‘ಹೆಣ್ಣು’ ( ಔರತ್)

ಖ್ಯಾತ ರಂಗಕರ್ಮಿ ಸಫ್ದರ್ ಹಷ್ಮಿ ಬದುಕಿನ ಗಾಥೆ ‘ಹಲ್ಲಾ ಬೋಲ್ ‘ನಿನ್ನೆ ಬಿಡುಗಡೆಯಾಗಿದೆ.

ಜನಮ್ ತಂಡ ನಾಟಕ ಪ್ರದರ್ಶಿಸುತ್ತಿದ್ದಾಗಲೇ ದಾಳಿ ಮಾಡಿದ ರಾಜಕೀಯ ಗೂಂಡಾಗಳು ಸಫ್ದರ್ ಹಷ್ಮಿಯ ಸಾವಿಗೆ ಕಾರಣರಾದರು.

‘ಜನಮ್’ನ ಅತ್ಯಂತ ಜನಪ್ರಿಯ ನಾಟಕ ‘ಔರತ್’ ಅನ್ನು ಇನ್ನೊಬ್ಬ ರಂಗಕರ್ಮಿ ಕಿರಣ್ ಭಟ್ ಕನ್ನಡಕ್ಕೆ ತಂದಿದ್ದಾರೆ. ಇಲ್ಲಿದೆ-

ಮೂಲ: ಮಾರ್ಝಿ ಅಹ್ಮದಿ ಒಸ್ಕೂಯಿ

ಇಂಗ್ಲೀಷಿಗೆ: ಕೇಶವ್ ಮಲಿಕ್

ನಾಟಕಕ್ಕಾಗಿ ರೂಪಾಂತರ : ಸಫ್ದರ್ ಹಷ್ಮಿ

ಕನ್ನಡದಲ್ಲಿ : ಕಿರಣ್‌ ಭಟ್‌

‘ಹೆಣ್ಣು’ ( ಔರತ್)

ಎಂಭತ್ತರ ದಶಕದಲ್ಲಿ ರಚಿತವಾದ ಈ ನಾಟಕ ‘ಜನ ನಾಟ್ಯಮಂಚ್’ ದ ಪ್ರಮುಖ ನಾಟಕಗಳಲ್ಲೊಂದು. ಹಲವು ಸಾವಿರ ಪ್ರದರ್ಶನಗಳನ್ನು ಕಂಡಿದೆ. ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾಗಳಲ್ಲಿಯೂ ಪ್ರದರ್ಶಿತವಾಗಿದೆ.

SEAGULL THEATRE QUARTERLY ಯಲ್ಲಿ ಈ ನಾಟಕವನ್ನೋದಿದ ನಾನು ತುಂಬ ಪ್ರಭಾವಿತನಾಗಿ 1998 ರಲ್ಲಿ ಕನ್ನಡಕ್ಕೆ ಅನುವಾದಿಸಿದ ನಾಟಕ ಇದು.
.
‘ ಹೆಣ್ಣು’

‘ನಾನೊಬ್ಬ ಹೆಣ್ಣು’ ಕವನದೊಂದಿಗೆ ಈ ನಾಟಕ ಪ್ರಾರಂಭವಾಗುತ್ತದೆ. ಮೂಲದಲ್ಲಿ ಈ ಪದ್ಯ ರಚಿತವಾದದ್ದು ‘ಮಾರ್ಝಿ ಅಹ್ಮದಿ ಒಸ್ಕೂಯಿ’ ಯವರಿಂದ. ಆಕೆ ಶಿಕ್ಷಕಿ, ಕ್ರಾಂತಿಕಾರಿ. ಇರಾನ್ ನ ಮೂಲಭೂತವಾದಿ ಶಕ್ತಿಗಳಿಂದ ಹತ್ಯೆಯಾದವರು.ಕೇಶವ್ ಮಲಿಕ್ ರಿಂದ ಇಂಗ್ಲೀಷಿಗೆ ಭಾಷಾಂತರಿಸಲ್ಪಟ್ಟ ಈ ಕವನವನ್ನ ಸಫ್ದರ್ ಹಷ್ಮಿ ನಾಟಕಕ್ಕಾಗಿ ರೂಪಾಂತರಿಸಿಕೊಂಡಿದ್ದಾರೆ.

ಒಂದು ವೃತ್ತಾಕಾರದ ಜಾಗೆ. ಹೆಗಲಿಗೆ ಹೆಗಲು ಕೂಡಿಸಿ ಒಂದು ವೃತ್ತರಚಿಸಿದೆ. ಆರು ಜನ ನಟರು ಒಂದು ಭಾಗದಿಂದ ಪ್ರವೇಶಿಸುತ್ತಾರೆ. ಮಧ್ಯೆ
ಬಂದು ನಿಲ್ಲುತ್ತಾರೆ. ಪ್ರೇಕ್ಷಕರಿಗೆ ಅಭಿಮುಖವಾಗಿ ಕುಳಿತುಕೊಳ್ಳುತ್ತಾರೆ. ನಟಿ ಮಧ್ಯೆ ನಿಂತಿದ್ದಾಳೆ.

ನಟಿ: ನಾನೊಬ್ಬ ತಾಯಿ,ಒಬ್ಬ ಅಕ್ಕ. ಒಬ್ಬ ಮಗಳು ಮತ್ತು ವಿಧೇಯ ಹೆಂಡತಿ.

ನಟ೧: ಅನಾದಿ ಕಾಲದಿಂದ ಸುಡುವ ಮರುಭೂಮಿಯಲ್ಲಿ ಬರಿಗಾಲಲ್ಲಿ ಅಲೆದವಳು. ಒಬ್ಬ ಹೆಣ್ಣು.

ನಟಿ : ಈ ದೇಶದ ದೂರದ ಹಳ್ಳಿಗಳವಳು ನಾನು

ನಟ ೨– ಎಷ್ಟೋ ಕಾಲದಿಂದ ಭತ್ತದ ಗದ್ದೆಗಳಲ್ಲಿ, ಚಹದ ತೋಟಗಳಲ್ಲಿ ಶಕ್ತಿ ಮೀರಿ ಮಿತಿ ಮೀರಿ ದುಡಿದವಳು.

ನಟಿ– ಬಿರಿದ ಗದ್ದೆಗಳಲ್ಲಿ ಬಡಕಲು ಎತ್ತುಗಳೊಂದಿಗೆ ಮತ್ತೆ ಮತ್ತೆ ನೋವುಣ್ಣುತ್ತ ಉದಯದಿಂದ ಅಸ್ತದವರೆಗೂ ದುಡಿದವಳು

ನಟ ೩: ಬೆಟ್ಟಗಳಲ್ಲಿ ಮಗುವನ್ನು ಹೆರುತ್ತ ಕತ್ತಲ ಕಣಿವೆಗಳಲ್ಲಿ ಕುರಿಮರಿಗಳನ್ನು ಕಳೆದುಕೊಳ್ಳುತ್ತ ಮೌನವಾಗಿ ರೋಧಿಸಿದವಳು.

ನಟಿ: ನಾನೊಬ್ಬ ಹೆಣ್ಣು.

ನಟ ೪: ಈ ನನ್ನ ಕೈಗಳು ದೈತ್ಯಾಕಾರದ ಮಿಲ್ಲುಗಳ ಯಂತ್ರಗಳನ್ನು ತಿರುಗಿಸುತ್ತವೆ. ರಕ್ತ ಹರಿಸುತ್ತವೆ. ಉಳ್ಳವರ ಖಜಾನೆಗಳನ್ನು ತುಂಬುತ್ತವೆ.

ನಟಿ – ನಿಮ್ಮ ನಾಚಿಕೆಗೇಡು ಮಾತಿನ ಪೆಟ್ಟಿಗೆಯಲ್ಲಿ…

ನಟ ೫: ಇಂಥ ಮಹಿಳೆಯ ಕುರಿತು ಶಬ್ಬಗಳೇ ಇಲ್ಲ. ನಿಮ್ಮ ಶಬ್ದಗಳು ಆಕೆಯ ಮಹತ್ವದ ಕುರಿತು ಮಾತನಾಡುವದಿಲ್ಲ. ಏನಿದ್ದರೂ ನೀವು ಹೇಳುವದು ಕೈ ಮಣ್ಣು ಮಾಡಿಕೊಳ್ಳದ ನವಿರಾದ ಮೈಯು ಮಾಟದ ದೇಹದ ಪರಿಮಳ ಕೂದಲ ಕೋಮಲಿಯರ ಕುರಿತು.

ನಟಿ – ನಾನೊಬ್ಬ ಹೆಣ್ಣು

ನಟ ೬: ನೋವುಗಳ ಚೂರಿಗಳಿಂದ ಕೈಗಳು ಗಾಯವಾಗಿರುವ, ನಿಲ್ಲದ ದುಡಿಮೆಯಿಂದ ಮೈ ಮನಗಳನ್ನು ಮುರಿಸಿಕೊಂಡ ಮಹಿಳೆ ನಾನು, ನನ್ನ ತೊಗಲಿನಲ್ಲಿ ಮರುಭೂಮಿಯ ಸುಡು ಗಾಯಗಳಿವೆ. ಕೂದಲಲ್ಲಿ ಮಿಲ್ಲಿನ ಹೊಗೆಯ ವಾಸನೆಯಿದೆ.

ನಟಿ– ಆದರೆ ನಾನೊಬ್ಬ ಸ್ವತಂತ್ರ ಹೆಣ್ಣು(ಗಟ್ಟಿಯಾಗಿ)

ನಟ ೧- ಪುರುಷ ಸಗಾತಿಗಳೊಳೊಂದಿಗೆ ಹೆಗಲಿಗೆ ಹೆಗಲು ಸೇರಿಸಿ ಗದ್ದೆಗಳನ್ನು ದಾಟುವ ಹೆಣ್ಣು.

ನಟ೨: ಕಾರ್ಮಿಕರ ಬಲಶಾಲಿ ತೋಳುಗಳನ್ನ ಸೃಷ್ಟಿಸಿದ ರೈತರ ರಟ್ಟೆಗಳನ್ನು ಗಟ್ಟಿ ಮಾಡಿದ ಹೆಣ್ಣು.

(ನಟರೆಲ್ಲ ಕುಳಿತಲ್ಲಿಯೇ ಇರುತ್ತಾರೆ. ನಟಿ ಆವರ ನಡುವೆ ಓಡಾಡುತ್ತ ಹೇಳುತ್ತಾಳೆ.)

ನಟಿ- ನಾನೊಬ್ಬ ಕಾರ್ಮಿಕ , ಒಬ್ಬ ರೈತಳೂ ಕೂಡ.ನನ್ನೆದೆಯಲ್ಲಿ ಅಸಾಧ್ಯ ನೋವಿದೆ, ಧಮನಿಗಳ ರಕ್ತದಲ್ಲಿ ಉರಿಯಿದೆ. ಆದರೆ ನೀವು ನನ್ನ ಹಸಿವನ್ನು ಭ್ರಮೆ ಎನ್ನುತ್ತೀರಿ, ನನ್ನಂಥ ಹೆಣ್ಣಿನ ಕುರಿತು ನಿಮ್ಮ ನಾಚಿಕೆಗೇಡು ಮಾತಿನ ಪೆಟ್ಟಿಗೆಯಲ್ಲಿ ಶಬ್ದಗಳೇ ಇಲ್ಲ.

(ಉಳಿದ ನಟರು ಒಬ್ಬರ ಕಡೆ ಒಬ್ಬರು ಮುಖಮಾಡಿ ತಿರುಗಿ ಕುಳಿತಿದ್ದಾರೆ)

ನಟ೩: ಗಾಯಗೊಂಡ ಹೃದಯವನ್ನ ಎದೆಯಲ್ಲಿಟ್ಟುಕೊಂಡ ಹೆಣ್ಣು. ಆಕೆಯ ಕಣ್ಣುಗಳಲ್ಲಿ ಬಿಡುಗಡೆಯ ಕೆಂಪು ನೆರಳುಗಳಿವೆ. ಸಾವಿರ ಸಾವಿರ ವರ್ಷ ದುಡಿದ, ನೋವುಂಡ ಕೈಗಳು ಬಿಡುಗಡೆಯ ಧ್ವಜವನ್ನು ಎತ್ತಿ ಹಾರಿಸಲು ಕಲಿತಿವೆ.

(ನಟಿ ಬಿಡುಗಡೆಯ ಧ್ವಜವನ್ನೆತ್ತಿ ಹಾರಿಸುತ್ತಾಳೆ)

ನಟಿ -ಸ್ವತಂತ್ರ ಹೆಣ್ಣು ನಾನು.

‍ಲೇಖಕರು Avadhi

October 31, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: