ವಸುಂಧರಾ ಕದಲೂರು ಓದಿದ ಪುಸ್ತಕ- ಕಾಲಕೋಶ

ವಸುಂಧರಾ ಕದಲೂರು

ಶ್ರೀ ಶಶಿಧರ ಹಾಲಾಡಿ ಅವರ ‘ಕಾಲಕೋಶ’ ಇತ್ತೀಚೆಗೆ ನಾನು ಒಂದೇ ಮನಸ್ಸಿಟ್ಟು ಓದಿದ ಹಲವು ಪುಸ್ತಕಗಳಲ್ಲೊಂದು. 

ಶಬ್ದಕೋಶ, ಪದಕೋಶ, ಭಾವಕೋಶ ಎಂಬುವು ಪರಿಚಿತ ಪದಗಳಾಗಿರುವಂತೆ, ‘ಕಾಲ’ ಹಾಗೂ ‘ಕೋಶ’ಎರಡು ಸರ್ವೇಸಾಮಾನ್ಯ  ಪದಗಳಾಗಿದ್ದರೂ ‘ಕಾಲಕೋಶ’ ಎಂಬ ಸಂಯೋಜಿತ ಬಳಕೆಯಲ್ಲಿ ಬಂದಾಗ, ವಿಶೇಷ ಎನಿಸುತ್ತದೆ. ಕಾಲಕೋಶ ಕಾದಂಬರಿಯೂ…

‘ಕಾಲಕೋಶ’ವು ಇತಿಹಾಸದ ಹಲವು ಘಟನೆಗಳನ್ನು ಹೊಕ್ಕುಬಳಕೆ ಮಾಡಿಕೊಂಡು ಕಟ್ಟಿರುವ ಕಾದಂಬರಿಯಾಗಿದ್ದರೂ, ‘ಇದಂಇತ್ಥಂ’ ಎಂದು ಹೇಳಲು ಹೋಗುವುದಿಲ್ಲ. ಸುಮಾರು ೧೯೪೫-೫೦ ರ ಆಸುಪಾಸಿನಿಂದ, ೭೦-೮೦-೯೦ರ ದಶಕಗಳ ಘಟನಾವಳಿಗಳನ್ನೂ; ಉತ್ತರ-ಪೂರ್ವ, ಮಧ್ಯ-ದಕ್ಷಿಣ ಭಾರತದಲ್ಲಿ ಆ ಕಾಲಮಾನಗಳಲ್ಲಿ ಆಗಿಹೋದ ಬಹುಚರ್ಚಿತ ಪ್ರಮುಖ ವಿಚಾರಗಳನ್ನು ಮೂರು ನಾಕು ಪಾತ್ರಗಳ ಸಂಭಾಷಣೆಯೊಳಗೆ ಕಟ್ಟಿಕೊಡುತ್ತದೆ. ಭಾರತದ ಇತಿಹಾಸ ಬಲ್ಲವರಿಗೆ ಸುಲಭವಾಗಿ ದಕ್ಕುವ ಕೃತಿ. 

ಒಂದು ದೇಶ ಅಥವಾ ಸಮಾಜದ ರೂಢಿ, ನಂಬಿಕೆ, ಬದುಕುಗಳನ್ನು ಘಟನೆಗಳು ರೂಪಿಸುತ್ತವೋ ಅಥವಾ ಅಂಥಾ ಘಟನೆಗಳನ್ನು ರೂಢಿ-ನಂಬಿಕೆಗಳು ರೂಪಿಸುತ್ತವೆಯೋ ಎಂಬುದು ಒಂದು ಜಿಜ್ಞಾಸೆ. ಈ ಜಿಜ್ಞಾಸೆಯು ‘ಕಾಲಕೋಶ’ ಓದುವಾಗ ಮೂಡುವುದು. ಹಾಗೂ ಓದಿದ ಅನಂತರವೂ ಕಾಡುವುದು.

ಬ್ರಿಟಿಷ್ ಆಳ್ವಿಕೆಯ ಅಂತ್ಯ, ಸ್ವತಂತ್ರ ಭಾರತದ ಆರಂಭ ಕಾಲದ ಕಸಿವಿಸಿಯ ಬೇರುಗಳು ಮುಂದಿನ ಹಲವು ದಶಕಗಳವರೆಗೆ ದೇಶಾದ್ಯಂತ  ಹರಡಿ ಹಬ್ಬಿರುವುದು; ಜನಜೀವನವನ್ನು ನಾನಾ ರೀತಿಯಲ್ಲಿ ಪ್ರಭಾವಿಸುತ್ತಲೇ ಬಂದಿರುವುದಕ್ಕೆ ಸಾಕ್ಷಿ ಪುರಾವೆಗಳಿವೆ. ಅಂತಹ ಒಂದು ಸಾಕ್ಷಿ ಪ್ರಜ್ಞೆಯೇ ಬ್ಯಾಂಕ್ ಉದ್ಯೋಗಿ ಕಥಾ ನಾಯಕ. 

ಆತನ ವೈಯಕ್ತಿಕ ಬದುಕು ಹಾಗೂ ಉದ್ಯೋಗದ ಬದುಕಿನ ಭಾಗವಾಗಿ, ಇಡೀ ಭಾರತ ಚರಿತ್ರೆಯನ್ನೇ ಒಮ್ಮೆ ತಿರುವಿ ನೋಡುವಂತೆ ಕೃತಿ ಕಟ್ಟಲಾಗಿದೆ.

ಎತ್ತಣ ಮಾಮರ ಎತ್ತಣ ಕೋಗಿಲೆ ಎನ್ನುವಂತೆ, ಕುಖ್ಯಾತ ಕಾಡುಗಳ್ಳನ ಹಾವಳಿಯಿಂದ ಒಕ್ಕಲೆದ್ದ ಸಾಮಾನ್ಯ ಕುಟುಂಬದ ಸಾಮಾನ್ಯ ಪ್ರಜೆಯೊಬ್ಬ ತನ್ನ ಮೂಲ ಬೇರಿನಿಂದ ದೂರ ಹೋಗಬೇಕಾದ ಅನಿವಾರ್ಯತೆ ಚಿತ್ರೀಕರಿಸುತ್ತಾರೆ.ಅದರ ಜೊತೆಗೆ ರಾಜಕೀಯ ಚದುರಂಗದಾಟದಲ್ಲಿ ದೇಶವಿಭಜನೆ ಎಂಬ ದಾಳದ ಕಾಯಿಗಳಾಗುವ ಅಸಂಖ್ಯಾತ ಜನರ ಪ್ರತಿನಿಧಿಗಳೂ ಇಲ್ಲಿದ್ದಾರೆ.

ಯಾರದ್ದೋ ತಪ್ಪಿಗೆ, ತಮ್ಮ ವೈಯಕ್ತಿಕ ನೆಲೆಯಲ್ಲಿ ವ್ಯಥೆ ಪಡುತ್ತಾ ಬದುಕು ಕಟ್ಟಿಕೊಳ್ಳ ಬೇಕಾದ ನಿರಂತರದ ಹೆಣಗಾಟದಲ್ಲಿರುವ ಅಸಂಖ್ಯಾತರ ಪ್ರತಿನಿಧಿಗಳೂ ಇಲ್ಲಿದ್ದಾರೆ. ಕಾಲದ ಹೊರಳುವಿಕೆ, ಭಾವದ ಅರಳುವಿಕೆ-ನರಳುವಿಕೆ ಕಾದಂಬರಿಯ ಹೂರಣ.ಹೆಚ್ಚು ಪಾತ್ರಗಳಿಲ್ಲ, ಘಟನಾವಳುಗಳ ವೈವಿಧ್ಯವಿಲ್ಲ. ಸರಳವಾಗಿದ್ದು ಒಂದೇ ಸಮನೆ ಓದಿಸಿಕೊಂಡು ಬಿಡುವ ‘ಕಾಲಕೋಶ’ವು, ಅನಂತರ ನಮ್ಮನ್ನು ಚಿಂತನೆಗೆ ದೂಡುವ ಮಟ್ಟಿಗೆ ಆವರಿಸಿರುತ್ತದೆ. 

ಭಾರತ ಏಕೆ ಹೀಗೆ? ಈ ದೇಶದ ಜನಜೀವನವು ವೈವಿಧ್ಯವೇಕೆ? ವೈವಿಧ್ಯತೆಯಲ್ಲೂ ಏಕತೆ ಹೇಗೆ? ಎಂಬ ಜಗತ್ತನ್ನು ವಿಸ್ಮಯಗೊಳಿಸಿದ ಪ್ರಶ್ನೆಗಳಿಗೆ ಗೊಂದಲಗಳಿವೆಯೋ, ಉತ್ತರಗಳಿವೆಯೋ, ಮರುಪ್ರಶ್ನೆಗಳಿವೆಯೋ… ಇಂಥಾ ಹಲವು ಪ್ರಶ್ನೆಗಳಿಗೆ ‘ಕಾಲಕೋಶ’ದಲ್ಲಿ ನೇರವಾಗಿ ಉತ್ತರ ಸಿಗದಿದ್ದರೂ, ಓದುಗರನ್ನು ಹಲವು ನಿಟ್ಟಿನಲ್ಲಿ ಚಿಂತಿಸುವಂತೆ, ಚರ್ಚಿಸುವಂತೆ ಮಾಡುವುದರಲ್ಲಿ ಸಂಶಯವಿಲ್ಲ.

ಸುಮಾರು ೧೫೦ ಪುಟಗಳ ಕಾದಂಬರಿಯ ಅಲ್ಲಲ್ಲಿ ಪುನರಾವರ್ತಿತ ವಿವರಣೆ ನೀಡಿರುವುದು ಓದಿನ ಓಘಕ್ಕೆ ತುಸು ಹಿನ್ನಡೆ ತರುತ್ತದೆ. ಕೆಲವು ಸಂಭಾಷಣೆ ಹಾಗೂ ವಿವರಗಳನ್ನು ತೆಗೆದು ಹಾಕಿದ್ದರೆ ಕಾದಂಬರಿಯ ಬಂಧ ಮತ್ತಷ್ಟು ಬಿಗುವಿನಿಂದ ಕೂಡಿರುತ್ತಿತ್ತು ಎನ್ನುವುದು ನನ್ನ ವೈಯಕ್ತಿಕ ಮಿತಿಯ ಅನಿಸಿಕೆ.  

ಇದರ ಹೊರತಾಗಿ, ವಿಭಿನ್ನ ಓದಿಗಾಗಿ ‘ಕಾಲಕೋಶ’ ಕೈಗೊತ್ತಿಕೊಳ್ಳುವವರಿಗೆ ಓದಿನ ‘ಕಾಲ’ ಮೋಸ ಮಾಡದು ಹಾಗೂ ನೆನಪಿನ ‘ಕೋಶ’ ಹಲವು ಉತ್ತರಗಳ ಹುಡುಕಾಟಕ್ಕೆ ತುಡಿಯದೇ ಇರದು…

‍ಲೇಖಕರು Avadhi

May 15, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Smitha Amrithraj.

    ಚೆನ್ನಾಗಿ ವಿಶ್ಲೇಷಿಸಿರುವಿ.ವಸುಂಧರಾ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: