(ವಿಶ್ವ ರಂಗಭೂಮಿ ದಿನಾಚರಣೆಯ ಶುಭಾಶಯಗಳು)
ಹೌದು ವಿಶ್ವ ರಂಗಭೂಮಿ ದಿನಾಚರಣೆ ಎಲ್ಲೆಡೆ ನಡೆಯುತ್ತಿದೆ. ರಂಗಭೂಮಿಯ ಒಡನಾಡಿಗಳು ಪರಸ್ಪರ ಶುಭಾಶಯಯಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಅಲ್ಲಲ್ಲಿ ನಾಟಕೋತ್ಸವಗಳು ಏರ್ಪಾಟಾಗುತ್ತಿವೆ. ಹಿಂಗೇ ಮೊನ್ನೆ 27.03. 2015 ರಂದು ಕರ್ನಾಟಕ ನಾಟಕ ಅಕಾಡೆಮಿಯು ಏರ್ಪಡಿಸಿದ್ದ ವಿಶ್ವ ರಂಗಭೂಮಿ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ಎಚ್.ಎಲ್. ಪುಷ್ಪಮೇಡಂ, ಎಲ್. ಹಮುಮಂತಯ್ಯ, ನಾಟಕ ಅಕಾಡೆಮಿಯ ಅಧ್ಯಕ್ಷರಾದ ಶೇಖ್ ಮಾಸ್ತರ್, ಗಿರಿಜಾ ಲೋಕೇಶ್, ಶೋಭಾ ವೆಂಕಟೇಶ್, ಎಂ, ಎಸ್. ವಿದ್ಯಾ, ರಾಜಾರಾಂ, ಲೋಕೇಶ್ ಅವ್ರು ಹಾಗೂ ಅಮ್ಮ ಹೀಗೆ ರಂಗಭೂಮಿಯನ್ನು ಪ್ರೀತಿಸುವ ಜೀವಗಳೆಲ್ಲಾ ಒಂದೆಡೆ ಸೇರಿದ್ದರು. ಆ ಕಾರ್ಯಕ್ರಮದಲ್ಲಿ ಅಮ್ಮನ ಮಾತಾಡಿದ್ದು ಮತ್ತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದನ್ಮು ಕೇಳಿ ಈ ವಾರ ಅವರು ಅಭಿನಯಿಸಿದ ಹನುಮಂತನ ಪಾತ್ರದ ಬಗ್ಗೆ ಬರೀಬೇಕು ಅನ್ನಿಸಿತು.
ಅಂದಹಾಗೆ ‘ಬಂಗಾರದ ಬಾಗಿನ’ ಅನ್ನೋ ಪದ್ಯದಿಂದ ಮೊದಲಿಗೇ ಹಂಚಿಕೊಂಡೆನಲ್ಲಾ ಅದು ಸುಮಾರು ಆರೇಳು ವರ್ಷದ ಹಿಂದಿನ ಕವಿತೆ. ಈಗಾಗಿದ್ರೆ ಈ ತರ ಬರೀತಿರಲಿಲ್ಲ. ಬೇರೆ ತರಾನೇ ಬರೀತಿದ್ದೆ ಬಿಡಿ. ಕವಿತೆ ಓದುವ ಹೊಸತು. ಕಂಡಿದ್ದನೆಲ್ಲಾ ಕವಿತೆ ಮಾಡುವ ಹುಮ್ಮಸ್ಸು ಬೇರೆ. ಹಾಗಂದ ಮಾತ್ರಕ್ಕೆ ಈ ಕವಿತೆಯೊಳಗಿನ ಭಾವ ಕೊಂಚವೂ ಕೃತಕವಲ್ಲ. ಇದೇ ವಸ್ತು, ಭಾವ ಇಟ್ಕೊಂಡು ಈಗ ನಾನು ಕವಿತೆ ಬರೆದಿದ್ದರೆ ಬೇರೆ ರೂಪ ಪಡೆದುಕೊಂಡಿರುತಿತ್ತು. ಬಾಗುವುದು, ಮಾಗುವುದು ಸೃಷ್ಟಿ ನಿಯಮ. ಹೀಗಿದ್ದಾಗ ನಾನು ನನ್ನ ಕವಿತೆ ಬೇರೆ ಅಲ್ಲ ಅಲ್ವಾ ?
ಈ ಕವಿತೆ ಹುಟ್ಟಿಗೂ ರಂಗಭೂಮಿಗೂ ಮತ್ತು ಅಮ್ಮನಿಗೂ ಅವಿನಾಭಾವ ಸಂಬಂಧವಿದೆ. ಹೀಗೆ ಡಿಸಂಬರ್ 11, 2009 ರಿಂದ 14 ರ ವರೆಗೆ ಭಾಗವತರು ಸಾಂಸ್ಕೃತಿಕ ಸಂಘಟನೆ ‘ರಂಗಸಿರಿ ಉಮಾಶ್ರೀ’ ಅನ್ನೋ ನಾಲ್ಕು ದಿನಗಳ ಉಮಾಶ್ರೀ ನಾಟಕೋತ್ಸವ, ವಿಚಾರ ಸಂಕಿರಣ, ಸಂವಾದ ಮತ್ತು ರಂಗಗೌರವ ಕಾರ್ಯಕ್ರಮವನ್ನು ಆಯೋಜಿಸಿತ್ತು. ಇಡಿಯಾಗಿ ಅಮ್ಮನ್ನನ್ನು ರಂಗಭೂಮಿಯ ನೆಲೆಯಲ್ಲಿ ಕಟ್ಟಿಕೊಡುವ ಒಳ್ಳೆಯ ಪ್ರಾಯೋಗಿಕ ಕಾರ್ಯಕ್ರಮ ಅದು. ನಾಲ್ಕು ದಿನ ಅಮ್ಮನ ಅಭಿನಯದ ಒಡಲಾಳ, ಹರಕೆಯ ಕುರಿ ಹೀಗೆ ಕೆಲ ನಾಟಕಗಳನ್ನು ನೋಡಿದ್ದು ಬೆಟ್ಟ ಪಡೆದ ಅನುಭವ. ಹರಿಯೋ ನೀರಲ್ಲಿ ಮಿಂದ ಅನುಭವ. ಅಮ್ಮನ ಅಭಿನಯದ ಬಗ್ಗೆ ವಿಜಿಯಮ್ಮ, ಗಿರಿಜಾ ಲೋಕೇಶ್ ಹಾಗೂ ಇನ್ನಿತರ ರಂಗಭೂಮಿ ತಜ್ಞರು ವಿಚಾರ ಮಂಡಿಸಿದ್ದು ಮತ್ತು ಅಮ್ಮ ನಿರಂತರವಾಗಿ ನಾಲ್ಕು ಗಂಟೆಗಳ ಕಾಲ ನೆರೆದಿದ್ದರವ ಜೊತೆಯಲ್ಲಿ ತನ್ನ ರಂಗಭೂಮಿ ಅನುಭವ ಕುರಿತಂತೆ ಸಂವಾದ ಮಾಡಿದ್ದು ಹೀಗೆ ಅನೇಕಗಳು ಸಾಕವ್ವನ್ನನ್ನು ಒಂದು ಕಡೆ ಸೇರಿಸಿದ್ದ ಅರ್ಥಪೂರ್ಣ ಕಾರ್ಯಕ್ರಮ ಅದು. ನಾಲ್ಕೂ ದಿನಗಳು ನಟಿಯೊಬ್ಬಳನ್ನು ಕೇಂದ್ರವಾಗಿಟ್ಟುಕೊಂಡು ಕನ್ನಡ ರಂಗಭೂಮಿಯನ್ನು ನೋಡಿದ ಕ್ರಮ ಇಂದಿಗೂ ಮರೆಯುವಂತಿಲ್ಲ. ಇದೇ ಕಾರ್ಯಕ್ರಮದ ಕೊನೆಯಲ್ಲಿ ಅಮ್ಮನಿಗೆ ರಂಗ ಗೌರವ ಇತ್ತು. ಆ ಸಂದರ್ಭದಲ್ಲಿ ಏನೋ ತೋಚಿದ್ದು ಬರೆದು ಓದಿದ್ದೆ ‘ಬಂಗಾರದ ಬಾಗಿನ’. ಕವಿತೆಯನ್ನು ಓದುವ ಘಳಿಗೆಗಳು ಮೊದ ಮೊದಲವೇ ನನಗೆ ಆಗ. ಪದ್ಯವನ್ನು ಬರೆದು ಓದಿ ಭಾವುಕನಾಗಿಬಿಟ್ಟಿದ್ದೆ.
ಭಾಗವತರು ನಡೆಸಿದ ಇದೇ ನಾಟಕೋತ್ಸವದಲ್ಲಿ ಅಮ್ಮ ಪೌರಾಣಿಕ ರಂಗಭೂಮಿಯ ರಾಮಾಯಣದ ಪ್ರಸಂಗವೊಂದರಲ್ಲಿ ಹನುಮಂತನ ಪಾತ್ರವೊಂದನ್ನು ಮಾಡಿದ್ದರು. ಬಹಳ ಕುತೂಹಲವಿತ್ತು ಆಂಜನೇಯನ ಪಾತ್ರವನ್ನು ಹೇಗೆ ಮಾಡುತ್ತಾರೆ ಅಂತ. ಆ ವೇಳೆಗಾಗಲೇ ಅಮ್ಮ ತೇರದಾಳದಲ್ಲಿ ರಾಜಕೀಯವಾಗಿ ಬಹಳ ಒತ್ತಡದಲ್ಲಿದ್ದ ಕಾಲವದು. ಈ ಪಾತ್ರಕ್ಕಾಗಿ ಯಾವುದೇ ಪೂರ್ವ ತಯಾರಿ ಹೆಚ್ಚು ಮಾಡಿಕೊಂಡಿರಲಿಲ್ಲ ಅವರು. ನಾಟಕ ತಂಡದ ಒತ್ತಾಯಕ್ಕೆ ಮಣಿದು ಒಪ್ಪಿದ್ದರು. ಅವರ ನಿರಾಕರಣೆ ರಿಹರ್ಸಲ್ ಆಗಿಲ್ಲ ಅನ್ನುವುದಷ್ಟೇ ಆಗಿತ್ತು ಅನ್ನೋದನ್ನು ಬಿಟ್ಟು ಬೇರೇನಿಲ್ಲ ಅಂತ ಅವರೇ ಹೇಳಿದರು ಕೂಡ. ಆಂಜನೇಯ ಪಾತ್ರ ಮಾಡಿ ಸುಮಾರು ಹತ್ತು ಹದಿನೈದು ವರ್ಷಗಳು ಕಳೆದಿದ್ದವು ಅಂತಲೂ ಆಗ ಅವರೇ ಹೇಳಿದರು. ಹೀಗಿರಬೇಕಾದ್ರೆ ಹೇಗೆ ಇವರು ನಾಟಕ ಮಾಡುತ್ತಾರೆ ಅನ್ನುವ ನಿರೀಕ್ಷೆ ನನ್ನನ್ನೂ ಸೇರಿದಂತೆ ಅಲ್ಲಿದ್ದ ಅನೇಕರಿಗಿತ್ತು. ಸರಿ ನಾಟಕ ಶುರು ಆಯಿತು ಹಾರ್ಮೋನಿಯಂ ಶ್ರುತಿ ಹಿಡಿದು ಕಂದ ಹಾಡುತ್ತಾ ರಂಗಕ್ಕೆ ಚಂಗನೆ ಹಾರಿಬಂದರು. ಇಡೀ ಕಲಾಕ್ಷೇತ್ರ ಚಪ್ಪಾಳೆಯ ಸುರಿಮಳೆ ಸುರಿಸಿತು. ಹಾವ ಭಾವ, ಸೀತೆಯ ಜೊತೆ ಯುಗಳದಲ್ಲಿ ಹಾಡುವ ಕಂದಗಳು, ಮಂಗನ ತರಾನೇ ಪುಟಿಪುಟಿದು ಜಿಗಿಯುತ್ತಿದ್ದುದು, ಮುಖಭಾವ, ಮಾತು, ಹಾಡಿನ ತಾಳಕ್ಕೆ ಹೆಜ್ಜೆ, ಗದೆಯನ್ನು ಹಿಡಿದುಕೊಳ್ಳುತಿದ್ದ ಶೈಲಿ, ಬಾಲ ಅಲ್ಲಾಡಿಸುವ ಪರಿ, ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ಎಗರುವುದು ಅಬ್ಬಾ ಇವತ್ತೂ ಮೈ ಜುಮ್ ಅನ್ನುತ್ತೆ ನೆನಪಿಸಿಕೊಂಡಾಗ. ಪ್ರೇಕ್ಷಕರೆಲ್ಲಾ ಒಂದು ಘಳಿಗೆಯೂ ಸುಮ್ಮನಿರದೇ ಕೈ ತಟ್ಟುತ್ತಲೇ ಇದ್ದರು. ನಾಟಕ ಮುಗಿಯಿತು. ಎಂದಿನಂತೆ ಜನರೆಲ್ಲಾ ಮುಗಿ ಬಿದ್ದರು ಫೋಟೋಗಾಗಿ. ಇಡೀ ಮೈ ತುಂಬಾ ಕೌದಿಯಂಥಾ ಉಡುಪು ಧರಿಸಿದ್ದ ಅಮ್ಮ ಸಾಕಷ್ಟು ಬಳಲಿದ್ದರು. ಐವತ್ತು ದಾಟಿದರೂ ಅವರೊಳಗಿದ್ದ ಹನುಮನನ್ನು ಕಂಡು ಖುಷಿಯ ಜೊತೆಗೆ ಅಚ್ಚರಿಯಾಯಿತು. ನಾನು ಅಮ್ಮನನ್ನು ‘ಜಾಸ್ತಿ ರಿಹರ್ಸಲ್ ಮಾಡಿಲ್ಲ. ಅನೇಕ ವರ್ಷಗಳ ಹಿಂದೆ ಮಾಡಿದ ಪಾತ್ರವನ್ನು ಮತ್ತೆ ಒಂಚೂರು ದಡಬಡ ಮಾಡದೇ ಹೇಗೆ ಪಾತ್ರ ಮಾಡಿದ್ರಿ’ ? ಅಂತ ಕೇಳಿದ್ದಕ್ಕೆ ಅವರು ಹೇಳಿದ್ದು ‘ರಂಗಭೂಮಿ ಅನ್ನೋದು ನನಗೆ ನೆನಪಿನ ದೈವ. ಬಣ್ಣ ಹಚ್ಚಿ ವೇಷ ತೊಟ್ಟು, ಪ್ರೇಕ್ಷಕರನ್ನು ನೋಡಿ ರಂಗಕ್ಕೆ ಬಂದ ಕೂಡಲೇ ಎಲ್ಲಾ ಒಂದಾದ ಮೇಲೆ ಒಂದು ನೆನಪಿಗೆ ಬಂದು ಬಿಡತ್ತೆ ಸರಾಗವಾಗಿ. ಅಮ್ಮ ಹಾಡೋ ಲಾಲಿಯ ತರಹ’ ಅಂದ್ರು. ನಾನೇನು ಹೇಳಬೇಕೋ ಗೊತ್ತಾಗದೇ ತಲೆಯಾಡಿಸಿದೆ.
ಅಂದ ಹಾಗೆ ಅಮ್ಮ ತುಂಬಾ ಹಿಂದೆ ಪೌರಾಣಿಕ ನಾಟಕದಲ್ಲಿ ಕೃಷ್ಣನ ಪಾತ್ರ ಕೂಡ ಮಾಡಿದ್ದಾರಂತೆ. ನಾ ಅವರ ವೇಷ ಹಾಕಿರುವ ಕೃಷ್ಣನ ಫೋಟೋ ಮಾತ್ರ ನೋಡಿರೋದು. ಫೋಟೋದಲ್ಲೇ ಅವರ ಅಭಿನಯ ತುಂಬಾ ಸುಂದರವಾಗಿ ಕಾಣುತ್ತಿದೆ ಯಾವಾಗ್ಲೂ ನನಗೆ. ಇನ್ನೂ ರಂಗದ ಮೇಲೆ ಇನ್ನೆಷ್ಟು ಚೆಂದ ಮಾಡಿರಬಹುದು ಅಂತ ಅನೇಕ ಸಲ ಅವರ ಮನೆಗೆ ಹೋದಾಗಲೆಲ್ಲಾ ಆ ಕೃಷ್ಣನ ಫೋಟೋನ ದಿಟ್ಟಿಸಿ ನೋಡುತ್ತಿರುತ್ತೇನೆ. ರಂಗದ ಮೇಲೆ ಪರಕಾಯ ಪ್ರವೇಶ ಮಾಡಿ ಗಂಡು ಹೆಣ್ಣಿನ ರೂಪ ತಾಳುವುದು, ಅಥವಾ ಹೆಣ್ಣು ಗಂಡನ್ನು ಆವಾಹಿಸಿಕೊಳ್ಳುವುದು ರಂಗ ಭೂಮಿಯಲ್ಲಿ ದುಡಿದ ಜೀವಗಳಿಗೆ ಉಸಿರಾಟದಷ್ಟೇ ಸಲೀಸಾಗಿಬಿಟ್ಟಿರುತ್ತೆ. ಇನ್ನೂ ಅಮ್ಮನಂಥಹ ಅಭಿನೇತ್ರಿಗೆ ಹೇಳಬೇಕಿಲ್ಲ. ಈ ಬಗೆಗೆ ಅನೇಕ ಸಿದ್ಧಾಂತಗಳನ್ನು, ವಿಮರ್ಶೆಯ ಮತ್ತು ಮನೋವಿಜ್ಞಾನದ ಪರಿಭಾಷೆಗಳನ್ನು ಓದಿದ್ದರೂ ಅಮ್ಮನ ಅಭಿನಯ ನೋಡಿದಾಗ ಯಾವ ಸಿದ್ಧಾಂತವೂ ಪ್ರಮೇಯವೂ ಮುಖ್ಯ ಅಂತ ಅನ್ನಿಸೋದೇ ಇಲ್ಲ.
ವಿಶ್ವ ರಂಗಭೂಮಿ ದಿನಾಚರಣೆಯಲ್ಲಿ ಅಮ್ಮ ಮಾತಾಡ್ತಾ ಪೌರಾಣಿಕ ರಂಗಭೂಮಿಯ ಬಗ್ಗೆ ಮಾತಾಡುತ್ತಾ ಹವ್ಯಾಸಿ ರಂಗಭೂಮಿ ಮಾಡಬೇಕಿರುವ ಕೆಲಸಗಳನ್ನು ಹೇಳ್ತಿದ್ರು. ಜೊತೆಗೆ ಅವ್ರ ಮಾತುಗಳಲ್ಲಿ ಪೌರಾಣಿಕ ರಂಗಭೂಮಿಯ ಬಗ್ಗೆ ಇರುವ ಕಾಳಜಿ ಮತ್ತು ಮಮತೆಯನ್ನು ಬಿಂಬಿಸುವ ಹಾಗೆ ಮಾತಾಡಿದ್ರು ಕೂಡ. ಪೌರಾಣಿಕ ರಂಗಭೂಮಿಯ ನಾಟಕೋತ್ಸವ ನಡೆಯುತ್ತಿರುವುದರ ಬಗ್ಗೆ ಖುಷಿಪಟ್ಟರು. ಕೊನೆಗೆ ರಂಗಭೂಮಿಯ ತಾಯಿಯಂತೆ ಕಟ್ಟಿಕೊಡುವ ಒಂದು ಪದ್ಯವನ್ನು ಕೂಡ ಅಲ್ಲೇ ಬರೆದು ವಾಚಿಸಿದರು. ಇದೆಲ್ಲಾ ನೋಡಿದ ನನಗೆ ಅವರ ಹನುಮಂತ ಮತ್ತು ಕೃಷ್ಣ ನೆನಪಾಗಿಬಿಟ್ಟರು.

ಬರೆದದ್ದು ಮತ್ತು ದಾಖಲಿಸಿದ್ದು ಮಾತ್ರ ಪರಂಪರೆ ಮತ್ತು ಚರಿತ್ರೆಗಳಾಗುವುದಿಲ್ಲ. ಹಾಗೆ ಆಗಬೇಕು ಅಂತಲೂ ಏನಿಲ್ಲ. ಬರೆಯುವ ಮತ್ತು ದಾಖಲಿಸುವ ಕೆಲಸ ಬೇರೊಬ್ಬರಿಂದ ಆಗುತ್ತಿರುತ್ತದೆ. ಚರಿತ್ರೆ ಆಗಬೇಕಾದವರು ತಮ್ಮ ಬಗ್ಗೆ ತಾ ಡಂಗೂರ ಹೊಡೆದುಕೊಳ್ಳಲ್ಲ. ಮೌಖಿಕ ಚರಿತ್ರೆಗಳೆಲ್ಲಾ ಬಾಯಿಬಿಟ್ಟರೆ ಅಮ್ಮನಂಥಹ ಅನೇಕ ಜನವಾಣಿ ಬೇರುಗಳು ಫಲ ಕೊಡುತ್ತವೆ ಅಲ್ಲವೇ ? ಇರಲಿ ಉಮಾಶ್ರೀ ಅಮ್ಮ ತಮ್ಮ ಕೆಲಸಗಳಿಂದಲೇ ಉಳಿಯುತ್ತಾ ಹೋಗುತ್ತಾರೆ. ಹೀಗಿದ್ದಾಗ ಇನ್ನೊಬ್ಬರು ಬರೆದ ಮತ್ತು ದಾಖಲಿಸಿದ ಚರಿತ್ರೆಗಳು ಒಂದಷ್ಟು ಸರಿ ಮತ್ತೊಂದಿಷ್ಟು ತಪ್ಪಾಗಿ ಬಿಂಬಿತವಾಗಿರುವುದನ್ನು ನಮ್ಮ ಚರಿತ್ರೆಗಳು ತಾನೇ ಬಾಯಿಬಿಟ್ಟು ಹೇಳುವುದನ್ನು ನಾವೆಲ್ಲಾ ಗಮನಿಸಿದ್ದೇವೆ ಮತ್ತು ಅರಿತಿದ್ದೇವೆ. ಯಾರೂ ಹೇಳದೇ ಯಾರೂ ದಾಖಲಿಸದೇ ತನ್ನ ಪಾಡಿಗೆ ತಾ ಚರಿತ್ರೆ ಆಗೋದು ಕೆಲವರಿಂದ ಮಾತ್ರ ಸಾಧ್ಯ. ಸಿಗುವ ಮಾಧ್ಯಮಗಳನ್ನು ಸರಿಯಾಗಿ ಬಳಸಿಕೊಂಡು ವಾಹಕ ಆಗುವ ಗುಣ ಉಮಾಶ್ರೀಯಂಥ, ನಾಗರತ್ನಮ್ಮನಂಥಹ, ಚಿಂದೋಡಿ ಲೀಲಾ, ವಿಜಿಯಮ್ಮ, ಗಿರಿಜಾ ಲೋಕೇಶ್ ಹೀಗೆ ಕೆಲವೇ ಕೆಲ ಜೀವಗಳಿಗೆ ಮಾತ್ರ ದಕ್ಕುತ್ತದೆ. ಕನ್ನಡ ರಂಗಭೂಮಿಯಲ್ಲಿ ಮತ್ತು ಸಿನೆಮಾ ರಂಗದಲ್ಲಿ ನಿಜಕ್ಕೂ ಉಮಾಶ್ರೀ ಅಮ್ಮ ಒಂದು ಪರಂಪರೆಯೊಳಗೆ ಚರಿತ್ರೆಯೊಳಗೆ ನಿಂತುಬಿಡುತ್ತಾರೆ.
2015 ನೇ ವಿಶ್ವ ರಂಗಭೂಮಿ ರಂಗಭೂಮಿ ದಿನಾಚರಣೆಯ ಅಂಗವಾಗಿ ಕ್ರಜಿಸ್ಟೋಫ್ ವಾರ್ಲಿಕೊವಸ್ಕಿ ಅವರು ನೀಡಿದ ಸಂದೇಶದಲ್ಲಿ “ ರಂಗಭೂಮಿಯ ನಿಜವಾದ ಗುರುಗಳನ್ನು ಬಹಳ ಸುಲಭವಾಗಿ ವೇದಿಕೆಯಿಂದ ದೂರದಲ್ಲಿ ಕಾಣಬಹುದು ಮತ್ತು ಇವರಿಗೆ ರಂಗಪದ್ಧತಿಯನ್ನು ನಕಲು ಮಾಡುವ ಅಥವಾ ಹಳಸಲು ನುಡಿಗಳನ್ನು ಉತ್ಪಾದಿಸುವ ಯಂತ್ರದಂಥಹ ರಂಗಭೂಮಿಯಲ್ಲಿ ಸಾಮನ್ಯವಾಗಿ ಆಸಕ್ತಿ ಇರುವುದಿಲ್ಲ. ರಂಗಮಂದಿರದಿಂದ ಮತ್ತು ಒಂದಲ್ಲ ಒಂದು ಜಗತ್ತನು ಅನುಕರಣೆ ಮಾಡಲು ಕಾತರಿಸುವ ಅಸಂಖ್ಯಾತ ಜನರನ್ನು ದಾಟಿ ಮಿಡಿಯುವ ಮೂಲವನ್ನು, ಜೀವಂತ ತರಂಗಗಳನ್ನು ಅವರು ಹುಡುಕಿ ತೆಗೆಯುತ್ತಾರೆ. ನಾವು ಪ್ರೇಕ್ಷಕರ ಜೊತೆ ಚರ್ಚೆಗೆ ಕೇಂದ್ರಿಕೃತವಾದ ಅಥವಾ ಅವಲಂಬಿಸಿರುವ ಜಗತ್ತನ್ನು ಸೃಷ್ಟಿಸುವ ಬದಲು ನಕಲು ಮಾಡುತ್ತೇವೆ. ಬಾಹ್ಯ ರೂಪದ ಕೆಳಗೆ ವಾಸ್ತವವಾಗಿ ತುಂಬಿರುವ ಭಾವೋದ್ರೇಕಗಳನ್ನು ಬಹಿರಂಗ ಗೊಳಿಸಲು ರಂಗಭೂಮಿ ಬಿಟ್ಟು ಬೇರೊಂದಿಲ್ಲ.
ಅನಿವಾರ್ಯದ ಜಗತ್ತಿನಲ್ಲಿ ಅಂತ್ಯ ಈ ಗ್ರಹದ ಅಂತ್ಯವಲ್ಲ. ಬದಲಾಗಿ ಮಾನವ ಸಂಬಂಧಗಳ ಪ್ರತಿರೂಪದ ಅಂತ್ಯ. ಸಾಮಾಜಿಕ ವ್ಯವಸ್ಥೆ ಮತ್ತು ವಿಧಾನದ ಅಂತ್ಯ ಅವರ ತೀಕ್ಷವಾದ ಸಾಮಾನ್ಯ ಜ್ಞಾನ ಇಂದಿಗೆ ಮತ್ತು ಈಗ ಪ್ರಚಲಿತ, ಸರ್ವವ್ಯಾಪಿಯಾಗಿರುವ ಮಾಧ್ಯಮಕ್ಕೂ ಮೀರಿ ವೇಗವಾಗಿ, ಹೊಸ ಜಾಗಗಳಲ್ಲಿ ಉರಿಯುತ್ತಿರುವ ಮತ್ತು ಸಂಘರ್ಷಗಳ ಅಭಿಮುಖವಾದ ಇಂತಹ ಜಗತ್ತಿನ ನಂತರದಲ್ಲಿ ಬದುಕಿರುವ ನಮಗೆ ಈ ಬೆಂಕಿಯು ಬಹುಬೇಗ ಮುಂದೆಂದೂ ಹಿಂತಿರುಗದಂತೆ ನೀರಸವಾಗಿ ಬೆಳೆದು ಕಣ್ಮರೆಯಾಗುತ್ತದೆ ಮತ್ತು ಇದರಿಂದ ನಾವು ನಿಸ್ಸಾಹಯಕರಾಗಿ ಭಯಭೀತರಾಗಿ ದಿಕ್ಕು ತೊಚದಂತಾಗುತ್ತೇವೆ. ಗೋಪುರಗಳನ್ನು ಕಟ್ಟಲಾಗದ ನಾವು ಹಠದಿಂದ ಕಟ್ಟಿದ ಗೋಡೆಗಳು ನಮ್ಮನ್ನು ರಕ್ಷಿಸಲಾರವು. ಬದಲಾಗಿ ಅವುಗಳೇ ನಮ್ಮ ರಕ್ಷಣೆ ಬೇಡುತ್ತವೆ. ಅದಕ್ಕಾಗಿ ನಮ್ಮ ಶಕ್ತಿಯ ಬಹುಭಾಗವನ್ನು ನುಂಗಿಹಾಕುತ್ತವೆ. ದ್ವಾರದ ಆಚೆ ಗೋಡೆಯ ಹಿಂಭಾಗದಲ್ಲಿ ಏನಿದೆ ಎಂದು ನೋಡಲು ನಮ್ಮಲ್ಲಿ ಚೈತನ್ಯವಿರದು. ಇದೇ ಕಾರಣಕ್ಕಾಗಿ ರಂಗಭೂಮಿ ಇರಬೇಕು. ಚೈತನ್ಯ ಪಡೆಯಬೇಕು.” ಹೀಗೆ ಶ್ರೀಕಂಠ ಗುಂಡಪ್ಪ ಅವರು ಕನ್ನಡೀಕರಿಸಿದ ಮಾತುಗಳನ್ನು ಓದುತ್ತಿರುವಾಗ ನಾನು ಮೇಲೆ ಹೇಳಿದ ನಿರ್ಮಿತ ಚರಿತ್ರೆ ಮತ್ತು ತಾನೇ ಚರಿತ್ರೆ ಆಗುವ ಕ್ರಮವನ್ನು ವಚನದ ಆಶಯ ಆಲಯ ಬಯಲುಗಳ ನೆಲೆಯಲ್ಲಿ ಹುಡುಕಿಕೊಳ್ಳಬಹುದು. ರಂಗಭೂಮಿಯ ತತ್ವ ಸತ್ವ ಎಲ್ಲಾ ಈ ರೀತಿಯ ಮಾತುಗಳನ್ನು ನಂಬುವ ಮತ್ತು ಅದರಂತೆ ಜೀವಿಸುವ ಸಾಧ್ಯತೆಗಲ್ಲೇ ಇರುವುದು. ಅಮ್ಮ ಕೂಡ ಇದಕ್ಕೆ ಹೊರತಾಗಿಲ್ಲ ಅಂತ ಅದೆಷ್ಟೋ ಸಲ ನನಗೆ ಅನ್ನಿಸಿದೆ.
ಮೊನ್ನೆ ವಿಶ್ವರಂಗಭೂಮಿ ದಿನಾಚರಣೆಗೆ ಸಂದರ್ಭಕ್ಕೆ ಕನ್ನಡದ ಸಾಂಸ್ಕೃತಿಕ ಲೋಕದ ಪ್ರಮುಖರೊಬ್ಬರು ಲೇಖನ ಬರೆದಿದ್ದರು. ರಂಗಭೂಮಿ ಬೆಳೆಯಬೇಕು. ಯುವಕರಿಗೆ ಹೆಚ್ಚು ಅವಕಾಶ ಸಿಗಬೇಕು. ಅದೂ ಇದೂ ಅಂತ. ಎಲ್ಲಾ ಹೆಣೆದ ಕಥೆ. ನಾ ಹೇಳುತ್ತಿರುವ ಮುಖ್ಯರನ್ನು ಹಲವಾರು ಬಾರಿ ಯುವಕರೇ ಮಾಡಿದ ನಾಟಕ ನೋಡಲು ಬನ್ನಿ ಅಂತ ಕರೆದಾಗ ತೋರಿದ ಉದಾಸೀನ ನಮ್ಮ ಬಡ ಬಡ ಬಡಿದುಕೊಳ್ಳೋ ಕೃತಕ ಕಾಳಜಿಗಳು ಮೈ ಉರಿ ತರುತ್ತವೆ. ರಂಗಭೂಮಿ ದಿಗ್ಗನೆ ಎಲ್ಲರನ್ನು ಕರೆದಪ್ಪುವ ಗುಣವುಳ್ಳದ್ದು. ಹೀಗಿರುವಾಗ ಜೀವದ ಶಕ್ತಿ ಗೊತ್ತಿಲ್ಲದೇ ಬಾಹ್ಯ ರೂಪನ್ನು ವಿವರಿಸುವ ಗೋಡೆ ಕಟ್ಟೋರನ್ನು ನೋಡಿದ್ರೆ ನಗು ಬರುತ್ತದೆ. ಇದನ್ನೇ ಕ್ರಜಿಸ್ಟೋಫ್ ಅವರ ಸಂದೇಶ ರಂಗಭೂಮಿ ಮಿಡಿಯಬೇಕಾದ ನೆಲೆಗಳನ್ನು ಹೇಳುತ್ತದೆ.
ರಂಗಭೂಮಿಯ ಜೊತೆಯೇ ಇರುವ ಭೂಮಿಯಲ್ಲಿ ಹೊಸ ಹೊಸ ಹುಲ್ಲು ಗರಿಕೆಗಳು ಚಿಗುರುವುದನ್ನು ಹಸುರು ಚೆಲ್ಲುವುದನ್ನ ರಂಗತಾಯಿ ಸದಾ ನಿರೀಕ್ಷಿಸುತ್ತಿರುತ್ತಲೇ ಇರುತ್ತಾಳೆ ಅಲ್ಲವೇ ? ಉಮಾಶ್ರೀ ಅಮ್ಮ ಕೂಡ ಮಡಿಲು ಹಾಸಿ ಕಾಯುತ್ತಾರೆ ಅಲ್ವಾ ? ಇತ್ತೀಚಿಗೆ ಅಮ್ಮನನ್ನು ಕುರಿತು ಬರೆದ ಕಟ್ಟುಪದವೊಂದರಿಂದ ಈ ವಾರಕ್ಕೆ ವಿದಾಯ ಹೇಳುತ್ತೇನೆ.
ಕಟ್ಟುಪದ – 373
ಬಣ್ಣವಿಲ್ಲದ ಮನವೇ ಅಮ್ಮ
ಅಮ್ಮಾ ಎಂದರೆ ಗುಣದ ಋಣವಮ್ಮ
ಹಸಿದಾಗ ಬಣ್ಣ ಕುಸಿದಾಗ ಬಣ್ಣ
ಒಡಲ ಬೆಂಕಿಗೆ ಉಸಿರಿನ ಬಣ್ಣ.
ಗೆದ್ದ ಗುರಿಗೆ ಬೆವರಿನ ಬಣ್ಣ.
ತುಳಿದ ತುಳಿತಕ್ಕೆ ಕಲಿಕೆಯ ಬಣ್ಣ.
ಉಮೆಯ ಕಣ್ಣಿಗೆ ಬೆಳಕಿನ ಬಣ್ಣ.
ಸಾಕವ್ವ ನಿನ್ನ ಕಲೆಯೇ ಕನ್ನಡಕೆ ಬಣ್ಣ
ರಂಗದ ಮೇಲೆ ರಂಗಾಗಿ ಬಂದ ಜಂಗಮಗಿತ್ತಿ
ಎನ್ನ ಶ್ವೇತಪ್ರಿಯ ಗುರುವೇ ನಿನ್ನೊಳಗನ್ನು ತೋರಿದನಮ್ಮ.





chennagide, nanu ide abhiprayavannu neravagi umasri avarallu helide, khushi pattaru.
Superb anna
ಉಮಾಶ್ರೀ ಅವರ ರಂಗಸಾಧನೆಗಳಿಗೆ ಸಲಾಂ.ಅದರಲೂ ಆ ಹನುಮವೇಷಕ್ಕೆ.
Nimma kavithe, madam na rangabhoomi payana, aasakthi , thuditha, talent paraspara pooraka. Ammana laali haadige avaru holisiddu athyantha aaptha. Aa paridiyalliddu nivu parigasnisuva pariyuu ananya. Nice
ರಘುನಂದನ್, ಹನುಮಂತನಾಗಿ ಉಮಕ್ಕ ! ವಾಹ್ ಇದು ಬಹುಜನರಿಗೆ ಗೊತ್ತಿಲ್ಲದ ಮುಖ. ಅಥವಾ ನನಗೆ ಇದರ ಸೂಕ್ಷ್ಮ ಸುಳಿವಿಲ್ಲದ್ದನ್ನು ನಾನು ಹಾಗಂದು ಕೊಳ್ಳುತ್ತಿದ್ದೀನೊ ಗೊತ್ತಿಲ್ಲ,,, ಆದರೆ ಏನ್ರೀ ಈ ಮಹಾತಾಯಿಯ ಪ್ರತಿಭೆ, ಶಿವಶಿವಾ. ಅಪರೂಪಕ್ಕೊಬ್ಬರು ಹೀಗೆ ತುಂಬಿದ ಕಣಜದ ಹಾಗೆ ಇದ್ದುಬಿಟ್ಟಿರುತ್ತಾರೇನೋ . ಆ ಶಿವ ಉಮಕ್ಕರನ್ನು ಹೀಗೇ ಉತ್ಸಾಹದಮೂಟೆಯಾಗೇ ಉಳಿಸಲಿ.ಲೇಖನ ಎಂದಿನಂತೆ ಆರಾಧನೆ ಬೆರಗು ಕಲಿಕೆಯೋತ್ಸಾಹಗಳ ಮಿಶ್ರಣ.