ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮತ್ತೆ ಮಳೆ ಹೊಯ್ಯುತಿದೆ..!

ರಾಜೇಶ್ ಹೆಬ್ಬಾರ್

ಈ ಮಳೆಗೂ ನಿನಗೂ ಅದೇನೊ ಗಾಢವಾದ ನಂಟು.
ಉರಿವ ಎದೆ ಕಾವಲಿ ಮೇಲೆ ತುಂತುರು ಬಿದ್ದಾಗ
ಹಳೆಯ ನೆನಪುಗಳೆಲ್ಲ ಸಿಡಿದ್ದೆದ್ದು ಆರ್ಭಟಿಸುತ್ತವೆ.
ಹೊಸ ಮಳೆ ಜಾಡಿಸಿ ಒದ್ದ
ದುಗುಡ ದುಮ್ಮಾನ ಗಳೆಲ್ಲ
ಮೂಲೆ ಮೂಲೆಗಳಿಂದ ಹರಿ ಬಂದು ಹಳ್ಳವಾಗುತ್ತದೆ.

ಎಲ್ಲಿತ್ತು ಈ ಮಡುಗಟ್ಟಿದ ರಾಡಿ
ಕೊಚ್ಚೆ, ಸಂದಿ ಗುಂದಿ ಕಾಲುವೆ ಎಲ್ಲು ನಿನ್ನಿರುವಿಕೆಯ ನೆನಪಂತೂ ನನಗಿಲ್ಲ. ನನ್ನೊಳಗಿದ್ದ ನಿನ್ನ ಪೊರಕೆಯಿಂದ ಜಾಡಿಸಿ ಹೋದವಳಲ್ಲವೇ ನೀನು ?
ಕಮ್ಮನೆದ್ದ ಮಣ್ಣಿನ ವಾಸನೆಗೆ ನಿನ್ನ ಮಗ್ಗಲಿನ ಘಮಲನ್ನೇನಾದರೂ ಬೆರೆಸಿದ್ದೀಯಾ?

ಮೋಡ ಕರಗಿ ಧಾರಾಕಾರವಾದಾಗ ನಿನ್ನ ಸಿಟ್ಟಿಗೆ ಬಲಿಯಾದ ನನ್ನಂತೆಯೇ ಇದ್ದ ಹಳೆ ಗೆಳೆಯ ನೆನಪಾಗುತ್ತಾನೆ. ಬೈಗುಳದ ಪ್ರವಾಹ, ಗುಡುಗು ಘರ್ಜನೆ, ಬರಸಿಡಿಲು ಎಲ್ಲ ಹಿತ ನೀನಿದ್ದ ಘಳಿಗೆಯಲ್ಲಿ.
ಈಗ ಮಳೆಬಂದಾಗ ಗುಂಡಿ ಬಿದ್ದ ರಸ್ತೆಯಲ್ಲಿ ನಡೆವಾಗ
ಪ್ರವಾಹದಂತೆ ಹರಿದ ನೀನು ಮತ್ತೆ ಮೈಗೆ ರಾಚುತ್ತೀಯ
ನಡು ರಾತ್ರಿಯೂ ಟಿಪ್ ಟಿಪ್ ಎಂದು ಮರದಡಿಯ ಹನಿಯಾಗಿ ಉದುರಿ ಎದೆಯ ಮೇಲೆ ಕಚಗುಳಿಯಾಡುತ್ತೀಯಾ…

ಈ ಮಳೆ ನೀನು ಎಲ್ಲವೂ ಜೂಜು. ನಿಮ್ಮಿಷ್ಟ, ನಮ್ಮ ನಸೀಬು. ಎಂದೋ ಯಾರಿಗೊ ಹೊಡೆದ ಲಾಟರಿಯ ನಂಬಿ ಟಿಕೆಟ್ಟು ಕೊಂಡಷ್ಟೆ ಸತ್ಯ ನಿಮ್ಮ ಇರುವು ಮತ್ತು ಬರುವು.

ಎಂದಿನಂತೆ ಎಲ್ಲೊ ದೂರದಲ್ಲಿ ಸುರಿದು
ಗಾಳಿಯಲ್ಲಿ ಸುದ್ದಿ ಕಳುಹಿಸಿ ಹೊರಡಲಿಲ್ಲವಲ್ಲ‌ ಇಂದು
ನನ್ನ ಜೋಳಿಗೆಯಲ್ಲಿ ಮುದುರಿ ಮುದ್ದೆಯಾದ ಕಾಗದದ ದೋಣಿಯೊಂದಿದೆ.
ಜೋಪಾನವಾಗಿ ಒಯ್ದು ಬಿಡು
ಇನ್ನೊಂದು ಮಳೆಗೆ ಇನ್ನೊಂದು ದೋಣಿ…

ಈ ಮಳೆಗೂ ಇಳೆಗೂ ನನ್ನೆದೆಯ ತವಕಕ್ಕೂ ನಿನಗೂ ಇದೆಲ್ಲಿಯ ನಂಟು ?

‍ಲೇಖಕರು Avadhi

14 May, 2021

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading