ವಿಕ್ರಂ ಕಾಂತಿಕೆರೆ ಓದಿದ ‘ದೇರಪ್ಪನ್’

ವಿಕ್ರಂ ಕಾಂತಿಕೆರೆ

ಪ್ರಶಾಂತ್ ಬಾಬು ಕೈದ‍‍‍ಪ್ರಂ ಯುವ ಲೇಖಕ. ‘ದೇರಪ್ಪನ್’ ಕಾದಂಬರಿ ದೇರಪ್ಪನ್ (ರಯರಪ್ಪನ್ ಎಂಬುದು ನಿಜವಾದ ಹೆಸರು) ಎಂಬ ವ್ಯಕ್ತಿಯ ಸುತ್ತ ಹೆಣೆದ ಕಥೆ.

ಸ್ವಾತಂತ್ರ್ಯಪೂರ್ವದ ಒಂದೆರಡು ವರ್ಷಗಳ ಹಿಂದಿನಿಂದ ಸ್ವಾತಂತ್ರ್ಯಾನಂತರದ ಅನೇಕ ವರ್ಷಗಳ ವರೆಗೆ ಅಂದರೆ ದೇರಪ್ಪ ಬಾಲಕ ಆಗಿದ್ದಾಗಿನಿಂದ ಆತನ ವಯೋಸಹಜ ಸಾವಿನವರೆಗೆ ಸಾಗುತ್ತದೆ ಕಥಾ ಹಂದರ.

ಕಣ್ಣೂರು ಜಿಲ್ಲೆಯ ಪಯ್ಯನ್ನೂರು ಭಾಗದ ವಿಶಿಷ್ಟ ಭಾಷೆ (ಕಾಸರಗೋಡು ಮಲಯಾಳಂಗೆ ಹತ್ತಿರದ್ದು) ಬಳಕೆಯಾಗಿದೆ. ಇಲ್ಲಿ ವರ್ಣಿಸಿದ ಬಡಜನರ ಜೀವನ ಮತ್ತು ಗ್ರಾಮೀಣ ಬದುಕಿನ ಚಿತ್ರಣವನ್ನು ಅಕ್ಷರಗಳಲ್ಲಿ ಹಿಡಿದಿಡುವುದು ಬಲು ಕಷ್ಟ. ಅದನ್ನು ಓದಿಯೇ ಅನುಭವಿಸಬೇಕು. ಕನ್ನಡದ ಭಾವಜೀವಿಗಳು‌ ಕಥೆ-ಕಾದಂಬರಿಗಳಲ್ಲಿ ಕಟ್ಟಿಕೊಟ್ಟಿರುವ ವಿಭಿನ್ನ ಸಂದರ್ಭಗಳ ಚಿತ್ರಣವನ್ನು ಓದಿ ಪುಳಕಗೊಂಡಿದ್ದ ನನಗೆ ಇತ್ತೀಚೆಗೆ ರಾಜಶ್ರೀ ಅವರ ತುಳು ಕಾದಂಬರಿಯಲ್ಲಿ ಅದರ ಮತ್ತೊಂದು‌ ಮಗ್ಗಲಿನ ಸೊಗಸು ಕಂಡಿತ್ತು.

ಪ್ರಶಾಂತ್ ಬಾಬು ಅವರ ಚಿತ್ರಣದ ರೀತಿ ಇನ್ನೊಂದು ಬಗೆಯದ್ದು. ಸಣ್ಣ ಸಣ್ಣ ಸಂಗತಿಗಳನ್ನು ಕೂಡ ಸಂದರ್ಭಕ್ಕೆ ತಕ್ಕಂತೆ ಬಳಸಿಕೊಂಡಿರುವ ಅವರ ನಾಜೂಕುತನ ಈ ಕಾದಂಬರಿಯನ್ನು ತುಂಬ ಆತ್ಮೀಯವಾಗಿಸುತ್ತದೆ.

ಬದುಕಿನ ಬವಣೆ–ಹೋರಾಟ, ಸ್ವಾತಂತ್ರ್ಯಕ್ಕಾಗಿ ನಡೆಯುವ ಹೋರಾಟ, ಭೂ ಒಡೆಯರ ಹಿಂಸೆಯ ವಿರುದ್ಧದ ಹೋರಾಟ, ನದಿ, ದೋಣಿ, ಗುಡ್ಡ, ಬೆಟ್ಟ, ತೋಡು (ತೊರೆ), ತೋಟ, ಸುಡು ಬೇಸಿಗೆ, ಊರನ್ನೇ ಕೊಚ್ಚಿಕೊಂಡು ಹೋದ ಜಡಿಮಳೆ, ಜನರ ಜೀವ ಕಿತ್ತು ತಿಂದ ಮಹಾಮಾರಿ… ಹೀಗೆ ಚಿತ್ರಗಳು ಪದೇ ಪದೇ ಬದಲಾಗುತ್ತಾ ಹೋಗುವುದು ಕಾದಂಬರಿಯ ಜೀವಂತಿಕೆ. ಇದೆಲ್ಲದರ ನಡುವೆ ಪ್ರೀತಿಯ ವಿವಿಧ ಆಯಾಮಗಳು ಮತ್ತು ಪ್ರೇಮದ ರೋಮಾಂಚನದ ಸಿಂಚನವೂ ಇದೆ.

ದೋಣಿ ನಡೆಸುವ ಕೋಮನ ಮಗ ದೇರಪ್ಪ. ತಾಯಿ ಹೇಳಿದ ಕಥೆ ಕೇಳುತ್ತ ಬೆಳೆದ ಆತನಲ್ಲಿ ಶಿಕ್ಷಣದ ಮೇಲೆ ಪ್ರೀತಿ, ಕ್ರಾಂತಿಕಾರಿ ಮನೋಭಾವ ಬೆಳೆಯುತ್ತದೆ. ಸ್ವಾತಂತ್ರ್ಯ ಹೋರಾಟದಿಂದ ಹಿಡಿದು ಭೂದಾನ ಹೋರಾಟದವರೆಗೂ ಅದು ಸಾಗುತ್ತದೆ. ಈ ನಡುವೆ ಮನೆಯಲ್ಲೂ ವೈಯಕ್ತಿಕ ಬದುಕಿನಲ್ಲೂ ಹತ್ತಾರು ಘಟನೆಗಳು ಸಂಭವಿಸುತ್ತವೆ. ತಾಯಿ–ತಂಗಿಯನ್ನು ನೆರೆ ನುಂಗುತ್ತದೆ. ತಂದೆ ರೋಗಕ್ಕೆ ಬಲಿಯಾಗುತ್ತಾನೆ. ದೇರಪ್ಪ ಒಬ್ಬಂಟಿಯಾಗುತ್ತಾನೆ. ನಂತರ ಜೊತೆಗಾತಿ ಸಿಗುತ್ತಾಳೆ. ಮತ್ತೆ ಏಕಾಂಗಿಯಾಗುತ್ತಾನೆ. ಎಲ್ಲೆಲ್ಲೋ ಹೋಗಿ ಕೊನೆಗೆ ಹುಟ್ಟಿ ಬೆಳೆದ ಮನೆಗೇ ಮರಳುತ್ತಾನೆ, ಅಲ್ಲೇ ಜೀವ ತೊರೆಯುತ್ತಾನೆ.

ಕಾದಂಬರಿಯಲ್ಲಿ ಬಳಸಿದ ತಂತ್ರಗಳು ಅದ್ಭುತ. ಯಾವುದೋ ದೊಡ್ಡ ಪ್ರಸಂಗವೊಂದರ ಎಳೆಯನ್ನು ಮೊದಲು ಎಲ್ಲೋ ಹೇಳಿ ಮತ್ತೆಲ್ಲೋ ಮುಂದುವರಿಸುವುದು ಅಂಥ ತಂತ್ರಗಳಲ್ಲಿ ಒಂದು. ತಾಯಿ ಒಂದು ರಾತ್ರಿ ಮನೆಯಲ್ಲಿ ಕಾಣಿಸದೇ ಇದ್ದಾಗ ಆತಂಕಗೊಂಡು ಹೆದರಿ ಹೊದ್ದು ಮಲಗಿದ ದೇರಪ್ಪನಿಗೆ ಸ್ವಲ್ಪ ದೊಡ್ಡವನಾದ ಮೇಲೆ, ತಾಯಿ ಪ್ರತಿ ರಾತ್ರಿಯೂ ಎಲ್ಲಿಗೋ ಹೋಗುತ್ತಾಳೆ ಎಂಬ ಸಂದೇಹ ಬೆಳೆಯುತ್ತದೆ. ಕೊನೆಗೊಂದು ದಿನ, ಕುಟುಂಬವನ್ನು ಸಾಕುವುದಕ್ಕಾಗಿ ಅವಳು ‘ರಾತ್ರಿಸಂಚಾರ’ ನಡೆಸುತ್ತಾಳೆ ಎಂದು ಗೊತ್ತಾಗುತ್ತದೆ. ಇಂಥ ಹತ್ತಾರು ಘಟನೆಗಳು ಕಾದಂಬರಿಯಲ್ಲಿವೆ.

ಓದುತ್ತ ಹೋದಂತೆ ಆ ಸಣ್ಣ ಪ್ರದೇಶದ ಜನಜೀವನದಲ್ಲಿ ನಾವೂ ಮಿಳಿತಗೊಳ್ಳುತ್ತೇವೆ. ಎಷ್ಟೋ ಸಂದರ್ಭದಲ್ಲಿ ಅದು ನಮ್ಮದೇ ಕಥೆ ಎಂದೆನಿಸುತ್ತದೆ.‌ ನಾವೇ ದೇರಪ್ಪ ಎಂಬ ಭಾವನೆ ಮೂಡುತ್ತದೆ. ಎದೆ ಝಲ್ಲೆನಿಸುತ್ತದೆ.

‍ಲೇಖಕರು Avadhi

May 14, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: