ಪುಸ್ತಕಗಳ ಸಾಂಗತ್ಯ ತೊರೆದ ಅಶ್ವತ್ಥಪ್ಪ…

ಕೆ ರಾಜಕುಮಾರ್

ಅಶ್ವತ್ಥಪ್ಪ ಅಸ್ವಸ್ಥನಾದದ್ದನ್ನು ನಾನು ಕಂಡೇ ಇಲ್ಲ. ಕನ್ನಡ ಸಾಹಿತ್ಯ ಪರಿಷತ್ತಿನ ಪುಸ್ತಕ ಮಾರಾಟ ವಿಭಾಗದ ಮುಖ್ಯಸ್ಥನಾಗಿದ್ದರು. ಸದಾ ಪುಸ್ತಕಗಳ ಸಾಂಗತ್ಯದಲ್ಲಿ ಇರುವವರು ಸ್ವಸ್ಥರಾಗಿಯೇ ಇರುತ್ತಾರೆ ಎಂಬ ನಂಬಿಕೆ ನನ್ನದು. ಆದರೆ ಆ ಭಾವನಾತ್ಮಕ ನಂಬಿಕೆಗೆ ಕೊಡಲಿಪೆಟ್ಟು ಬಿದ್ದಿದೆ. ಇದೀಗ ಅವರು ಇಹ ತೊರೆದು, ಪರಕ್ಕೆ ತೆರಳಿ, ಗಾಢಮೌನವನ್ನು ತಬ್ಬಿಕೊಂಡಿದ್ದಾರೆ.

ಮುಂದಿನ ವರ್ಷ ಮೇ ತಿಂಗಳಲ್ಲಿ ಹಾದಿ ಬೀದಿಗಳಲ್ಲಿ ಗುಲ್‌ಮೊಹರ್ ಕುಸುಮಿಸಿ, ಪುಲಕಿಸುವ ವೇಳೆಗೆ ಅಶ್ವತ್ಥಪ್ಪ ಷಷ್ಟ್ಯಬ್ದಿ ಪೂರೈಸಿ ವೃತ್ತಿಯಿಂದ ನಿವೃತ್ತರಾಗುವುದಿತ್ತು‌. ಆದರೆ ಒಂದು ವರ್ಷದ ಮೊದಲೇ ವಿದಾಯ ಹೇಳಿರುವುದು ವಿಪರ್ಯಾಸ. ದಿನನಿತ್ಯ ದೂರದ ತುಮಕೂರಿನಿಂದ ರೈಲಿನಲ್ಲಿ ಪಯಣಿಸಿ ಪರಿಷತ್ತು ತಲಪುತ್ತಿದ್ದರು. ಅವರದು ‘ಸಕಾಲ’ ಯೋಜನೆ. ವಿಳಂಬಗತಿಗೆ ಅವಕಾಶವೇ ಇರಲಿಲ್ಲ! ದಿನನಿತ್ಯದ ಯಾನದಿಂದ ಬಳಲಿರಲಿಲ್ಲ, ಬಸವಳಿದಿರಲಿಲ್ಲ. ಪ್ರತಿದಿನವೂ ನವಚೇತನದ, ಹೊಸದುತ್ಸಾಹದ ಚಿಮ್ಮು.

ಪ್ರತಿ ತಿಂಗಳ ಮೊದಲ ತೇದಿ ಪರಿಷತ್ತಿನ ಮಳಿಗೆಯಲ್ಲಿ ಹಿಂದಿನ ತಿಂಗಳು ಮಾರಾಟವಾದ ಪುಸ್ತಕಗಳ ದಿನಂಪ್ರತಿ ಮೊತ್ತವೆಷ್ಟು ಎಂಬ ಲೆಕ್ಕವನ್ನು ನೀಡುತ್ತಿದ್ದರು. ಪ್ರತಿವರ್ಷ ನವೆಂಬರ್‌ ತಿಂಗಳಲ್ಲಿ ರಾಜ್ಯೋತ್ಸವದ ಅಂಗವಾಗಿ ಪರಿಷತ್ತಿನ ಪ್ರಕಟಣೆಗಳ ರಿಯಾಯಿತಿ ಮಾರಾಟ. ಪ್ರತಿಸಲವೂ ಹಿಂದಿನ ವರ್ಷದ ದಾಖಲೆಯನ್ನು ಮುರಿಯಬೇಕೆಂಬ ತವಕ. ಅದನ್ನು ಸಾಧಿಸಿಯೇ ಸಿದ್ಧ. ಪುಸ್ತಕ ಖರೀದಿಗೆಂದು ಬಂದವರನ್ನು ಮತ್ತಷ್ಟು ಕೊಳ್ಳಲು ಪ್ರೇರೇಪಿಸುತ್ತಿದ್ದರು. ಪುಸ್ತಕಗಳೇ ಅವರ ಸಾಥಿ-ಸಂಗಾತಿ. ಇತ್ತೀಚೆಗೆ ಸಿಬ್ಬಂದಿಗೆ ಸಂಬಂಧಿಸಿದ ವಿಷಯ ನಿರ್ವಹಣೆಯೂ ಅವರದಾಗಿತ್ತು. ಅದರಲ್ಲೂ ಅವರು ದಾಖಲಿಸಿದ್ದು ಗೆಲುವನ್ನೇ. ಅವರ ವಿಭಾಗದ ಕಡತಗಳಿಗೆ ಇತರರಿಗಿಂತ ಮುಂಚಿತವಾಗಿ ಸಹಿ ಹಾಕಿಸಿಕೊಳ್ಳುವ ತಹತಹಿಕೆ.

ಅಶ್ವತ್ಥಪ್ಪ ಪರಿಷತ್ತನ್ನು ದೀರ್ಘಕಾಲ ಅದರ ಒಳಗಿನ ಭಾಗವಾಗಿ ಬಲ್ಲವರಾಗಿದ್ದರು. ಕಸಾಪದ ಬಗೆಗಿನ ಅನೇಕ ವಿಚಾರಗಳನ್ನು ಅಧಿಕೃತವಾಗಿ ಅನಾವರಣಗೊಳಿಸಬಲ್ಲ ವಕ್ತೃವಾಗಿದ್ದರು. ಅವರು ಸಂಘರ್ಷಕ್ಕೆ ಎಂದೂ ಮುಂದಾಗುತ್ತಿರಲಿಲ್ಲ. ಕಾಡಿ-ಬೇಡಿ, ಚಾತುರ್ಯದಿಂದ ಕೆಲಸ ಸಾಧಿಸಿಕೊಂಡು ಮೊಗದಲ್ಲಿ ಕಿರುನಗೆಯ ಮೊಹರನ್ನು ಒತ್ತಿಕೊಂಡು ಬೀಗುತ್ತಿದ್ದರು. ಅವರ ಅಕಾಲಿಕ ಅಗಲಿಕೆ ನಿಡಿದಾದ ಉಸಿರನ್ನು ಹೊರಡಿಸಿದೆ. ಅವರ ಆತ್ಮ ತಣ್ಣಗಿರಲಿ.

‍ಲೇಖಕರು Avadhi

May 14, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: