12 ಚಾಪ್ಟರ್ ಪುಸ್ತಕದಲ್ಲಿ ಬಾರ್ಸಿಲೋನಾದ 3 ವರ್ಷಗಳ ಚರಿತ್ರೆ ಅಡಗಿದೆ

ಈಕೆ ‘ಜಯನಗರದ ಹುಡುಗಿ’.ಹಾಗಂತ್ಲೆ ಫುಲ್ ಫೇಮಸ್ಸು. ಈಕೆ ಬರೆಯುತ್ತಿದ್ದ ‘ಜಯನಗರದ ಹುಡುಗಿ’ ಅಂಕಣ ಹಾಗೂ ಆನಂತರ ಅದೇ ಹೆಸರಲ್ಲಿ ಬಂದ ಪುಸ್ತಕದಿಂದಾಗಿ ಈಕೆ ಬಾರ್ಸಿಲೋನದಲ್ಲಿ ಇದ್ದರೂ, ಬೆಂಗಳೂರೆಂಬ ಮಾಯಾ ನಾಗರಿಯಲ್ಲಿದ್ದರೂ ಈಕೆ ‘ಜಯನಗರದ ಹುಡುಗಿ’ ಮಾತ್ರ.

ಯಂತ್ರಗಳಿಗೆ ಮಾತು ಕಲಿಸುವ Artificial Intelligence ಕ್ಷೇತ್ರದ ಈ ಎಂಜಿನಿಯರ್ ತಂದೆ ಸುಧೀಂದ್ರ ಹಾಲ್ದೊಡ್ಡೇರಿ, ತಾತ, ಖ್ಯಾತ ಪತ್ರಕರ್ತ ಎಚ್ ಆರ್ ನಾಗೇಶರಾವ್ ಅವರಿಂದ ಪಡೆದದ್ದು ಬಹಳಷ್ಟು.

ಪ್ರಸ್ತುತ ಬಾರ್ಸಿಲೋನಾದಲ್ಲಿ ತಾವು ಕೆಲಸ ಮಾಡುತ್ತಿದ್ದ ಅವಧಿಯಲ್ಲಿ ಕಂಡ ನೋಟಗಳ ಚಿತ್ರಣ ಇಲ್ಲಿದೆ.

। ಕಳೆದ ವಾರದಿಂದ ।

ನೂರಿ ಹೇಳಿದ ವಿಷಯಗಳು ಇನ್ನೂ ಹುಡುಗಿಗೆ ತಲೆಯಲ್ಲಿ  ಗಿರಕಿ ಹೊಡೆಯುತ್ತಲೇ ಇತ್ತು. ಕೆಲವೊಮ್ಮೆ ಅದೆಷ್ಟು ಭಿನ್ನವಾಗಿ ವಿಷಯಗಳು ತಟ್ಟುತದೆ ಅಂದರೆ ಅದು ನಮ್ಮನ್ನು ಬಿಟ್ಟುಹೋಗುವುದೆ ಇಲ್ಲ. ಇನ್ನು ಸ್ವಾತಂತ್ರ್ಯ ಸ್ವಾಯತ್ತೆತೆ ಅಂದಾಕ್ಷಣ ನನಗೆ ಎಲ್ಲರನ್ನೂ ಸೇರಿಸಿ ಕೊಡುವ ಸ್ವಾತಂತ್ರ್ಯವೇ ಉತ್ತಮ ಎಂಬ ಯೋಚನೆಯಲ್ಲಿಯೇ ಮತ್ತೆ ಮೆಟ್ರೋ ಹತ್ತಿದ್ದಳು.

ಎಲೆನಾ ಫೋನ್ ಮಾಡಿದಳು, “ನೀನು ಏನು ಕತಲೂನ್ಯಾ ಹೋರಾಟ ಎಂದೆಲ್ಲಾ ಹಾರಾಟ ಮಾಡಿಬಿಟ್ಟು ನನಗೆ ಹುಳ ಬಿಟ್ಟು ಹೋಗಿಬಿಟ್ಟೆ, ನಿನ್ನಗೊಂದು ಪುಸ್ತಕ ಕೊಡಬೇಕು, ಸಿಗು” ಎಂದಳು. ಸರಿ ಎಂದು ಮನೆಗೆ ಹೋಗಿ ಬಟ್ಟಗಳನ್ನ ಸರಿಮಾಡಿ ಇಟ್ಟುಬಂದು ಮತ್ತೆ ಟ್ರಾಮ್ ಹತ್ತಿಕೊಂಡು ಕಾಲೇಜಿನ ಕಡೆ ಹೋದಳು.

ಲೈಬ್ರರಿಯಲ್ಲಿ ದೊಡ್ಡ ಸಂತೆಯೇ ನೆರೆದಿತ್ತು, ಏನು ಕಥೆ ಇದು ಕತಲೂನ್ಯಾ ಹೋರಾಟದ ಹರತಾಳವಾ ಎಂದು ಬಗ್ಗಿದ್ದರೆ ಬೀರ್ ಡ್ರಿಂಕಿಂಗ್ ಕಾಂಪಿಟೇಷನ್ ನಡೆಯುತ್ತಿತ್ತು, ಜಾರ್ಜ್ ಆರ್ವೆಲ್ ಪುಸ್ತಕಗಳ ಕಟ್ಟನ್ನು ಬಿಟ್ಟಿಯಾಗಿ ತೆಗೆದುಕೊಳ್ಳೋದಕ್ಕೆ ಇವುಗಳನ್ನ ಆಯೋಜಿಸಲಾಗಿತ್ತು. “ನಿಮ್ಮೂರು ಕಥೆ ವಿಚಿತ್ರ ಪುಸ್ತಕ ತೆಗೆದುಕೊಳ್ಳೋದಕ್ಕೆ ಪುಸ್ತಕದ ಬಗ್ಗೆಯೋ ಅಥವಾ ಬರೆದವನ ಬಗ್ಗೆ ಕೇಳೋದು ಬಿಟ್ಟು ಬರಿ ಬೀರಿಗೂ ಬುಕ್ಕಿಗೂ ಸಂಬಂಧ ಕಲ್ಪಿಸಿ ಬಿಟ್ಟಿದ್ದಾರಲ್ಬಾ “ ಎಂದು ನಕ್ಕು ಎಲೆನಾ ಕಡೆ ಹೋದಳು.

“ನೋಡು ಇದು ಹೋಮೇಜ್ ಟು ಕತಲೂನ್ಯ ಪುಸ್ತಕ, ಜಾರ್ಜ್ ಒರ್ವೆಲ್ ಬರೆದಿರುವ ಪುಸ್ತಕ.  ನಮ್ಮ ಇಡೀ ಚರಿತ್ರೆ ಹೋರಾಟ ಎಲ್ಲಾ ಇದೆ ಇದರಲ್ಲಿ ಒಬ್ಬ ಇಂಗ್ಲೀಷ್ ಲೇಖಕನಿಗೆ ಇಷ್ಟೆಲ್ಲಾ ತೊಂದರೆ ಆಗಿ ಬರೆಯಬೇಕೆಂದರೆ ನಮ್ಮ ಹೋರಾಟ ಎಷ್ಟು ದೊಡ್ಡದಿರಬೇಕು” ಎಂದು ಎಲೆನಾ ಹೇಳೋಕೆ ಶುರು ಮಾಡಿದಳು. ಹುಡುಗಿ ಆರ್ವೆಲ್ಲಿನ ಅನಿಮಲ್ ಫಾರ್ಮ್ ಪುಸ್ತಕವನ್ನ ಸಾಕಷ್ಟು ಬಾರಿ ಓದಿದ್ದಳು.

ಒಂದು ರೆಬಿಲಿಯನ್ ಹಿಡಿದುಕೊಂಡೇ ಪ್ರತಿ ಬಾರಿ ಕೃತಿಗಳನ್ನು ಬರೆಯುವ ಲೇಖಕ ಎಂದೇ ಗುರುತಿಸಿಕೊಂಡಿದ್ದರು. ಅನಿಮಲ್ ಫಾರ್ಮಿನಲ್ಲಿ ಒಂದು ಫಾರ್ಮ್ ಅಲ್ಲಿದ್ದ ಪ್ರಾಣಿಗಳು ರೆಬೆಲ್ ಆಗೋದು, ಹೋಮೇಜ್ ಟು ಕತಲೂನ್ಯಾದಲ್ಲಿ ಫ಼್ರಾಂಕೋನ ದಬ್ಬಾಳಿಕೆಯನ್ನ ವಿರೋಧಿಸುವುದು ಇವನ್ನೆಲ್ಲಾ ಬಹಳ ವಿಸ್ತಾರವಾಗಿ ಬರೆದಿದ್ದಾರೆ.

“The Spaniards are good at many things, but not at making war. All foreigners are alike appalled by their inefficiency, above all their maddening unpunctuality. The one word that no foreigner can avoid learning is mañana.”

ನೋಡು ಸ್ಪೇನಿನವರ ಹುಚ್ಚುತನದ ಬಗ್ಗೆ ಹೇಗೆ ಬರೆದಿದ್ದಾನೆ ಆರ್ವೆಲ್ ಎಂದು ಹುಡುಗಿ ಪುಟ ತಿರುಗಿಸಿ ತೋರಿಸುತ್ತಿದ್ದಳು. ಸ್ಪೇನ್ ಸ್ವಲ್ಪ ಸ್ಲೀಪಿ ದೇಶ. ಅವರ ಸರ್ಕಾರಿ ವ್ಯವಸ್ಥೆಯಂತು ಮಾಯಾನ ಅಂದರೆ ನಾಳೆ ಬಾ ಅನ್ನುವಾ ಹಾಗೇ ಇರುತ್ತದೆ. ಯಾವುದಕ್ಕೂ ಆಸಕ್ತಿ ಇಲ್ಲ, ಏನಿದ್ದರೂ ಅವರ ಬಿಯರು ಮತ್ತು ರಿಯಲ್ ಮಾಡ್ರಿಡ್ ಹಾಗೂ ಎಫ್ ಸಿ ಬಾರ್ಸಿಲೋನಾ ಮ್ಯಾಚ್ ಮತ್ತು ವೀಡ್ ಇದ್ದರೆ ಸಾಕು ಮತ್ತೇನು ಬೇಡ.

ಮಿಕ್ಕೆಲ್ಲವನ್ನೂ ಸರ್ಕಾರವೇ ನೋಡಿಕೊಳ್ಳೋದರ ಪರಿಣಾಮ ಇವರಿಗೆ ಮಾಯಾನಾ ರೋಗ ಬಡಿದಿರೋದು ಸತ್ಯವೇ. ಇದನ್ನ ಹುಡುಗಿಯೂ ಅಬ್ಸರ್ವ್ ಮಾಡಿದ್ದಳು. ಒಂದು ಕಾರ್ಡ್ ಕೊಡಕ್ಕೆ ಏನೆಲ್ಲಾ ಆಟ ಆಡಿಸಿದರು ಎಂಬುದು ಅವಳಿಗೆ ಮಾತ್ರ ಗೊತ್ತಿತ್ತು.

“12 ಚಾಪ್ಟರುಗಳ ಪುಸ್ತಕದಲ್ಲಿ ಬಾರ್ಸಿಲೋನಾದ 3 ವರ್ಷಗಳ ಚರಿತ್ರೆ ಅಡಗಿದೆ. 1936 ರಿಂದ 39ರವರೆಗೆ ಇಲ್ಲಿದ್ದುಕೊಂಡು ಎಲ್ಲವನ್ನೂ ನೋಡಿ ಬರೆದಿದ್ದಾನೆ, ನೋಡು ಮೊದಲ ಚಾಪ್ಟೆರಿನಲ್ಲಿ ಅವನು ಯಾಕೆ ಪುಸ್ತಕ ಬರೆದ ಎಂದೂ ಬರೆದಿದ್ದಾನೆ. 1946ರಲ್ಲಿ ಈ ಪುಸ್ತಕ ಬಂದಿದ್ದು, ಅವನಿಗೆ ಸರ್ವಾಧಿಕಾರದ ವಿರುದ್ಧ ಬರೆಯೋದು ಬಹಳ ಮುಖ್ಯ.

ಯಾವುದೇ ಲೇಖಕ ಮೊದಲು ರೆಬೆಲ್ ಆಗಿರಬೇಕು ಆತ ದೊಡ್ಡ ರೆಜೀಮಿನ ವಿರುದ್ಧಾ ಹೋರಾಡಬೇಕು, ಮತ್ತು ಸಾಮಾನ್ಯ ಜನರು ಕಾಣದ ಹುಳುಕುಗಳನ್ನು ಸಮಾಜಕ್ಕೆ ಎತ್ತಿತೋರಿಸಬೇಕು, ಲೇಖಕರು ಸರ್ವಾಧಿಕಾರವನ್ನು ಒಪ್ಪಲೇ ಬಾರದು” ಎಂದು ಬಹಳ ದೊಡ್ಡದಾಗಿ ಬರೆದಿದ್ದಾನೆ ಇಲ್ಲಿ ನೋಡು ಎಂದು ಎಲೆನಾ ಪ್ರತಿ ಚಾಪ್ಟರನ್ನೂ ಉರುಹೊಡೆದ ಹಾಗೆ ಹುಡುಗಿಯ ಮುಂದೆ ಹೇಳುತ್ತಿದ್ದಳು.

“ನಾನು ಪುಸ್ತಕ ಓದುತ್ತೇನೆ ಎಲೆನಾ ನನಗೆ ಕೊಡು” ಎಂದಾಗ, “ಓದು ಆದರೆ ಈ ಕಥೆ ನಿನಗೆ ನಾನು ಹೇಳಲೇ ಬೇಕು , ನನ ಊರಿನ ಕಥೆಯನ್ನು ಬೇರೆ ಊರಿನವರು ಇಷ್ಟು ಚೆನ್ನಾಗಿ ಬರೆದಿದ್ದಾರೆ ಒಂದು ಪ್ರಿಫೇಸ್ ಕೊಡಬೇಕು” ಎಂದು ಪುಸ್ತಕವನ್ನ ಅವಳ ಕೈಯಿಂದ ಕಿತ್ತುಕೊಂಡು ಒಂದೊಂದು ಚಾಪ್ಟರನ್ನೂ ಬಿಡದೆ ಅದು ಏನು ಇದು ಏನು ಎಂದು ಹೇಳುತ್ತಾ ಶುರು ಮಾಡಿದಳು.

“And the whole huge town of a million people was locked in a sort of violent inertia, a nightmare of noise without movement.” – ನೋಡು ಇದು ನಮ್ಮ ಬಾರ್ಸಾಗೆ ಆತ ಬಂದಾಗ ನೋಡಿದ ಪರಿಸ್ಥಿತಿ ನಿನಗೆ ನಾನು ಹೇಳಿದಂತೆ ಆಗ ಸ್ಪೇನಿನ ಸರ್ವಾಧಿಕಾರಿ ಹೆಣ್ಣುಮಕ್ಕಳು, ಗಂಡು ಮಕ್ಕಳು ಎಂಬ ಬೇಧಮಾಡದೇ ಎಲ್ಲರನ್ನೂ ಎತ್ತಿ ಎತ್ತಿ ಒಗೆಯುತ್ತಿದ್ದರು ಅವರನ್ನ ಯುದ್ಧಕೆ ಅಣಿಮಾಡಿಕೊಂಡಿದ್ದರು. ಮಕ್ಕಳನ್ನೂ ಬಿಟ್ಟಿರಲ್ಲಿಲ್ಲ. ಎಷ್ಟು ಕೆಟ್ಟದಾದ ಪರಿಸ್ಥಿತಿ ನೋಡು.”

“ನೋಡು ನಾವು ನಮ್ಮ ಚರಿತ್ರೆ ಬರೆಯೋದಕ್ಕೂ ಬೇರೆಯವರು ಬಂದು ಬರೆಯೋದಕ್ಕೂ ತುಂಬಾ ವ್ಯತ್ಯಾಸ ಇದೆ, ನಾವು ನಮ್ಮದೇ ಬೊಂಬಡಾ ಬಜಾಯಿಸಿಕೊಳ್ಳಬಹುದು ಆದರೆ ಬೇರೆಯವರು ನಮ್ಮನ್ನ ವಿಮರ್ಶೆ ಮಾಡಿ ಬರೆಯೋವಾಗ ಅದರಲ್ಲಿ ಸತ್ಯ ಇರುತ್ತದೆ” ಎಂದು ಎಲೆನಾ ಬಹಳ ಆಸ್ಥೆಯಿಂದ ಮಾತಾಡುತ್ತಿದ್ದಳು.

“ಅದು ಸರಿ ಎಲೆನಾ ಇದ್ದಕಿದ್ದಂತೆ ನಿಮ್ಮನ್ನ ಸಪೋರ್ಟ್ ಮಾಡಿದರೆ ಅವರಿಗೆ ಏನು ಅಜೆಂಡಾ ಇರೋದಿಲ್ವಾ ? ಅದೆಲ್ಲಾ ಇಲ್ಲಿ ಹೇಗೆ ಹೇಳುತ್ತೀಯಾ, ಹೊರಗಿನವರು ಹೊರಗಿನವರ ಹಾಗೆಯೇ ಚರಿತ್ರೆ ಬರೆಯೋಕೆ ಸಾದ್ಯ” ಎಂದು ಹುಡುಗಿ ಹೇಳಿದಕ್ಕೆ ಕೋಪಗೊಂಡ ಎಲೆನಾ , “I believe that on such an issue as this no one is or can be completely truthful. It is difficult to be certain about anything except what you have seen with your own eyes, and consciously or unconsciously everyone writes as a partisan” –

“ಹೀಗೆ ಆರ್ವೆಲ್ ಬರೆದಿರೋದು ಎಲ್ಲಾರೂ ಹಾಗೆ ಬಯಾಸಾಗೆ ಇರುತ್ತಾರೆ ಆದರೆ ಕಣ್ಣಾರೆ ಕಂಡಿದ್ದನ್ನ ಬರೆಯುವವರು ಇನ್ನೂ ಹೆಚ್ಚು ಸತ್ಯವಂತರಾಗಿತ್ತಾರೆ. ಆದರೆ ಬಯಾಸ್ ಇರುತ್ತದೆ, ಎಲ್ಲವನ್ನೂ ಸಿನಿಕತನದಲ್ಲೇ ಹೀಗೆ ನೋಡಿದರೆ ಏನು ಮಾಡೋದು” ಎಂದು ಬೈದಳು.

ಮುಂದೆ ಪುಸ್ತಕ ಇಟ್ಟು ಅದರ ಬಗ್ಗೆ ಸಿಕ್ಕಾಪಟ್ಟೆ ಮಾತಾಡುವವರನ್ನ ಕಂಡರೆ ಹುಡುಗಿಗೆ ತುಂಬಾ ಅಲರ್ಜಿ, ತನ್ನ ಪಾಡಿಗೆ ತಾನು ಪುಸ್ತಕ ತಾನು ಒಪಿನಿಯನ್ ಮಾಡಿಕೊಳ್ಳಬೇಕು ಎಂದು ಅಭಿಪ್ರಾಯ, ಇವಳು ಇವಳ ಪುಂಗಿ ಊದೋದಕ್ಕೆ ಶುರು ಮಾಡಿಬಿಟ್ಟಳಲ್ಲಾ ಕರ್ಮ ಎಂದು “ಎಲೆನಾ ನನಗೆ ಈ ಪುಸ್ತಕ ಕೊಟ್ಟು ನೀನು ಆರಾಮಾಗಿ ಎದ್ದು ಹೋಗು , ಪ್ಲೀಸ್ ನಾನು ಜಾರ್ಜ್ ಆರ್ವೆಲ್ ಮಾತುಗಳನ್ನ ಕೇಳಬೇಕು , ನಿನ್ನದಲ್ಲ” ಎಂದು ಹೇಳಿದಾಗ, “ಆಚೆಯವರ ಧಿಮಾಕು ನಿನಗೆ, ಆರ್ವೆಲ್ ಮಾತಾಡಿದ್ದನ್ನ ನನಗೆ ಇನ್ನು 6 ಘಂಟೆಗಳಲ್ಲಿ ನನಗೆ ಹೇಳದಿದ್ದರೆ ನಿನಗಿದೆ” ಎಂದು ಪುಸ್ತಕ ಎಸೆದು ಹೋದಳು.

ಮತ್ತೆ ತಿರುಗಿ, “ಅಲ್ಲಾ ನಿಮ್ಮ ಊರಿನ ಬಗ್ಗೆ ಹೀಗೆಲ್ಲಾ ಪುಸ್ತಕ ಬರೆದಿಲ್ಲ್ವಾ?” ಎಂದಾಗ ಹುಡುಗಿ ತಲೆ ಕೆರೆದುಕೊಂಡು, “ಇಲ್ಲಾ ನಾನೇ ಹೋಮೇಜ್ ಟು ಬೆಂಗಳೂರು ಎಂದು ಬರೆಯೋಣ ಅಂತಿದೀನಿ ಹೇಗಿದ್ದರು ನಾನು ಹುಟ್ಟಿದ ಊರು ಹಾಗೇಗೋ ಆಗುತ್ತಿದೆ, ಆಮೇಲೆ ಅದನ್ನ ಬೈಯ್ಯುವವರ ಸಂಖ್ಯೆ ಜಾಸ್ತಿಯಾಗಿದೆ, ಅವರನ್ನೆಲ್ಲಾ ವಿಲ್ಲನ್ಸ್ ಮಾಡಿ ಒಂದು ಪುಸ್ತಕ ಬರೆಯುತ್ತೇನೆ ಬಿಡುಗಡೆಗೆ ಬಂದು ಬಿಡು” ಎಂದು ಕಿಸಕ್ಕನೆ ನಕ್ಕಳು.

“ಯುದ್ಧದ ಬಗ್ಗೆ ನಿಂಗೇನು ಗೊತ್ತು” ಎಲೆನಾ ಮುಖ ಸಿಂಡರಿಸಿಕೊಂಡಳು, “ಮೇಡಮ್ ನಿಮ್ಮ ಹೀರೋ ಆರ್ವೆಲ್ ಯುದ್ಧ ಬಗ್ಗೆ ಬರೆದಿರೋದು ನೋಡಿ, All the war-propaganda, all the screaming and lies and hatred, comes invariably from people who are not fighting” ಎಂದಾಗ, ಮುಖ ತಿರುಗಿಸಿಕೊಂಡು ಹೋದಳು…

ಹೋಮೇಜ್ ಟು ಬೆಂಗಳೂರು ಹೇಗೆ ಬರೆಯೋದು ಎಂದು ಈ ಪುಸ್ತಕ ತಿರುವಿ ಹಾಕಲು ಕೂತಳು.

। ಮುಂದಿನ ವಾರಕ್ಕೆ ।

October 31, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: