ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

’ಮಾತಾಡಿ ಮುಗಿಸಬಹುದಾಗಿದ್ದ ಮನಸ್ತಾಪವೊಂದನು…’

ಕೆಲವು ಕವಿತೆಗಳು

ಕು ಸ ಮಧು ಸೂಧನ

ಕಲ್ಲಿನ ಕಥೆ!


ಕೆತ್ತದೆ ಉಳಿದ ಕಲ್ಲು
ಬಯಲಲೇ ಬಿದ್ದು
ಬಿಸಿಲಲಿ ಬೆಂದು
ಇನ್ನಷ್ಟು ಕಪ್ಪಾಯಿತು
ಕೂತಲ್ಲೇ ಮುಪ್ಪಾಯಿತು!
ಕೆತ್ತಿಸಿಕೊಂಡು ಶಿಲೆಯಾದ ಕಲ್ಲು
ಗರ್ಭಗುಡಿಯ ಮೂರುತಿಯಾಗಿ
ಆರತಿ ಅಭಿಷೇಕ
ದೂಪ ದೀಪಗಳ
ಹೊಗೆಯಲಿ
ಮೈ ಮರೆಯಿತು
ಮೆರೆಯಿತು
ಸ್ಥಾವರಕೆ
ಸಾಕ್ಷಿಯಾಯಿತು.
 
ಅರಿವು

ಹಿಡಿದು ನಿಂತರೆ
ಆಯುಧವ
ನೀನು
ರಣರಂಗದೊಳು
ನಾನು
ತ್ಯಜಿಸುವೆ ಶಸ್ತ್ರ!
ಸೋಲುವ
ಸಾಯುವ ಬಯವಲ್ಲ
ಹಿಡಿದು ನಿಂತರೆ
ಖಡ್ಗ
ಇಬ್ಬರೂ
ಇಲ್ಲವಾಗುತ್ತೇವೆಂಬ
ಅರಿವು!
ಗೆದ್ದೆನೆಂದು ಬೀಗದಿರು
ಬಾಹುಬಲಿಯ
ಮರೆಯದಿರು!
 
ಬಟ್ಟೆಗಳು

ಬಟ್ಟೆಗಳು ನಗುತ್ತವೆ
ತೊಟ್ಟವರು
ತನ್ನ ಉಟ್ಟೂ
ಬೆತ್ತಲಾಗಿದ್ದಕ್ಕೆ!
ಬಟ್ಟೆಗಳು ನಾಚುತ್ತವೆ
ತನ್ನ ಉಟ್ಟು
ನೀಟಾದೆವೆಂದು ಕೊಂಡವರು
ಒಳಗೆ ಕೊಳಕಾಗಿದ್ದಕ್ಕೆ!
ಬಟ್ಟೆಗಳು ಬೆರಗಾಗುತ್ತವೆ
ತನ್ನ ತೊಟ್ಟು
ಮೆರೆಯುವವರ ಗತ್ತಿಗೆ
ಬಟ್ಟೆಗಳು ಕರುಬುತ್ತವೆ
ತೊಟ್ಟೊಡನೆ ತನ್ನ
ಬದಲಾಗುವ
ಮನುಷ್ಯರ ಅಂತಸ್ತಿಗೆ!
 
ಮುನಿಸು


ಮೌನದಲಿ
ಮುಗಿಸಬಹುದಾಗಿದ್ದ
ಮುನಿಸೊಂದನು ಮಾತಾಡಿ ಮಾತಾಡಿ
ಮೈಲಿಗಟ್ಗಟಲೆ ಎಳೆದೆವು!
 
ಮಾತಾಡಿ
ಮುಗಿಸಬಹುದಾಗಿದ್ದ
ಮನಸ್ತಾಪವೊಂದನು ಮೌನಕೆ ಶರಣಾಗಿ
ಮಹಾಯುದ್ದ ಮಾಡಿದೆವು!
 
ಮಾತು ಮೌನಗಳ ಮೌಲ್ಯವನರಿಯದೆ
ಸಂಬಂದಗಳ ಸೇತುವೆಯನ್ನು
ಕಡಿದು ಹಾಕಿದೆವು!
 

‍ಲೇಖಕರು G

9 September, 2013

3 Comments

  1. mmshaik

    nice..all poems.

  2. g.n.nagaraj

    ಒಳ್ಳೆಯ ಚುಟುಕು ಕವನಗಳು

  3. Anonymous

    ellaa kavitegalu chennagive sir.-smitha.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading