯ ಕೊಟ್ಟ ಆಲದ ಮರ’ ಕತೆ ಬರೆದ ಸಂಗೀತಾ, ‘ಬಯಲು ಶೌಚಾಲಯ’ದ ಪರಶುರಾಮ ಮೌನೇಶನ ಪಡಿಯಚ್ಚಿನಂತೆ ಕಾಣಿಸುತ್ತಾರೆ. ಕತೆಗಳ ಉದ್ದಕ್ಕೂ ಅವರು ಬಳಸಿದ ಸಂಭಾಷಣೆಗಳು ಭಾಷೆಯ ಮೇಲೆ ಮಕ್ಕಳಿಗಿರುವ ಹಿಡಿತವನ್ನ ತೋರಿಸುತ್ತವೆ.

ಇಷ್ಟೆಲ್ಲ ಹೊಗಳಿದ ಮೇಲೂ ಮಕ್ಕಳಿಗೆ ಹೊಂದಿಷ್ಟು ಸಲಹೆ ಕೊಡಬಹುದು. ನನ್ನ ಪ್ರಕಾರ ಕತೆಯಾಗಲಿ, ಕವಿತೆಯಾಗಲಿ ನಮ್ಮದೇ ಬದುಕಲಿ ಕಂಡುಂಡದನ್ನೇ ಬರೆದರೆ ಅದು ಅತಿಹೆಚ್ಚು ಜೀವಂತಿಕೆಯಿಂದ ಕೂಡಿರುತ್ತದೆ. ಆ ಪ್ರಯತ್ನವನ್ನು ಮಕ್ಕಳು ಮಾಡಬೇಕು. ತಾವು ದಿನನಿತ್ಯ ಕಾಣುವ ಸಂತೆ, ಜಾತ್ರೆ, ಹಬ್ಬ ಹರಿದಿನ, ಬೈಗುಳ, ರೊಚ್ಚು, ಕಕ್ಕುಲಾತಿ ಮುಂತಾದವುಗಳ ಕುರಿತು ತಮ್ಮದೇ ರೀತಿಯಲಿ ಬರೆಯಲು ತೊಡಗಬಹುದು. ಆದರೆ ಕತೆಯೆಂಬುದು ಉಡಲಿರುವ ಅಂಗಿಯಂತೆ ಪ್ರತೀ ಭಾಗವೂ ಮಟ್ಟಸವಾಗಿದ್ದರೆ ಮಾತ್ರ ಉಡಲು ಚೊಲೊ. ಕತೆಯ ಆರಂಭ, ಬೆಳೆಸುವಿಕೆ, ಬಳಸಿದ ಭಾಷೆ, ಕಟ್ಟಿಕೊಡುವ ವಾತಾವರಣ ಪರಸ್ಪರ ಪೂರಕವಾಗಿರಬೇಕು. ನೀವು ಹಳ್ಳಿಗಾಡಿನ ಕತೆ ಹೇಳಹೊರಟಿದ್ದರೆ ಹಳ್ಳಿಯವರು ಉಣ್ಣುವುದರಿಂದ ಹಿಡಿದು ಆಡುವ ಮಾತು, ಉಡುವ ಬಟ್ಟೆಯವರೆಗೂ ನಿಮಗೆ ನಿಗಾ ಇರಬೇಕು ಅಂದಾಗಲೇ ನೀವೊಂದು ಕತೆಯನ್ನು ಚಂದವಾಗಿ ಕಟ್ಟಬಲ್ಲಿರಿ.

ಈ ಕಥಾಸಂಕಲನ ಇನ್ನೊಂದು ಮಿತಿಯೆಂದರೆ ಆ ಕತೆಗಳ ಗಾತ್ರ ಕೆಲವೊಂದು ಕತೆಯಂತೂ ತೀರ ಚಿಕ್ಕದು ಎನಿಸಿಬಿಡುತ್ತದೆ ಇದನ್ನು ನಾವು ಗಮನಿಸಲೇಬೇಕು ಯಾಕೆಂದರೆ ಈ ‘ಮಾಸಂಗಿ’ ಪುಸ್ತಕ ಇವತ್ತಿನದು ಮಾತ್ರವಲ್ಲ! ಅದೊಂದು ದಾಖಲೆಯಾಗಿ ಮುಂದಿನ ಪೀಳಿಗೆಗೆ ರವಾನಿಸಲ್ಪಡುತ್ತದೆ. ಅದರ ಒಡಲೊಳಗೆ ಒಂದಿಷ್ಟು ಜಾಸ್ತಿ ಸೃಜನಶೀಲತೆಯ ಸರಕು ತುಂಬಿಕೊಂಡಿದ್ದರೆ ಓದಿದವರು ಹೊಟ್ಟೆ ತುಂಬಿಸಿಕೊಂಡಾರೆಂಬ ಆಸೆಯಷ್ಟೇ.

ಒಟ್ಟಿನಲಿ ‘ಮಾಸಂಗಿ’ ಎಂಬ ಮಕ್ಕಳೇ ಬರೆದ ಮಕ್ಕಳ ಕತೆಗಳ ಪುಸ್ತಕದ ಮಹತ್ವ ತುಂಬಾ ದೊಡ್ಡದು. ಕನಸಲಿ ಮೂಡಿದ ಕಾಮನಬಿಲ್ಲನು ಹಾಳೆಗಿಳಿಸುವಷ್ಟೇ ತ್ರಾಸದಾಯಕವಾದ ಕೆಲಸವನ್ನ ಇಲ್ಲಿ ಹೂ ಎತ್ತಿದಷ್ಟೇ ಸರಳವಾಗಿ ಕೈಗೊಂಡಿದ್ದಾರೆ. ಆ ನಿಟ್ಟಿನಲ್ಲಿ ಕತೆ ಬರೆದ ಮಕ್ಕಳು, ಸಂಪಾದಿಸಿದ ಶಿಕ್ಷಕರು, ಪ್ರೋತ್ಸಾಹಿಸಿದ ಇಲಾಖೆ, ಸಂಸ್ಥೆ ಮತ್ತು ಪ್ರಕಟಣೆಗೆ ನೆರವಾದ ಸಕಲರು ಅಭಿನಂದನಾರ್ಹರು.

‍ಲೇಖಕರು nalike

August 10, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: