ಹೀಗೊಬ್ಬಳು ’ಪ್ರೇಮಾ ಮಳ್ಳಿ’ – ಶ್ರೀದೇವಿ ಕೆರೆಮನೆ

ಕಾಡುವ ಗರ್ಭ

ಶ್ರಿದೇವಿ ಕೆರೆಮನೆ

ಏಯ್ ಸರ್ಕಣೇ…. ರಸ್ತಿ ಮ್ಯಾನ್ ನಿಂತ್ಕುಂಡೆ ಸಾಯುಕ್ ಮಾಡಿ? ಹಿಂದಿನಿಂದ ಒಂದು ಕರ್ಕಶ ಧ್ವನಿ ಕೇಳಿ ಬೆಚ್ಚಿ ಬಿದ್ದಿದ್ದೆ. ಹಿಂತಿರುಗಿದರೆ ಮಾನಸಿಕ ಅಸ್ವಸ್ಥೆಯಂತೆ ಕಾಣುವ ಹೆಂಗಸೊಬ್ಬಳು ದುರುಗುಟ್ಟುತ್ತಾ ನಿಂತಿದ್ದಳು. ಆಕೆ ಏನು ಮಾಡುತ್ತಾಳೋ ಬಿಡುತ್ತಾಳೋ… ನನಗಂತೂ ಒಂದುಕ್ಷಣ ಮೈ ನಡುಗಿ ಹೋಯ್ತು. ಹಾಗೆ ನೋಡಿದರೆ ಆಕೆ ಹೇಳಿದ್ದರಲ್ಲಿ ತಪ್ಪೇನೂ ಇರಲಿಲ್ಲ. ನಾನು ರಸ್ತೆಯ ಮೇಲೇ ನಿಂತು ಬಸ್ಗಾಗಿ ಕಾಯುತ್ತಿದ್ದೆ. ನಾನು ನೋಡುತ್ತಿರುವ ವಿರುದ್ಧ ದಿಕ್ಕಿನಿಂದೇನಾದರೂ ಬಸ್ ಬಂದರೆ, ಅಥವಾ ಯಾವುದಾದರೂ ಗಾಡಿ ಓವರ್ ಟೇಕ್ ಮಾಡಲೆತ್ನಿಸಿದರೆ ನಾನು ಖಂಡಿತಾ ಅಪಘಾತಕ್ಕೆ ಒಳಗಾಗುತ್ತಿದ್ದೆ. ಆದರೂ ಯಾಕೋ ಮುಜುಗರವೆನ್ನಿಸಿ ಸುತ್ತ ಮುತ್ತ ನೋಡಿದರೆ ಅಲ್ಲಿರುವ ಯಾರೆಂದರೆ ಯಾರೂ ನಮ್ಮತ್ತ ಲಕ್ಷಕೊಟ್ಟಿರಲಿಲ್ಲ. ಆಕೆಯ ಮಾತನ್ನು ಸಹಜ ಎಂಬಂತೆ ಎಲ್ಲರೂ ಸ್ವೀಕರಿಸಿದ್ದರು. ಒಬ್ಬಳು ಮಾನಸಿಕ ಅಸ್ವಸ್ಥಳು ಯಾರ ಮೇಲಾದರೂ ರೇಗಿದರೆ ಸುತ್ತ ನಿಂತು ತಮಾಶೆ ನೋಡುವವರೇ ಅಧಿಕವಾಗಿರುವಾಗ ಯಾರೂ ಕೂಡ ಕುತೂಹಲಕ್ಕೆಂದೂ ನಮ್ಮತ್ತ ನೋಡದಿರುವುದು ನನಗೇ ಅಚ್ಚರಿಯೆನಿಸಿತು

ಆ ದಿನ ಶಾಲೆಗೆ ಹೋದವಳೇ ನನಗಾದ ಅನುಭವ ತಿಳಿಸಿದೆ. ಪ್ರೇಮಾ ಮಳ್ಳಿ ಇರಬೇಕು… ಅವಳು ಹಾಗೇನೇ.. ನನ್ನ ಸಹೋದ್ಯೋಗಿಗಳೂ ನಿಲರ್ಿಪ್ತವಾಗಿ ಹೇಳಿದರು. ಆ ಊರಿಗೆ ಅಲ್ಲಿ ಪರಿಸರಕ್ಕೆ ಹೊಸಬಳಾದ ನನಗೆ ಯಾಕೋ ಪ್ರೇಮಾಮಳ್ಳಿ ಕುತೂಹಲ ಹುಟ್ಟಿಸಿದ್ದಳು. ಅದೆಲ್ಲಕ್ಕಿಂತ ಹೆಚ್ಚಾಗಿ ಹಿರಿಯ ಶಿಕ್ಷಕರೊಬ್ಬರು ಎಲ್ಲಾದ್ರೂ ಅವಳೆದುರಿಗೆ ಈ ಊರಿನ ಹೆಸರು ಹೇಳಿ ಬಿಟ್ಟೀಯಾ…ಅಲ್ಲಿಗೆ ನಿನ್ನ ಕತೆ ಮುಗಿತು ಎಂದೂ ಸೇರಿಸಿ ನನ್ನ ಕುತೂಹಲಕ್ಕೆ ಮತ್ತಷ್ಟು ರೆಕ್ಕೆ ಸೇರಿಸಿದ್ದರು. ಹಾಗೆಂದು ಅವಳ ಬಗ್ಗೆ ಕೇಳಿದರೆ ಮಾತ್ರ ‘ಪಾಪ ಬಿಡು, ಅವಳ ಬಗ್ಗೆ ಏನು ಹೇಳೋದು ಎಂಬ ಕನಿಕರ, ಮರುಕದಲ್ಲಿಯೇ ಉತ್ತರ ಮುಗಿದು ಹೋಗುತ್ತಿತ್ತು.
ದಿನ ಕಳೆದಂತೆ ಹೊಸ ಊರು ಪರಿಚಿತವಾಯಿತು. ಊರಿನ ಜನ ಆತ್ಮೀಯರಾದರು. ಶಾಲಾ ವಾತಾವರಣ ಆಪ್ತವಾಯಿತು. ಸುತ್ತಲಿನ ಜನ ಹೆಚ್ಚಿನ ಸಂಪರ್ಕಕ್ಕೆ ಬಂದರು. ಬೆಳಿಗ್ಗೆ ನಾನು ಶಾಲೆಗೆ ಹೋಗುವ ಹೊತ್ತಲ್ಲಿ ಒಂದಲ್ಲ ಒಂದು ಅಂಗಡಿ ಬಾಗಿಲಲ್ಲಿ ಏನಾದರೂ ಗೊಣಗುತ್ತ ತಲೆತಗ್ಗಿಸಿ ಕಸಗುಡಿಸುತ್ತಿದ್ದ ಆಕೆ ಕೂಡ ಮೊದಲ ದಿನ ಕಂಡಂತೆ ಹೆದರಿಕೆ ಹುಟ್ಟಿಸುತ್ತಿಲ್ಲ. ಎಲ್ಲೋ ಒಮ್ಮೊಮ್ಮೆ ಶಾಲೆಗೆ ಹೋತೀ ಎಂದು ರಾಗವಾಗಿ ಕೇಳಿ ಕೊನೆಗೆ ಕೇಳಿದ್ದಕ್ಕೆ ಉತ್ತರಿಸುವ ಮುನ್ನವೇ ಅಲ್ಲಿಂದ ಹೊರಟು ಬಿಡುತ್ತಿದ್ದ ಆಕೆಯ ನಡೆ ಎಷ್ಟೋ ಸಲ ಅಚ್ಚರಿ ಎನ್ನಿಸುತ್ತಿತ್ತು, ಕೆಲವು ಸಲ ನಾರ್ಮಲ್ ಎಂದರೆ ಅಗದೀ ನಾರ್ಮಲ್ ಆಗಿರುತ್ತಿದ್ದವಳು ಎಷ್ಟೋ ಸಲ ಯಾರನ್ನೋ ದೊಡ್ಡ ಧ್ವನಿ ತೆಗೆದು ಬೈಯ್ಯುತ್ತ ಕ್ಯಾಕರಿಸಿ ಉಗಿಯುತ್ತ ಇಡಿ ವಾತಾವರಣವನ್ನೇ ರಾಣಾರಂಪ ಮಾಡಿ ಬಿಟ್ಟಿರುತ್ತಿದ್ದಳು. ಅಷ್ಟಾದರೂ ಸುತ್ತಲಿನ ಜನ ಅದೊಂದು ಸಾಮಾನ್ಯ ಸಂಗತಿ ಎಂಬಂತೆ ಆಕೆಗೆ, ಆಕೆಯ ಬೈಗುಳಕ್ಕೆ ಹೋದಿಕೊಂಡು ಬಿಟ್ಟಿದ್ದರು. ಬೆಳಗಿನ ಹೊತ್ತು ತುಂಬಾ ಸ್ವಾಭಾವಿಕವಾಗಿ ವತರ್ಿಸುತ್ತಿದ್ದ ಆಕೆ ಮಧ್ಯದಲ್ಲಿ ಎಲ್ಲೋ ನೆತ್ತಿಗೇರಿದಂತೆ ಕೂಗಾಡುವುದು ದಿನನಿತ್ಯದಷ್ಟೇ ಸಹಜವಾಗಿ ಬಿಟ್ಟಿತ್ತು. ಆ ಊರಿನ ಬಸ್ಸ್ಟಾಂಡಿನಲ್ಲಿ ತನ್ನದೊಂದಿಷ್ಟು ಹರಕು ಬಟ್ಟೆಯೊಂದಿಗೆ ಬಿಡಾರ ಹೂಡಿದ್ದಳು.
ದಿನ ಕಳೆದಂತೆ ಆಕೆಯ ವಿಚಾರ ಗೊತ್ತಾಗತೊಡಗಿತು. ಒಂದು ಕಾಲದಲ್ಲಿ ಸುಂದರ ಹೆಂಗಸಾಕೆ. ಯಾವುದೋ ಕಾರನದ್ಥ್ಭಿಮದಾಗಿ ಒಂಟಿಯಾದವಳು. ಬಹುಶಃ ಅಷ್ಟರಲ್ಲಾಗಲೇ ಮನಸ್ಸು ನಿಧಾನಕ್ಕೆ ಸ್ಥೀಮಿತ ಕಳೆದುಕೊಳ್ಳತೊಡಗಿತ್ತು. ಅದನ್ನು ತಮ್ಮ ಲಾಭಕ್ಕಾಗಿ ಬಳಸಿಕೊಂಡ ಡಾಕ್ಟರ್ ಎಂದು ಹೇಳಿಕೊಂಡ ಕಂಪೌಂಡರ್ ಒಬ್ಬರು ಆಕೆಯನ್ನು ಯದ್ವಾತದ್ವಾ ಬಳಸಿಕೊಂಡರು ಎನ್ನುವ ಮಾತಿದೆ. ವರ್ಷಕೊಂದರಂತೆ ಆಕೆ ಹೆರುತ್ತಿದ್ದ ಮಕ್ಕಳನ್ನು ಮುಂಬೈ, ಗೋವಾ ಮುಂತಾದ ದೂರದೂರದ ದತ್ತು ಕೊಡುವ ಲೆಕ್ಕದಲ್ಲಿ ಮಾರಿ ಕೈ ತುಂಬ ಹಣ ಮಾಡಿಕೊಂಡ.ಎಲ್ಲೋ ಒಮದು ಎರಡು ಸಾವಿರ ಆಕೆಯ ಕಯಲಿಟ್ಟರೆ ಮುಗಿಯಿತು. ನನ್ನ ಶಾಲೆ ಇದ್ದ ಊರಿಗೂ ಆಕೆಯ ಯಾವುದೋ ಮಗುವನ್ನು ಕೊಡಲಾಗಿತ್ತಂತೆ. ಅದು ಹೇಗೋ ಆಕೆಗೆ ಗೊತ್ತಾಗಿ ಆ ಊರಿನ ಹೆಸರು ಕೇಳಿದ ಕೂಡಲೇ ಕೆರಳಿದಂತೆ ವತರ್ಿಸುತ್ತಿದ್ದಳಂತೆ.
ಆದರೆ ವಯಸ್ಸು ಯಾರಪ್ಪನ ಗಂಟೂ ಅಲ್ಲ. ಆಕೆಗೆ ವಯಸ್ಸಾದ ಹಾಗೆ ಆಕೆ ಮತ್ತೆ ಬಿದಿಗೆ ಬೀಳಬೇಕಾಯಿತು. ಅದೂ ಅಲ್ಲದೇ ಪ್ರತೀ ವರ್ಷ ಹೊರು,ಹಡೆ ಹಾಗೂ ಕಳೆದುಕೊಳ್ಳು ಎನ್ನುವುದು ಆಕೆಯ ಮನಸ್ಥಿತಿಯನ್ನು ಸಾಕಷ್ಟು ಹಾಳು ಮಾಡಿತ್ತು. ಕಳೆದು ಕೊಂಡ ಮಕ್ಕಳ ನೆನಪು ಆಕೆಯ ಮನಸ್ಸನ್ನು ಆಗಾಗ ಹಾಳು ಮಾಡುತ್ತಿತ್ತು. ಎಲ್ಲಾದರೂ ತನ್ನ ಯೌವನ ಕಾಲದಲ್ಲಿ ತನ್ನನ್ನು ಬಳಸಿಕೊಂಡ ಆ ಊರಿನ ಹಲವಾರು ಹಿರಿತಲೆಗಳನ್ನು ಕಂಡಾಕ್ಷಣ ಭಾವನೆಗಳು ಉದ್ರೇಕಗೊಂಡು ಕೆರಳುತ್ತಿದ್ದಳು. ಆದರೆ ಆಕೆಯ ತಾಯಿಯಂತಹ ಮನಸ್ಸು ಮಾತ್ರ ಹಾಗೇ ಇದೆ. ತನಗೇ ಹೊಟ್ಟೆಗಿಲ್ಲದ ಹೊತ್ತಲ್ಲೂ ಕೈಲಿದ್ದ ತುತ್ತನ್ನು ಬೀದಿ ನಾಯಿಗೆ ಹಾಕಿ ತಾನು ಉಪವಾಸ ಕುಳಿತಿದ್ದನ್ನು ನಾನು ಹಲವಾರು ಸಲ ಕಂಡಿದ್ದೇನೆ. ಇಂದಿಗೂ ಆಕೆ ಯಾರ ಎದುರೂ ಕೈಚಾಚುವುದಿಲ್ಲ. ಅಂಗಡಿಯಗಳ ಎದುರು ಕಸಗುಡಿಸುತ್ತಾಳೆ. ವರು ಕೊಟ್ಟ ಹಣದಿಂದ ಏನನ್ನಾದರೂ ಕೊಂಡು ತಿನ್ನುತ್ತಾಳೆ. ತನಗೆ ಊಟ ಹಾಕುವ ಎರಡು ಮೂರು ಹೊಟೇಲ್ಗಳ ಎದುರು ಬೆಳಿಗ್ಗೆ ಬೆಳಿಗ್ಗೆನೇ ಕಸಗುಡಿಸಿ ಸ್ವಚ್ಛ ಮಾಡುತ್ತಾಳೆ. ಅವಶ್ಯಕತೆ ಬಿದ್ದರೆ ಮಿನನ್ನು ಕೊಯ್ದು ಕೊಡುತ್ತಾಳೆ, ಅಂತಹ ಅನಿವಾರ್ಯತೆ ಇದ್ದರೆ ಪಾತ್ರೆಗಳನ್ನೂ ತೊಳೆದಿಡುತ್ತಾಳೆ. ‘ಪ್ರೇಮಾಮಳ್ಳಿ ಪಾತ್ರೆ ತೊಳೆದರೆ ಅದು ಹೊಸದರಂತೆ ಕಾಣುತ್ತದೆ’ ಎಂದು ಹೊಟೇಲ್ ಮಾಲಿಕರುಗಳೆ ಅಭಿಪ್ರಾಯ ಪಡುತ್ತಾರೆ. ಒಂದೆರಡು ದಿನ ಆರೋಗ್ಯ ಸರಿ ಇಲ್ಲದೇ ಮಲಗಿದರೂ ‘ಪ್ರೇಮಾ ಮಲ್ಳಿ ಎಲ್ಲೋದ್ಲು? ಕಾಣುದೇ ಇಲ್ಲ’ ಎಂದು ಊರಿನ ಯಾರಾದರೊಬ್ಬರು ಹುಡುಕಿ ಬರುತ್ತಾರೆ. ಮತ್ಯಾರಾದರೂ ಯಾರಾದರೊಬ್ಬರು ಊಟ ತಂದಿಡುತ್ತಾರೆ. ಹಾಗಂತ ಆಕೆ ಅವರ ಋಣ ಇಟ್ಟುಕೊಳ್ಳುವುದಿಲ್ಲ. ಅವರ ಮನೆಯ ಅಂಗಳವನ್ನು ಸಗಣಿ ಹಾಕಿ ಸಾರಿಸಿಕೊಟ್ಟು ಒಪ್ಪ ಮಾಡಿಕೊಟ್ಟು ಬರುವವಳೇ. ಹೀಗಾಗಿ ಆಕೆ ಯಾರ ಮನೆಗೆ ಹೋದರೂ ಯಾರೂ ಆಕೆಯನ್ನು ‘ಹೊಗು’ ಎನ್ನುವುದಿಲ್ಲ. ಆಕೆ ರಸ್ತೆಯಲ್ಲಿ ನಿಂತು ಕೂಗಾಡಿದರೂ ಯಾರೂ ಒಮದು ಮಾತೂ ಹೇಳುವುದಿಲ್ಲ. ಎಲ್ಲೋ ಆಕೆ ಹೆಚ್ಚು ಕೆರಳಿದರೆ ಯಾರಾದರೊಬ್ಬರ ಮನೆಯ ಹೆಂಗಸು ಬಂದು ಮನೆಗೆ ಕರೆದೊಯ್ದು ಸಮಾಧಾನ ಮಾಡುತ್ತಾರೆ. ಆದರೂ ಯೌವನದ ದಿನಗಳಲ್ಲಿ ಹೇಗೆ ಹೇಗೋ ಬಳಸಲ್ಪಟ್ಟು, ಹೆಣ್ಣು ಎಂಬ ಕಾರಣಕ್ಕೆ, ಆಕೆಯೊಳಗಿರುವ ಗರ್ಭದ ಕಾರಣಕ್ಕೆ ದೌರ್ಜನ್ಯಕ್ಕೆ ಒಳಗಾಗಿ, ಕೊನೆಗೆ ಬೀದಿ ಪಾಲಾದ ಪ್ರೇಮಾ ಮಳ್ಳಿ ಆ ಊರು ಬಿಟ್ಟು ಬಂದರೂ ಎಷ್ಟೋ ಸಲ ನೆನಪಿನಲ್ಲಿ ನುಸುಳಿ ನಿಟ್ಟುಸಿರುಡುವಂತೆ ಮಾಡುತ್ತಾಳೆ. ‘ಶಾಲೆಗೆ ಹೋತಿ’ ಎಂಬ ಆಕೆಯ ಪ್ರಶ್ನೆ ಮತ್ತು ಉತ್ತರಕ್ಕೆ ಕಾಯದೆ ಹೊರಟು ಬಿಡುವ ಆಕೆಯ ದಿವ್ಯ ನಿರ್ಲಕ್ಷ ನನ್ನನ್ನು ಕಾಡುತ್ತಲೇ ಇರುತ್ತದೆ.
 

‍ಲೇಖಕರು G

March 30, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. ಮಮತ

    ತುಂಬಾ ನೋವಾಯ್ತು. ಬೇಸರವೂ. ಇದು ಎಲ್ಲೀವರ್ಗೆ. ತನ್ನದಲ್ಲದ ತಪ್ಪಿಗೆ ಆಕೆಗೆ ಮಾತ್ರ ಶಿಕ್ಷೆ. ಬಳಸಿಕೊಂಡವರು ಆರಾಮಾಗಿರ್ತಾರೆ. ಇದಾವ ನ್ಯಾಯ. ಇದನ್ನ ಬೆಳಕಿಗೆ ತಂದಿದ್ದೀರಿ. ಬೇರೆ ಏನಾದ್ರೂ ಮಾಡೋಕಾಗುತ್ತಾ ?

    ಪ್ರತಿಕ್ರಿಯೆ
  2. Veda H

    ಮನಸ್ಸಿಗೆ ತುಂಬಾ ನೋವಾಗ್ತ ಇದೆ ಈ ಲೇಖನವನ್ನು ಓದಿದಾಗಿನಿಂದ. ಇನ್ನೂ ನಮ್ಮ ನಾಡಿನಲ್ಲಿ ಅದೆಷ್ಟು ಹೆಣ್ಣುಮಕ್ಕಳು ಶೋಷಣೆಗೊಳಗಾಗ್ತಿದ್ದಾರೋ ತಿಳಿಯದು. ಶೋಷಿಸಿದವರು ಮಾತ್ರ ಆರಾಮಾಗಿ ಇರುತ್ತಾರೆ……..:(

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: