ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಲರ್‌ ವಿಳಿ ಕೆ ಅನುವಾದಿತ ಕವಿತೆ- ಮರಣದ ಸುದ್ದಿ ಸಾರುವವನ ಮರಣ…

ತಮಿಳು ಮೂಲ: ತಂಗಂ ಮೂರ್ತಿ
ಅನುವಾದ  ಡಾ. ಮಲರ್‌ ವಿಳಿ ಕೆ 

ತಂಗಂ ಮೂರ್ತಿ ಇವರು ತಮಿಳಿನ ಪ್ರಸಿದ್ಧ ಕವಿ ಇವರು ಪ್ರಸ್ತುತ ಪುದುಕೋಟ್ಟೈಯಲ್ಲಿ ವಾಸಿಸುತ್ತಿದ್ದಾರೆ.
ಸೂಚನೆ: ತಮಿಳು ನಾಡಿನ ಕೆಲವು ಹಳ್ಳಿಗಾಡಿನಲ್ಲಿ ಸತ್ತವರ ಸುದ್ದಿಯನ್ನು ಸಾರುವ ಪದ್ಧತಿ ಉಂಟು
.

“ದು:ಖದ ಸುದ್ದಿ
ಮರಣದ ಪ್ರಕಟಣೆ”
ಮುಂಜಾನೆ
ಆಟೋದಲ್ಲಿ ಕೇಳುವುದು
ಅವನ ದನಿ

ಆ ದನಿಯ ಮೂಲಕ
ತಿಳಿಯಲಾಗುವುದು
ಎಲ್ಲ ಮರಣವ
ಯಾವುದೇ ಮರಣವಾಗಲಿ
ಬಂಧು ಬಾಂಧವರಿಗಿಂತ ಮೊದಲು
ಅವನಿಗೇ
ಹೇಳಲ್ಪಡುವುದು

ಬಡಕಲಾದ ಒಡಲು
ಮಾಸಿದ ಉಡುಪು
ಗಡ್ಡದೊಂದಿಗೆ
ಆಟೋದ ಒಂದು ಮೂಲೆಯಲಿ
ಮುದುರಿ ಕುಳಿತಿರುವನು
ಮೈಕನ್ನು ಹಿಡಿದುಕೊಂಡು
ಗಾಳಿಯಲಿ ಪಸರಿಪ
ಆ ದನಿಯಲಿ
ಒಂದು ಗಾಂಭೀರ್ಯವುಂಟು
ನಿಂತು ನಿಧಾನಿಸಿ
ನಿಧಾನವಾಗಿ ಸಾರುವ
ಅವನನು ನಿರ್ಲಕ್ಷಿಸಿ
ಯಾರೂ ಸಾಗಲಾಗದು
ಕಾಲವಾದವರ
ಕುಟುಂಬ
ಪರಂಪರೆ
ಇತ್ಯಾದಿ
ಅಂತಿಮ ಮೆರವಣಿಗೆ
ಶವಸಂಸ್ಕಾರ
ಸಮಸ್ತವನ್ನೂ
ಸಂಕ್ಷಿಪ್ತವಾಗಿ ಹೇಳಿ
ಗಮನ ಸೆಳೆವನು
ನನ್ನ ಕಂಡರೆ
ಟೀ
ಕೊಡಿಸಿರೆಂದು ಕೇಳುವನು
ಪ್ರೀತಿಯಿಂದ ಮಾತನಾಡಿ
ಹೇಗೆ ಸಾಗುತ್ತಿದೆ
ಜೀವನ
ಎಂದು ಕೇಳುವೆನು
“ಯಾರೋ ಸತ್ತು
ನಾನು ಬದುಕುವೆನು”
ಎಂದು ನಗುವನು
ಮತ್ತೊಂದು ದಿನ
ಮಗದೊಂದು ಮರಣದ ಪ್ರಕಟಣೆಯಲಿ
ಹೊಸ ದನಿಯನಾಲಿಸಿ
ಆಟೋವನ್ನು ಇಣುಕಿ ನೋಡಿದರೆ
ಅವನಿರಲಿಲ್ಲ
ಮನೆಯ ಕಂಡುಹಿಡಿದು
ವಿಚಾರಿಸಿದೆನು
ಅಳುತ್ತಲೇ ತಿಳಿಸಿದಳು
ಆ ಮುದಿತಾಯಿ
ಶ್ವಾಸಕೋಶ ಹಾಳಾಯಿತು
ಗಂಟಲಲಿ ಹುಣ್ಣು
ಹಾಸಿಗೆ ಹಿಡಿದ
ಹೋಗಿ ಸೇರಿಬಿಟ್ಟ…
“ಸಕಲರ ಸಾವನು ಸಾರಲು
ಇವನೊಬ್ಬ ಮನುಷ್ಯನಿದ್ದ
ಇವನ ಸಾವನು ಸಾರಲು
ಒಬ್ಬ ಮನುಷ್ಯನೂ ಇಲ್ಲವಲ್ಲಾ”
ಮರಳಿ ಬರುವ ಮಾರ್ಗದಲ್ಲೆಲ್ಲಾ
ಅವನದೇ ದನಿ
ಕೇಳುತ್ತಲೇ ಇತ್ತು
ಅವನ ಮರಣವ
ಅವನೇ ಸಾರುವಂತೆ

‍ಲೇಖಕರು Admin

30 December, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading