ಬಣ್ಣ ಬಣ್ಣದ ಕೌದಿ ಹುಡುಕುತ್ತಾ ಹೊರಟೇಬಿಟ್ಟಳು ಹೆಚ್ ಎನ್ ಆರತಿ

ಹೊರಟೇಬಿಟ್ಟೆ..

ಸುಂದರವಾದ ಹೆಣುಮಕ್ಕಳಿಗೆ, ತ್ರಿಪುರ ಸುಂದರಿ ಎನ್ನುತ್ತೇವೆ. ಚಂದ ಅಲಂಕಾರ ಮಾಡಿಕೊಂಡು, ನಮ್ಮನ್ನು ಕಾಯಿಸಿ, ತಡವಾಗಿ ಬಂದ ಗೆಳತಿಗೆ “ಆಹಾ! ಬಂದು ನೋಡು ತ್ರಿಪುರ ಸುಂದರಿ” ಎಂಬ ಕುಶಾಲುಭರಿತ ಮಾತುಗಳನ್ನಾಡುತ್ತೇವೆ.
“ತ್ರಿಪುರಾ ಸುಂದರೀ ಬಾರೆ ನೀ ಹಸೆಮಣೆಗೆ” ಎಂಬ ಕೆಟ್ಟ ದ್ವಂದಾರ್ಥದ ಚಲನಚಿತ್ರ ಗೀತೆಯೊಂದಿದೆ.
ಇವೆಲ್ಲವೂ ತ್ರಿಪುರೇಶ್ವರಿ ದೇಗುಲದ ಎದಿರು ನಿಂತಾಗ ನೆನಪಾಗಿ, ತುಂಟ ನಗು ಬಂತು!

ತ್ರಿಪುರ ಪ್ರವಾಸವೆಂದಾಕ್ಷಣ ನನ್ನ ಮನಸ್ಸಿಗೆ ತಕ್ಷಣ ಸಾಲುಸಾಲಾಗಿ ಹಲವಾರು ಚಿತ್ರ, ಯೋಚನೆ, ಕಲ್ಪನೆಗಳು ಸಾಕ್ಷಾತ್ಕಾರವಾದವು.ಈಶಾನ್ಯ ರಾಜ್ಯ ನನಗೆ ಹೊಸತಲ್ಲ. ಕೇಂದ್ರ ಸಾಹಿತ್ಯಅಕಾಡೆಮಿಯು, ಗೌಹಾತಿಯಲ್ಲಿ ನಡೆದ ಕಾವ್ಯ ಹಬ್ಬಕ್ಕೆ 2013ನಲ್ಲಿ ಆಹ್ವಾನಿಸಿದಾಗ, ಅಷ್ಟು ದೂರ ಹೋಗಿ ಬರೀ ಗೌಹಾತಿ ನೋಡಿ ಬರುವುದು ಬೇಡವೆಂದು, ಮತ್ತೊಂದು ವಾರ ರಜೆ ಹಾಕಿ, ಮಿಜೋರಾಂ, ಮೇಘಾಲಯ, ನಾಗಾಲ್ಯಾಂಡ್ ಗಳನ್ನು ಒಬ್ಬಳೇ ನೋಡಿಕೊಂಡು ಬಂದಿದ್ದೆ.
ಆಗ ತ್ರಿಪುರ ಪ್ರವಾಸ ಸಾಧ್ಯವಾಗಿರಲಿಲ್ಲ.

ಈಶಾನ್ಯ ರಾಜ್ಯಗಳ ಭೇಟಿಯೊಂದು ಅನುಭೂತಿ. ನಗರ-ಗ್ರಾಮ್ಯಗಳ ಮಿಶ್ರಣದಂತಿರುವ ಈ ಬೆಟ್ಟಗುಡ್ಡಗಳ ನಾಡು, ಜನ, ಸಂಸ್ಕೃತಿ ಬೇರೆಯದನ್ನೇನೋ ಹೇಳುತ್ತಲೇ, ನಮ್ಮದಾಗುತ್ತಿರುತ್ತದೆ.

ಪ್ರೀತಿಯಿಂದ,
ಆರತಿ.ಎಚ್.ಎನ್.

 

ಸಣ್ಣಗೆ ತುಂತುರು ಹನಿಯುತ್ತಲೇ ಇತ್ತು. ಹಾಕಿಕೊಂಡಿದ್ದ ಟೀಶರ್ಟ್ ಹುಡ್‍ನ್ನು ತಲೆಯ ಮೇಲೆಳೆದುಕೊಂಡು ಬೀಸಿ ಬಂದ ಥಂಡಿ ಹೊತ್ತ ಗಾಳಿಗೆ ಅದುರುವ ಕಾಯವನ್ನು ಸಂತೈಸಿಕೊಳ್ಳಲು ಜೋರಾಗಿ ಹಾಡೊಂದನ್ನು ಗುನುಗುತ್ತಾ ಹೊರಟವಳಿಗೆ ಬೆಂಗಳೂರಿನ ನವೆಂಬರ್ ನ ಹವೆಗಿಂತಾ ಇನ್ನೂ ಅಲ್ಲಿ ಚಳಿಯಿರುತ್ತೆ ಎಂಬ ಹವಾಮಾನ ವರದಿಯನ್ನು ಗೂಗಲ್ ರಾಚಿತ್ತು.

ತ್ರಿಪುರ! ಹಲವು ಬಣ್ಣ, ಭಾಷೆ, ನೆಲ, ಜಲ, ವೇಷಭೂಷಣ ಎಲ್ಲವೂ ಗಡಿ – ಗಡಿಗೂ ಬದಲಾಗುವ ಹೆಮ್ಮೆಯ ಭಾರತ ದೇಶ ನಮ್ಮದು.

ಭಾರತವೆಂದರೆ ಒಂದು ದೇಶವಲ್ಲ, ಅದೊಂದು ಹಲವು ಹಾಸು – ಹರಹುಗಳ ಬಣ್ಣ ಬಣ್ಣದ ಕೌದಿ.

ಇಲ್ಲಿ ನೆಲನೆಲಕ್ಕೂ ಅದರದೇ ಕಥೆಯಿದೆ, ಹಲವು ನೆಲಸಂಸ್ಕೃತಿಗಳು, ಉಪಸಂಸ್ಕೃತಿಗಳೂ ಪ್ರತಿ ನೇಯ್ಗೆಯಲ್ಲೂ ಹಾಸುಹೊಕ್ಕಾಗಿವೆ. ಅಚ್ಚರಿಗೊಳ್ಳುವಂತೆ ಪ್ರತಿ ನೂಲಿನ ಬಣ್ಣ ಬೇರೆ, ಅದರ ಗಾತ್ರ ಬೇರೆ, ಅದರ ಸ್ಪರ್ಶ ಬೇರೆ, ಅದು ನೀಡುವ ಅನುಭವ, ಬೇರೆ. ಎಲ್ಲಾ ಸಂಪೂರ್ಣ ಬೇರೆ, ಬೇರೆಯದೇ ಆದರೂ, ಎಲ್ಲೋ ಒಂದು ನೂಲು ಸರ್ವತ್ರ ಏಕತೆಯ ಸೂತ್ರವನ್ನೆಲ್ಲೋ ಅಂತರಂಗದಲ್ಲಿ ಹಿಡಿದಿಟ್ಟಂತೆ ಅನಿಸುವುದು ಸುಳ್ಳಲ್ಲ!

ಭಾರತದ ಸಪ್ತ ಸಹೋದರಿಯರೆಂಬ ಕಿರೀಟ ಹೊತ್ತ ನಾಡಿಗೆ ಇದು ನನ್ನ ಮೊದಲ ಪ್ರಯಾಣವೇನಲ್ಲ, ಮೇಘಾಲಯದ ಮೋಡಗಳ ನಡುವೆ ಶಿಲ್ಲಾಂಗಿನ ಶೀತಲತೆಯ ಸೊಬಗನ್ನು ಸವಿದ ಮನ, ಚಿರಾಪುಂಜಿಯ ತೇವದಲ್ಲಿ ನಡೆಯುತ್ತಾ, ಜೇಡ್‍ಫಾಲ್ಸ್‍ನ ಗುಡ್ಡದಿಂದಾಚೆ ಕಣಿವೆಯ ತಳದಲ್ಲಿ ಕಾಣುವ ಬಾಂಗ್ಲಾದೇಶವನ್ನು ಅಚ್ಚರಿಯಿಂದ ಕಣ್ತುಂಬಿಕೊಂಡವಳಿಗೆ ಅಲ್ಲಿನ ಬುಡಕಟ್ಟು ಜನರು ನೀಡಿದ ಅರಿಸಿನ ಹಾಗು ಚಕ್ಕೆಯ ಘಮವಿನ್ನೂ ಅಲ್ಲೇ ಸುಳಿದಾಡಿದಂತಿದೆ. ಆ ಚಿರಾಪುಂಜಿಯ ಗುಡ್ಡಗಾಡುಗಳಲ್ಲಿ ಬೆಳೆಯುವ ಕಾಡು ಜಾತಿಯ ಈ ಅರಿಸಿನಕ್ಕೆ ಅಪಾರ ಔಷಧೀಯ ಗುಣಗಳುಂಟಂತೆ! ಅದರ ಘಂ ಎನುವ ಸುವಾಸನೆಯಂತೂ ಇನ್ನೂ ಮರೆಯಲಾರೆ.

ಅದೇ ತೀವ್ರತೆಯಲ್ಲೇ ಗೌಹಾತಿಯ ಬ್ರಹ್ಮಪುತ್ರೆಯನ್ನು ಮರೆಯಲು ಸಾಧ್ಯವೇ? ಕಿಲೋಮೀಟರ್‍ಗಳಷ್ಟು ವಿಸ್ತಾರವಾಗಿ ಹರಡಿಕೊಂಡು ನಗರದ ಮಧ್ಯದಲ್ಲೇ ಹರಿಯುವ ಬ್ರಹ್ಮಪುತ್ರಾ ರಾಕ್ಷಸೀ ನದಿ. ಅದರ ಫಲವತ್ತತೆಯಲ್ಲಿ ಇಡೀ ನಾಗರೀಕತೆ ಅರಳಿಕೊಂಡು, ಹರಡಿಕೊಂಡಿರುವುದು ಸುಳ್ಳಲ್ಲ! ಅಪಮಾನ ತಡೆಯಲಾರದೆ ದಕ್ಷನ ಯಜ್ಞಕುಂಡಕ್ಕೆ ಹಾರಿ ಆತ್ಮಾಹುತಿ ಮಾಡಿಕೊಳ್ಳುವ ದುರ್ಗೆಯನ್ನು ಕಪಾಲಧಾರಿ ಶಿವ ತನ್ನ ತಲೆಯ ಮೇಲೆ ಎತ್ತಿಹಿಡಿದು ತಾಂಡವವಾಡುತ್ತಾ ತಿರುಗುವಾಗ ಆ ಶಕ್ತಿ ಸ್ವರೂಪಿಣಿಯ ಬೆಂಕಿಯಲ್ಲಿ ಬಿದ್ದು, ಛಿದ್ರಗೊಂಡ ಅಂಗಾಂಗಗಳು ಇಡೀ ಭಾರತದ ಹಲವು ಭಾಗಗಳಲ್ಲಿ ಚದುರಿ ಬಿದ್ದವಂತೆ. ಕೈ, ಕಾಲು, ಸೊಂಟ, ಕುತ್ತಿಗೆ… ಹೀಗೆ ಚೈತನ್ಯಶಾಲಿ ದುರ್ಗೆಯ ಜೀವಸ್ವರೂಪಿ ಜನನಾಂಗ ಗೌಹಾಟಿಯ ಕಾಮಾಕ್ಯ ಎಂಬಲ್ಲಿ ಬಿದ್ದು ಅದು ಪ್ರಸಿದ್ಧವಾದ ತೀರ್ಥಕ್ಷೇತ್ರವಾಗಿದೆ. ಅಲ್ಲಿ ನಿರಂತರವಾಗಿ ನಡೆಯುವ ಕುರಿ-ಕೋಣ-ಕೋಳಿಗಳ ಬಲಿಗಳಿಂದ ಇಡೀ ಕ್ಷೇತ್ರದಲ್ಲಿ ಹಸಿ ರಕ್ತದ ಕಟುವಾಸನೆ ತುಂಬಿರುವ ಆ ಜಾಗದಲ್ಲಿ ನಿಂತು ನಾನು ತಲ್ಲಣಿಸಿದ್ದು ನೆನಪಾಗುತ್ತಿದೆ!

ಈ ಹಿನ್ನೆಲೆಯನ್ನು ನೀಡಿದ್ದು ಏಕೆಂದರೆ, ಸಪ್ತ ಸಹೋದರಿಯರಲ್ಲಿ ಮೂವರನ್ನು ಭೇಟಿಯಾಗಿದ್ದರೂ ಪ್ರವಾಸಿಗಳಿಂದ `ಇನಿತು ಕೊಂಚ ದೂನ’—ವೆಂದು ದೂರವಿರುವ ಸ್ಥಳವೇ ತ್ರಿಪುರ ! ಸುಂದರ ಪ್ರಕೃತಿ ಹೊತ್ತ ರಮ್ಯ ಸ್ಥಳ ತ್ರಿಪುರದ ವೈಶಿಷ್ಟ್ಯವೇನೆಂದರೆ, ತ್ರಿಪುರದ ದಕ್ಷಿಣಕ್ಕೆ, ಉತ್ತರಕ್ಕೆ ಹಾಗೂ ಈಶಾನ್ಯಕ್ಕೆ ಪರದೇಶವಾದ ಬಾಂಗ್ಲಾದೇಶದ ಗಡಿಯಿದೆ. ಬಾಂಗ್ಲಾದೇಶಕ್ಕೂ ತ್ರಿಪುರಕ್ಕೂ ಒಂದು ಅವಿನಾಭಾವ ಸಂಬಂಧದ ಎಳೆಯೊಂದಿದೆ ಎಂದು ಅನಿಸದೇ ಇರದು. ತ್ರಿಪುರ ರಾಜ್ಯದ ಬಹುಭಾಗ ಮುಳ್ಳುತಂತಿ, ಬೇಲಿಗಳನ್ನು ಹೊತ್ತ ಶಸ್ತ್ರಸಜ್ಜಿತ ಸಿಪಾಯಿಗಳು ಓಡಾಡುವ ಸ್ಥಳಗಳಿಂದ ತುಂಬಿಹೋಗಿದೆ ಎನಿಸುತ್ತದೆ. ರಮಣೀಯ ಅಸ್ಸಾಂ ಮತ್ತು ಸುಂದರ ಮಿeóÉೂೀರಾಂ ಈ ಎರಡೂ ಅಕ್ಕ-ತಂಗಿ ರಾಜ್ಯಗಳನ್ನೂ ತನ್ನ ಅಕ್ಕಪಕ್ಕ ಜಯ-ವಿಜಯರಂತೆ ಇರಿಸಿಕೊಂಡಿರುವ ತ್ರಿಪುರಕ್ಕೆ ತನ್ನ ರಾಜ್ಯವನ್ನಾಳಿದ ರಾಜಮನೆತನದ ಮಹತ್ವದ ಹಿನ್ನೆಲೆಯಿದೆ.

ತ್ರಿಪುರದ ಹೆಚ್ಚುಗಾರಿಕೆ ಉಳಿದಿರುವುದು, ಅದರ ಮೂಲನಿವಾಸಿಗಳನ್ನು ಇನ್ನೂ ಜತನವಾಗಿ ಕಾಪಾಡಿಕೊಂಡಿರುವುದರಲ್ಲಿ. ಈ ಪುಟ್ಟ ರಾಜ್ಯ ಎಂಟು ಜಿಲ್ಲೆಗಳಲ್ಲಿ ಹರಡಿಕೊಂಡಿದೆ. ಅನೇಕ ಪುಟ್ಟ ಗುಡ್ಡಗಾಡು – ಕಣಿವೆಗಳಿಂದ ತುಂಬಿರುವ ರಾಜ್ಯ. ಗುಡ್ಡಗಳ ತುಂಬಾ ಕಾಡುಬಾಳೆ, ಅಸಂಖ್ಯ ಬಾಳೆ ಜಾತಿಯ ಗಿಡಗಳು ಕೈ ಬೀಸಿ ಕರೆಯುತ್ತವೆ. ಒಂದೊಂದು ಬಾಳೆ ಗಿಡವೂ ಬೃಹದಾಕಾರವಾಗಿ, ನೆಲದ ಸತ್ವಸಾರ ಹೀರಿ ವಿಶಾಲವಾಗಿ ಕದಂಬ ಬಾಹುಗಳನ್ನು ಚಾಚಿಕೊಂಡಂತೆ, ಹಚ್ಚ ಕಡು ಹಸಿರಿನಿಂದ ಕಂಗೊಳಿಸುತ್ತಿರುವುದನ್ನು ನೋಡುವುದೇ ಒಂದು ಭಾಗ್ಯ. ಬಾಳೆ ಎಲೆಗಳೂ ಕೂಡ ಅತಿ ಅಗಲ, ತೀರಾ ಉದ್ದ.

ಒಂದು ಬಾಳೆಎಲೆಯ ಮೇಲೆ ಇಬ್ಬರು ಉದ್ದುದ್ದಕ್ಕೆ ಮಲಗಬಹುದು! ಬೇಕಾದರೆ ಆ ಎಲೆಯನ್ನೇ ಮಗುಚಿ ಹೊದಿಕೆಯಂತೆ ಹೊದೆಯಲೂಬಹುದು… ನಮ್ಮ ದಕ್ಷಿಣ ಭಾರತದಲ್ಲಿ ಈ ರೀತಿಯ ಹೋಲಿಕೆಯನ್ನು ಮೃತ ದೇಹದ ಅಂತ್ಯಕ್ರಿಯೆ ಸಂಬಂಧಕ್ಕೆ ಜೋಡಿಸುವುದರಿಂದ, ಹಿಂಜರಿಕೆಯಿಂದಲೇ ಇಲ್ಲಿ ಇದನ್ನು ಬಾಳೆ ಎಲೆಯ ಅಗಾಧತೆಯನ್ನು ಸೂಚಿಸಲಷ್ಟೇ ಬಳಸಿದ್ದೇನೆ. ಮತ್ತೆ ಅಲ್ಲಿರುವ ಸಸ್ಯ ವೈವಿಧ್ಯ ಪ್ರಭೇದಗಳ ಬಗ್ಗೆ ಒಂದು ಅಧ್ಯಯನವನ್ನೇ ನಡೆಸಬಹುದು! ಬಾಳೆಗಿಡದೊಂದಿಗೆ ಪೈಪೋಟಿಗಿಳಿಯುವಂತೆ ಆ ಕಣಿವೆಗಳಲ್ಲಿ ಹರಡಿರುವ ಇನ್ನೊಂದು ಸಸ್ಯ ಪ್ರಭೇದವೆಂದರೆ ಬಿದಿರು. ಬಿದಿರು ಆ ಜನಜೀವನದಲ್ಲಿ ಹಾಸು ಹೊಕ್ಕಾಗಿರುವ ರೀತಿಗೆ ಬೆರಗಾದೆ. ಮಗು ಹುಟ್ಟಿದಾಗಿನಿಂದ ಹಿಡಿದು, ಇಹಲೋಕದ ಯಾತ್ರೆ ಮುಗಿಸುವ ತನಕ, ಬಿದಿರು ಅವರ ಬದುಕಿನ ಪ್ರತಿಯೊಂದು ಹಂತದಲ್ಲೂ ಪ್ರಮುಖ ಪಾತ್ರವಹಿಸುವುದು ಗಮನಾರ್ಹ. ತ್ರಿಪುರದ ಯುಎಸ್‍ಪಿ ಏನೆಂದು ಯಾರಾದರೂ ನನ್ನನ್ನು ಕೇಳಿದರೆ, ನಾನು ಕಣ್ಣುಮುಚ್ಚಿಕೊಂಡು `ಬಿದಿರು’ ಎಂದು ಹೇಳಬಲ್ಲೆ!

ನಾನಾರಿಗಲ್ಲದವಳು ಬಿದಿರು… ಹುಟ್ಟುತ್ತಾ ಹುಲ್ಲಾದೆ, ಬೆಳೆಯುತ್ತಾ ಮರವಾದೆ … ಎಂದು ಸಂತ ಶಿಶುನಾಳ ಶರೀಫರು ರಚಿಸಿದ ಈ ಹಾಡನ್ನು ತ್ರಿಪುರ ತನ್ನ ನಾಡಗೀತೆಯನ್ನಾಗಿ ಮಾಡಿಕೊಳ್ಳಬಹುದು ಎನಿಸುವಷ್ಟು ಬಿದಿರು ಅದÀರೊಳಗೆ ಬೆರೆತಿದೆ.
ತ್ರಿಪುರದ ಒಳಶಕ್ತಿ ಅಲ್ಲಿರುವ ಗುಡ್ಡಗಾಡಿನ ಮೂಲನಿವಾಸಿಗಳು. 19 ರೀತಿಯ ನೆಲಸಂಸ್ಕøತಿಯ ಅಲೆಮಾರಿ ಜನಾಂಗಗಳನ್ನು, ಮೂಲ ಬುಡಕಟ್ಟು ಉಪಸಂಸ್ಕøತಿಯ ಜನಗಳನ್ನು ಸರ್ಕಾರವು ಗುರುತಿಸಿದೆ. ತ್ರಿಪುರದ ವಾಸಿಗಳೂ ಸ್ವಲ್ಪ ಮಂಗೋಲಿಯನ್ ಪಂಗಡಕ್ಕೆ ಸೇರಿದ ಗಿಡ್ಡ ಗಡುಸಾದ ದೇಹ, ಚಪ್ಪಟೆಮೂಗು, ಮುಗ್ಧ ಮುಖಚಹರೆಯ ಜನ. ಗ್ರಾಮೀಣ ಪರಿಸರ, ಅದೇ ಸ್ನೇಹಪರತೆಯ ಮುಗುಳು ಹೊತ್ತ ಇವರನ್ನು ಸರಳ, ಸಹಜ ಜೀವಿಗಳೆನ್ನಲು ಅಡ್ಡಿಯಿಲ್ಲ.

ತ್ರಿಪುರವೊಂದು ಆಧುನಿಕ ಜಗತ್ತಿಗೆ, ಅದರ ತಲ್ಲಣಗಳಿಗೆ ತೆರೆದುಕೊಳ್ಳುತ್ತಿರುವ ಒಂದು ಪುಟ್ಟ ರಾಜ್ಯವೆನ್ನಬಹುದು. ತ್ರಿಪುರದ ರಾಜಧಾನಿ ಅಗರ್‍ತಲಾ ಇದಕ್ಕೆ ಒಳ್ಳೆಯ ಉದಾಹರಣೆ ಎನ್ನಬಹುದು. ಹೊಸತನ ಬೇಕು. ಆದರೆ ಹಳೆಯದನ್ನು ಬಿಡಲಾಗದು, ಈ ತೊಯ್ದಾಟದಲ್ಲಿ ಇಡೀ ರಾಜ್ಯ ತನ್ನ ಅಸ್ಮಿತೆಯನ್ನು ಬಿಟ್ಟುಕೊಡುತ್ತಾ, ಹುಚ್ಚು ಬದಲಾವಣೆಯ ತಿರುಗಣಿಯಲ್ಲಿ ತನ್ನನ್ನು ತಾನು ಸಂಭಾಳಿಸಿಕೊಳ್ಳುತ್ತಾ ಏದುಸಿರುಬಿಡುತ್ತಿರುವ ಮುಗ್ಧ ಜೀವದ ಹಾಗೆ ನನಗೆ ಕಂಡಿತು.

ಬಂಗಾಳದ ಸುತ್ತಮುತ್ತ ಬಂಗಾಳವು ತನ್ನ ಛಾಪನ್ನು, ಒತ್ತುವುದರೊಂದಿಗೆ, ಬೆಂಗಾಲಿಗಳು ತಮ್ಮ ಕದಂಬ ಬಾಹುಗಳನ್ನು ಚಾಚುತ್ತಾ, ಅವರ ನೆಲೆಗಳನ್ನು ಹೋದಬಂದ ಕಡೆ ಸ್ಥಾಪಿಸಿಕೊಳ್ಳುವಲ್ಲಿ ಸಿದ್ಧಹಸ್ತರು. ತ್ರಿಪುರವೂ ಇದಕ್ಕೆ ಹೊರತಾಗಿಲ್ಲ. ಹೊಟೇಲ್ ಉದ್ಯಮದಿಂದ ಹಿಡಿದು, ಅನೇಕ ವಾಣಿಜ್ಯ-ವ್ಯವಹಾರಗಳಲ್ಲಿ ಬೆಂಗಾಲಿಗಳು ಸರ್ವಾಧಿಕಾರ ಸ್ಥಾಪಿಸಿದ್ದಾರೆ. ಅವÀರ ಹಾವ ಭಾವ, ಸಂಸ್ಕಾರ – ಸಂಸ್ಕøತಿ, ವೇಷ – ಭೂಷಣಗಳು ತ್ರಿಪುರದ ಮೂಲ ಬುಡಕಟ್ಟಿನವರನ್ನು ಎಷ್ಟು ಅಗಾಧವಾಗಿ ಪ್ರಭಾವಿಸಿವೆ ಎಂದರೆ ಬಹುತೇಕರು ಬೆಂಗಾಲಿಗಳಂತಾಗಬೇಕೆಂಬ ಹಂಬಲ ಇರಿಸಿಕೊಂಡಿದ್ದಾರೆಂದು ಮೇಲುನೋಟಕ್ಕೆ ಗೋಚರವಾಯ್ತು.

ಅಗರ್‍ತಲಾ ನಗರವೊಂದನ್ನು ಬಿಟ್ಟರೆ, ಬೇರೆ ಸ್ಥಳಗಳಲ್ಲಿ ವಾಹನ ಸಂಚಾರ ತುಂಬಾ ಕಡಿಮೆ. ದೊಡ್ಡ ದೊಡ್ಡ ಬಸ್‍ಗಳು, ಪಟಾಪಟಿ ವ್ಯಾನ್‍ಗಳು ಹೀಗೆ ಜನರು ತಾವೇ ಸ್ವಂತ ವಾಹನಗಳನ್ನು ಬಳಸುವುದು ಕಡಿಮೆ. ಹಾಗಾಗಿ ವಾತಾವರಣ ಕಲುಷಿತವಾಗಿಲ್ಲ, ಶುದ್ಧ ಹವೆ, ಹಸಿರು ಮುಕ್ಕಳಿಸುವ ಪರಿಸರ ಇನ್ನೂ ಜೀವಂತವಾಗಿದೆ.

ಕೆಲಸದಲ್ಲಿ, ಅದೂ ಮಾಧ್ಯಮದಲ್ಲಿರುವವಳಾದ್ದರಿಂದ, ಪ್ರವಾಸಕ್ಕೆಂದು ರಜೆ, ಅದಕ್ಕೆ ದೆಹಲಿಯ ಕಚೇರಿಯ ಅನುಮತಿ ಹೀಗೆ ತೊಡಕುಗಳನ್ನು ದಾಟಿ ಹೊರಟಾಗ, ಕೊಲ್ಕತಾದಿಂದಲಾದರೂ ರೈಲಿನಲ್ಲಿ ಪಯಣಿಸಬೇಕೆಂಬ ಆಸೆಯಿತ್ತು. ಆದರೆ ಅಲ್ಲಿಂದ ಮತ್ತೆ ರೈಲಿನಲ್ಲಿ 2 ದಿನಗಳ ಪ್ರಯಾಣವೆಂದು ತಿಳಿದಾಗ, ವಿಮಾನದ ಆಯ್ಕೆಯೇ ಪಕ್ಕಾ ಆಯ್ತು.

ವಿಮಾನದಲ್ಲೂ ಆಗೀಗ ಕಂಡುಬರುವ ಕಲ್ಚರಲ್ ಶಾಕ್‍ಗಳು ಅನೇಕ ವಿಧ. ಕೊಲ್ಕತಾ ತನಕ ಇರುವ ಜನರೇ ಬೇರೆ. ಅವರ ನಾಗರಿಕ ವೇಷ – ಭೂಷಣಗಳೇ ಬೇರೆ. ವಿಮಾನ ಸಿಬ್ಬಂದಿಯ ಸೌಜನ್ಯಯುತ ವರ್ತನೆಯೇ ಬೇರೆ. ಕೊಲ್ಕತಾದಿಂದ ಅಗರ್‍ತಲಾಗೆ ಹೋಗುವ ವಿಮಾನದಲ್ಲಿನ ಪ್ರಯಾಣಿಕರೇ ಬೇರೆ. ಹ್ಯಾಂಡ್ ಬ್ಯಾಗೇಜ್‍ಗೆ ಟ್ಯಾಗ್ ಹಾಕಿಕೊಳ್ಳುವುದರಿಂದ, ಆ ಜನಕ್ಕೆ ಎಲ್ಲವೂ ಹೊಸತು! ಮೊದಲ ವಿಮಾನ ಹಾರಾಟದ ಖುಷಿಯ ಜೊತೆ, ಏನು ತಪ್ಪು ಮಾಡ್ತಿವೋ ಅನ್ನೋ ಆತಂಕ! ಇನ್ನು ವಿಮಾನ ಹತ್ತಿದ ಮೇಲೆ ನೋಡಬೇಕಿತ್ತು ಅವರ ಗಲಿಬಿಲೀನಾ! ಚಿಕ್ಕಮಕ್ಕಳ ಥರ ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ತಾರಾಡ್ತಾ, ಕೈಯಲ್ಲಿರೋ ಬ್ಯಾಗು ಮೇಲೆ ಲಗ್ಗೇಜ್ ಸ್ಟೋರೇಜ್‍ನಲ್ಲಿಡದೇ, ಇಟ್ಟರೂ ಪದೇ ಪದೇ ಅಲ್ಲೇ ಇದೇ ತಾನೆ ಅಂತ ಬಂದೂ ಬಂದೂ ನೋಡೋದು ನಡೀತಾ ಇತ್ತು! ಇನ್ನು ಗಗನಸಖಿಯರ ಪಾಡಂತೂ ಹೇಳುವುದೇ ಬೇಡ. ಸೀಟ್ ಬೆಲ್ಟ್ ಹಾಕಿ, ಆ ಕಡೆ ತಿರುಗೋ ಅಷ್ಟರಲ್ಲಿ ಬೆಲ್ಟ್ ತೆಗೆದು ನಿಂತ ಭೂಪರು! ಅವರ ಮುಗ್ಧತನಕ್ಕೂ, ಗಗನಸಖಿಯರ ಸಿಡುಕು ಮುಖಕ್ಕೂ ಮ್ಯಾಚ್ ಆಗುತ್ತಿರಲಿಲ್ಲ. ಕೊನೆಗೆ ಒಬ್ಬ ಗಗನಸಖಿಗೆ ನಾನು ಗದರಬೇಡವೆಂದು, ಹೇಳುವಷ್ಟು ಅಮಾನವೀಯವಾಗಿ ನಡೆದುಕೊಳ್ಳುವುದು ಕಂಡುಬರುತ್ತಿತ್ತು.

ವಿಮಾನದ ರೆಕ್ಕೆಗುಂಟ ನೋಡುತ್ತಾ ಕೂತವಳಿಗೆ ಅರೆನಿದ್ದೆ, ಮಂಪರು! ಕಳೆದ ತಿಂಗಳಷ್ಟೇ ಯೂರೋಪ್ ಪ್ರವಾಸಕ್ಕೆ ಹೋಗಿ, ನಮ್ಮ ಪ್ರಾಚೀನ ನಾಗರೀಕತೆಯ ಶಿಖರ ಪ್ರಾಯವೆನ್ನಬಹುದಾದ ಗ್ರೀಕ್ ನಾಗರಿಕತೆಯ ಕುರುಹುಗಳನ್ನು, ಅದು ಗ್ರೀಸ್ ದೇಶವಿಡೀ ಹರಡಿದ್ದ ಚರಿತ್ರೆಯ ತುಣುಕುಗಳಿನ್ನೂ ಕಣ್ಣಲ್ಲಿ ಕೂತ ಹಾಗೇ ಇರುವಾಗ, ಈ ಪ್ರವಾಸದ, ಈ ನೆಲದ, ಈ ಚರಿತ್ರೆಯ ಈ ಗುಡ್ಡಗಾಡು ಜನರ ಕಥೆ ಏನಿರಬಹುದು ? ಹೇಗಿರಬಹುದೆಂಬ ಕುತೂಹಲ, ಜಿಜ್ಞಾಸೆಗೆ ವಿಮಾನ ಪ್ರಯಾಣ ಮುನ್ನುಡಿ ಬರೆದಂತಿತ್ತು.

ಗಾಳಿಯ, ಮೋಡದ ಒತ್ತಡಕ್ಕೆ ಟ್ರಬ್ಲುಲೆನ್ಸ್ ಅಂದರೆ, ವಿಮಾನ ಕೊಂಚ ಅದುರಿದಾಗ, ಕಣ್ಣಿಗೆ ಬಿದ್ದ ದೃಶ ಚೇತೋಹಾರಿ! ತ್ರಿಪುರದ ರಾಜಧಾನಿ ಅಗರ್‍ತಲಾದ ದರ್ಶನ, ಏರಿಯಲ್ ವ್ಯೂ ಅಂದರೆ ವಿಹಂಗಮ ಪಕ್ಷ್ಷಿ ನೋಟದಲ್ಲಿ! ಕೆಳಗೆ ಕಣ್ಣು ಹಾಯಿಸಿದಷ್ಟು ದೂರವೂ ವ್ಯಾಪಿಸಿರುವ ಪಚ್ಚೆ ಹರಿದ್ವರ್ಣದಲ್ಲಿ ಕಂಗೊಳಿಸುವ, ಸಪಾಟದಲ್ಲದ, ಅನೇಕ ಏರು ತಗ್ಗು, ಗುಡ್ಡ ಬೆಟ್ಟ ಕಣಿವೆಗಳಿಂದ ಕಂಗೊಳಿಸುವ ನಾಡಿದು. ಎಲ್ಲಕ್ಕಿಂತಾ ಅನೇಕ ಸರೋವರ, ನದಿ, ನೀರಿನ ಮೂಲಗಳಿಂದ ಆಕಾಶ ತನ್ನ ರೂಪ ನೋಡಿಕೊಳ್ಳಲು ಮಾಡಿಟ್ಟ ಕನ್ನಡಿಗಳಂತೆ ಅಲ್ಲೊಂದು ಇಲ್ಲೊಂದು ಕಂಗೊಳಿಸುತ್ತಿರುವ ಕೊಳಗಳು.

ನೀರಿಯ ಚೌಕದಂತೆಯೇ, ಪದೇ ಪದೇ ಕಣ್ಣಿಗೆ ಬೀಳುತ್ತಿದ್ದುದು, ಬತ್ತದ ಗದ್ದೆಗಳು, ಇಡೀ ತ್ರಿಪುರದಲ್ಲಿ ಜಲಮೂಲಗಳು ಅನೇಕ. ಎಲ್ಲಿ ಬೆಟ್ಟ ಗುಡ್ಡಗಳಿವೆಯೇ ಅಲ್ಲೊಂದು ಜಲಮೂಲದ ಉಗ್ಗೆ ಬುಗ್ಗೆಯಾಗಿ ಹರಿಯುವುದು ಸಾಮಾನ್ಯ.

‍ಲೇಖಕರು Avadhi Admin

August 27, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: