ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಾಯಕಾರನಿಗೆ….

ಡಾ. ಪದ್ಮಿನಿ ನಾಗರಾಜು

ಅಪರಿಚಿತ ಪರಿಚಿತನಾಗುವ
ಪರಿಚಿತ ಅಪರಿಚಿತನಾಗುವ
ಕಂಡೂ ಕಾಣದಂತೆ
ನೋಡಿಯೂ ನೋಡದಂತೆ
ಮಾತು ಮೌನವಾದಂತೆ
ಮೌನ ಮಾತಾಗುವುದೇ
ಮೈದಾನದಲಿ?

ಅಪ್ಪನ ಪಿಂಡದ
ನಾಲ್ಕು ಅಗಳಿಗೆ
ಕಾಕಾ ಎಂದದ್ದು
ಹೋದ ವರುಷದ್ದೇ
ಅದೇ ಕಾಗೆಯಾ?
ಬೇರೆಯಾ?

ನಕ್ಕರೆ ನಗುವನ್ನು
ಬಯಸುವುದು ಸಹಜಾಸೆ
ನಗುವುದದೆಷ್ಟು ಕಷ್ಟ?
ಹೃದಯ ತಟ್ಟದಿದ್ದರೂ
ತಟ್ಟಿದಂತೆ ಮುಟ್ಟಿದಂತೆ
ನಟಿಸುವುದೆಷ್ಟು ಕಷ್ಟ?

ಹೇಳುವ ಮಾತೆಲ್ಲ
ಕೇಳುವಂತೆ ನಟಿಸುವ
ತನ್ನದಲ್ಲದ ಮಾತಿಗೆ
ಅಕ್ಷರದ ಹಾದರದ
ಕತೆಯೆಣೆದು ನಂಬಿಸಿ
ಬಿಂಬಿಸಿ ಚುಂಬಿಸಿ
ಬೆತ್ತಲಾಗಿಸುವವರ
ನಂಬುವುದದೆಂತು?

ಮರ್ಮ ಅರಿತೊಡೆ
ಕರ್ಮ ಬೆಂಬಿಡದು
ಮೈಥುನದ ಸುಖ
ಅನುಭವದಲಿ ಅರಿತು
ಮಸ್ತಕದಿ ಬಂದ ನಿಧಿಯ
ಚಿತ್ತದಾ ಕುಲುಮೆಯಲಿ
ಸುಟ್ಟಾಗಲೇ ವಿಷಕ್ಕೆ
ಅಮೃತದ ಬೆಲೆ
ತಿಳಿವುದು

ಮನದ ಸಾಕ್ಷಿಗೆ
ಲೌಕಿಕದ ಬದುಕಿಗೆ
ಬಣ್ಣ ಹಾಕಿ
ಮಾಲೆ ಕಟ್ಟುವ
ಮಾಯಾಕಾರನ
ಸತ್ಯಕ್ಕೆ ಆಕಾರ
ಮೂಡಿದರೆ
ಕಾಮನಬಿಲ್ಲು
ನಿಲ್ಲುವುದೇ ಸದಾ?

‍ಲೇಖಕರು Avadhi

31 October, 2020

1 Comment

  1. ನೂತನ

    ಪದ್ಮಿನಿ,
    ಬೂಟಾಟಿಕೆಗೆ , ಅಸಹಜತೆಗೆ ಚಂದದ ಅಂಗಿ ಹೊಲಿದಿದ್ದಿ..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading