’ನಡುಗಾಲದ ಪ್ರೇಮ ಹಿಂಗಾರು ಮಳೆಯಂತೆ…..’ – ಜೋಗಿ ಬರೀತಾರೆ


ಒಂದು ಪ್ರಸಂಗ:
ಅವರಿಗೆ ಅರವತ್ತನಾಲ್ಕು ವರ್ಷ.
ಮೊದಲ ಹೆಂಡತಿಯಿಂದ ದೂರ ಇದ್ದಾರೆ. ಎರಡನೆಯ ಹೆಂಡತಿಯ ಜೊತೆಗೆ ಹದಿನೈದು ವರುಷದಿಂದ ಸಂಸಾರ ಮಾಡುತ್ತಿದ್ದಾರೆ. ಎರಡನೇ ಹೆಂಡತಿಯಿಂದ ಒಬ್ಬ ಮಗನೂ ಹುಟ್ಟಿದ್ದಾನೆ. ಮಗನ ಮೇಲೆ ಅವರಿಗೆ ಅಪಾರ ಪ್ರೀತಿ. ತನ್ನ ಮಗ ಸದಾ ತನ್ನ ಜೊತೆಗಿರಬೇಕು ಅನ್ನುವ ಆಸೆ. ಅವನು ತನ್ನ ಅಮರತ್ವದ ಆಶೆಗೆ ಸಂಕೇತವೆಂದು ಅವರು ನಂಬಿದಂತಿದೆ.
ಮೊದಲನೆಯ ಪತ್ನಿಯನ್ನು ದೂರ ಮಾಡುವುದಕ್ಕೆ ಕಾರಣವಾದದ್ದು ಕೇವಲ ಆಕರ್ಷಣೆ. ಏರುಜವ್ವನೆಯೊಬ್ಬಳ ಪರಿಚಯ ಆಗುತ್ತಿದ್ದಂತೆ ಮನಸ್ಸು ಅತ್ತ ಕಡೆ ಸೆಳೆಯಲಾರಂಭಿಸಿತು. ಆಕೆಗೂ ಅವರ ಬಗ್ಗೆ ಇನ್ನಿಲ್ಲದ ಮೋಹ, ಪ್ರೇಮ ಮತ್ತು ಆರಾಧನೆ. ಅದಕ್ಕೂ ಕಾರಣಗಳಿದ್ದವು. ಅವಳನ್ನು ಭೇಟಿಯಾಗುವ ಹೊತ್ತಿಗೆ ಅವರು ಜನಪ್ರಿಯತೆಯ ಉತ್ತುಂಗದಲ್ಲಿದ್ದರು. ಅವರನ್ನು ಭೇಟಿ ಮಾಡುವುದಕ್ಕೆ, ಅವರ ಜೊತೆ ಮಾತಾಡುವುದಕ್ಕೆ ಮಂದಿ ಹಾತೊರೆಯುತ್ತಿದ್ದರು. ಅವರ ಜೊತೆ ಫೋಟೋ ತೆಗೆಸಿಕೊಳ್ಳುತ್ತಿದ್ದರು. ಅವರ ಕೈ ಕುಲುಕುವುದಕ್ಕೆ ದೂರದೂರದ ಊರುಗಳಿಂದ ಬರುತ್ತಿದ್ದರು.
ಅವರಿಗೂ ತನ್ನ ಸಾಧನೆಯ ಕುರಿತು ಹೆಮ್ಮೆಯಿತ್ತು. ತನ್ನ ಪ್ರತಿಭೆಯ ಕುರಿತು ಅಪಾರವಾದ ನಂಬಿಕೆಯೂ ಇತ್ತು. ಹಳ್ಳಿಯಿಂದ ಬಡತನದಿಂದ ಬಂದ ತಾನು ಹೇಗೆ ಕೇವಲ ಸ್ವಂತ ಪ್ರತಿಭೆಯಿಂದ ಬೆಳೆಯುತ್ತಾ ಹೋದೆ, ಹೇಗೆ ಎಲ್ಲರ ಕಣ್ಮಣಿಯಾದೆ ಎನ್ನುವುದನ್ನು ಅವರು ಆಗಾಗ ಮೆಲುಕು ಹಾಕುತ್ತಿದ್ದರು. ಅವನ್ನೆಲ್ಲ ನೆನಪಿಸಿಕೊಳ್ಳುತ್ತಿದ್ದರೆ, ತಾನು ಪಟ್ಟ ಶ್ರಮಕ್ಕೆ ಇಡೀ ಜಗತ್ತೇ ತನಗೆ ಕೃತಜ್ಞವಾಗಿರಬೇಕು ಅನ್ನಿಸುತ್ತಿತ್ತು. ತಾನು ಎಂಥಾ ತಪ್ಪನ್ನಾದರೂ ಮಾಡಬಹುದು, ಅದು ತಪ್ಪಲ್ಲ, ತನ್ನ ಪ್ರತಿಭೆಗೆ ಸಿಕ್ಕ ಮತ್ತೊಂದು ಪುರಸ್ಕಾರ, ಅರ್ಹವಾದ ಬೆಲೆ ಎಂದೇ ಅವರು ಭಾವಿಸುತ್ತಿದ್ದರು. ಅಂಥಾ ಭಾವನೆಯಲ್ಲೇ ಅವರು ಎರಡನೇ ಪತ್ನಿಯಾಗಿ ತನಗಿಂತ ತುಂಬ ಚಿಕ್ಕವಳಾದ ಅವಳನ್ನು ಸ್ವೀಕಾರ ಮಾಡಿದ್ದು.
ಆಕೆಗೂ ಅಂಥ ಪ್ರತಿಭಾವಂತರ ಗಂಡ ಅಂತ ಹೇಳಿಕೊಳ್ಳುವುದರಲ್ಲಿ ಹೆಮ್ಮೆಯಿದ್ದಂತಿತ್ತು. ಅವರ ಜನಪ್ರಿಯತೆ ಮತ್ತು ಮೋಡಿ ವಯಸ್ಸನ್ನು ಮರೆಸಿತು. ನೀನಿಲ್ಲದೇ ನಾನಿರಲಾರೆ ಅಂತ ಆಕೆ ದುಂಬಾಲು ಬಿದ್ದಳು. ಅವಳ ಹಾಗೆ ಒಲಿಸಿಕೊಳ್ಳುವುದು, ಸುಳಿದು ಸೆಳೆಯುವುದು ಮೊದಲ ಹೆಂಡತಿಗೆ ಗೊತ್ತಿರಲಿಲ್ಲ. ಆಕೆ ಅವರ ಬಡತನವನ್ನೂ ಕಂಡಿದ್ದಳು. ಯಾತನೆಯನ್ನು ನೋಡಿದ್ದಳು, ಅವರು ನಿಧಾನವಾಗಿ ಬೆಳೆದು ಎತ್ತರಕ್ಕೇರುವುದನ್ನು ಧನ್ಯತೆಯಿಂದ ನೋಡುತ್ತಾ ಜತೆಗಿದ್ದಳು ಅಷ್ಟೇ.
ತನ್ನ ಹೊಸ ಪರಿಕ್ರಮಣಕ್ಕೆ ತಕ್ಕ ನೆಲ, ಜಲ ಮತ್ತು ಪರಿಸರವನ್ನು ಹೊಸ ಪತ್ನಿ ಒದಗಿಸುತ್ತಾಳೆ, ಆಕೆಯ ಯೌವನ ತನಗೆ ಸ್ಪೂರ್ತಿಯಾಗುತ್ತದೆ ಎಂದೇ ಅವರು ನಂಬಿದ್ದರೆಂದು ಕಾಣುತ್ತದೆ. ಅವಳ ಪ್ರೀತಿ ಶಾಶ್ವತ ಅಂತ ಅವರೂ, ಅವರ ಪ್ರತಿಭೆಯೇ ಅಂತಿಮ ಎಂದು ಅವಳೂ ನಂಬಿಕೊಂಡಿರಬೇಕಾದರೆ, ಒಂದು ಸಣ್ಣ ಅಲೆ ಎಲ್ಲವನ್ನೂ ಬದಲಾಯಿಸುತ್ತದೆ.
ಅವರು ಕ್ರಮೇಣ ಅಪ್ರಸ್ತುತರಾಗುತ್ತಾ ಹೋಗುತ್ತಾರೆ. ಅವರಿಗಿಂತ ಪ್ರತಿಭಾವಂತರೂ, ಯೌವನವಂತರೂ, ಖ್ಯಾತಿವಂತರೂ, ಶ್ರೀಮಂತರೂ ಅವಳಿಗೆ ಕಾಣಿಸುತ್ತಾ ಹೋಗುತ್ತಾರೆ. ಆಕೆಯ ಯೌವನ, ಮೋಹ, ವ್ಯಾಮೋಹಗಳ ಮುಂದೆ ತಾನೊಬ್ಬ ಅನಾಥ ಎಂದು ಅವರಿಗೂ ಅನ್ನಿಸಲಿಕ್ಕೆ ಶುರುವಾಗುತ್ತದೆ. ಜೀವನದ ನಡುಗಾಲದಲ್ಲಿ ಬರುವ ಪ್ರೀತಿ, ಹಿಂಗಾರು ಮಳೆಯಂತೆ. ಆ ನೀರು ಭೂಮಿಯಲ್ಲಿ ಇಂಗುವುದೇ ಇಲ್ಲವೇನೋ? ಅವರ ಬದುಕಲ್ಲೂ ಹಾಗೇ ಆಯಿತು. ನಿರೀಕ್ಷೆಗಳು ಬದಲಾದವು. ಅವರಿಬ್ಬರೂ ತಬ್ಬಿಬ್ಬಾಗಿ, ತಮ್ಮ ಬದುಕು ಹೀಗೇಕಾಯಿತು ಎಂದು ನೋಡಿಕೊಳ್ಳಲು ಆರಂಭಿಸಿದರು. ಅವರು ಅವಳ ಮೇಲಿನ ದ್ವೇಷಕ್ಕೋ ಏನೋ ಮತ್ತೊಂದು ಸಂಬಂಧ ಹುಡುಕಿಕೊಂಡು ಹೊರಟರು. ಆಕೆ ಅವರಿಗೆ ತನ್ನನ್ನು ಒಪ್ಪಿಸಿಕೊಳ್ಳುವುದನ್ನು ಬಿಟ್ಟುಬಿಟ್ಟಳು. ಅಲ್ಲಿಗೆ ಇಬ್ಬರ ನಡುವಿದ್ದ ತೂಗುಸೇತುವೆ ಕಡಿದುಹೋಯಿತು.

ಆಮೇಲೆ ಯುದ್ಧ ಶುರುವಾಯಿತು. ತನ್ನ ಗಂಡನಿಗೆ ಕೆಲಸದಾಕೆಯ ಜೊತೆ ಸಂಬಂಧ ಇದೆ ಎಂದು ಅವಳು ಆರೋಪಿಸಿದಳು. ಅವರು ಸಿಟ್ಟಾಗಿ ಕುಳಿತರು. ತನ್ನ ಮೇಲೆ ಅವರು ಹಲ್ಲೆ ಮಾಡಿದರೆಂದು ಆಕೆ ದೂರು ಕೊಟ್ಟಳು. ಅವರು ನಾಪತ್ತೆಯಾದರು. ಹತ್ತು ವರುಷದ ಹಿಂದೆ ಮುತ್ತೂರ ತೇರಿನಲಿ ಅತ್ತಿತ್ತ ಸುಳಿದವರು ನೀವಲ್ಲವೇ ಅನ್ನುವ ಹಾಡು ಆಕೆಗೆ ನೆನಪಾಗಲಿಲ್ಲ.ದಿಬ್ಬಣ ಹೊರಟು ಹೋಗಿತ್ತು, ಗಾಡಿಯ ಧೂಳು ಮಾತ್ರ ಕಣ್ಣಲ್ಲಿ ಉಳಿದಿತ್ತು.
ಒಂದು ಸಂದರ್ಶನ:
ಯಾರೋ ಕೇಳಿದ ಪ್ರಶ್ನೆಗಳಿಗೆ ಅವರು ನಿರ್ಭಾವುಕವಾಗಿ ಉತ್ತರಿಸಿದರು. ಪ್ರಶ್ನೆ ಕೆಣಕುವಂತಿತ್ತು, ಅವರನ್ನು ಶೋಧಿಸುವಂತಿತ್ತು. ಹತ್ತು ವರುಷಗಳ ಹಿಂದೆ ಅಂಥ ಪ್ರಶ್ನೆಗಳನ್ನು ಅವರ ಮುಂದಿಡುವ ಧೈರ್ಯ ಯಾರಿಗೂ ಇರಲಿಲ್ಲ; ಕಾಲ ಎಲ್ಲವನ್ನೂ ಬದಲಿಸಿತ್ತು.ಅವರು ಉತ್ತರಿಸಲೇಬೇಕಾದ ಅನಿವಾರ್ಯಕ್ಕೆ ಸಿಕ್ಕಿದ್ದರು.
ಅವರ ಉತ್ತರಗಳೂ ನೇರವಾಗಿದ್ದವು. ಕತೆ ಹೇಳುತ್ತಿದ್ದವು.
ನಾವಿಬ್ಬರೂ ಚೆನ್ನಾಗಿದ್ದೆವು. ಆದರೆ ಕ್ರಮೇಣ ಎಲ್ಲವೂ ಶಿಥಿಲವಾಗುತ್ತಾ ಹೋಯ್ತು. ಅವಳಿಗೆ ನಾನು ಬೇಡದವನಾದೆ. ನಾವು ಜೊತೆಗಿದ್ದದ್ದೇ ಒಂದು ಆಕಸ್ಮಿಕ ಎಂಬಂತೆ ಭಾಸವಾಗತೊಡಗಿತು. ನನ್ನ ಆಸ್ತಿಯನ್ನು ಮೂರು ಪಾಲು ಮಾಡಿ ಒಂದನ್ನು ನಾನಿಟ್ಟುಕೊಂಡು, ಮಿಕ್ಕೆರಡು ಭಾಗವನ್ನು ಅವಳಿಗೂ ಮಗನಿಗೂ ಹಂಚಿಕೊಟ್ಟೆ. ಅದರಿಂದಲೂ ಅವಳಿಗೆ ತೃಪ್ತಿಯಾಗಲಿಲ್ಲ. ನನ್ನನ್ನು ಹಂಗಿಸುತ್ತಿದ್ದಳು, ಬೈಯುತ್ತಿದ್ದಳು. ಈಗ ನಾನು ಹೊಡೆದೆ ಎಂದು ಆರೋಪಿಸಿದ್ದಾಳೆ. ಬಿದಿರಿನ ಕೋಲಿನಿಂದ ಹೊಡೆದೆ ಅನ್ನುತ್ತಾಳೆ. ಬಿದಿರ ಕೋಲನ್ನು ಯಾರಾದರೂ ಮನೇಲಿಟ್ಟುಕೊಳ್ಳುತ್ತಾರಾ?
ನನಗೆ ನನ್ನ ಮಗನನ್ನು ನೋಡುವುದಕ್ಕೂ ಅವಳು ಬಿಡುತ್ತಿಲ್ಲ. ಅವನ ಜೊತೆ ಮಾತಾಡಲಿಕ್ಕೆಂದು ಫೋನು ಮಾಡಿದೆ. ಆಗ ಮಗನೇ ನಾನಿಲ್ಲ ಅಂತ ಹೇಳು ಅಂತ ಹೇಳೋದು ನನಗೆ ಸ್ಪಷ್ಟವಾಗಿ ಕೇಳಿಸಿತು. ಅವನ ತಲೆಯನ್ನೂ ಆಕೆ ಕೆಡಿಸಿದ್ದಾಳೆ. ಅವಳಿಗೆ ಆಧುನಿಕತೆಯ ಹುಚ್ಚು, ಸುತ್ತಾಡುವ ದಾಹ. ಹದಿನೈದು ವರುಷಗಳಲ್ಲಿ ಮೂವತ್ತೈದು ದೇಶಗಳಿಗೆ ಪ್ರವಾಸ ಹೋಗಿ ಬಂದಿದ್ದಾಳೆ. ನಾನು ಕರ್ತವ್ಯದ ಮೇಲೆ ಹೋಗುವಾಗಲೂ ನನ್ನ ಜೊತೆ ಬರುತ್ತಾಳೆ. ಅವಳ ಪ್ರಯಾಣದ ಖರ್ಚು ನನ್ನ ಬಗಲಿಗೇ ಬೀಳುತ್ತದೆ.
ಮೊನ್ನೆ ಮೊನ್ನೆ ರಕ್ಷಾಬಂಧನದಂದು ಮಗನಿಗೆ ರಾಖಿ ಕಟ್ಟಿದವರಿಗೆ ಕೊಡಲು ಹತ್ತು ಸಾವಿರ ಕೇಳಿದಳು. ಮನೆ ಕೆಲಸದವಳೂ ರಾಖಿ ಕಟ್ಟಿದ್ದಾಳೆ. ಅವಳಿಗೂ ಮೂರು ಸಾವಿರ ಕೊಡು ಅಂದಳು. ನಾನು ಕೊಡೋದಿಲ್ಲ ಅಂದೆ. ಸಿಕ್ಕಾಪಟ್ಟೆ ಬೈದಳು. ಕತ್ತಿನ ಪಟ್ಟಿ ಹಿಡಿದಳು. ನಾನು ಸಿಟ್ಟು ಮಾಡಿಕೊಳ್ಳಲಿಲ್ಲ. ಮನೆಯಿಂದ ಹೊರಗೆ ಹೋಗಲು ನೋಡಿದೆ. ದಾರಿಗೆ ಅಡ್ಡನಿಂತಳು. ಅವಳನ್ನು ತಳ್ಳಿ ಹೊರಗೆ ಹೋದೆ. ಹಲ್ಲೆ ಮಾಡಿದ ಅಂತ ದೂರು ಕೊಟ್ಟಳು. ನಾನು ಹೊರಗೆ ಹೋಗಿದ್ದು ಬೆಳಗ್ಗೆ ಒಂಬತ್ತೂವರೆಗೆ, ಅವಳು ದೂರು ಕೊಟ್ಟದ್ದು ಸಂಜೆ ನಾಲ್ಕೂವರೆಗೆ. ಆ ಏಳು ಗಂಟೆ ಅವಳೇಕೆ ಸುಮ್ಮನಿದ್ದಳು ಅಂತ ಯಾರಾದರೂ ಕೇಳಿದ್ದಾರಾ?
ನನಗೆ ಮೊದಲ ಹೆಂಡತಿ ಜೊತೆ ಅಕ್ರಮ ಸಂಬಂಧ ಇದೆ ಅಂತ ಆರೋಪಿಸುತ್ತಾಳೆ. ನನಗೀಗ ಅರವತ್ತನಾಲ್ಕು. ಈ ವಯಸ್ಸಿನಲ್ಲಿ ನನಗೆ ಸಹಿ ಮಾಡಲೂ ಆಗುತ್ತಿಲ್ಲ. ನನ್ನ ಕೈ ನಡುಗುತ್ತದೆ. ಅಕ್ರಮ ಸಂಬಂಧ ಹೇಗೆ ಇಟ್ಟುಕೊಳ್ಳಲಿ ನಾನು. ಹಳ್ಳಿಯಿಂದ ಬಂದ ಹುಂಬ ನಾನು. ಇದೆಲ್ಲ ನನಗೆ ಹೊಸದು. ನನ್ನನ್ನು ಬಿಟ್ಟು ಬಿಟ್ಟರೆ ಮೊದಲ ಹೆಂಡತಿಯ ಬಳಿಗೆ ಹೋಗಿ ಬಿಡುತ್ತೇನೆ. ಮಿಕ್ಕ ಆಯಸ್ಸನ್ನು ಅವಳ ಜೊತೆ ಕಳೆಯುತ್ತೇನೆ. ಆದರೆ ಇವಳು ನನ್ನನ್ನು ಬಿಡುತ್ತಿಲ್ಲ. ಅವಳಿಗೆ ನನ್ನ ಹೆಂಡತಿ ಅಂತ ಹೇಳಿಕೊಳ್ಳುವ ದುರಾಸೆ.
ಈಕೆಯೊಂದಿಗೆ ಬಾಳುವುದಕ್ಕೆ ನನಗಿಷ್ಟವಿಲ್ಲ. ನನ್ನ ಮಗನನ್ನು ವಾರಕ್ಕೊಂದೆರಡು ಸಲ ನೋಡಿಕೊಂಡು ಬರುವುದಕ್ಕೆ ಅವಕಾಶ ಕೊಟ್ಟರೆ ಸಾಕಾಗಿದೆ. ಈಗ ನಾನು ನಿರೀಕ್ಷಣಾ ಜಾಮೀನಿಗೋಸ್ಕರ ಓಡಾಡುತ್ತಿದ್ದೇನೆ. ಕಾನೂನಿಗೋ ಹೆಣ್ಮಕ್ಕಳ ಬಗ್ಗೆ ಮೃದು ಧೋರಣೆ.
 
ಒಂದು ಮರುದರ್ಶನ:
ಅವರಿಗೆ ಬದುಕಿನ ಸತ್ಯಗಳು ಈಗ ಅರಿವಾಗುತ್ತಿವೆ. ವೀಳ್ಯದೆಲೆಯ ತೊಟ್ಟನ್ನು ಮುರಿದು ಹಿಂದಕ್ಕೆಸೆಯುವ ಕಲಾವಿದನಂತೆ, ಜರಾಸಂಧನೆಂಬ ರಾಕ್ಷಸನನ್ನು ಸೀಳಿ ಹಿಂದುಮುಂದಾಗಿ ಎಸೆದು ಎಂದೂ ಕೂಡಿಕೊಳ್ಳಲಾಗದಂತೆ ಮಾಡಿದ ಭೀಮನಂತೆ ಅವರೂ ಸಂಬಂಧವನ್ನು ಹರಿದೆಸೆದವರೇ. ಕಲ್ಲು ಎಸೆಯುವುದಷ್ಟೇ ನನಗೆ ಗೊತ್ತು. ಅದು ಎಬ್ಬಿಸುವ ತರಂಗಗಳಿಗೂ ನನಗೂ ಸಂಬಂಧ ಇಲ್ಲ ಅಂತ ಬದುಕಿದವರು. ಆಗ ಆ ತರಂಗಗಳು ಮೂಡುತ್ತಿವೆ. ಎಸೆದವರು ಅದಕ್ಕೂ ತನಗೂ ಸಂಬಂಧ ಇಲ್ಲ ಅಂತ ಕೂತಿದ್ದಾರೆ. ಆ ತರಂಗಗಳ ಮೇಲೆ ಇವರಿಗೂ ಅಧಿಕಾರ ಇಲ್ಲ. ಅರವತ್ತನಾಲ್ಕನೆಯ ವಯಸ್ಸಿಗೆ ಇದೆಲ್ಲ ಬೇಕಿತ್ತಾ ಅಂತ ಅವರಿಗೇ ಅನ್ನಿಸತೊಡಗಿದೆ. ತನ್ನ ಯೌವನವನ್ನು ಸುದೀರ್ಘಗೊಳಿಸುವ ಸುಂದರಿಯಂತೆ ಕಂಗೊಳಿಸಿದವಳು, ಈಗ ತನ್ನ ಜೀವಂತಿಕೆಯನ್ನು ಹಿಂಡುವವಳಂತೆ ಕಾಣುತ್ತಿದ್ದಾಳೆ. ಅಮರತ್ವದ ಆಶೆ ತೊಲಗಿದೆ. ಬದುಕುವ ಆಸೆ ಉಳಿದಿಲ್ಲ. ಮತ್ತೆ ಮಾತೃರೂಪಿಯಂತಿರುವ ಮೊದಲ ಪ್ರೇಮಕ್ಕೆ ಮನಸ್ಸು ಹಾತೊರೆಯುತ್ತಿದೆ.
ಇಂಥ ಬಿಕ್ಕಟ್ಟುಗಳನ್ನು ತನ್ನ ಮುಂದಿಟ್ಟುಕೊಂಡು ಕೂತವರ ಹೆಸರು ಓಂ ಪುರಿ. ಅದ್ಭುತ ನಟನೆ, ಬೆಚ್ಚಿಬೀಳಿಸುವ ಧ್ವನಿ, ಪದಗಳನ್ನು ತನ್ನದನ್ನಾಗಿ ಮಾಡಿಕೊಂಡು ಎರಚುವ ಶೈಲಿ ಮತ್ತು ಧೀರೋದಾತ್ತ ನಿಲುವು ನೆನಪಿನಿಂದ ಮರೆಯಾಗಿದೆ. ಅವರನ್ನು ಮೆಚ್ಚುತ್ತಿದ್ದವರಿಗೂ ವಯಸ್ಸಾಗಿದೆ.
ಒಂದು ಕಾಲದಲ್ಲಿ ಅವರ ಜೊತೆ ತಮ್ಮನ್ನು ಗುರುತಿಸಿಕೊಳ್ಳಲು ಬಯಸುತ್ತಿದ್ದವರಿಗೆ, ಈಗ ಅದು ಬೇಕಾಗಿಲ್ಲ. ಕಲಾವಿದನಿಗೆ ವಯಸ್ಸಾಗುತ್ತಿದ್ದ ಹಾಗೇ, ಆತನ ವಯಸ್ಸಿನವರು ಕೂಡ ಅವನೊಬ್ಬ ಹಳೆಯ ನಟ, ಪಾಪ ವಯಸ್ಸಾಗಿದೆ ಅನ್ನಲು ಶುರು ಮಾಡುತ್ತಾರೆ.
ಅಂಥ ಮಾತನ್ನು ಜವ್ವನಿಗ ಹೆಂಡತಿ ಯಾಕೆ ಆಡಬಾರದು?
 
 

‍ಲೇಖಕರು G

September 9, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: