ರಾಮತೀರ್ಥದ ಕಲ್ಲುಸಾರ

ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾಗಿದ್ದ ಹಿ ಚಿ ಬೋರಲಿಂಗಯ್ಯ ಅವರು ಇಂದಿನ ʼನನ್ನಕುಪ್ಪಳಿʼ ಅಂಕಣದಲ್ಲಿ ಮಲೆನಾಡಿನ ಮಳೆಯ ಮತ್ತು ತುಂಗೆಯ ಹರಿವನ್ನು ಕಣ್ತುಂಬಿಕೊಂಡ ಕ್ಷಣಗಳನ್ನು ಹಂಚಿಕೊಂಡಿದ್ದಾರೆ.

। ಕಳೆದ ವಾರದಿಂದ ।

ನನ್ನ ­ಅದೃಷ್ಟಕ್ಕೆ ­ಕಳೆದ ­ಕೆಲವು ವರ್ಷಗ­ಳಿಂದ ­ಇಲ್ಲದ ಬಿರುಮಳೆ ­ಈ ­ವರ್ಷ ­ಸುರಿಯಿತು. ­ಕುವೆಂಪು ­ಕಂಡ ­ಆ ಕಾರ್ಗಾಲದ ಮಲೆ­ನಾಡನ್ನು ­ನಾನೂ ಅನುಭ­ವಿಸುವಂತಾಯಿತು. ಆಕಸ್ಮಿಕ ­ಎನ್ನುವಂತೆ ­ಕರೆಂಟೂ ಕೈಕೊಟ್ಟು, ಜೊತೆಗಾರ ­ಗುಂಡನೂ ­ಇಲ್ಲವಾಗಿ ­ಸುಮಾರು ­ಆರು ಕಗ್ಗತ್ತಲ ರಾತ್ರಿಗಳನ್ನು ­ಒಬ್ಬನೇ ಕಳೆಯುವ ­ಸುಯೋಗ ­ಲಭಿಸಿತು.

ಪ್ರತಿ­ದಿನ ­ರಾತ್ರಿ ಹೇಮಾಂಗ­ಣದ ವರಾಂಡದಲ್ಲಿ ಶತಪತ ತಿರುಗುತ್ತಾ ­ಕುವೆಂಪು ಕವಿತೆಗಳನ್ನು ­ವಿಚಿತ್ರ ರಾಗಗಳಲ್ಲಿ ­ಹಾಡುತ್ತಾ ಕೆಲವೊಮ್ಮೆ ಮೈಮೇಲೆ ಬಂದ­ವ­ನಂತೆ ­ಜೋರಾಗಿ ವಾಚಿಸುತ್ತಾ ಅರೆಹುಚ್ಚ­ನಂತೆ ­ನನ್ನ ­ಬಗ್ಗೆ ­ನನಗೇ ­ಅನುಮಾನ ಬರುವಂತೆ ವರ್ತಿ­ಸಿದ್ದೂ ­ಉಂಟು. ಹೇಮಾಂಗ­ಣದ ­ಗೋಡೆಯ ­ಮೇಲೆ ಕೆತ್ತಿರುವ ‘­ಬಾ ­ಇಲ್ಲಿ ­ಸಂಭವಿಸು…’ ಕವಿತೆಯನ್ನಂತೂ ­ಟಾರ್ಚ್‌ ಬೆಳ­ಕಿ­ನಲ್ಲಿ ­ಅದೆಷ್ಟುಸಲ ಹಾಡಿಕೊಂಡೆನೋ ಲೆಕ್ಕವಿಲ್ಲ!

ಅಂತೂ ­ಆರು ರಾತ್ರಿಗಳ ­ನಂತರ ­ಕರೆಂಟ್ ­ಬಂತು. ­ಮಳೆಯ ರಭ­ಸವೂ ಕಡಿಮೆಯಾಗಿ ಅಪರೂಪಕ್ಕೆ ಸೂರ್ಯದರ್ಶ­ನವೂ ಆಗತೊಡಗಿತು. ಮೈದುಂಬಿ ಪ್ರವಹಿಸುತ್ತಿದ್ದ ಹಳ್ಳಕೊಳ್ಳಗಳು ­ಕೊಂಚ ಸಮಾಧಾನಗೊಂಡು ಶಾಂತ­ವಾಗಿ ಹರಿಯತೊಡ­ಗಿದವು. ­ಆದರೆ ­ಘಟ್ಟ ಪ್ರದೇ­ಶಗಳಲ್ಲಿ ­ಮಳೆ ಹಾಗೇ ಮುಂದುವರಿಯಿತು.

­ಆಗುಂಬೆ, ಕುದುರೆಮುಖ, ಹುಲಿ­ಕಲ್ ­ಘಾಟಿ, ­ಕೊಲ್ಲೂರು ­ಘಾಟಿಗಳು ನಿರಂತರ­ವಾಗಿ ಸಿಂಚ­ನಗೊಳ್ಳುತ್ತ ­ಅಗಾಧ ಪ್ರಮಾ­ಣದ ­ನೀರನ್ನು ಚಿಮ್ಮಿಸುತ್ತಿದ್ದವು. ­ತುಂಗೆ ­ಮತ್ತು ಭದ್ರೆಯರ ­ಪ್ರವಾಹ ಇಳಿಮುಖ­ವಾ­ಗಿದ್ದರೂ ­ನೀರಿನ ­ತುಂಬು ­ಹರಿವು ­ಹಾಗೇ ­ಇದೆ ­ಎಂದು ­ಪ್ರಕಾಶ್ ತಿಳಿ­ಸಿದರು.

­ಇಂಥ ಸಂದರ್ಭದಲ್ಲಿ ­ತುಂಗೆಯ ಹಸಿಮಣ್ಣಿನ ­ನೀರನ್ನು ಕಣ್ತುಂಬಿಕೊಳ್ಳಬೇಕು ­ಎಂದು ತೀರ್ಮಾ­ನಿ­ಸಿದೆ. ­ಅದೇ ಸಂದರ್ಭಕ್ಕೆ ಬೆಂಗಳೂ­ರಿನ ­ನನ್ನ ಗೆಳೆಯರೊಬ್ಬ­ರಿಗೆ ಮಳೆಗಾ­ಲದ ­ಕುಪ್ಪಳಿ ­ನೋಡಲು ­ಬನ್ನಿ ­ಎಂದು ­ಹೇಳಿದ್ದೆ. ರಾತ್ರಿಯಲ್ಲಿಯೇ ­ಹೊರಟು ­ಬೆಳ್ಳಂ ­ಬೆಳಗ್ಗೆ ಅವರು ಹಾಜರಾದರು. ಬೆಳ­ಗಿನ ­ಉಪಹಾರ ­ಮುಗಿಸಿ ಮೊದ­ಲಿಗೆ ಸಿಬ್ಬಲುಗುಡ್ಡೆಯ ­ತುಂಗಾ ­ತೀರಕ್ಕೆ ಹೊರಟೆವು.

­ಸಿಬ್ಬಲು ­ಗುಡ್ಡೆಗೆ ­ಈ ­ಹಿಂದೆ ­ಹಲವು ­ಬಾರಿ ­ನಾನು ­ಭೇಟಿ ­ನೀಡಿದ್ದೆ. ­ಆದರೆ ­ಅದು ಮಳೆಗಾ­ಲದಲ್ಲಲ್ಲ. ಅಕ್ಟೋಬರ್ ­ನಂತರ ­ನೀರು ಕಡಿಮೆಯಾಗುತ್ತಿದ್ದಂತೆ ­ಅದೊಂದು ಸುರಸುಂದರ ­ಸ್ಥಳ. ­ಉತ್ತರದಿಂದ ಬಳಕುತ್ತಾ ­ಹರಿದು ­ಬರುವ ­ನದಿ ­ಏಕಾ ­ಏಕಿ ­ಪೂರ್ವಕ್ಕೆ ­ತಿರುವು ಪಡೆದುಕೊಂಡು ವಿನ್ಯಾ­ಸಭ­ರಿತ­ವಾಗಿ ಹರಿಯುತ್ತಿರುತ್ತದೆ. ­ನದಿಯ ­ಉದ್ದಗಲಕ್ಕೆ ­ಅಗಾಧ ಮರ­ಳಿನ ­ರಾಶಿ ಒತ್ತ­ರಿ­ಸಿಕೊಂಡು ­ಬಿದ್ದಿದೆ.

­ನದಿಯ ­ಹರಿವು ­ಏಕಾಏಕಿ ­ತಿರುವು ಪಡೆಯುವುದ­ರಿಂದ ಒತ್ತಡಕ್ಕೆ ­ಸಿಲಿಕಿ ಮರುಳಿನ ­ರಾಶಿ ಸೃಷ್ಟಿಗೊಂಡಿದೆ. ­ನದಿಯ ­ಸುತ್ತಲೂ ­ಬೆಳೆದು ­ನಿಂತ ಹಸಿರು ವನರಾಶಿ ­ಕಣ್ಣಿಗೆ ­ಮುದ ನೀಡುತ್ತದೆ. ಕುವೆಂಪುರ­ವರ ­ಪ್ರಖ್ಯಾತ ­ಕವಿತೆ ‘­ದೇವರು ­ರುಜು ­ಮಾಡಿದನು’ ­ಇಲ್ಲೇ ರಚಿತ­ವಾದದ್ದು. ­ಹೊಳೆ ­ಮತ್ತು ಬಾನಿನ ­ಸುಂದರ ಸಮ್ಮಿಲ­ನದ ­ಆ ಸ್ಥಳದಲ್ಲಿ ­ಹಾರುವ ಹಕ್ಕಿಗಳ ­ಆ ­ಸುಂದರ ­ಸಾಲು ­­‘ದೇವರು ­ರುಜು ಮಾಡಿದಂತೆ ­ಇತ್ತು’ ­ಎಂಬ ­ಕವಿಯ ­ಕಲ್ಪನೆ ಅತ್ಯಂತ ದಾರ್ಶನಿ­ಕ­ವಾದದ್ದು. ­ಅದು ­ಪ್ರಕೃತಿಯ ವೈಚಿತ್ಯದಲ್ಲಿ ಆಧ್ಯಾತ್ಮವನ್ನು ­ಕಾಣುವ ­ಮಾರ್ಗ.

ದೇವರು ರುಜು ಮಾಡಿದನು,
ರಸವಶನಾಗುತ ಕವಿ ಅದ ನೋಡಿದನು!
ಬಿತ್ತರದಾಗಸ ಹಿನ್ನೆಲೆಯಾಗಿರೆ
ಪರ್ವತದೆತ್ತರ ಸಾಲಾಗಿಸೆದಿರೆ
ಕಿಕ್ಕಿರಿದಡವಿಗಳಂಚಿನ ನಡುವೆ
ಮೆರೆದಿರೆ ಜಲಸುಂದರಿ ತುಂಗೆ
ದೇವರು ರುಜು ಮಾಡಿದನು
ರಸವಶನಾಗುತ ಕವಿ ಅದ ನೋಡಿದನು.
……………..
ದೃಶ್ಯ ದಿಗಂತದಿನೊಮ್ಮೆಯೆ ಹೊಮ್ಮಿ
ಸಿರಿವನ ಪಟದಾಕಾಶದಲಿ
ತೇಲುತ ಬರಲ್ಕೆ ಬಲಾಕಪಂಕ್ತಿ
ಲೇಖನರೇಖಾನ್ಯಾಸದಲಿ,
ಅವಾಙ್ಞಮ ಛಂದಃಪ್ರಾಸದಲಿ,
ಸೃಷ್ಟಿಯ ರಚನೆಯ ಕುಶಲಕೆ ಚಂದಕೆ
ಜಗದಚ್ಚರಿಯಂದದ ಒಪ್ಪಂದಕೆ
ಚಿರಚೇತನ ತಾನಿಹೆನೆಂಬರಿದದಿ
ಬೆಳ್ಳಕ್ಕಿಯ ಹಂತಿಯ ಆ ನೆವದಿ
ದೇವರು ರುಜು ಮಾಡಿದನು;
ರಸವಶನಾಗುತ ಕವಿ ಅದ ನೋಡಿದನು!

ಜಗತ್ತು ಸೃಷ್ಟಿಯ ಆ ಚಿರಚೇತನದ ಆ ಕ್ರಿಯಾಶೀಲತೆ ಎಂದೆಂದಿಗು ಹೀಗೆ ಇರಲಿ ಎಂಬ ಒಪ್ಪಂದಕ್ಕೆ ದೇವರು ರುಜು ಮಾಡಿದನಂತೆ, ಆ ಬೆಳ್ಳಕ್ಕಿಯ ಹಂತಿಯ ಮೂಲಕ!

ಆದರೆ ­ಇಂದು ಸಿಬ್ಬಲು ಗುಡ್ಡೆಯ ­ಈ ­ತುಂಗಾ ­ತೀರ ­ಭಿನ್ನ ­ರೂಪ ಪಡೆ­ದಿತ್ತು. ಬೇಸಿಗೆಯಲ್ಲಿ ಸುಲ­ಲಿತ ­ರಮಣೀಯ ­ಗುಣ ಸಂಪನ್ನೆ­ಯಾಗಿ ಜಿಂಕೆಯಂತೆ ಹರಿಯುವ ­ತುಂಗೆ ಮಳೆಗಾ­ಲದಲ್ಲಿ ­ಶಾಂತತೆಯನ್ನು ಧಿಕ್ಕ­ರಿಸಿ ಮದವೇ­ರಿದ ಕಾಡುಕೋ­ಣದಂತೆ ಅಬ್ಬರಿಸುತ್ತಾ ನುಗ್ಗುತ್ತದೆ. ­ನದಿಯ ಇಕ್ಕೆಲಗಳಲ್ಲಿ ­ಇರುವ ಬಂಡೆಗ­ಳಿಗೆ ­ಡಿಕ್ಕಿಸಿ ಚಿಮ್ಮುತ್ತದೆ. ­

ಅಗಾಧ ­ಹಸಿರು ರಾಶಿಯನ್ನೇ ಕಬ­ಳಿಸಿ ಕೊಂಡೊಯ್ಯುತ್ತದೋ ­ಎಂಬಂತೆ ವಿಸ್ತ­ರಿಸಿ ­ಸರ್ವವನ್ನೂ ನೀರಮಯವಾ­ಗಿಸುತ್ತಾ ಸಾಗುತ್ತದೆ. ಬೇಸಿಗೆಯಲ್ಲಾದರೆ ­ನದಿಯ ಮೇಲ್ದಂಡೆಯಲ್ಲಿರುವ ಗಣಪತಿ ದೇವಸ್ಥಾ­ನದ ಆವರ­ಣ­ದಿಂದ ­ಹಲವು ಮೆಟ್ಟಿಲುಗಳನ್ನು ಕೆಳ­ಗಿಳಿದು, ­ನದಿಯ ದಂಡೆಯಲ್ಲಿ ಆಡ­ವಾಡುವ ಮೀನುಗಳನ್ನು ಕಣ್ತುಂಬಿಕೊಳ್ಳುತ್ತಾ, ­ಎದುರಿನ ­ಮರಳ ­ರಾಶಿಗೆ ಅಚ್ಚರಿಪಡುತ್ತಾ ­ಹೊಳೆಯ ­ನೀರಿಗೆ ಕಾಲುಬಿಟ್ಟು ಕೂರಬಹುದು.

ಆದರೀಗ ಕೆಳ­ಗಿ­ಳಿಯುವ ಮೆಟ್ಟಿಲುಗಳೇ ­ಮಾಯ! ­ಮೀನುಗಳು ­ಅದೆಲ್ಲಿ ಪಯಣಿ­ಸಿದವೋ! ­ಎತ್ತರದ ­ದಿಬ್ಬದ ­ಮೇಲಷ್ಟೇ ­ನಿಂತು ­ಕೆಂಪು ಹೊಳೆಯನ್ನು ­ಮತ್ತೆ ­ಮತ್ತೆ ಆಸ್ವಾ­ಧಿಸಿ ಹಿಂತಿರುಗಿದೆವು.

ನಂತರ ­ನಮ್ಮ ­ಪಯಣ ತೀರ್ಥ­ಹಳ್ಳಿಯನ್ನು ­ಸುತ್ತಿ ­ಬಳಸಿ ಹರಿಯುವ ­ತುಂಗೆಯ ­ದಡಕ್ಕೆ. ತೀರ್ಥ­ಹಳ್ಳಿಯ ­ತುಂಗೆಯ ಸೇತುವೆಯೇ ­ಸುಂದರ. ­ಅದರ ವಿನ್ಯಾ­ಸವೇ ವಿಶಿಷ್ಟ­ವಾ­ಗಿದೆ. ­ಬೇಸಿಗೆಯ ಕಾಲದಲ್ಲಿ ಸೇತುವೆಯ ­ಯಾವುದೋ ­ತಳ ಹಂತದಲ್ಲಿ ಸದ್ದಿಲ್ಲದೆ ಹರಿಯುವ ­ಮುಗ್ಧ ­ತುಂಗೆ, ­ಇದೀಗ ಕಾಳಿಯ ­ರೂಪ ­ತಾಳಿದ್ದಾಳೆ. ­ಸೇತುವೆಯ ­ಮೇಲ್ತುದಿಯನ್ನೂ ­ಮುಟ್ಟುತ್ತಾ ­ನುಗ್ಗಿ ­ನುಗ್ಗಿ ಹರಿಯುವ ­ಅಬ್ಬರಕ್ಕೆ ­ಸೇತುವೆಯ ­ಮೇಲೆ ­ನಿಂತ ­ನಮಗೆ ಒಂದು ಕ್ಷಣ­ವಾದರೂ ­ಎದೆ ಜಲ್ಲೆನ್ನುತ್ತದೆ.

­ಸೇತುವೆಯನ್ನು ­ದಾಟಿ ­ಊರ ­ಪೇಟೆ ­ಬೀದಿಯನ್ನು ­ಬಳಸಿ ­ನದಿಯ ­ಮತ್ತೊಂದು ಬದಿ­ಗಿರುವ ರಾಮತೀರ್ಥಕ್ಕೆ ­ಬಂದರೆ ­ಅಲ್ಲಿನ ­ದೃಶ್ಯವೇ ­ಬೇರೆ. ಇಲ್ಲೂ ­ಅಷ್ಟೆ, ಬೇಸಿಗೆಯಲ್ಲಾದರೆ ಬಂಡೆಗಳ ­ನಡುವೆ ­ಅಲ್ಲಲ್ಲಿ ಗೋಚ­ರಿಸುತ್ತಾ ­ಮತ್ತೆಲ್ಲೋ ಕಲ್ಲುಗಳ ಸಂದಿಯಲ್ಲಿ ಅದೃಶ್ಯವಾಗುತ್ತಾ ಮಾಯಾವಿಯಂತೆ ­ಕಂಡೂ ­ಕಾಣದ ­ನದಿ ­ಇದೀಗ ­ಅನಂತ ವಿಸ್ತಾರಕ್ಕೆ ಹರ­ಡಿಕೊಂಡು ­ತನ್ನ ಉಬ್ಬರ­ವಿ­ಳಿತಗ­ಳಿಂದ ಕುಣಿಯುತ್ತಾ ­ಉಗ್ರ ­ಸ್ವರೂಪಿ ನರ್ತ­ಕಿಯಂತೆ ಭಾಸ­ವಾಗುತ್ತದೆ.

ಬೇಸಿಗೆಯಲ್ಲಿ ­ನದಿಯ ಅಡ್ಡಗ­ಲಕ್ಕೆ ನಿಸರ್ಗದತ್ತ­ವಾಗಿ ರೂಪುಗೊಂ­ಡಿರುವ ನಿಸರ್ಗದತ್ತ ­ಕಲ್ಲು ಸೇತುವೆಯ (ಕಲ್ಲುಸಾರ)­ ­ಮೇಲೆ ಎಚ್ಚರ­ದಿಂದ ನಡೆಯುತ್ತಾ, ಕಲ್ಲುಗಳ ಸಂದಿಗೊಂದುಗಳಲ್ಲಿ ಮೊರೆಯುತ್ತಾ ­ಹರಿವ ­ನೀರನ್ನು ಕಣ್ತುಂಬಿಕೊಂಡು ನದಿಯನ್ನೇ ­ದಾಟಬಹುದು. ­ಕುವೆಂಪು ಕಾದಂಬರಿಯ ಹೂವಯ್ಯ ತನ್ನ ತಮ್ಮ ರಾಮಯ್ಯನೊಡಗೂಡಿ ಇದೇ ಕಲ್ಲುಸಾರದ ಮೇಲೆ ನಡೆದು ಬರುವ ದೃಶ್ಯವಿದೆ.

“ಅಂತಹ ಬಿಸಿಲಿನಲ್ಲಿ ತೀರ್ಥಹಳ್ಳಿಯ ಕಲ್ಲುಸಾರದ ಮೇಲೆ ನಡೆಯುವುದು ಬಹು ಪ್ರಾಯಾಸ. ಆದರೆ ಆ ಇಬ್ಬರ ಕಾಲುಗಳಲ್ಲಿಯೂ ಮೆಟ್ಟುಗಳಿದ್ದುದರಿಂದ ನೋಯದೆ ನಡೆಯಬಹುದಾಗಿತ್ತು. ತಾನು ಕೆಲವು ವರ್ಷಗಳ ಹಿಂದೆ ತೀರ್ಥಹಳ್ಳಿಯಲ್ಲಿ ಓದುತ್ತಿದ್ದಾಗ ಆ ತುಂಗಾ ನದಿಯೂ ಆ ರಾಮತೀರ್ಥವೂ ನಿತ್ಯ ಯಾತ್ರಾಸ್ಥಳಗಳಾಗಿದ್ದುದು ಆತನ ನೆನಪಿಗೆ ಬಂದಿತು… ಪರ್ವತಗಳ ಸಂದಿಯಲ್ಲಿ ಕಾಣಿಸಿಕೊಂಡು ಹರಿದು ಬಂದ ಹೊಳೆ ಅಂದಿನಂತೆಯೆ ಇಂದೂ ಪರ್ವತಗಳ ಇಡುಕಿನಲ್ಲಿ ಕಣ್ಮರೆಯಾಗುತ್ತಿತ್ತು.

ತುಂಗೆಯ ಇಕ್ಕೆಲದ ದಡಗಳಲ್ಲಿ ಅಂದಿನಂತೆಯೇ ಅರಣ್ಯಗಳು ಮಾಲೆಮಾಲೆಯಾಗಿ ನಿಂತಿದ್ದವು. ಆಗಿದ್ದ ಮರಗಳಲ್ಲಿ ಈಗಲೂ ಅನೇಕವಿವೆ! ನದಿಯ ನಡುವೆ ಮಲಗಿದ್ದ ಆ ಹೆಬ್ಬಂಡೆಯ ರಾಶಿಗಳೂ ಈಗಲೂ ಅಂದಿನಂತೆಯೇ ಇವೆ. ಒಂದು ಮಾತ್ರ ಪ್ರವಾಹದಲ್ಲಿ ಉರುಳಿ ಬಿದ್ದಿದೆ. ಬಂಡೆಯಿಂದ ಬಂಡೆಗೆ ಧುಮುಕುತ್ತಿದ್ದ ಜಲರಾಶಿ ಸಂಮತಿಥವಾಗಿ ನೊರೆನೊರೆಯಾಗಿ ತುಂತುರು ತುಂತುರಾಗಿ ಡೊರ್ಣಾಯಮಾನವಾಗಿ, ಕಡೆಗೆ ತೆರೆತೆರೆಯಾಗಿ, ಬಿಸಿಲಿನಲ್ಲಿ ಮಿರುಗಿ ಮಿರುಗಿ ಅಂದಿನಂತೆಯೇ ಇಂದೂ ಲೀಲಾಮಗ್ನವಾಗಿರುವಂತೆ ತೋರುತ್ತಿದೆ…

ಇಬ್ಬರೂ ತಾವು ನಡೆದು ಬಂದ ಕಲ್ಲುಸಾರದ ದಾರಿಯನ್ನೇ ಹೊಳೆಯ ಆಚೆಯ ದಡದವರೆಗೂ ನೋಡಿದರಿಂದ ಅವರು ಸುಮಾರು ಎರಡು ಫರ್ಲಾಂಗು ನಡೆದು ಬಂದಿದ್ದರು. ಕಲ್ಲುಸಾರ ಇನ್ನೂ ಒಂದೂವರೆ ಫರ್ಲಾಂಗು ಇತ್ತು.”

ಆದರೆ ­ಇದೀಗ ­ಆ ಕಲ್ಲುಸಾರ ­ಅದಾವ ಪಾತಾಳದಲ್ಲಿ ­ಹುದುಗಿ ಹೋಗಿದೆಯೋ? ­ನದಿಯ ­ಮಧ್ಯೆ ಕಟ್ಟಿರುವ ಮಂಟಪವೂ ­ಮುಳುಗಿ ­ಅದರ ­ತುದಿ ಒಂದು ­ಹಕ್ಕಿಯ ಕೊಕ್ಕಿ­ನಂತೆ ಕಾಣುತ್ತಿದೆ!

­ತುಂಗೆಯ ­ಈ ಮೈಮಾ­ಟವನ್ನು ­ಎಷ್ಟು ಸ್ಥಳಗಳಲ್ಲಿ ­ಎಷ್ಟು ದಿಕ್ಕುಗ­ಳಿಂದ ನೋಡಿದರೂ ­ಸಾಲದು. ತೀರ್ಥ­ಹಳ್ಳಿ­ಯಿಂದ ­ಸುಮಾರು 12 ಕಿ.ಮೀ.ಗಳಲ್ಲಿ ಶಿವಮೊಗ್ಗ ರಸ್ತೆಯಲ್ಲಿ ­ಬರುವ ­ಮುಡಬಾ ­ಎಂಬ ಹಳ್ಳಿಯಲ್ಲಿ ­ತುಂಗೆ ಹರಿಯುವ ­ರೀತಿಯೇ ­ಬೇರೆ. ಬೇಸಿಗೆಯಲ್ಲಿ ­ಇಲ್ಲಿ ­ನದಿ ­ತುಂಬಿ ನಿಂತ ಕೊಳದಂತೆ ಕಾಣುತ್ತದೆ.

ಪ್ರಶಾಂತ ­ನೀರ ­ತಾಣವದು. ­ಆದರೆ ­ಇದೀಗ ಪ್ರವಾ­ಹದೋಪಾದಿಯಲ್ಲಿ ­ಹುಚ್ಚೆದ್ದು ಓಡುತ್ತಿದೆ. ಮುಡಬಾ­ದಿಂದ ಕಟ್ಟೆ ಹಕ್ಕು ­ಕಡೆಗೆ ಹೋಗುವ ಸೇತುವೆಯ ಮೇಲೆ ಹೋಗಲೂ ಧೈರ್ಯಬಾರದಷ್ಟು ­ರಭಸ ­ಅಲ್ಲಿತ್ತು. ­ಆದರೆ ­ಸೇತುವೆ ­ಮೇಲೆ ­ನಿಂತರೆ ­ಅದರ ­ಆಚೀಚೆ ­ಉದ್ದಕ್ಕೆ ­ನೀಳ ರೇಖೆಯಲ್ಲಿ ನದಿ ಗೋಚರಿಸುತ್ತದೆ. ಮುಡಬಾ­ದಿಂದ ಮುಂದುವರಿದು ಶಿವಮೊಗ್ಗ ­ಕಡೆಗೆ ಹೊರ­ಟರೆ ­ಮುಂದೆ ಮಂಡಗದ್ದೆ ಪಕ್ಷಿಧಾಮ. ­

ನಿನ್ನೆ ­ಮೊನ್ನೆ ­ತಾನೇ ­ನದಿಯ ­ನೀರು ­ರಸ್ತೆಯನ್ನೂ ­ನುಂಗಿ ಹರಿದಿತ್ತಾದ್ದ­ರಿಂದ ­ರಸ್ತೆಯ ­ಆಚೀಚೆ ­ಮಣ್ಣು, ಕಸ­ಕಡ್ಡಿ ­ಬೆರೆತ ­ಕಚ್ಚಾ ­ನೀರು ನಿಂತುಕೊಂ­ಡಿತ್ತು. ಮಂಡಗದ್ದೆಗೆ ಬರುತ್ತಿದ್ದಂತೆ ­ನದಿಯನ್ನು ­ನೋಡುವ ನಮ್ಮ ­ಉತ್ಸಾಹಕ್ಕೆ ತಡೆಯೊ­ಡ್ಡಿದಂತಾಯಿತು. ­ವಿಶಾಲ ­ತುಂಗೆಯ ನಡುಗಡ್ಡೆಗಳು ಏಕೀಭ­ವಿಸಿ, ­ಗಡ್ಡೆಯ ಮರಮರಗಳನ್ನು ಆವ­ರಿಸಿ ­ಉಕ್ಕುತ್ತಾ ಹರಿಯುತ್ತಿತ್ತು. ­ಮರದಿಂದ ­ಇಳಿಬಿದ್ದ ರೆಂಬೆಗಳಲ್ಲಿ, ಪೊದೆಗಳಲ್ಲಿ ಕಟ್ಟಿದ್ದ ಹಕ್ಕಿಗೂಡುಗಳು ಕೊಚ್ಚಿಹೋ­ಗಿದ್ದವು.

ಮರಗಳ ­ತುದಿಯಲ್ಲಿ ಗೂಡುಕಟ್ಟಿದ್ದ ­ಹಕ್ಕಿಗಳು ಆಘಾತ­ವನ್ನೆದುರಿಸುತ್ತಾ ­ಜೀವ ­ಕೈಲಿ ­ಹಿಡಿದು ­ಅತ್ತಿತ್ತ ಹಾರಾಡುತ್ತಾ ರೋಧಿಸುತ್ತಿದ್ದವು. ಸ್ಥಳೀಯರ ­ಪ್ರಕಾರ ­ಅಲ್ಲಿ ­ಗೂಡು ­ಕಟ್ಟಿದ್ದ ­ಅರ್ಧದಷ್ಟು ­ಹಕ್ಕಿಗಳು ­ತೇಲಿ ಹೋಗಿದ್ದವು. ­ಇನ್ನೇನು ­ರಸ್ತೆಗೇ ­ನುಗ್ಗಬಹುದು ­ಎನ್ನುವಂತೆ ಹರಿಯುತ್ತಿದ್ದ ­ನದಿಯನ್ನು ಬೆರ­ಗಿ­ನಿಂದ ನೋಡುತ್ತಲೇ ಮಂಡಗಳಲೆಯನ್ನು ­ಬಿಟ್ಟು ­ಇನ್ನಷ್ಟು ­ದೂರ ಮುಂದುವ­ರಿದೆವು.

­ರಸ್ತೆ ­ಮತ್ತು ­ನದಿಯ ­ಮಧ್ಯೆ ­ಸರಳ ರೇಖೆಯಂತೆ ಹಬ್ಬಿಕೊಂ­ಡಿರುವ ಮಂಡಗದ್ದೆಯ ­ಮತ್ತೊಂದು ತುದಿಯಲ್ಲಿ ­ಒಂದು ­ದೇಸಿ ­ಹೋಟೆಲ್ ­ಇದೆ. ದಕ್ಷಿಣ ­ಕನ್ನಡ ಜಿಲ್ಲೆ­ಯಿಂದ ­ಬಂದ ­ಒಬ್ಬ ­ಶೆಟ್ಟರು ­ಅದನ್ನು ನಡೆಸುತ್ತಿದ್ದಾರೆ. ­ಹೊಳೆಯ ­ತಾಜಾ ಮೀನುಗಳನ್ನು ತಿನ್ನಬೇ­ಕೆಂದರೆ ­ಅಲ್ಲಿ ಹೋಗಬೇಕು. ­ಇಂಥ ಪ್ರವಾ­ಹದಲ್ಲಿ ­ಮೀನು ಹಿಡಿಯುವುದು ­ಕಷ್ಟ. ­ಅಲ್ಲದೆ ­ಬಲೆಗೆ ­ಮೀನು ಬೀಳುವುದೂ ­ಅನುಮಾನ ­ಎಂದು ­ಊಹಿಸಿದ್ದ ­ನಾವು, ಯಾವುದಕ್ಕೂ ­ಇರಲಿ ­ಎಂದು ಕಾರಿ­ನಿಂದ ­ಇಳಿದು ವಿಚಾ­ರಿ­ಸಿದೆವು.

­ಹೋಟೆಲ್ ಯಜ­ಮಾನ ನಗುನಗುತ್ತಲೇ ­‘ಮೀನು ­ಉಂಟು ­ಬನ್ನಿ’ ­ಎಂದು ಆಹ್ವಾ­ನಿ­ಸಿದ. ­ಒಂದಲ್ಲ, ಎರಡು ­ಮೂರು ­ಬಗೆಯ ­ತಾಜಾ ­ಮೀನಿನ ಖಾದ್ಯ ಸಿದ್ಧ­ವಾ­ಗಿತ್ತು. ­ಅಲ್ಲೇ ವಾಸ­ವಿರುವ ಕುಟುಂಬದ ಹೆಣ್ಣುಮಕ್ಕಳೇ ­ಅಡುಗೆ ತಯಾರಿಸುತ್ತಾರೆ. ­ಇಂಥ ಪ್ರವಾ­ಹದ ನಡುವೆಯೂ ­ಮೀನು ಹಿಡಿಯಲು ­ಸಾಧ್ಯವೇ ­ಎಂಬ ­ನನ್ನ ­ಪ್ರಶ್ನೆಗೂ ­ಅವರಲ್ಲಿ ­ಉತ್ತರವಿತ್ತು.

ತುಂಗಾನ­ದಿಯಲ್ಲಿ ­ಮೀನು ­ಹಿಡಿಯಲು ಸಾಧ್ಯ­ವಿಲ್ಲ. ­ಆದರೆ ಕಾಡಿ­ನಿಂದ ಹರಿದು ­ಬಂದು ­ನದಿಗೆ ­ಸೇರುವ ಹಳ್ಳಕೊಳ್ಳಗಳಲ್ಲಿ ­ಮೀನು ಸಿಗುತ್ತವೆ. ಅವುಗಳನ್ನೇ ­ಬೆಸ್ತರು ­ಹಿಡಿದು ­ತರುತ್ತಾರೆ. ­ನದಿಯ ­ದೊಡ್ಡ ಮೀನುಗ­ಳಿ­ಗಿಂತ ಸಣ್ಣ ­ಮೀನಿನ ­ರುಚಿ ­ಹೆಚ್ಚು ­ಎಂದು ­ಅವರು ಹೇಳಿದರು. ­

ಅವರ ­ಮಾತು ಸತ್ಯ­ವಾ­ಗಿತ್ತು. ­ಒಂದು ­ಬಗೆಯ ­ಮೀನಿನ ­ಹುಳಿ, ­ಇನ್ನೊಂದು ­ಬಗೆಯ ­ತೀರ ­ಸಣ್ಣ ­ಸಸ್ಲು ­ಮೀನಿನ ­ಗಸಿ, ­ದೊಡ್ಡ ­ಮೀನಿನ ­ಪ್ರೈ. ­ನಾವು ­ಅದೆಷ್ಟು ­ತಿಂದೆವೋ, ­ಆದರೆ ­ಅಷ್ಟೇ ­ಕಡಿಮೆ ­ಬಿಲ್‌. ­ನನಗೆ ಆಶ್ಚರ್ಯವಾಯಿತು. ಪೇಟೆಯವರಂತೆ ­ಇವರು ­ಆಸೆ ಬುರುಕರಲ್ಲ, ಆಗಂತುಕರು ­ಎಂದು ಹೆಚ್ಚು ­ಬೆಲೆ ಹೇರುವ­ವರೂ ­ಅಲ್ಲ. ­ಅವತ್ತಿನ ­ಲಾಭ ­ಅವತ್ತಿಗೆ ­ಅಷ್ಟೆ. ­ಅವರ ಉದಾರತೆಗೆ ಧನ್ಯವಾದ ­ಹೇಳಿ ಹೊರ ಬಂದೆವು.

| ಮುಂದಿನ ವಾರಕ್ಕೆ ।

October 31, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: