ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬ್ರಾಂಡ್ ಮಾಡ್ತಾರೆ ಹುಷಾರ್!

ಟಿವಿ ಚ್ಯಾನಲ್‍ನಿಂದ ಜನಪರ ಮಹಿಳಾ ಹೋರಾಟಗಾರ್ತಿ ಸುಧಾ ಭಾರದ್ವಾಜ್ ಮೇಲೆ ಪ್ರಹಾರ

  ಎಂ ಎಸ್ ಮುರಳಿ ಕೃಷ್ಣ

ಅನೇಕ ಸಂದರ್ಭಗಳಲ್ಲಿ ರಾಷ್ಟ್ರಭಕ್ತಿ, ರಾಷ್ಟ್ರಪ್ರೇಮ ಹಾಗೂ ರಾಷ್ಟ್ರೀಯವಾದವನ್ನು ತುಂಬ ಉದ್ರೇಕಕಾರಿ ರೀತಿಯಲ್ಲಿ ಬಿಂಬಿಸಿ ತಾವೇ ಇವುಗಳ ಗುತ್ತಿಗೆ ಹಿಡಿದಿರುವಂತೆ ವರ್ತಿಸುತ್ತವೆ ಕೆಲವು ಟಿವಿ ವಾಹಿನಿಗಳು. ಇಂತಹ ಉನ್ಮಾದದ ಸಂದರ್ಭಗಳಲ್ಲಿ ಆಡಳಿತರೂಢ ಸರ್ಕಾರಗಳ ಅಭಿವೃದ್ಧಿಗೆ ಸಂಬಂಧಿಸಿದ ನೀತಿ-ನಿಲುವುಗಳನ್ನು ಪ್ರಶ್ನಿಸುವವರಿಗೆ ಸಲೀಸಾಗಿ ಲೇಬಲ್‍ಗಳನ್ನು ಅಂಟಿಸಲಾಗುತ್ತದೆ. ಅವುಗಳಲ್ಲಿ ‘ನಕ್ಸಲ್’ ಎಂಬ ಲೇಬಲ್ ಹಲವು ಬಾರಿ ಪ್ರಯೋಗಿಸಲ್ಪಟ್ಟಿರುವುದಕ್ಕೆ ಅನೇಕ ನಿದರ್ಶನಗಳು ನಮ್ಮೆದುರಿಗಿವೆ. ಈ ತರಹದ ಲೇಬಲಿಕರಣ ಟಿವಿ ಮಾಧ್ಯಮಕ್ಕೆ ಮಾತ್ರ ಸೀಮಿತವಾಗಿಲ್ಲ. ಪತ್ರಿಕಾರಂಗದಲ್ಲೂ ಇದು ಆಗಾಗ್ಗೆ ತಲೆ ಎತ್ತುತ್ತದೆ. ಕೆಲವು ವರ್ಷಗಳ ಹಿಂದೆ ಕರ್ನಾಟಕದಲ್ಲಿ ನಕ್ಸಲ್ ಚಟುವಟಿಕೆಗಳ ವಿರುದ್ಧ ರಾಜ್ಯ ಸರ್ಕಾರದಿಂದ ಕಾರ್ಯಾಚರಣೆಗಳು ಜರುಗಿದವು.

ಆಗ ಮುಖ್ಯವಾಹಿನಿಯಲ್ಲಿರುವ ಎರಡು ಪತ್ರಿಕೆಗಳಲ್ಲಿ ಎಲ್ಲ ಎಡಪಂಥೀಯರನ್ನು ನಕ್ಸಲರೆಂದು ಬಣ್ಣಿಸುವ ಪ್ರಯತ್ನಗಳಾದವು. ಹೀಗಾದದ್ದು ಅರಿವಿನ ಕೊರತೆಯಿಂದಲೋ ಅಥವಾ ಉದ್ದೇಶಪೂರ್ವಕವಾಗಿಯೋ ಎಂಬುದು ಚರ್ಚಾಸ್ಪದ ವಿಷಯವಾದರೂ, ಕೆಲವು ಪತ್ರಿಕೆಗಳ ಟ್ರ್ಯಾಕ್ ರೆಕಾರ್ಡನ್ನು ಪೂರ್ವಾಗ್ರಹವಿಲ್ಲದೇ ಗಮನಿಸಿದಾಗ, ಹೀಗೆ ಗುರುತಿಸುವುದರ ಹಿಂದೆ ಅಜೆಂಡಯಿರಬಹುದಾದ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ನಕ್ಸಲರ ಕಾರ್ಯತಂತ್ರವನ್ನು ಒಪ್ಪದ ಅಪಾರ ಸಂಖ್ಯೆಯ ಎಡಪಂಥೀಯ ಕಾರ್ಯಕರ್ತರು, ಹೋರಾಟಗಾರರು ನಮ್ಮ ನಡುವೆ ಇದ್ದಾರೆ.

ವಕೀಲೆ ಸುಧಾ ಭಾರದ್ವಾಜ್, ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್‍ನ ರಾಷ್ಟ್ರೀಯ ಕಾರ್ಯದರ್ಶಿ, ಇಂಡಿಯನ್ ಅಸೊಸಿಯೇಷನ್ ಆಫ್ ಪ್ರೋಗ್ರೆಸ್ಸಿವ್ ಲಾಯರ್ಸ್‍ನ ಉಪಾಧ್ಯಕ್ಷೆ ಹಾಗೂ ದೆಹಲಿಯ ನ್ಯಾಷನಲ್ ಲಾ ಯೂನಿವರ್ಸಿಟಿಯ ಸಂದರ್ಶನ ಪ್ರಾಧ್ಯಾಪಕರಾಗಿದ್ದಾರೆ.

ಕಳೆದ ಮೂರು ದಶಕಗಳಿಂದ ಅವರು ಒಬ್ಬ ಕಾರ್ಮಿಕರಂಗದ ಕಾರ್ಯಕರ್ತೆಯಾಗಿ, ಮಾನವ ಹಕ್ಕುಗಳ ಹೋರಾಟಗಾರ್ತಿಯಾಗಿ, ಪರಿಸರ ಸಂಬಂಧಸಿದ ವಿಷಯಗಳ ವಕೀಲೆಯಾಗಿ ಸಾರ್ವಜನಿಕ ರಂಗದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಅಲ್ಲದೆ ಅವರು ಅನೇಕ ರಾಜ್ಯಗಳ ಕಾನೂನು ಸಹಾಯ ಸಂಸ್ಥೆಗಳ ಮತ್ತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಗೌರವಾನ್ವಿತ ಸಲಹೆಗಾರ್ತಿಯಾಗಿದ್ದಾರೆ. ಇತ್ತೀಚೆಗೆ ಇಂತಹ ವ್ಯಕ್ತಿಯನ್ನು ರಿಪಬ್ಲಿಕ್ ಟಿವಿ ಆಕೆ ಭಾರತವನ್ನು ವಿಚ್ಛೇದಿಸಲು ಪ್ರಯತ್ನಿಸುತ್ತಿರುವ ವಿಚ್ಛಿದ್ರಕಾರಿ ಶಕ್ತಿಗಳು ಮತ್ತು ಶಸ್ತ್ರಸಜ್ಜಿತ ಗೆರಿಲ್ಲಾಗಳ ಜೊತೆ ಸಂಬಂಧವನ್ನು ಇರಿಸಿಕೊಂಡಿದ್ದಾರೆಂದು ಆಪಾದಿಸಿತು. ತನ್ನ ಬಳಿಯಿದೆ ಎನ್ನಲಾದ ಸುಧಾ ಬರೆದಿರುವ ಪತ್ರವೇ ಇದಕ್ಕೆ ಸಾಕ್ಷಿಯೆಂದು ಅದು ಸಾರಿತು.

ಆದರೆ ಈ ಪತ್ರ ತನಗೆ ಹೇಗೆ ಬಂದಿತೆಂಬುದನ್ನು ಅದು ಸ್ಪಷ್ಟಪಡಿಸಲಿಲ್ಲ. ಆ ಪತ್ರದಲ್ಲಿ ಅಡಕಗೊಂಡಿರುವ ವಿಚಾರಗಳ ರೀತಿಯೂ ತೀರಾ ಒರಟಾಗಿದ್ದು, ಅಸೂಕ್ಷ್ಮವೂ ಆಗಿದೆ ಎಂದು ಹೇಳಲಾಗಿದೆ. ಆ ಪತ್ರದಲ್ಲಿದೆ ಎಂದು ತಿಳಿಸಿರುವ ವಿಷಯಗಳಿಂದ ಕಾಶ್ಮೀರಿ ಪ್ರತ್ಯೇಕವಾದಿಗಳಿಗೂ, ನಗರಪ್ರದೇಶದ ನಕ್ಸಲರಿಗೂ, ಜವಹರ್‍ಲಾಲ್ ನೆಹರು ವಿಶ್ವವಿದ್ಯಾನಿಲಯ ಮತ್ತು ಮುಂಬೈನ ಟಾಟಾ ಇನ್‍ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್‍ನ ವಿದ್ಯಾರ್ಥಿಗಳಿಗೂ ಸಂಬಂಧವಿರುವುದು ಸಾಬೀತಾಗುತ್ತದೆ ಎಂಬುದು ರಿಪಬ್ಲಿಕ್ ಟಿವಿಯ ನಿಲುವಾಗಿತ್ತು. ಈ ಟಿವಿ ವಾಹಿನಿಯ ಅನ್ವಯ ಈ ವಿಷುಯಗಳು ‘ಪ್ರಶ್ನಾತೀತ ಸತ್ಯಗಳು’.

ಆದರೆ ಇಂತಹ ಅನೇಕ ‘ಪ್ರಶ್ನಾತೀತ ಸತ್ಯ’ಗಳನ್ನು ತನಿಖಾ ಸಂಸ್ಥೆಗಳು, ಆಳುವ ಸರ್ಕಾರಗಳ ಜನವಿರೋಧಿ ನೀತಿಗಳ ವಿರುದ್ಧ ಪ್ರತಿಭಟಿಸುವ ಜನಾಂದೋಲನಗಳ ಕೆಲವು ಕಾರ್ಯಕರ್ತರು, ರಾಜಕೀಯ ಎದುರಾಳಿಗಳು, ಮಾನವ ಹಕ್ಕುಗಳ ಹೋರಾಟಗಾರರು ಮತ್ತು ಇತರ ಕೆಲವು ಜನಪರ ಕಾರ್ಯಕರ್ತರ ಮೇಲೆ ಪ್ರಯೋಗಿಸುತ್ತ ಬಂದಿವೆ. ಯಾವುದೇ ರೀತಿಯ ನಂಬಲಾರ್ಹವಾದ ಪುರಾವೆಯನ್ನು ಒದಗಿಸದೇ, ಈ ರೀತಿಯ ಆಪಾದನೆಗಳನ್ನು ರವಾನಿಸುವುದು ಭಟ್ಟಂಗಿತನದ ವರ್ತನೆ ಹಾಗೂ ನೈಜ ಪ್ರತಿಭಟನೆಯ ದನಿಗಳನ್ನು ಹತ್ತಿಕ್ಕುವ ಪರಿಯೇ ಸರಿ. ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಪ್ರಸ್ತಾಪಿಸಲ್ಪಡುವ ‘ತುಕ್‍ಡೆ-ತುಕ್‍ಡೆ ಗ್ಯಾಂಗ್’ ಎಂಬ ಪದಗುಚ್ಚವೂ ಇಂತಹ ಒಂದು ಅಪಪ್ರಚಾರದ ತಂತ್ರವೇ ಆಗಿದೆ.

ಇಂತಹ ಅನೈತಿಕ ಹಾಗೂ ದುರುದ್ದೇಶದ ಸುದ್ದಿಬಿತ್ತನೆಯನ್ನು ಮಾಧ್ಯಮ ಸಂಸ್ಥೆಗಳು, ವೃತ್ತಿನಿರತ ಪತ್ರಕರ್ತರ ಸಂಘಗಳು ಖಂಡಿಸಬೇಕು. ಈ ತರಹದ ವಿದ್ಯಮಾನಗಳ ವಿರುದ್ಧ ಪ್ರಜ್ಞೆಯುಳ್ಳ ನಾಗರಿಕರು ತಮ್ಮ ದನಿಯನ್ನು ಎತ್ತಬೇಕು.

‍ಲೇಖಕರು Avadhi Admin

27 August, 2018

1 Comment

  1. ಮ ಶ್ರೀ ಮುರಳಿ ಕೃಷ್ಣ

    ಧನ್ಯವಾದ ಅವಧಿ ತಂಡಕ್ಕೆ….

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading