ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಂಜುಳ ಸಿ ಎಸ್ ಕವಿತೆ – ನಿನ್ನೆಂದು ಕಾಡಿಲ್ಲ !!

ಮಂಜುಳ ಸಿ ಎಸ್

ನಾನೇನು
ಚಂದ್ರನೂರಿನ
ನೀಲಾಗಸಕೇರಿ
ತಾರೆ ತಾರೆಂದು
ಬೊಗಸೆ ತುಂಬೆಂದು
ಪೀಡಿಸಲಿಲ್ಲ!

ಚಂದಮಾನನ
ಕತೆಯ
ರಾಜ ಕುಮಾರನಂತೆ
ಏಳು ಕೋಟೆ
ದಾಟಿ
ರಕ್ಕಸನೆದುರು
ಯುದ್ದ ಮಾಡಿ
ಕುದುರೆಯೇರಿ
ಕರೆದೊಯ್ಯೆನ್ನಲಿಲ್ಲ !

ಆ ಸಿಂಡ್ರೆಲಾಳ
ಕತೆಯಂತೆ
ಕಳೆದ
ಒಂದು ಪಾದರಕ್ಷೆ
ಹುಡುಕಿ
ನಿನ್ನರಮನೆಗೆ
ಕರೆದೊಯ್ಯಲು
ಕಾಯಲಿಲ್ಲ!

ಸಲ್ಲದ
ನೆನಸಾಗದ
ಕನಸುಗಳ
ಹೇರಿ
ನಿನ್ನ ಕಾಡಲಿಲ್ಲ!

ಹಾ…..ನೀ
ನನ್ನವಳೆಂಬ
ಭಾವ ನೀಡುವ
ನಿನ್ನ ಕಂಗಳ
ಕಾಂತಿಯನ್ನಷ್ಟೇ
ಬೇಡಿದ್ದು !!

ಇರುವ ನಿನ್ನ
ನೂರು ಕೆಲಸಗಳ
ಬಿಟ್ಟು
ನನ್ನನೇ ನೋಡೆಂದು
ಎಂದೂ ಕೇಳಲಿಲ್ಲ!

ಅದು ದುಬಾರಿಯೆನ್ನುವುದಾದರೆ
ಬೇಡ ಬಿಡು
ಎಂದಿನಂತೆ
ಚಂದಿರನಿದ್ದಾನೆ
ಬಿಡುವಾಗಿ
ನನಗಾಗೆಂದೇ
ನನ್ನೊಟ್ಟಿಗೆ
ಮಾತಾಡಲು
ಏಕಾಂತ ಕಳೆದು
ಬೇಸರ ನೀಗಲು
ಬೇಡದ ಕಟ್ಟಲೆಗಳ
ಹಾಕದೆ ಸುಮ್ಮನೆ
ಸಖ ಸಖಿ ಗೀತೆಯಾಡಲು !!

‍ಲೇಖಕರು Admin

20 May, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading